ದಿಲ್ಲಿ ದರ್ಬಾರ್
ಯಾದವ್ ಕನಸಿನ ಯೋಜನೆ
ಸಂಜಿ ವಿರಾಸತ್ (ಸಂಯುಕ್ತ ಸಂಸ್ಕೃತಿ) ಎಂಬ ಅಭಿಯಾನವನ್ನು ಶರದ್ ಯಾದವ್ ಆರಂಭಿಸಿದ್ದು, ಇದನ್ನು 2019ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪೂರಕ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯ ಕೋಮುವಾದಿ ನೀತಿಯ ಬಗ್ಗೆ ಅರಿವು ಮೂಡಿಸುವ ಸಾರ್ವಜನಿಕ ಸಭೆ, ಚರ್ಚೆ ಮತ್ತಿತರ ಕಾರ್ಯಕ್ರಮಗಳನ್ನೊಳಗೊಂಡ ಈ ಯೋಜನೆ ಬಗ್ಗೆ ಕಾಂಗ್ರೆಸ್ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ ಎನ್ನುವುದು ಅವರ ಆರೋಪ. ನಿತೀಶ್ ಕುಮಾರ್ ಅವರು ಜಾತ್ಯತೀತ ಪಾಳಯವನ್ನು ತೊರೆದು ಬಿಜೆಪಿಯನ್ನು ಅಪ್ಪಿಕೊಂಡ ಬಳಿಕ ಸಂಯುಕ್ತ ಜನತಾದಳ ತೊರೆದಿದ್ದ ಶರದ್ ಯಾದವ್ ಇದೀಗ ಸಂಪನ್ಮೂಲ ಕೊರತೆ ಎದುರಿಸುತ್ತಿದ್ದು, ಈ ರಾಷ್ಟ್ರವ್ಯಾಪಿ ಆಂದೋಲನದ ಸುಸ್ಥಿರತೆಗೆ ಕಾಂಗ್ರೆಸ್ ಪಕ್ಷವನ್ನು ಅವಲಂಬಿಸಬೇಕಾಗಿದೆ. ಕೆಲ ತಿಂಗಳ ಹಿಂದೆ ಯಾದವ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಪಕ್ಷದ ಅನಾಸಕ್ತಿ ಬಗ್ಗೆ ದೂರಿದ್ದಾರೆ ಎನ್ನಲಾಗಿದೆ. ತಕ್ಷಣ ಪಕ್ಷದ ಸಂಘಟನೆಯ ಹೊಣೆ ಹೊತ್ತಿರುವ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಅವರಿಗೆ ರಾಹುಲ್ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಆದರೆ ಅಭಿಯಾನದ ಪುನರುಜ್ಜೀವನ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಆಗಿಲ್ಲ. ಇದೀಗ ತಾನು ಸವಕಲು ನಾಣ್ಯ ಮತ್ತು 2019ರ ಚುನಾವಣೆಗೆ ಮುನ್ನ ತನಗೆ ಜೀವ ತುಂಬುವುದು ಕಾಂಗ್ರೆಸ್ ಪಕ್ಷಕ್ಕೆ ಬೇಕಿಲ್ಲ ಎಂಬ ನಿರ್ಧಾರಕ್ಕೆ ಇದೀಗ ಯಾದವ್ ಬಂದಂತಿದೆ.
ಪಾಸ್ವಾನ್ ಕಾರ್ಯತಂತ್ರ
ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಂವಿಲಾಸ್ ಪಾಸ್ವಾನ್ ಅವರನ್ನು ಗಾಳಿ ಬಂದ ಕಡೆಗೆ ವಾಲುವ ವ್ಯಕ್ತಿ ಎಂದೇ ಗುರುತಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅವರ ನಡೆ ರಾಜಕೀಯ ಪಂಡಿತರ ನಾಲಿಗೆಯನ್ನು ಕಟ್ಟಿಹಾಕಿದೆ. ಲೋಕಜನಶಕ್ತಿ ಪಕ್ಷದ ಮುಖಂಡ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು, ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಎ.ಕೆ.ಗೋಯಲ್ ಅವರನ್ನು ನೇಮಕ ಮಾಡಿದ ಕ್ರಮವನ್ನು ವಿರೋಧಿಸಿದ್ದಾರೆ. ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿರುದ್ಧ ತೀರ್ಪು ನೀಡಿದ ನ್ಯಾಯಮೂರ್ತಿ ಗೋಯಲ್ ಎನ್ನುವುದು ಇದಕ್ಕೆ ಕಾರಣ. ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್, ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಆಗಸ್ಟ್ 9ರವರೆಗೆ ಗಡುವು ನೀಡಿದ್ದಾರೆ. ಗೋಯಲ್ ಬಗ್ಗೆ ಸರಕಾರ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ನಡೆ ಏನು ಎನ್ನುವ ಬಗ್ಗೆ ಆಗಸ್ಟ್ 9ರವರೆಗೆ ಕಾಯುವಂತೆ ಪಾಸ್ವಾನ್ ಪತ್ರಕರ್ತರಿಗೆ ಹೇಳುತ್ತಲೇ ಬಂದಿದ್ದಾರೆ. ಆದರೆ ಚಿರಾಗ್ ಪಾಸ್ವಾನ್ ಆಕ್ರಮಣಕಾರಿ ಎಂದು ಬಿಂಬಿಸದಂತೆ ಪತ್ರಕರ್ತರಿಗೆ ಮನವಿ ಮಾಡುತ್ತಲೇ ಇದ್ದಾರೆ. ಪಾಸ್ವಾನ್ ತಮ್ಮ ಸಾಧ್ಯತೆಗಳನ್ನು ಅಳೆಯುತ್ತಿದ್ದು, ಅಂತಿಮವಾಗಿ ಮೋದಿ ಹಾಗೂ ಬಿಜೆಪಿ ಜತೆಗೆ ಉಳಿಯಲು ನಿರ್ಧರಿಸುತ್ತಾರೆ ಎಂಬ ಲೆಕ್ಕಾಚಾರ ಇದೆ. ತಮ್ಮ ಕ್ಷೇತ್ರದಲ್ಲಿ ಮತ್ತು ಪಕ್ಷ ಪ್ರಬಲವಾಗಿರುವ ಪ್ರದೇಶಗಳಲ್ಲಿ ದಲಿತರನ್ನು ಮತ್ತು ಇತರರನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳುವ ತಂತ್ರಗಾರಿಕೆ ಇದು ಎನ್ನಲಾಗುತ್ತಿದೆ. ಆದರೆ ಎನ್‌ಡಿಎಯಿಂದ ಹೊರ ಸರಿದರೆ ಅದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತದೆ.
ದೀದಿ ಭೀತಿ?
ಲೋಕಸಭೆಯಲ್ಲಿ ಜುಲೈ 20ರಂದು ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ವೇಳೆ ತಮ್ಮ ಪರಿಣಾಮಕಾರಿ ಭಾಷಣದಿಂದ ತಮ್ಮ ಪಕ್ಷದ ಸಂಸದರನ್ನು ಅಚ್ಚರಿಪಡಿಸಿದ್ದು ಮಾತ್ರವಲ್ಲದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಇತರ ವಿರೋಧ ಪಕ್ಷಗಳ ಗಮನವನ್ನೂ ಸೆಳೆದಿದ್ದಾರೆ. ರಾಹುಲ್ ಅವರ ವಾಗ್ಝರಿಯಿಂದ ನಿಬ್ಬೆರಗಾಗಿರುವವರಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡರೂ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿದ ಕಾಂಗ್ರೆಸ್ ಅಧ್ಯಕ್ಷರನ್ನು ಅಭಿನಂದಿಸಲು ಮತ್ತು ಅವರಿಗೆ ಹಸ್ತಲಾಘವ ನೀಡಲು ನಾಯಕರು ನಾ ಮುಂದು ತಾ ಮುಂದು ಎಂಬಂತೆ ಧಾವಿಸಿದ್ದರು. ರಾಹುಲ್‌ಗಾಂಧಿಯವರ ಬೆನ್ನುತಟ್ಟಲು ಅವಸರಿಸಿದವರಲ್ಲಿ ಟಿಎಂಸಿ ಮುಖಂಡ ಕಲ್ಯಾಣ್ ಬ್ಯಾನರ್ಜಿ ಮತ್ತು ಸುಗತ ರಾಯ್ ಸೇರಿದ್ದಾರೆ. ಟಿಎಂಸಿಯ ಇತರ ಸದಸ್ಯರು ಬ್ಯಾನರ್ಜಿ ಹಾಗೂ ರಾಯ್ ಅವರ ಪ್ರತಿಕ್ರಿಯೆಯನ್ನು ಎಲ್ಲೆಮೀರಿದ ವರ್ತನೆ ಎಂದು ಪರಿಗಣಿಸಿದ್ದಾರೆ. ಈ ನಡವಳಿಕೆಗಳು ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿಯವರಿಗೂ ಖುಷಿ ಕೊಟ್ಟಂತಿಲ್ಲ. ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ರೂಪುಗೊಳ್ಳುತ್ತಿರುವ ದೀದಿ, ಅಂಥದ್ದೇ ಆಕಾಂಕ್ಷೆ ಹೊಂದಿರುವ ಕಾಂಗ್ರೆಸ್ ಅಧ್ಯಕ್ಷರನ್ನು ತಮ್ಮ ಪಕ್ಷದ ಸದಸ್ಯರು ಶ್ಲಾಘಿಸುವುದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ? ಸಂಸತ್ತಿನ ಈ ನಡತೆ ಬಗ್ಗೆ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ. ಟಿಎಂಸಿಯಲ್ಲಿ ಇದ್ದುಕೊಂಡು ಬೇರೆ ಮುಖಂಡರನ್ನು ಹೊಗಳುವಂತಿಲ್ಲ ಎನ್ನುವುದು ಬಹುಶಃ ದೀದಿಯವರ ಸಂದೇಶ.
ಚಿದಂಬರಂ ಭಯ
ಕಾನೂನು ಸಮರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮಗ ಕಾರ್ತಿಯವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂಬ ಬಗ್ಗೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ತಂದೆ- ಮಗನ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಈ ಹಿರಿಯ ಮುಖಂಡ ಸದಾ ಮುಂಚೂಣಿಯಲ್ಲಿರುವವರು. ಪ್ರಮುಖ ಆರ್ಥಿಕ ವಿಷಯಗಳಲ್ಲಿ ನರೇಂದ್ರ ಮೋದಿ ಸರಕಾರವನ್ನು ಸದಾ ಟೀಕಿಸುತ್ತಲೇ ಬಂದವರು ಚಿದಂಬರಂ. ತಮ್ಮ ಸಾಪ್ತಾಹಿಕ ಅಂಕಣದಲ್ಲಿ ಕೂಡಾ ಶಕ್ತಿಶಾಲಿ ಪಂಚ್‌ಗಳನ್ನು ನೀಡುತ್ತಲೇ ಬಂದಿದ್ದಾರೆ. ಆದಾಗ್ಯೂ ಕಾಂಗ್ರೆಸ್ ಪಕ್ಷ ತನ್ನ ಮುಖಂಡರನ್ನು ಸಮರ್ಥಿಸುವುದು ಮತ್ತು ವೈಯಕ್ತಿಕವಾಗಿ ಕಾನೂನು ಪ್ರಕರಣಗಳಲ್ಲಿ ಶಾಮೀಲಾದವರ ವಿಚಾರದಲ್ಲಿ ತುಸು ಭಿನ್ನ ನಿಲುವು ತಳೆಯಲು ನಿರ್ಧರಿಸಿದಂತಿದೆ. ಆದರೆ ಇದು ಚಿದಂಬರಂ ಅವರಿಗೆ ಮಬ್ಬಾಗಿ ಕಾಣುತ್ತಿರುವಂತಿದೆ. ಏಕೆಂದರೆ ತನ್ನ ಹಾಗೂ ಮಗನ ವಿರುದ್ಧ ಮಾಡಲಾದ ಕೆಲ ಆರೋಪಗಳು ರಾಜಕೀಯ ಉದ್ದೇಶದ್ದು ಎಂಬ ಭಾವನೆ ಅವರದ್ದು.
ತರೂರ್ ಹೆ ಕಿ ಮಾನಾ ನಹಿ
ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್, ಒಬ್ಬಂಟಿಯಾದಂತಿದ್ದಾರೆ. ‘ವೈ ಐ ಆ್ಯಮ್ ಹಿಂದೂ’ ಎಂಬ ಕೃತಿ ರಚಿಸಿರುವ ಅವರ ಹಿಂದೂ ತಾಲಿಬಾನ್ ಮತ್ತು ಹಿಂದೂ ಪಾಕಿಸ್ತಾನ್ ಬಣ್ಣನೆ ವಿಚಾರದಲ್ಲಿ ಮೃದು ನಿಲುವು ತಳೆಯುವಂತೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ವಿಶ್ವಸಂಸ್ಥೆಯ ಮಾಜಿ ಅಧೀನ ಪ್ರಧಾನ ಕಾರ್ಯದರ್ಶಿ ಈ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ. ಆದರೆ ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳುವ ಯಾವ ಅವಕಾಶವನ್ನೂ ವ್ಯರ್ಥಪಡಿಸಿಕೊಳ್ಳುತ್ತಿಲ್ಲ. ಅವರ ಈ ಅತ್ಯುತ್ಸಾಹ, ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್‌ನಾಥ್ ಸೇರಿದಂತೆ ಹಲವರಲ್ಲಿ ಭೀತಿ ಹುಟ್ಟಿಸಿದೆ. ಮುಂದಿನ ನವೆಂಬರ್ ತಿಂಗಳಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯುತ್ತಿರುವುದು ಶಶಿ ತರೂರ್ ಅವರ ಹೇಳಿಕೆಯ ರಾಜಕೀಯ ಪರಿಣಾಮದ ಬಗ್ಗೆ ಅವರು ಚಿಂತಿಸಲು ಕಾರಣ ಎಂದು ಬೇರೆ ಹೇಳಬೇಕಿಲ್ಲ. ಆದರೆ ಈ ಬಗ್ಗೆ ಎದ್ದಿರುವ ಆತಂಕದ ಬಗ್ಗೆ ತರೂರ್ ತಲೆ ಕೆಡಿಸಿಕೊಂಡಂತಿಲ್ಲ. ಅವರು ತಾವು ಹೇಳಿದ್ದನ್ನು ಪುನರುಚ್ಚರಿಸುತ್ತಲೇ ಇದ್ದಾರೆ. ಇದರಿಂದಾಗಿ ಒಂದು ವದಂತಿಗೆ ಅವರು ತೆರೆ ಎಳೆದಿದ್ದಾರೆ. ಅದೆಂದರೆ ತರೂರ್ ಬಿಜೆಪಿ ಸೇರುತ್ತಾರೆ ಎನ್ನುವುದು.