ಅಡಿಕೆ ಮರಗಳನ್ನು ನುಂಗಿ ಹಾಕುತ್ತಿರುವ ಕೊಳೆ ರೋಗ

Update: 2018-09-11 12:07 GMT

ಸುಳ್ಯ, ಸೆ.11: ಮೂರು ತಿಂಗಳ ಕಾಲ ನಿರಂತರ ಸುರಿದ ಮಳೆಯಿಂದ ದ.ಕ. ಜಿಲ್ಲೆಯಲ್ಲಿ ಕೊಳೆ ರೋಗ ಬಾಧಿಸಿ ವ್ಯಾಪಕವಾಗಿ ಅಡಿಕೆ ಫಸಲು ನಷ್ಟವಾಗಿದೆ. ಬಹುತೇಕ ತೋಟಗಳಲ್ಲಿ ಶೇ.60ಕ್ಕಿಂತಲೂ ಅಧಿಕ ಅಡಿಕೆ ಫಸಲು ನಷ್ಟವಾಗಿದೆ. ಕೆಲವು ತೋಟಗಳಲ್ಲಿ ಶೆ.80ಕ್ಕಿಂತಲೂ ಅಧಿಕ ಫಸಲು ನಷ್ಟ ಉಂಟಾಗಿದೆ. ಸುಳ್ಯ ತಾಲೂಕಿನ ವಿವಿಧ ತೋಟಗಳಲ್ಲಿ ಅಡಿಕೆ ಮರಗಳು ಒಣಗಿ ಮುರಿದು ಬೀಳುತಿದೆ. ಮಳೆ ಸ್ವಲ್ಪ ಕಡಿಮೆಯಾಗಿ ಬಿಸಿಲು ಬೀಳುತ್ತಿದ್ದಂತೆಯೇ ಅಡಿಕೆ ಮರಕ್ಕೆ ಬಾಧಿಸಿದ ಕೊಳೆ ರೋಗದ ಭೀಕರತೆಯ ದರ್ಶನವಾಗುತ್ತಿದೆ.

ಕಂಗಿನ ಸೋಗೆಯ ಮತ್ತು ಸಿರಿಯ ಹಸಿರು ಮಾಯವಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ನೋಡ ನೋಡುತ್ತಿದ್ದಂತೆಯೇ ಅಡಿಕೆ ಮರದ ಕೊಂಬೆ ಒಣಗಿ ಹೋಗುತ್ತದೆ. ಅಡಿಕೆ ಮರದ ಸೋಗೆಗಳು ಕೆಂಪಾಗಿ ಬೆಂಕಿಯಲ್ಲಿ ಸುಟ್ಟ ರೀತಿಯಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಮುರಿದು ಬೀಳುವುದು ಕಂಡು ಬರುತ್ತಿದೆ. ಮುರಿದು ಬಿದ್ದ ಕೊಂಬೆಯ ಒಳ ಭಾಗ ಕೊಳೆತ ರೀತಿಯಲ್ಲಿರುತ್ತದೆ. ಸುಳ್ಯ ಹಳೆಗೇಟಿನ ವಿನೋದ್ ಲಸ್ರಾದೊ ಎಂಬವರ ತೋಟದಲ್ಲಿ 10 ದಿನಗಳ ಹಿಂದೆ ಒಂದೆರಡು ಕಂಗು ಒಣಗಿರುವುದು ಕಾಣಸಿಕೊಂಡಿತು. ‘‘ರೋಗ ಲಕ್ಷಣ ಕಂಡು ಬಂದ ಮೇಲೆ ಕೆಲವೇ ದಿನಗಳಲ್ಲಿ ಆ ಅಡಿಕೆ ಮರ ಒಣಗಿ ಮುರಿದು ಬಿದ್ದು, ಅದರ ಸಮೀಪದ ಮರಕ್ಕೆ ರೋಗ ಹರಡುತ್ತದೆ. ಇದರಿಂದ ಶೇ.60ರಷ್ಟು ಅಡಿಕೆ ಫಸಲು ನಷ್ಟವಾಗಿರುವುದರ ಜೊತೆಗೆ ಮರಗಳೇ ಸಾಯುತ್ತಿರುವುದರಿಂದ ಏನು ಮಾಡಬೇಕು ಎಂದು ತೋಚದ ಪರಿಸ್ಥಿತಿ ಉಂಟಾಗಿದೆ’’ ಎಂದು ವಿನೋದ್ ಲಸ್ರಾದೊ ಹೇಳುತ್ತಾರೆ. ಮಳೆಯಿಂದ ತೋಟಗಳಲ್ಲಿ ನೀರು ನಿಂತ ಕಾರಣ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಶಿಲೀಂದ್ರ ರೋಗಾಣುಗಳು ಅಡಿಕೆ ಮರಗಳಿಗೆ ಹರಡುತ್ತದೆ. ಇದರಿಂದ ಶಿರಕೊಳೆ ಮತ್ತು ಸುಳಿ ಕೊಳೆ ಉಂಟಾಗಿ ಅಡಿಕೆ ಮರಗಳು ಸಾಯುತ್ತಿದೆ. ಇದು ಒಂದು ತೋಟದ ಕಥೆಯಲ್ಲ. ತಾಲೂಕಿನ ಹಲವಾರು ತೋಟಗಳಲ್ಲಿ ಕೊಳೆ ರೋಗದಿಂದ ಅಡಿಕೆ ಮರಗಳು ಸಾಯುತ್ತಿರುವ ಬಗ್ಗೆ ಗ್ರಾಮೀಣ ಕೃಷಿಕರು ಮಾಹಿತಿ ನೀಡಿದ್ದಾರೆ.

ಅಡಿಕೆಯೇ ಪ್ರಮುಖ ಬೆಳೆಯಾಗಿರುವ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ ತಾಲೂಕುಗಳಲ್ಲಿ ಈ ಬಾರಿ ಕೊಳೆ ರೋಗ ಮಾರಕವಾಗಿ ಅಪ್ಪಳಿಸಿದೆ. ಜಿಲ್ಲೆಯಲ್ಲಿ ಸುಮಾರು 19,500ಕ್ಕೂ ಅಧಿಕ ಹೆಕ್ಟೇರ್ ಪ್ರದೇಶಗಳಲ್ಲಿ ಕೊಳೆ ರೋಗ ಬಾಧಿಸಿ ಅಡಿಕೆ ಕೃಷಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಕೊಳೆ ರೋಗದಿಂದ ಬೆಳೆಯದ ಚಿಕ್ಕ ಅಡಿಕೆಗಳು ಉದುರಿ ಕಂಗಿನ ಮರಗಳು ಖಾಲಿಯಾಗಿದೆ. ಅಡಿಕೆ ಮರದ ಬುಡದಲ್ಲಲ್ಲೆ ಉದುರಿದ ಮಿಡಿ ಅಡಿಕೆಗಳೇ ತುಂಬಿದೆ. ಅಡಿಕೆ ಒಣಗಿಸಲೆಂದು ಕೃಷಿಕರು ಅಂಗಳದಲ್ಲಿ ಮಾಡಿದ ಡ್ರೈಯರ್ ತುಂಬಾ ಬಿದ್ದ ಮಿಡಿ ಅಡಿಕೆಗಳು ಕೊಳೆಯುತ್ತಿದೆ. ಅಡಿಕೆ ಉದುರುವುದನ್ನು ತಡೆಯುವುದು ಹೇಗೆ, ಉದುರಿದ ಅಡಿಕೆಗಳನ್ನು ಏನು ಮಾಡುವುದು, ಜೊತೆಗೆ ನಾಶವಾಗುತ್ತಿರುವ ಅಡಿಕೆ ಮರಗಳನ್ನು ಉಳಿಸುವುದು ಹೇಗೆ ಎಂದು ತೋಚದೆ ಬೆಳೆಗಾರರು ಕಂಗಾಲಾಗಿದ್ದಾರೆ.

ಸಾಧ್ಯವಾಗದ ಔಷಧ ಸಿಂಪಡಣೆ

ಮೂರು ತಿಂಗಳಿನಿಂದ ನಿರಂತರ ಸುರಿದ ಮಳೆಯಿಂದಾಗಿ ಔಷಧಿ ಸಿಂಪಡಣೆ ಸಾಧ್ಯವಾಗದ ಕಾರಣ ಕೊಳೆ ರೋಗ ವ್ಯಾಪಿಸಲು ಕಾರಣವಾಗಿದೆ. ಬೋರ್ಡೋ ಮಿಶ್ರಿತ ಔಷಧಿ ವರ್ಷದಲ್ಲಿ ಮೂರು ಬಾರಿಯಾದರೂ ಸಿಂಪಡಣೆ ಮಾಡಬೇಕು. ಆದರೆ ಈ ವರ್ಷ ಬಹುತೇಕ ಕೃಷಿಕರಿಗೆ ಒಮ್ಮೆಯೂ ಔಷಧಿ ಸಿಂಪಡಣೆ ಸಾಧ್ಯವಾಗದ ಕಾರಣ ಕೊಳೆ ರೋಗ ಇಷ್ಟು ವ್ಯಾಪಕವಾಗಿ ಹಬ್ಬಿದೆ. 2013ರಲ್ಲಿಯೂ ಕೊಳೆ ರೋಗದಿಂದ ವ್ಯಾಪಕ ಬೆಳೆ ಹಾನಿ ಉಂಟಾಗಿತ್ತು ಮತ್ತು ಅಡಕೆ ಮರ ನಾಶವಾಗಿತ್ತು. 2013ಕ್ಕಿಂತಲೂ ವಿಪರೀತ ರೀತಿಯಲ್ಲಿ ಈ ಬಾರಿ ಕೊಳೆ ರೋಗ ಅಪ್ಪಳಿಸಿದೆ ಎಂದು ಕೃಷಿಕರು ಅಭಿಪ್ರಾಯಪಟ್ಟಿದ್ದಾರೆ.

Writer - ಗಿರೀಶ್ ಅಡ್ಪಂಗಾಯ

contributor

Editor - ಗಿರೀಶ್ ಅಡ್ಪಂಗಾಯ

contributor

Similar News