ದಿಲ್ಲಿ ದರ್ಬಾರ್
ಪುನರ್ವಸತಿ ‘ವಂಚಿತ’ ಶಿವಪಾಲ್ ಯಾದವ್
ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸಹೋದರ ಶಿವಪಾಲ್ ಅವರು ತನ್ನ ಸೋದರಳಿಯ ಅಖಿಲೇಶ್ ಯಾದವ್‌ರಿಂದ ತಾನು ಬಯಸಿರುವುದು ತನಗೆ ದೊರೆಯುತ್ತಿಲ್ಲ ವೆಂದು ಭಾವಿಸತೊಡಗಿರುವುದರಿಂದ ಸಮಾಜವಾದಿ ಪಕ್ಷದ ಕುಟುಂಬದಲ್ಲಿ ಏರ್ಪಟ್ಟಿರುವ ಪ್ರಪ್ರಥಮ ಕದನವಿರಾಮವು ಮತ್ತೊಮ್ಮೆ ಬಿಕ್ಕಟ್ಟಿಗೆ ಸಿಲುಕಿದೆ. ಎರಡು ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಶಿವಪಾಲ್ ಯಾದವ್ ಅವರನ್ನು ಅಖಿಲೇಶ್ ಕಿತ್ತುಹಾಕಿದಾಗ ಇವರಿಬ್ಬರೂ ಪರಸ್ಪರ ಜಗಳವಾಡಿಕೊಂಡಿದ್ದರು ಹಾಗೂ ಪಕ್ಷವನ್ನು ವಿಭಜಿಸು ವುದಾಗಿ ಶಿವಪಾಲ್ ಆಗ ಬೆದರಿಕೆ ಹಾಕಿದ್ದರು. ಆದರೆ ಶಿವಪಾಲ್ ಅವರಿಗೆ ಅಖಿಲೇಶ್ ಬೇರೆ ಹುದ್ದೆಯನ್ನು ನೀಡುವ ಭರವಸೆ ನೀಡಿದ ಬಳಿಕ, ಅವರು ಆ ಕೆಲಸಕ್ಕೆ ಕೈಹಾಕಲಿಲ್ಲ. ಆದರೆ ಈಗ ಅದು ಹಳೆಯ ಕತೆಯಾಯಿತು. ಪ್ರಸ್ತುತ ಶಿವಪಾಲ್ ಪಕ್ಷದಲ್ಲಿ ಸಕ್ರಿಯರಾಗಿಲ್ಲ ಹಾಗೂ ಕಳೆದ ತಿಂಗಳು ಲಕ್ನೋದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಅವರು ಗೈರುಹಾಜರಾಗಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಿವಪಾಲ್ ಅವರು ತನ್ನ ಸೋದರಳಿಯನ ಬೆಂಬಲಕ್ಕೆ ನಿಂತಿದ್ದರು. ಆದರೆ ಈಗ ಪರಿಸ್ಥಿತಿ ಬೇರೆಯೇ ತಿರುವು ಕಂಡಿದೆ. ಇತ್ತೀಚೆಗೆ ಶಿವಪಾಲ್ ಅವರು ಮುಲಾಯಂರ ಸೋದರ ಸಂಬಂಧಿಯೂ, ಅಖಿಲೇಶ್‌ರ ನಿಷ್ಠಾವಂತ ಬೆಂಬಲಿಗನೂ ಆದ ರಾಮ್‌ಗೋಪಾಲ್ ಯಾದವ್ ಜೊತೆ ಒಂದೆರಡು ಸಭೆಗಳನ್ನು ಕೂಡಾ ನಡೆಸಿದ್ದರೆನ್ನಲಾಗಿದೆ. ಪಕ್ಷದ ಮತಗಳನ್ನು ಒಡೆದುಹಾಕುವುದಕ್ಕಾಗಿ 2019ರ ಲೋಕಸಭಾ ಚುನಾವಣೆಗೆ ಮುನ್ನ ಬಂಡಾಯವೇಳುವಂತೆ ಶಿವಪಾಲ್‌ಗೆ ಬಿಜೆಪಿಯಿಂದ ಸೂಚನೆಗಳು ಬಂದಿರಬಹುದೆಂದು ಅಖಿಲೇಶ್ ಪಾಳಯ ಭಾವಿಸಿದೆ. ಆದರೆ, ಈ ಕೌಟುಂಬಿಕ ನಾಟಕವನ್ನು ಹೇಗೆ ಆಡಲಾಗುತ್ತದೆಯೆಂಬುದನ್ನು ಮುಂದೆ ಕಾದು ನೋಡಬೇಕಾಗಿದೆ.
ಬಾಬುಲ್ ಸುಪ್ರಿಯೋ ಮೂಲೆಗುಂಪು?
ಅಮಿತ್ ಶಾ ಅವರು ಬಂಗಾಳದಲ್ಲಿ ಬಿಜೆಪಿಗೆ ಮಹತ್ವಾಕಾಂಕ್ಷಿ ಗುರಿಯೊಂದನ್ನು ನಿಗದಿಪಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಬಂಗಾಳದಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಲೇಬೇಕೆಂದು ಅವರು ಬಯಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಆ ರಾಜ್ಯದಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಗೆದ್ದಿತ್ತೆಂಬ ವಾಸ್ತವವನ್ನು ಪರಿಗಣಿಸಿದಾಗ ಇದು ಅಸಾಧ್ಯವೆಂದು ತೋರಬಹುದು. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ಕೇಂದ್ರ ಸಚಿವರೂ, ಅಸನ್‌ಸೋಲ್‌ನ ಸಂಸದರೂ ಆದ ಬಾಬುಲ್ ಸುಪ್ರಿಯೋ ಪರಸ್ಪರ ಕಣ್ಣೆತ್ತಿಯೂ ನೋಡದೆ ಇರುವುದು ಹಾಗೂ ಕಳೆದ ತಿಂಗಳು ಇವರಿಬ್ಬರೂ ಬಹಿರಂಗವಾಗಿ ಜಗಳವಾಡಿರುವುದು ಆ ರಾಜ್ಯದಲ್ಲಿ ಪಕ್ಷಕ್ಕೆ ಅನನುಕೂಲಕರ ಪರಿಸ್ಥಿತಿಯನ್ನುಂಟು ಮಾಡಿದೆ. ಆದರೆ, ಸುಪ್ರಿಯೋ ಬಾಯಿ ಮುಚ್ಚಿಕೊಂಡಿರುವಂತೆ ಮೇಲಿನಿಂದಲೇ ಆದೇಶ ಬಂದಿರುವಂತೆ ಕಾಣುತ್ತಿದೆ ಅಥವಾ ಕನಿಷ್ಠ ಪಕ್ಷ ಅಂತಹ ಸೂಚನೆಯನ್ನು ಅವರಿಗೆ ಪಕ್ಷದ ಹೈಕಮಾಂಡ್ ಪರೋಕ್ಷವಾಗಿ ಆದರೆ ಅತ್ಯಂತ ಜೋರಾಗಿ ಹಾಗೂ ಸ್ಪಷ್ಟವಾಗಿ ಕಳುಹಿಸಿದ್ದಿರಬೇಕು. ಉದಾಹರಣೆಗೆ, 2019ರ ಲೋಕಸಭಾ ಚುನಾವಣೆಯವರೆಗೆ ಘೋಷ್ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಮುನ್ನಡೆಸಲಿದ್ದಾರೆಂದು ಅಮಿತ್‌ಶಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ತನ್ನನ್ನು ಮೂಲೆಗುಂಪು ಮಾಡುತ್ತಿರುವುದಕ್ಕೆ ಇದೊಂದು ಸ್ಪಷ್ಟ ಸಂಕೇತವೆಂದು ಸುಪ್ರಿಯೋ ಸುದ್ದಿಗಾರರಿಗೆ ತಿಳಿಸಿದ್ದಾರೆನ್ನಲಾಗಿದೆ. ಉದ್ಧ್ದಟತನದ ವ್ಯಕ್ತಿಯೆಂದೇ ಹೆಸರುಪಡೆದಿರುವ ಸುಪ್ರಿಯೋ ಬಂಗಾಳದ ಬಿಜೆಪಿ ನಾಯಕರಲ್ಲಿ ಜನಪ್ರಿಯರಾಗಿ ಉಳಿದಿಲ್ಲ.
ಮರಳಿ ಬಂದ ಜೇಟ್ಲಿ
ಮೂತ್ರಪಿಂಡದ ಶಸ್ತ್ರಕ್ರಿಯೆಗೊಳಗಾದ ಮೂರು ತಿಂಗಳ ಬಳಿಕ ಅರುಣ್ ಜೇಟ್ಲಿ ಅವರು ನಾರ್ತ್ ಬ್ಲಾಕ್‌ನ ಬದಿಯಲ್ಲಿರುವ ಅತ್ಯಂತ ಸುಪರಿಚಿತವಾಗಿರುವ ತನ್ನ ಕಚೇರಿಗೆ ಗುರುವಾರ ವಾಪಸಾಗಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಧಿಸೂಚನೆಯೊಂದರ ಮೂಲಕ ಜೇಟ್ಲಿಯವರನ್ನು ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆಗೆ ಮರುನಿಯೋಜಿಸಿದ ಬಳಿಕ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಜೇಟ್ಲಿಯವರ ಅನುಪಸ್ಥಿತಿಯಲ್ಲಿ ಅವರ ಖಾತೆಯ ಉಸ್ತುವಾರಿ ವಹಿಸಿದ್ದ ಪಿಯೂಷ್ ಗೋಯೆಲ್, ಈಗ ಮತ್ತೆ ರೈಲ್ವೆ ಹಾಗೂ ಕಲ್ಲಿದ್ದಲು ಖಾತೆಯ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಮರಳಿದ್ದಾರೆ. ಆದರೆ ವಿತ್ತ ಸಚಿವಾಲಯದಿಂದ ಪತ್ರಕರ್ತರಿಗೆ ಬಂದಿರುವ ಅಧಿಕೃತ ಸಂದೇಶವು ಹುಬ್ಬೇರಿಸುವಂತೆ ಮಾಡಿದೆ. ಆ ಸಂದೇಶ ಹೀಗಿತ್ತು. ‘‘ಅರುಣ್ ಜೇಟ್ಲಿ ಅವರು ಇಂದು ಬೆಳಗ್ಗೆ 11:00 ಗಂಟೆಗೆ ನಾರ್ತ್‌ಬ್ಲಾಕ್‌ನ ಹಣಕಾಸು ಸಚಿವರಾಗಿ ಮತ್ತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಾವು ಬಜೆಟ್ ಮಂಡನೆಯ ಸಮಯದಲ್ಲಿ ಮಾಡುವಂತೆ ನೀವು (ಪತ್ರಕರ್ತರು) ಬೆಳಗ್ಗೆ 10:45ರ ವೇಳೆಗೆ ಗೇಟ್ ನಂ.2 ಹೊರಗಡೆ ನಿಮ್ಮ ಕ್ಯಾಮರಾ ತಂಡಗಳನ್ನು ನಿಯೋಜಿಸುವಂತೆ ನಿಮ್ಮನ್ನು ಕೋರುತ್ತೇವೆ’’. ತನ್ನ ಅನುಪಸ್ಥಿತಿಯ ಸಮಯದಲ್ಲಿ ತಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂದು ಜೇಟ್ಲಿಯವರು ಭಾವಿಸಿದ್ದು, ಹೀಗಾಗಿ ಹೆಚ್ಚು ಕಮ್ಮಿ ಬಜೆಟ್ ಮಂಡನೆ ದಿನದಲ್ಲಿ ಸಿಗುವ ಮಟ್ಟದಷ್ಟೇ ಪೂರ್ಣ ಪ್ರಮಾಣದ ಪ್ರಚಾರವನ್ನು ಪಡೆಯ ಬಯಸಿದ್ದರು. ಪತ್ರಕರ್ತರೇನೋ ಅಲ್ಲಿದ್ದರು. ಆದರೆ ಅವರು ನಿರೀಕ್ಷಿಸಿದ ಮಟ್ಟದಲ್ಲಿ ಅವರಿಗೆ ಸ್ವಾಗತ ದೊರೆಯಲಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಅಮಾನತಿನಿಂದ ಮುಕ್ತಗೊಂಡ ಅಯ್ಯರ್
ರಾಜೀವ್ ಗಾಂಧಿಯವರ ಜನ್ಮದಿನಾಚರಣೆಯ ಕೆಲವೇ ದಿನಗಳ ಮೊದಲು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಅಮಾನತನ್ನು ರದ್ದು ಪಡಿಸಲಾಗಿದೆ. ಪಕ್ಷದ ಅಥವಾ ಬಹುಶಃ ರಾಹುಲ್‌ಗಾಂಧಿಯವರು ಈ ನಿರ್ಧಾರವನ್ನು ಕೈಗೊಳ್ಳಲು ಕಾರಣವೇನು ಎಂಬ ಬಗ್ಗೆ ದಿಲ್ಲಿಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನಹಾನಿಕರ ಪದ ಬಳಸಿದ ಬಳಿಕ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಆನಂತರ ಪಕ್ಷ ಹಾಗೂ ರಾಜೀವ್‌ಗಾಂಧಿ ಜೊತೆಗೆ ತನಗಿದ್ದ ನಂಟನ್ನು ಸ್ಮರಿಸಿಕೊಂಡು ಅಯ್ಯರ್ ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ಭಾವನಾತ್ಮಕವಾಗಿ ಪತ್ರಗಳನ್ನು ಬರೆದಿದ್ದರು. ಅಮಾನತು ರದ್ದುಗೊಂಡಿದ್ದರಿಂದಾಗಿ ಅಯ್ಯರ್‌ಗೆ ತನ್ನ ಲೋಕಸಭಾ ಕ್ಷೇತ್ರವಾದ ತಮಿಳುನಾಡಿನ ಮೈಲಾಡುದುರೈನಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶಗಳ ಬಾಗಿಲು ತೆರೆಯುವ ಸಾಧ್ಯತೆಗಳು ಉಜ್ವಲಗೊಂಡಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಆ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರ ಗೆಲುವು ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆ ಮೈತ್ರಿಯೇರ್ಪಡಿಸುವುದೇ ಇಲ್ಲವೇ ಎಂಬುದನ್ನು ಅವಲಂಬಿಸಿದೆ.
ರಾಹುಲ್ -ಸುಖ್‌ಬೀರ್
ಎ.ಬಿ.ವಾಜಪೇಯಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ, ರಾಹುಲ್ ಗಾಂಧಿಯವರು ಆರಂಭದಲ್ಲಿ ಸುಖಬೀರ್ ಸಿಂಗ್ ಬಾದಲ್ ಅವರ ಪಕ್ಕದಲ್ಲಿ ಆಸೀನರಾಗಿದ್ದರು. ಪಂಜಾಬ್‌ನಲ್ಲಿ ಅಕಾಲಿದಳ ಹಾಗೂ ಕಾಂಗ್ರೆಸ್ ಪರಸ್ಪರ ವಿರೋಧಿಗಳಾಗಿರುವ ರಾಹುಲ್ ಹಾಗೂ ಸುಖ್‌ಬೀರ್ ಪರಸ್ಪರರ ಉಪಸ್ಥಿತಿಯ ಬಗ್ಗೆ ಹೆಚ್ಚೇನೂ ಆಸಕ್ತಿವಹಿಸಿದಂತೆ ಕಂಡುಬರಲಿಲ್ಲ. ಹೀಗಾಗಿ ರಾಹುಲ್ ಮನಮೋಹನ್‌ಸಿಂಗ್‌ರ ಸಮೀಪದ ಕುರ್ಚಿ ಖಾಲಿಯಿರುವುದನ್ನು ಕಂಡು, ಅಲ್ಲಿಗೆ ಧಾವಿಸಿದರು. ಸುಖ್‌ಬೀರ್ ಅವರ ಪತ್ನಿ ಹಾಗೂ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ವಿರುದ್ಧ ಈ ಹಿಂದೆ ಟೀಕಾಸ್ತ್ರ ಎಸೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ರಾಹುಲ್‌ಗಾಂಧಿಯವರು ಪಂಜಾಬಿಗಳನ್ನು ‘ನಶೇದಿ’ (ಮಾದಕದ್ರವ್ಯ ವ್ಯಸನಿಗಳು) ಎಂದು ಆರೋಪಿಸಿದ್ದಾರೆಂದು ಪ್ರಸ್ತಾಪಿಸಿದ್ದ ಹರ್‌ಸಿಮ್ರತ್ ಅವರು, ರಾಹುಲ್ ಗಾಂಧಿ ಇಂದು ಸಂಸತ್‌ಗೆ ಬರುವ ಮುನ್ನ ಏನನ್ನು ಸೇವಿಸಿದ್ದರೆಂದು ವ್ಯಂಗ್ಯವಾಡಿದ್ದರು.