‘ಬಸ್ತರಿಯಾ ಬೆಟಾಲಿಯನ್’ -ನಕ್ಸಲರ ಹತ್ಯೆಗಾಗಿ ಆದಿವಾಸಿಗಳ ಪಡೆ

Update: 2018-06-09 10:42 GMT
ಫೋಟೋ ಕೃಪೆ: ANI

ಈಗ ಬಂಡಾಯ ನಿಗ್ರಹದಲ್ಲಿ ‘ಎಡಪಂಥೀಯ ಉಗ್ರಗಾಮಿ’ಗಳ ಚಲನವಲನವನ್ನು ಪತ್ತೆಹಚ್ಚಲು ಇದೀಗ ಮಾನವ ರಹಿತ ವಾಯುಮಾರ್ಗೀ ವಾಹನಗಳು ಅರ್ಥಾತ್ ಡ್ರೋನ್‌ಗಳು ಮತ್ತು ಅರೆಸೇನಾಪಡೆಗಳ ಸೈನಿಕರನ್ನು ರಣಾಂಗಣಕ್ಕೆ ಕರೆತರುವ ಹೆಲಿಕಾಪ್ಟರುಗಳು ಸಹ ಸೇರಿಕೊಂಡಿವೆ. ಈಗ ಇದರಲ್ಲಿ ಗುಂಡು ರಕ್ಷಕ ನೆಲಬಾಂಬು ನಿರೋಧಕ ವಾಹನಗಳಂಥ ಸೇನಾ ಪರಿಕರಗಳೂ ಸೇರಿಕೊಂಡಿವೆ. ಇದರ ಜೊತೆ ಅರಣ್ಯ ಯುದ್ಧ ತರಬೇತಿ ಶಾಲೆಗಳಲ್ಲಿ ಬಡ ಮತ್ತು ನಿರುದ್ಯೋಗಿ ಆದಿವಾಸಿಗಳಿಗೆ ತಮ್ಮ ಸಮುದಾಯದವರನ್ನು ಹೇಗೆ ಕೊಲ್ಲಬೇಕು ಎಂದು ಹೇಳಿಕೊಡಲಾಗುತ್ತಿದೆ.


ಛತ್ತೀಸ್‌ಗಡದ ಬಸ್ತರ್ ಪ್ರಾಂತದಲ್ಲಿ ಅರೆಸೇನಾ ಪಡೆಗಳು ನಡೆಸುತ್ತಿರುವ ‘ನಕ್ಸಲ್ ವಿರೋಧಿ ಕಾರ್ಯಾಚರಣೆಗಳ’ ಸಾಮರ್ಥ್ಯವನ್ನು ಹೆಚ್ಚಿಸಲೆಂದು ಕೇಂದ್ರದ ಅರೆ ಸೇನಾ ಪಡೆಯಲ್ಲಿ (ಸಿಆರ್‌ಪಿಎಫ್) ರಚಿಸಲಾಗಿರುವ ಹೊಸ ಆದಿವಾಸಿಗಳ ಬೆಟಾಲಿಯನ್ನಿನ ತರಬೇತಿ ಮುಗಿದ ನಂತರ ಮೇ 21ರಂದು ನಡೆದ ಸೇವಾ ಭರ್ತಿ ಕಾರ್ಯಕ್ರಮದಲ್ಲಿ ಖುದ್ದು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಮತ್ತು ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ್‌ಸಿಂಗ್ ಹಾಜರಿದ್ದರು. ‘241ನೇ ಬೆಟಾಲಿಯನ್’ ಅಥವಾ ‘ಬಸ್ತರಿಯಾ ಬೆಟಾಲಿಯನ್’ ಎಂದೇ ಪ್ರಸಿದ್ಧವಾಗಿರುವ ಈ ತುಕಡಿಯು ಇಷ್ಟರಲ್ಲೇ ಸುರ್ಗುಜಾ ಜಿಲ್ಲೆಯ ಅಂಬಿಕಾಪುರದಲ್ಲಿರುವ ನಕ್ಸಲ್ ವಿರೋಧಿ ತರಬೇತಿ ಶಾಲೆಯಿಂದ ಬಸ್ತರ್‌ನಲ್ಲಿ ನಡೆಯುತ್ತಿರುವ ನಕ್ಸಲ್ ದಂಗೆ ನಿಗ್ರಹ ಕಾರ್ಯಾಚರಣೆಗೆ ನಿಯುಕ್ತಿಗೊಳ್ಳಲಿವೆ. ಈ ಹೊಸ ತುಕಡಿಯಲ್ಲಿ ಛತ್ತೀಸ್‌ಗಡಲ್ಲಿ ಅತ್ಯಂತ ತೀವ್ರ ನಕ್ಸಲ್ ಚಟುವಟಿಕೆಗಳು ನಡೆಯುತ್ತಿರುವ ಬಿಜಾಪುರ, ದಾಂತೇವಾಡ, ನಾರಾಯಣ್‌ಪುರ್ ಮತ್ತು ಸುಕ್ಮಾ ಜಿಲ್ಲೆಗಳಿಗೆ ಸೇರಿದ 534 ಯುವ ಆದಿವಾಸಿಗಳಿದ್ದಾರೆ.

ಅವರಲ್ಲಿ 189 ಜನ ಮಹಿಳೆಯರು. ಆದಿವಾಸಿಗಳ ಮನಸ್ಸು ಮತ್ತು ಬುದ್ಧ್ದಿಯನ್ನು ತಮ್ಮೆಡೆಗೆ ಗೆದ್ದುಕೊಳ್ಳಲು ಸಿಆರ್‌ಪಿಎಫ್ ನಡೆಸಿದೆಯೆಂದು ಹೇಳಲಾಗುವ ‘ನಾಗರಿಕ ಕಾರ್ಯಚಟುವಟಿಕೆ’ಗಳಲ್ಲಿ ಇವರೆಲ್ಲರನ್ನು ಗುರುತಿಸಿ ನೋಂದಾಯಿಸಿಕೊಳ್ಳಲಾಗಿದೆಯೆಂದು ಹೇಳಲಾಗುತ್ತದೆ. ಆದರೆ ಸಿಆರ್‌ಪಿಎಫ್‌ನ ಈ ಕಾರ್ಯಕ್ರಮವು ‘ಶರಣಾಗತರಾದ ಮಾವೋವಾದಿ’ಗಳನ್ನು ಪೊಲೀಸ್ ಮಾಹಿತಿದಾರರನ್ನಾಗಿ ನಿಯೋಜಿಸಿಕೊಳ್ಳಲು ಬಳಸಿಕೊಳ್ಳಲಾಯಿತು. ಹಿಂದೆ ಛತ್ತೀಸ್‌ಗಡದ ಸಶಸ್ತ್ರ ಪೊಲೀಸ್ ಪಡೆಯವರು ಮಾಡಿದಂತೆ ಸಿಆರ್‌ಪಿಎಫ್ ಕೂಡಾ ಸ್ಥಳೀಯ ಆದಿವಾಸಿಗಳಿಗೆ ಪ್ರದೇಶದ ಬಗೆಗೆ ಇರುವ ಭೌಗೋಳಿಕ ಜ್ಞಾನ, ಸಂಸ್ಕೃತಿ ಹಾಗೂ ಭಾಷೆಗಳ ಅನುಕೂಲವನ್ನು ಬಳಸಿಕೊಂಡು ಸ್ಥಳೀಯ ಜನಸಮುದಾಯಕ್ಕೂ ತಮಗೂ ಇರುವ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಶತಪ್ರಯತ್ನ ನಡೆಸಿದೆ. ಆದರೆ ಈ ಹೊಸ ಪಡೆಯ ರಚನೆಗೆ ಇದೊಂದೇ ಮಾನದಂಡವಲ್ಲ. ಈ ಹಿಂದೆ ಸ್ಥಳೀಯ ಆದಿವಾಸಿಗಳನ್ನು ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವಾಗ ನಕ್ಸಲರನ್ನು ಕೊಲ್ಲಬೇಕೆಂಬ ಪ್ರತೀಕಾರದ ಮನೋಭಾವ ಹೇಗೆ ಪ್ರಮುಖ ಮಾನದಂಡವಾಗಿತ್ತೋ ಬಸ್ತರಿಯಾ ಪಡೆಯಲ್ಲಿ ಭರ್ತಿಯಾಗಲು ಅದೇ ಅಲಿಖಿತವಾದ ಮಾನದಂಡವಾಗಿದೆ. ‘ಇಂಡಿಯಾ ಟುಡೆ’ಯ ಪ್ರತಿನಿಧಿಯು ಬಸ್ತರಿಯಾ ಪಡೆಗೆ ಭರ್ತಿಯಾದ ಒಬ್ಬ ಮಹಿಳಾ ಪೇದೆಯನ್ನು ಮಾತನಾಡಿಸಿದಾಗ ಆಕೆ ತನ್ನ ತಂದೆಯನ್ನೂ ಒಳಗೊಂಡಂತೆ ತನ್ನ ಕುಟುಂಬದ ಮೂವರನ್ನೂ ಪೊಲೀಸ್ ಮಾಹಿತಿದಾರರಾಗಿರಬಹುದೆಂದು ಕೊಂದುಹಾಕಿದ ನಕ್ಸಲರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ತಕ್ಕಹಾಗೆ ತನಗೆ ಕಠಿಣವಾದ ತರಬೇತಿ ನೀಡಲಾಗಿದೆ ಎಂದಿದ್ದಾಳೆ. 2005ರಲ್ಲಿ ಛತ್ತೀಸ್‌ಗಡ ಸರಕಾರವು ಕೇಂದ್ರ ಸರಕಾರದ ಧನ ಸಹಾಯದೊಂದಿಗೆ, ರಾಜ್ಯ ಸರಕಾರದ ಸಂಪೂರ್ಣ ಬೆಂಬಲದೊಂದಿಗೆ ಸಶಸ್ತ್ರ ಖಾಸಗಿ ಹಂತಕರ ಗುಂಪನ್ನು ಸೃಷ್ಟಿಸಿ ‘ಸಾಲ್ವಾ ಜುಡುಂ’ ಎಂಬ ಹಂತಕ ಅಭಿಯಾನವನ್ನು ಪ್ರಾರಂಭಿಸಿದಾಗಿನಿಂದಲೂ, ಆದಿವಾಸಿಗಳು ತಮ್ಮ ವಿಶೇಷ ಪೊಲೀಸ್ ಅಧಿಕಾರಿ ಹುದ್ದೆಯನ್ನು ತ್ಯಜಿಸಿ ಹೊರಬಂದು ಜನರ ಕ್ಷಮಾಪಣೆ ಕೇಳಬೇಕೆಂದು ಮಾವೋವಾದಿಗಳು ಆದಿವಾಸಿಗಳಲ್ಲಿ ಮನವಿ ಮಾಡುತ್ತಲೇ ಬಂದಿದ್ದಾರೆ.

ಉದಾಹರಣೆಗೆ 2017ರ ಮಾರ್ಚ್ 15ರಂದು ಬಿಜಾಪುರ ಜಿಲ್ಲೆಯ ರಾಣಿಬೋದ್ಲಿ ಎಂಬಲ್ಲಿ ಈ ವಿಶೇಷ ಆದಿವಾಸಿ ಪೊಲೀಸ್ ಅಧಿಕಾರಿಗಳೇ ಹೆಚ್ಚಿದ್ದ ಪೊಲೀಸ್ ಶಿಬಿರವೊಂದರ ಮೇಲೆ ಮಾವೋವಾದಿಗಳ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ)ಯ ತುಕಡಿಯೊಂದು ಯಶಸ್ವಿಯಾಗಿ ದಾಳಿ ನಡೆಸಿತು. ಅದಾದ ನಂತರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ‘‘ಸರಕಾರವು ನಿಮ್ಮನ್ನು ಮುಂದೆ ನಿಲ್ಲಿಸಿ ನೀವೇ ನಿಮ್ಮ ಕೈಯಾರೆ ನಿಮ್ಮ ಸಹೋದರರನ್ನು, ತಂದೆ ತಾಯಿಗಳನ್ನು ಕೊಲ್ಲುವಂತೆ ಮಾಡುವ ಅಪಾಯಕಾರಿ ಮತ್ತು ದುಷ್ಟ ಆಟವಾಡುತ್ತಿದೆ. ಆದ್ದರಿಂದಲೇ ಈ ಕೆಲಸವನ್ನು ಬಿಟ್ಟು ಬನ್ನಿ’’ ಎಂದು ಮನವಿ ಮಾಡಿದ್ದರು. 2010ರಲ್ಲಿ ಈ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಕೋಯಾ ಕಮಾಂಡೊಗಳೆಂದು ಕರೆಯಲಾಯಿತು. ಅವರಲ್ಲಿ ಮೂರನೇ ಒಂದು ಭಾಗದಷ್ಟು ಆದಿವಾಸಿಗಳು ಮಾವೋವಾದಿಗಳ ಈ ಬಗೆಯ ಮನವಿಗೆ ಸ್ಪಂದಿಸಿ ಎಸ್‌ಪಿಒ ವೃತ್ತಿಯನ್ನು ತೊರೆದು ಮನೆಗೆ ಮರಳಿದ್ದರು. 2011ರಲ್ಲಿ ಸುಪ್ರೀಂ ಕೋರ್ಟು ಈ ಪಡೆಯನ್ನು ವಿಸರ್ಜಿಸಿ ಅವರಿಂದ ಶಸ್ತ್ರಾಸ್ತ್ರಗಳನ್ನು ವಾಪಸ್ ಪಡೆಯಬೇಕೆಂದು ಆದೇಶಿಸಿತ್ತು. ಆದರೆ ಉಳಿದ ಆ ಇಡೀ ಪಡೆಗೆ ‘ಸಶಸ್ತ್ರ ಪೂರಕ ಪಡೆ’ (ಆಕ್ಸಿಲರಿ ಆರ್ಮ್ಡ್ ಫೋರ್ಸಸ್) ಎಂದು ಮರು ನಾಮಕರಣ ಮಾಡಿ ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಾಯಿತು. 2013ರಲ್ಲಿ ಅವರಿಗೆಂದೇ ‘ಡಿಸ್ಟ್ರಿಕ್ಟ್ ಆರ್ಮ್ಡ್ ರಿಸರ್ವ್ ಗಾರ್ಡ್’ ಎಂಬ ನಾಮಾಂಕಿತವನ್ನು ಸೃಷ್ಟಿಸಲಾಯಿತು. ಗ್ರಾಮಸ್ಥರು ತಮ್ಮನ್ನು ಮಾವೋವಾದಿಗಳೆಂದು ನಂಬುವಂತೆ ಮಾಡಿ ಅವರನ್ನು ನಿಷೇಧಿತ ಮಾವೋವಾದಿ ಚಳವಳಿ ಮತ್ತು ಸಂಘಟನೆಯ ಜೊತೆ ಸಂಬಂಧವಿತ್ತೆಂದು ಸಿಲುಕಿಸಲು ಈ ಗಾರ್ಡ್‌ಗಳನ್ನು ಬಳಸಿಕೊಳ್ಳಲಾಯಿತು.

ಕ್ರಾಂತಿಕಾರಿ ದಂಗೆಯನ್ನು ಹತ್ತಿಕ್ಕುವ ಪ್ರತಿಕ್ರಾಂತಿಕಾರಿ ವ್ಯೆಹತಂತ್ರಗಳ ನಿಪುಣರ ಪ್ರಕಾರ ಸಿಆರ್‌ಪಿಎಫ್‌ನ ಜೊತೆಯಲ್ಲಿದ್ದು ಕೊಂಡೇ ಕೆಲಸ ಮಾಡುವ ಈ ‘ಡಿಸ್ಟ್ರಿಕ್ಟ್ ಆರ್ಮ್ಡ್ ರಿಸರ್ವ್ ಗಾರ್ಡ್’ನ ತುಕಡಿಗಳು ನಕ್ಸಲರನ್ನು ಹತ್ತಿಕ್ಕುವ ಕಾರ್ಯತಂತ್ರದಲ್ಲಿ ಅಪೂರ್ವವಾದ ಯಶಸ್ಸಿಗೆ ಕಾರಣವಾಗಿವೆ. ಸಿಆರ್‌ಪಿಎಫ್ ತುಕಡಿಗಳ ಜೊತೆಜೊತೆಗೆ ಇಂಥಾ ಸ್ಥಳೀಯ ಮೂಲದ ಸಶಸ್ತ್ರ ಘಟಕಗಳನ್ನು ನಿಯೋಜಿಸುವ ಕ್ರಮವು ಈ ಮಾವೋವಾದಿಗಳ ಕೇಂದ್ರ ನೆಲೆಯನ್ನು ಒಳಗೊಂಡಂತೆ ಇತರ ಬಂಡಾಯಗಳು ನಡೆಯುತ್ತಿರುವ ಕಾಶ್ಮೀರ, ಈಶಾನ್ಯ ಭಾರತಗಳಲ್ಲೂ ಸಹ ಬಂಡುಕೋರರನ್ನು ದಮನ ಮಾಡುವಲ್ಲಿ ಮತ್ತು ಅಂತಿಮವಾಗಿ ಹತ್ತಿಕ್ಕುವಲ್ಲಿ ಅತ್ಯಂತ ಯಶಸ್ವಿಯಾದ ಪ್ರಯೋಗವಾಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ. ಆದರೆ ಅಂತಹ ಪ್ರತಿಕ್ರಾಂತಿಕಾರಿ ವ್ಯೆಹತಂತ್ರಗಳಲ್ಲಿ ಅಂತರ್ಗತವಾಗಿರುವ ಕ್ರೌರ್ಯ ಮತ್ತು ಬರ್ಬರತೆಗಳ ಬಗ್ಗೆ ಅವರು ಸೊಲ್ಲೆತ್ತುವುದಿಲ್ಲ. ಅದೇನೇ ಇರಲಿ, ಈ ಪ್ರತಿಕ್ರಾಂತಿಕಾರಿ ತಂತ್ರಗಳ ನಿಪುಣರು ಏನೇ ಹೇಳುತ್ತಿದ್ದರೂ ಬಸ್ತರ್ ವಿಭಾಗದಲ್ಲಿ ನಡೆಯುತ್ತಿರುವುದು ಆದಿವಾಸಿ-ರೈತರ ಚಳವಳಿ.

ಅದಕ್ಕೆ ‘ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನ್’ ಮತ್ತು ‘ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘಟನ್’ ಎಂಬ ಸಮೂಹ ಸಂಘಟನೆಗಳು ನಾಯಕತ್ವ ಕೊಡುತ್ತಿವೆ ಮತ್ತು ಈ ಎರಡೂ ಸಂಘಟನೆಗಳನ್ನು ಪಿಎಲ್‌ಜಿಎ ಮತ್ತು ಮಾವೋವಾದಿ ಪಕ್ಷವೂ ಬೆಂಬಲಿಸುತ್ತವೆ. ಸಂದರ್ಭ ಹೀಗಿರುವಾಗ ‘ಸಾಲ್ವಾ ಜುಡುಂ’ನ ಪ್ರಾರಂಭದ ಆರೆಂಟು ತಿಂಗಳಲ್ಲಿ ಆದಂತೆ ‘ಬಸ್ತರಿಯಾ ಬೆಟಾಲಿಯನ್’ ಸಹ ಬಂಡಾಯ ನಿಗ್ರಹದ ಉದ್ದೇಶಕ್ಕೆ ತತ್ಕಾಲೀನ ಅನುಕೂಲತೆಗಳನ್ನು ಒದಗಿಸಬಹುದು. ಆದರೆ ಇದೂ ಕೂಡಾ ಅಂತಿಮವಾಗಿ ಒಂದು ವ್ಯೆಹಾತ್ಮಕ ಪ್ರಮಾದವೆಂದೇ ಸಾಬೀತಾಗಲಿದೆ.

ಕಳೆದ ಮೂರು ದಶಕಗಳಿಂದ ಪ್ರಾಂತೀಯ ಸಶಸ್ತ್ರ ಪೊಲೀಸರೊಂದಿಗೆ ಸಿಆರ್‌ಪಿಎಫ್ ಸಹ ಬಸ್ತರ್ ಪ್ರಾಂತದ ಭೌಗೋಳಿಕತೆಯ ಶಾಶ್ವತ ಗುಣಲಕ್ಷಣವಾಗಿಬಿಟ್ಟಿದೆ. ಈಗ ಬಂಡಾಯ ನಿಗ್ರಹದಲ್ಲಿ ‘ಎಡಪಂಥೀಯ ಉಗ್ರಗಾಮಿ’ಗಳ ಚಲನವಲನವನ್ನು ಪತ್ತೆಹಚ್ಚಲು ಇದೀಗ ಮಾನವ ರಹಿತ ವಾಯುಮಾರ್ಗೀ ವಾಹನಗಳು ಅರ್ಥಾತ್ ಡ್ರೋನ್‌ಗಳು ಮತ್ತು ಅರೆಸೇನಾಪಡೆಗಳ ಸೈನಿಕರನ್ನು ರಣಾಂಗಣಕ್ಕೆ ಕರೆತರುವ ಹೆಲಿಕಾಪ್ಟರುಗಳು ಸಹ ಸೇರಿಕೊಂಡಿವೆ. ಈಗ ಇದರಲ್ಲಿ ಗುಂಡು ರಕ್ಷಕ ನೆಲಬಾಂಬು ನಿರೋಧಕ ವಾಹನಗಳಂಥ ಸೇನಾ ಪರಿಕರಗಳೂ ಸೇರಿಕೊಂಡಿವೆ. ಇದರ ಜೊತೆ ಅರಣ್ಯ ಯುದ್ಧ ತರಬೇತಿ ಶಾಲೆಗಳಲ್ಲಿ ಬಡ ಮತ್ತು ನಿರುದ್ಯೋಗಿ ಆದಿವಾಸಿಗಳಿಗೆ ತಮ್ಮ ಸಮುದಾಯದವರನ್ನು ಹೇಗೆ ಕೊಲ್ಲಬೇಕು ಎಂದು ಹೇಳಿಕೊಡಲಾಗುತ್ತಿದೆ. ಇದರ ಜೊತೆಗೆ ಗಣಿಧಣಿಗಳು ತಮ್ಮ ಚುನಾವಣೆ ವೆಚ್ಚಗಳಿಗೆ ಕೊಡುವ ದೇಣಿಗೆಗಳಿಗೆ ಪ್ರತಿಯಾಗಿ ಸರಕಾರವು ಗಣಿಗಾರಿಕಾ ಪರವಾನಿಗೆಯನ್ನು ಕೊಡುತ್ತಿದೆ. ಇದರೊಂದಿಗೆ ಅಧಿಕಾರದಲ್ಲಿರುವ ರಾಜಕಾರಣಿಗಳು ತಮ್ಮ ಪರವಾದ ವರದಿಯನ್ನು ಪಡೆದುಕೊಳ್ಳಲು ಕೆಲವು ಮಾಧ್ಯಮ ಸಂಸ್ಥೆಗಳಿಗೆ ಮತ್ತು ಪತ್ರಕರ್ತರಿಗೆ ಹಣವನ್ನು ಪಾವತಿಸುವುದನ್ನೂ ಸೇರಿಸಿಕೊಳ್ಳಿ. ಹೀಗಾಗಿ ಚುನಾವಣೆಯೂ ಸಹ ಈ ಬಂಡಾಯ ನಿಗ್ರಹ ಖಾತೆಯೊಳಗೆ ಸೇರಿಕೊಂಡುಬಿಟ್ಟಿದೆ. ಆದರೆ ಬಂಡಾಯ ನಿಗ್ರಹದಲ್ಲಿ ಅತ್ಯಂತ ಕೀಲಕವಾದ ಅಂಶವೊಂದು ತಪ್ಪಿಹೋಗಿದೆ ಎಂದು ನಕ್ಸಲ್ ವಿರೋಧಿ ಪರಿಣಿತರಿಗೆ ಅನಿಸುತ್ತಿತ್ತು. ಇದೀಗ ಅವರ ಸಲಹೆಯನ್ನು ಮನ್ನಿಸಲಾಗಿದೆ. ‘ಬಸ್ತರಿಯಾ ಬೆಟಾಲಿಯನ್’ ಅಸ್ತಿತ್ವಕ್ಕೆ ಬಂದಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News