ಬೆಸಗರಹಳ್ಳಿಯವರನ್ನು ನೆನೆಯುತ್ತ...

Update: 2018-06-03 09:57 GMT

ಬೆಸಗರಹಳ್ಳಿಯವರ ಕತೆಗಳ ಕೇಂದ್ರ ಬಿಂದು ನಮ್ಮ ಗ್ರಾಮ ಸಮಾಜ. ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಒಕ್ಕಲು ಮಕ್ಕಳ ನಿತ್ಯಬದುಕಿನ ಸುಖ ದುಃಖಗಳು, ತರಲೆ ತಾಪತ್ರಯಗಳು, ಶೋಷಿತರ ನೋವಿನ ಆಕ್ರಂದನಗಳು-ಅಸೂಯೆಗಳು, ಇವುಗಳ ಮಧ್ಯೆ ನುಸುಳುವ ಪ್ರೀತಿ ಅಂತಃಕರಣಗಳು ಮೆರವಣಿಗೆಯೋಪಾದಿ ಅವತರಿಸಿ ಗ್ರಾಮಜೀವನದ ದರ್ಶನವನ್ನು ಸಾಕ್ಷಾತ್ಕಾರಗೊಳಿಸುತ್ತವೆ ಬೆಸಗರಹಳ್ಳಿಯವರ ಕತೆಗಳು. ಈ ಗ್ರಾಮೀಣ ಸಮಾಜದಲ್ಲಿ ಬದಲಾವಣೆಯಾಗಬೇಕೆಂಬ ವೈಚಾರಿಕತೆಯ ಎಳೆಯೊಂದು ಬೆಸಗರಹಳ್ಳಿಯವರ ಕತೆಗಳನ್ನು ಪ್ರಭಾವಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.


ಮೊನ್ನೆ ಯಾವುದೋ ದಾಖಲೆಯೊಂದನ್ನು ಹುಡುಕಲೋಸುಗ ಹಳೆಯ ಕಾಗದಗಳ ಕಟ್ಟನ್ನು ಬಿಚ್ಚಿದಾಗ ಅದರೊಳಗಿಂದ ಹಠಾತ್ತನೆ ಎದ್ದು ಬಂದರು ಡಾ. ಬೆಸಗರಹಳ್ಳಿ ರಾಮಣ್ಣ. ಅವರು ಕಳೆದ ಶತಮಾನದ ಕೊನೆಯಲ್ಲಿ (1998) ಬರೆದ ಪತ್ರವೊಂದು ಹಳೆಯ ಕಾಗದಗಳ ಮಧ್ಯೆ ‘ನಿಧಿ’ಯಂತೆ ಕಾಣಿಸಿಕೊಂಡು ಮನಸ್ಸು ಬೆಚ್ಚಗಾಯಿತು. ಪುಸ್ತಕಗಳ ಕಪಾಟಿನೊಳಗಿಂದ ರಾಮಣ್ಣನವರ ‘ಕನ್ನಂಬಾಡಿ’ಯೂ ಕೈಬೀಸಿ ಕರೆಯಿತು. ರಾಮಣ್ಣನವರು ಸ್ವಹಸ್ತಾಕ್ಷರದೊಂದಿಗೆ ಪ್ರೀತಿಯಿಂದ ಕೊಟ್ಟ ‘ಕನ್ನಂಬಾಡಿ’. ಹಳೆಯ ಮೈಸೂರಿನವರಿಗೆ ಕನ್ನಂಬಾಡಿ ಎಂದರೆ ಇನ್ನಿಲ್ಲದ ಅಕ್ಕರೆ. ಸಾಹಿತ್ಯಾಸಕ್ತನಾದ ನನಗಂತೂ ಬೆಸಗರಹಳ್ಳಿ ರಾಮಣ್ಣನವರ ‘ಕನ್ನಂಬಾಡಿ’ ಎಂದರೆ ವಿಶೇಷ ಅಕ್ಕರೆ. ‘ಕನ್ನಂಬಾಡಿ’ ರಾಮಣ್ಣನವರ ಸಮಗ್ರ ಕಥೆಗಳ ಸಂಕಲನ. ಸಾಹಿತ್ಯವು ವಿಶೇಷ ಜೀವನ ದರ್ಶನವನ್ನು ಹೊಳೆಯಿಸಲು ಸದಾ ದುಡಿಯುತ್ತಿರುತ್ತೆ ಎನ್ನುವ ಒಂದು ಮಾತಿದೆ. ಈ ಮಾತಿಗೊಂದು ಜೀವಂತ ನಿದರ್ಶನ ‘ಕನ್ನಂಬಾಡಿ’.

ಕನ್ನಡ ಸಾಹಿತ್ಯ ಲೋಕ ಕಳೆದ ಶತಮಾನದಲ್ಲಿ ಜಗತ್ತು ಸಾಗಿ ಬಂದ ಹಲವಾರು ವೈಚಾರಿಕ ಧೋರಣೆಗಳು, ಚಳವಳಿಗಳು, ಪಂಥಗಳನ್ನು ಮೈಗೂಡಿಸಿಕೊಂಡಿರುವುದು ಸರಿಯಷ್ಟೆ. ಈ ಪರಿಯ ವೈಚಾರಿಕ ಧೋರಣೆಗಳು ಕನ್ನಡ ಸಾಹಿತ್ಯವನ್ನೂ ಪ್ರಭಾವಿಸಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮಾರ್ಗಗಳೆನಿಸಿಕೊಂಡು ಇಂದಿಗೂ ಪ್ರಚಲಿತದಲ್ಲಿವೆ. ನವೋದಯ, ಪ್ರಗತಿಶೀಲ ಮತ್ತು ನವ್ಯ ಚಳವಳಿಗಳ ಕಾಲಘಟ್ಟದಲ್ಲಿ ಪ್ರಯೋಗಶೀಲರಾಗಿದ್ದ ಬೆಸಗರಹಳ್ಳಿ ರಾಮಣ್ಣನವರು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಕಾರರ ಅವಜ್ಞೆಗೆ ಗುರಿಯಾಗಿರುವ ಪ್ರಮುಖ ಕಥಾ ಲೇಖಕರು.

ರಾಮಣ್ಣ ಹಳೆಯ ಮೈಸೂರಿನ ಗ್ರಾಮೀಣ ಭಾಗದಲ್ಲಿ ‘ಸಿಹಿ’ ಒಕ್ಕಲುತನಕ್ಕೆ ಹೆಸರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯವರು. ಹುಟ್ಟಿದ್ದು 1938ರ ಆಗಸ್ಟ್ 15ರಂದು. ತಂದೆ ಚಿಕ್ಕ ಎಲ್ಲೇಗೌಡ, ತಾಯಿ ದೊಡ್ಡ ತಾಯಮ್ಮ. ಪ್ರಾಥಮಿಕ ಶಿಕ್ಷಣ ಹುಟ್ಟಿದ ಹಳ್ಳಿಯಲ್ಲಿ. ಮುಂದೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಸೀನಿಯರ್ ಇಂಟರ್ ಮೀಡಿಯಟ್ ಮುಗಿಸಿ ಮೈಸೂರು ಮೆಡಿಕಲ್ ಕಾಲೇಜು ಸೇರಿದರು. ವೈದ್ಯರಾದರು. ಹೆಸರಿನ ಮುಂದೆ ‘ಡಾ’ ಸೇರಿಕೊಂಡಿತು. ಗ್ರಾಮೀಣ ಭಾರತದ ಆರೋಗ್ಯ ಸುಧಾರಣೆಗೆ ಕಟಿಬದ್ಧರಾಗಿ ನಿಂತರು. ಹುಡುಗನಾಗಿದ್ದಾಗಿನಿಂದಲೇ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ರಾಮಣ್ಣ ವೃತ್ತಿಯಿಂದ ದೈಹಿಕ ಬೇನೆಗಳಿಗೆ ಚಿಕಿತ್ಸೆ ಮಾಡುವ ವೈದ್ಯರಾದರೆ, ಪ್ರವೃತ್ತಿಯಿಂದ, ಅವರ ಅಭಿಮಾನಿಗಳು ಹೇಳುವಂತೆ ....ಸಾಮಾಜಿಕ ರೋಗಗಳಿಗೆ ತುತ್ತಾದ ಸಮುದಾಯಕ್ಕೆ ಚಿಕಿತ್ಸೆ ನೀಡಲು ಶಸ್ತ್ರ ಹಿಡಿದರು. ಕಥೆಯಾಯಿತು ಖಡ್ಗ.

ಬಾಲ್ಯದಲ್ಲಿ ಹಳ್ಳಿಗಾಡಿನ ‘ಅಜ್ಞಾತ ಕತೆಗಾರ್ತಿ’ ದೇಸಳ್ಳಿ ಅಮ್ಮ ಮಕ್ಕಳೆಲ್ಲರನ್ನು ಮನೆ ಮುಂದಲ ಜಗಲಿಯಲ್ಲಿ ಕೂಡಿಸಿಕೊಂಡು ಹೇಳುತ್ತಿದ್ದ ಚಂದ್ರ ಲೋಕ, ಪಾತಾಳ ಲೋಕಗಳ ಸುರಸುಂದರಿಯರ ಕತೆಗಳು, ಮಂತ್ರವಾದಿಗಳ ಹಕೀಕತ್ತುಗಳು, ಅದನ್ನೆಲ್ಲ ಗೆದ್ದು ಬರುತ್ತಿದ್ದ ರಾಜ ಕುಮಾರರ ಕತೆಗಳು ರಾಮಣ್ಣನವರನ್ನು ಮಂತ್ರ ಮುಗ್ಧವಾಗಿಸಿರಬೇಕು. ಅವರು ಕಥೆಯ ಮೋಹದಲ್ಲಿ ಸಿಕ್ಕಿಬಿದ್ದರು.ಮುಂದೆ ಹದಿನಾರನೆಯ ವಯಸ್ಸಿನಲ್ಲೇ ಅಣ್ಣ ತಂದುಕೊಟ್ಟ, ಎರಡು ರೂಪಾಯಿ ಬೆಲೆಯ (ಆ ಕಾಲಕ್ಕೆ ಕೆಂಗಲ್ ಹನುಮಂತಯ್ಯನವರ ಸರಕಾರ ಮಾಡಿದ ದೊಡ್ಡ ಸಾಂಸ್ಕೃತಿಕ ಕಾರ್ಯ) ಕುಮಾರ ವ್ಯಾಸ ವಿರಚಿತ ‘ಕರ್ಣಾಟಕ ಭಾರತ ಕಥಾಮಂಜರಿ’, ಕುವೆಂಪು ಅವರ ಕಥೆಗಳು ಮತ್ತು ನಾಟಕಗಳು, ಟಾಲ್ ಸ್ಟಾಯ್, ದಾಸ್ತೊವಸ್ಕಿ ಮೊದಲಾದವರ ಕಥೆ, ಕಾದಂಬರಿಗಳು ರಾಮಣ್ಣನವರ ಹರೆಯದ ಮನಸ್ಸನ್ನು ಸಾಹಿತ್ಯ ಸಂಸ್ಕಾರಕ್ಕೆ ಹದಗೊಳಿಸಿದವು. ಸಾಹಿತ್ಯದಲ್ಲಿ ಗುರುವಾದ ಅಣ್ಣ ತಮ್ಮ ರಾಮಣ್ಣನ ಎದೆ ಅಂಗಳವನ್ನು ಉತ್ತು ಸಾಹಿತ್ಯದ ಬೀಜ ಬಿತ್ತಿದರು. ಈ ಬೀಜ ಮೊಳೆತು, ಸಸಿಯಾಗಿ, ಮರವಾಗಿ ಫಲಕೊಡಲು ಸಾಕಷ್ಟು ಕಾಲವೇ ಹಿಡಿಯಿತು. ಪ್ರಾರಂಭದಲ್ಲಿ ಗರ್ಭಪಾತಗಳು ಸಹಜವೆನಿಸುವಂತೆ ಆದವು.

ಮೊದಲ ಕತೆ ‘ಹಸಿವಿನ ಕಹಳೆ’ ಜಿ.ಎಸ್.ಶಿವರುದ್ರಪ್ಪನವರು ಸಂಪಾದಕರಾಗಿದ್ದ ‘ವಸಂತ’ ಪತ್ರಿಕೆಯಲ್ಲಿ ಪ್ರಕಟವಾಗಬೇಕಿತ್ತು. ಆದರೆ ‘ವಸಂತ’ ವಸಂತೋದಯವನ್ನು ಕಾಣಲಿಲ್ಲ. ಆದರೇನಂತೆ, ರಾಮಣ್ಣನವರೊಳಗಿನ ಕತೆಗಾರ ಛಲಬಿಡದ ತ್ರಿವಿಕ್ರಮ. ಕತೆ ಕೃಷಿ ನಿಲ್ಲಲಿಲ್ಲ. ಪತ್ರಿಕೆಯೊಂದರ ದೀಪಾವಳಿ ಕಥಾಸ್ಪರ್ಧೆಗಾಗಿ ಬರೆದ ‘ಹಾವಿಲ್ಲದ ಹುತ್ತ’ ಬಹುಮಾನ ಪಡೆಯದಿದ್ದರೂ ತೀರ್ಪುಗಾರ ನಿರಂಜನರ ಪ್ರಶಂಸೆಯ ಬಹುಮಾನ ಗಿಟ್ಟಿಸಿತ್ತು. ನಂತರ ‘ಮಳೆಗರೆಯಿತು ಬಾನು, ಹಸುರಾಯಿತು ಮನ’ ಮಂಡ್ಯ ಜಿಲ್ಲೆಯ ವಿದ್ಯಾರ್ಥಿ ಸಂಘದ ‘ಲೋಕಪಾವನಿ’ಯಲ್ಲಿ ಪ್ರಕಟಗೊಂಡಿತು. ಕನ್ನಡ ಸಾರಸ್ವತ ಲೋಕಕ್ಕೆ ಕಥೆಗಾರ ಬೆಸಗರಹಳ್ಳಿ ರಾಮಣ್ಣನವರ ಆಗಮನವನ್ನು ಸಾರಿದ ಕತೆಯಿದು. ಸಾಹಿತ್ಯ ಲೋಕ ಹಾರ ತುರಾಯಿ ಹಿಡಿದು ಸ್ವಾಗತಿಸಲಿಲ್ಲ.

ಕನ್ನಡ ಸಣ್ಣ ಕತೆಯಲ್ಲಿ ಬೆಸಗರಹಳ್ಳಿಯವರ ಜೈತ್ರ ಯಾತ್ರೆ ಶುರುವಾದದ್ದು 1965ರಲ್ಲಿ, ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ‘ಸುಗ್ಗಿ’ ಕತೆಯಿಂದ. ಮೊದಲ ಕೊಯಿಲಿಗೇ ಎಂಥ ‘ಸುಗ್ಗಿ’! ‘ಸುಗ್ಗಿ’ ಕನ್ನಡ ಸಣ್ಣ ಕತೆಯ ಕಣಜಕ್ಕೆ ಬೆಸಗರಹಳ್ಳಿಯವರ ಕೊಡುಗೆಗೆ ಅನ್ವರ್ಥನಾಮವೂ ಹೌದು. ಕನ್ನಡ ಕಾವ್ಯ ಮತ್ತು ಸಣ್ಣಕತೆ ನವ್ಯದ ಪ್ರಭಾವಕ್ಕೆ ಪಕ್ಕಾಗಿದ್ದ ಆ ದಿನಗಳಲ್ಲಿ ಯಾವ ಹಣೆಪಟ್ಟಿಯನ್ನೂ ಹಚ್ಚಿಕೊಳ್ಳದೆ, ಮೊಹರು ಒತ್ತಿಕೊಳ್ಳದೆ ‘ಕತೆ ಬರೆಯಬೇಕೆನಿಸಿದಾಗ ಕತೆ’ ಬರೆದರು. ಬೆಸಗರಹಳ್ಳಿಯವರ ಮೊದಲ ಕಥಾ ಸಂಕಲನ ‘ನೆಲದ ಒಡಲು’ 1968ರಲ್ಲಿ ಪ್ರಕಟಗೊಂಡಿತು. ‘ಗರ್ಜನೆ’(1972), ‘ಹರಕೆಯ ಹಣ’, ‘ಒಂದು ಹುಡುಗನಿಗೆ ಬಿದ್ದ ಕನಸು’ ಕಥಾ ಸಂಗ್ರಹಗಳು ಪ್ರಕಟವಾದುವು. ‘ರಕ್ತ ಕಣ್ಣೀರು’, ‘ತೋಳಗಳ ನಡುವೆ’ ಬೆಸಗರಹಳ್ಳಿಯವರ ಕಾದಂಬರಿಗಳು. ‘ಕನ್ನಂಬಾಡಿ’ ಸಮಗ್ರ ಕತೆಗಳ ಸಂಕಲನ.

ಬೆಸಗರಹಳ್ಳಿಯವರ ಕತೆಗಳ ಕೇಂದ್ರ ಬಿಂದು ನಮ್ಮ ಗ್ರಾಮ ಸಮಾಜ. ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಒಕ್ಕಲು ಮಕ್ಕಳ ನಿತ್ಯಬದುಕಿನ ಸುಖದುಃಖಗಳು, ತರಲೆ ತಾಪತ್ರಯಗಳು, ಶೋಷಿತರ ನೋವಿನ ಆಕ್ರಂದನಗಳು-ಅಸೂಯೆಗಳು, ಇವುಗಳ ಮಧ್ಯೆ ನುಸುಳುವ ಪ್ರೀತಿ ಅಂತಃಕರಣಗಳು ಮೆರವಣಿಗೆಯೋಪಾದಿ ಅವತರಿಸಿ ಗ್ರಾಮಜೀವನದ ದರ್ಶನವನ್ನು ಸಾಕ್ಷಾತ್ಕಾರಗೊಳಿಸುತ್ತವೆ ಬೆಸಗರಹಳ್ಳಿಯವರ ಕತೆಗಳು. ಈ ಗ್ರಾಮೀಣ ಸಮಾಜದಲ್ಲಿ ಬದಲಾವಣೆಯಾಗಬೇಕೆಂಬ ವೈಚಾರಿಕತೆಯ ಎಳೆಯೊಂದು ಬೆಸಗರಹಳ್ಳಿಯವರ ಕತೆಗಳನ್ನು ಪ್ರಭಾವಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಶೋಷಣೆಯ ವ್ಯವಸ್ಥೆಯನ್ನು ಕಿತ್ತುಹಾಕಿ ಶೋಷಣೆಮುಕ್ತ ಸಮಾಜ ಕಟ್ಟುವ ಬೆಸಗರಹಳ್ಳಿಯವರ ಕನಸು ಅವರ ಬಹುತೇಕ ಕಥೆಗಳಲ್ಲಿ ಢಾಳವಾಗಿ ಕಾಣಿಸಿಕೊಳ್ಳುತ್ತದೆ. ಗ್ರಾಮೀಣ ಬದುಕನ್ನು ಜೀವಂತವಾಗಿ ಕಟ್ಟಿಕೊಡುವ ಬೆಸಗರಹಳ್ಳಿಯವರ ಕಥೆಗಾರಿಕೆಯಲ್ಲಿ ಶೋಷಣೆ, ಅಸಮಾನತೆಗಳ ವಿರುದ್ಧ ಸಾತ್ವಿಕ ಕೋಪ-ಪ್ರತಿಭಟನೆಗಳ ದನಿಯೊಂದು ಗುಪ್ತಗಾಮಿನಿಯಾಗಿ ಹರಿಯುತ್ತಿರುವುದನ್ನು ನಾವು ಗಮನಿಸಬಹುದು.

ಬೆಸಗರಹಳ್ಳಿ ರಾಮಣ್ಣವನರು, ವಿಶ್ವಾಸಘಾತುಕತನದ ಬಗ್ಗೆ, ಬಡವರ ಅಸಹಾಯಕತೆ ಬಗ್ಗೆ, ಅಧಿಕಾರಶಾಹಿ ಮತ್ತು ಕೊಳಕು ರಾಜಕಾರಣಿಗಳ ಕಠೋರ ನಿರ್ಲಕ್ಷ್ಯ ಕುರಿತು ತೀವ್ರ ಕಾಳಜಿಯಿಂದ ಬರೆಯುತ್ತಾರೆ ಎಂದಿರುವ ಖ್ಯಾತ ವಿಮರ್ಶಕ ಡಿ. ಆರ್. ನಾಗರಾಜ್ ಅವರ ಮಾತು ಉತ್ಪ್ರೇಕ್ಷೆಯೇನಲ್ಲ..ಅವರ ಕಥೆಗಳು ಚಿತ್ರಹಿಂಸೆಗೊಳಗಾದವರ, ದಮನಿತರ ಅಸಹಾಯಕರ ದನಿಗಳು, ಕ್ಷೋಭೆಯುಂಟುಮಾಡುವ ಕಥೆಗಳು. ಮನುಷ್ಯನ ಘನತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವಾಗ, ರೋಗಗ್ರಸ್ತ ಗ್ರಾಮ ಸಮಾಜವನ್ನು ಚಿತ್ರಿಸುವಾಗ, ಶೋಷಿತರ ಬದುಕನ್ನು ನಿರೂಪಿಸುವಾಗ ರಾಮಣ್ಣನವರ ಭಾಷೆ ಗ್ರಾಮೀಣ ಸೊಗಡನ್ನು ಉಳಿಸಿಕೊಂಡೂ ಸೊಕ್ಕುವುದಿಲ್ಲ, ರೋಷಗೊಳ್ಳುವುದಿಲ್ಲ. ಡಿ.ಆರ್.ನಾಗರಾಜ್ ಹೇಳುವಂತೆ ‘‘ಗಾಢವಾದ ನೈತಿಕ ಕ್ರೋಧದ ನಿರುದ್ವಿಗ್ನ ದನಿ’ ಅವರ ಕತೆಗಳ ನಿಜದನಿಯಾಗಿದೆ. ಭಾವೋದ್ವೇಗ, ಭಾವಪರವಶತೆಗಳಿಂದ ಮುಕ್ತವಾದ ಅವರ ಸಂಯಮದ ಬರವಣಿಗೆಯಲ್ಲಿ ಭಾಷೆ ವ್ಯಂಗ್ಯ-ವಿಡಂಬನೆಗಳ ಮೊನಚನ್ನು ಪಡೆದುಕೊಳ್ಳುವುದೂ ಉಂಟು. ಇದಕ್ಕೆ ‘ಗಾಂಧಿ’ ಒಂದು ಉತ್ತಮ ನಿದರ್ಶನವಾದೀತು. ಗಾಂಧೀಜಿಯವರು ಪ್ರತಿಪಾದಿಸಿದ ಮೌಲ್ಯಗಳ ಅಧಃಪತನವನ್ನು ಬೆಸಗರಹಳ್ಳಿಯವರು ಈ ಕತೆಯಲ್ಲಿ ಅತ್ಯಂತ ಮಾರ್ಮಿಕವಾಗಿ, ಪರಿಣಾಮಕಾರಿಯಾಗಿ ವ್ಯಂಗ್ಯದಿಂದ ನಿರೂಪಿಸುತ್ತಾರೆ. ‘ಗಾಂಧಿ’ ಕತೆ ಇತ್ತೀಚಿನ ವರ್ಷಗಳಲ್ಲಿ ಪ್ರಕಟವಾಗಿರುವ ಕನ್ನಡದ ಅತ್ಯತ್ತಮ ಕತೆಗಳ ಸಂಗ್ರಹಗಳಲ್ಲಿ ಸ್ಥಾನ ಪಡೆದಿರುವುದು ಅದರ ಅಂತಃಸತ್ವ ಮತ್ತು ಪ್ರಸ್ತುತತೆಗಳಿಗೆ ದ್ಯೋತಕವಾಗಿದೆ.

ವೃತ್ತಿ, ಪ್ರವೃತ್ತಿಗಳೆರಡರಲ್ಲೂ ಗ್ರಾಮೀಣ ಸಮಾಜದ ಸೇವೆಗೆ, ಸುಧಾರಣೆಗೆ ಬದ್ಧರಾಗಿದ್ದ ಬೆಸಗರಹಳ್ಳಿ ರಾಮಣ್ಣನವರು ವೈದ್ಯರಾಗಿ ಗ್ರಾಮೀಣ ಪ್ರದೇಶಗಳ ಆರೋಗ್ಯಕರ ಜೀವನಕ್ಕೆ ಶ್ರಮಿಸಿದವರು. ಎಪ್ಪತ್ತರ ದಶಕದಲ್ಲಿ ಬಿಹಾರದಲ್ಲಿ ಸಿಡುಬು ಸಾಂಕ್ರಾಮಿಕವಾಗಿ ದಾಳಿಯಿಟ್ಟಾಗ ಆ ರಾಜ್ಯಕ್ಕೆ ಹೋಗಿ ಸೇವೆಸಲ್ಲಿಸಿದವರು. ವೈದ್ಯರಾಗಿ ಅವರು ಹೆಚ್ಚಿನವರಂತೆ ಹಣ ಮಾಡುವ ಕನಸು ಕಾಣಲಿಲ್ಲ. ಬದಲಾಗಿ ಅದನ್ನೊಂದು ಸೇವೆಯ ಕಾಯಕವಾಗಿ ಕಂಡರು. ಬೆಸಗರಹಳ್ಳಿ ರಾಮಣ್ಣನವರು 1998ರ ಮೇ 6ರಂದು ಈ ಅಂಕಣಕಾರನಿಗೆ ಬರೆದ ಪತ್ರದಲ್ಲಿನ ಕೆಲವು ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತಿವೆ. ಬೆಸಗರಹಳ್ಳಿಯವರು ಹೀಗೆ ಬರೆದಿದ್ದಾರೆ: ‘‘ಕನ್ನಡದ ಹುಚ್ಚುಹಿಡಿದು ಅಮೆರಿಕಕ್ಕೆ ಹೋಗುವುದನ್ನು ಬಿಟ್ಟೆ. ಹೋಗಿದ್ದರೆ ಈಗ 6-7 ಕೋಟಿ ರೂ. ಗಳ ಒಡೆಯನಾಗಬಹುದಿತ್ತು. ಆದರೆ ಯಾರಿಗೂ ನನ್ನ ಹೆಸರು ಗೊತ್ತಾಗುತ್ತಿರಲಿಲ್ಲ. ನನ್ನ ಕಷ್ಟಕಾಲದಲ್ಲಿ ಕನ್ನಡಿಗ ಮಿತ್ರರು ನನ್ನನ್ನು ಕಾಪಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ನನ್ನ ಕೈಬಿಡಲಿಲ್ಲ.’’

ಈ ಮಾತುಗಳು ರಾಮಣ್ಣನವರ ವೃತ್ತಿಯ ಸಾಧ್ಯತೆ, ಆಮಿಷಗಳನ್ನು, ಅದನ್ನು ಮೆಟ್ಟಿ ನಿಂತ ಅವರ ನುಡಿ ಪ್ರೇಮವನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ. ಕನ್ನಡ ಎಷ್ಟರಮಟ್ಟಿಗೆ ಅವರ ಕೈ ಹಿಡಿಯಿತು, ಕಷ್ಟಕಾಲದಲ್ಲಿ ಸಹಾಯ ಮಾಡಿತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಗೊತ್ತು.
ಒಂದೆರಡು ಬಹುಮಾನ, ಪ್ರಶಸ್ತಿಗಳ ಮೂಲಕ ಕನ್ನಡಿಗರು ತಕ್ಕಮಟ್ಟಿಗೆ ಬೆಸಗರಹಳ್ಳಿ ರಾಮಣ್ಣನವರನ್ನು ನೆನಪಿಸಿಕೊಂಡಿದ್ದಾರೆ ಎಂಬುದು ನಿಜ. ಬಂಡಾಯ ಸಾಹಿತ್ಯ ಚಳವಳಿಗೂ ಮುನ್ನ ಬಂಡಾಯ ಸ್ವರೂಪದ ಕತೆಗಳನ್ನು ರಚಿಸಿದ ಬೆಸಗರಹಳ್ಳಿಯವರನ್ನು ಬಂಡಾಯ ಚಳವಳಿ ಒಂದು ಮೇಲ್ಪಂಕ್ತಿಯಾಗಿ ನೆನೆಯಬಹುದಿತ್ತು. ಆಗಲಿಲ್ಲ. ಇಂದಿನ ತಲೆಮಾರಿನ ಸಾಹಿತ್ಯಪ್ರಿಯರಿಗೆ ಬೆಸಗರಹಳ್ಳಿಯವರ ಬಗ್ಗೆ ತಿಳಿಯಬೇಕೆಂದರೆ, ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಕಟಣೆಗಳಲ್ಲಿ(ಸಾಲು ದೀಪಗಳು) ಅವರ ಬಗ್ಗೆ ಒಂದು ಸಾಲೂ ಕಾಣ ಸಿಗುವುದಿಲ್ಲ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರತಿ ಐದು ವರ್ಷಗಳಿಗೊಮ್ಮೆಯಾದರೂ ಕನ್ನಡದ ಲೇಖಕರ ಮಾಹಿತಿ ನೀಡುವ ‘ಸಾಲು ದೀಪ’ದ ಪ್ರಕಟಣೆ ಮುಂದುವರಿಸಿದಲ್ಲಿ ಕನ್ನಡ ಸಾಹಿತ್ಯದ ಹೊಸ ಹಣತೆಗಳ ಕುಡಿಗಳ ಮಿಣುಕು ನೋಟ ಆಸಕ್ತರಿಗೆ ದೊರೆಯಬಹುದು.

ಬೆಸಗರಹಳ್ಳಿ ರಾಮಣ್ಣವವರು ಇಂದು ನಮ್ಮಿಡನೆ ಇದ್ದಿದ್ದರೆ, ಇನ್ನೆರಡು ತಿಂಗಳಿಗೆ ಅವರಿಗೆ ಎಂಬತ್ತು ತುಂಬುತ್ತಿತ್ತು. ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸುವುದಿರಲಿ, ಬೆಸಗರಹಳ್ಳಿ ರಾಮಣ್ಣನವರನ್ನು ನೆನಪಿಸಿಕೊಳ್ಳುವ ಒಂದೆರಡು ಕಾರ್ಯಕ್ರಮಗಳಾದರೂ ನಡೆಯ ಬೇಕು ಎಂದು ಚಡಪಡಿಸುತ್ತಿರುವಾಗಲೇ, ಯೋಗಾಯೋಗವೆಂಬಂತೆ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಆಮಂತ್ರಣ ಪತ್ರಿಕೆಯನ್ನು ಅಂಚೆಯವನು ಕೈಯಲ್ಲಿಟ್ಟು ಹೋದ. ಪ್ರತಿಷ್ಠಾನ ಬೆಸಗರಹಳ್ಳಿ ರಾಮಣ್ಣ ಅವರ ಹೆಸರಿನಲ್ಲಿ ಪ್ರತಿ ವರ್ಷ ಅತ್ಯತ್ತಮ ಕಥಾ ಸಂಕಲಕ್ಕೆ ಪ್ರಶಸ್ತಿ ನೀಡುವ ಮೂಲಕ ಕನ್ನಡ ಕಥಾ ಪರಂಪರೆಯನ್ನು ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇದೇ 9ರಂದು ನಡೆಯಲಿರುವ ಸಮಾರಂಭದಲ್ಲಿ ಈ ವರ್ಷದ ಗೌರವಕ್ಕೆ ಪಾತ್ರರಾಗಿರುವವರು, ಬೆಸಗರಹಳ್ಳಿಯವರಂತೆ ಗ್ರಾಮೀಣ ಶೋಷಿತ ಬದುಕನ್ನು ತಮ್ಮ ಕಥೆಗಳಲ್ಲಿ ತೆರೆದಿಟ್ಟಿರುವ ಮೊಗಳ್ಳಿ ಗಣೇಶ್ ಅವರು. ಮೊಗಳ್ಳಿಗೆ ನೇಸರಾಭಿನಂದನೆಗಳು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News