ಅಳಿವಿನಂಚಿನಲ್ಲಿರುವ ರಾಷ್ಟ್ರೀಯ ಪ್ರೊಫೆಸರ್!
‘‘ಮುಂದಿನ ಮೂರು ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿ’’ ಎಂದು ಯಸ್ಸೆಲ್ ಬಯ್ಯಿರಪ್ಪರವರು ಘೋಷಿಸಿದ್ದೇ, ವೈದಿಕವರೇಣ್ಯ ಸಾಹಿತ್ಯ, ರಾಜಕೀಯ ಲೋಕ ರೋಮಾಂಚನಗೊಂಡಿತು. ಕಾಸಿ ಕುಳಿತಲ್ಲೇ ಬೆಚ್ಚಿ ಬಿದ್ದು ಬಯ್ಯಿರಪ್ಪರ ಬಳಿಗೆ ಧಾವಿಸಿದ.
‘‘ಸಾರ್....ಬರೇ ಮೂರು ಅವಧಿಗಷ್ಟೇ ನರೇಂದ್ರ ಮೋದಿಯವರನ್ನು ಘೋಷಿಸಿದಿರಿ ಎಂದು ಮೋದಿ ಭಕ್ತರು ಬಹಳ ಬೇಜಾರಿನಲ್ಲಿದ್ದಾರೆ....ಅದೇಕೆ ಬರೇ ಮೂರು ಅವಧಿಗಷ್ಟೇ ಹೇಳಿದ್ದೀರಿ?’’ ಕಾಸಿ ಕೇಳಿದ.
ಬಯ್ಯಿರಪ್ಪ ಹಣೆ ಒರೆಸಿಕೊಂಡು ಹೇಳಿದರು ‘‘ನೋಡ್ರಿ...ೆ ನಾನು ದೇಶದ ಶಾಶ್ವತ ರಾಷ್ಟ್ರೀಯ ಪ್ರೊಫೆಸರ್ ಆಗಿರಬೇಕು. ಮೋದಿಯವರು ದೇಶದ ಪ್ರಧಾನಿಯಾಗಿರಬೇಕು. ಪ್ರತಿ ತಿಂಗಳು ಕುಳಿತಲ್ಲೇ ನನಗೆ ಲಕ್ಷ ರೂಪಾಯಿ ಸಂಬಳ ಬರುತ್ತದೆ....ಮೋದಿ ಇನ್ನೂ ಮೂರು ಅವಧಿಗೆ ಪ್ರಧಾನಿಯಾಗುವುದರಿಂದ ಈ ದೇಶಕ್ಕೆ ಸುಮಾರು ಹದಿನೈದು ವರ್ಷ ಒಬ್ಬ ರಾಷ್ಟ್ರೀಯ ಪ್ರೊಫೆಸರ್ ಸಿಕ್ಕಿದಂತಾಗುತ್ತದೆ....’’
‘‘ಹಾಗಾದರೆ ಅವರನ್ನೇ ಭಾರತದ ಶಾಶ್ವತ ಪ್ರಧಾನಿಯೆಂದು ಘೋಷಿಸಿಬಿಡಬಹುದಲ್ಲವೇ?’’ ಕಾಸಿ ಕೇಳಿದ.
‘‘ನೋಡ್ರೀ...ಹಾಗೆಲ್ಲ ಶಾಶ್ವತವಾಗಿ ಮೋದಿಯವರನ್ನು ಪ್ರಧಾನಿಯೆಂದು ಘೋಷಿಸುವುದಕ್ಕೆ ಅವರ ಜಾತಿ ಅಡ್ಡ ಬರುತ್ತದೆ. ಇನ್ನು ಮೂರು ಅವಧಿಯಲ್ಲಿ ಮೋದಿಯ ಮೂಲಕ ಈ ದೇಶವನ್ನು ಸಂಪೂರ್ಣ ಬ್ರಾಹ್ಮಣಮಯವಾಗಿ ಮಾಡಿ, ಬಳಿಕ ಮೋದಿಯನ್ನು ಇಳಿಸಿ, ಗಂಜಲದಿಂದ ಶುದ್ಧೀಕರಿಸಿ ಯೋಗ್ಯರನ್ನು ಅದರಲ್ಲಿ ಕುಳ್ಳಿರಿಸಲಾಗುವುದು. ಆ ಬಳಿಕ ಮೂರು ಯುಗಗಳ ಕಾಲವೂ ಈ ದೇಶವನ್ನು ಶಾಶ್ವತವಾಗಿ ನನ್ನ ಕಾದಂಬರಿಯ ನಾಯಕ ಪಾತ್ರಗಳೇ ಆಳಲಿವೆ. ಮತ್ತು ನಾನು ಈ ದೇಶದ ಶಾಶ್ವತ ರಾಷ್ಟ್ರೀಯ ಪ್ರೊಫೆಸರ್ ಆಗಲಿದ್ದೇನೆ...ನನ್ನ ಅನಂತರ ನನ್ನ ವಂಶಸ್ಥರು ಆ ಪ್ರೊಫೆಸರ್ ಸ್ಥಾನವನ್ನು ತುಂಬಲಿದ್ದಾರೆ’’ ಬಯ್ಯಿರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
‘‘ಸಾರ್...ನೀವು ರಾಷ್ಟ್ರೀಯ ಪ್ರೊಫೆಸರ್ ಆಗಿ ಆಯ್ಕೆಯಾಗಿದ್ದೀರಿ...ಈ ರಾಷ್ಟ್ರೀಯ ಪ್ರೊಫೆಸರ್ ಹುದ್ದೆ, ರಾಷ್ಟ್ರೀಯ ಪಕ್ಷಿ ಕೋಗಿಲೆ, ರಾಷ್ಟ್ರೀಯ ಪ್ರಾಣಿ....ಅದೇ ಕೆಟಗರಿಯಲ್ಲಿ ಬರುತ್ತದೆಯಾ ಸಾರ್...’’ ಕಾಸಿ ಅನುಮಾನದಿಂದ ಕೇಳಿದ.
‘‘ನೋಡ್ರೀ...ಈ ದೇಶದಲ್ಲಿ ಅಳಿವಿನಂಚಿಲ್ಲಿರುವ ಜೀವಿಗಳನ್ನು ಗುರುತಿಸಿ ನೀಡುವಂತಹ ಗೌರವ ಅದು....ಕನ್ನಡ ಈಗ ಅಳಿವಿನಂಚಿನಲ್ಲಿರುವ ಭಾಷೆ....ಅದರಲ್ಲೂ ಬರಹಗಾರರು ಅಳಿವಿನಂಚಿಲ್ಲಿರುವ ವರ್ಗ. ಆ ಬರಹಗಾರರಲ್ಲಿ ಅತಿ ಹೆಚ್ಚು ಅಳಿವಿನಂಚಿನಲ್ಲಿರುವ ಸಾಹಿತಿ ಎನ್ನುವ ಕಾರಣಕ್ಕೆ ನನ್ನನ್ನು ರಾಷ್ಟ್ರೀಯ ಪ್ರೊಫೆಸರ್ ಮಾಡಿದ್ದಾರೆ....’’
‘‘ಸಾರ್...ತೀರಾ ವಯಸ್ಸಾದವರು ಎನ್ನುವ ಕಾರಣಕ್ಕಾಗಿ ನಿಮ್ಮನ್ನು ಅಳಿವಿನಂಚಿನಲ್ಲಿರುವವರು ಎಂದು ಗುರುತಿಸಲಾಗಿದೆಯೇ?’’ ಕಾಸಿ ಮತ್ತೆ ಗೊಂದಲಗೊಂಡು ಕೇಳಿದ.
‘‘ನೋಡ್ರೀ...ವಯಸ್ಸು ಇಲ್ಲಿ ಮುಖ್ಯವಲ್ಲ....’’
‘‘ಹಾಗಾದರೆ ನೀವು ಸಾಹಿತ್ಯಕವಾಗಿ ಅಳಿವಿನಂಚಿನಲ್ಲಿದ್ದೀರಿ ಎಂದು ನೀಡಿರಬಹುದೆ?’’ ಕಾಸಿ ಮತ್ತೆ ಕೇಳಿದ.
‘‘ಬಹುಶಃ ನನ್ನ ಅಂಚು ಕಾದಂಬರಿ ಓದಿ ಅವರು ಆಯ್ಕೆ ಮಾಡಿರಬೇಕು....’’ ಬಯ್ಯಿರಪ್ಪ ಊಹೆ ಮಾಡಿ ಹೇಳಿದರು.
‘‘ಪ್ರೊಫೆಸರ್ ಆಗಿ ನೀವು ಯಾರಿಗೆ ಪಾಠ ಮಾಡುತ್ತೀರಿ...? ಯಾವ ಯಾವ ಕಾಲೇಜಿನಲ್ಲಿ ಪಾಠ ಮಾಡಿದ್ದೀರಿ....?’’ ಕಾಸಿ ಆಸಕ್ತಿಯಿಂದ ಕೇಳಿದ.
‘‘ನೋಡ್ರೀ...ನನಗೆ ವರ್ಷಕ್ಕೆ ಎರಡು ಅಥವಾ ಮೂರು ತರಗತಿಗಳಿವೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಂದ ಬಂದಿರುವ ಪುಸ್ತಕಗಳ ಆಧಾರದಲ್ಲಿ ನಾನು ತರಗತಿ ತೆಗೆದುಕೊಳ್ಳುತ್ತೇನೆ. ವರ್ಷಕ್ಕೆ ಮೂರು ಪತ್ರಿಕಾಗೋಷ್ಠಿ ಮಾಡಿ ಮೋದಿ ಸರಕಾರದ ಅಮೋಘ ಸಾಧನೆಗಳ ಕುರಿತಂತೆ ಸಂಶೋಧನೆ ಮಾಡಿ ಅದನ್ನು ಪತ್ರಕರ್ತರ ಮುಂದಿಡುವ ಮಹತ್ವದ ಹೊಣೆಗಾರಿಕೆಗಳನ್ನು ನನಗೆ ಹೊರಿಸಿದ್ದಾರೆ...’’ ಬಯ್ಯಿರಪ್ಪ ತನ್ನ ಹೊಣೆಗಾರಿಕೆಗಳನ್ನು ವಿವರಿಸಿದರು.
‘‘ಸಾರ್...ಈಗಾಗಲೇ ನೀವು ಮೋದಿ ಸರಕಾರದ ಕುರಿತಂತೆ ಏನೇನು ಸಂಶೋಧನೆ ಮಾಡಿದ್ದೀರಿ....?’’ ಕಾಸಿ ಕೇಳಿದ.
‘‘ಮೋದಿಯವರ ಆಳ್ವಿಕೆಗೂ ತ್ರೇತಾಯುಗದ ರಾಮನ ಆಳ್ವಿಕೆಗೂ ಸಂಬಂಧವಿರುವುದನ್ನು ನಾನೀಗಾಗಲೇ ಕಂಡಿದ್ದೇನೆ...’’ ತನ್ನ ಒಂದು ಶೋಧನೆಯನ್ನು ಬಯಲು ಮಾಡಿದರು.
‘‘ಮೋದಿಯವರು ಪತ್ನಿಯನ್ನು ತೊರೆದ ಹಿನ್ನೆಲೆಯಲ್ಲಿ ಈ ಹೋಲಿಕೆಯೇ ಸಾರ್?’’ ಕಾಸಿ ಮತ್ತೆ ಕೇಳಿದ.
‘‘ನೋಡ್ರೀ...ದೇಶಕ್ಕಾಗಿ ಪತ್ನಿಯನ್ನು ತೊರೆದಿದ್ದಾರೆ. ರಾಮನೂ ಅದನ್ನೇ ತ್ರೇತಾ ಯುಗದಲ್ಲಿ ಮಾಡಿದ್ದಾನೆ...ಆದುದರಿಂದ ಮೋದಿಯ ಆಳ್ವಿಕೆಯಲ್ಲಿ ರಾಮರಾಜ್ಯ ನಿರ್ಮಾಣವಾಗಿದೆ....ಇದನ್ನು ಆಧರಿಸಿ ನಾನೀಗಾಗಲೇ ಒಂದು ಕಾದಂಬರಿಯನ್ನು ಬರೆಯಬೇಕೆಂದಿದ್ದೇನೆ...’’ ಬಯ್ಯಿರಪ್ಪ ಘೋಷಿಸಿದರು.
‘‘ಏನು ಸಾರ್ ಹೆಸರು?’’
‘‘ಇನ್ನೂ ಹೆಸರು ಹೊಳೆದಿಲ್ಲ....ಈ ಹಿಂದಿನ ಕಾದಂಬರಿಗಳಿಗೆ ದಾಟು, ಅಂಚು, ಪರ್ವ, ಭಿತ್ತಿ, ಸಾರ್ಥ ಎಂದು ಎರಡಕ್ಷರಗಳ ಹೆಸರಿಟ್ಟಿದ್ದೇನೆ...ಇದಕ್ಕೂ ಹಾಗೆಯೇ ಇಡಬೇಕು ಎಂದಿದ್ದೇನೆ...’’ ಬಯ್ಯಿರಪ್ಪ ಹೇಳಿದರು.
‘‘ಸಾರ್ ಹಾಗಾದರೆ...ಒಂದು ಒಳ್ಳೆಯ ಹೆಸರಿದೆ...’’ ಕಾಸಿ ತಟ್ಟನೆ ಹೇಳಿದ.
‘‘ಏನದು?...ಹೆಸರು ಹೇಳಿ. ಅದನ್ನು ನಾನು ಆರೆಸ್ಸೆಸ್‌ನ ರಾಷ್ಟ್ರೀಯ ಸಮನ್ವಯ ಸಮಿತಿಗೆ ಕಳುಹಿಸಬೇಕು. ಅಲ್ಲಿ ಅದು ಅನುಮೋದನೆಯಾಗಬೇಕು...’’ ಬಯ್ಯಿರಪ್ಪ ನುಡಿದರು.
‘‘ಸಾರ್...ಹಿಂದಿನ ನಿಮ್ಮ ಒಂದು ಕೃತಿಗೆ ಸಾರ್ಥ ಎಂದು ಹೆಸರಿಟ್ಟಿದ್ದೀರಿ. ಈ ಹೊಸ ಕಾದಂಬರಿಗೆ ಸ್ವಾರ್ಥ ಎಂದು ಹೆಸರಿಡಿ. ನಿಮ್ಮ ಈಗಿನ ಸ್ವಾರ್ಥ ಸಿದ್ಧಾಂತಗಳಿಗೆ ತುಂಬಾ ಒಪ್ಪುತ್ತದೆ....’’ ಎಂದವನೇ ಅಲ್ಲಿಂದ ತನ್ನ ಜೋಳಿಗೆ ಸಹಿತ ಓಡ ತೊಡಗಿದ.
‘‘ತಥ್, ದೇಶದ್ರೋಹಿ’’ ಎಂದವರೇ ಮನೆ ಬಾಗಿಲನ್ನು ದಢಾರನೆ ಹಾಕಿ, ಚಿಲಕ ಎಳೆದುಕೊಂಡರು.