ದಿಲ್ಲಿ ದರ್ಬಾರ್
ಮುಖ್ಯಮಂತ್ರಿಯಾಗಿ ಸಜ್ಜದ್?
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮೆಹಬೂಬ ಮುಫ್ತಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್‌ಪಡೆಯುವ ಮೂಲಕ ಕಣಿವೆ ರಾಜ್ಯದ ಮೇಲೆ ರಾಜ್ಯಪಾಲರ ಆಡಳಿತ ಹೇರಲಾಗಿದೆ. ರಾಜ್ಯ ವಿಧಾನಸಭೆಯ ಅವಧಿ 2020ಕ್ಕೆ ಕೊನೆಯಾಗುತ್ತದೆ. ಹೊಸ ಸರಕಾರ ರಚಿಸಲು ಚುನಾವಣೆಯೊಂದೇ ದಾರಿ ಎಂದು ಭಾವಿಸಿದ್ದವರ ಅನಿಸಿಕೆ ತಪ್ಪಾಗಿರಬಹುದು. ಆದರೆ ರಾಮ ಮಾಧವ್ ನೇತೃತ್ವದ ಬಿಜೆಪಿ ಯೋಜನೆಯೊಂದನ್ನು ರೂಪಿಸುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಪೂರಕವೆಂಬಂತೆ ಪಕ್ಷದ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಪಿಡಿಪಿ ಶಾಸಕರನ್ನು ಸೆಳೆದು ಕಾಶ್ಮೀರದ ಶಾಸಕ ಸಜ್ಜದ್ ಲೋನ್ ನೇತೃತ್ವದಲ್ಲಿ ತಂಡ ರಚಿಸಿ ಬಿಜೆಪಿ ಜೊತೆಗೂಡಿ ಮೈತ್ರಿ ರಚಿಸುವ ಕಾರ್ಯತಂತ್ರ ತೆರೆಮರೆಯಲ್ಲಿ ನಡೆಯುತ್ತಿದೆ. ಮೂಲಗಳ ಪ್ರಕಾರ ಇದು ಕಾರ್ಯರೂಪಕ್ಕೆ ಬರುವುದು ತಡವಾಗಬಹುದು, ಬಹುಶಃ ಅಮರನಾಥ ಯಾತ್ರೆಯ ನಂತರ. ಹತ್ಯೆಗೊಳಗಾದ ಮಾಜಿ ಹುರಿಯತ್ ನಾಯಕನ ಪುತ್ರನಾಗಿರುವ ಸಜ್ಜದ್ ಲೋನ್ ರಾಜ್ಯದಲ್ಲಿ ಜನಪ್ರಿಯ ನಾಯಕರೇನೂ ಅಲ್ಲ. ಆದರೆ ಅವರೊಬ್ಬ ಮಹತ್ವಾಕಾಂಕ್ಷೆಯುಳ್ಳ ನಾಯಕನಾಗಿದ್ದಾರೆ. ಅಷ್ಟಕ್ಕೂ ರಾಜ್ಯದ ಮುಖ್ಯಮಂತ್ರಿಯಾಗಬೇಕೆನ್ನುವ ಆಸೆ ಯಾರಿಗಿರುವುದಿಲ್ಲ?
ಚೌಧುರಿಯ ಒಂಟಿ ನಡೆ
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ತೀವ್ರ ಸಂಕಷ್ಟದಲ್ಲಿದೆ. ಕಳೆದ ವಾರ ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಿದ ಅಧ್ಯಕ್ಷ ರಾಹುಲ್ ಗಾಂಧಿ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು. ರಾಜ್ಯದಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿ ಮಾಡದ ಹೊರತು ಪಕ್ಷವು ಸಂಪೂರ್ಣವಾಗಿ ಕುಸಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಚುನಾವಣಾ ಮೈತ್ರಿಯ ಕುರಿತು ಪಕ್ಷವು ಇಬ್ಭಾಗವಾಗಿದೆ. ರಾಜ್ಯ ಮುಖ್ಯಸ್ಥ ಅಧಿರ್ ರಂಜನ್ ಚೌಧುರಿ ಬೆಂಬಲವಿರುವ ಒಂದು ಗುಂಪು, ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡಲು ಎಡಪಕ್ಷಗಳ ಜೊತೆ ಕೈಜೋಡಿಸುವ ಸಲಹೆ ನೀಡಿದ್ದರೆ ಇನ್ನೊಂದು ಗುಂಪು ಮಮತಾ ಬ್ಯಾನರ್ಜಿ ಜೊತೆ ಕೈಜೋಡಿಸಿ ಬಿಜೆಪಿ ವಿರುದ್ಧ ಹೋರಾಡುವ ಸಲಹೆ ನೀಡಿದೆ. ಓರ್ವ ಪ್ರಭಾವೀ ನಾಯಕರಾಗಿರುವ ಚೌಧುರಿ ಮಮತಾ ಬ್ಯಾನರ್ಜಿ ಜೊತೆ ಮೈತ್ರಿ ಮಾಡಿಕೊಳ್ಳುವುದರ ವಿರುದ್ಧವಾಗಿದ್ದಾರೆ. ಆದರೆ ಪಕ್ಷದಲ್ಲಿ ಅವರಿಗೆ ಹೆಚ್ಚು ಬೆಂಬಲ ವ್ಯಕ್ತವಾಗಿಲ್ಲ. ಸದ್ಯ ರಾಹುಲ್ ಗಾಂಧಿ ಸಮಯಾವಕಾಶ ಕೇಳಿದ್ದು ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಚೌಧುರಿ ಮಾತನ್ನು ರಾಹುಲ್ ಕೇಳುತ್ತಾರಾದ್ದರಿಂದ ಸಿಪಿಎಂ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದರೆ ಪಕ್ಷದ ಮೇಲೆ ಅದರಿಂದಾಗುವ ಪರಿಣಾಮದ ಬಗ್ಗೆ ಈಗಲೇ ಹೇಳಲಾಗದು.
ರಾವ್: ಬೆಂಬಿಡದ ಭೂತ
ಆಧುನಿಕ ಭಾರತದ ಎರಡು ಹುಚ್ಚುಗಳಾದ ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಸಮಯಪ್ರಜ್ಞೆ (ಟೈಮಿಂಗ್) ಎಂಬುದು ಬಹಳ ಮುಖ್ಯ. ಅಷ್ಟಕ್ಕೂ ಪ್ರಧಾನಿ ಮೋದಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಿರುವ ರಾಹುಲ್ ಗಾಂಧಿಗಿಂತ ಬಹಳಷ್ಟು ಉತ್ತಮ ಟೈಮಿಂಗ್ ಹೊಂದಿದ್ದಾರೆ ಎಂದು ಹೇಳುವ ಅಗತ್ಯವಿಲ್ಲ. ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್‌ರನ್ನು ನೆನಪಿಸುವ ವಿಷಯದಲ್ಲಿ ಮೋದಿ, ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಸೋಲಿಸಿದ್ದಾರೆ. ರಾವ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಹಿರಿಯ ನಾಯಕನ ಬಗ್ಗೆ ಮೊದಲು ಟ್ವೀಟ್ ಮಾಡುವ ಮೂಲಕ ಮೋದಿ, ರಾಹುಲ್ ಗಾಂಧಿಯನ್ನು ಹಿಂದಿಕ್ಕಿದ್ದಾರೆ ಎಂದರಿತ ಪಕ್ಷವು ರಾವ್ ಅವರು ನೀಡಿದ ಕಾಣಿಕೆಯನ್ನು ನೆನಪಿಸಿಕೊಂಡಿತು. ಆದರೆ ಅದಾಗಲೇ ನಷ್ಟ ಆಗಿ ಹೋಗಿತ್ತು. ರಾಹುಲ್ ಗಾಂಧಿಯನ್ನು ಮೋದಿ ಸೋಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯಿತು. ರಾವ್ ಬದುಕಿದ್ದಿದ್ದರೆ ಮೋದಿಯ ವರ್ತನೆಗಳನ್ನು ಕಂಡು ನಗುತ್ತಿದ್ದರು. ತಮ್ಮ ಜೀವನಚರಿತ್ರೆಯಲ್ಲಿ, ಅಯೋಧ್ಯೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇದ್ದ ಸಾಧ್ಯತೆಗಳನ್ನು ಬಿಜೆಪಿ ಹಾಳುಗೆಡವಿತ್ತು ಎಂದು ರಾವ್ ಆರೋಪಿಸಿದ್ದರು. 1992ರವರೆಗೂ ಸಾಧುಗಳ ಜೊತೆ ನನ್ನ ಮಾತುಕತೆ ಯಾವುದೇ ಸಮಸ್ಯೆಯಿಲ್ಲದೆ ಸಾಗಿತ್ತು. ಈ ಮಾತುಕತೆಗಳ ಉದ್ದೇಶ ಯಾವುದೇ ಕೋಮು ಉದ್ವಿಗ್ನತೆ ಸೃಷ್ಟಿಸದೆ ಮತ್ತು ಕಾನೂನನ್ನು ಉಲ್ಲಂಘಿಸದೆ ರಾಮ ಮಂದಿರ ನಿರ್ಮಾಣಕ್ಕೆ ಸ್ಥಳವನ್ನು ಆಯ್ಕೆ ಮಾಡುವುದಾಗಿತ್ತು. ಆದರೆ ನಂತರ ಸಾಧುಗಳು ತರಾತುರಿಯಲ್ಲಿ ಈ ಮಾತುಕತೆಯನ್ನು ನಿಲ್ಲಿಸಿದರು.
ತಿಂಗಳುಗಳ ನಂತರ ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದರು ಮತ್ತು ಆಮೂಲಕ ದೇಶಕ್ಕೆ ಅವಮಾನವಾಗುವಂತೆ ಮಾಡಿದರು. ಸಾಧುಗಳು ತಮ್ಮ ಮಾತಿನಿಂದ ಯಾಕೆ ಹಿಂದೆ ಸರಿದರು ಎಂಬ ಬಗ್ಗೆ ರಾವ್ ಯೋಚಿಸುತ್ತಿದ್ದರು. ಕೊನೆಯದಾಗಿ ಇದು ಬಿಜೆಪಿಯ ತಂತ್ರವಾಗಿತ್ತು ಎಂದು ತಿಳಿಯಿತು ಎಂದು ಆಧುನಿಕ ರಾಜಕೀಯದ ಚಾಣಕ್ಯ ಎಂದು ಕರೆಸಿಕೊಳ್ಳುವ ರಾವ್ ತಿಳಿಸಿದ್ದರು. ಏನೇ ಆದರೂ, ಬಿಜೆಪಿಯಿಂದ ಅದರಲ್ಲೂ ಪ್ರಧಾನಿಯಿಂದ ಕಾಂಗ್ರೆಸ್ ಬಹಳಷ್ಟು ಕಲಿಯಲು ಬಾಕಿಯಿದೆ.
ಪಟೇಲರ 111 ದಿನಗಳು!
ರಾಜ್ಯಪಾಲರಾಗಿ 111 ದಿನಗಳು ಎಷ್ಟು ಪ್ರಾಮುಖ್ಯತೆ ಹೊಂದಿರಬಹುದು? ಬಹಳಷ್ಟು ಎಂದು ಕಾಣುತ್ತದೆ. ಕನಿಷ್ಠಪಕ್ಷ ಮಧ್ಯಪ್ರದೇಶದ ರಾಜ್ಯಪಾಲರ ಮಟ್ಟಿಗಂತೂ ಹೌದು. ಇಲ್ಲಿನ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ 111 ದಿನಗಳ ಅಧಿಕಾರಾವಧಿಯ ಮೇಲೆ ಬೆಳಕು ಚೆಲ್ಲುವ ಕಿರು ಪುಸ್ತಕವನ್ನು ಭೋಪಾಲ್‌ನಲ್ಲಿರುವ ರಾಜ ಭವನ ಮುದ್ರಿಸಿದೆ. ‘ಅಭ್ಯದಯ್-ಒಂದು ಪ್ರೇರಣೆ, ಮಧ್ಯ ಪ್ರದೇಶದ ರಾಜ್ಯಪಾಲೆಯಾಗಿ ಆಕೆಯ ದಿನಗಳು’ ಎಂಬುದು ಈ ಪುಸ್ತಕದ ಹೆಸರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಗುಜರಾತ್ ರಾಜ್ಯಪಾಲ ಒ.ಪಿ ಕೊಹ್ಲಿ, ಆನಂದಿಬೆನ್‌ರನ್ನು ಈ ಪುಸ್ತಕದಲ್ಲಿ ಶ್ಲಾಘಿಸಿದ್ದಾರೆ. ರಾಜಕೀಯದ ಗಲ್ಲಿಗಳಲ್ಲಿ ಕೇಳಿಬರುತ್ತಿರುವ ಮಾತುಗಳ ಪ್ರಕಾರ 111 ಆನಂದಿಬೆನ್ ಅವರ ಅದೃಷ್ಟದ ಸಂಖ್ಯೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಕೂಡಾ ಅದೃಷ್ಟ ಸಂಖ್ಯೆಯನ್ನು ಹುಡುಕಬೇಕೆಂದು ಅನಿಸುವುದಿಲ್ಲವೇ? ಇತರ ಬಿಜೆಪಿ ರಾಜ್ಯಪಾಲರು ಕೂಡಾ ಆನಂದಿಬೆನ್‌ರಿಂದ ಸ್ಫೂರ್ತಿ ಪಡೆದು ತಮ್ಮ ಸಾಧನೆಗಳ ಬಗ್ಗೆ ಪುಸ್ತಕಗಳನ್ನು ಬರೆಯಲು ಆರಂಭಿಸಬೇಕು. ರಾಜ್ಯಪಾಲರ ಅವಧಿ ಮುಗಿದ ನಂತರ ಯಾರೂ ಅವರನ್ನು ನೆನಪಿಸುವುದಿಲ್ಲ. ಆದರೆ ಪುಸ್ತಕಗಳು? ಅದು ಸದಾ ಇರುತ್ತವೆ.
ರಾಹುಲ್ ವಾಪಸ್, ಇಷ್ಟು ಸಮಯ ಎಲ್ಲಿದ್ದರು?
ಕಳೆದ ಹದಿನೈದು ದಿನಗಳಿಂದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ, ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂಬುದು. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಅಮಿತ್ ಶಾ ರಾಜ್ಯಗಳ ಪ್ರವಾಸದಲ್ಲಿ ತೊಡಗಿದ್ದರೆ ಕಾಂಗ್ರೆಸ್ ಅಧ್ಯಕ್ಷ ಮಾತ್ರ ಎಲ್ಲೂ ಕಾಣಿಸುತ್ತಿರಲಿಲ್ಲ. ರಾಹುಲ್ ಗಾಂಧಿಯ ತಾತ್ಕಾಲಿಕ ವಲಸೆ ಹೋಗುವ ಹವ್ಯಾಸ ಹಿಂದೆಯೂ ಕಾಂಗ್ರೆಸ್‌ಗೆ ಮುಜುಗರವುಂಟು ಮಾಡಿದೆ. ಹಾಗಾಗಿ ಈ ವಿಷಯದಲ್ಲಿ ಏನನ್ನೂ ಮಾತನಾಡದಿರಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ನಾಯಕರು ವೌನವಾಗಿರಲು ಮತ್ತೊಂದು ಕಾರಣ ತಮ್ಮ ಮುಖ್ಯಸ್ಥನ ಪ್ರಯಾಣ ಯೋಜನೆಗಳ ಬಗ್ಗೆ ಅವರಿಗೆ ಏನನ್ನೂ ತಿಳಿಸದಿರುವುದೂ ಆಗಿರಬಹುದು. ಭಾರತದಲ್ಲಿರುವಾಗ ಪಕ್ಷಕ್ಕಾಗಿ ಶ್ರಮವಹಿಸಿದರೂ ರಾಹುಲ್ ಗಾಂಧಿಯ ಈ ಪದೇಪದೆ ದೇಶದಿಂದ ಮರೆಯಾಗುವ ಹವ್ಯಾಸ ಅವರಿಗೆ ದೇಶದ ಅತ್ಯಂತ ಹಳೆಯ ಪಕ್ಷದ ಮುಖ್ಯಸ್ಥನಾಗಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಭಾವನೆ ಮೂಡುವಂತೆ ಮಾಡುತ್ತದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೇ ಒಪ್ಪುತ್ತಾರೆ. ಆದರೆ ಈ ಕಠಿಣ ಪ್ರಶ್ನೆಯನ್ನು ರಾಹುಲ್ ಗಾಂಧಿಯಲ್ಲಿ ಕೇಳುವುದಾದರೂ ಯಾರು?