ವಿಶ್ವದ ಮೊತ್ತ ಮೊದಲ ಹೈ ಜಂಪ್ ಅಥ್ಲೀಟ್ ಯಾರು ಗೊತ್ತಾ?

Update: 2018-07-14 18:30 GMT

ಅಸ್ಸಾಮಿನ ಹುಡುಗಿ ಹಿಮಾ ದಾಸ್ ಓಟದಲ್ಲಿ ಚಿನ್ನದ ಪದಕ ಗೆದ್ದು, ದೇಶದ ಹೆಸರನ್ನು ವಿಶ್ವಾದ್ಯಂತ ಸಾರಿದ್ದು ಕೇಳಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ಮೋದಿಯ ಆಡಳಿತವೇ ಆಕೆ ಚಿನ್ನ ಗೆಲ್ಲಲು ಕಾರಣ ಎನ್ನುವುದು ಪತ್ರಕರ್ತ ಎಂಜಲು ಕಾಸಿಗೆ ಸ್ಪಷ್ಟವಾಗಿತ್ತು. ಮೋದಿಯ ಮನ್ ಕಿ ಬಾತ್‌ನ ಪರಿಣಾಮವಾಗಿಯೇ ಆಕೆ ಚಿನ್ನವನ್ನು ಗೆದ್ದಳು ಎಂದು ಲೇಖನವನ್ನು ಬರೆದು, ಆ ಲೇಖನದ ಜೊತೆಗೆ, ಕೇಂದ್ರದ ಕ್ರೀಡಾ ಸಚಿವರನ್ನು ಕಾಣಲು ಹೋದ. ಸಚಿವರು ಮುಖಮುಚ್ಚಿ ಕುಳಿತಿದ್ದರು. ಕಾಸಿಗೆ ಅಚ್ಚರಿಯಾಯಿತು. ‘‘ಸಾರ್...ಭಾರತ ವಿಶ್ವಗುರುವಾಗುವತ್ತ ಮುನ್ನಡೆಯುತ್ತಿದೆ ಸಾರ್....ನಮ್ಮ ದೇಶದ ಹುಡುಗಿ ಚಿನ್ನದ ಪದಕ ಪಡೆದಿದ್ದಾರೆ...ಮೋದಿಯ ಮಾರ್ಗದರ್ಶನವೇ ಅದಕ್ಕೆ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ....ಅವರಿಗೆ ಏನಾದರೂ ಒಂದೆರಡು ಕೋಟಿ ರೂಪಾಯಿ ಘೋಷಣೆ ಮಾಡಿ ಸಾರ್...’’ ಕಾಸಿ ಸಲಹೆ ನೀಡಿದ.

ಕ್ರೀಡಾ ಸಚಿವರು ಒಮ್ಮೆಲೆ ಮುಖ ಮೇಲೆತ್ತಿ ಸಿಡಿಮಿಡಿ ಗುಟ್ಟ ತೊಡಗಿದರು....‘‘ಏನ್ರೀ...ಸಾಧನೆ? ಎಲ್ಲಿ ಸಾಧನೆ? ಆ ಹುಡುಗಿಯಿಂದಾಗಿ ನಮ್ಮ ಮೋದಿ ಸಾಹೇಬರಿಗೆ ಅದೆಷ್ಟು ಅವಮಾನವಾಯಿತು ಗೊತ್ತಾ? ಭಾರತ ವಿಶ್ವದ ಮುಂದೆ ತಲೆಯೆತ್ತದಂತೆ ಮಾಡಿಬಿಟ್ಟಳು ಆ ಹುಡುಗಿ...’’

ಸಚಿವರ ಮಾತು ಕೇಳಿ ಕಾಸಿಗೆ ಎದೆಯೇ ಬಾಯಿಗೆ ಬಂದಂತಾಯಿತು....‘‘ಸಾರ್...ಮೋದಿ ಸರಕಾರದ ವಿರುದ್ಧ ಆಕೆ ಏನಾದರೂ ಕಮೆಂಟ್ ಮಾಡಿದಳಾ ಸಾರ್?’’

‘‘ಏ ಅದಲ್ಲಾರೀ...ವಿದೇಶದಲ್ಲಿ ಪತ್ರಕರ್ತರ ಮುಂದೆ ತಪ್ಪು ತಪ್ಪು ಇಂಗ್ಲಿಷ್‌ನಲ್ಲಿ ಮಾತನಾಡಿದಳು ಆಕೆ. ಭಾರತೀಯರಿಗೆ ಇಂಗ್ಲಿಷ್ ಗೊತ್ತಿಲ್ಲ ಎನ್ನುವುದನ್ನು ವಿಶ್ವಕ್ಕೇ ಆಕೆ ಹೇಳಿ ಬಿಟ್ಟಳು....ಎಂತಹ ಅವಮಾನ...’’ ಸಚಿವರು ಕಣ್ಣೀರಿಟ್ಟರು. ಕಾಸಿಗೆ ಈಗ ಅರ್ಥವಾಯಿತು.

‘‘ಸಾರ್...ಆಕೆಯ ಕ್ರೀಡಾ ಸಾಧನೆಯೇ ಮುಖ್ಯವಲ್ಲವೆ? ಓಟದಲ್ಲಿ ಆಕೆ ಚಿನ್ನದ ಪದಕ ಪಡೆದಿರುವುದು ಸಣ್ಣ ಸಾಧನೆಯೆ?’’ ಕಾಸಿ ಪ್ರತಿಯಾಗಿ ಕೇಳಿದ. ‘‘ಏನ್ರೀ ಸಾಧನೆ? ಲಂಡನ್‌ನಲ್ಲಿ ಎರಡು ವರ್ಷದ ಮಗು ಕೂಡ ಎಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತದೆ ಗೊತ್ತಾ ನಿಮಗೆ? ಅದಕ್ಕೇ ಅವರು ಅಭಿವೃದ್ಧಿಯಾಗಿರುವುದು. ಸೂಪರ್ ಪವರ್ ರಾಷ್ಟ್ರವಾಗಬೇಕು ಎನ್ನುವುದು ಮೋದಿಯವರ ಕನಸು. ಈಗಾಗಲೇ ಬುಲೆಟ್ ಟ್ರೈನ್, ಅದು ಇದು ಎಂದು ಸುದ್ದಿ ಮಾಡಿ ಭಾರತದ ವರ್ಚಸ್ಸನ್ನು ಹೆಚ್ಚಿಸಿದ್ದಾರೆ. ಇದೀಗ ವಿಶ್ವದ ಎಲ್ಲರಿಗೂ ನಮಗೆ ಇಂಗ್ಲಿಷ್ ಸರಿಯಾಗಿ ಮಾತನಾಡುವುದಕ್ಕೆ ಗೊತ್ತಿಲ್ಲ ಎನ್ನುವುದು ಸಾಬೀತಾಯಿತಲ್ಲ?’’

‘‘ಆದರೆ ಗೋಲ್ಡ್ ಮೆಡಲ್ ದಾಖಲೆ ಬರೆಯುವುದು ಸಣ್ಣದೇನೂ ಅಲ್ಲ...ಅವರದು ಸಾಧನೆ ಓಟದಲ್ಲಿ ಗುರುತಿಸಬೇಕಲ್ಲ....’’ ಕಾಸಿ ಸಚಿವರನ್ನು ಸಮಾಧಾನಿಸಲು ಯತ್ನಿಸಿದ.

‘‘ಏನ್ರೀ...ಭಾರತದಲ್ಲಿ ಈವರೆಗೆ ಓಟದಲ್ಲಿ ಯಾರೂ ಸಾಧಿಸದ್ದು ಅವರೇನು ಮಾಡಿದ್ದಾರೆ? ವಿಜಯ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಇವರೆಲ್ಲ ಕಡಿಮೆ ಓಟಗಾರರೇ? ಅವರಷ್ಟು ವೇಗವಾಗಿ ಓಡಿದ ಓಟಗಾರರು ಬೇರೆ ಯಾರಿದ್ದಾರೆ? ಇಂದಿಗೂ ಅವರನ್ನು ಬೆಂಬೆತ್ತಲು ನಮ್ಮ ಸಿಬಿಐಗೆ ಆಗಿಲ್ಲ. ಅಂತಹ ಮಹಾನ್ ಓಟಗಾರರನ್ನು ಸೃಷ್ಟಿಸಿದ ಕೀರ್ತಿ ನಮ್ಮ ಮೋದಿಯವರದ್ದು. ಅವರೆಲ್ಲ ಎಷ್ಟು ಚೆನ್ನಾಗಿ ವಿದೇಶಗಳ ಮಾಧ್ಯಮಗಳಲ್ಲಿ ಇಂಗ್ಲಿಷ್ ಮಾತನಾಡುತ್ತಾರೆ? ಅವರು ಮಾತನಾಡುತ್ತಿರುವ ಇಂಗ್ಲಿಷ್‌ನಿಂದಾಗಿಯೇ ಈ ದೇಶದ ಮಾನ ಮರ್ಯಾದೆ ಇಷ್ಟಾದರೂ ಉಳಿದಿರುವುದು....’’ ಸಚಿವರು ಹೇಳಿದರು. ಕಾಸಿಗೆ ಈಗ ಅರ್ಥವಾಗತೊಡಗಿತು.

‘‘ಆದರೆ ಭಾರತ ಒಲಿಂಪಿಕ್‌ನಂತಹ ಪಂದ್ಯದಲ್ಲಿ ಪದಕಗಳನ್ನು ಪಡೆಯುವಲ್ಲಿ ಹಿಂದೆ ಉಳಿದಿದೆ...ಇದು ಭಾರತಕ್ಕೆ ಅವಮಾನವಲ್ಲವೆ?’’ ಕಾಸಿ ಕೇಳಿದ.

‘‘ಯಾವುದ್ರೀ ಅವಮಾನ. ಪುರಾಣ ಕಾಲದಲ್ಲಿ ಹನುಮಂತ ಓಡಿದ್ದು ಮಾತ್ರವಲ್ಲ, ಕಡಲಿನಾಚೆಗೆ ಹೈಜಂಪ್ ಮಾಡಿದ್ದಾನೆ. ವಿದೇಶಿಯರು ಯಾರಾದರೂ ಅಷ್ಟು ದೂರ ಹಾರಿದ್ದಾರಾ? ವಿಶ್ವದ ಮೊತ್ತ ಮೊದಲ ಹೈಜಂಪ್ ಕ್ರೀಡಾಪಟು ಹುಟ್ಟಿದ್ದು ನಮ್ಮ ದೇಶದಲ್ಲಿ. ಭೀಮ ವಿಶ್ವದ ಮೊತ್ತ ಮೊದಲ ಬಾಡಿ ಬಿಲ್ಡರ್. ಇವೆಲ್ಲವನ್ನು ನಾವು ವಿಶ್ವದ ಮುಂದೆ ಬಹಿರಂಗ ಪಡಿಸಬೇಕು....’’ ಸಚಿವರು ಹೇಳಿದರು.
‘‘ಸಾರ್...ಈಗ ಚಾಂಪಿಯನ್‌ಗಳನ್ನು ಮಾಡಲು ಏನು ಮಾಡಬೇಕು...’’ ಕಾಸಿ ಪರಿಹಾರ ಕೇಳಿದ.
‘‘ನೋಡ್ರೀ...ಕ್ರಿಕೆಟ್‌ಗಾಗಿ ಭಾರತ ವಿಶ್ವದಲ್ಲೇ ಗುರುತಿಸಿಕೊಳ್ಳುತ್ತಿದೆ. ಯಾಕೆ ಹೇಳಿ?’’
‘‘ಯಾಕೆ ಸಾರ್?’’ ಕಾಸಿ ಮುಗ್ಧನಂತೆ ಕೇಳಿದ.
‘‘ಕ್ರಿಕೆಟ್ ಆಡುವವರಿಗೆಲ್ಲ ಚೆನ್ನಾಗಿ ಇಂಗ್ಲಿಷ್ ಬರುತ್ತೆ. ಅದಕ್ಕೆ...’’ ಸಚಿವರು ಸಂಶೋಧಿಸಿದ ಕಾರಣವನ್ನು ಬಹಿರಂಗಪಡಿಸಿದರು.

‘‘ಹಾಗಾದರೆ ಚೆನ್ನಾಗಿ ಇಂಗ್ಲಿಷ್ ಗೊತ್ತಿದ್ದರೆ ಒಲಿಂಪಿಕ್‌ನಲ್ಲಿ ಗೋಲ್ಡ್ ಮೆಡಲ್ ತೆಗೆಯಬಹುದಾ?’’ ‘‘ನೋಡ್ರೀ...ಇಂಗ್ಲಿಷ್ ಮೊದಲು. ಗೋಲ್ಡ್ ಮೆಡಲ್ ಆನಂತರ. ದೇಶದ ವರ್ಚಸ್ಸು ಜಾಸ್ತಿಯಾಗಬೇಕಾದರೆ ನಮ್ಮ ಕ್ರೀಡಾಪಟುಗಳು ಚೆಂದ ಇಂಗ್ಲಿಷ್ ಮಾತನಾಡಬೇಕು. ಆದುದರಿಂದ ಎಲ್ಲ ಕ್ರೀಡಾಳುಗಳಿಗೆ ಇಂಗ್ಲಿಷ್ ಕಡ್ಡಾಯ ಮಾಡಲಾಗುತ್ತದೆ. ಇಂಗ್ಲಿಷ್‌ನಲ್ಲಿ ಮೆರಿಟ್‌ನಲ್ಲಿ ಉತ್ತೀರ್ಣರಾದವರನ್ನು ಅಥ್ಲೆಟಿಕ್‌ಗೆ ಆಯ್ಕೆ ಮಾಡಲಾಗುತ್ತದೆ. ಒಲಿಂಪಿಕ್‌ನಲ್ಲಿ ಭಾಗವಹಿಸುವವರಿಗೆ ಇಂಗ್ಲಿಷ್ ಭಾಷೆಯ ಪರೀಕ್ಷೆಯನ್ನು ಎದುರಿಸುವುದು ಕಡ್ಡಾಯ ಮಾಡಲಾಗುತ್ತದೆ....’’ ಸಚಿವರು ಘೋಷಣೆ ಮಾಡಿದರು. ‘‘ಮಹಾಭಾರತ, ರಾಮಾಯಣದ ಕಾಲದಲ್ಲಿ ಇಂಗ್ಲಿಷ್ ಮಾತನಾಡುತ್ತಿರಲಿಲ್ಲವಲ್ಲ?’’ ಕಾಸಿ ಹೊಸ ವಾದ ಮುಂದಿಟ್ಟ.

‘‘ನೋಡ್ರೀ...ಆ ಕಾಲದಲ್ಲಿ ಕ್ರೀಡಾಳುಗಳಿಗೆ ಸಂಸ್ಕೃತ ಕಲಿಯುವುದು ಅತ್ಯಗತ್ಯವಾಗಿತ್ತು. ಕ್ರೀಡಾಳುಗಳು ಪದಕ ಗೆದ್ದಾಗ ಸಂಸ್ಕೃತದಲ್ಲೇ ಪ್ರಶ್ನೆ ಮಾಡುತ್ತಿದ್ದರು. ಇಂಟರ್ವ್ಯೆ ಕೂಡ ಸಂಸ್ಕೃತದಲ್ಲೇ ಇತ್ತು. ವಿದೇಶಗಳಿಂದ ಬಂದವರಲ್ಲೂ ಸಂಸ್ಕೃತದಲ್ಲೇ ಪ್ರಶ್ನೆ ಕೇಳಲಾಗುತ್ತಿತ್ತು. ಅಂದು ಇಂಟರ್ನೆಟ್, ವ್ಯಾಟ್ಸ್ ಆ್ಯಪ್‌ನಲ್ಲಿ ಸಂಸ್ಕೃತವನ್ನೇ ಬಳಸಲಾಗುತ್ತಿತ್ತು. ಕಾಂಗ್ರೆಸ್‌ನೋರು ಬಂದು ಅದನ್ನೆಲ್ಲ ಬುಡಮೇಲು ಮಾಡಿದರು. ಇದೀಗ ಸೂಪರ್ ಪವರ್ ಆಗಬೇಕಾದರೆ ಇಂಗ್ಲಿಷ್ ಕಲಿಯಲೇಬೇಕು. ನಮ್ಮ ಮಕ್ಕಳು ಹುಟ್ಟಿದಾಕ್ಷಣ ಇಂಗ್ಲಿಷ್‌ನಲ್ಲೇ ಅಳಬೇಕು...ಆಗ ಮಾತ್ರ ಭಾರತ ವಿಶ್ವ ಗುರು ಆಗಲು ಸಾಧ್ಯ...’’ ಸಚಿವರು ಹೇಳಿದರು.

‘‘ಸಾರ್, ಮೋದಿಯವರಿಗೆ ಸರಿಯಾಗಿ ಇಂಗ್ಲಿಷ್ ಬರಲ್ಲ....ಅಂತಾರಲ್ಲ, ನಿಜವಾ?’’ ಕಾಸಿ ಮೆಲ್ಲಗೆ ಪ್ರಶ್ನೆಯನ್ನು ಮುಂದಿಟ್ಟ.
ಸಚಿವರ ಕಣ್ಣು ದೊಡ್ಡದಾಯಿತು ‘‘ನೋಡ್ರೀ...ಇಂಗ್ಲಿಷ್ ಬರದೇ ವಿದೇಶಗಳಲ್ಲಿ ನರೇಂದ್ರ ಮೋದಿಯವರ ಭಾಷಣ ಜನಪ್ರಿಯವಾಗಿದೆಯಾ? ಇಲ್ಲ ಅಂದರೆ ಅವರು ಚಪ್ಪಾಳೆ ತಟ್ಟುತ್ತಿದ್ದರಾ?’’
‘‘ಅರ್ಥವಾಗದ ಕಾರಣಕ್ಕಾಗಿ ಅವರೆಲ್ಲ ಮೆಚ್ಚಿದ್ದಾರೆ ಎಂಬ ವದಂತಿ ಇದೆ...’’ ಕಾಸಿ ಕೇಳಿದ.

‘‘ಅದೆಲ್ಲ ವಾಟ್ಸ್ ಆ್ಯಪ್ ವದಂತಿ. ಇನ್ನು ಮುಂದೆ ವಾಟ್ಸ್ ಆ್ಯಪ್, ಫೇಸ್‌ಬುಕ್‌ನಲ್ಲಿ ಪೋಸ್ಟ್‌ಕಾರ್ಡ್‌ನಲ್ಲಿ ಬರೆದದ್ದನ್ನು ಮಾತ್ರ ಓದುವಂತೆ ನಾನು ಮಾಧ್ಯಮಗಳ ಮೇಲೆ ನಿಗಾ ಹಾಕಲಿದ್ದೇವೆ....ಮೋದಿಯವರಿಗೆ ಇಂಗ್ಲಿಷ್ ಗೊತ್ತಿಲ್ಲ ಎನ್ನುವ ವದಂತಿಯನ್ನು ಹರಡುವವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವ ಹೊಸ ಕಾನೂನನ್ನೂ ತರುತ್ತೇವೆ....’’
ಸಚಿವರು ಹೀಗೆ ಹೇಳಿದ್ದೇ ಪತ್ರಕರ್ತ ಕಾಸಿ ಗೋಲ್ಡ್ ಮೆಡಲ್ ಹಿಮಾ ದಾಸ್‌ಗಿಂತ ವೇಗವಾಗಿ ಅಲ್ಲಿಂದ ಓಡತೊಡಗಿದ.

chelayya@gmail.com

Writer - *ಚೇಳಯ್ಯ

contributor

Editor - *ಚೇಳಯ್ಯ

contributor

Similar News