ದೇವಾಲಯ ಪ್ರವೇಶ ವಿವಾದ ಮತ್ತು ವ್ಯಾವಹಾರಿಕ ರಾಜಕಾರಣ

Update: 2018-10-19 18:33 GMT

ಕೇರಳದ ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವಯಸ್ಸಿನೊಳಗಿರುವ ಮಹಿಳೆಯರ ಪ್ರವೇಶಕ್ಕೆ ಸಂಬಂಧಪಟ್ಟ ವಿವಾದವು ಕೇರಳ ರಾಜ್ಯದ ರಚನೆಯಷ್ಟೇ ಹಳೆಯದಾದ ವಿವಾದವಾಗಿದೆ. ಈ ವಿವಾದದಲ್ಲಿ ಈವರೆಗೆ ಆ ರಾಜ್ಯವನ್ನು ಆಳಿರುವ ಸರಕಾರಗಳು, ನ್ಯಾಯಾಂಗ, ಅರ್ಚಕ ವರ್ಗ, ಸಾಮಾಜಿಕ-ಧಾರ್ಮಿಕ ಸಂಘಟನೆಗಳೂ ಮತ್ತು ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳಾ ಭಕ್ತರೂ ಒಳಗೊಂಡಿದ್ದಾರೆ. ಆದರೆ ಈ ವಿಷಯದ ಬಗ್ಗೆ ವಿಧವಿಧವಾದ ಅಭಿಪ್ರಾಯಗಳು ಮತ್ತು ನಿಲುವುಗಳು ಚಾಲ್ತಿಯಲ್ಲಿರುವುದರಿಂದ ವಾದಗಳನ್ನಾಗಲೀ, ಪ್ರತಿವಾದಗಳನ್ನಾಗಲೀ ಏಕರೂಪಿಯಾಗಿ ಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಈ ವಿವಾದದ ಬಗ್ಗೆ ಇದೇ ಸೆಪ್ಟಂಬರ್‌ನಲ್ಲಿ ಹೊರಬಿದ್ದ ಬಹುನಿರೀಕ್ಷಿತ ಸುಪ್ರೀಂ ಕೋರ್ಟಿನ ತೀರ್ಮಾನವು ವಿವಾದದ ಬಗೆಗಿನ ಭಿನ್ನಾಭಿಪ್ರಾಯಗಳು ಸೃಷ್ಟಿಸಿದ್ದ ರಾಜಕೀಯ ಬಿರುಕುಗಳನ್ನು ಮತ್ತಷ್ಟು ಹೆಚ್ಚಿಸಿದೆ. ಶಬರಿಮಲೆ ದೇವಸ್ಥಾನದ ಪ್ರವೇಶಕ್ಕೆ ಮುಟ್ಟಾಗುವ ಮಹಿಳೆಯರಿಗಿದ್ದ ನಿಷೇಧವನ್ನು ಸುಪ್ರೀಂಕೋರ್ಟು ರದ್ದುಮಾಡಿದೆ.

ಐದು ನ್ಯಾಯಾಧೀಶರಿದ್ದ ನ್ಯಾಯಪೀಠದ ತೀರ್ಮಾನವು ಕೂಡಾ ವಿಭಜಿತವಾಗಿತ್ತು. ಅದರಲ್ಲಿ ನಾಲ್ವರು ನ್ಯಾಯಾಧೀಶರ ಬಹುಮತದ ತೀರ್ಪು ಮುಟ್ಟಾಗುವ ಮಹಿಳೆಯರ ಪ್ರವೇಶದ ಮೇಲಿನ ನಿಷೇಧದ ತೆರವಿನ ಪರವಾಗಿದ್ದರೆ ಒಬ್ಬರ ತೀರ್ಪು ನಿಷೇಧದ ವಿರುದ್ಧವಾಗಿರಲಿಲ್ಲ. ಪುರುಷರೇ ಇದ್ದ ಬಹುಮತದ ತೀರ್ಪು ‘ಶ್ರದ್ಧಾಭಕ್ತಿಯಲ್ಲಿ ತಾರತಮ್ಯ’ ಮತ್ತು ‘ಧರ್ಮದೊಳಗಿನ ಪಿತೃಸ್ವಾಮ್ಯತೆ’ಗಿಂತ ‘ಸಾಂವಿಧಾನಿಕ ನೈತಿಕತೆಯು’ ಮೇಲಾದದ್ದೆಂದು ಎತ್ತಿಹಿಡಿಯಿತು. ಆದರೆ ನ್ಯಾಯಪೀಠದಲ್ಲಿದ್ದ ಏಕಮಾತ್ರ ಮಹಿಳಾ ನ್ಯಾಯಾಧೀಶರು ಧಾರ್ಮಿಕ ವ್ಯವಹಾರದಲ್ಲಿ ವೈಚಾರಿಕ-ತಾರ್ಕಿಕ ಮಾನದಂಡಗಳನ್ನು ಅನ್ವಯಿಸಲಾಗದೆಂಬ ನಿಲುವನ್ನು ತಳೆದು ಬಹುಮತದ ತೀರ್ಪಿಗಿಂತ ಭಿನ್ನವಾದ ತೀರ್ಪನ್ನು ನೀಡಿದ್ದಾರೆ. ಈ ತೀರ್ಪಿನ ಮೂಲಕ ಲಿಂಗನ್ಯಾಯವನ್ನು ಎತ್ತಿಹಿಡಿಯಲಾಗಿದೆಯೆಂದು ದೇಶಾದ್ಯಂತ ಬಹುಪಾಲು ಜನರು ಸಂಭ್ರಮಿಸಿದರೆ ಕೇರಳದ ಮಹಿಳಾ ಭಕ್ತರು ಮಾತ್ರ ತೀರ್ಪಿನ ವಿರುದ್ಧ ಬೀದಿಗಿಳಿದಿದ್ದಾರೆ. ಸುಪ್ರೀಂಕೋರ್ಟಿನ ಆದೇಶದಿಂದಾಗಿ ಧಾರ್ಮಿಕ ವ್ಯವಹಾರಗಳಲ್ಲಿ ಪ್ರಭುತ್ವದ ಮಧ್ಯಪ್ರವೇಶ ಹೆಚ್ಚಾಗಲಿದೆಯೆಂಬುದೇ ತೀರ್ಪಿನ ವಿರುದ್ಧ ವ್ಯಕ್ತಪಡಿಸಲಾಗುತ್ತಿರುವವರ ಪ್ರಧಾನವಾದ ಆತಂಕವಾಗಿದೆ.

ಭಾರತದಂತ ಬಹುಧರ್ಮೀಯ ದೇಶವೊಂದರಲ್ಲಿ ಇಂತಹ ಆತಂಕಗಳು ಸಕಾರಣವಾಗಿದ್ದರೂ ಕೇರಳದಲ್ಲಿರುವ ಶಬರಿಮಲೆ ಮತ್ತಿತರ ಸಾರ್ವಜನಿಕ ದೇವಸ್ಥಾನಗಳು ದೇಶದ ಇತರ ತೀರ್ಥಯಾತ್ರಾ ಸ್ಥಳಗಳಿಗಿಂತ ಭಿನ್ನವಾಗಿವೆ. ಶಬರಿಮಲೆಯನ್ನೂ ಒಳಗೊಂಡಂತೆ ಕೇರಳದ 1,700 ಹಿಂದೂ ದೇವಸ್ಥಾನಗಳು ಸರಕಾರದ ಸುಪರ್ದಿಗೊಳಪಟ್ಟಿವೆ. ಕೇರಳ ಸರಕಾರದ ದೇವಾಲಯ ವ್ಯವಹಾರಗಳ ಮಂತ್ರಿ (ದೇವಾಲಯಗಳ ವ್ಯವಹಾರಗಳ ಮೇಲ್ವಿಚಾರಣೆ), ಪ್ರಾದೇಶಿಕ ದೇವಾಲಯ ಬೋರ್ಡ್‌ಗಳು (ಆಯಾ ದೇವಾಲಯಗಳ ನಿರ್ವಹಣೆ ಮತ್ತು ಆಡಳಿತದ ಉಸ್ತುವಾರಿಗಳು) ಮತ್ತು ಕೇರಳದ ಉಚ್ಚ ನ್ಯಾಯಾಲಯಗಳು (ಬೋರ್ಡುಗಳ ಕಾರ್ಯನಿರ್ವಹಣೆಗಳ ಉಸ್ತುವಾರಿ) ದೇವಾಲಯಗಳ ನಿರ್ವಹಣೆ ಮತ್ತು ಉಸ್ತುವಾರಿಗಳನ್ನು ನೋಡಿಕೊಳ್ಳುವ ಪ್ರಭುತ್ವ ಸಂಸ್ಥೆಗಳಾಗಿವೆ. ಐತಿಹಾಸಿಕವಾಗಿ ನೋಡುವುದಾದರೆ ದಕ್ಷಿಣ ಭಾರತದ ದೇವಾಲಯಗಳಿಗೆ ಸ್ಥಳೀಯ ಬಲಾಢ್ಯರ ಮತ್ತು ಆಯಾ ಕಾಲಘಟ್ಟದ ಆಳುವದೊರೆಗಳ ರಕ್ಷಣೆ ಸಿಕ್ಕಿದೆ. ಅವರೇ ದೇವಾಲಯಗಳ ಆದಾಯಗಳು ಮತ್ತು ವಿವಾದಗಳ ಮೇಲ್ವಿಚಾರಣೆಯನ್ನು ಮಾಡಿಕೊಂಡು ಬಂದಿದ್ದಾರೆ. ಹೀಗೆ ದಕ್ಷಿಣ ಭಾರತದಲ್ಲಿನ ದೇವಾಲಯಗಳ ಅದರಲ್ಲೂ ಕೇರಳದ ದೇವಾಲಯಗಳ ಮೇಲಿನ ಅಧಿಕಾರವು ರಾಜಮಹಾರಾಜರುಗಳಿಂದ ಬ್ರಿಟಿಷ್ ವಸಾಹತುಶಾಹಿ ಹಾಗೂ ಆ ನಂತರದಲ್ಲಿ ಭಾರತದ ಗಣರಾಜ್ಯಕ್ಕೂ ವರ್ಗಾವಣೆಗೊಂಡು ಒಂದು ಸಂಕೀರ್ಣ ಪ್ರಭುತ್ವ ಕೇಂದ್ರಿತ ದೇವಾಲಯ ಉಸ್ತುವಾರಿ ಪದ್ಧತಿಗೆ ಎಡೆಮಾಡಿಕೊಟ್ಟಿದೆ.

ಹೀಗಾಗಿ ಟ್ರಾವಂಕೂರ್ ರಾಯಲ್ ದೇವೋಸಂ ಕಮಿಷನ್‌ನಿಂದ ದೇವಾಲಯಗಳ ಉಸ್ತುವಾರಿಯನ್ನು ಒಂದು ಶಾಸನಬದ್ಧ ಸಂಸ್ಥೆಯಾದ ಟ್ರಾವಂಕೂರ್ ದೇವೋಸಂ ನಿಗಮಕ್ಕೆ(ಟಿಡಿಬಿ) ಹಸ್ತಾಂತರಿಸಿದ 1950ರ ಟ್ರಾವಂಕೂರು-ಕೊಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆಯ ಕಾಲದಿಂದಲೇ ಶಬರಿಮಲೆ ದೇವಾಲಯಗಳ ವ್ಯವಹಾರದಲ್ಲಿ ಪ್ರಭುತ್ವದ ಮಧ್ಯಪ್ರವೇಶವು ಪ್ರಾರಂಭಗೊಳ್ಳುತ್ತದೆ. ಹಾಗೆ ನೋಡಿದರೆ, 1965ರಲ್ಲಿ ಕೇರಳ ಹಿಂದೂ ಧಾರ್ಮಿಕ ಕೇಂದ್ರಗಳ (ಪ್ರವೇಶಾಧಿಕಾರ) ಕಾಯ್ದೆಯನ್ನು ಜಾರಿ ಮಾಡಿದ್ದು ಕೇರಳದ ಶಾಸನಸಭೆಯೇ ಎಂಬ ಸತ್ಯವು ಈ ವಿವಾದವು ಹುಟ್ಟಿಸಿರುವ ಅಬ್ಬರದಲ್ಲಿ ಮರೆಯಾಗಿ ಹೋಗುತ್ತಿದೆ. ಸಾಂಪ್ರದಾಯಿಕವಾಗಿ ಹಿಂದಿನಿಂದ ಮುಟ್ಟಾಗಬಲ್ಲ ವಯಸ್ಸಿನ ಮಹಿಳೆಯರಿಗೆ ಕೇವಲ ದೇವಸ್ಥಾನದ ಗರ್ಭಗುಡಿಯ ಒಳಗೆ ಮಾತ್ರ ಪ್ರವೇಶ ನಿರಾಕರಿಸಲಾಗುತ್ತಿತ್ತು. ಆದರೆ ಮುಟ್ಟಾಗುವ ಮಹಿಳೆಯರಿಗೆ ಒಟ್ಟಾರೆಯಾಗಿ ದೇವಸ್ಥಾನದ ಆವರಣದೊಳಕ್ಕೆ ಪ್ರವೇಶ ನಿಷೇಧ ಮಾಡಿದ್ದು ಮಾತ್ರ ಸರಕಾರಿ ಸಂಸ್ಥೆಯಾದ ಟಿಡಿಬಿಯ ಎರಡು ಸುತ್ತೋಲೆಗಳೇ ಎಂಬುದು ಇದರಿಂದ ಅರ್ಥವಾಗುತ್ತದೆ. ಮತ್ತದನ್ನು ಶಾಸನಸಭೆಯೂ ಸಹ ಎತ್ತಿಹಿಡಿದಿತ್ತು. ಅದೇನೇ ಇದ್ದರೂ ಈ ನಿಯಮಾವಳಿಗಳನ್ನು ಶಬರಿಮಲೆ ದರ್ಶನದ ತೀರ್ಥಯಾತ್ರಾ ಮಾಸಗಳಾದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮತ್ತು ವಿಶು ಹಬ್ಬದ ಋತುವಿನಲ್ಲಿ ಮಾತ್ರ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು.

ಮಿಕ್ಕಂತೆ ದೇವಾಲಯಗಳ ಕೆಲವು ನಿರ್ದಿಷ್ಟ ಸ್ಥಳಗಳಿಗೆ ಹೊರತುಪಡಿಸಿ ಬೇರೆಡೆಗಳಿಗೆ ವರ್ಷದ ಇತರ ಸಮಯಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅಂತಹ ಕಟ್ಟುನಿಟ್ಟಾದ ನಿರ್ಬಂಧವೇನೂ ಇರುತ್ತಿರಲಿಲ್ಲ. ಆದರೆ ದೇವಾಲಯಗಳ ಈ ನಿಯಮವನ್ನು ಪ್ರತಿಷ್ಠಿತ ಹಿನ್ನೆಲೆಯ ಮಹಿಳೆಯರು ಪದೇಪದೇ ಉಲ್ಲಂಘಿಸುತ್ತಿರುವುದನ್ನು ಪ್ರಶ್ನಿಸಿ 1990ರಲ್ಲಿ ಭಕ್ತರೊಬ್ಬರು ಕೇರಳ ಹೈಕೋರ್ಟಿಗೆ ಅಹವಾಲು ಸಲ್ಲಿಸಿದರು. ಈ ಅಹವಾಲನ್ನು ಪುರಸ್ಕರಿಸಿದ ಹೈಕೋರ್ಟು ಇಡೀ ಶಬರಿಮಲೆ ಆವರಣದೊಳಗೇ ಮುಟ್ಟಾಗುವ ಮಹಿಳೆಯರು ಪ್ರವೇಶ ಮಾಡಬಾರದೆಂದು ಸಂಪೂರ್ಣ ನಿಷೇಧದ ಆದೇಶವನ್ನು ನೀಡಿತು. ಅಲ್ಲಿಂದಾಚೆಗೆ ಮಹಿಳೆಯರು ತಮ್ಮ ವಯಸ್ಸಿನ ಬಗ್ಗೆ ಪುರಾವೆಯನ್ನು ನೀಡದೆ ದೇವಾಲಯವನ್ನು ಪ್ರವೇಶಿಸದಂತಾಯಿತು. 2006ರಲ್ಲಿ ಈ ನಿಷೇಧವನ್ನು ಒಂದು ಗುಂಪು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತು. ಅಲ್ಲಿಂದಾಚೆಗೆ ಸರಕಾರಗಳು ಬದಲಾಗುತ್ತಿದ್ದಂತೆ ಕೋರ್ಟಿನಲ್ಲಿ ಅದರ ನಿಲುವೂ ಬದಲಾಗುತ್ತಾ ಬಂದಿದೆ.

2006ರಲ್ಲಿ ಮತ್ತು ಈಗ 2018ರಲ್ಲಿ ಅಧಿಕಾರದಲ್ಲಿರುವ ಎಡಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಈ ನಿಷೇಧವನ್ನು ವಿರೋಧಿಸುತ್ತಾ ಬಂದಿದ್ದರೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮಹಿಳೆಯರ ಪ್ರವೇಶ ನಿಷೇಧವನ್ನು ಬೆಂಬಲಿಸುತ್ತಾ ಬಂದಿದೆ. ಈ ಹಾವು-ಏಣಿಯಾಟಕ್ಕೆ ನ್ಯಾಯಾಲಯದ ತೀರ್ಮಾನವು ಅಂತಿಮ ತೆರೆಯನ್ನು ಎಳೆದಿದ್ದರೂ ಹೋರಾಟದ ಕಣವೀಗ ಬೀದಿಗೆ ಸ್ಥಳಾಂತರಗೊಂಡಿದ್ದು ರಾಜಕೀಯ ಪಕ್ಷಗಳು ಬೆಂಕಿಗೆ ತುಪ್ಪಸುರಿಯುವ ಕೆಲಸ ಮಾಡುತ್ತಿವೆ. ಒಂದೆಡೆ ಆಡಳಿತಾರೂಢ ಸಿಪಿಎಂ ಪಕ್ಷವು ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ ಅದಕ್ಕ್ಕೆ ತಕ್ಕ ಹಾಗೆ ನಡೆದುಕೊಳ್ಳಲು ಟಿಡಿಬಿ ಸಂಸ್ಥೆಯ ಮೇಲೆ ಒತ್ತಡ ಹಾಕುತ್ತಿದ್ದರೆ ಮೇಲ್ಜಾತಿ ನಾಯರ್ ಸಮುದಾಯದ ಮತಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿವೆ. ಕೇರಳದಲ್ಲಿ ಸರಕಾರದಡಿಯಲ್ಲಿ ಸಾರ್ವಜನಿಕ ದೇವಾಲಯಗಳ ಉಸ್ತುವಾರಿ ಇರುವಾಗ ಕೇರಳದ ಶಾಸನಸಭೆಯು ದೇವಸ್ಥಾನಕ್ಕೆ ಮುಟ್ಟಾಗುವ ಮಹಿಳೆಯರ ಪ್ರವೇಶವನ್ನು ಏಕೆ ನಿರ್ಬಂಧಿಸಿತೆಂಬುದನ್ನು ಕೇಳಲೇಬೇಕಿದೆ. ಈ ಶಾಸನವು ನ್ಯಾಯಾಲಯವು ನೆನಪು ಮಾಡಿಕೊಟ್ಟಿರುವ ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿದೆ. ಪ್ರಭುತ್ವವು ಎಲ್ಲಾ ಧರ್ಮಗಳಿಂದ ಸಮಾನ ದೂರ ಕಾಪಾಡಿಕೊಳ್ಳಬೇಕೆಂಬುದೇ ಭಾರತೀಯ ಮಾದರಿ ಧರ್ಮ ನಿರಪೇಕ್ಷತೆಯಾಗಿದ್ದರೂ ಭಾರತದ ರಾಜಕೀಯದ ಪ್ರಧಾನ ವೈರುಧ್ಯ ಮಾತ್ರ ಧರ್ಮವನ್ನೇ ಆಧರಿಸಿದೆ. ಈ ವೈರುಧ್ಯವನ್ನು ರಾಜಕೀಯ ಪಕ್ಷಗಳು ಮತ್ತು ಅವರ ಸಹಭಾಗಿಗಳು ಮತ್ತಷ್ಟು ತೀವ್ರಗೊಳಿಸುತ್ತಿರುತ್ತಾರೆ. ಹಲವಾರು ಬೇರೆಬೇರೆ ಪ್ರಕರಣಗಳನ್ನು ಉದ್ದೀೀಪಿಸಿ ಅವುಗಳನ್ನು ವಿಪರೀತವಾಗಿ ಬೆಳೆಸಿ ಅಭಿಪ್ರಾಯಗಳನ್ನು ಮತ್ತು ಅದರಿಂದುಂಟಾಗುವ ಪರಿಣಾಮಗಳನ್ನು ಧ್ರುವೀಕರಣಗೊಳಿಸಲಾಗುತ್ತಿದೆ.

ಇದು 1985ರ ಶಾ ಬಾನು ಪ್ರಕರಣದಿಂದ ಪ್ರಾರಂಭವಾಗಿ ಇತ್ತೀಚಿನ 2017ರ ತ್ರಿವಳಿ ತಲಾಖ್ ಪ್ರಕರಣದವರೆಗೂ ಹರಡಿಕೊಂಡಿದೆ. ಅದರಲ್ಲೂ ತ್ರಿವಳಿ ತಲಾಖ್ ಮತ್ತು ಶಬರಿಮಲೆ ಪ್ರಕರಣಗಳಲ್ಲಿ ರಾಜಕೀಯ ಪಕ್ಷಗಳು ತೆಗೆದುಕೊಂಡಿರುವ ತದ್ವಿರುದ್ಧವಾದ ನಿಲುವುಗಳು ಅವುಗಳ ಅವಕಾಶವಾದಿತನಗಳನ್ನೂ ಮತ್ತು ಆಷಾಢಭೂತಿತನಗಳನ್ನು ಬಯಲುಮಾಡಿದೆ. ದೇವಾಲಯಗಳಿಗೆ ಪ್ರವೇಶದ ವಿಷಯವು ನ್ಯಾಯದ ಬಗೆಗಿನ ಕಾಳಜಿಯಿಂದ ಹುಟ್ಟಿಕೊಂಡಿರುವ ವಿಷಯವೇ ಆಗಿದೆ. ಈ ವಿಷಯದಲ್ಲಿ ಪ್ರಭುತ್ವಕ್ಕೆ ಒಂದು ಪ್ರಮುಖ ಪಾತ್ರವಿತ್ತು ಮತ್ತು ಮುಂದೆಯೂ ಇರುತ್ತದೆ. ಆದರೆ ಒಂದು ಮೌಲ್ಯವಾಗಿ ಲಿಂಗಾಧಾರಿತ ಸರಿಸಮಾನತೆಯೆಂಬ ಮೌಲ್ಯವು ವ್ಯಾವಹಾರಿಕ ರಾಜಕಾರಣಕ್ಕೆ ಬಲಿಯಾಗುತ್ತಿರುವಂತೆ ಕಂಡುಬರುತ್ತಿದೆ. ಓಟ್ ಬ್ಯಾಂಕ್ ರಾಜಕಾರಣದಲ್ಲಿ ಮತ್ತು ಒಟ್ಟಾರೆಯಾಗಿ ಧಾರ್ಮಿಕ/ಸಾಮುದಾಯಿಕ ಸುಧಾರಣೆಯಾಗಬೇಕೆಂಬ ಆಗ್ರಹಗಳ ನಡುವೆ ಲಿಂಗನ್ಯಾಯವು ಹಿನ್ನೆಲೆಗೆ ದೂಡಲ್ಪಡುತ್ತಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News