ಅಂಬೇಡ್ಕರ್‌ರ ಸ್ವಾಭಿಮಾನದ ಚಿಂತನೆ ಮತ್ತು ಸ್ವಾಮೀಜಿಯ ಚಪ್ಪಲಿ

Update: 2018-06-20 18:58 GMT

ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಅತ್ಯಂತ ಪ್ರಭಾವ ಮತ್ತು ಸ್ವಾಭಿಮಾನದ ಘನತೆಯನ್ನು ಎತ್ತಿ ಹಿಡಿಯುವಂತಹ ಸಾಮಾಜಿಕ ಪರಿವರ್ತನೆಯ ಚಲನೆ. ಅವರು ಎಂದಿಗೂ ಗುಲಾಮಗಿರಿಯನ್ನು ಬೋಧಿಸಿದವರಲ್ಲ, ಅದರಲ್ಲಿಯೂ ಮಠಪರಂಪರೆ ಮತ್ತು ಕಾಲಿಗೆ ಬೀಳುವ ಸಂಸ್ಕೃತಿಯನ್ನು ಸಮರ್ಥಿಸಿದವರಲ್ಲ. ‘‘ನನ್ನ ಜನ ಸ್ವಾಭಿಮಾನದ ರಾಜಕಾರಣ ಮಾಡಬೇಕು. ಆಳುವ ವರ್ಗವಾಗಬೇಕು. ಯಾರ ಮುಂದೆಯೂ ಮಂಡಿಯೂರಿ ಗುಲಾಮಗಿರಿಗೆ ಒಳಗಾಗಬಾರದು’’ ಎಂಬ ಕಾರಣಕ್ಕೆ ಅವರ ಚಿಂತನೆಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ.

 ಕರ್ನಾಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ವಾಭಿಮಾನದ ಹಾದಿಯಲ್ಲಿ ನಡೆದ ರಾಜಕಾರಣಿಗಳೆಂದರೆ ಬಿ.ಕೃಷ್ಣಪ್ಪ, ಬಿ.ಬಸವಲಿಂಗಪ್ಪ, ಎನ್.ರಾಚಯ್ಯ, ವಿ. ಶ್ರೀನಿವಾಸ್ ಪ್ರಸಾದ್. ದಲಿತ ಚಳವಳಿಯು ಕರ್ನಾಟಕದಲ್ಲಿ ಮೊಳಕೆಯೊಡೆಯಲು ಬಿ.ಬಸವಲಿಂಗಪ್ಪನವರು ಮೈಸೂರಿನಲ್ಲಿ ಮಾಡಿದ ಒಂದು ಭಾಷಣದ ಎರಡು ತುಣುಕುಗಳು ಕಾರಣವಾದವು. ಇಡೀ ಕರ್ನಾಟಕದಾದ್ಯಂತ ಈ ಅಂಶಗಳ ಮೇಲೆ ಪ್ರತಿಭಟನೆ, ಗಲಾಟೆಗಳು ನಡೆಯಲಾರಂಭಿಸಿದವು. ಬಸವಲಿಂಗಪ್ಪನವರ ಹೇಳಿಕೆಗಳಲ್ಲಿ ಯಾವುದೇ ತಪ್ಪುಇರಲಿಲ್ಲ. ಅವರು ಅಂಬೇಡ್ಕರ್ ದೃಷ್ಟಿಕೋನದ ಆಧಾರದ ಮೇಲೆ ಅವುಗಳನ್ನು ಹೊರಹಾಕಿದ್ದರು. ಬಾಬಾಸಾಹೇಬರು ಹಿಂದೂ ದೈವಿಕ ಕಲ್ಪನೆಯ ವಿರುದ್ಧವಾಗಿದ್ದರಿಂದ, ಅವರಂತೆಯೇ ಹಿಂದೂ ಧರ್ಮದಿಂದ ಹೊರಬನ್ನಿ ಎನ್ನುವುದು ಒಂದು ಹೇಳಿಕೆಯ ಉದ್ದೇಶವಾದರೆ, ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದಿದ್ದಕ್ಕೂ ಒಂದು ಹಿನ್ನೆಲೆಯಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ‘‘ಇಂಗ್ಲಿಷ್ ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಘರ್ಜಿಸಲೇ ಬೇಕು’’ ಎಂದಿದ್ದರು. ಹಾಗಾಗಿ ದಲಿತರು ಇಂಗ್ಲಿಷ್ ಜ್ಞಾನ ಪಡೆದುಕೊಳ್ಳಲಿ ಹೆಚ್ಚೆಚ್ಚು ಪ್ರಜ್ಞಾವಂತರಾಗಲಿ ಎಂಬ ಕಾರಣಕ್ಕೆ ಬಸವಲಿಂಗಪ್ಪ ಹೀಗೆ ಹೇಳುತ್ತಾರೆ. ಜೊತೆಗೆ ಕನ್ನಡ ಸಾಹಿತ್ಯದಲ್ಲಿ ವಾಸ್ತವಕ್ಕಿಂತ ಕಲ್ಪನಾ ಸಾಹಿತ್ಯವೇ ಹೆಚ್ಚಿತ್ತು. ಆದ್ದರಿಂದ ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದರು. ಇದರ ಪರಿಣಾಮವಾಗಿ ಕರ್ನಾಟಕದಾದ್ಯಂತ ಗಲಾಟೆ, ಘರ್ಷಣೆಗಳಾಗಿ ಬಸವಲಿಂಗಪ್ಪನವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಒಬ್ಬ ನೈಜ ಅಂಬೇಡ್ಕರ್ ವಾದಿ ಯಾವುದೇ ಮುಲಾಜಿಲ್ಲದೆ, ಬಾಬಾಸಾಹೇಬರ ತಾತ್ವಿಕ ನೆಲೆಗಟ್ಟನ್ನು ಉಳಿಸಲು ರಾಜೀನಾಮೆ ಸಲ್ಲಿಸಿದರೇ ವಿನಃ ಯಾರ ಬಳಿಯೂ ಅಧಿಕಾರದ ಉಳಿವಿಗಾಗಿ ಕೈಕಟ್ಟಿ ನಿಂತು ಸ್ವಾಭಿಮಾನ ಮಾರಿಕೊಳ್ಳಲಿಲ್ಲ. ಬಸವಲಿಂಗಪ್ಪನವರ ರಾಜೀನಾಮೆಯ ನಂತರವೇ ಕರ್ನಾಟಕದಲ್ಲಿ ದಲಿತ ಚಳವಳಿ ಹುಟ್ಟಿಕೊಂಡಿದ್ದು, ದಲಿತ ಮತ್ತು ಬಂಡಾಯ ಸಾಹಿತ್ಯಗಳೂ ಹುಟ್ಟಿಕೊಂಡವು. ದಲಿತ ಚಳವಳಿಯ ಮೂಲಕ ರಾಜ್ಯಾದ್ಯಂತ ಮನೆಮಾತಾದ ಬಿ.ಕೃಷ್ಣಪ್ಪನವರು ಈ ನೆಲದ ನೈಜ ಅಂಬೇಡ್ಕರ್ ವಾದಿಗಳು. ದಲಿತರ ಮೇಲಿನ ದೌರ್ಜನ್ಯಗಳ ಕುರಿತಂತೆ ನಿರಂತರ ಹೋರಾಟ ಮಾಡಿಕೊಂಡು ಬಂದ ಇವರು, ರಾಜ್ಯಾಧಿಕಾರ ಬೇಕೆಂದು ಕಾನ್ಸಿರಾಂ ಅವರ ಮೂಲಕ ಬಹುಜನ ಸಮಾಜ ಪಕ್ಷವನ್ನು ಕರ್ನಾಟಕಕ್ಕೆ ತಂದರು. ದಲಿತ ಚಳವಳಿಯ ದೀವಿಗೆಯನ್ನು ಪ್ರತಿ ಗುಡಿಸಲಿನಲ್ಲೂ ಬೆಳಗಿಸಿದ ಬಿ.ಕೃಷ್ಣಪ್ಪನವರು ಪಕ್ಷವನ್ನು ರಾಜ್ಯಾದ್ಯಂತ ಪ್ರಚಾರ ಮಾಡಲು ಹಾಗೂ ಅಂಬೇಡ್ಕರ್ ಅವರ ರಾಜಕೀಯ ಚಿಂತನೆಯನ್ನು ಮನೆ ಮನೆಗೆ ತಲುಪಿಸಲು ವಿಫಲರಾದರೂ, ಅವರ ಹಾದಿಯನ್ನು ಎಂದಿಗೂ ಮೀರಿದವರಲ್ಲ. ಅಧಿಕಾರ ಮತ್ತು ನಾಯಕತ್ವಕ್ಕಾಗಿ ತಮ್ಮ ಸ್ವಾಭಿಮಾನವನ್ನು ಗಿರಿವಿಗಿಟ್ಟು ಅಂಬೇಡ್ಕರ್ ಅವರಿಗೆ ಎಂದೂ ದ್ರೋಹ ಬಗೆದವರಲ್ಲ.

ಬಿ.ಕೃಷ್ಣಪ್ಪನವರಿಗಿಂತ ಹಿಂದೆಯೇ ಕಂಡು ಬಂದ ಮತ್ತೊಬ್ಬ ಸ್ವಾಭಿಮಾನದ ರಾಜಕಾರಣಿ ಎಂದರೆ ಎನ್.ರಾಚಯ್ಯ. ಬಸವಲಿಂಗಪ್ಪನವರ ಸಮಕಾಲೀನ ರಾಜಕಾರಣಿಗಳಲ್ಲಿ ಇವರೂ ಕೂಡ ಒಬ್ಬರು. ಚಾಮರಾಜನಗರದಿಂದ ಲೋಕಸಭೆಗೆ ಒಂದು ಬಾರಿಯಷ್ಟೇ ಆಯ್ಕೆಯಾಗಿದ್ದ ಇವರು ಆನಂತರದಲ್ಲಿ 3 ಬಾರಿ ಎಂಎಲ್‌ಸಿ ಆಗಿದ್ದರು. ಅಂದು ಅಂಬೇಡ್ಕರ್ ಅವರೊಡನೆ ನೇರ ಸಂಪರ್ಕ ಹೊಂದಿದ್ದವರು. ಬಿ.ಬಸವಲಿಂಗಪ್ಪನವರಿಗೂ ಅಂಬೇಡ್ಕರ್ ಅವರನ್ನು ಪರಿಚಯಿಸಿದ್ದು ಈ ಮಹಾನುಭಾವರೇ. ಅಂಬೇಡ್ಕರ್ ಅವರ ಆಶಯಗಳನ್ನು ನೇರ ಮುಖಾಮುಖಿಯಾಗಿ ಮೈಗೂಡಿಸಿಗೊಂಡಿದ್ದ ಇವರು, ಬದುಕಿರುವ ತನಕವೂ ದೇವಾಲಯಗಳಿಗೆ ಹೋದವರಲ್ಲ. ಯಾರ ಕಾಲಿಗೂ ಬಿದ್ದವರಲ್ಲ. ಅಧಿಕಾರಕ್ಕಾಗಿ ಯಾರ ಚಪ್ಪಲಿಯನ್ನೂ ಹೊತ್ತವರಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿಗೆ ಸಡ್ಡು ಹೊಡೆದ ಬಂಡಾಯದ ಸ್ವಾಭಿಮಾನಿ. ಅವರೆಂದೂ ಅಂಬೇಡ್ಕರ್ ಅವರ ಹೆಸರು ಹೇಳಿ ಗುಲಾಮಗಿರಿಗೆ ಒಗ್ಗಿಕೊಂಡವರಲ್ಲ. ಬಸವಲಿಂಗಪ್ಪ, ಎನ್.ರಾಚಯ್ಯ ಹಾಗೂ ಬಿ.ಕೃಷ್ಣಪ್ಪನವರ ನಂತರ ಸಿಕ್ಕ ಚಳವಳಿಗಾರ, ಸ್ವಾಭಿಮಾನಿ ರಾಜಕಾರಣಿ ಎಂದರೆ ಅದು ವಿ. ಶ್ರೀನಿವಾಸ್ ಪ್ರಸಾದ್. ಸಾಮುದಾಯಿಕ ಪ್ರಜ್ಞೆಯಿಂದಲೇ ಸಾಮಾಜಿಕವಾಗಿ ಹೊರಹೊಮ್ಮಿದವರು. ಈ ಹೊತ್ತಿಗೂ ಅವರಲ್ಲಿ ದಲಿತರ ಸ್ವಾಭಿಮಾನದ ಮಿಡಿತವಿದೆ. 26ನೇ ವಯಸ್ಸಿಗೆ ಚಾಮರಾಜ ನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಎಂ.ಪಿ.ಯಾಗಿ ಚುನಾಯಿತರಾದವರು. ಅವರು ಎಂ.ಪಿ.ಯಾಗಿದ್ದ ಸಂದರ್ಭದಲ್ಲಿ 1992ರಲ್ಲಿ ಬದನವಾಳು ದುರಂತ ಸಂಭವಿಸಿತು. ಆ ಘಟನೆಯಲ್ಲಿ ದಲಿತರನ್ನು ಪ್ರಬಲ ಲಿಂಗಾಯತ ಜನಾಂಗ ಕೊಚ್ಚಿ ಹಾಕಿತ್ತು. ಅದಕ್ಕೆ ಸಂಬಂಧಿಸಿದಂತೆ ನಂಜನಗೂಡಿನಾದ್ಯಂತ ದಲಿತರ ಮೇಲೆ ದೌರ್ಜನ್ಯ ನಡೆಯಿತು. ಇದನ್ನು ಸಿಬಿಐಗೆ ವಹಿಸಿ ದಲಿತರಿಗೆ ನ್ಯಾಯ ದೊರಕಿಸಬೇಕು ಎಂದು ಶ್ರೀನಿವಾಸ್ ಪ್ರಸಾದ್ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಆನಂತರ ಆ ಪ್ರಕರಣ ಸಿಬಿಐ ತನಿಖೆಗೆ ವಹಿಸಲಾಯಿತು. ದಲಿತರಿಗೆ ನ್ಯಾಯವೂ ಸಿಕ್ಕಿತು. ಈ ಪ್ರಕರಣದ ನಂತರ ಶ್ರೀನಿವಾಸ್ ಪ್ರಸಾದ್ ಅವರು 2 ಬಾರಿ ಸಕ್ರಿಯ ರಾಜಕಾರಣದಲ್ಲಿ ಸೋತರು. ಆದರೂ ಎದೆಗುಂದದೆ ರಾಜಕಾರಣದಲ್ಲಿ ಮುಂದುವರಿದು ಗೆಲುವು ಸಾಧಿಸಿಕೊಂಡು ಕಾರ್ನಾಟಕ ರಾಜ್ಯ ರಾಜಕಾರಣದಲ್ಲಿಯೂ ಕಾಣಿಸಿಕೊಂಡು ಕಂದಾಯ ಮಂತ್ರಿಯಾಗಿದ್ದರು. ಪ್ರಬಲ ಜಾತಿಗಳೆಲ್ಲಾ ಸೇರಿ ಪ್ರಸಾದ್ ಅವರನ್ನು ಸೋಲಿಸಿದರೂ ಯಾರ ಕಾಲನ್ನೂ ಹಿಡಿಯದೆ, ಯಾರ ಗುಲಾಮಗಿರಿಗೂ ಒಳಗಾಗದೆ ಬುದ್ಧ ಮತ್ತು ಅಂಬೇಡ್ಕರ್ ತಾತ್ವಿಕ ನೆಲೆಯನ್ನು ರಾಜಕಾರಣದಲ್ಲಿಯೂ ಕಾಪಾಡಿಕೊಂಡು ಬಂದಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯನ್ನು ಮೇಲಿನ ಎಲ್ಲಾ ಹಳೆ ತಲೆಮಾರಿನ ರಾಜಕಾರಣಿಗಳ ನಡೆ, ನುಡಿಯಲ್ಲಷ್ಟೇ ಕಾಣುತ್ತಿದ್ದೆವು. ಇವರ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯನ್ನು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೀಗೆ ಸಮಗ್ರವಾಗಿ ನಾವು ಕಂಡಿದ್ದು ಹೊಸ ತಲೆಮಾರಿನ ಚಿಂತಕ ಎನ್.ಮಹೇಶ್‌ರಲ್ಲಿ. ಅಂಬೇಡ್ಕರ್ ಅವರ ನಿಜ ಸ್ವಾಭಿಮಾನದ ರಾಜಕಾರಣವನ್ನು ಹಾಗೂ ಸವರ್ಣೀಯ ಜಾತಿಯ ವಿಷವರ್ತುಲವನ್ನು ಹಾಗೂ ದಲಿತರು ಆಳುವ ವರ್ಗವಾಗಿದ್ದ ಒಂದು ಕಾಲದ ಐತಿಹಾಸಿಕ ಚರಿತ್ರೆಯನ್ನು ಬಗೆದು ತೋರಿಸಿದವರು ಎನ್. ಮಹೇಶ್. ಇವರಿಂದ ಕರ್ನಾಟಕದಲ್ಲಿ ಸ್ವಾಭಿಮಾನಿ ಭೀಮಸೈನಿಕರು, ಹಾಡುಗಾರರು, ಬರಹಗಾರರು, ಭಾಷಣಕಾರರು ಹುಟ್ಟಿಕೊಂಡರು. ಬಿ.ಕೃಷ್ಣಪ್ಪನವರ ನಂತರ, ಬಿ.ಗೋಪಾಲ್ ಅವರಿಗೆ ಬಹುಜನ ಸಮಾಜ ಪಕ್ಷ ಹಸ್ತಾಂತರವಾಗಿ, ಹಾಗೆಯೇ ಎನ್.ಮಹೇಶ್ ಅವರ ಹೆಗಲಿಗೆ ಬಂದು ಇಡೀ ಚಳವಳಿಯನ್ನು ಕರ್ನಾಟಕದ ಗಲ್ಲಿ ಗಲ್ಲಿಗೂ ತಲುಪಿಸಿದರು. ಅಂಬೇಡ್ಕರ್ ಅವರ ಚಿಂತನೆಯನ್ನು ಕೇವಲ ಜಾನಪದೀಯವಾಗಿಸಿಕೊಂಡಿದ್ದ ಜನರಿಗೆ, ಅವರ ನೈಜ ಸ್ವಾಭಿಮಾನದ ಇತಿಹಾಸವನ್ನು ಶೋಧಿಸಿ ತಂದ ಜವಾಬ್ದಾರಿ ಇವರಿಗೆ ಸಲ್ಲುತ್ತದೆ. ‘‘ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅಲ್ಲಿ ನಿಮ್ಮ ಚಪ್ಪಲಿಯನ್ನೂ ಬಿಡಬೇಡಿ’’ ಎಂದು ಹೇಳಿದ ಅಂಬೇಡ್ಕರ್ ಅವರ ವಾಕ್ಯವನ್ನು ಎನ್.ಮಹೇಶ್ ಮನೆ ಮನೆಗೆ ತಲುಪಿಸಿದರು. ಹಾಗೆಯೇ ಮೇಲ್ಜಾತಿ ಫ್ಯೂಡಲ್ ಮನಸ್ಥಿತಿಯನ್ನು ಕೂಡ ವಿವರವಾಗಿ ಚಳವಳಿಯಲ್ಲಿ ಕಟ್ಟ್ಟಿಕೊಡುತ್ತಾ ಹೋದರು.

ಬಿಎಸ್ಪಿ ರಾಜ್ಯಾಧ್ಯಕ್ಷರಾದ ಅವರು ಇತ್ತೀಚೆಗೆ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಗೆದ್ದು ಬಂದರು. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾದಾಗ ಎನ್.ಮಹೇಶ್ ಅವರನ್ನೂ ಜೊತೆಗೆ ಸೇರಿಸಿಕೊಂಡು ಅವರಿಗೂ ಪ್ರಾಥಮಿಕ ಮತ್ತು ಪ್ರೌಶಿಕ್ಷಣ ಸಚಿವ ಸ್ಥಾನಕೊಡಲಾಯಿತು.

ಆದರೆ ಮನುವಾದದ ಕುಟಿಲತೆಗಳನ್ನು ಎಳೆ ಎಳೆಯಾಗಿ ಹೇಳಿ ಇಡೀ ಕಗ್ಗತ್ತಲಲ್ಲಿದ್ದ ಜನರನ್ನು ಬೆಳಕಿನಾಚೆಗೆ ತಂದ ಇವರು ಕೂಡ ಇತ್ತೀಚೆಗೆ ತಾವೇ ಮನುವಾದದ ಮನಸ್ಥಿತಿಗೆ ಒಳಗಾದದ್ದು ವಿಪರ್ಯಾಸ. ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಎನ್.ಮಹೇಶ್ ಅವರು ಸುತ್ತೂರು ಮಠಕ್ಕೆ ಭೇಟಿಕೊಟ್ಟು ಸ್ವಾಮೀಜಿಯವರ ಪಾದಮುಟ್ಟಿ ನಮಸ್ಕರಿಸಿ ಪುನೀತರಾದರು. ಆನಂತರ ಅಮ್ಮ ಭಗವಾನ್ ಎಂಬ ಸ್ವಾಮೀಜಿಯ ಚಪ್ಪಲಿಗಳನ್ನು ಕೈಗೆತ್ತಿಕೊಂಡರು. ಯಾವ ಪೆರಿಯಾರ್‌ರ ವೈಚಾರಿಕ ಸಂಘರ್ಷವನ್ನು ಇಟ್ಟುಕೊಂಡು ಚಳವಳಿ ಕಟ್ಟಿದರೋ? ಯಾವ ಅಂಬೇಡ್ಕರ್ ಅವರ ಸ್ವಾಭಿಮಾನ ಮತ್ತು ಫುಲೆ ಅವರ ಸತ್ಯಶೋಧ ಸಮಾಜ ಇಟ್ಟುಕೊಂಡು ಸಮಾಜ ಪರಿವರ್ತನೆಗಿಳಿದರೋ ಅವರೆಲ್ಲರ ಹೆಸರಿಗೂ ಕಳಂಕ ತಂದು ಮೌನವಾದರು. ಎಲ್ಲಿ ಹೋಯಿತು ಫುಲೆ, ಶಾಹು, ನಾಲ್ವಡಿ, ಪೆರಿಯಾರ್ ಮತ್ತು ಅಂಬೇಡ್ಕರ್ ಸಿದ್ಧಾಂತಗಳು?

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News