ಬಯಲಾಗುತ್ತಿದೆ ಹಲಾಲ್ ಲಾಭದ ಹೆಸರಿನಲ್ಲಿ ಕೋಟ್ಯಂತರ ರೂ. ಸಂಗ್ರಹಿಸಿದ ಕಂಪೆನಿಗಳ ಬಣ್ಣ

Update: 2018-10-18 05:35 GMT

ಬೆಂಗಳೂರು, ಅ.17: ಯಶಸ್ವೀ ಮಹಿಳಾ ಉದ್ಯಮಿ, ರಾಜಕೀಯ ‘ನಾಯಕಿ’ ಇತ್ಯಾದಿ ಬಿರುದಾಂಕಿತ ಹೈದರಾಬಾದಿನ ನೌಹೇರಾ ಶೇಖ್ ಈಗ ಪೊಲೀಸ್ ಅತಿಥಿ. ಸೋಮವಾರ ಆಕೆಯನ್ನು ದಿಲ್ಲಿಯಲ್ಲಿ ಬಂಧಿಸಿದ ಪೊಲೀಸರು ಈಗ ಹೈದರಾಬಾದ್‌ಗೆತಂದಿದ್ದಾರೆ. ಹೀರಾ ಗ್ರೂಪ್ ಹೆಸರಿನ ಸಮೂಹದಡಿ ಸುಮಾರು 15ಕ್ಕೂ ಅಧಿಕ ಕಂಪೆನಿಗಳ ಮೂಲಕ ಜನರಿಂದ ನೂರಾರು ಕೋಟಿ ರೂ. ಹಣ ಸಂಗ್ರಹಿಸಿ ವಂಚಿಸಿದ ಗುರುತರ ಆರೋಪ ಈಗ ಆಕೆಯ ಮೇಲಿದೆ. ಹೈದರಾಬಾದ್ ಪೊಲೀಸ್ ಕಮಿಷನರ್ ಅಂಜನಿ ಕುಮಾರ್ ಅವರ ಪ್ರಕಾರ ಶೇ. 36ರಷ್ಟು ಲಾಭ ಕೊಡುತ್ತೇನೆಂದು ಸಾವಿರಾರು ಜನರಿಂದ ಹಣ ಸಂಗ್ರಹಿಸಿ ಅವರಿಗೆ ಲಾಭ ನೀಡಿಲ್ಲ. ಆಕೆಯ ಹೆಸರಲ್ಲಿ 160 ಬ್ಯಾಂಕ್ ಖಾತೆ ಗಳಿದ್ದು ಅವುಗಳಲ್ಲಿ ಜನರಿಂದ ಸಂಗ್ರಹಿಸಿದ ಹಣ ಠೇವಣಿ ಇಟ್ಟಿರುವ ಸಾಧ್ಯತೆ ಇದೆ. ಚಿನ್ನದ ಮೇಲೆ ಹೂಡಿಕೆ, ಹಲಾಲ್ ಲಾಭ ಸೇರಿದಂತೆ ಇನ್ನಿತರ ಆಕರ್ಷಕ ಯೋಜನೆಗಳನ್ನು ತೋರಿಸಿ, ಜನಸಾಮಾನ್ಯ ರನ್ನು ನಂಬಿಸಿ ಸಾವಿರಾರು ಕೋಟಿ ರೂ.ಗಳನ್ನು ವಂಚಿಸುತ್ತಿರುವ ಬೋಗಸ್ ಕಂಪೆನಿಗಳ ಮುಖವಾಡಗಳು ಇತ್ತೀಚಿಗೆ ಒಂದೊಂದಾಗಿ ಕಳಚುತ್ತಿವೆ.

‘ಹಲಾಲ್ ಲಾಭದ ಹೆಸರಿನಲ್ಲಿ ದುಡ್ಡು ಬಾಚುತ್ತಿವೆ ಹಲಾಲುಕೋರ ಕಂಪೆನಿಗಳು’ ಎಂಬ ಶೀರ್ಷಿಕೆಯಡಿ 2017ರ ಫೆ.6ರಂದು ‘ವಾರ್ತಾಭಾರತಿ’ಯ ಮುಖಪುಟದಲ್ಲಿಯೇ ಈ ಸಂಬಂಧ ವಿಸ್ತೃತ ವರದಿ ಪ್ರಕಟಿಸಿ ಜನರನ್ನು ಎಚ್ಚರಿಸಿತ್ತು. ಜನ ಸಾಮಾನ್ಯರಿಗೆ ಹೂಡಿಕೆ ಮಾಡುವ ಮುನ್ನ ವಹಿಸಬೇಕಾದ ಎಚ್ಚರಿಕೆ ಕುರಿತು ತಜ್ಞರ, ಪೊಲೀಸ್ ಅಧಿಕಾರಿಗಳ ಮಾಹಿತಿ ನೀಡಲಾಗಿತ್ತು. ಇತ್ತೀಚೆಗಷ್ಟೇ ಮೋರ್ಗನಾಲ್ ಕೋ ಆಪರೇಟಿವ್ ಸೊಸೈಟಿ ಹೆಸರಿನ ಕಂಪೆನಿಯು ಬೆಂಗಳೂರಿನಲ್ಲಿ ಬಾಗಿಲು ಮುಚ್ಚಿದೆ. ಮೂಲಗಳ ಪ್ರಕಾರ ಸುಮಾರು 18 ಸಾವಿರ ಮಂದಿ ಈ ಕಂಪೆನಿಯಲ್ಲಿ 600 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದ್ದರು. ಇದೀಗ ಆ ಕಂಪೆನಿಯ ಮುಖ್ಯಸ್ಥರು ಕುಟುಂಬ ಸಮೇತ ದುಬೈಗೆ ಹೋಗಿ ತಲೆ ಮರೆಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಹಲಾಲ್ ಲಾಭದ ಅಸೆ ತೋರಿಸಿ ಜನರಿಂದ ಹಣ ಸಂಗ್ರಹಿಸಿ ಬಳಿಕ ವಂಚಿಸಿದ ಆರೋಪ ಹೊತ್ತುಕೊಂಡಿರುವ ಕಂಪೆನಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಆ್ಯಂಬಿಡೆಂಟ್ ಮಾರ್ಕೆಂಟಿಂಗ್ ಪ್ರೈ.ಲಿ., ಆಲಾ ವೆಂಚರ್ಸ್, ಅಜ್ಮೇರಾ, ಬುರಾಖ್ ವೆಂಚರ್ಸ್, ಇನ್ನೋವೇಟಿವ್ ಇನ್ವೆಸ್ಟ್ಮೆಂಟ್ ಸಲ್ಯೂಷನ್ಸ್, ಝಂಝಂ ಕ್ಯಾಪಿಟಲ್, ಜೆಎಸ್ಜೆ ಗ್ಲೋಬಲ್ ಇನ್ವೆಸ್ಟ್ಮೆಂಟ್ಸ್, ಇಖ್ರಾ ಇನ್ವೆಸ್ಟ್ಮೆಂಟ್ಸ್, ಮೆಹ್ರಾಝ್ ಇನ್ ಕ್ರಾಪ್ ಎಲ್‌ಎಲ್ಪಿ, ಮಾರ್ಗೋನಾಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೀಗೆ ಅನೇಕ ಕಂಪೆನಿಗಳ ಮಾಲಕರು ಗ್ರಾಹಕರಿಗೆ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ತಲೆ ಮರೆಸಿಕೊಂಡಿದ್ದಾರೆ.

► ಅಲ್ಪಸಂಖ್ಯಾತರ ಬಾಹುಳ್ಯದಲ್ಲಿ ತಲೆ ಎತ್ತುತ್ತಿರುವ ಬೋಗಸ್ ಕಂಪೆನಿಗಳು

ಅಲ್ಪಸಂಖ್ಯಾತರ ಬಾಹುಳ್ಯವಿರುವ ಪ್ರದೇಶಗಳಲ್ಲೇ ಹಲಾಲ್ ಲಾಭದ ಹೆಸರಿನಲ್ಲಿ ಹೆಚ್ಚಾಗಿ ಸಂಸ್ಥೆಗಳು ಆರಂಭವಾಗುತ್ತಿರುವುದು ಗಮನಿಸಬೇಕಾದ ಸಂಗತಿ. ದಶಕಗಳಿಂದ ಚಿನ್ನ, ಬೆಳ್ಳಿಯ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳು ನೀಡಲು ಸಾಧ್ಯವಿರದಷ್ಟು ಮಟ್ಟಿಗೆ ಈ ಬೋಗಸ್ ಕಂಪೆನಿಗಳು ಗ್ರಾಹಕರಿಗೆ ಲಾಭದ ಆಮಿಷ ನೀಡುತ್ತವೆ. ಆರ್ಥಿಕ ತಜ್ಞರು ಹಾಗೂ ಉದ್ಯಮದಲ್ಲಿ ಸಾಕಷ್ಟು ಅನುಭವವನ್ನು ಹೊಂದಿರುವ ಪರಿಣಿತರು ಇವರ ವ್ಯವಹಾರದ ಸ್ವರೂಪವನ್ನು ನೋಡಿ ಗೊಂದಲಕ್ಕೆ ಸಿಲುಕುವಂತಾಗಿದೆ.

ಇಂತಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಮುಂದಾಗುವ ಜನಸಾಮಾನ್ಯರು, ಕಾನೂನುಗಳ ಅರಿವಿಲ್ಲದೆ ಕೇವಲ ಯೋಜನೆಗಳನ್ನು ನೋಡಿಕೊಂಡು ತಮ್ಮ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಲು, ಯಾವುದೇ ಮುಂದಾಲೋಚನೆಯಿಲ್ಲದೆ ಹಣವನ್ನು ಹೂಡಿಕೆ ಮಾಡುತ್ತಾರೆ. ವಂಚನೆಗೊಳಗಾದ ನಂತರ, ಏನು ಮಾಡಬೇಕು ಎಂದು ದಿಕ್ಕು ತೋಚದೆ ಪರದಾಡುತ್ತಿರುತ್ತಾರೆ. ಹೂಡಿಕೆ ಮಾಡಿದ ಸಂದರ್ಭದಲ್ಲಿ ಸಂಸ್ಥೆಗಳು, ಗ್ರಾಹಕರು ಹಾಗೂ ತಮ್ಮ ನಡುವೆ ಏರ್ಪಟ್ಟಿರುವ ಒಡಂಬಡಿಕೆ ಕುರಿತು ಬಾಂಡ್ ಪೇಪರ್‌ನಲ್ಲಿ ಸಂಸ್ಥೆ ಹಾಗೂ ಗ್ರಾಹಕರಿಗೆ ಸಂಬಂಧಿಸಿದ ವಿವರಗಳು, ಹೂಡಿಕೆಗೆ ಸಂಬಂಧಿಸಿದ ಶರತ್ತುಗಳು, ನಿಯಮಗಳನ್ನು ಮುದ್ರಿಸಿ ನೀಡುತ್ತಾರೆ. ಆದರೆ, ಎಷ್ಟೋ ಮಂದಿ ಈ ಬಾಂಡ್ ಪೇಪರ್‌ನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ ವಂಚನೆಗೊಳಗಾಗುತ್ತಾರೆ.ಕೆಲವು ಸಂಸ್ಥೆಗಳು ಬಾಂಡ್ ಪೇಪರ್ ಸಿದ್ಧಪಡಿಸುವಾಗ ಈ ವ್ಯವಹಾರದಲ್ಲಿ ಯಾವುದಾದರೂ ನಷ್ಟವುಂಟಾದರೆ, ಅದಕ್ಕೆ ಸಂಸ್ಥೆ ಜವಾಬ್ದಾರಿಯಲ್ಲ ಎಂಬ ಅಂಶವನ್ನು ಸೇರಿಸಿರುತ್ತವೆ. ಅದಕ್ಕೆ ಹೂಡಿಕೆದಾರನು ಸಹಿ ಮಾಡಿರುತ್ತಾನೆ. ಆದರೆ, ಈ ಅಂಶವನ್ನು ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಗ್ರಾಹಕನಿಗೆ ಸಂಸ್ಥೆಯ ಪ್ರತಿನಿಧಿಗಳು ಉದ್ದೇಶಪೂರ್ವಕವಾಗಿ ಮರೆ ಮಾಚುತ್ತಾರೆ.

►ಗ್ರಾಹಕರು ಏನು ಮಾಡಬೇಕು?

ಹೂಡಿಕೆ ಮಾಡುವ ಮುನ್ನ ಸಂಸ್ಥೆಯ ಪೂರ್ವಾಪರ, ರಿಜಿಸ್ಟ್ರಾರ್ ಆಫ್ ಕಂಪೆನೀಸ್ ಹಾಗೂ ಕೇಂದ್ರ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿಯಾಗಿದೆಯಾ, ಆರ್‌ಬಿಐ, ಸೆಬಿ ಹಾಗೂ ಸರಕಾರದ ನೀತಿ ನಿಯಮಗಳನ್ವಯ ಕಾರ್ಯ ನಿರ್ವಹಿಸುತ್ತಿದೆಯಾ ಎಂಬ ಮಾಹಿತಿಯನ್ನು ಗ್ರಾಹಕರು ಪಡೆದುಕೊಳ್ಳಬೇಕು. ಆಕರ್ಷಕ ಯೋಜನೆಗಳು ಹಾಗೂ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ವಂಚನೆಗೊಳಗಾಗದೆ, ಇಂತಹ ಸಂಸ್ಥೆಗಳ ಬಣ್ಣ ಬಣ್ಣದ ಜಾಹೀರಾತುಗಳು, ಉಡುಗೊರೆಗಳಿಗೆ ಮರುಳಾಗದೆ, ಕಾನೂನು ತಜ್ಞರು ಹಾಗೂ ಆರ್ಥಿಕ ತಜ್ಞರ ಸಲಹೆಯನ್ನು ಪಡೆದುಕೊಂಡು ಹೂಡಿಕೆಗೆ ಮುಂದಾಗುವುದು ಸೂಕ್ತ. ಕಂಪೆನಿಯನ್ನು ಆರಂಭಿಸುತ್ತಿರುವವರ ಹಿನ್ನೆಲೆ, ಈ ಕಂಪೆನಿಗಳ ಬ್ಯಾಲೆನ್ಸ್ ಶೀಟ್ , ಇವರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳು, ಈ ಕಂಪೆನಿಗಳು ನಮ್ಮಿಂದ ಪಡೆಯುವ ಹಣವನ್ನು ಎಲ್ಲಿ, ಯಾವ ವ್ಯವಹಾರದ ಮೇಲೆ ಹೂಡಿಕೆ ಮಾಡುತ್ತಿವೆ ಇದರಿಂದ, ಅವರಿಗೆ ಬರುವ ಲಾಭವೆಷ್ಟು ಎಂಬ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ.

ಜನರು ಹೂಡಿಕೆ ಮಾಡುವ ಮುನ್ನ ಸಂಸ್ಥೆಗಳ ಪೂರ್ವಾಪರವನ್ನು ತಿಳಿದು ಕೊಳ್ಳಬೇಕು. ಹೂಡಿಕೆ ಮಾಡಿ ವಂಚನೆಗೆ ಒಳಗಾದ ನಂತರ ಪಶ್ಚಾತ್ತಾಪ ಪಟ್ಟು ಪ್ರಯೋಜನವಿಲ್ಲ. ಯಾವುದೇ ಕಂಪೆನಿ ಅಥವಾ ಸಂಸ್ಥೆ ತನ್ನ ಗ್ರಾಹಕರಿಗೆ ಇಷ್ಟೇ ಪ್ರಮಾಣದಲ್ಲಿ ಲಾಭ ನೀಡುವ ಭರವಸೆ ನೀಡಲು ಸಾಧ್ಯವಿಲ್ಲ. ಆ ಕಂಪೆನಿ ಅಥವಾ ಸಂಸ್ಥೆ ಆಯಾ ವರ್ಷದಲ್ಲಿ ಗಳಿಸಿದ ಲಾಭದ ಆಧಾರದಲ್ಲೆ ತನ್ನ ಗ್ರಾಹಕರು ಅಥವಾ ಹೂಡಿಕೆದಾರರಿಗೆ ಲಾಭದ ಹಂಚಲು ಸಾಧ್ಯವಾಗುತ್ತದೆ. ಈ ಕನಿಷ್ಠ ಸಾಮಾನ್ಯ ಜ್ಞಾನವನ್ನು ಸಾರ್ವಜನಿಕರು ಬಳಸಿಕೊಂಡರೆ ಇಂತಹ ವಂಚನೆಗಳಿಂದ ಪಾರಾಗಬಹುದು.

ಜನರು ಎಚ್ಚರಿಕೆ ವಹಿಸಬೇಕು, ಸಂಶಯಾಸ್ಪದ ಸಂಸ್ಥೆಗಳು ತಮ್ಮನ್ನು ದಿವಾಳಿ ಎಂದು ಘೋಷಿಸಿಕೊಳ್ಳುವ ಮುನ್ನ ತಮ್ಮ ಹೂಡಿಕೆಯನ್ನು ಹಿಂಪಡೆಯಲು ಮುಂದಾಗಬೇಕು. ಅಲ್ಲದೆ, ಬೋಗಸ್ ಕಂಪೆನಿಗಳ ವಿರುದ್ಧ ಸಂಶಯ ಬಂದಲ್ಲಿ ಕೂಡಲೇ ಪೊಲೀಸರಿಗೆ ಕರ್ನಾಟಕ ಹೂಡಿಕೆದಾರರ ಹಿತರಕ್ಷಣೆ ಹಾಗೂ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕಾಯ್ದೆ ಅನ್ವಯ ದೂರು ನೀಡಬೇಕು.

 ಅಬ್ದುಲ್ ಅಹದ್, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ

ಹೀರಾ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ನೌಹೇರಾ ಶೇಕ್‌ರನ್ನು ಬಂಧಿಸಿರುವ ತೆಲಂಗಾಣ ಸರಕಾರ ಹಾಗೂ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಿರುಪತಿಯಿಂದ ಆರಂಭವಾದ ನೌಹೇರಾ ಶೇಕ್ ವ್ಯವಹಾರ ಇವತ್ತು ದೇಶ, ವಿದೇಶದಲ್ಲಿಯೂ ಹರಡಿಕೊಂಡಿದೆ. ಲಕ್ಷಾಂತರ ಜನ ಇವರ ವಿವಿಧ ಹೆಸರಿನ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಪರದಾಡುತ್ತಿದ್ದಾರೆ.

ಬೆಂಗಳೂರಿನ ಫ್ರೇಜರ್‌ಟೌನ್‌ನಲ್ಲಿಯೂ ಆಭರಣ ಮಳಿಗೆ ಆರಂಭಿಸುವುದಾಗಿ ಹೇಳಿ ನಿರ್ಮಿಸುತ್ತಿದ್ದ ಕಟ್ಟಡದ ಕೆಲಸ ಅರ್ಧಕ್ಕೆ ನಿಂತಿದೆ. ಇಲ್ಲಿನ ಹಲವಾರು ಮಂದಿ ಹೀರಾ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್ ಪೊಲೀಸರ ಮಾದರಿಯಲ್ಲಿಯೇ ನಮ್ಮ ಬೆಂಗಳೂರಿನ ಪೊಲೀಸರು ಕಾರ್ಯಪ್ರವೃತ್ತರಾಗಿ, ಹಲಾಲ್ ಲಾಭದ ಹೆಸರಿನಲ್ಲಿ ಜನರನ್ನು ವಂಚಿಸಿ ತಲೆ ಮರೆಸಿಕೊಂಡಿರುವ ಖದೀಮರ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು.

|ಮುಹಮ್ಮದ್ ಉಬೇದುಲ್ಲಾ ಶರೀಫ್, ಪ್ರಧಾನ ಸಂಪಾದಕರು ‘ಡೈಲಿ ಪಾಸ್ಬಾನ್’

ಪ್ರಮುಖವಾಗಿ ಬಡವರು, ಮಧ್ಯಮವರ್ಗದವರನ್ನೇ ಗುರಿಯನ್ನಾಗಿಸಿಕೊಂಡು ಇಂತಹ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ನಮ್ಮ ಆದಾಯದಲ್ಲಿ ಅಳಿದು ಉಳಿದಿರುವ ಮೊತ್ತವನ್ನು ಸಂಗ್ರಹಿಸಿ ಭವಿಷ್ಯಕ್ಕಾಗಿ ಇಂತಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತೇವೆ. ಆನಂತರ, ಇವರ ವಂಚನೆಯಿಂದ ನಾವು ಬೀದಿಗೆ ಬೀಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರಕಾರಗಳು ಇಂತಹ ಸಂಸ್ಥೆಗಳು ಹಾಗೂ ಅದರ ಮುಖ್ಯಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬಡವರ ಹಣ ಹಿಂದಿರುಗಿಸುವ ನಿಟ್ಟಿನಲ್ಲಿ ಮುಂದಾಗಬೇಕು.

 ಫೈರೋಝ್ ಖಾನ್, ಮಾರ್ಗೋನಾಲ್ ಸಂಸ್ಥೆಯಿಂದ ವಂಚನೆಗೊಳಗಾದವರು|

Writer - ಅಮ್ಜದ್ ಖಾನ್ ಎಂ.

contributor

Editor - ಅಮ್ಜದ್ ಖಾನ್ ಎಂ.

contributor

Similar News