ಬೆಲೆ ಇಳಿಕೆಯಾಯಿತು ಎಂದು ಪೆಟ್ರೋಲ್ ರಸ್ತೆಗೆ ಚೆಲ್ಲಿದರೆ....?
‘ಭಕ್ತ’ ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದ. ಬಹುಶಃ ಪೆಟ್ರೋಲ್ ಬೆಲೆ ಏರಿಕೆ ಭಕ್ತರನ್ನು ಕೊನೆಗೂ ರೊಚ್ಚಿಗೆಬ್ಬಿಸಿರಬೇಕು ಎಂದುಕೊಂಡ ಕಾಸಿ, ಕಚೇರಿಯಿಂದ ನೇರವಾಗಿ ಭಕ್ತರಿದ್ದಲ್ಲಿಗೆ ಓಡಿದ. ‘‘ಪೆಟ್ರೋಲ್ ಬೆಲೆಯೇರಿಕೆಯಿಂದ ನೀವು ಸಿಟ್ಟಾಗಿರೋ ಹಾಗಿದೆ...’’ ಕಾಸಿ ಕೇಳಿದ್ದೇ ತಡ, ಭಕ್ತ ಒಮ್ಮೆಲೆ ಕಾಸಿಯ ವಿರುದ್ಧ ಹಾರಿ ಬಿದ್ದ ‘‘ಏನ್ರೀ...ಇಡೀ ದೇಶದ್ದೇ ಒಂದು ಸಮಸ್ಯೆಯಾದರೆ ನಿಮ್ಮದು ಇನ್ನೊಂದು ಸಮಸ್ಯೆ?’’ ಗರ್ಜಿಸಿದ.
ಕಾಸಿ ಗಡಗಡನೆ ನಡುಗತ್ತಾ ‘‘ಇಡೀ ದೇಶದ ಸಮಸ್ಯೆ ಯಾವುದಿರಬಹುದು?’’ ಎಂದು ತನ್ನೊಳಗೆ ಯೋಚಿಸತೊಡಗಿದ.
‘‘ಸಾರ್ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ...ಆ ಸಮಸ್ಯೆ ಇರಬಹುದೇ?’’ ಕಾಸಿ ಮತ್ತೊಮ್ಮೆ ಕೇಳಿದ.
‘‘ರೀ...ಪತ್ರಕರ್ತರೇನ್ರೀ ನೀವು? ಮೋದಿಯನ್ನು ಕೊಲ್ಲಲು ಸಂಚು ರೂಪಿಸಲಾಗಿದೆ....ಇಡೀ ದೇಶದ ಸಮಸ್ಯೆಯಿದು. ಮುಂದಿನ ಚುನಾವಣೆಯವರೆಗೆ ಜನರು ಬೇರಾವ ಸಮಸ್ಯೆಯನ್ನು ಚರ್ಚಿಸಬಾರದು...ಮೋದಿಯ ಪ್ರಾಣ ಉಳಿಸುವುದು ಹೇಗೆ ಎನ್ನುವುದಷ್ಟೇ ಇಡೀ ದೇಶದ ಚಿಂತೆಯಾಗಬೇಕು...?’’ ಭಕ್ತ ಜೋರಾಗಿ ಅರಚಿದ.
‘‘ಸಾರ್...ಹಾಗಾದರೆ ಇನ್ನು ಮುಂದೆ ಬೆಲೆಯೇರಿಕೆಯ ಬಗ್ಗೆ.....’’ ಎಂದು ಕೇಳುತ್ತಿದ್ದಂತೆಯೇ ಭಕ್ತ ಅವನ ಬಾಯಿ ಮುಚ್ಚಿಸಿದ ‘‘ಬೆಲೆಯೇರಿಕೆಯ ಬಗ್ಗೆ ಮಾತನಾಡಿದರೆ ನೀವು ತಕ್ಕ ಬೆಲೆ ತೆರಬೇಕಾಗುತ್ತದೆ...ಸದ್ಯಕ್ಕೆ ನಾವೆಲ್ಲರೂ ಮುಂದಿನ ಚುನಾವಣೆಯವರೆಗೆ ಪ್ರಧಾನಿ ಮೋದಿಯವರ ಪ್ರಾಣ ಉಳಿಸುವ ಕುರಿತಂತೆ ಯೋಚಿಸಬೇಕು. ಈ ಮೂಲಕ ನಾವು ನಮ್ಮ ದೇಶಭಕ್ತಿಯನ್ನು ಪ್ರದರ್ಶಿಸಬೇಕು....ಇದು ದೇಶದ ಅಳಿವು ಉಳಿವಿನ ಪ್ರಶ್ನೆ....’’ ಭಕ್ತ ಬೋಧಿಸಿದ.
‘‘ಸಾರ್...ಅದಕ್ಕಾಗಿ ನಾವು ಏನು ಮಾಡಬೇಕು?’’ ಕಾಸಿ ಅರ್ಥವಾಗದೆ ಕೇಳಿದ.
‘‘ಇನ್ನು ಮುಂದೆ ಜಿಡಿಪಿ, ಬೆಲೆಯೇರಿಕೆ, ನಿರುದ್ಯೋಗ ಇತ್ಯಾದಿಗಳ ಬಗ್ಗೆ ಯಾರೂ ಮಾತನಾಡುವ ಹಾಗೆ ಇಲ್ಲ....’’ ಭಕ್ತ ಆದೇಶಿಸಿದ.
‘‘ಒಂದು ವೇಳೆ ಮಾತನಾಡಿದರೆ....’’ ಕಾಸಿ ಮೆಲ್ಲಗೆ ಕೇಳಿದ.
‘‘ಮಾತನಾಡಿದರೆ ಅವರೆಲ್ಲರನ್ನೂ ನಕ್ಸಲರ ಸಾಲಿಗೆ ಸೇರಿಸಲಾಗುವುದು. ಮೋದಿಯ ಜೀವ ಮುಖ್ಯವೋ, ಉದ್ಯೋಗ ಮುಖ್ಯವೋ....ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು...’’ ಭಕ್ತ ಸ್ಪಷ್ಟವಾಗಿ ಹೇಳಿದ.
‘‘ಮೋದಿಯ ಪ್ರಾಣ ಉಳಿಸಲು ನಾವು ಏನು ಮಾಡಬೇಕು?’’ ಕಾಸಿ ಈಗ ಪರಿಹಾರ ಕೇಳಿದ.
‘‘ಮುಖ್ಯವಾಗಿ ಬೀದಿಗೆ ಇಳಿದು ಯಾವುದೇ ಪ್ರತಿಭಟನೆ ಮಾಡಬಾರದು....ಯಾಕೆಂದರೆ ಈ ಸಂದರ್ಭವನ್ನು ನಕ್ಸಲರು, ಉಗ್ರರು ಮೋದಿಯ ಕೊಲೆಗೆ ಬಳಸುವ ಸಾಧ್ಯತೆಯಿದೆ...ಇದು ಪರೋಕ್ಷವಾಗಿ ಪ್ರಧಾನಿಯವರ ಕೊಲೆಗೆ ಮಾಡುವ ಪ್ರಚೋದನೆ ಎಂದು ತಿಳಿದುಕೊಳ್ಳಬೇಕು...’’
‘‘ಹಾಗಾದರೆ ಪ್ರತಿಭಟನೆ ಮಾಡಬೇಕಾದರೆ ನಾವು ಏನು ಮಾಡಬೇಕು...?’’ ಕಾಸಿ ಮತ್ತೆ ಪ್ರಶ್ನಿಸಿದ. ‘‘ಮನೆಯೊಳಗೆ ಕೂತು ಉಪವಾಸ ಹಿಡಿಯಬಹುದು. ಆ ಮೂಲಕ ಪ್ರತಿಭಟನೆ ಮಾಡಿ. ಇದರಿಂದ ಗ್ಯಾಸ್ ಉಳಿತಾಯವಾಗುತ್ತದೆ. ಜೊತೆಗೆ ಪೆಟ್ರೋಲ್ ಕೂಡ ಉಳಿತಾಯವಾಗುತ್ತದೆ....ಹಾಗೆಯೇ ಪ್ರತಿಭಟನಾರ್ಥ ನಿಮ್ಮ ಸಬ್ಸಿಡಿ ಗ್ಯಾಸ್ ಸಿಲಿಂಡರ್‌ನ್ನು ಕೈ ಬಿಡಬಹುದು’’ ಭಕ್ತ ಉತ್ತರಿಸಿದ.
‘‘ಅದಿರಲಿ ಸಾರ್...ಮೋದಿಯನ್ನು ಕೊಲ್ಲುವ ಸಂಚು ಯಾಕೆ ನಡೆಯುತ್ತಿದೆ?’’ ಕಾಸಿ ಈಗ ನಿಜವಾದ ವಿಷಯಕ್ಕೆ ಬಂದ.
‘‘ದೇಶ ಅಭಿವೃದ್ಧಿಯಾಗಿದೆ. ವಿಶ್ವದಲ್ಲೇ ನಂಬರ್ ವನ್ ಆಗಿದೆ. ಅದಕ್ಕೆ ಉಗ್ರರಿಗೆ ಹೊಟ್ಟೆಯುರಿ. ಮೋದಿಯನ್ನು ಹೀಗೆ ಬಿಟ್ಟರೆ ಈ ದೇಶ ಅಮೆರಿಕಕ್ಕಿಂತ ಮುಂದೆ ಹೋಗಿ, ಡಾಲರ್ ಕೆಳಗೆ ಬಿದ್ದು ಅಪ್ಪಚ್ಚಿಯಾಗಿ, ಚೀನಾ ನಾಶವಾಗಿ ಅನಾಹುತಗಳಾದೀತು ಎಂದು ಭಯದಿಂದ ಅವರು ಮೋದಿಯವರನ್ನು ಕೊಲ್ಲಲು ಸಂಚು ಹೂಡಿದ್ದಾರೆ...’’ ಭಕ್ತ ಸಂಚಿನ ಕಾರಣಗಳನ್ನು ವಿವರವಾಗಿ ತಿಳಿಸಿದ.
‘‘ಆದರೆ ಬೆಲೆಯೇರಿಕೆ....?’’ ಮತ್ತೆ ಅದೇ ಹಳೇ ರಾಗ ತೆಗೆದ ಕಾಸಿ.
‘‘ನೋಡ್ರೀ...ಮಾತು ಮಾತಿಗೆ ಬೆಲೆಯೇರಿಕೆ ಎಂದು ಹೇಳುತ್ತೀರಿ....ಆದರೆ ಬಿಜೆಪಿ ಬರುವ ಮೊದಲು ಇಂಟರ್ನೆಟ್‌ಗೆ ನೀವು ಸುರಿಯುತ್ತಿದ್ದ ಹಣ ಮತ್ತು ಈಗಿನ ಹಣವನ್ನು ಹೋಲಿಸಿ ನೋಡಿ....ಮೊಬೈಲ್‌ಗೆ ಸುರಿಯುವ ಹಣವನ್ನು ಪೆಟ್ರೋಲ್‌ಗೆ ಸುರಿದರಾಯಿತು....’’ ಭಕ್ತ ಪರಿಹಾರ ನೀಡಿದ.
‘‘ಆದರೂ...’’
‘‘ಆದರೂ ಇಲ್ಲ...ಹೋದರೂ ಇಲ್ಲ. ನೋಡ್ರೀ...ನೋಡ್ರಿ ಟೊಮೆಟೋ ಬೆಲೆ ಕಡಿಮೆಯಾಗಿದೆ. ಯಾರು ಕಡಿಮೆ ಮಾಡಿದ್ದು? ಮೋದಿಯವರು. ಇದೀಗ ಬೆಲೆ ಕಡಿಮೆಯಾಗಿದ್ದಕ್ಕೂ ರೈತರು ಮೋದಿಯನ್ನು ದೂರುತ್ತಿದ್ದಾರೆ. ಅವರೆಲ್ಲ ಟೊಮೆಟೋಗಳನ್ನು ಸರಿಯಾದ ಬೆಲೆಯಿಲ್ಲ ಎಂದು ರಸ್ತೆಗೆ ಚೆಲ್ಲುತ್ತಿದ್ದಾರೆ ಗೊತ್ತಾ?’’ ‘‘ಆದರೆ ರೈತರು ಬೆಳೆದ ಟೊಮೆಟೋಗೆ ಸರಿಯಾದ ಬೆಲೆ ಸಿಗದೇ ಇದ್ದರೆ ಅವರೇನು ಮಾಡಬೇಕು? ಅದಕ್ಕೆ ಪ್ರತಿಭಟನೆಯಾಗಿ ಅವರು ಟೊಮೆಟೋಗಳನ್ನು ರಸ್ತೆಗೆ ಚೆಲ್ಲುತ್ತಿದ್ದಾರೆ...’’ ಕಾಸಿ ಉತ್ತರಿಸಿದ.
‘‘ನೋಡ್ರಿ...ಮೋದಿಯ ಕಾಲದಲ್ಲಿ ಟೊಮೆಟೋ ಉತ್ಪಾದನೆ ಜಾಸ್ತಿಯಾಗಿ ರಸ್ತೆಗೆ ಬಿದ್ದರೆ ಅದು ಸರಕಾರದ ಸಾಧನೆಯಲ್ಲವೇ? ನೀವು ಅದನ್ನು ಕೊಂಡು ಹೋಗಿ ಸಾರು ಮಾಡಿ....ಟೊಮೆಟೋ ಹಣದಲ್ಲಿ ಪೆಟ್ರೋಲ್ ಕೊಂಡುಕೊಳ್ಳಿ....’’
‘‘ಸಾರ್...ರೈತರು ಬದುಕುವುದು ಬೇಡವೇ?’’ ಕಾಸಿ ಅರ್ಥವಾಗದೇ ಕೇಳಿದ. ‘‘ನಿಮ್ಮದು ಇದೇ ಆಯಿತು. ಬೆಲೆ ಕಡಿಮೆಯಾದರೆ ರೈತರಿಗೆ ಅನ್ಯಾಯವಾಯಿತು ಎಂದು ಹೇಳುತ್ತೀರಿ. ಬೆಲೆ ಏರಿಕೆಯಾದರೆ ಆಹಾರ ಪದಾರ್ಥಗಳಿಗೆ ಬೆಲೆಯೇರಿಕೆಯಾಯಿತು ಎಂದು ಹೇಳುತ್ತೀರಿ. ಬೆಲೆ ಕಡಿಮೆಯಾಯಿತು ಎಂದು ರೈತರು ಟೊಮೆಟೋ ಬೀದಿಗೆ ಚೆಲ್ಲುತ್ತಿದ್ದಾರೆ. ಹಾಗೆಯೇ ಪಾಪ, ಪೆಟ್ರೋಲ್ ಬೆಲೆ ಕಡಿಮೆಯಾಯಿತು ಎಂದು ರಿಲಯನ್ಸ್‌ನವರು ಪೆಟ್ರೋಲನ್ನು ಬೀದಿಗೆ ಚೆಲ್ಲಿದರೆ ದೇಶದ ಕತೆ ಏನಾಗಬಹುದು?’’ ಭಕ್ತ ತನ್ನ ತರ್ಕ ಮುಂದಿಟ್ಟ.
‘‘ಏನಾಗಬಹುದು ಸಾರ್?’’
‘‘ನೋಡ್ರೀ...ನಾಳೆ ರಿಲಯನ್ಸ್‌ನವರು ನಮಗೆ ಸಿಗುವ ಬೆಲೆ ಕಡಿಮೆಯಾಯಿತು ಎಂದು ಟೊಮೆಟೋ ಚೆಲ್ಲಿದ ಹಾಗೆ ಪೆಟ್ರೋಲನ್ನು ಚೆಲ್ಲಿದರೆ ನಕ್ಸಲರು ಅದಕ್ಕೆ ಬೆಂಕಿಕೊಡಲು ಕಾಯುತ್ತಾ ಇದ್ದಾರೆ. ಇಡೀ ದೇಶ ಭುಗ್ಗೆಂದು ಒಂದೇ ದಿನದಲ್ಲಿ ಉರಿದು ಹೋದೀತು. ಆದುದರಿಂದ ಮೋದಿ ಪೆಟ್ರೋಲ್ ಬೆಲೆ ಇಳಿಕೆಯಾಗಲು ಬಿಡುತ್ತಿಲ್ಲ...’’
ಕಾಸಿಗೆ ನಿಜವೆನಿಸಿತು. ಭಕ್ತ ಈಗ ಉತ್ಸಾಹದಿಂದ ಚೀರಿದ ‘‘ಪೆಟ್ರೋಲ್ ಬೆಲೆಯೇರಿಕೆ ಮಾಡುವ ಮೂಲಕ ದೇಶವನ್ನು ರಕ್ಷಿಸುತ್ತಿರುವ ಮೋದಿಗೆ ಜೈ....ಮೋದಿ ...ಮೋದಿ ಮೋದಿ...’’
ಕಾಸಿ ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿದ.