ಖ್ಯಾತ ಪತ್ರಕರ್ತ ಕುಲ್‌ದೀಪ್ ನಯ್ಯರ್ ನಿಧನ
ಹೊಸದಿಲ್ಲಿ, ಆ.23: ಖ್ಯಾತ ಪತ್ರಕರ್ತ, ಲೇಖಕ ಹಾಗೂ ಮಾನವಹಕ್ಕು ಕಾರ್ಯಕರ್ತರಾದ ಕುಲ್‌ದೀಪ್ ನಯ್ಯರ್ ದಿಲ್ಲಿಯಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
‘ಇಂಡಿಯನ್ ಎಕ್ಸ್‌ಪ್ರೆಸ್’ನ ಮಾಜಿ ಸಂಪಾದಕರಾಗಿದ್ದ ನಯ್ಯರ್ ‘ಬಿಯಾಂಡ್ ದಿ ಲೈನ್ಸ್’ ‘ಇಂಡಿಯಾ ಆಫ್ಟರ್ ನೆಹರೂ’ ಹಾಗೂ ‘ಎಮರ್ಜೆನ್ಸಿ ರಿಟೋಲ್ಟ್’ಸೇರಿದಂತೆ 15 ಪುಸ್ತಕಗಳ ಲೇಖಕರಾಗಿದ್ದಾರೆ.
ನಯ್ಯರ್ 1990ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ್‌ನ ಭಾರತದ ಹೈಕಮಿಶನರ್ ಆಗಿ ಸೇವೆ ಸಲ್ಲಿಸಿದ್ದರು. 1997ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು.
ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ವಿಧಿಸಿರುವ ತುರ್ತು ಪರಿಸ್ಥಿತಿಯನ್ನು ಕಟುವಾಗಿ ವಿರೋಧಿಸಿದ್ದ ಪತ್ರಕರ್ತರಲ್ಲಿ ನಯ್ಯರ್ ಕೂಡ ಒಬ್ಬರಾಗಿದ್ದರು. ತುರ್ತು ಪರಿಸ್ಥಿತಿ ವೇಳೆ ಜೈಲು ವಾಸ ಅನುಭವಿಸಿದ್ದರು.
1923ರಲ್ಲಿ ಸಿಯಾಲ್‌ಕೋಟ್‌ನಲ್ಲಿ ಜನಿಸಿದ್ದ ನಯ್ಯರ್ ಕಾನೂನು ಪದವೀಧರರಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಅಧ್ಯಯನ ನಡೆಸಿದ ನಯ್ಯರ್ ‘ಅಂಜಮ್’ ಎಂಬ ಉರ್ದು ದಿನಪತ್ರಿಕೆಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಆನಂತರ ದಿಲ್ಲಿಯ ಹಲವು ದಿನಪತ್ರಿಕೆಗಳ ಸಂಪಾದಕರಾಗಿದ್ದರು. ನಯ್ಯರ್ ಅವರು ಅಂಕಣ ಬರಹಗಾರರಾಗಿ ಪ್ರಸಿದ್ಧಿ ಪಡೆದಿದ್ದು, ದೇಶ ಹಾಗೂ ವಿದೇಶದ ಹಲವು ದಿನ ಪತ್ರಿಕೆಗಳಲ್ಲಿ ಲೇಖನ ಬರೆದಿದ್ದಾರೆ.
ನಯ್ಯರ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತಿಮ ವಿಧಿವಿಧಾನ ಇಂದು ಮಧ್ಯಾಹ್ನ 1 ಗಂಟೆಗೆ ದಿಲ್ಲಿಯಲ್ಲಿ ನೆರವೇರಲಿದೆ.