ಭವ್ಯ ಭಾರತದಲ್ಲಿ ಲಂಚ ಮಾರುತ
ಇಡೀ ವಿಶ್ವವನ್ನು ಎಲ್ಲ ದಿಕ್ಕುಗಳಿಂದ ಆವರಿಸಿದ ಮೇಲೂ ಅದನ್ನು ಮೀರಿ ಮತ್ತೂ ಹತ್ತು ಅಂಗುಲ ಚಾಚಿರುವ ವಿಶ್ವ ಪುರುಷನ ಹಾಗೆ, ಲಂಚ, ಭ್ರಷ್ಟಾಚಾರ ಈ ದೇಶದ ಎಲ್ಲಾ ಕ್ಷೇತ್ರಗಳನ್ನೂ ನಾನಾ ರೂಪಗಳಲ್ಲಿ ಆವರಿಸಿಕೊಂಡಿವೆ. ಆಡಳಿತ, ಅರ್ಥವ್ಯವಸ್ಥೆ, ಧರ್ಮ, ರಾಜಕಾರಣ, ಅಧ್ಯಾತ್ಮ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ನಾನಾ ಹೆಸರುಗಳಲ್ಲಿ ಆವರಿಸಿಕೊಂಡಿರುವ ಭ್ರಷ್ಟಾಚಾರ ಈ ನೆಲದಲ್ಲಿ ಒಂದು ಸಾಮಾಜಿಕ ಪಿಡುಗು ಅಷ್ಟೇ ಅಲ್ಲ. ಅದು ಒಂದು ಕೌಟುಂಬಿಕ ಸಂಕಟವೂ ಹೌದು. ಲಂಚದ ಹೊರತಾಗಿ ನಾಗರಿಕ ಬದುಕು ಅಸಾಧ್ಯವೋ ಏನೋ ಎನ್ನುವ ಹಂತಕ್ಕೆ ತಲುಪಿರುವ ಒಂದು ನಾಡಿನಲ್ಲಿ ಭ್ರಷ್ಟಾಚಾರ ನಿರ್ಮೂಲನ ಒಂದು ಕನಸು ಕೂಡ ಆಗಿ ಉಳಿದಿಲ್ಲ.
‘ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಶನಲ್ ಇಂಡಿಯಾ ಆ್ಯಂಡ್ ಲೋಕಲ್ ಸರ್ಕಲ್’ ನಡೆಸಿದ ಸಮೀಕ್ಷೆಯು ಭಾರತದಲ್ಲಿ ಲಂಚ ಪ್ರಕರಣಗಳಲ್ಲಿ ಶೇ.11ರಷ್ಟು ಹೆಚ್ಚಳವಾಗಿದೆ ಎಂದಿದೆ. ಅದು ಹೇಳುವಂತೆ 2017ರಲ್ಲಿ ಶೇ.56ರಷ್ಟು ಪೌರರು ತಾವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಂಚ ಪಾವತಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ನೋಟು ನಿಷೇಧ, ಜಿಎಸ್‌ಟಿಯಿಂದಾಗಿ ಭ್ರಷ್ಟಾಚಾರ ನಿಯಂತ್ರಿಸುವುದಾಗಿ, ನಿರ್ಮೂಲನ ಮಾಡುವುದಾಗಿ ಹೇಳಿದವರ ಮಾತು ಸುಳ್ಳಾಗಿದೆ. ಅಂದರೆ ಪವಿತ್ರ ಭೂಮಿಯಲ್ಲಿ ಲಂಚ ಮಾರುತ ಚಂಡ ಮಾರುತದ ಹಾಗೆ, ಜೋರಾಗಿಯೇ ಬೀಸುತ್ತಿದೆ. ಈ ಮಾರುತದ ರಭಸಕ್ಕೆ ಸಿಕ್ಕಿ ಸೋತು ಸುಣ್ಣವಾದವರ ಸಾವಿರಾರು ಕತೆಗಳು ಈ ದೇಶದ ಮೂಲೆ ಮೂಲೆಗಳಲ್ಲೂ ಸಿಗುತ್ತದೆ.
ಅದು ಹೀಗೆಲ್ಲ ನಡೆಯುತ್ತದೆ.
ಅವರಿಗೆ ಬೇಸಿಗೆ ರಜೆಯ ಅವಧಿಯ ವೇತನ ಪಾವತಿಯಾಗಿರಲಿಲ್ಲ. ಒಂದು ಶೈಕ್ಷಣಿಕ ವರ್ಷದಲ್ಲಿ ಇಂತಿಷ್ಟು ದಿನಗಳ ಕಾಲ ಕೆಲಸ ಮಾಡಿದ್ದರೆ ಅಂತಹ ಓರ್ವ ಅಧ್ಯಾಪಕನಿಗೆ ರಜಾ ವೇತನ ನೀಡಬಹುದೆಂಬ ನಿಯಮ ಜಾರಿಯಲ್ಲಿದ್ದ ದಿನಗಳು ಅವು. ರಜೆ ಕಳೆದ ಬಳಿಕ ಸಂಬಂಧಿತ ಕಚೇರಿಗೆ ತೆರಳಿ ಆ ಅಧಿಕಾರಿಯ ಮುಂದೆ ಅವರು ನಿಂತರು. ಅಧಿಕಾರಿ, ಮೊದಲೇ ಸೂಚನೆ ನೀಡಿದಂತೆ, ‘ಲಂಚ್ ಬ್ರೇಕ್’ ನ ವೇಳೆ ಅವರು ಅವನನ್ನು ಕರೆದುಕೊಂಡು ಸಮೀಪದ ಹೊಟೇಲ್‌ವೊಂದಕ್ಕೆ ಹೋದರು. ಅಲ್ಲಿ ಲಂಚ್ ಮುಗಿದ ಬಳಿಕ ‘‘ಸಿಗರೆಟ್?’’ ಎಂದು ಅವರು ತನ್ನ ಸಿಗರೆಟ್ ಪ್ಯಾಕನ್ನು ಅವನ ಮುಂದೆ ಹಿಡಿದರು. ಆತ, ‘‘ನೋ ಥ್ಯಾಂಕ್ಸ್’’ ಎಂದವನೇ ತನ್ನ ಕಿಸೆಯಿಂದ ಪ್ಯಾಕ್ ತೆಗೆದು ತನ್ನ ಬೆರಳುಗಳ ನಡುವೆ ಸಿಗರೆಟ್ ಹಿಡಿದು, ‘‘ಮ್ಯಾಚ್ ಬಾಕ್ಸ್?’’ ಎಂದ. ಅವರು ತನ್ನ ಕಿಸೆಯಿಂದ ಮ್ಯಾಚ್ ಬಾಕ್ಸ್ ತೆಗೆದು ಅವನಿಗೆ ಕೊಟ್ಟರು. ಕಡ್ಡಿ ಗೀರಿ ಸಿಗರೆಟ್ ಹಚ್ಚಿದ ಆತ ಆ ಬಾಕ್ಸನ್ನು ಹಿಂದಿರುಗಿಸದೆ ತನ್ನ ಕಿಸೆಯೊಳಗೆ ತುರುಕಿದ.
ಅದರೊಳಗೆ ಕೇವಲ ಎರಡು ಕಡ್ಡಿ ಮತ್ತು ಚೆನ್ನಾಗಿ ನಾಲ್ಕು ಮಡಿಕೆ ಮಾಡಿ ಮಡಚಿ ಇಟ್ಟಿದ್ದ ನೂರು ರೂಪಾಯಿಯ ಒಂದು ನೋಟು ಇತ್ತು!
ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಅದು ಸುಮಾರು ಮೂರು ಸಾವಿರ ರೂಪಾಯಿಗಳನ್ನು ತನ್ನ ಗರ್ಭದೊಳಗೆ ಅವಿತಿಟ್ಟುಕೊಂಡ ದುಬಾರಿ ಮ್ಯಾಚ್ ಬಾಕ್ಸ್ ಆಗಿತ್ತು. ಮುಂದಿನ ಎರಡು ವಾರಗಳೊಳಗಾಗಿ ಆ ಅಧ್ಯಾಪಕರಿಗೆ ಸಿಗಬೇಕಾಗಿದ್ದ ಚೆಕ್ ಸಿಕ್ಕಿತು.
***
ಅನುದಾನಿತ ಶಿಕ್ಷಣ ಸಂಸ್ಥೆಯೊಂದರ ಆರು ಮಂದಿ ಜೊತೆಯಾಗಿ ಒಂದಷ್ಟು ಮನೆ ನಿವೇಶನಗಳನ್ನು ಕೊಂಡುಕೊಂಡಿದ್ದರು. ಅವರ ನಿವೇಶನಗಳ ಕನ್ವರ್ಶನ್ ಆಗಬೇಕಿತ್ತು. ಅದಾಗದೆ ಮನೆ ಕಟ್ಟುವಂತಿಲ್ಲ. ಅವರಲ್ಲೊಬ್ಬರು ವ್ಯವಹಾರ ಸಾಹಸಿ ಆ ಕೆಲಸ ಮಾಡಿಸುವ ಜವಾಬ್ದಾರಿ ಹೊತ್ತರು. ಸಂಬಂಧಿತ ಕಚೇರಿಗೆ ಕೆಲವು ಬಾರಿ ಅಲೆದಾಡಿದರು. ಕೊನೆಗೊಂದು ದಿನ ನಿಶ್ಚಯವಾಯಿತು. ಆವತ್ತು ಅವರು ಜಿಲ್ಲಾ ಕೇಂದ್ರದಲ್ಲಿದ್ದ ಒಂದು ಬೃಹತ್ ಜವುಳಿ ಮಳಿಗೆಗೆ ಹೋದರು. ಎಲ್ಲವೂ ಪೂರ್ವನಿಗದಿತವಾದಂತೆಯೇ ನಡೆಯಿತು. ಆ ಅಧಿಕಾರಿ, ತನ್ನ ಕುಟುಂಬದ ಸದಸ್ಯರ ಜೊತೆಗೂಡಿ ಆ ಮಳಿಗೆಗೆ ಬಂದ. ಒಂದಷ್ಟು ಹೊತ್ತು ಶಾಪಿಂಗ್ ಮಾಡಿದ. ಆತನ ಬಟ್ಟೆಗಳ ಮೂಟೆಯನ್ನು ಆತ ಬಂದಿದ್ದ ಸರಕಾರಿ ವಾಹನಕ್ಕೆ ಸಾಗಿಸಲಾಯಿತು. ಶಾಂಪಿಂಗ್ ಬಿಲ್ ಸುಮಾರು ಆರು ಸಾವಿರ ರೂಪಾಯಿ ಆಗಿತ್ತು. ಕ್ಯಾಶ್ ಬಿಲ್ ಸಿದ್ಧವಾಗುತ್ತಿದ್ದಂತೆಯೇ ಕನ್ವರ್ಶನ್ ಆರ್ಡರ್ ಆಕಾಂಕ್ಷಿ ಅಧ್ಯಾಪಕರು ಕೌಂಟರಿನ ಮುಂದೆ ಬಂದು ನಿಂತರು. ಅವರು ಬಿಲ್ ತೆಗೆದುಕೊಂಡು ಬಿಲ್‌ನ ಮೊತ್ತ ಪಾವತಿಸುತ್ತಿದ್ದಂತೆ, ಅಧಿಕಾರಿಯ ಕುಟುಂಬ ತಮ್ಮ ವಾಹನ ಏರಿ ಮರೆಯಾಯಿತು.
ಅವರು ಪಾವತಿಸಿದ ಮೊತ್ತ ಕೇವಲ ಸುಮಾರು ಆರು ಸಾವಿರ ರೂಪಾಯಿ. ಇಂದಿನ ಬೆಲೆಯಲ್ಲಿ 1,50,000 ರೂಪಾಯಿ.
***
ಇನ್ನೊಬ್ಬರು ಕಾರಣಾಂತರದಿಂದ ಸುಮಾರು ಇಪ್ಪತ್ತು ತಿಂಗಳ ವೇತನರಹಿತ ರಜಾ ಹಾಕಬೇಕಾಯಿತು. ಅವರು ಮರಳಿ ಕರ್ತವ್ಯಕ್ಕೆ ಹಾಜರಾಗದಂತೆ ಸಂಸ್ಥೆಯ ಪ್ರಾಂಶುಪಾಲ ಸಂಚು ರೂಪಿಸಿದ್ದ. ತಾಂತ್ರಿಕ ನೆಪವೊಡ್ಡಿ ಅವರ ವೇತನ ತಡೆಹಿಡಿದ. ‘ಪ್ರಾಪರ್ ಚ್ಯಾನೆಲ್’ನಲ್ಲಿ ಹೋದರೆ ಅವರ ಸಮಸ್ಯೆ ಬಗೆಹರಿದು ವೇತನ ಕೈಗೆ ಬಂದರೂ, ಬರುವಷ್ಟರಲ್ಲಿ ಅವರ ಕುಟುಂಬ ಬೀದಿ ಪಾಲಾಗುವ ಸ್ಥಿತಿ. ಅವರ ಮಿತ್ರರೊಬ್ಬರ ಸಲಹೆಯಂತೆ ಸಂಬಂಧಿತ ಕಚೇರಿಗೆ ನಡೆದರು. ರಾಜ್ಯದ ರಾಜಧಾನಿಯಲ್ಲಿದ್ದ ಆ ಕಚೇರಿಯಲ್ಲಿ ಮಾನವೀಯ ಕಳಕಳಿ ಇದ್ದು, ಅನುಕಂಪವುಳ್ಳ ಓರ್ವ ಕಚೇರಿ ಸಹಾಯಕನಾಗಿದ್ದ. ಆತ ‘ನ್ಯಾಯ ಬೆಲೆ’ಗೆ ಅವರ ಕೆಲಸ ಮಾಡಿಸಿಕೊಡುವುದಾಗಿ ಹೇಳಿದ. ತಾಂತ್ರಿಕ ಸಮಸ್ಯೆ ಪರಿಹಾರವಾಗಬೇಕಾದರೆ, ಅವರ ಕಡತ ಒಟ್ಟು ಎಂಟು ಮೇಜುಗಳನ್ನು ಹಾದು ಹೋಗಬೇಕಾಗಿತ್ತು. ಸರಕಾರಿ ಕಚೇರಿಗಳಲ್ಲಿ ಯಾವುದೇ ಮೇಜು ತನಗೆ ಸಲ್ಲಬೇಕಾದ್ದು ಸಲ್ಲದೆ ತನ್ನ ಬಳಿ ಇರುವ ಕಡತವನ್ನು ಮುಂದಿನ ಮೇಜಿಗೆ ಕಳುಹಿಸುವಷ್ಟು ಕರುಣಾಳುವಲ್ಲ. ಮೇಜಿನ ಮುಂದೆ ಕುಳಿತು ‘‘ಕರುಣಾಳು ಬಾ ಬೆಳಕೆ ಕೈ ಹಿಡಿದು ನಡೆಸೆನ್ನನು’’ ಎಂದು ನೀವು ಎಷ್ಟೇ ಪ್ರಾರ್ಥಿಸಿದರೂ, ನಿರಂತರ ಭಜನೆ ಮಾಡಿದರೂ ಯಾವ ಕೈಯೂ ನಿಮ್ಮನ್ನು ಆ ಮೇಜಿನಿಂದ ಮುಂದಿನ ಮೇಜಿಗೆ ಕರೆದೊಯ್ಯುವುದಿಲ್ಲ.
ಅಧಿಕಾರಿ ಮೇಜಿನ ಡ್ರಾಯರನ್ನು ತುಸು ಹೊರಗೆಳೆದ. ಅವರು ಅದರೊಳಕ್ಕೆ ನಾಲ್ಕು ಮಡಿಕೆ ಮಾಡಿ ಇಟ್ಟುಕೊಂಡಿದ್ದ ಒಂದು ಸಾವಿರ ರೂಪಾಯಿ ಎರಡು ನೋಟುಗಳನ್ನು ನಿರ್ಮೋಹದಿಂದ ಲಘುವಾಗಿ ಎಸೆದರು. ಅದು ಒಳಕ್ಕೆ ಬಿದ್ದದ್ದೇ ಡ್ರಾಯರ್ ಪೂರ್ತಿ ಮುಚ್ಚಿಕೊಂಡಿತು.
ಅಲ್ಲಿಂದ ಅವರ ನಡೆ ಮುಂದಿನ ಮೇಜಿನೆಡೆ! ಅವರು ಮೇಜುಗಳನ್ನು ಸರಿಯಾಗಿ ನೋಡಿಕೊಳ್ಳದಿರುತ್ತಿದ್ದಲ್ಲಿ ಅವರ ವೇತನ ಮುಂದೆ ಎಂದೂ ಬರುತ್ತಿರಲಿಲ್ಲ ಅಥವಾ ಅದು ಬರುವಷ್ಟರಲ್ಲಿ ಅವರು ಕರ್ನಾಟಕದ ರೈತರ ಹಾಗೆ ಆತ್ಮಹತ್ಯೆಗೆ ಶರಣಾಗಬೇಕಾಗುತ್ತಿತ್ತು. ಯಾಕೆಂದರೆ ಯಾವ ಸಚಿವ ಮಹಾಶಯನಿಂದಲೂ ಸರಿಪಡಿಸಲಾಗದಂತಹ ‘ಟೆಕ್ನಿಕಲ್ ಪ್ರಾಬ್ಲೆಮ್’ಗಳನ್ನು ಸೃಷ್ಟಿಸುವ ಅಸಾಧಾರಣಾ ಶಕ್ತಿ, ಅದ್ಭುತ ಜಾಣ್ಮೆ ಮತ್ತು ಅನೂಹ್ಯ ದೂರದರ್ಶಿತ್ವ ನಮ್ಮ ಸರಕಾರಿ ಅಧಿಕಾರಿಗಳಿಗೆ, ಆಡಳಿತ ಯಂತ್ರಕ್ಕೆ ಇದೆ. ಅಂತಹ ‘ಪ್ರಾಬ್ಲೆಮ್’ ಪರಿಹರಿಸುವ ಯಾವ ದೇವರಿಗೂ ಇಲ್ಲದ ಶಕ್ತಿ ಲಂಚಕ್ಕೆ ಇದೆ.
ಇದು ಎಂತಹ ಶಕ್ತಿ ಎಂದರೆ... ಕೊನೆಯದಾಗಿ ಒಂದು ಘಟನೆ ಹೇಳಿ ಬಿಡುತ್ತೇನೆ. ಮಹನೀಯರೊಬ್ಬರ ಒಂದು ಅರ್ಜಿ, ಜಿಲ್ಲೆಯ ಮೂರು ಹಂತಗಳನ್ನು ದಾಟಿ ರಾಜ್ಯದ ರಾಜಧಾನಿ ತಲುಪಬೇಕಾಗಿತ್ತು. ಆ ಹಂತಗಳು ಕಳೆಯುವಷ್ಟರಲ್ಲಿ ಅದೆಷ್ಟು ತಿಂಗಳುಗಳು ಕಳೆದರೂ ಆಶ್ಚರ್ಯವಿರಲಿಲ್ಲ. ಆ ಮಹನೀಯರು ಎರಡನೆಯ ಮುಖ್ಯ ಹಂತದ ಅಧಿಕಾರಿಯ ಕಚೇರಿಯ ಕಚೇರಿ ಸಹಾಯಕನನ್ನು ಸಂಪರ್ಕಿಸಿದರು. ಕಚೇರಿ ಸಹಾಯಕ ಪ್ರತ್ಯಕ್ಷ ಅಧಿಕಾರವಿರುವ ಮುಖ್ಯ ಅಧಿಕಾರಿಗಿಂತಲೂ ಹೆಚ್ಚು ಪರೋಕ್ಷ ಅಧಿಕಾರ ಹೊಂದಿದವನಾಗಿರುತ್ತಾನೆ. ಯಾಕೆಂದರೆ ಪ್ರತ್ಯಕ್ಷ ದೇವರಿಗೆ ಕಾಣಿಕೆ ಹಣ ಸಂಗ್ರಹಿಸುವ ಏರ್ಪಾಡು ಮಾಡುವವ ಪರೋಕ್ಷ ಪೂಜಾರಿ. ಆ ಸಹಾಯಕ ಹೇಳಿದಂತೆ ಅವರು ಮಾಡಿದರು. ಎರಡು ಲಕೋಟೆ. ಪ್ರತಿ ಲಕೋಟೆಯ ಒಳಗೂ ಐನೂರು ರೂಪಾಯಿಗಳ ಕೇವಲ ಎರಡು ನೋಟುಗಳು. ಸಾಹೇಬರು ಹೆಡ್‌ಕ್ವಾರ್ಟರ್ಸ್‌ನಿಂದ ಹೊರಗೆ ಹೊರಟಾಗಿತ್ತು. ಆದರೆ ಅವರ ಸಹಿಗಾಗಿ ಕಾದಿದ್ದ ಅರ್ಜಿಗೆ ಸಹಿ ಹಾಕಲು ಅವರು ‘ಮರಳಿ ಮನೆಗೆ’ ಬಂದರು. ಸಹಿ ಹಾಕಿದರು. ಪೂಜಾರಿ ದೇವರಿಗೆ ಸಲ್ಲಿಸಬೇಕಾಗಿದ್ದನ್ನು ಸಲ್ಲಿಸಿದ ಮುಂದೆ...?
ಅಂಚೆಯಲ್ಲಿ ಕಳುಹಿಸಬೇಕಾಗಿದ್ದ ಆ ಅರ್ಜಿಯನ್ನು ಆತ ಆ ಮಹನೀಯರ ಕೈಗೆ ನೀಡಿದ. ‘‘ನೀವು ಯಾವಾಗ ಬೆಂಗಳೂರಿಗೆ ಹೋಗಿ ಇದನ್ನು ಮುಖ್ಯ ಕಚೇರಿಗೆ ತಲುಪಿಸುವುದು’’ ಎಂದ. ‘‘ಇನ್ನೊಂದೆರಡು ದಿನಗಳಲ್ಲಿ’’. ‘‘ನಾನು ಇವತ್ತೇ ನೈಟ್ ಬಸ್‌ನಲ್ಲಿ ಹೊರಡುತ್ತಿದ್ದೇನೆ. ನಾನೇ ನಾಳೆ ಬೆಳಗ್ಗೆ ತಲುಪಿಸುತ್ತೇನೆ’’ ಎಂದ ಮತ್ತು ಆತ ‘‘ನುಡಿದಂತೆ ನಡೆದ’’ ಕೂಡ! ಆ ಮಹನೀಯರು ಬೆಂಗಳೂರು ತಲುಪಿ ಕಚೇರಿಗೆ ಹೋಗುವುದರೊಳಗಾಗಿ, ಅವರಿಗಿಂತ ಮೊದಲೇ, ಅದು ಸಂಬಂಧಿತ ಮೇಜಿನ ಮೇಲೆ ಕುಳಿತಿತ್ತು! ಇದೆಲ್ಲವೂ ಎರಡು ಲಕೋಟೆಗಳು ಒಂದು ರಾತ್ರಿ ಬೆಳಗಾಗುವುದರೊಳಗಾಗಿ ಮಾಡಿದ ಪವಾಡ.
ನನ್ನ ಗಮನಕ್ಕೆ ಬಂದ, ನಿಮಗೂ ಗೊತ್ತಿರಬಹುದಾದ ಇಂತಹ ಇನ್ನೂ ನೂರಾರು ಘಟನೆಗಳು ನಡೆದಿರುತ್ತವೆ. ನಡೆಯುತ್ತಲೇ ಇರುತ್ತವೆ. ಹಾಗಾದರೆ ಲಂಚ, ಭ್ರಷ್ಟಾಚಾರ ಕೊನೆಗೊಳ್ಳುವುದು ಯಾವಾಗ? ಅದು ಕೊನೆಗೊಳ್ಳುವ ಅಂತಿಮ ದಿನ ಯಾವುದು? ಆ ದಿನ ಬರುತ್ತದೆಂಬ ನಂಬಿಕೆಯಿಲ್ಲ. ಸತ್ತವರ ಆತ್ಮಗಳಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಬದುಕಿರುವವರು ಶಾಶ್ವತವಾಗಿ ನಂಬುವ ಹಾಗೆ, ನಾವು ನಂಬಿ ಸದ್ಯಕ್ಕೆ ಬದುಕುವುದಲ್ಲದೆ ಬೇರೆ ದಾರಿ ಇದೆಯೇ?
ಯಾಕೆಂದರೆ ಲಂಚ, ಭ್ರಷ್ಟಾಚಾರಕ್ಕೆ ಋಗ್ವೇದದ ಪುರುಷಸೂಕ್ತದಲ್ಲಿ ಬರುವ ಪುರುಷನಿಗೆ (ವಿಶ್ವ ವ್ಯಕ್ತಿಗೆ) ಇರುವ ಹಾಗೆ ಸಾವಿರ ತಲೆ, ಸಾವಿರ ಕಣ್ಣು, ಸಾವಿರ ಕಾಲುಗಳಿವೆ.
ಇಡೀ ವಿಶ್ವವನ್ನು ಎಲ್ಲ ದಿಕ್ಕುಗಳಿಂದ ಆವರಿಸಿದ ಮೇಲೂ ಅದನ್ನು ಮೀರಿ ಮತ್ತೂ ಹತ್ತು ಅಂಗುಲ ಚಾಚಿರುವ ವಿಶ್ವ ಪುರುಷನ ಹಾಗೆ, ಲಂಚ, ಭ್ರಷ್ಟಾಚಾರ ಈ ದೇಶದ ಎಲ್ಲಾ ಕ್ಷೇತ್ರಗಳನ್ನೂ ನಾನಾ ರೂಪಗಳಲ್ಲಿ ಆವರಿಸಿಕೊಂಡಿವೆ. ಆಡಳಿತ, ಅರ್ಥವ್ಯವಸ್ಥೆ, ಧರ್ಮ, ರಾಜಕಾರಣ, ಅಧ್ಯಾತ್ಮ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ನಾನಾ ಹೆಸರುಗಳಲ್ಲಿ ಆವರಿಸಿಕೊಂಡಿರುವ ಭ್ರಷ್ಟಾಚಾರ ಈ ನೆಲದಲ್ಲಿ ಒಂದು ಸಾಮಾಜಿಕ ಪಿಡುಗು ಅಷ್ಟೇ ಅಲ್ಲ. ಅದು ಒಂದು ಕೌಟುಂಬಿಕ ಸಂಕಟವೂ ಹೌದು. ಲಂಚದ ಹೊರತಾಗಿ ನಾಗರಿಕ ಬದುಕು ಅಸಾಧ್ಯವೋ ಏನೋ ಎನ್ನುವ ಹಂತಕ್ಕೆ ತಲುಪಿರುವ ಒಂದು ನಾಡಿನಲ್ಲಿ ಭ್ರಷ್ಟಾಚಾರ ನಿರ್ಮೂಲನ ಒಂದು ಕನಸು ಕೂಡ ಆಗಿ ಉಳಿದಿಲ್ಲ.
(bhaskarrao599@gmail.com)