ಗಾಂಧಿ: ಅರ್ಥಾಂತರದ ಅಪಾಯ
ಗಾಂಧಿಯನ್ನು, ಗಾಂಧಿವಾದವನ್ನು ಸೋಲಿಸುವ ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ. ಆದರೆ ಗಾಂಧಿ ಎಂದೂ ಸೋಲದಂತೆ, ಗಾಂಧಿವಾದದ ತಿರುಳು ಸದಾ ಗೆಲ್ಲುವಂತೆ ನೋಡಿಕೊಳ್ಳುವ ಜವಾಬ್ದಾರಿ ಈ ದೇಶದ ಜನರ ಮೇಲಿದೆ. ರಾಜಕಾರಣಿಗಳ ಮೇಲಲ್ಲ. ತನ್ನ ಬದುಕಿನ ಕೊನೆಯ ದಿನಗಳಲ್ಲಿ ದುಃಖ ಮತ್ತು ಹತಾಶೆಯ ಮಧ್ಯೆ ಬದುಕಿ, ತಾನು ಮಹಾತ್ಮಾ ಎಂದು ಯಾವತ್ತೂ ಭ್ರಮಿಸದೆ ಹಂತಕನ ಗುಂಡಿಗೆ ಬಲಿಯಾಗಿ ಸತ್ತ ಗಾಂಧೀಜಿಯ ವಿಚಾರಗಳು ಚಿಂತನೆಗಳು ಸಾಯುವಷ್ಟು, ಸೋಲುವಷ್ಟು ದುರ್ಬಲವಲ್ಲ ಎಂಬುದೇ ಮಾನವನ ಇತಿಹಾಸಕ್ಕೆ ಇರುವ ದೊಡ್ಡ ಸಮಾಧಾನ ಮತ್ತು ಭರವಸೆ ಎಂಬುದನ್ನು ನಾವು ಮರೆಯಬಾರದು.
ಅದೊಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ದೇಶಾದ್ಯಂತದಿಂದ ಭಾರೀ ಸ್ಪರ್ಧಾತ್ಮಕ ಪರೀಕ್ಷೆಗಳನ್ನೆದುರಿಸಿ, ಅದರಲ್ಲಿ ದೊರಕುವ ರ್ಯಾಂಕ್‌ಗಳ ಆಧಾರದಲ್ಲಿ ಹಂಚಿಕೆಯಾಗುವ ಸೀಟುಗಳಿಗಾಗಿ ವಿದ್ಯಾರ್ಥಿಗಳೂ, ಪೋಷಕರೂ ಅಲ್ಲಿಗೆ ಮುಗಿಬೀಳುತ್ತಾರೆ. ಯಾಕೆಂದರೆ ಅಲ್ಲಿ ಸೀಟು ದೊರಕಿ ಪದವಿ ಪಡೆದು ಹೊರ ಬರುವುದರೊಳಗಾಗಿ ಬಹಳಷ್ಟು ಮಂದಿ ವಿದ್ಯಾರ್ಥಿಗಳಿಗೆ ‘ಕ್ಯಾಂಪಸ್ ಆಯ್ಕೆ’ಯಲ್ಲೇ ನೌಕರಿ ದೊರಕಿ ಬಿಡುತ್ತದೆ. ಭಾರೀ ವೇತನವೂ ಸಿಗುತ್ತದೆ ಅಥವಾ ಸಿಗುತ್ತದೆಂಬ ನಂಬಿಕೆ ಇದೆ.
ಅಲ್ಲಿ ನಡೆದ ಆಂಗ್ಲಭಾಷಾ ಕೌಶಲ್ಯಗಳ ಪರೀಕ್ಷೆಯ ಒಂದು ಪ್ರಶ್ನೆಪತ್ರಿಕೆಯಲ್ಲಿ ‘‘ಈ ಕೆಳಗಿನ ಪಠ್ಯ ಭಾಗವನ್ನು ಓದಿ ಅದರ ಕೆಳಗೆ ನೀಡಲಾಗಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ’’ ಎಂಬ, ದಶಕಗಳ ಲಾಗಾಯಿತು ಈ ದೇಶದ ಪಠ್ಯಕ್ರಮದ ಭಾಗವಾಗಿರುವ ಒಂದು ಪ್ರಶ್ನೆ ಇತ್ತು. ಅಲ್ಲಿ ನೀಡಲಾದ ಪಠ್ಯಭಾಗ ಭಾರತದ ಸ್ವಾತಂತ್ರ ಹೋರಾಟದ ಆತ್ಮದಂತಿದ್ದ ಮಹಾತ್ಮಾ ಗಾಂಧಿಯವರ ಒಂದು ವಿಚಾರಣೆಯನ್ನು ವಿವರಿಸುತ್ತದೆ. ಆ ಪಠ್ಯದ ಮಖ್ಯಾಂಶಗಳಿಷ್ಟು:
‘‘1922ರ ಮಾರ್ಚ್ 18ರಂದು ನಡೆದ ವಿಚಾರಣೆ ಎಷ್ಟೊಂದು ಶಾಂತವಾಗಿ, ವ್ಯವಸ್ಥಿತವಾಗಿ, ಜಗಳಗಂಟತನ ಹಾಗೂ ಕ್ರೋಧದ ಹೊರತಾಗಿ ನಡೆಯಿತೆಂದರೆ ಅದು ಇಬ್ಬರು ವ್ಯಕ್ತಿಗಳ ನಡುವಿನ ಪ್ರಶಾಂತ ಮುಖಾಮುಖಿಯ ರೂಪ ಪಡೆಯಿತು. ಅವರಿಬ್ಬರು ಬಹಳ ವರ್ಷಗಳಿಂದ ಪರಸ್ಪರ ಪರಿಚಿತರು ಮತ್ತು ಒಬ್ಬರು ಇನ್ನೊಬ್ಬರನ್ನು ಅಧ್ಯಯನ ಮಾಡಿದ್ದರು. ಸಾಮ್ಯಸ್ವಭಾವದ ನ್ಯಾಯಾಧೀಶರು ಕ್ಷಮೆಯಾಚನೆ ಮಾಡುವ ರೀತಿ ಕಾಣಿಸುತ್ತಿದ್ದರು. ಗಾಂಧಿ ವೌನವಾಗಿ ತೃಪ್ತರಾಗಿದ್ದರು ಮತ್ತು ಮುಗುಳು ನಗೆ ಬೀರುತ್ತಿದ್ದರು. ವಿಚಾರಣೆಯಲ್ಲಿ ಹಾಜರಿದ್ದ ವೀಕ್ಷಕರೊಬ್ಬರು ಗಾಂಧಿ ‘ಹಬ್ಬದ ದಿನ ಇರುವ ಹಾಗೆ ಖುಶಿ’ಯಾಗಿದ್ದರು ಎಂದು ಹೇಳಿದರು. ಆದರೆ ತನಗೆ ನೀಡಬಹುದಾದ ಶಿಕ್ಷೆಯ ಗಂಭೀರತೆಯ ಬಗ್ಗೆ ಗಾಂಧಿಗೆ ಅರಿವು ಇತ್ತು. ಯಾಕೆಂದರೆ ಅವರ ವಿರುದ್ಧ ದೇಶದ್ರೋಹದ ಆಪಾದನೆ ಹೊರಿಸಲಾಗಿತ್ತು ಮತ್ತು ಯಾವುದೇ ಸರಕಾರ ದೇಶದ್ರೋಹಕ್ಕೆ ಸೌಮ್ಯ ಶಿಕ್ಷೆ ನೀಡುವುದಿಲ್ಲ. ತನಗೆ ದೀರ್ಘಾವಧಿಯ ಜೈಲು ಶಿಕ್ಷೆಯಾಗಬಹುದೆಂಬ ನಿರೀಕ್ಷೆ ಅವರಿಗೆ ಇತ್ತು.... ನ್ಯಾಯಾಧೀಶರು ಗಂಭೀರವಾಗಿ ತಲೆ ತಗ್ಗಿಸಿ ತನ್ನ ಗೌರವಾನ್ವಿತ ಕೆೈದಿಗೆ ವಂದಿಸಿ ತನ್ನ ಆಸನದಲ್ಲಿ ಕುಳಿತಾಗಲೇ ವಿಚಾರಣೆ ಯಾವ ರೀತಿ ನಡೆಯಬಹುದು ಎಂಬುದರ ಸುಳಿವು ಸಿಕ್ಕಿತು. ತಾನೂ ತಲೆ ತಗ್ಗಿಸಿ ನ್ಯಾಯಾಧೀಶರಿಗೆ ಗಾಂಧಿ ವಂದಿಸಿದರು. ‘ಶ್ರೇಷ್ಠ ಆದರ್ಶಗಳ ಮತ್ತು ಉದಾತ್ತ ಸಂತನ ಬದುಕು ಬದುಕುತ್ತಿದ್ದ’ ಓರ್ವ ವ್ಯಕ್ತಿಯ ಜೊತೆ ತಾನು ವ್ಯವಹರಿಸುತ್ತಿದ್ದೇನೆ ಎಂಬುದು ತನಗೆ ತುಂಬಾ ಚೆನ್ನಾಗಿ ತಿಳಿದಿತ್ತು ಎಂದು ನ್ಯಾಯಾಧೀಶರು ವಿಚಾರಣೆ ಬಳಿಕ ಹೇಳಿದರು. ಆದರೆ ಕಾನೂನಿನ ಪ್ರಕಾರ ನಡೆದುಕೊಳ್ಳುವುದು ಅವರ ಕರ್ತವ್ಯವಾಗಿತ್ತು. ಕಾನೂನು ಸಂತರಿಗೆ ಅಂತಹ ಗೌರವ ತೋರುವುದಿಲ್ಲ. ಅವರನ್ನು ನೋಡುವಾಗ ತನಗಿಷ್ಟವಿಲ್ಲದ ಕೆಲಸವನ್ನು ಸೌಜನ್ಯ ಹಾಗೂ ಉತ್ತಮ ತಿಳುವಳಿಕೆಯಿಂದ ಮಾಡುವ ಒಬ್ಬ ಮನುಷ್ಯನ ಹಾಗೆ ಅವರು ಕಂಡರು. ತನ್ನ ಪರವಾಗಿ ವಾದಿಸಲು ಗಾಂಧಿ ನ್ಯಾಯವಾದಿಗಳನ್ನು ನೇಮಿಸಿಕೊಂಡಿರಲಿಲ್ಲ ಮತ್ತು ಅವರ ವಿರುದ್ಧ ಹೊರಿಸಲಾದ ಎಲ್ಲ ಆಪಾದನೆಗಳನ್ನು ಅವರು ಒಪ್ಪಿಕೊಂಡಿದ್ದರಿಂದ ನ್ಯಾಯಾಧೀಶರ ಕೆಲಸ ಸುಲಭವಾಯಿತು.’’
ಪ್ರಶ್ನೆಪತ್ರಿಕೆ ಅಚ್ಚಾಗುವ ಮೊದಲು ಅದನ್ನೋದಿದ ಪ್ರಾಧ್ಯಾಪಕರೊಬ್ಬರು ಈ ಪ್ರಶ್ನೆಗೆ ನೀಡಲಾದ ಪಠ್ಯಭಾಗವನ್ನು ತೆಗೆಯಬೇಕು. ಅದರ ಬದಲು ಬೇರೆ ಯಾವುದಾದರೂ ಪಠ್ಯದಿಂದ ಆಯ್ದ ಭಾಗಗಳನ್ನು ನೀಡಬೇಕು ಎಂದರು. ಯಾಕೆ? ಎಂದು ಕೇಳಿದಾಗ ದೊರಕಿದ ಉತ್ತರ: ‘‘ಅದು ವಿವಾದಾಸ್ಪದವಾಗಿದೆ’’.
ಗಾಂಧೀಜಿಯ ನ್ಯಾಯಾಲಯ ವಿಚಾರಣೆಯನ್ನು ಇಷ್ಟೊಂದು ನಿರ್ಲಿಪ್ತವಾಗಿ ವಿವರಿಸುವ ಒಂದು ಪಠ್ಯ ‘ವಿವಾದಾಸ್ಪದ’ ಅನ್ನಿಸುವಂತಹ ಏನಾದರೂ ಅದರಲ್ಲಿದೆಯೇ? ಎಂದು ತಡಕಾಡಿದರೆ ನಿಮಗೆ ಏನೂ ‘ವಿವಾದಾಸ್ಪದ’ವಾದ ಸರಕು ಕಾಣಿಸುವುದಿಲ್ಲ. ಅದರಲ್ಲಿರುವ ‘ರಾಜದ್ರೋಹ’ (sedition) ಅಥವಾ ದೇಶದ್ರೋಹ ಎಂಬ ಪದವೇ ಭಯೋತ್ಪಾದಕ ಅನ್ನಿಸುತ್ತದೆಯೇ? ಅಥವಾ ‘ಗಾಂಧಿ’ ಎಂಬ ಪದವೇ ಸದ್ಯದ ಪ್ರಭುತ್ವದ ಪರಿವಿಡಿಯಲ್ಲಿ, ಶಬ್ದಕೋಶದಲ್ಲಿ ‘ವಿವಾದಾಸ್ಪದ’. ಆದ್ದರಿಂದ ಸರಕಾರದಿಂದ ಮಾನ್ಯತೆ ಪಡೆಯುವ ಒಂದು ಸಂಸ್ಥೆ ಇಂತಹ ‘ವಿವಾದ’ಕ್ಕೆ ಯಾಕೆ ಆಸ್ಪದ ನೀಡಬೇಕು? ಆಸ್ಪದ ನೀಡಿ ಯಾಕೆ ಇಲ್ಲದ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬೇಕು? ಎಂಬ ಯೋಚನಾ ವಿಧಾನ ಕೆಲಸ ಮಾಡಿರಬಹುದೆ?
ಗಾಂಧೀಜಿಯವರ 150ನೇ ಜನ್ಮದಿನದ ಸಂದರ್ಭದಲ್ಲಿ ‘ಗಾಂಧಿ’ ಎಂಬ ಶಬ್ದ ಯಾವ್ಯಾವ ರೀತಿಯ ಸಮೀಕರಣಗಳಿಗೆ ಈಡಾಗಿದೆ? ಎಂದು ಯೋಚಿಸುವಾಗ ಒಂದು ರೀತಿಯ ಆತಂಕ ಮತ್ತು ಅವ್ಯಕ್ತ ಭಯ ಕಾಡತೊಡಗುತ್ತದೆ. ಸಂವಾದ, ಸೌಜನ್ಯ, ಸಹನೆ, ಸತ್ಯಸಂಧತೆ ಮತ್ತು ಸರಳತೆಗೆ ಸಂವಾದಿಯಾಗಿದ್ದವರು ಗಾಂಧಿ. ತನ್ನ ಶಾಲಾ ಜೀವನದಲ್ಲಿ ತೀರ ಸಾಮಾನ್ಯದರ್ಜೆಯ (ಮೀಡಿಯೋಕರ್) ವಿದ್ಯಾರ್ಥಿಯಾಗಿದ್ದುಕೊಂಡು, ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಸುಮಾರು ಶೇ.40ರಷ್ಟು ಅಂಕಗಳಿಸಿದ್ದ, ಶಾಲೆಯ ವಾರ್ಷಿಕ ಪರೀಕ್ಷೆಗಳಲ್ಲಿ ಯಾವತ್ತೂ ಸರಾಸರಿ 45 ಮತ್ತು 55 ಶೇಕಡಾಕ್ಕಿಂತ ಜಾಸ್ತಿ ಅಂಕಗಳನ್ನು ಗಳಿಸದಿದ್ದ ಗಾಂಧಿ ಭವಿಷ್ಯದಲ್ಲಿ ಜಗತ್ತೇ ಆಶ್ಚರ್ಯಪಡುವಂತೆ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದವರು. ಅಮೆರಿಕದ ನಾಗರಿಕ ಹೋರಾಟಗಾರ ಮತ್ತು ತನ್ನ 35ನೆಯ ವಯಸ್ಸಿನಲ್ಲೇ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ವರ್ಣ ದ್ವೇಷ ನೀತಿಯನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ನೆಲ್ಸನ್ ಮಂಡೇಲಾರಂತಹ ಹಲವು ಜಾಗತಿಕ ನಾಯಕರ ಹೋರಾಟಗಳಿಗೆ ಸ್ಫೂರ್ತಿಯಾದವರು ಗಾಂಧಿ.
ಜಗತ್ತಿನ ಪಾಲಿಗೆ ಇಂದಿಗೂ ‘ಭಾರತ ಎಂದರೆ ಗಾಂಧಿ, ಗಾಂಧಿ ಎಂದರೆ ಭಾರತ’ ಎನ್ನುವ ಭಾವನೆ ಜೀವಂತವಾಗಿಯೇ ಇದೆ. 32 ವರ್ಷಗಳ ಹಿಂದೆ ಇಂಗ್ಲೆಂಡಿನ ಬ್ಲಾಕ್‌ಪೂಲ್ ರೈಲು ನಿಲ್ದಾಣದಲ್ಲಿ ಮ್ಯಾಂಚೆಸ್ಟರ್‌ಗೆ ಹೋಗುವ ರೈಲಿಗಾಗಿ ನಾನು ಕಾಯುತ್ತ ನಿಂತಿದ್ದಾಗ, ಅಲ್ಲಿ ಪ್ರವಾಸಕ್ಕೆ ಬಂದಿದ್ದ ಬ್ರಿಟಿಷ್ ಶಾಲಾ ಬಾಲಕಿಯರ ತಂಡ ನನ್ನನ್ನು ಕಂಡದ್ದೆ ‘‘ಗ್ಯಾಂಡಿ, ಗ್ಯಾಂಡಿ’’ ಎಂದು ಕೂಗಿದ್ದು ಇನ್ನೂ ನನ್ನ ನೆನಪಿನಲ್ಲಿ ಹಸಿರಾಗಿದೆ. ಭಾರತೀಯ, ‘ಇಂಡಿಯನ್’ ಎನ್ನುವ ಅರ್ಥದಲ್ಲಿ ಅವರು ಹಾಗೆ ಕೂಗಿ ಕರೆದಿದ್ದರು.
ಮನುಷ್ಯನ ಸಾರ್ವಕಾಲಿಕ ದೌರ್ಬಲ್ಯಗಳ ವಿರುದ್ಧ ನಡೆಸುವ ನಿರಂತರ ಹೋರಾಟದ ಹಾಗೂ ಮಾನವ ಚೇತನದ ಹಿರಿಮೆಯ ಸಂಕೇತವಾಗಿದ್ದ ಗಾಂಧಿ, ಅತ್ಯಂತ ಧಾರ್ಮಿಕನಾಗಿದ್ದ್ದೂ ಎಂದು ಮತಾಂಧನಾಗದ ಮಹಾನ್ ವ್ಯಕ್ತಿ. ‘ಎಲ್ಲ ಧರ್ಮಗಳೂ ಅಪರಿಪೂರ್ಣ’ ಎಂದಿದ್ದ ಗಾಂಧಿ ಎಲ್ಲಾ ಧರ್ಮಗಳ ಸಾರವನ್ನು ತನ್ನೊಳಗೆ ಸಾಕಾರಗೊಳಿಸಿಕೊಂಡಿದ್ದ ಸಜ್ಜನ.
‘ವಿಶ್ವದ ಅತ್ಯಂತ ಪ್ರಸಿದ್ಧ ರಾಜಕೀಯ ಭಿನ್ನಮತೀಯ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಾಂಧಿ ಎಂದಿಗಿಂತಲೂ ಹೆಚ್ಚಾಗಿ ಇಂದೂ ನಮಗೆ ಅನಿವಾರ್ಯವಾಗಿದ್ದಾರೆ. ‘ಭಿನ್ನಮತ’ವನ್ನೇ ‘ಸೆಡಿಶನ್’ಗೆ ಸಮಾನಾರ್ಥಕ ಶಬ್ದವಾಗಿ ಬಳಸುವ ಸಾಮಾಜಿಕ ರಾಜಕೀಯ ಸನ್ನಿವೇಶ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ, ಭಿನ್ನಮತ ಸ್ವತಂತ್ರ ಭಾರತದ ಒಂದು ಗತ ವೈಭವವಾಗುವ ಭಯ ಕಾಡುತ್ತಿರುವಾಗ ಗಾಂಧಿಯಿಂದ ಸಂವಾದ ಹಾಗೂ ವಾಗ್ವಾದದ ಮಹತ್ವದ ಕುರಿತು ನಾವು ಕಲಿಯಬೇಕಾದದ್ದು ಬಹಳಷ್ಟು ಇದೆ. ಗಾಂಧಿಯನ್ನು ಕೊಂದ ಧರ್ಮಾಂಧನನ್ನು ಹಾಡಿ ಹೊಗಳುವ, ಆತನ ಹೆಸರಿನಲ್ಲಿ ದೇವಾಲಯ ನಿರ್ಮಿಸುವ ಹಂತಕ್ಕೆ ತಲುಪಿರುವ ಒಂದು ದೇಶಕ್ಕೆ ‘‘ಗಾಂಧಿ ಇನ್ನೂ ಬೇಕೆ?’’ ಎಂದು ಕೇಳುವ ಹಾದಿ ತಪ್ಪಿದ ಹೊಸ ತಲೆಮಾರುಗಳಿಗೆ ಗಾಂಧೀಜಿಯ ಪ್ರಸ್ತುತೆಯನ್ನು ಮನವರಿಕೆ ಮಾಡಿಸುವುದು ಸುಲಭದ ಕೆಲಸವಲ್ಲ. ಯಾಕೆಂದರೆ ‘ಗಾಂಧಿ’ ಎಂಬ ಶಬ್ದವೇ ತಮಗೆ ಎಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೋ? ಎಂದು ಶಿಕ್ಷಿತರು, ಶಿಕ್ಷಕರು ಭಾವಿಸುವಂತಾದಲ್ಲಿ, ಅಂತಹ ಭಾವನೆ ‘ಗಾಂಧಿ’ ಶಬ್ದದ ಅರ್ಥಾಂತರದ ಅಪಾಯವನ್ನು ಸೂಚಿಸುತ್ತದೆ. ಯಾಕೆಂದರೆ ಭಾರತಕ್ಕೆ ಬಾಪೂಜಿಯ ಕೊಡುಗೆಯನ್ನೇ ಅಮುಖ್ಯಗೊಳಿಸಿ ‘ಗಾಂಧಿ’ ಎಂಬ ಒಂದು ವಿಚಾರವನ್ನೇ, ಐಡಿಯಾವನ್ನೇ ಪಕ್ಕಕ್ಕೆ ತಳ್ಳಿ ಧರ್ಮಾಂಧ ನಾಯಕರನ್ನು, ಆ ನಾಯಕರ ವಿಭಜನಾವಾದಿ ಸಿದ್ಧಾಂತಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಕಾಟಾಚಾರಕ್ಕಾಗಿ ಗಾಂಧಿಯ ಹೆಸರು ಹೇಳುತ್ತ ಆಂತರ್ಯದಲ್ಲಿ ಹಿಂಸೆಯನ್ನು ಹೊತ್ತುಕೊಂಡು ಸಮಾಜದಲ್ಲಿ ರಕ್ತದೋಕುಳಿ ಹರಿಸಲು ಹೊಂಚು ಹಾಕುತ್ತಿರುವ ಶಕ್ತಿಗಳು ಸೂಕ್ತ ಸಮಯಕ್ಕಾಗಿ ಕಾಯುತ್ತಿವೆ. ನಾವು ಅಂತರ್‌ರಾಷ್ಟ್ರೀಯ ಆಧ್ಯಾತ್ಮಿಕ ವೇದಿಕೆಗಳಲ್ಲಿ ನಮ್ಮದು ‘ಸತ್ಯ ಮತ್ತು ಅಹಿಂಸೆಯ ದೇಶ’ವೆಂದು ಹೆಮ್ಮೆಪಟ್ಟುಕೊಳ್ಳುತ್ತಿರುವಾಗ ಸುಳ್ಳು ಮತ್ತು ಹಿಂಸೆಯಿಂದ ಭಾರತೀಯ ಸಮಾಜ ಜರ್ಜರಿತವಾಗುತ್ತಿದೆ.
ಗಾಂಧಿಯನ್ನು, ಗಾಂಧಿವಾದವನ್ನು ಸೋಲಿಸುವ ಸಂಘಟಿತ ಪ್ರಯತ್ನಗಳು ನಡೆಯುತ್ತಿವೆೆ. ಆದರೆ ಗಾಂಧಿ ಎಂದೂ ಸೋಲದಂತೆ, ಗಾಂಧಿವಾದದ ತಿರುಳು ಸದಾ ಗೆಲ್ಲುವಂತೆ ನೋಡಿಕೊಳ್ಳುವ ಜವಾಬ್ದಾರಿ ಈ ದೇಶದ ಜನರ ಮೇಲಿದೆ. ರಾಜಕಾರಣಿಗಳ ಮೇಲಲ್ಲ. ತನ್ನ ಬದುಕಿನ ಕೊನೆಯ ದಿನಗಳಲ್ಲಿ ದುಃಖ ಮತ್ತು ಹತಾಶೆಯ ಮಧ್ಯೆ ಬದುಕಿ, ತಾನು ಮಹಾತ್ಮಾ ಎಂದು ಯಾವತ್ತೂ ಭ್ರಮಿಸದೆ ಹಂತಕನ ಗುಂಡಿಗೆ ಬಲಿಯಾಗಿ ಸತ್ತ ಗಾಂಧೀಜಿಯ ವಿಚಾರಗಳು ಚಿಂತನೆಗಳು ಸಾಯುವಷ್ಟು, ಸೋಲುವಷ್ಟು ದುರ್ಬಲವಲ್ಲ ಎಂಬುದೇ ಮಾನವನ ಇತಿಹಾಸಕ್ಕೆ ಇರುವ ದೊಡ್ಡ ಸಮಾಧಾನ ಮತ್ತು ಭರವಸೆ ಎಂಬುದನ್ನು ನಾವು ಮರೆಯಬಾರದು.
‘ಗೆಲ್ಲುತ್ತಿರಲಿ ಗಾಂಧಿ’ ಎಂಬ ನನ್ನ ಒಂದು ಕವನದ ಕೊನೆಯ ಐದು ಸಾಲುಗಳೊಂದಿಗೆ ಈ ಲೇಖನವನ್ನು ಮುಕ್ತಾಗೊಳಿಸುತ್ತೇನೆ.
ಆಗೊಮ್ಮೆ ಈಗೊಮ್ಮೆಯಾದರೂ ಹೀಗೆ ಗೆಲ್ಲುತ್ತಿರಲಿ ಗಾಂಧಿ ಹಿಂಸೆಯ ವಿನಾಶಕ್ಕೆ ಹಾಡುತ್ತಿರಲಿ ಗಾಂಧಿ
ಬೇಡ ನೆನಪಿಡುವುದು ನಾವು ಗೋಡ್ಸೆ ಸಾಲಿನ ನರಹಂತಕನ
ಬೇಡ ಎನ್ನೋಣ ಮಾರಣ ಹೋಮೇಂದ್ರರ ಜಮಾನ
ಕಳೆಯದಿರೋಣ ಕ್ರಿಸ್ತ ಬುದ್ಧ ಬಸವ ಅಲ್ಲಮ ಅಂಬೇಡ್ಕರರ ಮಾನ
(bhaskarrao599@gmail.com)