ಕೋಮುವಾದಿ ರಾಜಕಾರಣದಿಂದ ಬಚಾವಾದ ಕರ್ನಾಟಕ!

Update: 2018-05-28 18:47 GMT

ಕಳೆದ ಮೇ12 ರಂದು ನಡೆದ ರಾಜ್ಯದ ಚುನಾವಣೆ ದೇಶದಲ್ಲಿ ಹೈವೋಲ್ಟೇಜ್ ಚುನಾವಣೆ ಎಂದೇ ಬಿಂಬಿಸಲಾಗಿತ್ತು. ಕರ್ನಾಟಕದ ರಾಜಕಾರಣದ ಪ್ರಮುಖ ಪಕ್ಷಗಳಾದ ಜೆಡಿಎಸ್, ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಗಳ ಪಾಲಿಗೆ ಅಕ್ಷರಶಃ ಅತ್ಯಂತ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಎಲ್ಲರಲ್ಲಿ ವಿಪರೀತ ಕುತೂಹಲ ಕೆರಳಿಸಿದ್ದ ಈ ಚುನಾವಣೆಯ ಫಲಿತಾಂಶವೂ ಬಂದಿದೆ, ಆ ನಂತರದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳನ್ನೂ ರಾಜ್ಯದ ಜನ ನೋಡಿದ್ದಾರೆ. ಇದೀಗ ಕಾಂಗ್ರೆಸ್-ದಳ-ಬಿಎಸ್ಪಿಮೈತ್ರಿಕೂಟದ ಸರಕಾರ ಬಂದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿಯೂ, ಡಾ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿಯೂ ಸದ್ಯಕ್ಕೆ ಪ್ರಮಾಣ ವಚನ ಸ್ವೀಕರಿಸಿ ಸದನದಲ್ಲಿ ವಿಶ್ವಾಸಮತವನ್ನೂ ಗೆದ್ದು ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಒಟ್ಟಾರೆ ಈಗ ತಿಂಗಳಕಾಲ ನಡೆದ ರಾಜಕೀಯ ಮೇಲಾಟಗಳು, ರಾಜಕಾರಣಿಗಳ ಆರೋಪ ಪ್ರತ್ಯಾರೋಪಗಳು, ಕೆಸರೆರಚಾಟಗಳು ಮುಂತಾದ ಎಲ್ಲಾ ಗದ್ದಲಗಳಿಂದ ಸಾರ್ವಜನಿಕರ ಜೀವನ ಮುಕ್ತವಾಗಿದೆ. ಹಾಗಾಗಿ ಜನರಲ್ಲಿ ಒಂದು ರೀತಿಯ ನಿರಾಳ ಮನೋಭಾವ ಮೂಡಿದೆ.

ಎಲ್ಲಕ್ಕಿಂತ ನಿರಾಳವಾದ ಸಂಗತಿ ಎಂದರೆ ಕರ್ನಾಟಕ ರಾಜಕಾರಣವು ಕೋಮುವಾದಿ ರಾಜಕಾರಣದ ಕೈಗೆ ಸಿಲುಕದ್ದು ಎಂದರೆ ಅತಿಶಯವಲ್ಲ. ನಿಶ್ಚಿತವಾಗಿ ಬಿಜೆಪಿಗೆ ಅಂತಹದೊಂದು ಕೋಮುವಾದಿ ಕಳಂಕ ಅಂಟಿಕೊಂಡಿದೆ. ಅವರ ಹಿಂದುತ್ವ, ಸಂವಿಧಾನದ ವಿಷಯದಲ್ಲಿ ಅತಿರೇಕದ ಹೇಳಿಕೆಗಳು, ಅಲ್ಪಸಂಖ್ಯಾತರ ಮೇಲಿನ ಅವರ ಅಸಹನೆ, ಬಹುಸಂಸ್ಕೃತಿ ಬಗೆಗಿನ ಅವರ ಕೀಳು ಮನೋಧೋರಣೆ, ದಲಿತರ ಮೇಲಿನ ಅವರ ಅಸಡ್ಡೆ, ದೌರ್ಜನ್ಯ, ಅತ್ಯಾಚಾರ, ಜಾತೀಯತೆ ಹಾಗೂ ಧರ್ಮಾಂಧತೆಯ ಸಂಘರ್ಷಗಳ ವಿರುದ್ಧ ಅವರ ಮೌನ... ಎಲ್ಲವೂ ಅವರ ಜೀವವಿರೋಧಿ ಹಾಗೂ ಬಹುತ್ವವಿರೋಧಿ ನಿಲುವುಗಳು ಅವರನ್ನು ಕೋಮುವಾದಿಗಳಾಗಿಸಿ ಅವರನ್ನು ಅಹಿಂದ ಸಮುದಾಯ ಹತ್ತಿರಕ್ಕೆ ಬಿಟ್ಟುಕೊಳ್ಳುವುದಕ್ಕೆ ಹಿಂಜರಿಯುತ್ತದೆ. ಅವರು ನಂಬಿಕೆಗೆ ಅರ್ಹವಲ್ಲ ಎನಿಸುವ ಗಟ್ಟಿಯಾದ ನಂಬಿಕೆಯನ್ನು ಸೃಷ್ಟಿಸಿದೆ. ಇದೆಲ್ಲದಕ್ಕೂ ಪುಷ್ಟಿ ನೀಡುವಂತೆ ಕೇಂದ್ರದಲ್ಲಿ ಅಧಿಕಾರ ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರಿಗೆ ನೀಡಿದ ಭರವಸೆಗಳೆಲ್ಲವನ್ನೂ ಹುಸಿಗೊಳಿಸಿದೆ. ಸ್ವಿಸ್ ಬ್ಯಾಂಕ್‌ನಲ್ಲಿರುವ ಕೋಟ್ಯಂತರ ರೂಪಾಯಿ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವುದಾಗಿ ಮಾತುಕೊಟ್ಟ ಮೋದಿ ಅದನ್ನು ಮರೆತು ಬಡಜನರನ್ನೇ ಲೆಕ್ಕಕ್ಕೆ ಒಳಪಡಿಸಿ ಅವರ ಮೇಲೆ ಅವೈಜ್ಞಾನಿಕವಾದ ಜಿಎಸ್‌ಟಿ ಎಂಬ ತೆರಿಗೆಯ ಬರೆ ಎಳೆದರು. ಬಡಜನರಿಗೆ ಅಗತ್ಯವಾದ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿದವು.

ಬಡಜನರು ಬಳಸುವ ಅಡುಗೆ ಅನಿಲ, ಸಾಗಾಟದ ವಾಹನಗಳಿಗೆ ಅಗತ್ಯವಾದ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಗಳಂತೂ ಏರಿಕೆಯ ಕ್ರಮದಲ್ಲೇ ಮುನ್ನಡೆದಿವೆ. ಇನ್ನು ತಮ್ಮ ಚುನಾವಣಾ ರಣತಂತ್ರದ ಭಾಗವಾಗಿ ಮೋದಿಯವರು ಕಾಳಧನ ನಿಯಂತ್ರಣದ ನೆಪವೊಡ್ಡಿ ಇದ್ದಕ್ಕಿದ್ದಂತೆ ನೋಟು ಅಮಾನ್ಯಮಾಡಿ ದೇಶದ ಕೋಟ್ಯಂತರ ಬಡಜನರನ್ನು ಭಯಂಕರವಾಗಿ ಹಿಂಸಿಸಿದರು. ಕೋಮುವಾದ ಮತ್ತು ಹಿಂದುತ್ವವನ್ನು ಚುನಾವಣಾ ರಣತಂತ್ರವಾಗಿಸಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಅಲ್ಲಿ ದಲಿತರು ಮತ್ತು ಮುಸಲ್ಮಾನರನ್ನು ಇನ್ನಿಲ್ಲದಂತೆ ಹಿಂಸಿಸುತ್ತಿದೆ ಎಂಬ ಸ್ಫೋಟಕ ಮಾಹಿತಿಗಳು ಇವೆ. ಮನೆಯಲ್ಲಿ ದನದ ಮಾಂಸ ಇಟ್ಟುಕೊಂಡಿದ್ದ ಎಂಬ ಕೇವಲ ಊಹೆಯ ಕಾರಣಕ್ಕೆ ಅಖ್ಲಾಕ್ ಎಂಬ ವಯೋವೃದ್ಧ ಮುಸ್ಲಿಮರನ್ನು ಹಾಡಹಗಲೇ ಸಂಘಪರಿವಾರದ ಕಾರ್ಯಕರ್ತರು ಕೊಂದರು. ದಲಿತ ಹೆಣ್ಣುಮಕ್ಕಳ ಮೇಲೆ ಅವ್ಯಾಹತವಾದ ಅತ್ಯಾಚಾರ ಹಾಗೂ ಹತ್ಯೆಗಳು ನಡೆಯುತ್ತಿವೆ. ಭೀಮ್ ಆರ್ಮಿ ಎಂಬ ದಲಿತರ ಸಂಘಟನೆಯ ಮೇಲೆ ಆದಿತ್ಯನಾಥ್ ಸರಕಾರ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಪ್ರಹಾರ ನಡೆಸಿ ಹತ್ಯಾಕಾಂಡವನ್ನೇ ಸೃಷ್ಟಿಸಿತು.

ಅದೂ ಸಾಲದೆಂಬಂತೆ ಭೀಮ್ ಆರ್ಮಿಯ ನಾಯಕ ಚಂದ್ರಶೇಖರ್ ಆಝಾದ್ ಅವರನ್ನು ಜೈಲಿಗೆ ತಳ್ಳಿ ಅಲ್ಲೇ ಸಾಯುವಂತಹ ಸ್ಥಿತಿಗೆ ತಂದಿದೆ. ಗುಜರಾತ್ ರಾಜ್ಯದಲ್ಲಿ ದಲಿತರು ಸತ್ತದನದ ಚರ್ಮ ಸುಲಿದ ಕಾರಣಕ್ಕೆ ದಲಿತ ಯುವಕರನ್ನು ಸಂಘಪರಿವಾರದ ಕಾರ್ಯಕರ್ತರು ಹಾಡಹಗಲೇ ನಡುಬೀದಿಯಲ್ಲಿ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಅನ್ಯ ಕೋಮಿನ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕನನ್ನು ಬೆತ್ತಲೆಗೊಳಿಸಿ, ದಲಿತ ಹುಡುಗನನ್ನು ಪ್ರೀತಿಸಿದ ತಪ್ಪಿಗೆ ಆ ಹೆಣ್ಣುಮಗಳನ್ನೂ ಬೆತ್ತಲೆಗೊಳಿಸಿ ಹಾಡಹಗಲೇ ಮೆರವಣಿಗೆ ಮಾಡಿಸಿ ಚರ್ಮಸುಲಿಯುವಂತೆ ಗುಂಪು ಜನರು ಬಡಿದರು. ಉತ್ತರ ಪ್ರದೇಶದಲ್ಲಿ ಇತರೆ ಜಾತಿಯವರಿಗೆ ಸೇರಿದ ಬಾವಿಯಲ್ಲಿ ಕುಡಿವ ನೀರಿಡಿದುಕೊಂಡರೆಂಬ ಕ್ಷುಲ್ಲಕ ಕಾರಣಕ್ಕೆ ಆ ಹೆಂಗಸರನ್ನು ನಡುಬೀದಿಯಲ್ಲಿ ನಗ್ನಗೊಳಿಸಿ ಇತರೆ ಜಾತಿಯ ಹೆಂಗಸರ ನಡುವೆಯೇ ಸಂಘಪರಿವಾರದ ಪುರುಷರು ಮನಬಂದಂತೆ ಥಳಿಸಿದರು. ಅದೇ ಯೋಗಿ ಆದಿತ್ಯನಾಥ್ ಸರಕಾರದಲ್ಲಿ ದಲಿತ ಕುಟುಂಬವೊಂದು ರಕ್ಷಣೆ ಬಯಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದನೆಂಬ ಕಾರಣಕ್ಕೆ ಆ ಇಡೀ ಕುಟುಂಬವನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿ ದಿನವಿಡೀ ನಿಲ್ಲಿಸಿ ಅವಮಾನಿಸಿದ ಹೀನಾತಿಹೀನ ಕ್ರೌರ್ಯ ಮೆರೆಯಲಾಯಿತು. ರೋಹಿತ್ ವೇಮುಲಾ ಎಂಬ ಸಂಶೋಧನಾ ವಿದ್ಯಾರ್ಥಿ ಅಂಬೇಡ್ಕರ್ ಕುರಿತು ಮಾತನಾಡಿದ್ದೇ ತಪ್ಪುಎಂದು ಭಾವಿಸಿ, ಅವನ ಶಿಷ್ಯವೇತನ ನಿಲ್ಲಿಸಿ, ಕಿರುಕುಳ ನೀಡಿ ಕೇಂದ್ರ ಸರಕಾರವೇ ಅವನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು!

ತೀರಾ ಇತ್ತೀಚಿಗಿನ ಘಟನೆಗಳನ್ನೇ ನೋಡಿ; ಕರ್ನಾಟಕದ ವಿಜಯಪುರದಲ್ಲಿ ದಾನಮ್ಮ ಎಂಬ ಒಂಬತ್ತನೇ ತರಗತಿ ಓದುತ್ತಿದ್ದ ದಲಿತ ಹೆಣ್ಣುಮಗಳನ್ನು ಹಾಡಹಗಲೇ ಬಿಜೆಪಿಯ ಕಾರ್ಯಕರ್ತರಾಗಿದ್ದ ಹುಡುಗರ ಗುಂಪು ಅಪಹರಿಸಿ, ಅತ್ಯಾಚಾರಗೈದು ಕೊಂದು ಹಾಕಿತು. ಗುಜರಾತ್‌ನಲ್ಲಿ ದಲಿತ ಹುಡುಗನೊಬ್ಬ ಅಂಬೇಡ್ಕರ್ ಹಾಡನ್ನು ಮೊಬೈಲ್ ಟ್ಯೂನ್ ಆಗಿಟ್ಟುಕೊಂಡಿದ್ದಕ್ಕೆ ದೌರ್ಜನ್ಯ ಎಸಗಲಾಯಿತು, ಮಧ್ಯಪ್ರದೇಶದಲ್ಲಿ ದಲಿತ ಹುಡುಗನೊಬ್ಬ ಗಿರಿಜಾ ಮೀಸೆ ಬಿಟ್ಟುಕೊಂಡ ತಪ್ಪಿಗೆ ಮಾರಣಾಂತಿಕವಾಗಿ ಥಳಿಸಲಾಯಿತು. ಇನ್ನೊಂದೆಡೆ ದಲಿತ ಹುಡುಗನೊಬ್ಬ ಕುದುರೆ ಸವಾರಿ ಮಾಡಿದ್ದಕ್ಕಾಗಿ ದಂಡಿಸಲಾಯಿತು. ತೀರಾ ಇತ್ತೀಚೆಗೆ ಕಾಶ್ಮೀರದಲ್ಲಿ ಆಸಿಫಾ ಎಂಬ 9 ವರ್ಷದ ಬಾಲಕಿಯನ್ನು ದೇವಸ್ಥಾನದಲ್ಲಿ ಕೂಡಿಟ್ಟು ವಾರಗಟ್ಟಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಬಾಲಕಿ ಸತ್ತುಹೋಗಿದ್ದರೂ ಬಿಡದೆ ಶವದ ಮೇಲೂ ಅತ್ಯಾಚಾರ ಮಾಡಲಾಯಿತು ಎಂದರೆ ಇವರ ವಿಕೃತಿ ಎಷ್ಟು ಮಿತಿಮೀರಿದೆ ನೋಡಿ. ಈ ವಿಕೃತಿಯ ವಿರುದ್ಧ ಜನರು ಪ್ರತಿಭಟನೆ ನಡೆಸಿದರೆ, ಜಮ್ಮು ಕಾಶ್ಮೀರದ ಬಿಜೆಪಿ ಶಾಸಕರಿಬ್ಬರು ವಿಕೃತಿ ಮೆರದ ಅಪರಾಧಿಗಳ ಪರ ನಿಂತರು...! ಹೀಗೆ ದೇಶದ ಉದ್ದಗಲಕ್ಕೂ ಅದರಲ್ಲೂ ವಿಶೇಷವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿದಿನ ಒಂದಿಲ್ಲೊಂದು ಕಡೆ, ಒಂದಲ್ಲ ಒಂದು ಅಹಿಂದ ಸಮುದಾಯಗಳ ಮೇಲೆ ದೌರ್ಜನ್ಯ, ಅತ್ಯಾಚಾರ, ಹಲ್ಲೆ, ಕೊಲೆಗಳು ಕ್ಷುಲ್ಲಕ ಕಾರಣಗಳಿಗೆ ನಡೆಯುತ್ತಲೇ ಇವೆ.

ಇದೆಲ್ಲದರ ವಿರುದ್ಧ ಪ್ರಗತಿಪರ ಸಮುದಾಯಗಳು ದೊಡ್ಡಮಟ್ಟದ ಪ್ರತಿರೋಧ ಒಡ್ಡಿದರೆ ಅಂತಹವರನ್ನು ಬಿಜೆಪಿಯ ಕರ್ನಾಟಕದ ಸಂಸದರೊಬ್ಬರು ‘‘ಪ್ರಗತಿಪರರಿಗೆ ಅಪ್ಪಅಮ್ಮ ಇಲ್ಲ, ಅವರು ನಾಯಿ ನರಿಗಳಿದ್ದಂತೆ’’ ಎಂದು ಇಡೀ ಹೋರಾಟವನ್ನೇ ಲೇವಡಿ ಮಾಡುತ್ತಾರೆ. ಇದೆಲ್ಲದರ ಕುರಿತು ನಮ್ಮ ‘ಪ್ರಧಾನ ಸೇವಕ’ರು ಮಾತೇ ಆಡುವುದಿಲ್ಲ. ಇಂತಹ ಕೋಮುವಾದಿಗಳನ್ನು, ಜನತಂತ್ರ ವಿರೋಧಿಗಳನ್ನು ಜನರು ಹೇಗೆ ಬೆಂಬಲಿಸಿಯಾರು? ಆದ್ದರಿಂದಲೇ ಕರ್ನಾಟಕದ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದರು. ಆದರೂ ಯಡಿಯೂರಪ್ಪನವರಂತಹ ರೈತನಾಯಕ, ಲಿಂಗಾಯತ ವೀರಶೈವದಂತಹ ಪ್ರಬಲ ಸಮಾಜದ ನಾಯಕನನ್ನು ಮುಂದೆಬಿಟ್ಟುಕೊಂಡು ಬಿಜೆಪಿ ಕರ್ನಾಟಕದ ಜನರ ಕಣ್ಣಿಗೆ ಮಣ್ಣೆರಚುವ ರಣತಂತ್ರ ರೂಪಿಸಿತ್ತು. ಹಲವು ಅವಾಂತರಗಳ ನಡುವೆಯೂ ಬಿಜೆಪಿ ರಾಜ್ಯದಲ್ಲಿ ತನ್ನ ಉದ್ದೇಶಿತ ಗುರಿಯನ್ನು ತಲುಪಲು ವಿಫಲವಾಯಿತು. ಆದರೂ ಯಡಿಯೂರಪ್ಪನವರನ್ನು ಮುಂದೆ ಬಿಟ್ಟುಕೊಂಡು ಲಿಂಗಾಯತ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಕ್ರೋಡೀಕರಿಸಿಕೊಂಡಿರುವುದು ಸುಳ್ಳಲ್ಲ.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಆಸೆ ತೋರಿಸಿ ಬಿಜೆಪಿ ಲಿಂಗಾಯತ ಸಮುದಾಯವನ್ನು ತನ್ನ ಓಟ್‌ಬ್ಯಾಂಕ್ ಆಗಿ ಬಳಸಿಕೊಂಡಿತು. ನಂತರ ಯಡಿಯೂರಪ್ಪನವರನ್ನು ಜನರೆದುರು ನಗೆಪಾಟಲಿಗೀಡುಮಾಡಿದರು ಬಿಜೆಪಿಯ ಕೇಂದ್ರ ನಾಯಕರು. ಆ ಮೂಲಕ ಲಿಂಗಾಯತ ಸಮುದಾಯದ ಸಿಂಪತಿ ಗಿಟ್ಟಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸಂಸದರನ್ನು ಗೆಲ್ಲುವುದು ಅವರ ಹುನ್ನಾರ. ಈ ಹುನ್ನಾರಕ್ಕಾಗಿ ಸಂವಿಧಾನವಿರೋಧಿ ನಡೆಯ ಮೂಲಕ ಯಡಿಯೂರಪ್ಪನವರನ್ನು ತಲೆತಗ್ಗಿಸುವಂತೆ ಮಾಡಿದರು. ಪ್ರಜಾತಂತ್ರದಲ್ಲಿ ಮೈತ್ರಿ ಎಂಬುದು ಅಪವಿತ್ರವಾದುದುಲ್ಲ. ಹಾಗೆ ನೋಡಿದರೆ ಒಂದೇ ಬಹುಮತದ ಸರಕಾರಕ್ಕಿಂತ ಹಲವು ಪಕ್ಷಗಳ ಮೈತ್ರಿ ಸರಕಾರ ಹೆಚ್ಚು ಕ್ರಿಯಾಶೀಲವಾಗಿ, ಹೆಚ್ಚು ಸ್ಪರ್ಧಾತ್ಮಕವಾಗಿ ಮತ್ತು ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಬಲ್ಲದು. ಬೇರೆ ಬೇರೆ ಪಕ್ಷಗಳು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹಾಗೂ ತಮ್ಮ ದಕ್ಷತೆ ಸಾಬೀತು ಪಡಿಸಿಕೊಳ್ಳಲು ಹೆಚ್ಚು ಜನಪರವಾಗಿ ಕೆಲಸ ಮಾಡಬಹುದಾದ ಬಹಳಷ್ಟು ಅವಕಾಶಗಳು ಮೈತ್ರಿ ಸರಕಾರದಲ್ಲಿರುತ್ತದೆ. ಭ್ರಷ್ಟಾಚಾರಕ್ಕೂ ಅಷ್ಟೊಂದು ಅವಕಾಶವಿರುವುದಿಲ್ಲ. ಈಗಾಗಲೇ ಮಣಿಪುರ, ತ್ರಿಪುರಾ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿಯೇ ಈ ರೀತಿಯ ಮೈತ್ರಿ ಸರಕಾರ ರಚಿಸಿಕೊಂಡಿದೆ. ಆದರೂ ಅದು ರಾಜ್ಯದ ಜನತೆಗೆ ಮಾತ್ರ ಕರ್ನಾಟಕ ಸರಕಾರವನ್ನು ಅಪವಿತ್ರ ಮೈತ್ರಿ ಎಂದು ಜನಸಮುದಾಯಕ್ಕೆ ತಪ್ಪುಸಂದೇಶ ನೀಡಿ ನಗೆಪಾಟಲಿಗೀಡಾಗುತ್ತಿದೆ.

ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಭಾರತ ಎಂಬ ಹುಚ್ಚುತನದಲ್ಲಿ ದೇಶವನ್ನು ವಶಪಡಿಸಿಕೊಳ್ಳುತ್ತಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುವುದೇ ಸಂವಿಧಾನ ವಿರೋಧಿ ನಡೆಯಾಗಿದೆ. ಇಂತಹ ದ್ರೋಹಕ್ಕೆ ತಕ್ಕ ತೀರ್ಪನ್ನು ಕರ್ನಾಟಕದ ಜನತೆ ನೀಡಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ದಳ-ಬಿಎಸ್ಪಿಗಳು ಒಂದಾಗಿ ಮೈತ್ರಿ ಸರಕಾರ ರಚಿಸಿರುವ ಬೆಳವಣಿಗೆಯು ಸಮಯೋಚಿತವಾದುದು, ಪ್ರಬುದ್ಧವಾದುದು ಮತ್ತು ಸಂವಿಧಾನ ಬದ್ಧವಾದುದೂ ಆಗಿದೆ. ಈ ಸಮ್ಮಿಶ್ರ ಸರಕಾರಕ್ಕೆ ಪ್ರತಿಪಕ್ಷಗಳ ಸಂಚಿನ ಆತಂಕವಿದ್ದೇ ಇದೆ. ಆದರೆ ಅದರ ಆಯಸ್ಸು ಹೆಚ್ಚಿರಲಿ, ಯಾವುದೇ ಅಧಿಕಾರದ ಆಮಿಷಕ್ಕೆ ಒಳಗಾಗಿ ಸರಕಾರವನ್ನು ಆತಂಕಕ್ಕೀಡುಮಾಡಿಕೊಳ್ಳದೆ ಸುಭದ್ರವಾಗಿ, ಜನಪರವಾಗಿ ಹೊಂದಾಣಿಕೆಯಿಂದ ಕೆಲಸ ಮಾಡುವ ಮೂಲಕ ಪ್ರತಿಪಕ್ಷಗಳ ತಂತ್ರಗಳನ್ನು ವಿಫಲಗೊಳಿಸುತ್ತಾ ಜನಬೆಂಬಲ ಗಳಿಸಲಿ ಎಂದು ಆಶಿಸೋಣ.

Writer - ಡಾ. ಕೃಷ್ಣಮೂರ್ತಿ ಚಮರಂ

contributor

Editor - ಡಾ. ಕೃಷ್ಣಮೂರ್ತಿ ಚಮರಂ

contributor

Similar News