ಲಿಂಗ ಅಸಮಾನತೆ ಮತ್ತು ಶಬರಿಮಲೆ ವಿವಾದ: ಒಂದು ಅವಲೋಕನ

Update: 2018-10-23 18:32 GMT

ಭಾಗ-2

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ನಾಟಕವಾಡಿ ಜಾತಿ, ಲಿಂಗ ತಾರತಮ್ಯ ಇರಬಾರದು; ಎಲ್ಲರಿಗೂ ಸಮಾನವಾಗಿ ಪೂಜಿಸುವ ಹಕ್ಕು ಇರಬೇಕೆಂದ ಸಂಘ ಪರಿವಾರದ ಆಷಾಢಭೂತಿತನ ಸಂಪೂರ್ಣ ಬಟಾಬಯಲಾಗಿದೆ. ತೋರಿಕೆಗಷ್ಟೆ ಸ್ತ್ರೀಯನ್ನು ಮಾತೆ ಎಂದು ಕರೆಯುತ್ತಾ ವಾಸ್ತವದಲ್ಲಿ ಮನುವಿನ ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ನಿಯಮವನ್ನು ಪಾಲಿಸುವ ಆರೆಸ್ಸೆಸ್ಸಿಗರು ಇಂತಹ ಪ್ರತಿಯೊಂದು ವಿಷಯದಲ್ಲೂ ದ್ವಂದ್ವ ನಿಲುವುಗಳನ್ನು ತಳೆಯುವವರು. ತಮ್ಮದು ಕೇವಲ ಸಾಂಸ್ಕೃತಿಕ ಸಂಘಟನೆ ಎನ್ನುವ ಆರೆಸ್ಸೆಸ್ ಮುಕ್ತವಾಗಿ ರಾಜಕೀಯದಲ್ಲೂ ಮೂಗು ತೂರಿಸುತ್ತಾ ಇರುತ್ತದೆ. ಗೋಹತ್ಯೆ ನಿಷೇಧ ಆಗಬೇಕೆಂದು ಕೂಗುಹಾಕುವ ಇವರು ತಮ್ಮದೇ ಆಡಳಿತವಿರುವ ಗೋವಾದಲ್ಲಿ, ಈಶಾನ್ಯ ರಾಜ್ಯಗಳಲ್ಲಿ ಎಗ್ಗಿಲ್ಲದೆ ಗೋಹತ್ಯೆ ನಡೆಸಲು ಅನುಮತಿ ನೀಡುತ್ತಾರೆ. ಈಗ ಶಬರಿಮಲೆ ತೀರ್ಪಿನ ವಿಷಯದಲ್ಲೂ ಹೀಗೇ ಆಗಿದೆ. ಆರಂಭದಲ್ಲಿ ತೀರ್ಪನ್ನು ಸ್ವಾಗತಿಸಿದಂತೆ ನಟಿಸಿದ ಇವರು ಈಗ ತದ್ವಿರುದ್ಧ (ಅಸಲಿ) ನಿಲುವನ್ನು ತಳೆದಿರುವುದೇಕೆಂದರೆ ಈಗಾಗಲೇ ಹೇಳಿದಂತೆ ದಕ್ಷಿಣ ಭಾರತದಲ್ಲಿ ತಮ್ಮ ಸಂಘಟನೆಯನ್ನು ಬಲಪಡಿಸಲು ಮತ್ತು 2019ರ ಚುನಾವಣೆಗಳಲ್ಲಿ ಗರಿಷ್ಠ ಲಾಭ ಗಳಿಸಲು ಇದು ಸದವಕಾಶ ಎನ್ನುವುದನ್ನು ಅವರು ಬಹಳ ಚೆನ್ನಾಗಿ ಬಲ್ಲರು. 2018ರ ಶಬರಿಮಲೆ ಹೋರಾಟದ ಬಗ್ಗೆ ಮಾತನಾಡಿರುವ ಬಿಜೆಪಿಯ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ‘‘ಸಂಘ ಪರಿವಾರದ ಪ್ರಸಕ್ತ 2018ರ ‘ಸಮರ’ 1983ರದ್ದಕ್ಕಿಂತಲೂ ತೀವ್ರವಾಗಿದೆ....

1983ರ ಚಳವಳಿ ಕೇರಳದಲ್ಲಿ ಸಂಘ ಪರಿವಾರದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗಿತ್ತು.... ಬಿಜೆಪಿ ನಿಸ್ಸಂದೇಹವಾಗಿಯೂ 2018ರ ಚಳವಳಿಯ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸಲಿದೆ’’ ಎಂದು ಹೇಳಿರುವುದು ಗಮನಾರ್ಹವಿದೆ. ಇಂತಹ ಸನ್ನಿವೇಶದಲ್ಲಿ ಕೆಲವು ಹೋರಾಟಗಾರ್ತಿಯರು ಕೇವಲ ತಮ್ಮ ಹೋರಾಟ ಸರಿಯಾಗಿತ್ತೆಂದು ತೋರಿಸುವುದಕ್ಕೋಸ್ಕರ ಇಷ್ಟೊಂದು ಅವಸರದಲ್ಲಿ ಮಂದಿರ ಪ್ರವೇಶಕ್ಕೆ ಯತ್ನಿಸಿದ್ದು ಸಂಘ ಪರಿವಾರದ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಬೆಳವಣಿಗೆಗಳನ್ನು ನೋಡುವಾಗ ಸಂವಿಧಾನ ರಚನಾ ಸಭೆಯಲ್ಲಿ ಹಂಸ ಮೆಹ್ತಾ, ಅಂಬೇಡ್ಕರ್ ವಾದಿಸಿದಂತೆ ಇಂತಹ ಸುಧಾರಣೆಗಳು ಶಾಸಕಾಂಗದ ಮೂಲಕ ಆಗುವುದೇ ಸರಿಯೆಂದು ಅನಿಸುತ್ತದೆ. ನ್ಯಾಯಾಂಗವು ಶಬರಿಮಲೆ ಮತ್ತು ಮುಂಬೈನ ಹಾಜಿ ಅಲಿ ದರ್ಗಾಗಳಿಗೆ ಸಂಬಂಧಿಸಿದ ತೀರ್ಪುಗಳನ್ನು ನೀಡಿರುವುದು ಆಳುವ ಸರಕಾರಕ್ಕೆ ಅನುಕೂಲವಾಗಲೆಂದಿರಬಹುದೇ ಎಂಬ ಅನುಮಾನ ಕಾಡುತ್ತದೆ. ತ್ರಿವಳಿ ತಲಾಖ್, ಹಾಜಿ ಅಲಿ ದರ್ಗಾ ಪ್ರಕರಣಗಳಲ್ಲಿ ಮುಸ್ಲಿಂ ಮಹಿಳೆಯರ ಪರ ತೀರ್ಪು ಬಂದಾಗ ಸಂಘ ಪರಿವಾರಿಗರು ಹರ್ಷದಿಂದ ನಲಿದಾಡಿದ್ದನ್ನು ಗಮನಿಸಬೇಕು. ಅವರು ಕುಣಿದಾಡಿದ್ದು ಸಮಾನತೆಗೆ ಜಯ ದೊರಕಿದ್ದಕ್ಕಲ್ಲ, ಮುಸ್ಲಿಂ ಪುರುಷರಿಗೆ ಜೈಲುಶಿಕ್ಷೆ ಆಗಲಿರುವುದಕ್ಕೆ. ಏಕೆಂದರೆ ಇದು ಮುಸ್ಲಿಂ ಸಮುದಾಯವನ್ನು ನಿರ್ನಾಮ ಮಾಡುವ ಅವರ ಹಿಂದೂ ರಾಷ್ಟ್ರ ನಿರ್ಮಾಣದ ಅಜೆಂಡಾಕ್ಕೆ ಅನುಕೂಲಕರವಾಗಿದೆ.

ಶಬರಿಮಲೆ ಅಯ್ಯಪ್ಪನ ಇತಿಹಾಸ 
ಸಂಘ ಪರಿವಾರದ 1983ರ ಹೋರಾಟ ಶಬರಿಮಲೆಗೆ ಸಂಬಂಧಪಟ್ಟದ್ದಾಗಿದೆ. ಅದರ ಬಗ್ಗೆ ತಿಳಿಯುವ ಮುನ್ನ ಶಬರಿಮಲೆ ಅಯ್ಯಪ್ಪನ ಕುರಿತು ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಶಬರಿಮಲೆಯ ಮತ್ತು ಅಯ್ಯಪ್ಪನ ಇತಿಹಾಸ ರಹಸ್ಯಮಯವಾಗಿದೆ. ಕುತೂಹಲದ ಸಂಗತಿ ಏನೆಂದರೆ ಅಯ್ಯಪ್ಪದೈವ ಮತ್ತು ಪಂಥ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿದ್ದು ಹಿಂದೂಗಳ ಯಾವುದೇ ಪ್ರಮುಖ ಪುರಾಣಗಳಲ್ಲಿಯೂ ಇದರ ಉಲ್ಲೇಖ ಇಲ್ಲ. ಸ್ವತಃ ಕೇರಳದ ಚಾರಿತ್ರಿಕ ಗ್ರಂಥಗಳಲ್ಲ್ಲಿಯೂ ಶಬರಿಮಲೆ ಅಯ್ಯಪ್ಪನ ಪ್ರಸ್ತಾಪ ಕಂಡುಬರುವುದಿಲ್ಲ. ವಾಸ್ತವದಲ್ಲಿ ವ್ಯತ್ಪತ್ತಿಶಾಸ್ತ್ರ ಮತ್ತು ಪ್ರತಿಮಾಶಾಸ್ತ್ರಗಳ ಪ್ರಕಾರ ನೋಡಿದಾಗ ತಮಿಳುನಾಡಿನ ಕೆಳಜಾತಿಗಳ ದೈವವಾದ ಅಯ್ಯನಾರ್‌ಗೂ ಶಬರಿಮಲೆ ಅಯ್ಯಪ್ಪನಿಗೂ ಸಂಬಂಧವಿರುವಂತೆ ತೋರುತ್ತದೆ. ಎರಡೂ ಮೂರ್ತಿಗಳ ನಡುವೆ ಹೋಲಿಕೆಗಳಿರುವುದನ್ನು ಗಮನಿಸಬಹುದು.

ಅಯ್ಯಪ್ಪನನ್ನು ಬುದ್ಧನ (ನೀಲಕಂಠ ಅವಲೋಕಿತೇಶ್ವರ) ಜೊತೆ ಹೋಲಿಸುವ ವಿದ್ವಾಂಸರೂ ಇದ್ದಾರೆ. ಅದೇನಿದ್ದರೂ ಶಬರಿಮಲೆ ಒಂದು ಸಮ್ಮಿಶ್ರ ಧಾರ್ಮಿಕ ಸಂಸ್ಕೃತಿಯ ನಿದರ್ಶನ ಎನ್ನಬಹುದು. ಯಾತ್ರಾರ್ಥಿಗಳು ಸಮೀಪದ ವಾವರ್ ಎಂಬ ಮುಸ್ಲಿಂ ದೈವವನ್ನು ಅರ್ಚಿಸುತ್ತಾರಲ್ಲದೆ ಅರ್ಥುಂಕಲ್ ಚರ್ಚ್‌ಗೂ ಭೇಟಿ ಕೊಡುತ್ತಾರೆ. ಆದರೆ ಬಹುಶಃ 20ನೆ ಶತಮಾನದಲ್ಲಿ ಅಯ್ಯಪ್ಪಪಂಥದ ಈ ಸಮ್ಮಿಶ್ರ ಸಂಸ್ಕೃತಿಯ ಮೇಲೆ ಕೇಸರಿವಾದಿಗಳ ಕಣ್ಣು ಬಿದ್ದಿದೆ. ಇದು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಉಪಯುಕ್ತವಾಗಬಹುದೆಂದು ಗ್ರಹಿಸಿದ ಕೇಸರಿವಾದಿಗಳು ಅಯ್ಯಪ್ಪಭಕ್ತರ ಮೇಲೆ ಹೆಚ್ಚೆಚ್ಚು ಪ್ರಭಾವ ಬೀರಲು ಪ್ರಯತ್ನಿಸತೊಡಗಿದರು. ಮಕರವಿಳಕ್ಕುಂ ವಿದ್ಯಮಾನ ಪ್ರಾಯಶಃ ಇದರ ಭಾಗವೇ ಆಗಿದೆ. ಏಕೆಂದರೆ 45 ವರ್ಷಗಳ ಹಿಂದೆ ಇಂತಹದೊಂದು ವಿದ್ಯಮಾನ ಇರಲೇ ಇಲ್ಲವೆಂದು ತಿರುವಾಂಕೂರು, ಕೊಚ್ಚಿ ದೇವಸ್ವಂ ಮಂಡಳಿಯ ಸಾರ್ವಜನಿಕ ತನಿಖಾಧಿಕಾರಿ ನಳಿನಾಕ್ಷನ್ ನಾಯರ್ ತಿಳಿಸಿದ್ದಾರೆ. ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ರಮಣ ನಾಯರ್ ಕೂಡಾ ಇದು ಮಾನವನಿರ್ಮಿತವೆಂದು ಒಪ್ಪಿಕೊಂಡಿದ್ದಾರೆ. ಇಂದು ಲಕ್ಷಾಂತರ ಭಕ್ತರು ಮಕರಜ್ಯೋತಿಯನ್ನು ವೀಕ್ಷಿಸಲೆಂದೇ ಶಬರಿಮಲೆ ಯಾತ್ರೆ ಕೈಗೊಳ್ಳುವುದನ್ನು ಗಮನಿಸಬಹುದು.

1950ರ ಅಗ್ನಿ ಅನಾಹುತ
 1950ರಲ್ಲಿ ಅಯ್ಯಪ್ಪ ಮಂದಿರದಲ್ಲಿ ಬೆಂಕಿ ಅನಾಹುತ ಸಂಭವಿಸಿದ ಬಳಿಕ ಮಂದಿರದ ಶುದ್ಧೀಕರಣ ಮತ್ತು ಮೂರ್ತಿಯ ಪುನರ್‌ಪ್ರತಿಷ್ಠಾಪನೆ ನಡೆಯಿತು. ಆದರೆ ಹಿಂದೂ ಮಹಾಮಂಡಲ ಎಂಬ ಸಂಘಟನೆ ಅದು ಆಕಸ್ಮಿಕವಲ್ಲ, ಉದ್ದೇಶಪೂರ್ವಕ ಕೃತ್ಯ ಎಂದು ಆರೋಪಿಸಿ ತಿರುವನಂತಪುರದಲ್ಲಿ ಮುಷ್ಕರ ಹೂಡಿತು. ತರುವಾಯ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಸದಸ್ಯರ ವತಿಯಿಂದ ಕೇರಳ, ತಮಿಳ್ನಾಡು ರಾಜ್ಯಗಳಲ್ಲಿ ಅಯ್ಯಪ್ಪಜ್ಯೋತಿಯ ಮೆರವಣಿಗೆ ಕೈಗೊಳ್ಳಲಾಯಿತು. ಇವೆಲ್ಲ ಬೆಳವಣಿಗೆಗಳ ನಂತರ ಹಿಂದೂಗಳನ್ನು ಧಾರ್ಮಿಕವಾಗಿ ಸಂಘಟಿಸುವ ಪ್ರಯತ್ನಗಳಿಗೆ ಹೆಚ್ಚಿನ ಒತ್ತು ನೀಡಲಾಯಿತು. ‘ಹರಿವರಾಸನಂ’ ಎಂಬ ಸಂಸ್ಕೃತದ ಜೋಗುಳವನ್ನು ಶಬರಿಮಲೆಯ ಅಧಿಕೃತ ಹಾಡು ಎಂದು ಘೋಷಿಸಲಾಯಿತು. 1955-56ರಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ 10ರಿಂದ 50ರ ಹರೆಯದ ಮಹಿಳೆಯರಿಗೆ ಪ್ರವೇಶ ನಿಷೇಧಿಸಿ ಎರಡು ಆದೇಶಗಳನ್ನು ಹೊರಡಿಸಿತು. 1972ರಲ್ಲಿ ಮತ್ತೊಮ್ಮೆ ಅದೇ ಆದೇಶ ಹೊರಡಿಸಲಾಯಿತು. ಮಹಿಳೆಯರಿಗೆ ವಿಧಿಸಿರುವ ನಿರ್ಬಂಧ ಇತ್ತೀಚಿನದು ಎಂದು ಕೇರಳ ಹೈಕೋರ್ಟಿನ 1991ರ ತೀರ್ಪು ಕೂಡಾ ಹೇಳುತ್ತದೆ.

ತೀರ್ಪಿನಲ್ಲಿ ‘‘ಹಿಂದಿನ ಕಾಲದಲ್ಲಿ ಮಹಿಳೆಯರು ಮಂದಿರಕ್ಕೆ ಭೇಟಿ ನೀಡುತ್ತಿದ್ದರು. 1940ರಲ್ಲಿ ತಿರುವಾಂಕೂರಿನ ಮಹಾರಾಜ, ಮಹಾರಾಣಿ (ಪ್ರಾಯ 40) ಮತ್ತು ದಿವಾನರು ಮಂದಿರ ಪ್ರವೇಶಿಸಿದ್ದರು. ಆದಕಾರಣ ಪ್ರಾಚೀನ ಕಾಲದಲ್ಲಿ ಮಹಿಳೆಯರು ಶಬರಿಮಲೆ ದೇವಳ ಪ್ರವೇಶಿಸುವುದರ ವಿರುದ್ಧ ಕಟ್ಟುನಿಟ್ಟಾದ ನಿಷೇಧ ಇರಲಿಲ್ಲ’’ ಎಂದು ಬರೆಯಲಾಗಿದೆ. ಶಬರಿಮಲೆಯಲ್ಲಿ ಒಂದು ವಿಧದ ಸಾಂಪ್ರದಾಯಿಕ ನಿಷೇಧ ಇತ್ತೆಂದು ಲೆಫ್ಟಿನೆಂಟ್ ವಾರ್ಡ್ ಮತ್ತು ಕಾನರ್ ಬರೆದ, 1893 ಮತ್ತು 1901ರಲ್ಲಿ ಎರಡು ಭಾಗಗಳಲ್ಲಿ ಪ್ರಕಟಿಸಲಾದ, ಛಿಞಟಜ್ಟಿ ಟ್ಛ ಠಿಛಿ ಖ್ಠ್ಟಛಿ ಟ್ಛ ಠಿಛಿ ಖ್ಟಚ್ಞ್ಚಟ್ಟಛಿ ಚ್ಞ ಇಟ್ಚಜ್ಞಿ ಖಠಿಠಿಛಿ ಎಂಬ ಪುಸ್ತಕದಲ್ಲೂ ಹೇಳಲಾಗಿದೆ. ಇದರರ್ಥ ಋತುಮತಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸುವ ಸಂಪ್ರದಾಯ ಹಿಂದುತ್ವವಾದಿಗಳು ಹೇಳುವಂತೆ ಶತಶತಮಾನಗಳಷ್ಟು ಪ್ರಾಚೀನ ಅಲ್ಲ.

ಶಬರಿಮಲೆಯಲ್ಲಿ ಮಹಿಳೆಯರು ಪ್ರಾರ್ಥನೆ ಮಾಡುತ್ತಾರೆ, ಅನ್ನಪ್ರಾಶನವನ್ನೂ ನಡೆಸುತ್ತಾರೆ ಎಂದು ದೂರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟಿನ ತೀರ್ಪಿನಲ್ಲಿ ಇನ್ನೂ ಕೆಲವು ಸ್ವಾರಸ್ಯಕರ ಮಾಹಿತಿಗಳನ್ನು ದಾಖಲಿಸಲಾಗಿದೆ. ಉದಾಹರಣೆಗೆ, ಅರ್ಜಿದಾರರ ದೂರಿಗೆ ಉತ್ತರಿಸಿದ ಪ್ರತಿವಾದಿ ‘‘ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಕೇವಲ ಪ್ರಧಾನ ತೀರ್ಥಯಾತ್ರೆಗಳ ಸಮಯದಲ್ಲಿ ಅನ್ವಯಿಸುತ್ತದೆ ಮತ್ತು ಪ್ರತಿ ಮಲಯಾಳಂ ತಿಂಗಳ ಮೊದಲ 5 ದಿನಗಳಲ್ಲಿ ಮಂದಿರವನ್ನು ಅಧಿಕೃತವಾಗಿ ಅನ್ನಪ್ರಾಶನಕ್ಕೆ ತೆರೆಯಲಾಗುತ್ತದೆ’’ ಎಂದು ವಾದಿಸಿದರು. ಇದನ್ನು ಒಪ್ಪಿಕೊಂಡ ಶಬರಿಮಲೆಯ ತಂತ್ರಿ ಮತ್ತು ದೇವಸ್ವಂ ಮಂಡಳಿ, ಕಳೆದ 40 ವರ್ಷಗಳಿಂದ ತೀರ್ಥಯಾತ್ರೆ ಇರದ ಕಾಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಆಕ್ಷೇಪಣೆ ಇರಲಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಅಂತಿಮವಾಗಿ ಹೈಕೋರ್ಟು ಮಾಡಿದ್ದೇನು? 10ರಿಂದ 50ರ ಹರೆಯದ ಎಲ್ಲಾ ಮಹಿಳೆಯರಿಗೆ ಎಲ್ಲಾ ಕಾಲದಲ್ಲಿ ಪ್ರವೇಶ ನಿಷೇಧಿಸಬೇಕು ಎಂದು ತೀರ್ಪು ನೀಡಿತು!

1983ರ ನೀಲಕ್ಕಲ್ ಚಳವಳಿ

1983ರಲ್ಲಿ ನೀಲಕ್ಕಲ್‌ನ ಮಹಾದೇವ ಮಂದಿರದಿಂದ 200 ಮೀಟರ್ ದೂರದಲ್ಲಿ ಸಂತ ಥಾಮಸ್ ಕಾಲದ್ದೆನ್ನಲಾದ ಗ್ರಾನೈಟ್ ಶಿಲುಬೆ ಪತ್ತೆಯಾದಾಗ ಸ್ಥಳೀಯ ಕ್ರೈಸ್ತರು ಅಲ್ಲಿ ತಾತ್ಕಾಲಿಕ ಚರ್ಚೊಂದನ್ನು ಕಟ್ಟಿಕೊಂಡು ಪ್ರಾರ್ಥನೆ ನಡೆಸಲಾರಂಭಿಸಿದರು. ಆಗಿನ ಕಾಂಗ್ರೆಸ್ ಸರಕಾರ ಅಲ್ಲಿಂದ 325 ಮೀಟರ್ ದೂರದಲ್ಲೊಂದು ಚರ್ಚ್ ನಿರ್ಮಾಣಕ್ಕೆ ಅನುಮತಿ ನೀಡಿದಾಗ ಪ್ರತಿಭಟಿಸಿದ ಸಂಘ ಪರಿವಾರ ಅದನ್ನು ಹಿಂದೂಗಳನ್ನು ಒಗ್ಗೂಡಿಸಲು ಬಳಸಿಕೊಂಡಿತು. ಹಿಂದೂ ಐಕ್ಯ ವೇದಿಯ ಸ್ಥಾಪಕ ಅಧ್ಯಕ್ಷರೂ, ಶ್ರೀರಾಮದಾಸ ಮಠದ ಮುಖ್ಯಸ್ಥರೂ, ರಾಮ ರಥಯಾತ್ರೆಯಲ್ಲಿ ಸಕ್ರಿಯ ಪಾತ್ರ ವಹಿಸಿದವರೂ ಆದ ಸ್ವಾಮಿ ಸತ್ಯಾನಂದ ಸರಸ್ವತಿ ಮತ್ತಿತರ ಹಿಂದೂ ಸ್ವಾಮೀಜಿಗಳು ಮತ್ತು ಸಂಘ ಪರಿವಾರಿಗರು ತಾತ್ಕಾಲಿಕ ಚರ್ಚ್‌ನ ದಿಕ್ಕಿನಲ್ಲಿ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಪೊಲೀಸರ ಜೊತೆ ಸಂಘರ್ಷ ಏರ್ಪಟ್ಟು ಹಲವರು ಗಾಯಗೊಂಡರು. ತರುವಾಯ ಕೊಚ್ಚಿಯಲ್ಲಿ ‘ವಿಶಾಲ ಹಿಂದೂ ಸಮ್ಮೇಳನ’ ಹೆಸರಿನ ಬೃಹತ್ತಾದ ಸಭೆಯೊಂದನ್ನು ಏರ್ಪಡಿಸಲಾಯಿತು. ಸ್ವಾಮಿ ಸತ್ಯಾನಂದ ಸರಸ್ವತಿ ಮತ್ತಿತರರು ತಿರುವನಂತಪುರದಲ್ಲಿ ಮೆರವಣಿಗೆ ನಡೆಸಿದ್ದಾಗ ಪೊಲೀಸರ ಜತೆ ಚಕಮಕಿ ನಡೆಯಿತು. 1,000ಕ್ಕೂ ಅಧಿಕ ಆರೆಸ್ಸಿಗರು ಬಂಧಿಸಲ್ಪಟ್ಟರು. ಕೊನೆಯಲ್ಲಿ ಸಂಧಾನ ಮಾತುಕತೆ ನಡೆದು ಚರ್ಚನ್ನು 4 ಕಿಮೀ ದೂರದಲ್ಲಿ ನಿರ್ಮಿಸಲು ನಿರ್ಧರಿಸಲಾಯಿತು. ಆ ಇಡೀ ಚಳವಳಿಯ ನೇತೃತ್ವವನ್ನು ವಹಿಸಿದ್ದ ವಿಹಿಂಪದ ಆಗಿನ ಕೇರಳ ಪ್ರಧಾನ ಕಾರ್ಯದರ್ಶಿ ಕುಮ್ಮನಂ ರಾಜಶೇಖರನ್ ಇಂದು ಮಿರೆರಾಮ್‌ನ ರಾಜ್ಯಪಾಲ.

ಕೆಳಜಾತಿಗಳಿಗೆ ಮತ್ತು ಮಹಿಳೆಯರಿಗೆ ಮಂದಿರ ಪ್ರವೇಶ ಮತ್ತು ಶಿಕ್ಷಣದ ಹಕ್ಕುಗಳಿಗಾಗಿ ದೊಡ್ಡ ಹಕ್ಕೊತ್ತಾಯ ಚಳವಳಿ ನಡೆಸಿದ ಇತಿಹಾಸ ಕೇರಳಕ್ಕಿದೆೆ. ಇದೇ ಕೇರಳದಲ್ಲಿ ಕೆಳಜಾತಿಗಳ ಮಹಿಳೆಯರು ಎದೆ ಮುಚ್ಚಿಕೊಂಡರೆ ತೆರಿಗೆ ವಿಧಿಸುತ್ತಿದ್ದ ಬ್ರಾಹ್ಮಣಶಾಹಿಯ ಬರ್ಬರ ಸಂಪ್ರದಾಯವನ್ನು ನಿಲ್ಲಿಸಿದ್ದು ಟಿಪ್ಪುಸುಲ್ತಾನ್. ಇಂದು ಕೇರಳದ ಕೆಳಜಾತಿಗಳು ಸಂಘ ಪರಿವಾರದ ಚಳವಳಿಯನ್ನು ಬೆಂಬಲಿಸುತ್ತಿಲ್ಲ. ಈಳವ ಸಮುದಾಯದ ಎಸ್‌ಎನ್‌ಡಿಪಿ ಯೋಗಂ ಕೂಡಾ ಸಂಘ ಪರಿವಾರದ ಪ್ರತಿಭಟನೆಗಳಿಗೆ ವಿರೋಧ ವ್ಯಕ್ತಪಡಿಸಿದೆ. ಆದರೆ ಬ್ರಾಹ್ಮಣಶಾಹಿ ಆರೆಸ್ಸೆಸ್‌ನ ಪ್ರಸಕ್ತ ಸಮರದಲ್ಲಿ ಶೂದ್ರ ನಾಯರ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಬಹುದೊಡ್ಡ ವಿಪರ್ಯಾಸ.
*******

ಆಕರಗಳು:

22.10.2018ರ ‘ಔಟ್‌ಲುಕ್’ನಲ್ಲಿ ರೋಹನ್ ಮನೋಜ್‌ರ ಲೇಖನ

‘ನ್ಯೂಸ್‌ಕ್ಲಿಕ್’ನಲ್ಲಿ ಸುಬೋಧ್ ವರ್ಮಾರ ಲೇಖನ

ದ ವೈರ್.ಕಾಮ್’ನಲ್ಲಿ ಪಿ.ಎಂ. ಜಿತೀಶ್‌ರ ಲೇಖನ

‘ದ ಸ್ಕ್ರಾಲ್.ಇನ್’ನಲ್ಲಿ ಟಿ.ಎ.ಅಮೀರುದ್ದೀನ್‌ರ ಲೇಖನ

‘ಕೌಂಟರ್‌ಕರೆಂಟ್ಸ್’ನಲ್ಲಿ ಬಿನು ಮ್ಯಾಥ್ಯೂರ ಲೇಖನ

ವಿಕಿಪೀಡಿಯ

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News