ಕರ್ನಾಟಕದ ರಾಜಕೀಯ ಬೆಳವಣಿಗೆಗಳೂ ಪ್ರಜಾಪ್ರಭುತ್ವದ ಭವಿಷ್ಯವೂ

Update: 2018-05-21 18:33 GMT

ಅಧಿಕಾರಕ್ಕೆ ಬರುವ ಬಿಜೆಪಿಯೇತರ ಸರಕಾರಗಳಿಗೆ ಪ್ರಬುದ್ಧ ನಡೆ, ಸಾಂವಿಧಾನಿಕ ಬದ್ಧತೆಯ ಜೊತೆ ಪ್ರಜಾಸತ್ತೆಯ ಉಳಿವಿನ ಬಗ್ಗೆ ದೂರದೃಷ್ಟಿಯ ನಿಲುವು ಇರಬೇಕಾಗುತ್ತದೆ. ಮಾತ್ರವಲ್ಲ ಸಂವಿಧಾನದ ಮಹತ್ವ ಹಾಗೂ ಸಂವಿಧಾನ ವಿರೋಧಿಗಳಿಂದ ದೇಶಕ್ಕಿರುವ ಗಂಡಾಂತರಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಮೊದಲಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗುತ್ತದೆ.


ಮೇ 15, 2018ರಂದು ಕರುನಾಡಿನ ಚುನಾವಣಾ ಫಲಿತಾಂಶಗಳ ಘೋಷಣೆಯಾದ ಬಳಿಕ ಮುಂದಿನ ನಾಲ್ಕು ದಿನಗಳ ಕಾಲದ, ಕ್ಷಣಕ್ಷಣಕ್ಕೂ ರೋಚಕ ತಿರುವುಗಳಿಂದ ಕೂಡಿದ ಬೃಹನ್ನಾಟಕವನ್ನು ನೋಡದವರು ಬಹುಶಃ ಯಾರೂ ಇರಲಾರರು. ಅಂತಿಮವಾಗಿ ಇಲ್ಲಿ ನಡೆದಿರುವುದು ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಶಕ್ತಿಗಳ ಅಥವಾ ಪ್ರಜಾಪ್ರಭುತ್ವ ಪರ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ನಡುವಿನ ಹಣಾಹಣಿ. ಎಲ್ಲರೂ ಗಮನಿಸಿರುವಂತೆ 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅನುಭವಿಸಿದ ಭಾರೀ ಸೋಲಿನ ನಂತರ ಕಾಂಗ್ರೆಸ್ ಪಕ್ಷದ ಸ್ಥೈರ್ಯ ಹೆಚ್ಚುಕಡಿಮೆ ಸಂಪೂರ್ಣವಾಗಿ ಉಡುಗಿಹೋಗಿದೆ. ಇದರ ಬೆನ್ನಿಗೆ ಉತ್ತರ ಪ್ರದೇಶ, ಬಿಹಾರ, ಗೋವಾ, ಮಣಿಪುರ, ಮೇಘಾಲಯ ಮೊದಲಾದ ರಾಜ್ಯಗಳಲ್ಲಿ ಒಂದಾದ ಮೇಲೊಂದರಂತೆ ಹಿಂಜರಿತ ಅನುಭವಿಸಿದಾಗ ಅದರ ಪೇಲವ ಪ್ರತಿಕ್ರಿಯೆಗಳನ್ನು, ಅದರ ಅರ್ಧನಿದ್ರಾವಸ್ಥೆಯನ್ನು ಕಂಡವರಿಗೆ ಸಂಘ ಪರಿವಾರದ ‘ಕಾಂಗ್ರೆಸ್-ಮುಕ್ತ ಭಾರತ’ ಅಂದರೆ ವಾಸ್ತವದಲ್ಲಿ ಪ್ರತಿಪಕ್ಷ-ಮುಕ್ತ ಸರ್ವಾಧಿಕಾರಿ ಭಾರತದ ಕನಸು ನನಸಾಗಲು ಹೆಚ್ಚು ಸಮಯ ಬೇಕಾಗಿಲ್ಲವೇನೋ ಎಂಬ ಭಯ ಶುರುವಾಗಿತ್ತು. ತೀರಾ ಇತ್ತೀಚೆಗಿನ ಕರ್ನಾಟಕದ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆಯ ನಂತರವಂತೂ ಅದಿನ್ನು ಚೇತರಿಸಿಕೊಳ್ಳಲಿದೆಯೇ ಎಂಬ ಅನುಮಾನ ಕಾಡತೊಡಗಿತ್ತು. ಅಂತಹ ಸನ್ನಿವೇಶದಲ್ಲಿ ತ್ವರಿತ ನಿರ್ಧಾರ ಕೈಗೊಂಡು ಜೆಡಿಎಸ್ ನೇತೃತ್ವದಲ್ಲಿ ಮೈತ್ರಿ ಸರಕಾರ ರಚನೆಗೆ ಮುಂದಾದುದು ಒಂದು ಆಶಾದಾಯಕ ಸೂಚನೆಯಾಗಿತ್ತು.

ಆದರೆ ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರ ರಚನೆಯ ಹಕ್ಕು ಮಂಡನೆಯನ್ನು ತಿರಸ್ಕರಿಸಿ ಬಿಜೆಪಿಯನ್ನು ಆಹ್ವಾನಿಸಿದುದಲ್ಲದೆ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶವನ್ನೂ ಕೊಟ್ಟಾಗ ಕಾಂಗ್ರೆಸ್‌ನ ಪರಿಸ್ಥಿತಿ ಕುರುಡುಗಲ್ಲಿಯಲ್ಲಿ ಸಿಕ್ಕಿಬಿದ್ದಂತಾಯಿತು. ಹಿಂದುಗಡೆ ಮುಚ್ಚಿದ ದಾರಿ ಮುಂದುಗಡೆ ಶತ್ರುಪಾಳಯ ಎಂಬ ಆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅವಸಾನವನ್ನು ತಪ್ಪಿಸುವ ಏಕೈಕ ದಾರಿಯೆಂದರೆ ಎದುರಾಳಿಯ ಸಾಮರ್ಥ್ಯವನ್ನು ಮೀರಿಸುವುದು. ಪರಿಸ್ಥಿತಿಗೆ ಅನುಗುಣವಾಗಿ ಅದು ಬುದ್ಧಿಬಲದಲ್ಲಿ ಇರಬಹುದು ಅಥವಾ ದೇಹಬಲದಲ್ಲಿ ಇರಬಹುದು. ಕರ್ನಾಟಕದ ಪರಿಸ್ಥಿತಿಯಲ್ಲಿ ಕ್ಷಿಪ್ರ, ಅಸಾಧಾರಣ ಬುದ್ಧಿಬಲವನ್ನು ಪ್ರಯೋಗಿಸಿದ ಕಾಂಗ್ರೆಸ್ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗಲು ನಿರ್ಧರಿಸಿತು. ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ನಿಸ್ಸಂಶಯವಾಗಿ ಅದರದೇ ಘನತೆಯನ್ನು ಎತ್ತರಿಸುವುದರೊಂದಿಗೆ ಸಾಂವಿಧಾನಿಕ ಆಡಳಿತದ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳಿದೆ. ಈ ಹಿನ್ನೆಲೆಯಲ್ಲಿ ಯಾರದೋ ಆದೇಶಕ್ಕೆ ತಲೆಬಾಗಿ ನೀತಿ, ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟು ಬಹುಮತವಿರದ ಪಕ್ಷವನ್ನು ಸರಕಾರ ರಚಿಸುವಂತೆ ಆಹ್ವಾನಿಸಿ ಹಲವಾರು ದಿನಗಳ ಸಮಯಾವಕಾಶವನ್ನೂ ನೀಡುವ ಮೂಲಕ ನೇರವಾಗಿ ಕುದುರೆ ವ್ಯಾಪಾರಕ್ಕೆ ಪ್ರೋತ್ಸಾಹಿಸಿದ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯಲು ಅರ್ಹರೇ ಎಂದು ಕೇಳಬೇಕಾಗುತ್ತದೆ. ಅಂತಹ ವ್ಯಕ್ತಿಗಳು ತಾವಾಗಿಯೇ ರಾಜೀನಾಮೆ ನೀಡುವುದು ಭೂಷಣಪ್ರಾಯ.

ಈ ಸಂದರ್ಭದಲ್ಲಿ ಈ ರೀತಿ ತಮಗೆ ನೀಡಲಾಗಿರುವ ವಿವೇಚನಾಧಿಕಾರವನ್ನು ನಿರಂಕುಶವಾಗಿ, ಸ್ವೇಚ್ಛಾನುಸಾರವಾಗಿ ಬಳಸಿ ಪಕ್ಷಪಾತವಾಗಿ ವರ್ತಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಬಗೆಯುವ ರಾಜ್ಯಪಾಲರುಗಳಿಗೆ ಶಿಕ್ಷೆ ಇಲ್ಲವೇ ಎಂಬ ವಿಶಾಲವಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಗತ್ಯ ಇದೆ. ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ಸನ್ಮಾನ್ಯ ಕರ್ನಾಟಕ ರಾಜ್ಯಪಾಲರು ಧಾರಾಳಿಯಾಗಿ ಕೊಟ್ಟಿದ್ದ 15 ದಿನಗಳ ಕಾಲಾವಕಾಶವನ್ನು 2 ದಿನಗಳಿಗಿಳಿಸಿದ ಕೂಡಲೇ ಸಂಭಾವ್ಯ ಕುದುರೆ ವ್ಯಾಪಾರಕ್ಕೆ ಮಾರಕ ಪ್ರಹಾರ ಬಿದ್ದಿದೆ. ಇದರೊಂದಿಗೆ ಕಲಾಪದ ನೇರ ಪ್ರಸಾರ ಮಾಡಬೇಕು; ಧ್ವನಿಮತ, ರಹಸ್ಯ ಮತದಾನಗಳಿಗೆ ಅವಕಾಶವಿಲ್ಲ; ಶಾಸಕರಿಗೆ ಸಂಪೂರ್ಣ ಭದ್ರತೆ ನೀಡಬೇಕು; ಯಾವುದೇ ಪ್ರಮುಖ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು ಎಂಬ ಆದೇಶವೂ ಸೇರಿದಾಗ ಬಿಜೆಪಿಯ ಹಣೆಬರಹ ಹೆಚ್ಚುಕಡಿಮೆ ಮೊದಲೇ ನಿರ್ಧಾರವಾಗಿಬಿಟ್ಟಿತ್ತು. ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ಸಂಪೂರ್ಣ ಹದ್ದುಬಸ್ತಿನಲ್ಲಿ ಇರಿಸಿಕೊಂಡದ್ದು, ಶಾಸಕರಿಗೆ ಫೋನ್ ಮೂಲಕ ನಾನಾ ಆಫರ್‌ಗಳು ಬಂದೇ ಬರಲಿವೆ ಎಂಬುದನ್ನು ಮೊದಲೇ ಊಹಿಸಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡುವಂತೆ ಆದೇಶಿಸಿದ್ದು, ಸಂಭಾಷಣೆಗಳ ಆಡಿಯೊ ಟೇಪುಗಳನ್ನು ತಕ್ಷಣ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದು ಭಾರೀ ಚತುರ ಮತ್ತು ಚುರುಕು ನಡೆಗಳಾಗಿದ್ದವು. ಇದರಿಂದ ಬಿಜೆಪಿಯ ಸರಕಾರ ರಚನೆಯ ಶವಪೆಟ್ಟಿಗೆಗೆ ಕೊನೆಯ ಮೊಳೆಯನ್ನು ಹೊಡೆದಂತಾಗಿದೆ. ಮೇ 16ರ ತಡರಾತ್ರಿ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟುವಲ್ಲಿಂದ ಆರಂಭವಾದ ಕಾಂಗ್ರೆಸ್‌ನ ಸರ್ವಶಕ್ತಿಯ, ಅಳಿವು ಉಳಿವಿನ ಹೋರಾಟಕ್ಕೆ ಅಂತಿಮವಾಗಿ ಮೇ 19ರಂದು ತಾತ್ಕಾಲಿಕ ಜಯ ದೊರಕಿದೆ. ಇದನ್ನು ತಾತ್ಕಾಲಿಕ ಜಯವೆನ್ನಲು ಕಾರಣಗಳಿವೆ.

ಕರ್ನಾಟಕದ ಮೇಲೆ ಹೇಗಾದರೂ ಮಾಡಿ ಆಧಿಪತ್ಯ ಸಾಧಿಸಿ ತದನಂತರ ದಕ್ಷಿಣ ಭಾರತದ ಮಿಕ್ಕುಳಿದ ರಾಜ್ಯಗಳನ್ನೂ ವಶಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದ್ದ ಸಂಘ ಪರಿವಾರದ ದುಷ್ಟ ಯೋಜನೆಗೆ ಸದ್ಯಕ್ಕಂತೂ ಬ್ರೇಕ್ ಬಿದ್ದಿದೆ. ಆದರೆ ಈಗಿರುವ ಪ್ರಶ್ನೆ ಏನೆಂದರೆ ಆ ಬ್ರೇಕ್ ದೀರ್ಘಕಾಲಿಕವೇ ಅಥವಾ ತಾತ್ಕಾಲಿಕವೇ? ಬ್ರೇಕ್ ಸಡಿಲಗೊಳ್ಳದೆ ಗಟ್ಟಿಯಾಗಿ ಉಳಿಯುವುದು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಿಂದ ಒಳ್ಳೆಯ ಆಡಳಿತದ ಮೇಲೆ ಹೊಂದಿಕೊಂಡಿದ್ದರೆ ರಾಷ್ಟ್ರ ಮಟ್ಟದಲ್ಲಿ ಅದು ಬಿಜೆಪಿಯೇತರ ಪ್ರತಿ ಪಕ್ಷಗಳು ಸಮಾನ ವೇದಿಕೆಯಲ್ಲಿ ಒಂದಾಗಿ 2019ರ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಯನ್ನು ಸೋಲಿಸುವುದರ ಮೇಲೆ ಹೊಂದಿಕೊಂಡಿದೆ. ಅಧಿಕಾರಕ್ಕೆ ಬರುವ ಬಿಜೆಪಿಯೇತರ ಸರಕಾರಗಳಿಗೆ ಪ್ರಬುದ್ಧ ನಡೆ, ಸಾಂವಿಧಾನಿಕ ಬದ್ಧತೆಯ ಜೊತೆ ಪ್ರಜಾಸತ್ತೆಯ ಉಳಿವಿನ ಬಗ್ಗೆ ದೂರದೃಷ್ಟಿಯ ನಿಲುವು ಇರಬೇಕಾಗುತ್ತದೆ. ಮಾತ್ರವಲ್ಲ ಸಂವಿಧಾನದ ಮಹತ್ವ ಹಾಗೂ ಸಂವಿಧಾನ ವಿರೋಧಿಗಳಿಂದ ದೇಶಕ್ಕಿರುವ ಗಂಡಾಂತರಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಮೊದಲಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗುತ್ತದೆ.

ಸ್ವಾತಂತ್ರ್ಯ, ಸಮಾನತೆ, ಸೋದರತೆ ಮತ್ತು ಸರ್ವರಿಗೂ ನ್ಯಾಯ ಎಂಬ ಮೌಲ್ಯಗಳನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಶಾಸಕರು, ಮಂತ್ರಿಗಳು, ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು ಮುಂತಾದವರು ಸ್ವಾರ್ಥ, ಸ್ವಂತ ಹಿತಾಸಕ್ತಿಗಳನ್ನು ತ್ಯಜಿಸಿ ತಳಮಟ್ಟದಲ್ಲಿ ಜನರ ಮಧ್ಯೆ ಜನಹಿತದ ಕೆಲಸಕಾರ್ಯಗಳನ್ನು ಮಾಡುತ್ತಿರಬೇಕಾಗುತ್ತದೆ. ಅಪಾರ ಶ್ರಮ, ಶ್ರದ್ಧೆ, ಬದ್ಧತೆ, ನಿಸ್ವಾರ್ಥತೆ, ಪ್ರಾಮಾಣಿಕತೆಗಳನ್ನು ಬೇಡುವ ಈ ಮಾರ್ಗ ನಿಶ್ಚಿತವಾಗಿಯೂ ಅತ್ಯಂತ ಕಠಿಣವಾದುದು. ಆದರೆ ಈ ಹೊತ್ತಿನ ರಾಜಕಾರಣ ಅನುಸರಿಸುತ್ತಿರುವ ಮಾರ್ಗದಿಂದ ಬೇಸತ್ತ, ಭ್ರಮನಿರಸನಗೊಂಡ ಬಹುತೇಕ ಭಾರತೀಯರು ಕೊರಳುದ್ದ ಮಾಡಿ ಹುಡುಕಾಡುತ್ತಿರುವ ಪರ್ಯಾಯ ರಾಜಕಾರಣದ ಮಾರ್ಗ ಇದುವೇ. ಇದುವೇ ನೈಜ ಪ್ರಜಾಪ್ರಭುತ್ವದ ಮಾರ್ಗ. ಇದನ್ನು ಬಿಟ್ಟು ಯಥಾಪ್ರಕಾರ ಹಿಂದಿನಂತೆ ಮುಂದುವರಿದರೆ ಪ್ರಜಾಪ್ರಭುತ್ವದ ಸೋಲು ಖಚಿತ. ಸಂಘ ಪರಿವಾರದ ಫ್ಯಾಶಿಸ್ಟ್ ಸರ್ವಾಧಿಕಾರದ ಮೇಲುಗೈ ಶತಸ್ಸಿದ್ಧ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News