ಪ್ರಯತ್ನ ಪಡ್ತಾ ಇದ್ದೇವೆ ಸಾರ್....ಶೀಘ್ರದಲ್ಲೇ ಬೀಳತ್ತೆ....!

Update: 2018-09-16 03:41 GMT

ರಾಜ್ಯದಲ್ಲಿ ಮೈತ್ರಿ ಸರಕಾರ ಬೀಳಿಸಲು ಬಿಜೆಪಿಯ ಎಲ್ಲ ಪ್ರಯತ್ನಗಳು ವಿಫಲವಾದ ಬಳಿಕ, ಅದರ ಸಂಪೂರ್ಣ ಹೊಣೆಗಾರಿಕೆಗಳನ್ನು ನಾಡಿನ ಪತ್ರಿಕೆಗಳಿಗೆ ವಹಿಸಲಾಯಿತು. ಒಂದು ದಿನ ಸಂಪಾದಕರು, ಪತ್ರಕರ್ತ ಎಂಜಲು ಕಾಸಿಯನ್ನು ಕರೆದವರೇ, ‘‘ಇನ್ನು ಒಂದು ತಿಂಗಳಲ್ಲಿ ಮೈತ್ರಿ ಸರಕಾರವನ್ನು ಬೀಳಿಸದೇ ಇದ್ದರೆ ನಿಮ್ಮನ್ನು ವರದಿಗಾರ ಹುದ್ದೆಯಿಂದ ಕಿತ್ತು ಹಾಕಿ, ಮನೆಗೆ ಕಳುಹಿಸಲಾಗುತ್ತದೆ. ಪ್ರತಿ ವಾರ, ಸರಕಾರ ಬೀಳಿಸಲು ನೀವು ಮಾಡಿದ ಪ್ರಯತ್ನವನ್ನು ವಿವರವಾಗಿ ವರದಿ ಸಲ್ಲಿಸಬೇಕು’’ ಎಂದು ಆದೇಶಿಸಿದರು. ಈಗಾಗಲೇ ಬೇರೆ ಬೇರೆ ಪತ್ರಿಕೆಗಳು ವಿವಿಧ ಜ್ಯೋತಿಷಿಗಳ ಮೂಲಕ ಸರಕಾರ ಯಾವಾಗ ಬೀಳಲಿದೆ, ಯಾರ್ಯಾರು ಬಿಜೆಪಿ ಸೇರಲಿದ್ದಾರೆ, ಸಿದ್ದರಾಮಯ್ಯ ಅವರು ಯಾವ ಗ್ರಹದ ಮೇಲೆ ಕುಳಿತು ಕುಮಾರ ಸ್ವಾಮಿಯ ಸುತ್ತ ಸವಾರಿ ಮಾಡುತ್ತಿದ್ದಾರೆ ಎನ್ನುವುದನ್ನು ಅಂಕಣ ರೂಪದಲ್ಲಿ ಬರೆಸುತ್ತಿದ್ದವು. ಪತ್ರಕರ್ತ ಎಂಜಲು ಕಾಸಿಗೆ ಸರಕಾರದ ಅಳಿವು ತನ್ನ ಉದ್ಯೋಗದ ಉಳಿವಿನ ಭಾಗವಾಗಿ ಪರಿಣಮಿಸಿತು. ಈಗಾಗಲೇ ಹತ್ತು ಹಲವು ವರದಿಗಳನ್ನು ಆತ ಮಾಡಿದ್ದ. ‘‘ಸರಕಾರ ಬೀಳಿಸಲು ನಿಗೂಢ ಸಂಚು’ ‘ಸರಕಾರದ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ’ ‘ಕುಮಾರಸ್ವಾಮಿ-ಸಿದ್ದರಾಮಯ್ಯ ತಿಕ್ಕಾಟ’ ಹೀಗೆಲ್ಲ ತಲೆಬರಹಕೊಟ್ಟಿದ್ದೇ ಬಂತು. ಆದರೆ ಸರಕಾರ ಬೀಳುವಂತೆ ಕಾಣುತ್ತಿಲ್ಲ. ಇದೀಗ ಸರಕಾರ ಬೀಳುವುದರ ಬದಲಿಗೆ ತನ್ನ ಬುಡಕ್ಕೆ ಕುತ್ತು ಬರುವ ಸಾಧ್ಯತೆಗಳು ಕಾಣುತ್ತಿರುವುದರಿಂದ ಆತ ಒಳಗೊಳಗೆ ಆತಂಕಗೊಂಡು ದುಃಖಿತನಾದ. ಏನನಿಸಿತೋ...ನೇರವಾಗಿ ಕುಮಾರಸ್ವಾಮಿಗೆ ಪೋನ್ ಮಾಡಿದ....‘‘ಸಾರ್...ನಾನು....’’ ಎಂದದ್ದೇ ಕುಮಾರಸ್ವಾಮಿ ಗುರ್ರ್‌ ಎಂದರು ‘‘ಏನ್ರೀ...ಬ್ರದರ್....ಏನು ಬೇಕು ನಿಮಗೆ?’’ ಕಾಸಿ ಅಂಜುತ್ತಲೇ ಕೇಳಿದ ‘‘ಸಾರ್ ಸರಕಾರ ಯಾವಾಗ ಬೀಳತ್ತೆ ಸಾರ್...’’

‘‘ಬೀಳತ್ತೆ ಬೀಳತ್ತೆ....ಪತ್ರಕರ್ತರ ತಲೆಯ ಮೇಲೆಯೇ ಬೀಳತ್ತೆ. ಕಾಯ್ತೆ ಇರಿ ಬ್ರದರ್...ಕಾಯ್ತ ಇರಿ....’’ ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘‘ಹಾಗಲ್ಲ ಸಾರ್...ನೂರಾರು ಪತ್ರಕರ್ತರ ಉದ್ಯೋಗದ ಪ್ರಶ್ನೆ ಸರ್. ಒಂದು ವೇಳೆ ನಿಮ್ಮ ಸರಕಾರ ಬೀಳದೆ ಇದ್ದರೆ ನೂರಾರು ಪತ್ರಕರ್ತರು ಕೆಲಸ ಕಳ್ಕೋತಾರೆ ಸಾರ್....ಒಂದು ತಿಂಗಳಲ್ಲಿ ಬೀಳಿಸದೇ ಇದ್ದರೆ ಮನೆಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಸಾರ್...ಇದರಿಂದ ರಾಜ್ಯದಲ್ಲಿ ನಿರುದ್ಯೋಗ ಹೆಚ್ಚುತ್ತೆ ಸಾರ್...ಪ್ಲೀಸ್ ಸಾರ್...ಯಾವಾಗ ಬೀಳತ್ತೆ ಹೇಳಿ ಸಾರ್...’’ ಕಾಸಿ ಗಳಗಳನೆ ಫೋನ್‌ನಲ್ಲಿ ಅಳ ತೊಡಗಿದ.

‘‘ನೋಡ್ರೀ...ಏನೇ ಬೀಳಿಸಿದರೂ ನನ್ನ ಬೀಳಿಸೋಕಾಗೋದಿಲ್ಲ....ಸುಮ್ನೆ ನನ್ನ ಜೊತೆಗೆ ವೈರ ಕಟ್ಕೊಂಡು ಪತ್ರಿಕಾಗೋಷ್ಠಿಯ ಕೇಸರಿ ಬಾತ್ ಕಳ್ಕೋಬೇಡಿ....’’ ಎಂದವರೇ ಫೋನ್ ಕುಕ್ಕಿದರು.

ಕುಮಾರಸ್ವಾಮಿ ಅವರು ಬಳಸಿದ ಕೊನೆಯ ಪದದಿಂದ ಆತ ರೋಮಾಂಚನಗೊಂಡ ‘‘ಕೇಸರಿ ಬಾತ್...!!’’

ಅಂದರೆ ಅವರು ತನಗೆ ಪರೋಕ್ಷವಾಗಿ ಕೇಸರಿ ಜೊತೆಗೆ ಮಾತುಕತೆ ನಡೆಯುತ್ತಿದೆ ಎನ್ನುವುದನ್ನು ಹೇಳಿದ್ದಾರೆ ಎಂದೇ ತಿಳಿದುಕೊಂಡ. ಮರುದಿನ ಪತ್ರಿಕೆಯಲ್ಲಿ ತಲೆಬರಹಕೊಟ್ಟೇ ಬಿಟ್ಟ ‘‘ಕೇಸರಿ ಬಾತ್ ಜೊತೆಗೆ ಕೇಸರಿ ನಾಯಕರ ಜೊತೆಗೆ ಮಾತುಕತೆ-ಕುಮಾರಸ್ವಾಮಿಯ ಒಗಟಿನ ಮಾತು’’

ಮರು ದಿನ ಈತ ಬರೆದಿರುವುದನ್ನು ನೋಡಿದ್ದೇ ಉಳಿದೆಲ್ಲ ಪತ್ರಿಕೆಗಳು ಕೇಸರಿ ಬಾತ್‌ಗೆ ಇನ್ನಷ್ಟು ಬಾತ್‌ಗಳನ್ನು ಸೇರಿಸಿ ‘‘ಕಟ್ಟ ಕಡೆಯ ಪ್ರಶ್ನೆ- ಸರಕಾರ ಉಳಿಯುತ್ತದೆಯೇ? ಇಲ್ಲವೇ?’’ ಎಂದು ಮುಗಿಸಿದರು.

ಮರುದಿನ ಪತ್ರಕರ್ತ ಎಂಜಲು ಕಾಸಿ ಮತ್ತೆ ಕುಮಾರಸ್ವಾಮಿಯವರಿಗೆ ಫೋನಾಯಿಸಿದ ‘‘ಸಾರ್...ಮಾತುಕತೆ ಎಲ್ಲಿಯವರೆಗೆ ಬಂತು?’’

‘‘ಬ್ರದರ್....ಸುಮ್ನೆ ನನ್ನ ಕೆಣಕಬೇಡ.....ನಾನು ಸುಮ್ಕಿರಲ್ಲ....’’ ಕುಮಾರಸ್ವಾಮಿ ಎಚ್ಚರಿಸಿದರು.

‘‘ಹಾಗಲ್ಲ ಸಾರ್....ಕೇಸರಿ ನಾಯಕರ ಜೊತೆಗೆ ಮಾತುಕತೆ ನಡೆಸುತ್ತಿದ್ದೇನೆ ಎಂದು ಹೇಳಿದ್ದೀರಲ್ಲ, ಅದು ಎಲ್ಲಿಯವರೆಗೆ ಬಂತು?’’ ಕಾಸಿ ಆಸೆಯಿಂದ ಕೇಳಿದ.

‘‘ನಾನ್ಯಾವಾಗ ಹೇಳಿದೇರಿ?’’ ಕುಮಾರಸ್ವಾಮಿ ಕಿರುಚಿದರು.

‘‘ಅದೇ ಸಾರ್...ಕೇಸರಿ ಬಾತ್ ಮೂಲಕ ನನಗೆ ಗುಪ್ತವಾಗಿ ಮಾಹಿತಿ ಹಂಚಿಕೊಂಡರಲ್ಲ....’’ ಕಾಸಿ ನೆನಪಿಸಿದ.

‘‘ತಲೆಕೆಟ್ಟಿದೆಯೇನ್ರೀ ನಿಮಗೆ? ಯಾಕ್ರೀ ಹಿಂಗೆ ನನ್ನ ಪ್ರಾಣ ತೆಗೀತೀರಾ?’’ ಕುಮಾರಸ್ವಾಮಿ ಅಸಹಾಯಕರಾಗಿ ಕೇಳಿದರು.

‘‘ಹಾಗಲ್ಲ ಸಾರ್...ಸಿದ್ದರಾಮಯ್ಯ ಮತ್ತು ನಿಮ್ಮ ನಡುವೆ ಜಗಳ ಆಗಿದೆಯಂತೆ...?’’ ಕಾಸಿ ಮತ್ತೆ ಕೇಳಿದ.

‘‘ನೋಡ್ರೀ...ಅವರನ್ನು ನೋಡದೆ ತಿಂಗಳು ಎರಡಾಯಿತು....ಸುಮ್ಮನೆ ಇಲ್ಲಸಲ್ಲದ್ದು ಕಲ್ಪಿಸಬೇಡಿ...’’ ಕುಮಾರಸ್ವಾಮಿ ಫೋನ್ ಕುಕ್ಕಿದರು.

ಅವರನ್ನು ನೋಡದೆ ಎರಡು ತಿಂಗಳು ಆಯಿತು!!! ಕಾಸಿಗೆ ತಕ್ಷಣ ಹೊಳೆಯಿತು. ‘‘ಎರಡು ತಿಂಗಳಿಂದ ಕುಮಾರಸ್ವಾಮಿ-ಸಿದ್ದರಾಮಯ್ಯ ಮಾತುಕತೆ ಸ್ಥಗಿತ’’ ಎಂದು ತಲೆಬರಹಕೊಟ್ಟು ಕಾಸಿ ಸುದ್ದಿ ಸಿದ್ಧಗೊಳಿಸಿದ. ಅದನ್ನು ಓದಿದ ಉಳಿದ ಪತ್ರಿಕೆಯವರೆಲ್ಲ ‘‘ಭೇಟಿ ಮಾಡಲು ನಿರಾಕರಿಸಿದ ಸಿದ್ದರಾಮಯ್ಯ-ಕುಮಾರಸ್ವಾಮಿ ಆಕ್ರೋಶ’’ ಎಂದು ತಲೆಬರಹಕೊಟ್ಟು ಇನ್ನಷ್ಟು ವಿವರಗಳನ್ನು ಬರೆದರು. ‘‘ಸಿದ್ದರಾಮಯ್ಯರನ್ನು ಭೇಟಿ ಮಾಡಲು ನಿರಾಕರಿಸಿದ ಮುಖ್ಯಮಂತ್ರಿ-ಕಾಂಗ್ರೆಸ್‌ನಲ್ಲಿ ಅಸಮಾಧಾನ’’ ಎಂದು ಒಂದಿಷ್ಟು ಜನ ಕೊರೆದರು.

ಮರುದಿನ ಎಂಜಲುಕಾಸಿ ಮತ್ತೆ ಕುಮಾರಸ್ವಾಮಿಯವರಿಗೆ ಫೋನ್ ಮಾಡಿದ ‘‘ಸಾರ್, ಸಿದ್ದರಾಮಯ್ಯ ಜೊತೆಗೆ ನಿಮ್ಮ....’’ ಎನ್ನುತ್ತಿದ್ದಂತೆಯೇ ಕುಮಾರ ಸ್ವಾಮಿ ಹಾರಿ ಬಿದ್ದರು ‘‘ನಾನೇನು ಮಾತನಾಡುವುದಿಲ್ಲ ಇಡ್ರೀ ಫೋನ್....’’ ಎಂದು ಆ ಕಡೆಯಿಂದ ಫೋನನ್ನು ಬಲವಾಗಿ ಕುಕ್ಕಿದರು.

ನಾನೇನು ಮಾತನಾಡುವುದಿಲ್ಲ!! ಕಾಸಿ ರೋಮಾಂಚನಗೊಂಡ. ಮರು ದಿನ ಪತ್ರಿಕೆಯ ತಲೆಬರಹ ಸಿದ್ದವಾಯಿತು ‘‘ಸಿದ್ದರಾಮಯ್ಯರ ಜೊತೆಗೆ ನಾನು ಮಾತನಾಡುವುದಿಲ್ಲ’’ ಅಷ್ಟು ಬರೆದದ್ದೇ ಉಳಿದವ ಪತ್ರಿಕೆಯವರೆಲ್ಲ ಅದಕ್ಕೆ ಜೊತೆ ಸೇರಿದರು. ‘‘ಸಿದ್ಧ್ದರಾಮಯ್ಯ ಜೊತೆಗೆ ಮಾತುಕತೆಗೆ ಸಿದ್ಧನಿಲ್ಲ-ಕುಮಾರಸ್ವಾಮಿ’’ ‘‘ಸಿದ್ಧರಾಮಯ್ಯರ ಜೊತೆಗೆ ಮಾತನಾಡಲು ಏನೂ ಇಲ್ಲ’’ ಹೀಗೆ ಬಗೆಬಗೆಯಾಗಿ ಸುದ್ದಿಗಳ ಉತ್ಪಾದನೆಯಾಯಿತು.

ಮರುದಿನ ಎಂಜಲು ಕಾಸಿ ಮತ್ತೆ ಕುಮಾರಸ್ವಾಮಿಗೆ ಪೋನ್ ಮಾಡಿದ ‘‘ಸಾರ್...ಸಿದ್ದರಾಮಯ್ಯರ ಜೊತೆಗೆ...’’

ಈಗ ಕುಮಾರಸ್ವಾಮಿ ಜಾಗರೂಕರಾದರು ‘‘ನೋಡಿ ಕಾಸಿಯವ್ರೆ....ಈಗಷ್ಟೇ ನಾನು ಮತ್ತು ಸಿದ್ದರಾಮಯ್ಯ ಅರ್ಧಗಂಟೆ ಜೊತೆಯಾಗಿ ಮಾತನಾಡಿದೆವು. ಸಾಕ್ಷಿಯಾಗಿ ಡಿ.ಕೆ. ಶಿವಕುಮಾರ್ ಕೂಡ ಇದ್ದರು. ನಾನು ಟೀ ಕುಡಿದರೆ ಅವರು ಕಾಫಿ ಕುಡಿದರು. ಎಲ್ಲಿಗೋ ಅರ್ಜೆಂಟ್ ಹೋಗುವುದಕ್ಕಿರುವ ಕಾರಣ ಅವರು ಬೇಗ ಹೋದರು. ಇಲ್ಲವಾದರೆ ಒಂದು ಗಂಟೆ ನಾವು ಮಾತನಾಡುತ್ತಿದ್ದೆವು. ನಾಳೆ ಮತ್ತೆ ಒಟ್ಟು ಕೂತು ಮಾತನಾಡಲಿದ್ದೇವೆ. ಫೋಟೊ ಕಳುಹಿಸುತ್ತೇನೆ....’’ ಎಂದು ಮೆಲ್ಲನೆ ಪೋನನ್ನು ಇಟ್ಟು ‘‘ಅಬ್ಬ ಬದುಕಿದೆ ’’ ಎಂದು ನಿಟ್ಟುಸಿರಿಟ್ಟರು. ಕಾಸಿಗೆ ಸ್ಕೂಪ್ ಸಿಕ್ಕಂತಾಯಿತು. ‘‘ಡಿಕೆಶಿ ಮಧ್ಯಸ್ಥಿಕೆಯಲ್ಲಿ ಸಿದ್ದರಾಮಯ್ಯ - ಕುಮಾರಸ್ವಾಮಿ ನಡುವೆ ಸುದೀರ್ಘ ಮಾತುಕತೆ’’ ಎಂದು ಕಾಸಿ ಬರೆದದ್ದೇ ತಡ ಉಳಿದವರು ತಮ್ಮ ತಮ್ಮ ತಲೆಬರಹಗಳ ಕೊಡುಗೆಗಳನ್ನು ನೀಡ ತೊಡಗಿದರು. ‘‘ಸಿದ್ದರಾಮಯ್ಯ-ಕುಮಾರಸ್ವಾಮಿ ಮಾತುಕತೆ ವಿಫಲ, ಅರ್ಧದಲ್ಲೇ ಎದ್ದು ಹೋದ ಸಿದ್ದರಾಮಯ್ಯ-ನೊಂದು ಹೇಳಿಕೆ ನೀಡಿದ ಕುಮಾರಸ್ವಾಮಿ...’’ ‘‘ಭಿನ್ನಮತ ಬಹಿರಂಗ-ಕಾಫಿ ಕುಡಿದ ಸಿದ್ದರಾಮಯ್ಯ, ಚಹಾ ಕುಡಿದ ಕುಮಾರಸ್ವಾಮಿ’’ ‘‘ಮಾತುಕತೆ ಮರುದಿನಕ್ಕೆ ಮುಂದೂಡಿಕೆ’’

ಒಂದು ದಿನ ಕಾಸಿಯ ಕಚೇರಿಗೆ ಫೋನೊಂದು ಬಂತು ‘‘ರೀ...ಸಂಪಾದಕರೇ...ಕುಮಾರಸ್ವಾಮಿ ಸರಕಾರ ಯಾವಾಗ ಬೀಳತ್ತೆ....?’’

‘‘ಪ್ರಯತ್ನ ಪಡ್ತಾ ಇದ್ದೇವೆ ಸಾರ್....ಶೀಘ್ರದಲ್ಲೇ ಬೀಳತ್ತೆ....’’

‘‘ನೋಡ್ರೀ...ನಾನು ನಿಮ್ಮ ಪತ್ರಿಕೆಯ ಅಭಿಮಾನಿ. ನಿಮ್ಮ ತಲೆಬರಹ ನೋಡಿ, ಇವತ್ತು ಬೀಳತ್ತೆ, ನಾಳೆ ಬೀಳತ್ತೆ ಎಂದು ಹೊಸ ಬಟ್ಟೆ ಹಾಕಿ ಕಾಯ್ತೆ ಇದ್ದೇನೆ....ಆದ್ರೆ ಹೊಸ ಬಟ್ಟೆಗಳೆಲ್ಲ ಹಳೆಯದಾಯಿತು...ನಿಮ್ಮ ಪತ್ರಿಕೆಯನ್ನು ನಂಬಿದರೆ ಸರಕಾರ ಬೀಳುವ ಹಾಗಿಲ್ಲ...’’

‘‘ನೀವು ಯಾರು ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.

‘‘ಯಡಿಯೂರಪ್ಪ ಕಣ್ರೀ....ನಿಮ್ಮ ಪತ್ರಿಕೆ ಓದಿ ಪ್ರತಿ ದಿನ ಪ್ರತಿಜ್ಞಾ ಸ್ವೀಕಾರಕ್ಕೆ ಸಿದ್ಧನಾಗಿ ವಿಧಾನಸೌಧಕ್ಕೆ ದೌಡಾಯಿಸುತ್ತಿದ್ದೇನೆ....ಥತ್, ನಿಮ್ಮನ್ನು ನಂಬಿ...’’ ಆ ಕಡೆಯಿಂದ ಫೋನ್ ಕುಕ್ಕಿದ ಸದ್ದು.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News