ಬಸವಣ್ಣಾ
ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ!
ಅಯ್ಯ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮಡನೆ ಭಕ್ತಿ ಹೋಯಿತ್ತಯ್ಯಿ.
ನಿಮ್ಮಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.
ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ.
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯಲ್ಲಾ ಸಂಗನಬಸವಣ್ಣಾ!
-ನಾಗಲಾಂಬಿಕೆ
ಬಸವಣ್ಣನವರು ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ಬಂದುಳಿದು ಲಿಂಗೈಕ್ಯರಾದ ನಂತರ ಅವರ ಸಹೋದರಿ ಮತ್ತು ಚೆನ್ನಬಸವಣ್ಣನವರ ತಾಯಿ ನಾಗಲಾಂಬಿಕೆ (ಅಕ್ಕ ನಾಗಮ್ಮ) ಬರೆದ ಈ ವಚನ ಹೃದಯಸ್ಪರ್ಶಿಯಾಗಿದೆ. ವಿಶಿಷ್ಟವಾದ ಚರಮಗೀತೆಯಾಗಿದೆ.
ಬಸವಣ್ಣ ನೀವು ಭೂಲೋಕದಲ್ಲಿ ಜನ್ಮತಳೆದ ಮೇಲೆ ಭಕ್ತಿಯ ಏಳಿಗೆ ಎಲ್ಲ ದಿಕ್ಕುಗಳಲ್ಲಿ ಹಬ್ಬಿತು. ಸ್ವರ್ಗ, ಭೂಮಿ ಮತ್ತು ಪಾತಾಳ ಲೋಕಗಳಲ್ಲಿ ನಿಮ್ಮ ಭಕ್ತಿಯ ಅಭಿವೃದ್ಧಿಯ ಮಹತ್ವ ಯಾರಿಗೆ ಗೊತ್ತಿಲ್ಲ? ಶಿವನು ಯಾವ ಕಾರ್ಯಕ್ಕಾಗಿ ನಿಮ್ಮನ್ನು ಈ ಲೋಕಕ್ಕೆ ಕಳುಹಿಸಿದನೋ ಆ ಕಾರ್ಯ ಪೂರೈಸಿಯಾಯಿತೆಂದು ನೀವು ಲಿಂಗೈಕ್ಯರಾದೊಡನೆ ನಿಮ್ಮ ಜೊತೆಗೆ ಭಕ್ತಿಯೂ ಹೋಯಿತು. ಲೆಕ್ಕವಿಲ್ಲದಷ್ಟು ಶರಣರು ಕೂಡ ನಿಮ್ಮ ಜೊತೆಗೇ ಹೋದರಣ್ಣಾ ಎಂದು ನಾಗಲಾಂಬಿಕೆ ಹಲುಬುತ್ತಾರೆ. ಹುಟ್ಟಿದಂದಿನಿಂದ ಜೊತೆಯಲ್ಲಿ ಬೆಳೆದ ಸಹೋದರನನ್ನು ಕಳೆದುಕೊಂಡ ಜೀವ ಪರಿತಪಿಸುವ ರೀತಿ ಹೃದಯವಿದ್ರಾವಕವಾಗಿದೆ. ಬಸವಣ್ಣನವರ ಲಿಂಗೈಕ್ಯದ ನಂತರ ಜಗತ್ತಿನ ಮಹಾಮನೆ (ಸರ್ವಜೀವಿಗಳ ರಕ್ಷಣಾ ವ್ಯವಸ್ಥೆ) ಶೂನ್ಯವಾಯಿತು. ನನ್ನನ್ನೇಕೆ ಇಲ್ಲೇ ಬಿಟ್ಟು ಹೋದೆ ಪಂಚಪರುಷಮೂರ್ತಿ ಬಸವಣ್ಣಾ ಎಂದು ಅಕ್ಕನಾಗಮ್ಮ ಗೋಳಾಡುತ್ತಾರೆ. ಪಂಚಪರುಷ ಎಂದರೆ ಹಸ್ತಪರುಷ, ದೃಷ್ಟಿಪರುಷ, ವಾಕ್ಪರುಷ, ಮನಪರುಷ, ಭಾವಪರುಷ. ಬಸವಣ್ಣನವರು ಇಂಥ ಪಂಚಪರುಷಮೂರ್ತಿಯಾಗಿದ್ದರು. ಅವರು ಮುಟ್ಟಿದ್ದೆಲ್ಲ ಪವಿತ್ರವಾಗುತ್ತಿತ್ತು. ಅವರು ನೋಡಿದ್ದೆಲ್ಲ ಪವಿತ್ರವಾಗುತ್ತಿತ್ತು. ಅವರ ವಾಣಿಯನ್ನು ಕೇಳಿದವರೆಲ್ಲ ಪವಿತ್ರರಾಗುತ್ತಿದ್ದರು. ಅವರ ಮನಸ್ಸನ್ನು ಅರಿತವರೆಲ್ಲ ಪವಿತ್ರರಾಗುತ್ತಿದ್ದರು. ಅವರ ಭಾವನೆಗಳಿಗೆ ಸ್ಪಂದಿಸುವವರೆಲ್ಲ ಪವಿತ್ರರಾಗುತ್ತಿದ್ದರು ಎಂದು ನಾಗಲಾಂಬಿಕೆ ಬಸವಣ್ಣನವರ ಗುಣಗಾನ ಮಾಡಿದ್ದಾರೆ. ಬಸವಣ್ಣನವರು ದೇವರ ಪ್ರಾಣಲಿಂಗವಾಗಿ ಹೋದರು ಎಂದಿದ್ದಾರೆ.
ಕಲ್ಯಾಣ ಕ್ರಾಂತಿಯ ನಂತರ ಮಗ ಚೆನ್ನಬಸವಣ್ಣ ಮತ್ತಿತರ ಶರಣರ ಜೊತೆ ನಾಗಲಾಂಬಿಕೆ ಉಳುವಿಗೆ (ಈಗ ಉತ್ತರಕನ್ನಡ ಜಿಲ್ಲೆು ಜೊಯಡಾ ತಾಲೂಕಿನಲ್ಲಿದೆ) ಬಂದರು. ಚೆನ್ನಬಸವಣ್ಣನವರು ಲಿಂಗೈಕ್ಯವಾದ ನಂತರ ನುಲಿಯ ಚೆಂದಯ್ಯನವರ ಜೊತೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಕಡೆಗೆ ಹೋದರು. ಅಲ್ಲಿನ ಎಣ್ಣೆಹೊಳೆಯಲ್ಲಿ ನಾಗಲಾಂಬಿಕೆ ಸಮಾಧಿ ಇದೆ.