ದಿಲ್ಲಿ ದರ್ಬಾರ್

Update: 2018-06-30 18:31 GMT

ನಿತೀಶರ ಒತ್ತಡ ತಂತ್ರ

ರೈತರಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ತಕ್ಷಣ ಸಚಿವ ಸಂಪುಟದ ಸಭೆ ಕರೆಯಬೇಕೆಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ (ಜೆಡಿಯು) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿತ್ತು. ರೈತರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜೆಡಿಯು ತಿಳಿಸಿತ್ತು. ಬಿಜೆಪಿ ಜೊತೆಗಿನ ಸಂಬಂಧದ ಬಗ್ಗೆ ಜೆಡಿಯು ಪಕ್ಷದಲ್ಲಿ ಅಸಮಾಧಾನ ಹೆಚ್ಚುತ್ತಿದೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಹರಿದಾಡಿದವು. 2019ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಂತೆಯೇ, ನಿತೀಶ್ ಕುಮಾರ್ ಮೈತ್ರಿಕೂಟದಿಂದ ಹೊರನಡೆಯುವ ಸಾಧ್ಯತೆಯ ಬಗ್ಗೆಯೂ ಚರ್ಚೆ ಆರಂಭವಾಯಿತು. ನಿತೀಶ್ ಕುಮಾರ್ ಮೇಲೆ ವಿಶ್ವಾಸ ಇರಿಸುವಂತಿಲ್ಲ ಎಂದು ಬಿಜೆಪಿಯ ಮುಖಂಡರೂ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ನಿತೀಶ್ ಕುಮಾರ್‌ಗೆ ಬೇರೆ ಆಯ್ಕೆ ಇಲ್ಲದ ಕಾರಣ ಅವರು ಮೈತ್ರಿಕೂಟದಲ್ಲೇ ಮುಂದುವರಿಯುವುದು ಅನಿವಾರ್ಯ ಎಂಬುದೂ ಬಿಜೆಪಿ ಮುಖಂಡರಿಗೆ ತಿಳಿದಿದೆ. 2019ರ ಚುನಾವಣೆ ಸಂದರ್ಭ ತನ್ನ ಪಕ್ಷದ ಸ್ಥಾನವನ್ನು ಸಾಧ್ಯವಿದ್ದಷ್ಟು ಉತ್ತಮಗೊಳಿಸುವ ಇರಾದೆ ನಿತೀಶ್ ಕುಮಾರ್ ಅವರದ್ದಾಗಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಅದೇನಿದ್ದರೂ, ನಿತೀಶ್ ಕುಮಾರ್‌ರನ್ನು ಯಾರು ಕೂಡಾ ನಂಬುವುದಿಲ್ಲ ಮತ್ತು ‘ಅಂತರಾತ್ಮ’ದ ಮೇಲೆ ನೆಪ ಹೊರಿಸಿ ಅವರು ಏನು ಬೇಕಾದರೂ ಮಾಡಲು ಸಿದ್ಧ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.


ಪ್ರಸ್ತುತರಾಗಿರಲು ಜೇಟ್ಲಿಯ ಹೋರಾಟ

ಅರುಣ್ ಜೇಟ್ಲಿ ಈಗ ಏನಾಗಿದ್ದಾರೆ, ಅವರು ವಿತ್ತ ಸಚಿವರೋ ಅಥವಾ ಖಾತೆ ರಹಿತ ಸಚಿವರೋ, ಪ್ರಧಾನಿ ತನ್ನ ಮೇಲೆ ಹೊಂದಿದ್ದ ಹೆಚ್ಚಿನ ಗೌರವ ವನ್ನು ಜೇಟ್ಲಿ ಕಳೆದುಕೊಂಡಿದ್ದಾರೆಯೇ ಇತ್ಯಾದಿ ಕೆಲವು ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಲ್ಲ. ಆದರೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ತಮ್ಮ ಮನೆಗೇ ಸೀಮಿತಗೊಂಡು ಚೇತರಿಸಿಕೊಳ್ಳುತ್ತಿರುವ ಜೇಟ್ಲಿ, ಪ್ರಸ್ತುತರಾಗಿರಲು ಕಠಿಣ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕುರಿತು ಟೀಕೆ ಮಾಡು ವುದು, ಇಂದಿರಾಗಾಂಧಿಯವರನ್ನು ಹಿಟ್ಲರ್‌ಗೆ ಹೋಲಿಸಿ ತುರ್ತು ಪರಿಸ್ಥಿತಿ ಯ ಬಗ್ಗೆ ಬ್ಲಾಗ್‌ನಲ್ಲಿ ಬರೆಯುವುದು ಇತ್ಯಾದಿಗಳ ಮೂಲಕ ಸ್ವಲ್ಪ ಮಟ್ಟಿಗೆ ಮಾಧ್ಯಮಗಳ ‘ಪ್ರಸಾರ ವ್ಯಾಪ್ತಿಗೆ’ ಬಂದಿದ್ದಾರೆ. ತುರ್ತು ಪರಿಸ್ಥಿತಿ ಕುರಿತು ಜೇಟ್ಲಿ ಬರೆದ ಲೇಖನದ ಜೊತೆಗಿದ್ದ ಟಿಪ್ಪಣಿಯಲ್ಲಿ ಆತ್ಮೀಯ ಮಿತ್ರ ಹಾಗೂ ಬಹುತೇಕ ತನ್ನ ವಿಸ್ತೃತ ಕುಟುಂಬವಾಗಿರುವ ಇಂಡಿಯಾ ಟಿವಿ ಅಧ್ಯಕ್ಷ ಹಾಗೂ ಪ್ರಧಾನ ಸಂಪಾದಕ ರಜತ್ ಶರ್ಮ ಎಂದು ಬರೆಯಲಾಗಿದೆ. ರಜತ್ ಶರ್ಮ ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿದ್ದು, ಚುನಾವಣಾ ಪ್ರಕ್ರಿಯೆ ಆರಂಭವಾಗುವ ಸಂದರ್ಭದಲ್ಲೇ ಶರ್ಮ ಜೊತೆಗಿನ ತನ್ನ ನಿಕಟತೆಯನ್ನು ಜೇಟ್ಲಿ ಘೋಷಿಸಿ ಕೊಂಡಿರುವುದು ಚುನಾವಣೆಯಲ್ಲಿ ಶರ್ಮರಿಗೆ ಅನುಕೂಲವಾಗಲಿದೆ . ಇನ್ನೊಂದೆಡೆ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಟಿವಿ ಚಾನೆಲ್ ಮೂಲಕ ಶರ್ಮ ಆಡಳಿತ ಪಕ್ಷಕ್ಕೆ ನೆರವಾಗಲಿದ್ದಾರೆ ಎಂಬ ಮಾತು ಗಳು ಕೇಳಿಬರುತ್ತಿವೆ. ಜೊತೆಗೆ, ತಾನು ಅಸ್ವಸ್ಥಗೊಂಡು ರಾಜಕೀಯದಲ್ಲಿ ಸಕ್ರಿಯವಾಗಿರದಿದ್ದರೂ ಕೆಲವು ವಿಷಯಗಳ ಮೇಲೆ ಪ್ರಭಾವ ಬೀರಬಲ್ಲೆ ಎಂದು ತೋರಿಸಲು ಜೇಟ್ಲಿಗೆ ಒಂದು ಅವಕಾಶ ದೊರಕಿದೆ ಎನ್ನಲಾಗುತ್ತಿದೆ. ಅಮಿತ್ ಶಾ ಅವರ ಮ್ಯಾಜಿಕ್ ಸೂತ್ರ ಪಕ್ಷದ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಪ್ರೇರಣೆ ನೀಡಲು ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಬಳಿ ಒಂದು ಮ್ಯಾಜಿಕ್ ಸೂತ್ರವಿರುವಂತೆ ಕಾಣುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆಯಿಂದ ಹಿಡಿದು ಕೈರಾನ ಕ್ಷೇತ್ರದಲ್ಲಿ ಸಂಘಟಿತ ವಿಪಕ್ಷಗಳ ಎದುರು ಉಂಟಾದ ಅವಮಾನಕರ ಸೋಲಿನಿಂದ ಮನೋಸ್ಥೈರ್ಯವನ್ನು ಕಳೆದುಕೊಂಡಿರುವ ಕಾರ್ಯಕರ್ತರಿಗೆ ಈ ಮ್ಯಾಜಿಕ್ ಸೂತ್ರ ಅತ್ಯಗತ್ಯವಾಗಿದೆ. ಇನ್ನೊಂದೆಡೆ ಛತ್ತೀಸ್‌ಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೆಲವೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಇನ್ನೊಂದು ವರ್ಷದೊಳಗೆ ಬಹುಮುಖ್ಯವಾದ 2019ರ ಲೋಕಸಭಾ ಚುನಾವಣೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಧೈರ್ಯಗೆಡುವುದನ್ನು ಬಿಜೆಪಿ ಬಯಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾ ಹೊಸ ಕಾರ್ಯತಂತ್ರ ಹೆಣೆದಿದ್ದಾರೆ. ಆಯ್ದ ಕಾರ್ಯಕರ್ತರ ತಂಡವೊಂದನ್ನು ಭೇಟಿಯಾಗಿ ಅವರನ್ನು ಹುರಿದುಂಬಿಸುವುದು. ಪಕ್ಷದ ಅಧ್ಯಕ್ಷರೊಂದಿಗೆ ಮುಖಾಮುಖಿ ಭೇಟಿಯ ಅವಕಾಶ ಪಡೆಯುವ ಅದೃಷ್ಟವಂತ ಕಾರ್ಯಕರ್ತರಿಗೆ ಇರುವ ಮಾನದಂಡವೆಂದರೆ, ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಕನಿಷ್ಠ 10,000 ‘ಫಾಲೋವರ್ಸ್’ಗಳನ್ನು ಹೊಂದಿರಬೇಕು. ಮುಂಬರುವ ಲೋಕಸಭಾ ಚುನಾವಣೆಯ ಹೋರಾಟ ಮತ್ತು ಸೋಲು-ಗೆಲುವು ಮೂಲತಃ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತದೆ ಎಂದು ಗುಜರಾತ್ ಮೂಲದ ಶಾ ಭಾವಿಸಿರುವುದು ಸ್ಪಷ್ಟವಾಗಿದೆ.


ಕಮಲ್‌ನಾಥರ ಟೋಪಿ ಸಮಸ್ಯೆ

15ನೇ ಶತಮಾನದ ಅನುಭಾವಿ ಕವಿ ಮತ್ತು ಸಂತ ಕಬೀರ್ ದಾಸರ ಸಮಾಧಿಸ್ಥಳದಲ್ಲಿ ಗುರುವಾರ ತನಗೆ ನೀಡಲಾದ ಟೋಪಿಯನ್ನು ಧರಿಸಲು ನಿರಾಕರಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನಡೆಯ ಬಗ್ಗೆ ವಿಪಕ್ಷಗಳಿಂದ ಭಾರೀ ಟೀಕೆ ವ್ಯಕ್ತವಾಯಿತು. ಇದಕ್ಕೆ ಪ್ರತಿಯಾಗಿ ಕೆಲವು ಬಿಜೆಪಿ ಮುಖಂಡರು, ಇತ್ತೀಚೆಗೆ ಭೋಪಾಲದಲ್ಲಿ ನಡೆದಿದ್ದ ಈದುಲ್ ಫಿತ್ರ್ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಬಿಜೆಪಿ ಮುಖಂಡ, ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್ ವೇದಿಕೆ ಹಂಚಿಕೊಂಡು ಪರಸ್ಪರ ಆಲಿಂಗಿಸಿಕೊಂಡಿರುವ ವಿಷಯವನ್ನು ಪ್ರಸ್ತಾವಿಸಿ ‘ಡ್ಯಾಮೇಜ್ ಕಂಟ್ರೋಲ್’ ಮಾಡಲು ಪ್ರಯತ್ನಿಸಿದರು. ಈ ಮಧ್ಯೆ, ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಚೌಹಾಣ್ ಹಾಗೂ ಕಮಲ್‌ನಾಥ್ ಇಬ್ಬರೂ ಕಾರ್ಯಕ್ರಮದಲ್ಲಿ ‘ವಿಧ್ಯುಕ್ತ ಟೋಪಿ’ಯನ್ನು ಧರಿಸಬಾರದು ಎಂದು ನಿರ್ಧರಿಸಿದ್ದರಂತೆ. ಪ್ರಧಾನಿ ಮೋದಿಯೂ ಸೇರಿದಂತೆ ಬಿಜೆಪಿ ಮುಖಂಡರು ತಲೆಗೆ ಟೋಪಿ ಧರಿಸಲು ಒಪ್ಪುವುದಿಲ್ಲ. ಈ ಸೋಂಕು ಕಾಂಗ್ರೆಸಿಗೂ ಅಂಟಿಕೊಂಡಿತೇ ಎಂಬ ಪ್ರಶ್ನೆ ಇದೀಗ ಮೂಡಿದೆ ಮತ್ತು ಕಮಲ್‌ನಾಥ್ ಇಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಕಾರ್ಯಸೂಚಿಯನ್ನು ಬಿಜೆಪಿ ಸ್ಪಷ್ಟಪಡಿಸಿದೆ. ವಿಪಕ್ಷಗಳು ಈಗಾಗಲೇ ಆತಂಕಪಟ್ಟಿರುವಂತೆ ಅಲ್ಪಸಂಖ್ಯಾತರ ತುಷ್ಟೀಕರಣದತ್ತ ಬಿಜೆಪಿ ಸಾಗುತ್ತಿರುವುದು ಸ್ಪಷ್ಟವಾಗಿದೆ.


ಜೈರಾಂ ರಮೇಶ್ ಮತ್ತು ಆರೆಸ್ಸೆಸ್

ಜೈರಾಮ್ ರಮೇಶ್ ಬರೆದಿರುವ ಇಂದಿರಾ ಗಾಂಧಿಯವರ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಪ್ರಧಾನಿಯಾಗಿದ್ದ ಆರಂಭದ ದಿನಗಳಲ್ಲಿ ಅವರ ಸಮೀಪವರ್ತಿಯಾಗಿದ್ದ ಪಿ.ಎನ್.ಹಕ್ಸರ್ ಅವರ ಜೀವನಚರಿತ್ರೆ ಇದೀಗ ಅಂಗಡಿಗಳಲ್ಲಿ ಲಭ್ಯವಿದೆ. ಕೃತಿಯ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡರೂ ಶ್ಲಾಘನೆ ವ್ಯಕ್ತಪಡಿಸಿರುವ ಜೊತೆಗೆ ಪಕ್ಷದ ಹೈಕಮಾಂಡ್ ಕೂಡಾ ಬೆನ್ನು ತಟ್ಟಿದೆ. ಗೋ ಹತ್ಯೆಯಂತಹ ಸೂಕ್ಷ್ಮ ವಿಷಯಗಳನ್ನು ರಮೇಶ್ ತಮ್ಮ ಕೃತಿಯಲ್ಲಿ ನಿಭಾಯಿಸಿರುವ ರೀತಿಯನ್ನು ಹೈಕಮಾಂಡ್ ಮೆಚ್ಚಿಕೊಂಡಿದೆ. ಆದ್ದರಿಂದ 2019ರ ಲೋಕಸಭಾ ಚುನಾವಣೆಯ ಸಿದ್ಧತಾ ಸಮಿತಿಯ ಸಂಚಾಲಕರನ್ನಾಗಿ ನೇಮಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಸಂಸತ್ ಭವನದ ಮುಂಭಾಗದಲ್ಲಿ ಗೋರಕ್ಷಕರು ಬೃಹತ್ ಪ್ರತಿಭಟನೆ ನಡೆಸಿದ್ದು ಈ ಬಗ್ಗೆ ರಮೇಶ್ ತಮ್ಮ ಕೃತಿಯಲ್ಲಿ ಉಲ್ಲೇಖಿಸಿ ದ್ದಾರೆ. ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಗೋಹತ್ಯೆಗೆ ರಾಷ್ಟ್ರವ್ಯಾಪಿ ನಿಷೇಧ ಹೇರುವ ಬಗ್ಗೆ ನಿರ್ಧರಿಸಲು ನಿವೃತ್ತ ಮುಖ್ಯ ನ್ಯಾಯಾಧೀಶ ಎ.ಕೆ.ಸರ್ಕಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ಪ್ರಧಾನಿ ಇಂದಿರಾ ನೇಮಿಸಿದ್ದರು. ಪುರಿ ಪೀಠದ ಶಂಕರಾಚಾರ್ಯ, ಆರ್ಥಿಕ ತಜ್ಞ ಅಶೋಕ್ ಮಿತ್ರ ಹಾಗೂ ವಿ.ಕುರಿಯನ್ ಅವರಿದ್ದ ಸಮಿತಿಯಲ್ಲಿ ಆರೆಸ್ಸೆಸ್ ಮುಖ್ಯಸ್ಥ ಎಂ.ಎಸ್.ಗೋವಳ್ಕರ್ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಇಂದಿರಾ ಅತ್ಯಂತ ಧೈರ್ಯದ ನಿರ್ಧಾರವೊಂದನ್ನು ಕೈಗೊಂಡಿದ್ದರು. ಸರಕಾರಕ್ಕೆ ಮುಜುಗರ ಉಂಟುಮಾಡಲು ಹಾಗೂ ನಿರ್ದಿಷ್ಟ ರಾಜಕೀಯ ಉದ್ದೇಶಕ್ಕಾಗಿ ಗೋರಕ್ಷಕ ಅಭಿಯಾನವನ್ನು ಆರೆಸ್ಸೆಸ್ ಹಮ್ಮಿಕೊಂಡಿತ್ತು ಎಂದು ತನ್ನಲ್ಲಿ ಗೋವಳ್ಕರ್ ಒಪ್ಪಿಕೊಂಡಿದ್ದರು ಎಂದು ವಿ.ಕುರಿಯನ್ ತಿಳಿಸಿದ್ದರು. ಬಳಿಕ ಮೊರಾರ್ಜಿ ದೇಸಾಯಿ ಈ ಸಮಿತಿಯನ್ನು ರದ್ದುಗೊಳಿಸಿದ್ದರು. ಆದರೆ ಕೃತಿ ಯಲ್ಲಿ ಎಲ್ಲಿಯೂ ಕೂಡಾ ಗೋವಳ್ಕರ್ ಹೆಸರನ್ನು ರಮೇಶ್ ಉಲ್ಲೇಖಿಸದೆ ಸಮಿತಿಯ ಬಗ್ಗೆ ಹಾಗೂ ಅದರ ನಿಷ್ಪಲತೆಯ ಬಗ್ಗೆ ತಿಳಿಸಿದ್ದಾರೆ. ಚಾಟಿಯೇಟು ನೀಡಿದರೂ ಹಿಂದು ವಿರೋಧಿ ಎಂಬ ಆರೋಪಕ್ಕೆ ಒಳಗಾಗದೆ ಒಂದು ಸೂಕ್ಷ್ಮವಾದ ವಿಷಯವನ್ನು ಪ್ರಸ್ತಾವಿಸಿದ್ದಾರೆ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75