ಹಿಂದೀ ರಾಜಕಾರಣದ ಗೊಂದಲ

Update: 2018-07-26 18:50 GMT

ಭಾಗ-3

ಈ ಹಿಂಸೆ-ಅಹಿಂಸೆಯ ವಾದದಲ್ಲಿ ಗಾಂಧಿ ಅವರ ಪಕ್ಷ ಹಿಡಿಯುವವರು, ಗಾಂಧಿ ಅವರು ಪ್ರಾಮಾಣಿಕರೆಂಬ ವಾದವನ್ನು ಮುಂದು ಮಾಡುತ್ತಾರೆ. ಈ ಸಮಸ್ಯೆಯ ನಿರ್ಣಯಕ್ಕೆ ಬರುವಲ್ಲಿ ಪ್ರಾಮಾಣಿಕತೆಗೆ ಮಹತ್ವವೇನೂ ಇಲ್ಲವೆಂದು ನಮಗನಿಸುತ್ತದೆ. ಗಾಂಧಿ ಅವರ ಪ್ರಾಮಾಣಿಕತೆ, ಅಪ್ರಾಮಾಣಿಕತೆ ಬಗ್ಗೆ ವಿಚಾರ ಮಾಡುವುದರಿಂದ ಪ್ರಯೋಜನವೇನೂ ಇಲ್ಲ. ಅವರಂಥ ಪ್ರಾಮಾಣಿಕರು ಮುಗ್ಧರೋ, ಮೂರ್ಖರೋ ಇರುವ ಶಕ್ಯತೆ ಇದೆಯೆಂಬುದನ್ನು ಮರೆಯಲಾಗದು. ಅವರ ಅಹಿಂಸೆಯ ಬಗ್ಗೆ ಯೋಚಿಸುವಾಗ ಎರಡು ಮಹತ್ವದ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

ಒಂದೆಂದರೆ, ಅಹಿಂಸೆ ಅಥವಾ ನಿಃಶಸ್ತ್ರ ಪ್ರತೀಕಾರ, ಗೋಸ್‌ಬಾರಿ ಇಲ್ಲವೇ ಅವಹೇಳನದ ವಿಷಯವಲ್ಲ. ಕೆಲವರು ನಿರ್ಯೋಚನೆಯಿಂದಿರುತ್ತಾರೆ. ಅವರ ಪ್ರಕಾರ ಎಲ್ಲ ದೇಶಗಳ ರಾಜಕಾರಣವೂ ದೋಷಪೂರ್ಣವಾಗಿರುತ್ತದೆ. ಎಲ್ಲ ರಾಷ್ಟ್ರಗಳೂ ಸ್ವಾರ್ಥಲೋಲುಪವಾಗಿರುತ್ತವೆ ಮತ್ತು ಅವರ ದೋಷಪೂರಿತ, ಸ್ವಾರ್ಥಲಂಪಟ ರಾಜಕಾರಣದಿಂದ ಹೊರಗುಳಿಯುವುದು ಸಾಧ್ಯವಲ್ಲವಾದ್ದರಿಂದ, ಯುದ್ಧವೋ, ಶಾಂತಿಯೋ ಎಂಬ ವಿಷಯದ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ಯುದ್ಧದಂತಹ ಭಯಂಕರ ಆಪತ್ತು, ನಿಸರ್ಗ ಪ್ರಕೋಪದಂತೆಯೇ ಎಂದು ಮನಗಂಡು ಸುಮ್ಮನಿರುವುದಕ್ಕಿಂತ ಮಾಡಬಹುದಾದ್ದು ಏನೂ ಇಲ್ಲ.

ಇನ್ನೊಂದು ವಿಚಾರದಂತೆ ಯುದ್ಧವೆಂಬುದು ಅನಿವಾರ್ಯ. ಅಷ್ಟೇ ಅಲ್ಲ, ಇಷ್ಟವೂ ಕೂಡ. ಅಂತಹವರಿಗೆ ರಾಷ್ಟ್ರವೆಂದರೆ ದೇವರಂತೆ. ಅದರ ಸಮ್ಮಾನ, ವೈಭವ ಮತ್ತು ವ್ಯಾಪ್ತಿ ಹೆಚ್ಚಿಸಲು ಯುದ್ಧ ಮಾಡುವ ಪ್ರಸಂಗ ಬಂದರೆ, ಹಿಂಜರಿಯದೆ ರಾಷ್ಟ್ರದ ಉತ್ಕೃಷ್ಟಕ್ಕಾಗಿ ಎಲ್ಲರೂ ಯುದ್ಧದಲ್ಲಿ ಪಾಲ್ಗೊಳ್ಳಬೇಕು. ಆ ಯುದ್ಧಕ್ಕಾಗಿ ದೇಶದ ಅಸಂಖ್ಯ ಕೋಟಿ ಧನ, ದೈವೀ ಸಂಪತ್ತು ನಾಶವಾದರೂ ಅಡ್ಡಿಯಿಲ್ಲ. ‘‘ಯುದ್ಧದ ಕಥೆಯೇ ರಮ್ಯ’’ ಎಂಬ ದೃಷ್ಟಿಯಿಂದ ಅದೆಲ್ಲವೂ ಸರಿಯೇ. ಯುದ್ಧದಲ್ಲಿ ಪಾಶವೀ ಶಕ್ತಿಯ ಪ್ರಯೋಗವಾಗುವುದರಿಂದ ಅದರ ಘೋರ ಪರಿಣಾಮ ನೋಡಿದವರಿಗೆ, ಕೇಳಿದವರಿಗೆ, ಅನುಭವಿಸಿದವರಿಗೆ ಯುದ್ಧವೆಂದರೆ ಮನುಷ್ಯ ಮಾತ್ರದವರಿಗೆ ಎಂತಹ ಭಯಂಕರ ಆಪತ್ತೆಂಬುದನ್ನು ಹೇಳಬೇಕಾಗಿಲ್ಲ. ಹಿಟ್ಲರ್‌ನಂತಹ ನಿರ್ದಯ ಕಾಲಪುರುಷನ ಮನೋಭಾವನೆ, ಹಿಂದೂಸ್ಥಾನದ ಆರ್ಯಸಂಸ್ಕೃತಿಯ ಅಭಿಮಾನಿಗಳ ಮನೋಭಾವನೆಯನ್ನು ಬದಿಗಿಟ್ಟರೆ, ಜಗದಲ್ಲಿ ಎಲ್ಲಿಯೂ, ಪಾಶವೀ ಶಕ್ತಿ ಮತ್ತು ಯುದ್ಧ ಒಳ್ಳೆಯದೆನ್ನುವವರು ಒಬ್ಬರಾದರೂ ಸಿಗಲಿಕ್ಕಿಲ್ಲ.

ಯುದ್ಧ ಮತ್ತು ಅಹಿಂಸೆಯ ಬಗೆಗಿನ ಚರ್ಚೆಯಲ್ಲಿ ನಿಃಶಸ್ತ್ರ ಪ್ರತೀಕಾರದ ಯೋಜನೆ ಗಾಂಧಿ ಅವರೊಬ್ಬರದೇ ಎಂದು ಜನರು ತಿಳಿದಿದ್ದಾರೆ. ಆದರೆ ಇದು ಬರೀ ತಪ್ಪು ತಿಳುವಳಿಕೆ. ಗಾಂಧಿ ಅವರೊಡನೆ ಸಹಮತ ಹೊಂದಿದ ಅನೇಕರು, ಯುದ್ಧದ ಪಾಶವೀ ಶಕ್ತಿಯ ವಿರುದ್ಧವಿದ್ದಾರೆ, ನಿಃಶಸ್ತ್ರ ಪ್ರತೀಕಾರದ ಯಶಸ್ಸಿನ ಬಗ್ಗೆ ಅವರಲ್ಲಿ ವಿಶ್ವಾಸವಿದೆ. ಸುಪ್ರಸಿದ್ಧ ಬರ್ಟ್ ರ್ಯಾಂಡ್ ರಸೆಲ್, ಅವರು ಅದಕ್ಕೊಂದು ಉದಾಹರಣೆ. ಪ್ರೊಫೆಸರ್ ಬರ್ಟ್‌ರ್ಯಾಂಡ್ ರಸೆಲ್‌ರಂತಹ ಜಗದ್ವಿಖ್ಯಾತ ವಿದ್ವ್ವಾಂಸರೇ, ಕಳೆದ ಯುದ್ಧದಲ್ಲಿ ಬ್ರಿಟಿಷ್ ಜನತೆಯೆದುರು ‘‘ಅಟ್ಲಾಂಟಿಕ್ ಮಂತ್ಲೀ’’ ಎಂಬ ಮಾಸಿಕದ 1915ರ ಆಗಸ್ಟ್ ತಿಂಗಳ ಅಂಕಣದಲ್ಲಿ, ಗಾಂಧಿ ಅವರಂತಹುದೇ ಆದ ಯೋಜನೆಯನ್ನು ಮಂಡಿಸಿದ್ದರು. ‘‘ಬ್ರಿಟಿಷರು ನಿಃಶಸ್ತ್ರ ಪ್ರತೀಕಾರ ಮಾಡುವುದಾಗಿ ಹೇಳಿದರೆ, ಇಂಗ್ಲೆಂಡ್ ಮೇಲೆ ಆಕ್ರಮಣ ಮಾಡುವ ಮನೋಧೈರ್ಯ ಜರ್ಮನರಿಗಾಗದು. ಸೈನ್ಯವಿಲ್ಲದ, ನೌಕಾಬಲವಿಲ್ಲದ ನಿಃಶಸ್ತ್ರ ಇಂಗ್ಲಿಷ್ ಪ್ರಜೆಗಳ ಮೇಲೆ ಆಕ್ರಮಣ ಮಾಡಲು ಜರ್ಮನಿಗರಿಗೆ ಕಾರಣವೇ ಇಲ್ಲದಾಗಿ ಅವರು ಹಿಂದಿರುಗ ಬೇಕಾಗುವುದು. ಹೀಗೆ ಪರರ ಆಕ್ರಮಣದಿಂದ ದೇಶವನ್ನು ರಕ್ಷಿಸಬಹುದು.’’

ಪ್ರೊ.ಬರ್ಟ್‌ರ್ಯಾಂಡ್ ರಸೆಲ್ ಮತ್ತು ಗಾಂಧಿ ಅವರ ಯೋಜನೆಯಲ್ಲಿ ಏನೂ ವ್ಯತ್ಯಾಸವಿಲ್ಲ. ವ್ಯತ್ಯಾಸವೆಂದರೆ, ಪ್ರೊ. ರಸೆಲ್ ಅವರು ತಮ್ಮ ಯೋಜನೆಯನ್ನು ಜಾರಿಗೆ ತರಲು ಒಂದು ಪೀಳಿಗೆಯ ಅವಕಾಶವಿತ್ತಿದ್ದರು. ನಿಃಶಸ್ತ್ರ ಪ್ರತೀಕಾರದ ತತ್ವದ ಶಿಕ್ಷಣವನ್ನು ಒಂದು ಪೀಳಿಗೆ ಪರ್ಯಂತ ಜನರಿಗಿತ್ತ ಬಳಿಕವೇ ಈ ಯೋಜನೆಯನ್ನು ಜಾರಿಗೆ ತರಬೇಕೆಂದು ವ್ಯವಹಾರಬದ್ಧ ನಿರ್ಬಂಧ ಹೇರಿದ್ದರು. ಗಾಂಧಿ ಅವರು, ಒಂದು ಪೀಳಿಗೆ ಯೇನು, ಒಂದು ಘಳಿಗೆಯ ಅವಕಾಶವನ್ನು ಕೊಡಲೂ ಸಿದ್ಧರಿರಲಿಲ್ಲ. ಅವರ ಈ ಆತ್ಯಂತಿಕವಾದ ವಿಚಾರಸರಣಿಯ ದೋಷ ಅವರಿಗೆ ತಟ್ಟುತ್ತದೆ.

ಜಗತ್ತಿಗೆ ಮಾದರಿಯಾಗಲು ಹಿಂದೂಸ್ಥಾನದ ಜನರು ತಮ್ಮ ಬಲಿ ಕೊಡಲೇಕೆ? ಆದರೆ ಪ್ರೊ. ಬರ್ಟ್‌ರ್ಯಾಂಡ್ ರಸೆಲ್‌ರಂಥ ವ್ಯವಹಾರಿ ಮನುಷ್ಯರ ಬೆಂಬಲ ಇರುವಂತಹ ಯೋಜನೆ ಮೂರ್ಖತನದ್ದೆಂದು ಯಾರೂ ಹೇಳುವಂತಿಲ್ಲ.

ಗಾಂಧಿ ಅವರ ನಿಶ್ಯಸ್ತ್ರ ಪ್ರತೀಕಾರದ ಯೋಜನೆ ಮನುಷ್ಯ ಮಾತ್ರರಿಗೆ ಎಷ್ಟು ಉಪಯುಕ್ತವೆಂಬ ನಿರ್ಣಯ ಮಾಡುವುದು ಸುಲಭವಲ್ಲ. ಆದರೆ ಇದರಿಂದ ಯಾರಿಗೆ ಲಾಭವಾಗುತ್ತೋ, ಇಲ್ಲ ಪಾಶವಿ ಶಕ್ತಿಯಿಂದ ಯಾರಿಗೆ ಹಾನಿಯಾಗುತ್ತದೋ ಎಂದು ತುಲನಾತ್ಮಕವಾಗಿ ಅಧ್ಯಯನ ಮಾಡುವುದರಿಂದ, ಈ ಬಗ್ಗೆ ನಿರ್ಣಯ ಮಾಡುವುದು ಹೆಚ್ಚು ಕಠಿಣವಾಗಲಾರದು. ಇದು ಗಾಂಧಿ ಅವರ ವಿಚಾರ ಸರಣಿಯಾಗಿದ್ದು, ಇಲ್ಲಿ ಇದನ್ನು ಪರಾಮರ್ಶಿಸುವುದು ಅಗತ್ಯ. ಪ್ರತಿಯೊಬ್ಬರೂ ಚಿತ್ತಶುದ್ಧಿ ಮಾಡಿಕೊಂಡು, ಅಹಿಂಸೆಯ ತತ್ವವನ್ನು ಮೈಗೂಡಿಸಿಕೊಂಡರೆ ಎಲ್ಲ ಆದಂತೆ, ಎನ್ನುವುದರಲ್ಲಿ ಮುಖ್ಯವಾಗಿ ಎರಡು ದೋಷಗಳು ಕಂಡು ಬರುತ್ತವೆ. ಮೊದಲಿನದೆಂದರೆ, ಪ್ರತಿಯೊಬ್ಬರಲ್ಲಿ ಮೂಡುವ ಪ್ರಥಮ ಪ್ರಶ್ನೆ, ಈ ಯುದ್ಧದಲ್ಲಿ ಭಾಗವಹಿಸಬೇಕೋ ಬೇಡವೋ ಎಂಬದಾಗಿರದೆ, ಇದರಲ್ಲಿ ಇತರರನ್ನು ಹೇಗೆ ನೋಡಬಹುದು, ಎಂಬುದಾಗಿದೆ. ಸ್ವಾರ್ಥ ಬಿಟ್ಟು ಪರಹಿತ ಸಾಧಿಸುವ ಮಂತ್ರ ಜಪಿಸಿದರೆ, ನಿರ್ವೈರ ಮನೋದಶೆ ಸಿದ್ಧವಾಗುವುದು, ಆದರೆ ಇದರಿಂದ ಪರಾರ್ಥ ಸಾಧಿಸಲಾಗುವುದೆಂದು ಹೇಳಲಾಗದು. ಯುದ್ಧದಲ್ಲಿ ಜನಜೀವನದ ಮೇಲೆ ಆಘಾತವಾಗುತ್ತದೆ, ಸಂಕಟದಲ್ಲಿ ಬೀಳುತ್ತದೆ ಮತ್ತು ನಾಶವಾಗುವ ಸಂಭವವೂ ಇರುತ್ತದೆ. ಬೇಡವೆಂದ ಮಾತ್ರಕ್ಕೆ ಹಾಳಾಗದಿರದು. ಇನ್ನೊಂದೆಂದರೆ, ಜಗತ್ತಿನಲ್ಲಿ ಕೇವಲ ನ್ಯಾಯತತ್ವದ ಸ್ಥಾಪನೆಯಾಗಿ ಫಲವಿಲ್ಲ, ಬದಲಿಗೆ ಅದನ್ನು ಕೃತಿಗಿಳಿಸಿ, ಅದಕ್ಕೆ ಆಘಾತವಾದಾಗಲೆಲ್ಲ ಆಖಾಡಕ್ಕಿಳಿದು ಪ್ರತೀಕಾರ ಸಾಧಿಸದೆ ನಡೆಯುವಂತಿಲ್ಲ.

ನಿರ್ವೈರ ಮನೋದಶೆಯಿಂದ ಯಾವ ಉಪಯೋಗವೂ ಇಲ್ಲ. ಮನೋವೃತ್ತಿಗೆ ಸರಿಯಾಗಿ ಕೈಯಿಂದ ಕೆಲಸವಾಗಬೇಕು ಮತ್ತು ಹಾಗೆ ಕೆಲಸವಾಗಬೇಕಾದರೆ, ಶಕ್ತಿಯ ಉಪಯೋಗವಾಗದೆ ಗತ್ಯಂತರವಿಲ್ಲ.

ನಿಶ್ಯಸ್ತ್ರ ಪ್ರತೀಕಾರದ ಪುರಸ್ಕೃತರು ಶಕ್ತಿಯ ಉಪಯೋಗ ಮಾಡುವುದಿಲ್ಲವೆನ್ನುವುದು ಭ್ರಮೆಯಷ್ಟೇ. ಆದರೆ ನಮ್ಮ ಶಕ್ತಿ ನೈತಿಕವಾದುದು; ಪಾಶವಿ ಶಕ್ತಿಯಲ್ಲ ಎಂಬುದು ಮಾತ್ರ ಸರಿ. ಆದರೆ ಮೊದಲಾಗಿ, ಪಾಶವಿ ಶಕ್ತಿಯು ನೈತಿಕ ಶಕ್ತಿಗಿಂತ ಎಷ್ಟು ಭಿನ್ನ ಮತ್ತು ನೈತಿಕ ಶಕ್ತಿಯು ಪಾಶವಿ ಶಕ್ತಿಗಿಂತ ಕಡಿಮೆ ಕ್ರೂರ ಸ್ವರೂಪದ್ದೇ ಎಂದು ಯಾವಾಗಲೂ ಹೇಳಲಾಗುವುದೇ?

ಪಾಶವಿ ಶಕ್ತಿಯಿಂದ ತುಂಬ ನಾಶವಾಗುತ್ತದೆಂಬುದು ಸ್ಪಷ್ಟವಿದೆ. ಹಾಗೆಂದೇ ಹಲವರಿಗೆ ಅದರ ಬಗ್ಗೆ ತಿರಸ್ಕಾರವಿದೆ. ಆದರೆ ನೈತಿಕ ಶಕ್ತಿಯೂ ಅಷ್ಟೇ ನಾಶ ಮಾಡಬಲ್ಲುದು, ಅಷ್ಟೇ ಕ್ರೂರ ಸ್ವರೂಪದ್ದಾಗಬಹುದು ಎಂಬುದು ಹಲವರಿಗೆ ಕಾಣಿಸುವುದಿಲ್ಲ. ಆದರದು ನಿಜ. ಉದಾಹರಣೆಗೆ, ಒಂದು ಹಳ್ಳಿಯಲ್ಲಿ ಮನುಷ್ಯನೊಬ್ಬ ಭಿನ್ನ ರೀತಿಯಿಂದ, ಭಿನ್ನ ವಿಚಾರಗಳಿಂದ ಜೀವನ ಸಾಗಿಸ ತೊಡಗಿದನೆಂದುಕೊಳ್ಳುವ. ಹಳ್ಳಿಯ ಜನರು ಅವನನ್ನು ಕೊಲ್ಲಲಿಲ್ಲ. ಅದರೆ, ಅವನಿಗೆ ಅನ್ನ, ನೀರು ಸಿಗದಂತೆ ಮಾಡಿ, ಎಲ್ಲ ರೀತಿಯಿಂದಲೂ ಬಹಿಷ್ಕಾರ ಹೇರಿ, ಅವನ ಜೀವಿತವನ್ನೇ ಅಸಾಧ್ಯವಾಗಿಸಿದರು. ಬಹಿಷ್ಕಾರದಲ್ಲಿ ಕೊಲೆ ಮಾಡಲಾಗುವುದಿಲ್ಲವೆಂದು, ಅದು ಪಾಶವಿ ಶಕ್ತಿ ಅಲ್ಲ, ಎನ್ನಬಹುದೇ? ಆದರೆ, ಪ್ರತ್ಯಕ್ಷ ಕೊಲೆಗೂ ಬಹಿಷ್ಕಾರಕ್ಕೂ ಏನು ದೊಡ್ಡ ವ್ಯತ್ಯಾಸ, ಅಂದರೆ, ಉತ್ತರ ಹೇಳುವಂತಿರದು.

ಎರಡನೇ ಪ್ರಶ್ನೆ- ನೈತಿಕ ಶಕ್ತಿ ಸಾಲದಿದ್ದರೆ, ಆಗ ಪಾಶವಿ ಶಕ್ತಿಯ ಪ್ರಯೋಗ ಮಾಡಬಾರದೆ, ಎಂಬುದು. ನೈತಿಕ ಬಲಕ್ಕೆ ನಾಚಿ, ಶತ್ರು ಹಿಮ್ಮೆಟ್ಟದಿರುವುದಿಲ್ಲ, ಅವರ ಅಪೇಕ್ಷೆ ಕರಗದಿರುವುದಿಲ್ಲ, ಆಗ ಈ ಘೋರ ಪ್ರಸಂಗ ಕಳೆದು ಹೋಗುವುದು ಎಂದು ಅವರ ಅಪೇಕ್ಷೆ. ಒಂದು ವೇಳೆ ನಿಶ್ಶಸ್ತ್ರ ಪ್ರತೀಕಾರಕ್ಕೆ ಮಣಿಯದೆ ಶತ್ರು ಆಕ್ರಮಣಶೀಲರಾದರೆ ಏನು ಮಾಡುವುದು? ಪಾಶವೀಶಕ್ತಿಯ ಆಘಾತದಿಂದ ಸಾಯುವುದು ಮತ್ತು ಆತ್ಮಹತ್ಯೆ ಮಾಡುವುದು ಇವೆರಡರಲ್ಲಿ ಏನು ವ್ಯತ್ಯಾಸ? ನಿಶ್ಶಸ್ತ್ರ ಪ್ರತೀಕಾರ ಯೋಜನೆಯ ಯಶಸ್ಸು ಶತ್ರುವಿನ ಬಗ್ಗೆ ಜಾಗೃತವಾಗುವ ನೈತಿಕ ಬಲದ ಮೇಲೆ ಅವಲಂಬಿತವಾಗಿದೆ, ಇಲ್ಲವೇ ನಿಶ್ಶಸ್ತ್ರ ಪ್ರತೀಕಾರವಾದದ ಆತ್ಮಬಲ ಮತ್ತು ಶತ್ರುವಿನ ಅಸಹಕಾರ ಇವೆರಡರ ಮೇಲೆ ಅವಲಂಬಿತವಾಗಿದೆ. ಹಾಗೆಂದೇ ಅದರ ಯಶಸ್ಸಿನ ಬಗ್ಗೆ ಅವರಿಗೆ ಖಾತ್ರಿಯೆನಿಸುತ್ತದೆ. ಪ್ರೊ.ರಸೆಲ್ ಅವರ ಯೋಜನೆಯ ಮೂಲದಲ್ಲೇ ಈ ಯುಕ್ತಿವಾದವಿದೆ.

ನಿಶ್ಶಸ್ತ್ರ ಪ್ರಜೆಗಳ ಅಸಹಕಾರ ಪ್ರತೀಕಾರದ ದೃಷ್ಟಿಯು ಎಲ್ಲಿಯವರೆಗೆ ಹೋಗಬಹುದೋ ಎಂಬುದರ ಅನುಭವವನ್ನು ಹಿಂದೂಸ್ಥಾನದ ಜನರಿಗೆ ಹೇಳುವ ಅಗತ್ಯವೇ ಇಲ್ಲ. ಅಸಹಕಾರದ ಭಾಷೆ ತುಂಬ ಸುಲಭವಿದೆ. ಆದರೆ ಕೃತಿ ಕಠಿಣವಿದೆ ಮತ್ತು ಅದರ ಪರಿಣಾಮ, ಪ್ರತಿಪಕ್ಷದ ಮೇಲೆ ಕವಡೆಯಷ್ಟೂ ಆಗುವುದು ಶಕ್ಯವಿಲ್ಲವೆಂಬ ಇಪ್ಪತ್ತು ವರ್ಷಗಳ ಅನುಭವದಿಂದ ದೇಶದ ಜನತೆ ತಿಳಿದಿದೆ. ನೈತಿಕ ಬಲ ಮತ್ತು ಅದಕ್ಕೆ ಸಮನಾದ ಅಸಹಕಾರ, ಈ ಜೋಡುಗುಂಡಿನ ಉಪಯೋಗ ಆಗುತ್ತಿರುವುದು ಸಿದ್ಧವಾದ ಬಳಿಕ, ಪಾಶವಿ ಶಕ್ತಿಯ ಉಪಯೋಗ ಆಗಬೇಕೆಂದು ಯಾರೂ ದುರಾಗ್ರಹ ಮಾಡುವುದಿಲ್ಲ.

ಪಾಶವಿ ಶಕ್ತಿಯ ಶಾಶ್ವತ ಉಚ್ಚಾಟನೆ ಅಹಿಂಸಕರ ಧ್ಯೇಯವಾಗಿದೆ ಮತ್ತು ಅದು ನಿಶ್ಶಸ್ತ್ರ ಪ್ರತೀಕಾರದ ಉಪಾಯದಿಂದ ಸಾಧ್ಯವಾಗದಿದ್ದರೆ ಪಾಶವಿ ಶಕ್ತಿಯ ಉಪಯೋಗ ಮಾಡಬೇಕೇ ಬೇಡವೇ ಎಂಬ ಮೂರನೆಯ ಪ್ರಶ್ನೆಯೊಂದು ಎದ್ದು ನಿಲ್ಲುತ್ತದೆ. ಇದು ಹಿಂದಿಗಿಂತ ಭಿನ್ನವಾದ ಪ್ರಶ್ನೆ. ಪಾಶವಿ ಶಕ್ತಿಯ ನಿರ್ಮೂಲನ ಹೇಗೆಂಬ ಈ ಪ್ರಶ್ನೆಯಲ್ಲಿ ನಿಶ್ಶಸ್ತ್ರ ಪ್ರತೀಕಾರದ ಶಸ್ತ್ರಕ್ಕೆ ದನಿ ನೀಡುವುದಷ್ಟೇ ಅಹಿಂಸಾವಾದಿಗಳ ಕಾರ್ಯಕ್ರಮ ಇದ್ದರೆ, ನಿಶ್ಶಸ್ತ್ರ ಪ್ರತೀಕಾರ ಒಂದು ದೊಡ್ಡ ಉಪದ್ರವ ಎಂದಷ್ಟೇ ಹೇಳಬೇಕು. ಒಂದು ಪೀಳಿಗೆಗೆ ನಿಶ್ಶಸ್ತ್ರ ಪ್ರತೀಕಾರದಿಂದ ಸಿಕ್ಕ ಲಾಭವು, ಇನ್ನೊಂದು ಪೀಳಿಗೆಗೆ ಸಿಗುವುದು ಸಾಧ್ಯವಿಲ್ಲವಾದರೆ, ಪಾಶವಿ ಶಕ್ತಿಯ ಕೋಪದಿಂದ ಯಾರೂ ಹೊರ ಬೀಳುವಂತಿಲ್ಲ ಮತ್ತು ಅಹಿಂಸೆಯ ತತ್ವದ ವಿಜಯವಾಗಿದೆ ಎಂದೂ ಯಾರೂ ಹೇಳುವಂತಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News