ಉಟ್ಟ ಸೀರೆ
ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.
ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.
ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.
ಸೀಮೆಯ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.
ಲಿಂಗಕ್ಕೆ ಮಾಡಿದುದ ಸೋಂಕದೆ ಹೋದೆಯಲ್ಲಾ ಬಸವಣ್ಣ.
ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು
ಹೋದೆಯಲ್ಲಾ ಬಸವಣ್ಣ.
ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.
ಆ ಬಸವಣ್ಣಂಗೆ ಶರಣೆಂಬ ಪಥವನೇ ತೋರು ಕಂಡಾ
ಕಲಿದೇವರದೇವ.
-ಮಡಿವಾಳ ಮಾಚಿದೇವ
ಸಮಗಾರ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಲಿಂಗವಂತರ ಮದುವೆ ಎಂದು ತಿಳಿಯದೆ, ಸಮಗಾರ ವರ ಮತ್ತು ಬ್ರಾಹ್ಮಣ ಕನ್ಯೆಯ ಮಧ್ಯೆ ನಡೆದ ಮದುವೆ ಎಂದು ಭಾವಿಸಿ ಕಲ್ಯಾಣದಲ್ಲಿ ಯಥಾಸ್ಥಿತಿವಾದಿಗಳು ಹುಯಿಲೆಬ್ಬಿಸುತ್ತಾರೆ. ಜಾತಿಸಂಕರದ ವಿಚಾರದಲ್ಲಿ ದೊರೆ ಬಿಜ್ಜಳ ಪ್ರಧಾನಿ ಬಸವಣ್ಣನವರ ಪರವಾಗಿ ನಿಲ್ಲದೆ ಆಸ್ಥಾನದ ಸನಾತನಿಗಳ ಪರವಾಗಿ ನಿಂತು ವರ್ಣಭೇದ ನೀತಿಯನ್ನು ಎತ್ತಿಹಿಡಿಯುತ್ತಾನೆ. ಹರಳಯ್ಯ ಮತ್ತು ಮಧುವರಸರಿಗೆ ಎಳೆಹೂಟಿ ಶಿಕ್ಷೆ ನೀಡಲಾಗುತ್ತದೆ. ಈ ಕಾರಣದಿಂದಾಗಿ ಬಸವಣ್ಣನವರು ಪ್ರಧಾನಿ ಪದವಿಯನ್ನು ತ್ಯಾಗಮಾಡಿ ಕೂಡಲಸಂಗಮಕ್ಕೆ ಹೋಗುತ್ತಾರೆ. ತದನಂತರ ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡವಾಗುತ್ತದೆ. ಕೂಡಲಸಂಗಮದಲ್ಲಿ ಬಸವಣ್ಣನವರು ಲಿಂಗೈಕ್ಯರಾಗುತ್ತಾರೆ.
ಇಷ್ಟೆಲ್ಲ ನಡೆದ ನಂತರ ಮಾಚಿದೇವ ಬರೆದ ಹೃದಯಸ್ಪರ್ಶಿ ವಚನವಿದು. ಬಸವಣ್ಣ ಪ್ರಧಾನಿ ಪಟ್ಟವನ್ನು ಬಿಟ್ಟ ಕೂಡಲೇ ಪೋಷಾಕನ್ನು ಹರಿದರು. (ಏಕೆಂದರೆ ಪ್ರಧಾನಿ ಪೋಷಾಕನ್ನು ಬೇರೆಯವರು ತೊಡುವ ಹಾಗಿಲ್ಲ) ಪಾದರಕ್ಷೆಗಳನ್ನು ಕಳೆದರು. ರತ್ನಖಚಿತವಾದ ಕಿರೀಟವನ್ನು ಕಳಚಿಟ್ಟರು. ರಾಜಧಾನಿ ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ಹೋದರು. ಅವರು ಇಷ್ಟಲಿಂಗವೆಂಬ ತತ್ತ್ವದಲ್ಲಿನ ನಂಬಿಕೆಯನ್ನು ಉಳಿಸಿಕೊಂಡೇ ಹೋದರು. ತಾವು ರೂಪಿಸಿದ ಸಾಮಾಜಿಕ ಕ್ರಾಂತಿಯ ಕನಸುಗಳನ್ನು ಅಭಯಹಸ್ತದಲ್ಲಿ ಹಿಡಿದಿಟ್ಟುಕೊಂಡೇ ಹೋದರು. ಮುಂದೆ ಕೂಡಲಸಂಗಮದಲ್ಲಿ ಪರಂಜ್ಯೋತಿಯನ್ನೇ ಧರಿಸಿ ಅಂದರೆ ಶಿವಮಯವಾಗಿ ಬಯಲಾದರು. ತಾವು ಕಟ್ಟಬಯಸಿದ ಸುಂದರ ಸಮಾಜಕ್ಕೆ ಕೊಡಲಿಪೆಟ್ಟು ಬಿದ್ದ ಸಂದರ್ಭದಲ್ಲಿ ಕೂಡ ಬಸವಣ್ಣನವರು ವಿಚಲಿತರಾಗಿಲ್ಲ. ತಮ್ಮ ಕನಸಿನ ಸಮತಾ ಸಮಾಜ ಒಂದಿಲ್ಲೊಂದು ದಿನ ನನಸಾಗಿಯೇ ತೀರುವುದು ಎಂಬ ಭಾವದಲ್ಲಿ ಅವರು ಕಲ್ಯಾಣವನ್ನು ತೊರೆದರು. ಬಸವಣ್ಣನವರ ನವಸಮಾಜದೆಡೆಗೆ ಸಾಗುವಂಥ ದಾರಿಯನ್ನೇ ತೋರಿಸು ಎಂದು ಮಾಚಿದೇವ ದೇವರಲ್ಲಿ ಪ್ರಾರ್ಥಿಸುತ್ತಾನೆ. ವಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ದೇವರಹಿಪ್ಪರಗಿಯ ಮಾಚಿದೇವ, ಕಲ್ಯಾಣ ಹತ್ಯಾಕಾಂಡದ ನಂತರ ಚೆನ್ನಬಸವಣ್ಣನವರ ನೇತೃತ್ವದ ಶರಣ ಪಡೆಯ ಸೇನಾಪತಿಯಾದ. ಬಿಜ್ಜಳನ ಸೈನ್ಯದ ಜೊತೆ ಹೋರಾಡಿ ಶರಣರ ಮತ್ತು ವಚನಕಟ್ಟುಗಳ ರಕ್ಷಣೆ ಮಾಡಿದ.