ದಿಲ್ಲಿ ದರ್ಬಾರ್

Update: 2018-05-26 18:31 GMT

ಮೋದಿ ತಮ್ಮ ಮ್ಯಾಜಿಕ್ ಕಳೆದುಕೊಂಡರೇ?
ಕೊನೆಗೂ ರಹಸ್ಯ ಬಯಲಾಯಿತೇ? ಚುನಾವಣೆಗಳನ್ನು ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಾಮರ್ಥ್ಯ ಒಂದು ದಂತಕತೆಯಿದ್ದಂತೆ. ಆದರೆ ಈ ಇಬ್ಬರ ಅದಕ್ಕಿಂತಲೂ ಮಿಗಿಲಾದ ಸಾಮರ್ಥ್ಯವೆಂದರೆ ತಮ್ಮ ಪಕ್ಷ ಗಮನಾರ್ಹ ಸಾಧನೆ ಮಾಡದ ರಾಜ್ಯಗಳಲ್ಲೂ ಸರಕಾರ ರಚಿಸುವ ಚಾಣಾಕ್ಷತನ. ಸರಿಯಾಗಿ ಲೆಕ್ಕಾಚಾರ ಮಾಡುವ ಇವರಿಬ್ಬರ ಚಮತ್ಕಾರಿ ಶಕ್ತಿ ಬಹಳಷ್ಟು ಸಮಯದವರೆಗೆ ಬಿಜೆಪಿಯ ನಾಯಕರನ್ನು ಮೂಕವಿಸ್ಮಿತರ ನ್ನಾಗಿಸಿತ್ತು. ಅದು ಎಷ್ಟು ಮಟ್ಟಿಗೆ ಎಂದರೆ ಇವರಿಬ್ಬರು ಅತೀಂದ್ರಿಯ ಶಕ್ತಿಯನ್ನು ಹೊಂದಿದ್ದಾರೆ ಎಂಬಷ್ಟು. ಹಾಗಾಗಿ ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶಹೊರಬಿದ್ದಾಗ ಬಿಜೆಪಿಯೇ ಸರಕಾರ ರಚಿಸಲಿದೆ ಎಂಬ ಆತ್ಮವಿಶ್ವಾಸವನ್ನು ಅವರು ಹೊಂದಿದ್ದರು. ಇದು ಪಕ್ಷದ ನಾಯಕರ ಸಂತೋಷದ ಮೂಲವಾಗಿತ್ತು ಮತ್ತು ಹಲವು ಹಾಸ್ಯಚಟಾಕಿಗಳಿಗೆ ಸರಕು ನೀಡಿತ್ತು.

ಅವುಗಳಲ್ಲಿ ಒಂದು ಈ ರೀತಿಯಿದೆ, ಮೋದಿ ಮತ್ತು ಶಾ ಮೇಘಾಲಯದಲ್ಲಿ ಕೇವಲ ಎರಡು ಸ್ಥಾನಗಳನ್ನು ಪಡೆದು ಸರಕಾರ ರಚಿಸುವಲ್ಲಿ ಸಫಲರಾಗಿರುವಾಗ 104 ಶಾಸಕರನ್ನು ಹೊಂದಿರುವ ಕರ್ನಾಟಕದಲ್ಲಿ ಅದೇನು ಕಷ್ಟದ ಕೆಲಸ ಆಗಲಾರದು. ಆದರೆ ಈ ಜೋಡಿಗೆ ಕರ್ನಾಟಕದಲ್ಲಿ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ಇದರ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಉಪಚುನಾವಣೆಗಳೂ ಬಿಜೆಪಿಗೆ ಶುಭಸುದ್ದಿಯನ್ನು ನೀಡುವ ಲಕ್ಷಣಗಳಿಲ್ಲ. ಇದು ವಿರೋಧ ಪಕ್ಷಗಳು ಮತ್ತಷ್ಟು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಕಾರಣವಾಗುತ್ತದೆ. ಆದರೆ ಮೋದಿ-ಶಾ ಜೋಡಿ ಯಾವ ರೀತಿ ಎದಿರೇಟು ನೀಡುತ್ತಾರೆ ಎಂಬುದನ್ನು ನೋಡಬೇಕಿದೆ.



ಸಿಂಧಿಯಾ ಜೂಜು

ತನ್ನ ಹಿರಿಯರು ಒಂದೊಮ್ಮೆ ರಾಜರಂತೆ ಆಳಿದ್ದ ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೇರಲು ಸಿಂಧಿಯಾ ಕುಟುಂಬದ ಕುಡಿ ಪ್ರಯತ್ನಿಸುತ್ತಿದೆ. ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಸ್ಥಾನವನ್ನು ಹಿರಿಯ ನಾಯಕ ಕಮಲ್‌ನಾಥ್ ಪಡೆದುಕೊಂಡಿದ್ದರೂ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಹುಮ್ಮಸ್ಸು ಕಡಿಮೆಯಾಗಿಲ್ಲ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೂ ಮುನ್ನ ಆದಷ್ಟು ಗೆಳೆಯರನ್ನು ಸಂಪಾದಿಸಲು ಸಿಂಧಿಯಾ ತಮ್ಮ ವೈಯಕ್ತಿಕ ವರ್ಚಸ್ಸನ್ನು ಬಳಸುತ್ತಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರವನ್ನು ಕೆಳಗಿಳಿಸಲು ಸಿಂಧಿಯಾ ಆಡಳಿತ ವಿರೋಧಿ ಅಲೆಯನ್ನು ನೆಚ್ಚಿಕೊಂಡಿದ್ದಾರೆ. ಅದು ಯಶಸ್ವಿಯಾದರೆ ಆಗ ಸಿಂಧಿಯಾ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಲು ಸಿದ್ಧವಾಗಿದ್ದಾರೆ. ಇತ್ತೀಚೆಗೆ ಸಿಂಧಿಯಾ ಯುವ ಮತ್ತು ಸಕ್ರಿಯ ಕಾಂಗ್ರೆಸ್ ನಾಯಕ ಜಿತು ಪತ್ವಾರಿ ಜೊತೆ ಇಂದೋರ್‌ನಲ್ಲಿ ಭೋಜನ ಸವಿಯುತ್ತಿರುವುದು ಕಂಡು ಬಂದಿತ್ತು. ಅವರ ಮುಂದಿನ ನಡೆ ದಿಗ್ವಿಜಯ್ ಸಿಂಗ್ ಅವರ ಮಗ ರಾಘೋಗಡ್‌ನಲ್ಲಿರುವ ಜೈವರ್ಧನ್ ಅವರತ್ತ ಆಗಿತ್ತು. ಜೈವರ್ಧನ್, ಸಿಂಧಿಯಾಗಾಗಿ ಭೋಜನಕೂಟ ಏರ್ಪಡಿಸಿದ್ದರು.

ಒಂದು ಕಾಲದಲ್ಲಿ ಗ್ವಾಲಿಯರ್‌ನ ಅಧೀನದಲ್ಲಿದ್ದ ರಾಘೋಗಡ್‌ಗೆ ಹಿಂದಿನ ರಾಜಮನೆತನದ ಕುಡಿ ಭೇಟಿ ನೀಡಿದ್ದರಿಂದ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವೇಳೆ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ತನ್ನ ಹೆಸರನ್ನು ಪರಿಗಣಿಸುವಂತೆ ಬೆಂಬಲಿಸಲು ಸಿಂಧಿಯಾ, ಪತ್ವಾರಿ ಮತ್ತು ಜೈವರ್ಧನ್‌ರಂಥ ಯುವಪಡೆಯನ್ನೇ ಅವಲಂಬಿಸಿದ್ದಾರೆ. ನಂಬಿಕೆಯೊಂದಿದ್ದರೆ ಎಲ್ಲವೂ ಸಾಧ್ಯ.


ಸುರ್ಜೆವಾಲಾರ ಹಿಡಿತ
ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸುರ್ಜೆವಾಲಾ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಸಿದ್ಧವಾಗಿಟ್ಟಿರುತ್ತಾರೆ ಮತ್ತು ಅವರು ಸಾಮಾನ್ಯವಾಗಿ ಎಲ್ಲ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಾರೆ ಎಂದು ಪಕ್ಷದ ವಲಯದಲ್ಲಿ ಹೇಳಲಾಗುತ್ತದೆ. ಸುರ್ಜೆವಾಲಾ ಅವರು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ನಂತರ ಪಕ್ಷದ ಪ್ರತಿ ವಕ್ತಾರರಿಗೆ ಪ್ರತಿದಿನ ಚರ್ಚಿಸಲು ವಿಷಯವನ್ನು ನೀಡಲಾಗುತ್ತಿದೆ.

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೂ ಅಲ್ಲಿ ಸುರ್ಜೆವಾಲಾ ಅವರು ಮಾಡಿದ್ದ ಕೆಲಸಕ್ಕಾಗಿ ಅವರನ್ನು ಪಕ್ಷದ ಹಿರಿತಲೆಗಳು ಶ್ಲಾಘಿಸಿದ್ದವು. ಚುನಾವಣೆಯ ಸಮಯದಲ್ಲಿ ಸುರ್ಜೆವಾಲಾ ದಿಲ್ಲಿಯಲ್ಲಿದ್ದ ವಕ್ತಾರರ ಸಂಪೂರ್ಣ ತಂಡವನ್ನೇ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅವರ ಈ ಸಾಹಸ ಪಕ್ಷದ ಉನ್ನತ ನಾಯಕರ ಗಮನಕ್ಕೂ ಬಂದಿತ್ತು. ಅವರಿಗೆ ಪ್ರಿಯಾಂಕಾ ಚತುರ್ವೇದಿ, ಜೈವೀರ್ ಶೆರ್ಗಿಲ್ ಮುಂತಾದ ಯುವ ವಕ್ತಾರರ ಪಡೆಯನ್ನು ಬೆಳೆಸುವ ಜವಾಬ್ದಾರಿಯನ್ನು ನೀಡಲಾಗಿದೆ. ಸದ್ಯ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಎದುರಾಗಿ ತಮ್ಮನ್ನು ರಾಷ್ಟ್ರೀಯ ನಾಯಕರನ್ನಾಗಿ ರೂಪಿಸಲು ಮುಂದಾಗಿರುವ ಸಂದರ್ಭ ವು ಸುರ್ಜೆವಾಲಾರ ಅತ್ಯಂತ ದೊಡ್ಡ ಪರೀಕ್ಷೆಯ ಸಮಯವಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸನ್ನು ಜನರು ಮೆಚ್ಚುವಂತೆ ಬಿಂಬಿಸುವ ಸವಾಲಿನ ಕೆಲಸದಲ್ಲಿ ಸುರ್ಜೆವಾಲಾ ಯಶಸ್ವಿಯಾ ಗುತ್ತಾರೆಯೇ ಎಂಬುದನ್ನು ಕಾಲವೇ ತಿಳಿಸಲಿದೆ.


ದಿಲ್ಲಿಯಲ್ಲಿ ಗೌಡರ ಗದ್ದಲ

ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ 1997ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ ಕೇಸರಿ ಬಗ್ಗೆ ಒಂದು ಮಾತು ಹೇಳಿದ್ದರು. ಪ್ರಧಾನ ಮಂತ್ರಿ ಹುದ್ದೆಗೆ ದೃಷ್ಟಿಯಿಟ್ಟಿರುವ ಕೇಸರಿ, ಆತುರದಲ್ಲಿರುವ ಮುದುಕ ಎಂದು ದೇವೇಗೌಡ ವ್ಯಂಗ್ಯವಾಡಿದ್ದರು. ಇದೀಗ ಎರಡು ದಶಕಗಳ ನಂತರ ಆ ಮಾತು ಖುದ್ದು ದೇವೇಗೌಡರಿಗೆ ಅನ್ವಯಿಸುವಂತಿದೆ. ಕೆಲವು ರಾಜಕೀಯ ನಾಯಕರ ಪ್ರಕಾರ, ದೇವೇಗೌಡ ಅವರು 2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತಾನೂ ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ನೀಡಲು ಯೋಚಿಸುತ್ತಿ ದ್ದಾರೆ ಎಂದು ಕೆಲವರು ತಮ್ಮಾಳಗೇ ಮಾತನಾಡಿಕೊಳ್ಳುತ್ತಿದ್ದಾರೆ. ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತರಾಮ್ ಯೆಚೂರಿ ಹಾಗೂ ಇತರ ಪ್ರಮುಖ ನಾಯಕರಿಗೆ ದೇವೇಗೌಡ ಈ ಕುರಿತು ಸುಳಿವನ್ನು ನೀಡಿದ್ದಾರೆ. ದೇವೇಗೌಡರು 2019ರ ಜಯಪ್ರಕಾಶ್ ನಾರಾಯಣ್ ಆಗುವ ಕನಸನ್ನು ಕಾಣುತ್ತಿದ್ದಾರೆ. ಆದರೆ ಗೌಡರು ಇಲ್ಲಿ ಮರೆತಿರುವ ಅಂಶವೆಂದರೆ, ಅವರು ಮುನ್ನಡೆಸಲು ಸಿದ್ಧವಾಗಿರುವ ಮೈತ್ರಿಯಲ್ಲಿ ರಾಜಕೀಯದ ಬೆಂಕಿಚೆಂಡುಗಳಾದ ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ಅಖಿಲೇಶ್ ಯಾದವ್‌ರಂಥ ಘಟಾನುಗಟಿಗಳಿದ್ದಾರೆ. ಇವರು ತಮ್ಮ ರಾಜ್ಯಗಳಲ್ಲಿ ಅಧಿಕಾರದ ಸ್ವಾದವನ್ನು ಸವಿದಿದ್ದಾರೆ. ಅದರಲ್ಲೂ ಬ್ಯಾನರ್ಜಿ ತಾನು ಯಾವ ಜವಾಬ್ದಾರಿ ನಿಭಾಯಿಸಲೂ ಸಿದ್ಧ ಎಂದು ಬಹಿರಂಗವಾಗಿಯೇ ತಿಳಿಸಿದ್ದಾರೆ. ಬಿಜೆಪಿಯ ವಿರುದ್ಧ ಮೈತ್ರಿ ಮಾಡಿಕೊಳ್ಳುವ ಉದ್ದೇಶದಿಂದ ದೇವೇಗೌಡರ ಜೊತೆ ಸಮಾಲೋಚನೆ ನಡೆಸುವಂತೆ ಸೋನಿಯಾ ಗಾಂಧಿ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿಯವರಲ್ಲಿ ಮನವಿ ಮಾಡಿರುವುದೇ ಗೌಡರ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಮುಂದೇನಾಗುವುದೋ ತಿಳಿಯದು.


ಒಂದು ಸಾಲುಗಳ ನಾಯ್ಡು

 ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತಮ್ಮ ಒಂದು ಸಾಲುಗಳ ಮಾತುಗಳಿಂದ ಗಮನ ಸೆಳೆದವರು. ಉದಾಹರಣೆಗೆ, ನಾನು ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿಯಾಗಲು ಬಯಸುವುದಿಲ್ಲ. ಕೇವಲ ಉಷಾಳ ಪತಿಯಾಗಿರುವುದೇ ಸಾಕು ಎಂದು ಅವರೊಮ್ಮೆ ತಿಳಿಸಿದ್ದರು. ಅವರ ಇಂಥ ಮಾತುಗಳಿಂದಾಗಿ ಇತ್ತೀಚೆಗೆ ಕೇಂದ್ರ ಅಮೆರಿಕದ ಪನಾಮಾಗೆ ನಾಯ್ಡು ಐದು ದಿನಗಳ ಕಾಲ ಭೇಟಿ ನೀಡಿದ್ದಾಗ ಅಲ್ಲಿನ ಅನೇಕರ ಹೃದಯ ಗೆದ್ದಿದ್ದರು. ಭಾರತದ ವರ್ಣರಂಜಿತ ಆರ್ಥಿಕತೆ ಮತ್ತು ಸಕ್ರಿಯ ಪ್ರಜಾಪ್ರಭುತ್ವವನ್ನು ಹೊಗಳಲು ನಾಯ್ಡು ಈ ಒಂದು ಸಾಲುಗಳನ್ನು ಯಥೇಚ್ಛವಾಗಿ ಬಳಸುತ್ತಾರೆ. ನಾಯ್ಡು ಅವರು ರಾಜತಾಂತ್ರಿಕವಾಗಿ ನೀಡಿರುವ ಕಾಣಿಕೆಯನ್ನು ಶ್ಲಾಘಿಸಿ ವಿದೇಶ ವ್ಯವಹಾರಗಳ ಸಚಿವಾಲಯವು ಪ್ರಧಾನಿಗಳ ಕಚೇರಿಗೆ ಪತ್ರವನ್ನು ರವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75