ವೀರವ್ರತಿ

Update: 2018-10-19 18:39 GMT

ವೀರವ್ರತಿ ಭಕ್ತನೆಂದು ಹೊಗಳಿಕೊಂಬಿರಿ ಕೇಳಿರಯ್ಯ:
ವೀರನಾದಡೆ ವೈರಿಗಳು ಮೆಚ್ಚಬೇಕು,
ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು.
ಭಕ್ತನಾದಡೆ ಜಂಗಮವೇ ಮೆಚ್ಚಬೇಕು
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.
                                       -ಬಸವಣ್ಣ

ಹನ್ನೆರಡನೆಯ ಶತಮಾನ ವಿವಿಧ ರೀತಿಯ ಹಿಂಸಾಭಕ್ತಿಯಿಂದ ಕೂಡಿದ್ದಾಗಿತ್ತು. ದೇವರ ಹೆಸರಿನಲ್ಲಿ ಕೊಲ್ಲುವುದು ಮತ್ತು ಆತ್ಮಾರ್ಪಣೆ ಮಾಡಿಕೊಳ್ಳುವುದು ಧರ್ಮಕಾರ್ಯವೆಂದು ಭಾವಿಸಲಾಗಿತ್ತು. ಪರಮತದವರ ವಿರುದ್ಧ ಹೋರಾಡುತ್ತ ಅವರ ರುಂಡವನ್ನು ಕತ್ತರಿಸಿ ದೇವರಿಗೆ ಅರ್ಪಿಸುವುದಷ್ಟೇ ಅಲ್ಲದೆ ದೇವಾಲಯದಲ್ಲಿ ದೇವರ ಮೂರ್ತಿಯ ಮುಂದೆ ತಮ್ಮ ರುಂಡವನ್ನು ಕೂಡ ಕತ್ತರಿಸಿಕೊಳ್ಳುವಂಥ ವ್ರತಗಳು ಕೂಡ ಜಾರಿಯಲ್ಲಿದ್ದವು. ಈ ಉಗ್ರಭಕ್ತಿಯಿಂದ ಜನ ಬೇಸತ್ತು ಹೋಗಿದ್ದರು. ಧರ್ಮದ ಹೆಸರಿನಲ್ಲಿ ವಿವಿಧ ಪ್ರಕಾರದ ಹಿಂಸೆ ನೆಲೆಸಿತ್ತು. ಧರ್ಮದ ಹೆಸರಿನಲ್ಲಿ ಯುದ್ಧಗಳು ನಡೆಯುತ್ತಿದ್ದವು. ಧರ್ಮದ ಹೆಸರಿನಲ್ಲಿ ಇಂಥ ಸಂಪ್ರದಾಯವನ್ನು ಪಾಲಿಸುವವರು ವೀರವ್ರತಿಗಳೆಂದು ಕರೆಯಿಸಿಕೊಳ್ಳುತ್ತಿದ್ದರು. ದಕ್ಷಬ್ರಹ್ಮನ ಯಜ್ಞವಿನಾಶಕ್ಕಾಗಿ ಜನಿಸಿದ ವೀರಭದ್ರ ವೀರವ್ರತದ ಮೂಲ ಪುರುಷ ಎಂದು ಹೇಳಲಾಗುತ್ತಿದೆ. ಇಂಥ ವೀರವ್ರತಿಗಳನ್ನು ಕೂಡ ಭಕ್ತರೆಂದು ಕರೆಯುತ್ತಿದ್ದರು.
ಈ ವೀರವ್ರತಿಗಳ ಭಕ್ತಿಗೂ ಶರಣರ ಭಕ್ತಿಗೂ ಯಾವುದೇ ಸಂಬಂಧವಿಲ್ಲ. ಲಿಂಗಾಯತ ಧರ್ಮವು ಅಹಿಂಸಾ ಧರ್ಮವಾಗಿದೆ. ಶರಣರ ಭಕ್ತಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವಂಥ ಜೀವಕಾರುಣ್ಯದಿಂದ ಕೂಡಿದೆ. ವೈಚಾರಿಕತೆಯ ಮೂಲಕ ಜನರನ್ನು ಭಕ್ತರನ್ನಾಗಿಸುವುದು ಲಿಂಗಾಯತ ಧರ್ಮದ ಉದ್ದೇಶವಾಗಿದೆ. ಶರಣರು ಸಮಾಜದಲ್ಲಿನ ಶೋಷಣೆಯ ವಿರುದ್ಧ ಹೋರಾಡುವ ವೀರರಾಗಿದ್ದಾರೆ. ಕಾಯಕಜೀವಿಗಳ ವ್ರತವೆಂದರೆ ಏಕದೇವೋಪಾಸನೆ ಮಾಡುತ್ತ ಅಪರಿಗ್ರಹ ಪ್ರಜ್ಞೆಯೊಂದಿೆ ಪವಿತ್ರವಾಗಿ ಬದುಕುವುದೇ ಆಗಿದೆ.
ತಮ್ಮನ್ನು ಭಕ್ತರೆಂದು ಕರೆಯಿಸಿಕೊಳ್ಳುವ ವೀರವ್ರತಿಗಳಿಗೆ ಬಸವಣ್ಣನವರು ಹೀಗೆ ಹೇಳುತ್ತಾರೆ: ವೀರನಾದಡೆ ವೈರಿಗಳು ಮೆಚ್ಚಬೇಕು. ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು. ಭಕ್ತನಾದರೆ ಇಡೀ ಸಮಾಜವೇ ಮೆಚ್ಚಬೇಕು. ಹಿಂದಿನ ಕಾಲದಲ್ಲಿ ವೀರ ಪುರುಷರಿಗೆ ಬಹಳ ಗೌರವವಿತ್ತು. ಆತ ವೈರಿಗಳನ್ನು ಸದೆಬಡಿಯಬೇಕು. ಅಸಹಾಯಕರ ಸಂರಕ್ಷಕನಾಗಿರಬೇಕು. ಆತನ ವ್ಯಕ್ತಿತ್ವ ತ್ಯಾಗಭಾವನೆಯಿಂದ ಕೂಡಿರಬೇಕು. ವೈರಿಸೈನ್ಯದಿಂದ ಊರ ರಕ್ಷಣೆ ಮಾಡಬೇಕು. ದಾಳಿಕೋರರಿಂದ ಮಹಿಳೆಯರನ್ನು ರಕ್ಷಿಸುವ ಮೂಲಕ ಮಾನ ಕಾಪಾಡಬೇಕು. ಇವೆಲ್ಲ ವೀರ ಅನಿಸಿಕೊಂಡವನ ಲಕ್ಷಣಗಳಾಗಿದ್ದವು. ಇಂಥ ವೀರನನ್ನು ವೈರಿಗಳೂ ಮೆಚ್ಚುತ್ತಿ ದ್ದರು. ಇಂಥ ವ್ರತಧಾರಿಗಳನ್ನು ಅಂಗನೆಯರೂ ಗೌರವಿಸುತ್ತಿದ್ದರು. ಇನ್ನು ಒಬ್ಬ ವ್ಯಕ್ತಿ ಭಕ್ತನೆನಿಸಿಕೊಳ್ಳುವ ಯೋಗ್ಯತೆಯನ್ನು ಪಡೆದರೆ ಆತ ಸಮಾಜಮುಖಿಯಾಗಿ ಇಡೀ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಕಾರಣ ಆತನನ್ನು ಜಂಗಮವೇ (ಸಮಾಜವೇ) ಮೆಚ್ಚುತ್ತಿತ್ತು. . ಈ ರೀತಿ ಬದುಕಿದರೆ ದೇವರು ಬೇಡಿದ್ದನ್ನು ಕೊಡುತ್ತಾನೆ ಎಂದು ಬಸವಣ್ಣನವರು ತಿಳಿಸುತ್ತಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75