ಅಲ್ಲಿ ಉಂಬಡೆ ಸಂಗ

Update: 2018-10-05 18:35 GMT

 ಆಕಳು ಕಳ್ಳರ ಕೊಂಡೊಯ್ದರೆನ್ನದಿರಿಂ ಭೋ ನಿಮ್ಮ ಧರ್ಮ!

ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ!
ಅರಸಾಡದಿರಿಂ ಭೋ, ನಿಮ್ಮ ಧರ್ಮ!
ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ!
ಕೂಡಲಸಂಗಮದೇವ ಏಕೋಭಾವ.
                                         -ಬಸವಣ್ಣ

 ಬಯಲು ಶಬ್ದ ಲಿಂಗವಂತ ಧರ್ಮದಲ್ಲಿ ಬಹಳ ಮಹತ್ವ ಪಡೆದಿದೆ. ಇಡೀ ಧರ್ಮವೇ ಈ ಬಯಲು ಶಬ್ದದಿಂದ ಮೂಡಿ ಬಂದಿದೆ. ಮೊದಲಿಗೆ ಇಡೀ ವಿಶ್ವ ಬಯಲಾಗಿತ್ತು. ನಂತರ ವಿಶ್ವವು ಆ ಬಯಲಿನಿಂದಲೇ ರೂಪು ತಾಳಿತು. ಕೊನೆಗೊಂದು ದಿನ ಇಡೀ ವಿಶ್ವ ಬಯಲಲ್ಲೇ ಲಯವಾಗಿ ಬಯಲೇ ಆಗುವುದು. ಬಯಲಿನಿಂದ ಬಂದು ರೂಪುಗೊಂಡಂಥ ಎಲ್ಲವೂ ಕೊನೆಗೊಂದು ದಿನ ಹೀಗೆ ಬಯಲಾಗುವಂಥ ನಿಸರ್ಗ ಸತ್ಯವನ್ನು ಅರಿತುಕೊಂಡವರು ಇಡೀ ಜೀವಜಗತ್ತನ್ನು ತಮ್ಮಳಗೆ ಇಂಬಿಟ್ಟುಕೊಳ್ಳುತ್ತಾರೆ. ಆಗ ಅವರಿಗೆ ಇಡೀ ಜೀವರಾಶಿಯ ಬಗ್ಗೆ ಕರುಣಾರಸ ಉಕ್ಕುವುದರಿಂದ ಲಿಂಗಭೇದ, ಜಾತಿಭೇದ, ವರ್ಣಭೇದ, ವರ್ಗಭೇದ ಮುಂತಾದ ಭೇದಗಳು ಅಸಹ್ಯವಾಗಿ ಕಾಣತೊಡಗುತ್ತವೆ. ಇಂಥ ಭೇದಗಳು ಮನುಷ್ಯರ ಮಧ್ಯೆ ಕೃತ್ರಿಮವಾದ ಗೋಡೆಗಳನ್ನು ಕಟ್ಟುತ್ತ ಹುಸಿ ಬಯಲುಗಳನ್ನು ಸೃಷ್ಟಿಸಿವೆ. ಆ ಮೂಲಕ ನೈಜ ಬಯಲಿನ ದರ್ಶನವನ್ನು ಮರೆಮಾಚಿವೆ. ಇದನ್ನೆಲ್ಲ ಅರಿತ ಬಸವಣ್ಣನವರು ಕೂಡಲಸಂಗಮದೇವ ಏಕೋಭಾವ ಎಂದು ತಿಳಿಸಿದ್ದಾರೆ.
 ಏಕೋಭಾವದ ಮನಸ್ಸುಳ್ಳ ಬಸವಣ್ಣನವರಿಗೆ ಆಕಳನ್ನು ಕದ್ದ ಕಳ್ಳನ ಕುರಿತು ಇಂಥ ಅನನ್ಯ ವಿಚಾರಗಳು ಹೊರಹೊಮ್ಮುವುದು ಸ್ವಾಭಾವಿಕವಾಗಿದೆ. ಅಂತೆಯೇ ಅವರು ಆಕಳನ್ನು ಕಳ್ಳರು ಒಯ್ದರು ಎನ್ನದಿರಿ ಅದು ನಿಮ್ಮ ಧರ್ಮ (ಕರುಣೆ). ಕೂಗಾಡದಿರಿ ನಿಮ್ಮ ಧರ್ಮ, ಕಿರುಚಾಡದಿರಿ ನಿಮ್ಮ ಧರ್ಮ ಎಂದು ಹೇಳುತ್ತಾರೆ. ಹಾಗೆ ಹೇಳುವ ಮೂಲಕ ತಮ್ಮ ತತ್ತ್ವಜ್ಞಾನವನ್ನು ಸೂಚಿಸುತ್ತಾರೆ. ಅದುವೆ ನಾವು ಬಸವಾದ್ವೈತ ಎಂದು ಕರೆಯುವ ಅನುಭಾವ. ಆ ಅುಭಾವವೇ ಶರಣರ ತತ್ತ್ವಜ್ಞಾನ.
 ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ ಎಂದು ಹೇಳುವಲ್ಲಿ ಬಸವಾದ್ವೈತವಿದೆ. ಕಳ್ಳ ಮೊದಲು ಮಾಡಿ ಸರ್ವರೂ ಜೀವಾತ್ಮರೇ ಆಗಿದ್ದೇವೆ. ನಮ್ಮೆಲ್ಲರ ಒಳಗೆ ಪರಮಾತ್ಮನೇ ಇದ್ದಾನೆ. ಯಾವನೇ ಆಗಲಿ ತನ್ನ ಪರಮಾತ್ಮನ ಒಳದನಿಯನ್ನು ಅರ್ಥ ಮಾಡಿಕೊಂಡಾಗಲೇ ಶರಣನಾಗಿಬಿಡುತ್ತಾನೆ. ಜಗತ್ತಿನಲ್ಲಿ ಕಳ್ಳರು, ಕೊಲೆಗಡುಕರು, ಶೋಷಕರು ಮುಂತಾದವರು ಕೂಡ ತಮ್ಮ ಒಳದನಿಗೆ ಓಗೊಟ್ಟ ಕ್ಷಣದಲ್ಲೇ ವಿಶ್ವಮಾನವರಾಗಿದ್ದಾರೆ. ಎಲ್ಲರೊಳಗೂ ಒಬ್ಬನೇ ದೇವರು ಎಂದು ಸಾರಿದ್ದಾರೆ. ಆತನೇ ಹಲವು ನಾಮಗಳುಳ್ಳ ಕೂಡಲಸಂಗಮದೇವ. ಆತನೇ ಅಲ್ಲಾಹ್, ಆತನೇ ಮಹೇಶ್ವರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News