ದಿಲ್ಲಿ ದರ್ಬಾರ್

Update: 2018-06-09 18:43 GMT

ರಾಜನಾಥ್ ಕನಸು ಕಾಣುತ್ತಿದ್ದಾರೆಯೇ?
ಉಪಚುನಾವಣೆಗಳ ಫಲಿತಾಂಶದ ಬಳಿಕ ಬಿಜೆಪಿಯ ನೂತನ ಕೇಂದ್ರ ಕಾರ್ಯಾಲಯವಿರುವ 6 ದೀನದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಈಗ ಮಂಕು ಕವಿದ ವಾತಾವರಣವಿದೆ. ಆದರೆ ಉಪಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಬಳಿ ವಿವರಣೆಯಿದೆ. ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿರುವಾಗಲೇ, ಉಪಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣವನ್ನು ವಿವರಿಸುವ ಸಿಂಗ್ ‘‘ಲಂಬಿ ಚಲಾಂಗ್ ಲಗಾನೆ ಕೆ ಲಿಯೆ ಥೋಡಾ ಪೀಚೆ ಜಾನಾ ಪಡ್ತಾ ಹೈ (ದೊಡ್ಡ ಜಿಗಿತವನ್ನು ಮಾಡಲು ಒಂದು ಹೆಜ್ಜೆ ಹಿಂದೆಯಿಡಲೇ ಬೇಕಾಗುತ್ತದೆ) ಎಂದು ಹೇಳುತ್ತಾರೆ.

ಸಿಂಗ್ ಅವರ ಈ ಅನಿಸಿಕೆಯಲ್ಲಿ ಒಳಮರ್ಮವಿದೆಯೆಂಬ ಭಾವನೆ ಈಗ ಬಿಜೆಪಿ ವಲಯಗಳಲ್ಲಿ ಉಂಟಾಗಿದೆ. ಪ್ರಧಾನಿ ಹುದ್ದೆಗೆ ತನ್ನ ಆಕಾಂಕ್ಷೆಯನ್ನು ಧ್ವನಿಸಲು ಸಿಂಗ್ ಅನುಸರಿಸಿದ ವಿಧಾನ ಇದೆಂದು ಕೆಲವರು ಭಾವಿಸಿದ್ದಾರೆ. ಠಾಕೂರ್ ಸಮುದಾಯಕ್ಕೆ ಸೇರಿದ ಈ ನಾಯಕ ಗೃಹಸಚಿವನಾಗಿರಬಹುದು ಹಾಗೂ ಹಾಲಿ ಸರಕಾರದಲ್ಲಿ ನಂ.2 ಎನಿಸಿರಬಹುದು. ಆದರೆ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವಾಗ ಅವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿಲ್ಲವೆಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ 2019ರ ಚುನಾವಣೆಯಲ್ಲಿ ಒಂದು ಒಳ್ಳೆಯ ಅವಕಾಶದ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಸಿಂಗ್ ಅವರ ಯೋಜನೆಯ ಪ್ರಕಾರ, ಒಂದು ವೇಳೆ ಬಹುಮತವಿಲ್ಲದೆ ಬಿಜೆಪಿಯು ಸರಕಾರ ರಚನೆಗೆ ಮುಂದಾದಲ್ಲಿ, ಸಣ್ಣಪುಟ್ಟ ಪಕ್ಷಗಳ ಮುಖಂಡರು ರಾಜನಾಥ್ ಅವರನ್ನು ಮೈತ್ರಿಕೂಟದ ನಾಯಕನನ್ನಾಗಿ ಆಯ್ಕೆ ಮಾಡಬಹುದೇ ಹೊರತು ಮೋದಿಯವರನ್ನಲ್ಲ. ಇಂತಹ ಪಕ್ಷಗಳಲ್ಲಿ ಹೆಚ್ಚಿನವುಗಳಿಗೆ ವಾಜಪೇಯಿ ಯುಗದಲ್ಲಿ ಎನ್‌ಡಿಎ ಸರಕಾರದಲ್ಲಿ ಕೆಲಸಮಾಡಿದ ಅನುಭವವಿದೆ. ಸಿಂಗ್ ಅವರು ಬೃಹತ್ ಜಿಗಿತದ ಬಗ್ಗೆ ತಾವಾಗಿಯೇ ಮಾತನಾಡಲು ಇದು ಕಾರಣವಾಗಿರಬಹುದು. ಆದರೆ ಅವರ ಪಕ್ಷ ಮಾತ್ರ ಆ ಬಗ್ಗೆ ಚಕಾರವೆತ್ತುತ್ತಿಲ್ಲ.


ಪ್ರಣಬ್ ಮತ್ತೆ ಸಕ್ರಿಯ ರಾಜಕಾರಣಕ್ಕೆ?
 ದೀರ್ಘಾವಧಿಯ ಕಾಂಗ್ರೆಸ್ ಸದಸ್ಯ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗುರುವಾರ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಆದರೆ ಈ ಬಗ್ಗೆ ಹಲವಾರು ಅಪಸ್ವರಗಳು ಕೇಳಿಬಂದಿದ್ದು, ಕಾರ್ಯಕ್ರಮಕ್ಕೆ ಭಾಷಣಕಾರನಾಗಿ ಪ್ರಣಬ್ ಅವರನ್ನು ಆರೆಸ್ಸೆಸ್ ಆಯ್ಕೆ ಮಾಡಿರುವುದು ಹಾಗೂ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಪ್ರಣಬ್ ಆರೆಸ್ಸೆಸ್‌ನ ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಕಾಂಗ್ರೆಸ್‌ನ ಒಂದು ಬಣವು ಆಕ್ರೋಶಗೊಂಡಿದೆ.

ಇನ್ನೋರ್ವ ಕಾಂಗ್ರೆಸಿಗನನ್ನು ಒಲೈಸಿಕೊಳ್ಳುವ ಆರೆಸ್ಸೆಸ್‌ನ ತಂತ್ರಗಾರಿಕೆ ಇದಾಗಿದೆಯೆಂದು ಹಲವಾರು ನಾಯಕರು ಹೇಳಿದ್ದಾರೆ. ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್ ಅವರ ಪಾಲ್ಗೊಳ್ಳುವಿಕೆಯಿಂದ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯೊಳಗಿನ ಕೆಲವು ವರ್ಗಗಳು ಕೂಡಾ ಆತಂಕಗೊಂಡಿವೆ. ‘ಮೆಸರ್ಸ್ ಮೋದಿ-ಶಾ’ರ ಕೈಕೆಳಗೆ ಬಿಜೆಪಿ ಕಾರ್ಯನಿರ್ವಹಿಸುತ್ತಿರುವ ವಿಧಾನದ ಬಗ್ಗೆ ಆರೆಸ್ಸೆಸ್ ಸಂಪೂರ್ಣವಾಗಿ ಸಂತಸಗೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಆಡಂಬರ, ಶೋಮ್ಯಾನ್‌ಗಿರಿ ಹಾಗೂ ವ್ಯಕ್ತಿಪೂಜೆಗೆ ಉತ್ತೇಜನ ನೀಡುತ್ತಿರುವುದು ನಾಗಪುರದ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾದಲ್ಲಿ, ಪ್ರಣಬ್ ಮುಖರ್ಜಿಯವರು ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಆರೆಸ್ಸೆಸ್ ಅವರಿಗೆ ಹತ್ತಿರವಾಗಲು ಇಚ್ಛಿಸುತ್ತಿದೆಯೆನ್ನಲಾಗಿದೆ.


ಉಪೇಂದ್ರ ಖುಷ್ ನಹೀ!
  ತಿಂದದ್ದೇ ಹೆಚ್ಚು ಮತ್ತು ಮಾತನಾಡಿದ್ದು ಕಡಿಮೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ಗುರುವಾರ ನಡೆದ ಎನ್‌ಡಿಎ ಒಕ್ಕೂಟದ ಭೋಜನಕೂಟದ ಕತೆಯಿದು. ಆದರೆ ತನಗೆ ಪೂರ್ವಯೋಜಿತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದೆಯೆಂದು ನೆಪ ಹೇಳಿ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾದ ಆರ್‌ಎಲ್‌ಎಸ್‌ಪಿಯ ನಾಯಕ ಉಪೇಂದ್ರ ಕುಶ್ವಾಹ ಭೋಜನಕೂಟದಿಂದ ದೂರವುಳಿದಿದ್ದುದು ಗೊಂದಲಕ್ಕೆ ಕಾರಣವಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್‌ಕುಮಾರ್ ಅವರನ್ನು ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಮುಖವಾಗಿ ಬಿಂಬಿಸಲು ಬಿಜೆಪಿ ಸಮ್ಮತಿಸಿರುವುದಕ್ಕಾಗಿ ಕುಶ್ವಾಹರಿಗೆ ಅಸಮಾಧಾನವಾಗಿದೆ. ಆದ್ದರಿಂದಲೇ ಅವರು ಭೋಜನಕೂಟಕ್ಕೆ ಗೈರು ಹಾಜರಾಗಿದ್ದರೆಂಬ ಸಂದೇಹಗಳು ಸೃಷ್ಟಿಯಾಗಿವೆ. ಎನ್‌ಡಿಎಗೆ ನಿತೀಶ್ ನೇತೃತ್ವದ ಜೆಡಿಯು ಪಕ್ಷದ ಆಗಮನದ ಬಳಿಕ ಮೈತ್ರಿಕೂಟದಲ್ಲಿ ಕುಶ್ವಾಹ ಅವರ ಭವಿಷ್ಯ ಮಂಕಾಗಿದೆ. ಎನ್‌ಡಿಎಗೆ ಮತಗಳನ್ನು ತಂದುಕೊಡುವಲ್ಲಿ ಕುಶ್ವಾಹ ವಿಫಲರಾಗಿದ್ದಾರೆಂಬ ಭಾವನೆಯುಂಟಾಗಿರುವ ಹಿನ್ನೆಲೆಯಲ್ಲಿ ಎನ್‌ಡಿಎಯಲ್ಲಿ ಅವರ ಸ್ಥಾನಮಾನವು ಕಂಪಿಸತೊಡಗಿದೆ. ‘‘ಕುಶ್ವಾಹ ಅವರು ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಕ್ಕಾಗಿ ಸೂಕ್ತ ಸಮಯವನ್ನು ಕಾಯುತ್ತಿದ್ದಾರೆ’’ ಎಂದು ಆರ್‌ಎಲ್‌ಎಸ್‌ಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ ಮತ್ತು ತಮ್ಮ ಪಕ್ಷವು ಭವಿಷ್ಯದಲ್ಲಿ ಆರ್‌ಜೆಡಿ ಜೊತೆ ಮೈತ್ರಿ ಬೆಳೆಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದ್ದಾರೆ. ನಿತೀಶ್ ಹಾಗೂ ಕುಶ್ವಾಹ ಒಂದೇ ಸಮುದಾಯದ ಮತಗಳನ್ನು ಬಾಚಲು ಸೆಣಸಾಡುತ್ತಿದ್ದಾರೆ. ಇದರಿಂದಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ನಿತೀಶ್ ಅವರ ಪುನರಾಗಮನವು ಕುಶ್ವಾಹರನ್ನು ಆತಂಕಕ್ಕೀಡು ಮಾಡಿದೆಯೆನ್ನಲಾಗಿದೆ. ಆದರೆ ಒಂದಂತೂ ಸ್ಪಷ್ಟವಾಗಿರುವುದು ಏನೆಂದರೆ ಎನ್‌ಡಿಎನಲ್ಲಿ ತನ್ನ ಸ್ಥಾನಮಾನಕ್ಕೆ ಕುಂದುಂಟಾದಲ್ಲಿ ಕುಶ್ವಾಹ ಆರ್‌ಜೆಡಿ ಜೊತೆ ಕೈ ಜೋಡಿಸಿ, ಯುಪಿಎ ಮೈತ್ರಿಕೂಟದಲ್ಲಿ ಚುನಾವಣೆಯನ್ನು ಎದುರಿಸಲಿದ್ದಾರೆ. ಹಾಗೇನಾದರೂ ಆದಲ್ಲಿ, ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಇನ್ನೊಂದು ಪಕ್ಷ ಹೊರಹೋದಂತಾಗಲಿದೆ.


ಗಾಂಧಿನಗರ ಹಾಗೂ ಅಡ್ವಾಣಿ
 ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ತನ್ನ ಪುತ್ರಿ ಸ್ಪರ್ಧಿಸಬೇಕೆಂದು ಎಲ್.ಕೆ. ಅಡ್ವಾಣಿ ಬಯಸುತ್ತಿದ್ದಾರೆ. ಆದರೆ ಅವರ ಆಕಾಂಕ್ಷೆಗೆ ಶಾ ಮತ್ತು ಮೋದಿ ಅಡ್ಡಗಾಲು ಹಾಕುತ್ತಿರುವಂತೆ ಕಾಣುತ್ತಿದೆ. ತೀರಾ ಇತ್ತೀಚೆಗೆ ಶಾ ಅವರು ಅಡ್ವಾಣಿಯನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಶಾ ಅವರು, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯಿರುವ ಅಭ್ಯರ್ಥಿಗಳನ್ನು ಮಾತ್ರವೇ ಕಣಕ್ಕಿಳಿಸಲಾಗುವುದು ಎಂದಿದ್ದರು. ಸ್ವತಃ ಅಡ್ವಾಣಿಯವರೇ ಚುನಾವಣೆಗೆ ಸ್ಪರ್ಧಿಸಲು ಯೋಗ್ಯ ಅಭ್ಯರ್ಥಿ ಎಂದು ಹೇಳಿದ್ದರು. ರಾಜಕಾರಣದಿಂದ ನಿವೃತ್ತಿಗೊಂಡು, ಹೊರಗಿನಿಂದ ಪಕ್ಷವನ್ನು ಗಮನಿಸಲು ಬಯಸುತ್ತಿರುವ ಅಡ್ವಾಣಿಯವರು ಈ ಪ್ರಸ್ತಾಪದಿಂದ ಕಸಿವಿಸಿಕೊಂಡಿರುವಂತೆ ಕಂಡುಬರುತ್ತದೆ. ಆದರೆ ಅಡ್ವಾಣಿಯವರಿಗೆ ಸಂತಸವಾಗಿದೆಯೇ ಅಥವಾ ಬೇಸರವಾಗಿದೆಯೇ ಎಂಬ ಬಗ್ಗೆ ಮೋದಿಯಾಗಲಿ ಅಥವಾ ಶಾ ಅವರಾಗಲಿ ತಲೆಕೆಡಿಸಿಕೊಂಡಿಲ್ಲ. ಒಂದು ವೇಳೆ ತನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟಲ್ಲಿ ತನ್ನ ಮಗಳಿಗೆ ಚುನಾವಣೆಗೆ ಟಿಕೆಟ್ ದೊರೆಯಬಹುದೆಂಬ ಬಗ್ಗೆ ಅಡ್ವಾಣಿಯವರಿಗೆ ಖಾತರಿಯಿಲ್ಲ ಮತ್ತು ಇನ್ನೊಂದು ಆ್ಯಂಗಲ್‌ನಲ್ಲಿ ಜನತೆ ಚರ್ಚಿಸುತ್ತಿರುವುದೇನೆಂದರೆ, ಅಡ್ವಾಣಿಯವರಿಗೆ ಟಿಕೆಟ್ ನೀಡದೆ ಇದ್ದಲ್ಲಿ ಪಕ್ಷದಲ್ಲಿನ ಹಿರಿಯ ತಲೆಗಳು ಅಸಮಾಧಾನಗೊಳ್ಳಲಿವೆ ಹಾಗೂ ಅಡ್ವಾಣಿ ಬಗ್ಗೆ ಸಹಾನುಭೂತಿ ತಾಳುತ್ತವೆ. ಹೀಗಾಗುವುದನ್ನು ಮೋದಿ ಬಯಸುವುದಿಲ್ಲವೆಂದು ಅವರ ಅಭಿಪ್ರಾಯವಾಗಿದೆ.


ಪವಾರ್ ಬಗ್ಗೆ ಮಹಾ ಕಾಂಗ್ರೆಸ್ ಮುಖಂಡರಲ್ಲಿ ಅತೃಪ್ತಿ
ಗೋಂಡಿಯಾ-ಭಂಡಾರ ಉಪಚುನಾವಣೆಯಲ್ಲಿ ಶರದ್‌ ಪವಾರ್ ಅವರ ಎನ್‌ಸಿಪಿಯು ಸಾಕಷ್ಟು ಶ್ರಮ ವಹಿಸಲಿಲ್ಲ ಹಾಗೂ ಬಿಜೆಪಿಯ ಬಂಡುಕೋರ ನಾಯಕ ನಾನಾ ಪಟೋಳೆ ಅವರ ಬಿರುಸಿನ ಪ್ರಚಾರದ ಕಾರಣದಿಂದಾಗಿಯೇ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆಂಬುದು ಚುನಾವಣಾ ಫಲಿತಾಂಶದ ಬಳಿಕ ಮಹಾರಾಷ್ಟ್ರದಲ್ಲಿ ಸ್ಪಷ್ಟವಾಗಿತ್ತು. ಈ ಪ್ರಾಂತದಲ್ಲಿ ತನ್ನ ನಾಯಕ ಪ್ರಫುಲ್ ಪಟೇಲ್ ಪ್ರಭಾವಿಯಾಗಿರುವುದರಿಂದ, ತನಗೆ ಗೋಂಡಿಯಾ-ಭಂಡಾರ ಉಪಚುನಾವಣೆಯಲ್ಲಿ ಸೀಟು ಬಿಟ್ಟುಕೊಡಬೇಕೆಂಬ ಎನ್‌ಸಿಪಿಯ ಒತ್ತಡಕ್ಕೆ ರಾಹುಲ್‌ಗಾಂಧಿ ಮಣಿದಿರುವುದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಿಗೆ ಅಸಮಾಧಾನ ತಂದಿದೆ. ಗೋಡಿಯಾ-ಭಂಡಾರ ಉಪಚುನಾವಣೆಯಲ್ಲಿ ಎನ್‌ಸಿಪಿಯು ಮಧುಕರ್ ಕಾಕಡೆಯವರನ್ನು ಕಣಕ್ಕಿಳಿಸಿತ್ತು. ಪಟೋಲೆ ಕಾಂಗ್ರೆಸ್ ಸೇರಿದ ಬಳಿಕ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸೀಟು ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಬಿಜೆಪಿಯನ್ನು ಪರಾಭವಗೊಳಿಸಲು ಪಟೋಲೆ ಒಬ್ಬಂಟಿಯಾಗಿಯೇ ಶ್ರಮಿಸಿದರು. ಈ ವಿಷಯವನ್ನು ತಮ್ಮ ಬಾಸ್ ರಾಹುಲ್‌ರೆಡೆಗೆ ಕೊಂಡೊಯ್ಯಲು ಹಾಗೂ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪವಾರ್ ಜೊತೆ ಬಿಗಿಯಾಗಿ ವರ್ತಿಸುವಂತೆ ಅವರ ಮನವೊಲಿಸಲು ಕಾಂಗ್ರೆಸ್ ನಾಯಕರು ಬಯಸಿದ್ದಾರೆ.ಆದರೆ ಲೋಕಸಭಾ ಚುನಾವಣೆಯಲ್ಲಿ ಪವಾರ್ ಪ್ರಮುಖ ಪಾತ್ರವಹಿಸಬೇಕಾಗಿದೆ. ಹೀಗಾಗಿ ಅವರನ್ನು ಖುಷಿಯಲ್ಲಿಡಲು ರಾಹುಲ್ ಇಚ್ಛಿಸಿದ್ದಾರೆ. ಆದರೆ ಇದರಿಂದ ಮಹಾರಾಷ್ಟ್ರದ ಹಲವರು ಕಾಂಗ್ರೆಸಿಗರಿಗೆ ಸಂತಸವಾಗುವ ಸಾಧ್ಯತೆಯಂತೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75