ಇದುವರೆಗೂ ನಿಮ್ಮ ಅಧಿಕಾರದಡಿಯಲ್ಲಿ ನಮಗೆ ಅಪಮಾನವೇ ಆಗಿದೆ

Update: 2018-06-22 07:16 GMT

ಭಾಗ-5

5. ಆಶ್ಚರ್ಯವೆಂದರೆ ಅಸ್ಪಶ್ಯ ಸಮಾಜದ ವತಿಯಿಂದ ಸೈಮನ್ ಕಮಿಷನ್‌ಗೆ ಸಹಕರಿಸಿದಾಗ, ಇದೇ ಜನರೇ ನಮ್ಮನ್ನು ದೇಶದ್ರೋಹಿ ಎನ್ನುತ್ತಿದ್ದರು. ವಾಸ್ತವದಲ್ಲಿ ನಿಜವಾದ ದೇಶದ್ರೋಹಿ ಅವರೇ ಆಗಿದ್ದರು. ತಮ್ಮ ಸ್ವಾರ್ಥಕ್ಕಾಗಿ ಒಂದು ದೊಡ್ಡ ಸಮಾಜವನ್ನೇ ದಲಿತಾವಸ್ಥೆಯಲ್ಲಿ ಕಟ್ಟಿಹಾಕಿರುವುದು ಇವರೇ ಆಗಿದ್ದಾರೆ. ಇವರನ್ನು ನಾವು ಬ್ರಾಹ್ಮಣಗ್ರಸ್ತ ಎನ್ನುತ್ತೇವೆ. ಬ್ರಾಹ್ಮಣ್ಯ ಎನ್ನುವುದು ಶುದ್ಧ ಸಾಮಾಜಿಕ ಎನ್ನುವ ಹಾಗಿಲ್ಲ. ಸಾಮಾಜಿಕ ಸ್ಪರ್ಶಾಸ್ಪರ್ಶತೆ ಭಾವನೆಯ ಹೊರತುಪಡಿಸಿ ರಾಜಕೀಯ ಜಾತಿ ವರ್ಚಸ್ಸು ಬ್ರಾಹ್ಮಣ್ಯದಲ್ಲಿ ಅಂತರ್ಭಾವವಾಗಿದೆ. ಆದ್ದರಿಂದ ಇಂದಿನ ಬ್ರಾಹ್ಮಣರ ಅಂತರಂಗವನ್ನು ಶೋಧಿಸಿದರೆ ಅಲ್ಲಿ ಜಾತಿ ವರ್ಚಸ್ಸಿನ ದುರಾಸೆ ಎಷ್ಟು ಪ್ರಮಾಣದಲ್ಲಿ ಕಂಡುಬರುತ್ತದೋ ಅಷ್ಟೇ ಪ್ರಮಾಣದಲ್ಲಿ ಸ್ಪರ್ಶಾಸ್ಪರ್ಶತೆಯ ಭಾವನೆ ಸಿಕ್ಕುವುದಿಲ್ಲ.

ಇಂದಿನ ಬ್ರಾಹ್ಮಣ್ಯಗ್ರಸ್ತರು ಏನಾದರೂ ಸ್ವಲ್ಪ ಚಿಂತಿತರಾದರೆ ಅವರು ಈ ಮೈಲಿಗೆಯ ಧರ್ಮವನ್ನುಳಿಸದೆ ತಮ್ಮ ಜಾತಿ ವರ್ಚಸ್ಸನ್ನು ಅಬಾಧಿತವಾಗಿ ಕಾಪಾಡಿಕೊಳ್ಳುತ್ತಾರೆ. ಅವರ ಜಾತಿವರ್ಚಸ್ಸಿನ ಕೋಟೆಗೆ ಸುರಂಗ ತೋಡುವವರು ಅಸ್ಪಶ್ಯ ಸಮಾಜವೇ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಅಸ್ಪಶ್ಯ ಸಮಾಜದ ಮೇಲಿನ ಬಹಿಷ್ಕಾರವನ್ನು ತೆಗೆಯಲು ಅವರಿಗೆ ಜೀವಹೋದ ಹಾಗೆ ಆಗುತ್ತದೆ. ಬ್ರಾಹ್ಮಣೇತರ ಬಹುಜನ ಸಮಾಜದ ಅಜ್ಞಾನ ಮತ್ತು ಅದರಿಂದ ಹುಟ್ಟಿದ ಧರ್ಮಾಂಧತೆ, ಅವರಿಗೆ ಅನುಕೂಲಕರವಾಗಿದೆ. ಬ್ರಾಹ್ಮಣೇತರರ ಕಡೆಯಿಂದ ಅಸ್ಪಶ್ಯರಿಗೆ ಪರಸ್ಪರ ಕಾಲಿಗೆ ಬೇಡಿ ಹಾಕಿದ ಹಾಗೆ. ಆದ್ದರಿಂದ ಬ್ರಾಹ್ಮಣ್ಯಗ್ರಸ್ತರು ಬ್ರಾಹ್ಮಣೇತರ ಸಮಾಜದ ಧಾರ್ಮಿಕ ದುರಾಗ್ರಹವನ್ನು ಸಡಿಲವಾಗಿ ಬಿಡಲು ಅವರಿಗೆ ಇಷ್ಟವಿಲ್ಲ.

6. ಬ್ರಾಹ್ಮಣೇತರ ಸಮಾಜ ಈಗೀಗ ಮೈಲಿಗೆಯ ಧರ್ಮದ ಗುಲಾಮನಾಗಿದೆ, ಅದು ನಾವು ಒಪ್ಪುವಂತಹ ಮಾತೇ. ಆದರೆ ಪ್ರಯತ್ನ ಮಾಡಿದರೆ ಅವರ ಮನಸ್ಸು ಬದಲಾಯಿಸುವುದೇನೂ ಕಷ್ಟವಿಲ್ಲ. ದಾದರ್‌ನ ಲೋಕಹಿತವಾದಿ ಸಂಘವು ಮೊನ್ನೆ ಯಾವ ನವರಾತ್ರೋತ್ಸವ ಆಚರಿಸಿತೋ ಅದರಲ್ಲಿ ಅಸ್ಪಶ್ಯರು ಸ್ಪಶ್ಯರ ಜೊತೆ ಸಮಾನವಾದ ಸಂಬಂಧದಲ್ಲಿ ಭಾಗವಹಿಸುತ್ತಿದ್ದರು. ದೇವಿಯ ಪೂಜೆ ಮತ್ತು ಆರತಿ ಮಾಡಲು ಸ್ಪಶ್ಯರೇ, ಅಸ್ಪಶ್ಯರಿಗೆ ಅಡ್ಡಿ ಮಾಡಲಿಲ್ಲ.

ಆದರೆ ದಾದರ್‌ನ ಸಾರ್ವಜನಿಕ ಗಣೇಶೋತ್ಸವದಲ್ಲಿ ಯಾವಾಗ ಅಸ್ಪಶ್ಯರು ಸಮಾನತೆಯ ಹಕ್ಕನ್ನು ಕೇಳಿದರೋ, ಆಗ ಅಸ್ಪಶ್ಯರಿಗೆ ಮುಕ್ತದ್ವಾರ ತೆರೆದಿಡಲು ಸ್ಪಶ್ಯ ಜನರು ಪೀಡಿಸುತ್ತಾರೆ, ಹೆಣ ಬೀಳಿಸುತ್ತಾರೆ, ರಕ್ತಪಾತವಾಗುತ್ತದೆ ಎನ್ನುವ ಭಯ ಆ ಉತ್ಸವದ ಬ್ರಾಹ್ಮಣ್ಯಗ್ರಸ್ತರು ಶುರು ಮಾಡಿದರು. ಆದರೆ ನವರಾತ್ರೋತ್ಸವದಲ್ಲಿ ಈ ರೀತಿ ಯಾವ ಘಟನೆಯೂ ಘಟಿಸಲಿಲ್ಲ. ಅವತ್ತಿನಿಂದ ಇವತ್ತಿನವರೆಗೆ ಯಾವ ಸ್ಪಶ್ಯನೂ ಅಸ್ಪಶ್ಯರ ಮೇಲೆ ಮಾರಾಮಾರಿ ಮಾಡಲು ಉದ್ಯುಕ್ತನಾಗಿಲ್ಲ. ಹೇಳಬೇಕಾದ್ದು ಇಷ್ಟೇ, ದೋಷವಿದ್ದರೆ ಸ್ಪಶ್ಯ ಬಹುಜನಸಮಾಜದ ಕಡೆಯಿಂದ ಅವರ ಮುಂದಾಳುಗಳೆಂದು ಹೇಳಿಕೊಳ್ಳುವವರಲ್ಲಿ ಇದೆ. ಸ್ಪಶ್ಯ ವರ್ಗೀಯ ಮುಂದಾಳುಗಳು ಮನಃ ಪೂರ್ವಕವಾಗಿ ಪ್ರಯತ್ನ ಪಟ್ಟರೆ ಮೈಲಿಗೆಯ ಧರ್ಮದ ವಿನಾಶವಾಗಲು ಎಳ್ಳಷ್ಟೂ ಸಮಯ ಬೇಕಿಲ್ಲ.

7. ಆದರೆ ಒಳಗಿನ ಮಾತು ಹೀಗಿದೆ, ಅವರಿಗೆ ಅಂಥ ಪ್ರಯತ್ನ ಮಾಡುವುದೂ ಬೇಕಿಲ್ಲ. ಅದರ ಕಾರಣವೇನೆಂದರೆ ಅವರ ಬ್ರಾಹ್ಮಣ್ಯ. ಯಾವ ಸಾರ್ವಜನಿಕ ಹೆಸರಿನಲ್ಲಿ ನಡೆಸುವ ಸಂಸ್ಥೆ ತೆಗೆದುಕೊಳ್ಳಿ, ಯಾವ ಸಾರ್ವಜನಿಕ ಚಳವಳಿಯನ್ನೇ ತೆಗೆದುಕೊಳ್ಳಿ, ಅದರಲ್ಲಿ ಬ್ರಾಹ್ಮಣ್ಯಗ್ರಸ್ತರ ಸಂಖ್ಯೆಯೇ ಹೆಚ್ಚಾಗಿರುವುದನ್ನು ಕಾಣಬಹುದು. ಈ ಜನರ ಸಲುವಾಗಿ ಎಲ್ಲ ಚಳವಳಿಗಳೂ ಹಾಸ್ಯಾಸ್ಪದವಾಗಿವೆ. ಯಾವುದಾದರೂ ಒಂದು ಚಳವಳಿಯಲ್ಲಿ ಬ್ರಾಹ್ಮಣರ ಮೇಲುಸ್ತುವಾರಿ ಇಲ್ಲದಿದ್ದರೆ ಆ ಚಳವಳಿಯನ್ನು ಅಸ್ತವ್ಯಸ್ತಗೊಳಿಸಲು ಅವರು ಹಿಂದೆ ಮುಂದೆ ನೋಡುವುದಿಲ್ಲ.

ಮನೆ ಬಾಗಿಲು, ಹೊಸ್ತಿಲ ಒಳಗೆ ಹೊರಗೆ, ದೇವಸ್ಥಾನ ಇಷ್ಟೇ ಅಲ್ಲ, ಸ್ಮಶಾನದಲ್ಲಿ ಸಹ ಅವರ ಬ್ರಾಹ್ಮಣ್ಯ ಬೇಕು. ತಮ್ಮ ಬ್ರಾಹ್ಮಣ್ಯ, ಸ್ವರಾಜ್ಯದಲ್ಲಿ ಒಂದು ವೇಳೆ ಉಳಿಯದಿದ್ದರೂ ಸಹ ಅವರು ಸ್ವರಾಜ್ಯ ನಮಗೆ ಬೇಡ ಎನ್ನುವ ಮಟ್ಟಿಗೆ ಹೋಗಿದೆ. ಈ ಬ್ರಾಹ್ಮಣ್ಯವೆಂದರೆ ಏನು? ಬಹುಜನ ಸಮಾಜದ ಅಜ್ಞಾನದ ಆಧಾರದ ಮೇಲೆ ನಿಂತಿರುವ ಅವರ ಜಾತಿ ವರ್ಚಸ್ಸು, ಅದನ್ನು ಉಳಿಸಲು ದಲಿತವರ್ಗ ತಯಾರಿಲ್ಲ. ಆದರೆ ಅದನ್ನು ಉಳಿಸಬೇಕೆಂದು ಅವರು ಸಂಕಲ್ಪಿಸಿದ್ದಾರೆ. ಸ್ವಂತ ಜಾತಿ ವರ್ಚಸ್ಸಿಗಾಗಿ ದೇಶದಲ್ಲೆಲ್ಲ ಬಹುಸಂಖ್ಯಾ ಸಮಾಜದ ಮನುಷ್ಯತ್ವವನ್ನು ಬಲಿ ಕೊಟ್ಟು ನೋಡುವ ಜನ ನಿಜವಾಗಿ ಸಮಾಜಕಂಟಕರು ಮತ್ತು ರಾಷ್ಟ್ರಕ್ಕೆ ಅಪಕೀರ್ತಿ ತರುವಂತಹವರು ಆಗಿದ್ದಾರೆ. ಈ ಜನರ ಅಸ್ತಿತ್ವ ಎಂದರೆ ಹಿಂದೂಸ್ಥಾನಕ್ಕೇ ಅಂಟಿದ ಶಾಪ ಎಂದು ಹೇಳಲು ಏನೂ ಅಡ್ಡಿಯಿಲ್ಲ.

8. ಈ ರಾಷ್ಟ್ರದ್ರೋಹಿ ದುರ್ಜನರು ಮಹಾರಾಷ್ಟ್ರ ಕಾಂಗ್ರೆಸ್ ಕಮಿಟಿಯ ರಾಜಕಾರಣದಿಂದ ಧರ್ಮವನ್ನು ಋಣಮುಕ್ತ ಮಾಡಲು, ಅಸ್ಪಶ್ಯತೆಯ ಪ್ರಶ್ನೆಯನ್ನು ಕಾಂಗ್ರೆಸ್ಸಿನ ಕಾರ್ಯಕ್ರಮದಿಂದಲೇ ತೆಗೆದುಹಾಕುವ ಪ್ರಯತ್ನ ಮಾಡಿದರು. ಆದರೆ ಅವರ ನಿಜವಾದ ರಾಷ್ಟ್ರದ್ರೋಹ ಸ್ಪಷ್ಟವಾಗಿಯೇ ಇದೆ. ಅದನ್ನು ಕಾಣಲು ನಾವು ಹಿಂದೂ ಸಭೆಯ ಕಡೆ ಹೊರಳಬೇಕು. ಈ ಜನರು ನಿಜವಾಗಿ ಸಂಘಟನೆ ಮಾಡುವವರಾಗಿದ್ದರೆ ವಿಘಟಿಸುವಂತಹ ಮೈಲಿಗೆ ಧರ್ಮವನ್ನು ಮೊದಲೇ ಹೊರಗೆ ಹಾಕಬೇಕಾಗಿತ್ತು. ಆದರೆ ಈ ವಿಷಯದಲ್ಲಿ ಅವರ ಪ್ರಯತ್ನ ಎಷ್ಟು ಮೇಲ್ಪದರದಲ್ಲಿತ್ತು ಮತ್ತು ಅವಿಶ್ವಸನೀಯವಾಗಿತ್ತೆನ್ನುವುದು ಈಗ ಎಲ್ಲರಿಗೂ ಗೊತ್ತಾಗಿದೆ. ಅವರ ಸಂಪೂರ್ಣ ಲಕ್ಷ ಶುದ್ಧ ಚಳವಳಿಯ ಧ್ಯೇಯ ಏನು ಎನ್ನುವುದನ್ನು ನೋಡುವುದಷ್ಟೇ ನಮ್ಮ ಕೆಲಸ. ಯಾವ ಉಪಾಯದಿಂದಲಾದರೂ ಮಹಾನ್ ಹಿಂದೂ ಜಾತಿಯ ಜನಸಂಖ್ಯೆಯನ್ನು ಹೆಚ್ಚಿಸುವುದೇ ಅದರ ಧ್ಯೇಯ. ಅದರ ಮೂಲಕ ಸ್ಪಲ್ಪದಿನಕ್ಕಾದರೂ ಅದರ ಆಯಸ್ಸನ್ನು ಹೆಚ್ಚಿಸುವುದೇ ಆಗಿದೆ. ಅಂದರೆ ಈ ಚಳವಳಿ ಶುದ್ಧ ರಾಜಕೀಯ ಸ್ವರೂಪವನ್ನೇ ಹೊಂದಿದೆ.

ತಿಳುವಳಿಕೆ ಇಲ್ಲದವರು ಮತ್ತು ಧರ್ಮಾಂಧರು ಬಹುಜನ ಸಮಾಜದ ಓಟು ಪಡೆಯಲು ಅದರಲ್ಲೇ ಧರ್ಮವನ್ನು ತುರುಕಿದ್ದಾರೆ. ಇದೇ ಬ್ರಾಹ್ಮಣ್ಯಗ್ರಸ್ತರು ಹಿಂದೆ ಕಾಂಗ್ರೆಸ್‌ನಲ್ಲಿ ಉಪದ್ರವ ಕೊಟ್ಟಿದ್ದರು. ಆದರೆ ಮಹಾತ್ಮಾ ಗಾಂಧಿಯ ಚಳವಳಿಯ ಸಲುವಾಗಿ ಅದರ ತೇಜಸ್ಸು ಸತ್ತ ದನವಾಗಿ ಬಿದ್ದಿತ್ತು. ಕಾಂಗ್ರೆಸ್ ಬ್ರಾಹ್ಮಣ್ಯ ಸ್ವರಾಜ್ಯ ಅಂದರೆ ಬ್ರಾಹ್ಮಣ್ಯಗ್ರಸ್ತ ಭಾಷೆಯಲ್ಲಿ ಹೇಳುವುದಾದರೆ ಹಿಂದೂಪದಪಾತ ಸ್ಥಾಪನೆ ಮಾಡುವ ಅವರ ಆಸೆ ಸಮೂಲವಾಗಿ ನಷ್ಟವಾಯಿತು ಎಂದು ಹೇಳಬಹುದು. ಈ ಕಡೆ ದಲಿತವರ್ಗದಲ್ಲಿ ಜಾಗೃತಿ ಉಂಟಾಯಿತು. ಇಂಥ ಸ್ಥಿತಿಯಲ್ಲಿ ತಮ್ಮ ಜಾತಿವರ್ಚಸ್ಸನ್ನು ಮುಂದೆ ಮಾಡಿ ಸ್ಪಶ್ಯ- ಅಸ್ಪಶ್ಯರ ಸಮಾಜವನ್ನು ನಿರಂತರವಾಗಿಡಲು ಅವರು ಹಿಂದೂ ಸಭೆಯ ಚಳವಳಿಯನ್ನು ಕೈಯಲ್ಲಿ ತೆಗೆದುಕೊಂಡರು ಮತ್ತು ಅದರ ಮೂಲಕ ಬಹುಜನ ಸಮಾಜದ ಧರ್ಮಾಂಧತೆಯನ್ನು ಚಿರಸ್ಥಾಯಿಯಾಗಿಡಲು ಅವರು ಟೊಂಕ ಕಟ್ಟಿದರು. ತಮ್ಮ ಸ್ವಾರ್ಥ ಸಾಧನೆಗಾಗಿ ಈ ಬ್ರಾಹ್ಮಣಗ್ರಸ್ತ ಬಹುಜನ ಸಮಾಜದ ಅಂದರೆ ರಾಷ್ಟ್ರ ದ್ರೋಹ ಮಾಡಲು ಹೇಗೆ ಹಿಂದೆ ಮುಂದೆ ನೋಡುವುದಿಲ್ಲವೋ ಇದಕ್ಕೆ ಬೇರೇನು ಸಾಕ್ಷಿ ಬೇಕು?

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ