ಈ ಬಂಡೆಯ ಒಳಗೂ ಅಚ್ಛೇ ದಿನ್ ಇದೆ....!
ಭಕ್ತ ಬಂಡೆಯ ಮೇಲೆ ಅಂಗಾತ ಮಲಗಿ, ಒಂದು ಕಾಲು ಮೇಲೆತ್ತಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿ ಅತ್ತ ಧಾವಿಸಿದ. ‘‘ಸಾರ್ ಏನಾಯಿತು...?’’ ಕೇಳಿದ.
‘‘ನೋಡ್ರಿ....ಅಚ್ಛೇದಿನ್ ಕಾಣ್ತಾ ಇಲ್ಲ ಕಾಣ್ತಾ ಇಲ್ಲ ಎಂದು ಕೂಗ್ತಾ ಇದ್ರಿ....ಈ ಆ್ಯಂಗಲ್‌ನಲ್ಲಿ ನೋಡಿದ್ರೆ ಅಚ್ಛೆ ದಿನ್ ಕಾಣುತ್ತೆ....ನೀವು ಪ್ರಯತ್ನ ಮಾಡಿ....’’ ಮಲಗಿದ್ದಲ್ಲೇ ಭಕ್ತ ಹೇಳಿದ.
‘‘ಬಂಡೆಯ ಮೇಲೆ ಅಂಗಾತ ಮಲಗಿ ಒಂದು ಕಾಲು ಮೇಲೆತ್ತಿ ನೋಡಿದರೆ ಅಚ್ಛೇ ದಿನ್ ಕಾಣುತ್ತಾ...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ನೋಡ್ರಿ...ಮೋದಿಯವರು ಈಗಾಗಲೇ ಇದನ್ನು ಪ್ರಯೋಗ ಮಾಡಿ ನೋಡಿದ್ದಾರೆ. ಅವರಿಗೆ ಅಚ್ಛೇ ದಿನ್ ಕಂಡಿದೆ. ನೀವು ಪ್ರಯತ್ನ ಮಾಡಿ...’’ ಭಕ್ತ ಸಲಹೆ ನೀಡಿದ.
‘‘ಹಾಗಾದರೆ ನಿಮಗೆ ಅಚ್ಛೇ ದಿನ್ ಕಂಡಿತೇ?’’ ಕಾಸಿ ಕೇಳಿದ.
‘‘ಒಂದೇ ಸರ್ತಿ ಬಂಡೆಯ ಮೇಲೆ ಮಲಗಿ ಕೇಳಿದರೆ ಅದು ಕಾಣುವುದು ಹೇಗೆ? ಮೋದಿಯವರ ಹಾಗೆ ಹಿಮಾಲಯದಲ್ಲಿ ತಪಸ್ಸು ಮಾಡಬೇಕು. ಆ ಬಳಿಕ ಯೋಗ ಮಾಡಬೇಕು ಮತ್ತು ಹಿಂದಕ್ಕೆ, ಮುಂದಕ್ಕೆ ಓಡಿ ಅದನ್ನು ವೀಡಿಯೊ ಕ್ಲಿಪ್ ಮಾಡಿ ಫೇಸ್‌ಬುಕ್‌ಗೆ ಹಾಕಬೇಕು ಮತ್ತು ಇಂತಹ ಬಂಡೆಯ ಮೇಲೆ ಮಲಗಿ ಎರಡು ಕೈ ಮೇಲೆ, ಒಂದು ಕಾಲು ಕೆಳಗೆ ಮಾಡಿ ಆಕಾಶದ ಕಡೆಗೆ ನೋಡಬೇಕು...ಇದನ್ನು ಶ್ರದ್ಧೆ, ಭಕ್ತಿಯಿಂದ ಮಾಡಿದರೆ ಒಂದು ದಿನ ಅಚ್ಛೇದಿನ್ ಕಾಣುತ್ತದೆ. ಬುದ್ಧನಿಗೆ ಜ್ಞಾನೋದೋಯ ಆದ ಹಾಗೆ, ಈ ದೇಶದ ಎಲ್ಲರಿಗೂ ಅಚ್ಛೇದಿನ್ ದರ್ಶನ ಮಾಡಿಸುವುದು ನಮ್ಮ ಮೋದಿಯವರ ಏಕೈಕ ಗುರಿ’’ ಭಕ್ತ ಹೇಳಿದ.
‘‘ಹಾಗಾದರೆ ನಿಮಗೆ ಇನ್ನೂ ಅಚ್ಛೇದಿನ್ ಕಂಡಿಲ್ಲವೆ?’’ ಕಾಸಿ ನಿರಾಸೆಯಿಂದ ಕೇಳಿದ.
‘‘ನೋಡ್ರೀ...ಮೊದಲೇ ಹೇಳಿದ್ದೇನೆ, ಶ್ರದ್ಧೆ ಮುಖ್ಯ. ನಾನು ಒಂದು ಸಲ ಅಂಗಾತ ಮಲಗಿ ಒಂದು ಕಾಲು ಮೇಲೆತ್ತಿದಾಗ ಏನೋ ಸ್ವಲ್ಪ ಕಂಡಂತಾಯಿತು. ಇನ್ನೇನೂ ಪೂರ್ತಿ ಕಾಣಬೇಕು ಎನ್ನುವಾಗ ನೀವು ಬಂದ್ರಿ....’’ ಭಕ್ತ ಸಿಟ್ಟುಗೊಂಡು ಎರಡೂ ಕಾಲನ್ನು ಮೇಲೆ ಮಾಡಿ ಹೇಳಿದ.
‘‘ಸಾರ್...ಅಚ್ಛೇ ದಿನ್ ಹೇಗಿರುತ್ತದೆ...?’’ ಕಾಸಿ ಕೇಳಿದ.
‘‘ಬಾಹುಬಲಿ ಚಿತ್ರದಲ್ಲಿಯ ಮಹಿಷ್ಮತಿ ಸಾಮ್ರಾಜ್ಯದ ಹಾಗೆ....ನರೇಂದ್ರ ಮೋದಿಯವರು ಬಾಹುಬಲಿಯಂತೆ ಈ ದೇಶವನ್ನು ಮಹಿಷ್ಮತಿ ಮಾಡುತ್ತಾರೆ...ಇತಿಹಾಸ ಪುನರಾವರ್ತನೆಯಾಗುತ್ತದೆ...’’ ಭಕ್ತ ವಿವರಿಸಿದ.
‘‘ಸಾರ್...ಬಾಹುಬಲಿ ಇತಿಹಾಸ ಕತೆಯಲ್ಲ, ಅದು ಸಿನೆಮಾ ಕತೆ...ಬಾಹುಬಲಿ ಎಂಬ ರಾಜ ಇರಲೇ ಇಲ್ಲ...ಅದು ಕಟ್ಟುಕತೆ....’’ ಕಾಸಿ ಆತಂಕದಿಂದ ಹೇಳಿದ.
‘‘ನಿಮಗೆ ರಾಮ ಕಟ್ಟುಕತೆ. ಪುರಾಣ ಕತೆ. ಇದೀಗ ಬಾಹುಬಲಿಯಂತಹ ದೇಶಪ್ರೇಮಿ ರಾಜನ ಮೇಲೆ ನಿಮ್ಮ ಕಣ್ಣು ಬಿದ್ದಿದೆ....ಹಿಂದೂರಾಜರ ಕುರಿತಂತೆ ಹೀಗೆಲ್ಲ ಹೇಳಿದರೆ ಮನೆ ಮನೆಯಲ್ಲಿ ಕಟ್ಟಪ್ಪ ಹುಟ್ಟುತ್ತಾರೆ.....’’ ಭಕ್ತ ಮತ್ತೆ ಸಿಟ್ಟುಕೊಂಡ.
‘‘ಸಾರ್....ಅಚ್ಛೇದಿನ್‌ನ್ನು ಸರಿಯಾಗಿ ನಿಂತು ನೋಡುವುದಕ್ಕೆ ಯಾಕೆ ಆಗುವುದಿಲ್ಲ?’’ ಕಾಸಿ ಅರ್ಥವಾಗದೆ ಕೇಳಿದ.
‘‘ನೋಡ್ರೀ...ನರೇಂದ್ರ ಮೋದಿಯವರು ಮನಸ್ಸು ಮಾಡಿದರೆ ಅಚ್ಛೇದಿನ್‌ನ್ನು ಸಹಜವಾಗಿ ನೋಡುವ ರೀತಿಯಲ್ಲಿ ಮಾಡಿಕೊಡುತ್ತಿದ್ದರು. ಆದರೆ ಅವರಿಗೆ ದೇಶದ ಜನರ ಫಿಟ್ನೆಸ್ ಮುಖ್ಯ. ಆದುದರಿಂದ ಸುಲಭವಾಗಿ ನೋಡಲು ಸಾಧ್ಯವಾಗದ ಹಾಗೆ ಅಚ್ಛೇ ದಿನ್‌ನ್ನು ಸಿದ್ಧಪಡಿಸಿದ್ದಾರೆ. ನೋಡಿ...ಪ್ರತಿ ದಿನ ಬೆಳಗ್ಗೆ ಈ ಬಂಡೆಯ ಮೇಲೆ ಮಲಗಿ ಒಂದು ಕಾಲು, ಎರಡು ಕೈ ಮೇಲೆತ್ತಿ ನಾವು ಅಚ್ಛೇ ದಿನ್ ನೋಡುವುದಕ್ಕೆ ಪ್ರಯತ್ನ ಮಾಡುತ್ತೇವೆ. ಇದರಿಂದ ವ್ಯಾಯಾಮ ಮಾಡಿದ ಹಾಗೆಯೂ ಆಯಿತು. ಅಚ್ಛೇ ದಿನ್ ನೋಡಿದ ಹಾಗೆಯೂ ಆಯಿತು....’’
‘‘ಸಾರ್...ಹಿಂದೆಲ್ಲ ಬಟ್ಟೆ ಒಗೆಯುವುದಕ್ಕೆ ಮನೆಯಲ್ಲಿ ಕಲ್ಲು ಇಟ್ಟುಕೊಳ್ತಾ ಇದ್ದರು. ಇದೀಗ ನಾವು ಅಚ್ಛೇ ದಿನ್ ನೋಡುವುದಕ್ಕಾಗಿ ಬಂಡೆಕಲ್ಲನ್ನು ಇಡಬೇಕಲ್ಲ?’’ ಕಾಸಿ ಕೇಳಿದ.
‘‘ನೋಡ್ರೀ...ನಿಮಗೆ ಅಚ್ಛೇದಿನ್ ಬೇಕು...ಅದರೆ ಬಂಡೆಕಲ್ಲು ಬೇಡ ಎಂದು ಹೇಳಿದರೆ ಆಗುತ್ತದೆಯಾ? ನರೇಂದ್ರ ಮೋದಿಯವರು ಪ್ರತಿ ಮನೆಯ ಅಂಗಳದಲ್ಲಿ ಒಂದು ಬಂಡೆ ಕಲ್ಲು ಇಡುವುದು ಕಡ್ಡಾಯ ಮಾಡಿದ್ದಾರೆ. ಆ ಬಂಡೆಕಲ್ಲಿನ ಮೇಲೆ ಮಲಗಿ ಕಸರತ್ತು ಮಾಡಿ ಅಚ್ಛೇದಿನ್ ನೋಡಿದ್ದೇವೆ ಎಂದು ವೀಡಿಯೊ ಕ್ಲಿಪ್‌ಗಳನ್ನು ಸಾಮಾಜಿಕ ತಾಣದಲ್ಲಿ ಹಾಕಿದರೆ ಮಾತ್ರ ರೇಷನ್ ಅಂಗಡಿಗಳಲ್ಲಿ ರೇಷನ್, ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ಕೊಡುತ್ತಾರಂತೆ...ಇಲ್ಲವಾದರೆ ಇಲ್ಲವಂತೆ...’’ ಭಕ್ತ ಹೆಮ್ಮೆಯಿಂದ ಹೇಳಿದ. ‘‘ಅಚ್ಛೇದಿನ್ ಬರಬೇಕಾದರೆ ಪೆಟ್ರೋಲ್ ಬೆಲೆ ಇಳಿಕೆಯಾಗಬೇಕಲ್ಲ ....’’ ಕಾಸಿ ಹೇಳಿದ.
‘‘ನೋಡ್ರೀ...ಅಚ್ಛೇದಿನ್‌ಗೂ ಪೆಟ್ರೋಲ್ ಬೆಲೆಗೂ ಯಾವ ಸಂಬಂಧವೂ ಇಲ್ಲ.....ಅಚ್ಛೇದಿನ್ ನೋಡಬೇಕಾದರೆ ಮೊದಲು ಒಳ್ಳೆಯ ಮನಸ್ಸಿನಿಂದ ಮೋದಿಯನ್ನು ನೆನೆಯಬೇಕು. ಯಾವಾಗಲೂ ಮೋದಿ ಭಜನೆಯನ್ನು ಮಾಡಿದರೆ ಪೆಟ್ರೋಲ್‌ನೊಳಗೂ ನಾವು ಅಚ್ಛೇ ದಿನ್ ನೋಡಬಹುದು. ಪುರಾಣದಲ್ಲಿ ಭಕ್ತ ಪ್ರಹ್ಲಾದ ಹೇಳಿದಂತೆ ಎಲ್ಲೆಲ್ಲಿಯೂ ಅಚ್ಛೇ ದಿನ್ ನನಗೆ ಕಾಣುತ್ತಿದೆ. ಈ ಬಂಡೆ ಕಲ್ಲಿನೊಳಗೂ ಅಚ್ಛೇ ದಿನ್ ಇದೆ....’’ ಭಕ್ತನೀಗ ಪ್ರಹ್ಲಾದನಂತೆ ಹೇಳಿದ. ಎಲ್ಲಿ ಬಂಡೆ ಒಡೆದು ಅಚ್ಛೇದಿನ್ ನರಸಿಂಹಾವತಾರದಲ್ಲಿ ಬಂದು ತನ್ನನ್ನು ಕೊಲ್ಲುವುದೋ ಎಂದು ಕಾಸಿಗೆ ಹೆದರಿಕೆಯಾಯಿತು.
‘‘ಸರಿ ಸಾರ್...ನಾನು ಒಪ್ಪಿದೆ...ಅಚ್ಛೇ ದಿನ್ ಇದೆ. ಎಲ್ಲೆಲ್ಲಿಯೂ ಇದೆ....’’ ಕಾಸಿ ಒಪ್ಪಿದ.
‘‘ನೋಡಿ...ಈಗ ನೀವು ದೇಶಭಕ್ತರಾದಿರಿ. ನಿಮ್ಮಂತಹವರು ಇರುವವರೆಗೆ ಈ ದೇಶದಲ್ಲಿ ಅಚ್ಛೇದಿನ್ ನಳನಳಿಸುತ್ತಾ ಇರುತ್ತದೆ...’’ ಭಕ್ತ ಮಲಗಿ ಕೈಮೇಲೆ ಮಾಡಿದಲ್ಲಿಂದಲೇ ಹೇಳಿದ.
‘‘ಸರಿ ಸಾರ್, ನಾನು ಬರುತ್ತೇನೆ....’’ ಇವನ ಸಹವಾಸ ಅಪಾಯ ಕಾರಿ ಎಂದು ಕಾಸಿ ಮೆಲ್ಲಗೆ ಅಲ್ಲಿಂದ ಹೊರಡಲು ತಯಾರಾದ.
‘‘ಹೋಗುವುದು ಎಲ್ಲಿಗೆ...ನನ್ನನ್ನು ಎಬ್ಬಿಸಿ ಹೋಗಿ...’’ ಭಕ್ತ ಈಗ ಜೋರಾಗಿ ಹೇಳಿದ.
‘‘ಯಾಕೆ ಸಾರ್...ನಿಮಗೆ ಏಳುವುದಕ್ಕೆ ಆಗುವುದಿಲ್ಲವೆ....’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಇಲ್ಲಾರಿ...ಮೋದಿ ಮಾಡಿದರು ಅಂತ ನಂಬಿ ನಾನು ಮಾಡಲು ಹೋಗಿ ಇದೀಗ ಬೆನ್ನು ಹಿಡಿದುಕೊಂಡಿದೆ. ಮೇಲೆತ್ತಿದ ಕೈಯನ್ನು ಕೆಳಗೆ ಇಳಿಸಲು ಆಗುವುದಿಲ್ಲ. ದಯವಿಟ್ಟು ಇಲ್ಲಿಂದ ನನ್ನನ್ನು ಎಬ್ಬಿಸಿ’’ ಈಗ ಭಕ್ತ ತನ್ನ ದೀನ ಸ್ಥಿತಿಯನ್ನು ಹೇಳಿದ.
‘‘ಬೇಡ...ಅಚ್ಛೇದಿನ್ ಅನುಭವಿಸುತ್ತಿರುವ ನಿಮ್ಮ ಅನುಭವವನ್ನು ಕೆಡಿಸಿ ನಾನು ಯಾಕೆ ದೇಶದ್ರೋಹಿಯಾಗಲಿ....ನಾನು ಬರುತ್ತೇನೆ ನಮಸ್ಕಾರ...’’ ಕಾಸಿ ಅಲ್ಲಿಂದ ಹೊರಟೇ ಬಿಟ್ಟ.
‘‘ಸಾರ್...ಪ್ಲೀಸ್ ಸಾರ್...ಬೆನ್ನು ಹಿಡ್ಕೊಂಡಿದೆ...ಇದೊಂದು ಸಾರಿ ಎಬ್ಬಿಸಿ ಸಾರ್....ಪ್ಲೀಸ್ ಸಾರ್...’’ ಭಕ್ತನ ಆರ್ತನಾದ ಕಾಸಿಯನ್ನು ಮನೆಯವರೆಗೂ ಹಿಂಬಾಲಿಸಿತು.