ಫ್ಯಾಶಿಸಂ

Update: 2018-10-25 18:46 GMT

ಭಾಗ-1

ಮೊದಲ ಮಹಾಯುದ್ಧದ ತರುವಾಯ ಇಟಲಿಯಲ್ಲಿ ಉದಯಕ್ಕೆ ಬಂದ ಸಂಪೂರ್ಣ ಆಧುನಿಕ ಸರ್ವಾಧಿಕಾರಿ ರಾಜಕೀಯ ವಿಚಾರಪ್ರಣಾಲಿಕೆ. ಇಟಲಿಯ ಅಡಚಣೆ ಹಾಗೂ ಗೊಂದಲದ ಪರಿಸ್ಥಿತಿಯಲ್ಲಿ ಫ್ಯಾಶಿಸಂ ಹುಟ್ಟಿಕೊಂಡಿತು. ಬೆನಿತೊ ಮುಸಲೋನಿಯು ಹೊಸದಾಗಿ ಬೆಳೆಯುವ ಈ ಚಳವಳಿ ಹಾಗೂ ಸಂಘಟನೆಯ ಮುಂದಾಳುತನವನ್ನು ವಹಿಸಿದ್ದನು. ಶುರುವಿನಲ್ಲಿ ಅವನು ಸಮಾಜವಾದಿಯಾಗಿದ್ದನು. ‘ಅವಂತಿ’ (avanti) ಎಂಬ ದಿನಪತ್ರಿಕೆಯ ಸಂಪಾದಕನೂ ಆಗಿದ್ದನು. ಆದರೆ ತರುವಾಯದಲ್ಲಿ ಅವನು ಮನಸ್ಸು ಬದಲಾಯಿಸಿ ಸಮಾಜವಾದವನ್ನು ಪ್ರಬಲವಾಗಿ ವಿರೋಧಿಸುವ ‘ಫ್ಯಾಶಿಸ್ಟ್ ಪಕ್ಷ’ದ ನಿರ್ಮಾತೃ ಹಾಗೂ ನಾಯಕ ನಾದನು. ಇದಾದುದು 1920ರ ಸುಮಾರಿಗೆ. ಫ್ಯಾಶಿಸಂ ಶಬ್ದವು ‘ಫ್ಯಾಶಿಯೊ’ದಿಂದ ತಯಾರಾಗಿದೆ. ಫ್ಯಾಶಿಯೊ ಅಂದರೆ ಕಟ್ಟಿಗೆಯ ಕಟ್ಟಿನಲ್ಲಿ ಕಟ್ಟಲಾದ ಕೊಡಲಿ. ಅದು ರೋಮನ್ ಸಾಮ್ರಾಜ್ಯದ ಲಾಂಛನವಾಗಿತ್ತು. ಮುಂದೆ ಬೆಳೆದ ಸಾಮ್ರಾಜ್ಯವಾದ ಹಾಗೂ ಯುದ್ಧಕೋರ ಪ್ರವೃತ್ತಿಗಳು ಫ್ಯಾಶಿಸಂನ ಈ ಲಾಂಛನದಿಂದ ಚೆನ್ನಾಗಿ ಅರ್ಥವಾಗುವಂತಿದೆ.

ನಿರುದ್ಯೋಗಿ ಕಾರ್ಮಿಕರು ಹಾಗೂ ಮಧ್ಯಮವರ್ಗದ ದಿಕ್ಕುಗೇಡಿ ಯುವಕರು ಮುಸಲೋನಿ ಕಟ್ಟಿದ ಫ್ಯಾಶಿಸ್ಟ್ ಪಕ್ಷದಲ್ಲಿ ಮುಖ್ಯವಾಗಿ ತುಂಬಿದ್ದರು. ಶುರುವಿನಲ್ಲಿ ಈ ಪಕ್ಷವು ಚಿಕ್ಕದಿತ್ತು. ಬಂಡವಾಳ ದಾರರು ಹಾಗೂ ಶ್ರೀಮಂತರ ನೆರವಿನಿಂದ ಅದು ನಿಧಾನವಾಗಿ ಬೆಳೆಯ ತೊಡಗಿತು. ರಾಜಕೀಯ ಸತ್ತೆ ಕೈಗೆ ಬಂದ ಬಳಿಕ ಅದರ ನಿಜವಾದ ಬೆಳವಣಿಗೆಯಾಯಿತು. ಫ್ಯಾಶಿಸ್ಟರು ರಾಜಕೀಯ ಸತ್ತೆಯನ್ನು ಕೈವಶ ಮಾಡಿಕೊಳ್ಳಲೆಂದು 28 ಅಕ್ಟೋಬರ್ 1922ರಂದು ರಾಜಧಾನಿಯಾದ ರೋಮಿನತ್ತ ಮೆರವಣಿಗೆಯನ್ನು ಹೊರಡಿಸಿದರು. ಫ್ಯಾಶಿಸ್ಟ್ ಚಳವಳಿಯಲ್ಲಿ ರೋಮಿನ ಈ ಮೆರವಣಿಗೆಯನ್ನು ‘ದೊಡ್ಡ ವೀರಶ್ರೀಯ ಘಟನೆ’ ಎಂದು ಉಲ್ಲೇಖಿಸಲಾಗುತ್ತದೆ. ಆದರೆ ಆ ಮೆರವಣಿಗೆಯಲ್ಲಿ ಶೌರ್ಯವನ್ನು ಮೆರೆಯುವ ಅವಶ್ಯಕತೆ ಉಂಟಾಗಲಿಲ್ಲ. ಯಾರೂ ಈ ಮೆರವಣಿಗೆಯನ್ನು ವಿರೋಧಿಸಲಿಲ್ಲ. ಫ್ಯಾಶಿಸ್ಟರಿಗೆ ವಿರೋಧವಿಲ್ಲದೆಯೆ ರೋಮಿನಲ್ಲಿ ಪ್ರವೇಶ ದೊರೆಯಿತು. ರಾಜನು ಅಧಿಕಾರದ ಸೂತ್ರಗಳನ್ನು ತಾನಾಗಿಯೇ ಮುಸಲೋನಿಯ ಕೈಗಿತ್ತನು. ಮುಸಲೋನಿಯು ರಾಜನ ಕರೆಯ ಮೇರೆಗೆ ದೇಶದ ಪ್ರಧಾನಮಂತ್ರಿಯಾದನು. ಅಂದಿನಿಂದ ಇಟಲಿಯಲ್ಲಿ ಫ್ಯಾಶಿಸ್ಟರ ರಾಜ್ಯ ಶುರುವಾಯಿತು.

ಈ ಕಾಲದಲ್ಲಿ ಇಟಲಿಯಲ್ಲಿ ಸಮಾಜವಾದಿ ಹಾಗೂ ಅರಾಜ್ಯವಾದಿ ಎಡಪಕ್ಷಗಳಿದ್ದವು. ಇವಲ್ಲದೆ ಬಲ ವಿಚಾರಸರಣಿ ಹಾಗೂ ಮಧ್ಯಮ ಮಾರ್ಗದ ಇನ್ನು ಕೆಲವು ಪಕ್ಷಗಳೂ ಇದ್ದವು. ಇವೆಲ್ಲ ಪಕ್ಷಗಳ ಸದಸ್ಯರ ಸಂಖ್ಯೆಯು ಫ್ಯಾಶಿಸ್ಟ್ ಪಕ್ಷದ ಸದಸ್ಯರಿಗಿಂತ ಅದೆಷ್ಟೋ ಪಟ್ಟು ಹೆಚ್ಚಿತ್ತು. ಎಲ್ಲರೂ ಒಗ್ಗಟ್ಟಾಗಿ ಫ್ಯಾಶಿಸ್ಟ್ ಪಕ್ಷವನ್ನು ವಿರೋಧಿಸಿದ್ದರೆ ಆ ಪಕ್ಷ ಹೆಚ್ಚು ಮುಂದುವರಿಯುವಂತಿರಲಿಲ್ಲ. ಆದರೆ ಆ ಪಕ್ಷಗಳೆಲ್ಲ ತಮ್ಮ ತಮ್ಮಲ್ಲಿ ಜಗಳವಾಡುತ್ತಿದ್ದವು. ಅದರಲ್ಲೂ ಸಮಾಜವಾದಿ ಹಾಗೂ ಸೌಮ್ಯವಾದಿ ಪಕ್ಷಗಳ ನಡುವೆ ತೀವ್ರವಾದ ಜಗಳವಿತ್ತು. ಹೀಗಾಗಿ ಅವು ಸತ್ವಹೀನವಾಗಿ, ದೇಶಕ್ಕೆ ಫ್ಯಾಶಿಸ್ಟ್ ಪಕ್ಷದ ಸರ್ವಾಧಿಕಾರಿ ಆಳ್ವಿಕೆಯು ಬಂದೊದಗಿತು.

ತನ್ನ ಕೈಗೆ ಅಧಿಕಾರ ಬರುತ್ತಲೇ ಮುಸಲೋನಿಯು ವಿರೋಧಕರನ್ನು ಹಿಂಸಿಸಲು ಶುರು ಮಾಡಿದನು. ಅವರ ಭಾಷಣ ಸ್ವಾತಂತ್ರ, ಮುದ್ರಣ ಸ್ವಾತಂತ್ರ, ಸಂಘಟನಾ ಸ್ವಾತಂತ್ರ ಇತ್ಯಾದಿ ನಾಶಪಡಿಸಿದನು. ಅಲ್ಲದೆ ಮುಸಲೋನಿ ಹಾಗೂ ಅವನ ಪಕ್ಷದ ವಿರುದ್ಧ ಅವರು ಸೊಲ್ಲೆತ್ತದಂತೆ ಮಾಡಿಬಿಟ್ಟನು. ಮನೆ ಮನೆಗಳಿಂದ ವಿರೋಧಕರನ್ನು ಸೆರೆಹಿಡಿಯಲಾಗುತ್ತಿತ್ತು. ಅವರಿಗೆ ಬಲವಂತದಿಂದ ಔಡಲೆಣ್ಣೆಯನ್ನು ಕುಡಿಸುವ ಹೊಸ ತಂತ್ರವನ್ನು ಆರಂಭಿಸಲಾಯಿತು. ಹಲವು ವಿರೋಧಿ ಸದಸ್ಯರು ಈ ಹಿಂಸೆಗೆ ಬೇಸತ್ತು ದೇಶವನ್ನು ತೊರೆದರು. ಹಲವರಿಗೆ ವರ್ಷಾನುಗಟ್ಟಲೆ ಸೆರೆಮನೆಗಳಲ್ಲಿ ಕೊಳೆಯಬೇಕಾಯಿತು. ಇಷ್ಟಾಗಿಯೂ ತುಸು ಮಟ್ಟಿಗಾದರೂ ವಿರೋಧವು ವ್ಯಕ್ತವಾಗದೆ ಇರಲಿಲ್ಲ. ಆದರೆ ಫ್ಯಾಶಿಸ್ಟರು ತಮ್ಮ ಪಾಶವಿ ಸಾಮರ್ಥ್ಯವನ್ನು ಬಳಸಿ ಅದನ್ನು ಸೆದೆಬಡಿದರು.

ಫ್ಯಾಶಿಸ್ಟ್ ಪಕ್ಷದ ಕೈಗೆ ರಾಜ್ಯಸತ್ತೆ ಬಂದಾಗ ಲೋಕಸಭೆಯಲ್ಲಿ ಅದು ಅಲ್ಪಮತದಲ್ಲಿತ್ತು. ಮುಸಲೋನಿಯು ಒಂದೆರಡು ವರ್ಷಗಳಲ್ಲಿ ಸಂವಿಧಾನವನ್ನು ಬದಲಾಯಿಸಿದನು. ಅದಾದ ಬಳಿಕ ನಡೆದ ಚುನಾವಣೆಯಲ್ಲಿ ಶೇ. 100 ಫ್ಯಾಶಿಸ್ಟರು ಚುನಾಯಿತರಾದರು. ಈ ಚುನಾವಣೆಯ ಬಗೆಯೇ ಬೇರೆಯದಾಗಿತ್ತು. ಫ್ಯಾಶಿಸ್ಟ್ ಪಕ್ಷವು ತಯಾರಿಸಿದ ಅಭ್ಯರ್ಥಿಗಳ ಹೆಸರಿನ ಪಟ್ಟಿಯಲ್ಲಿ ಅವರವರ ಹೆಸರುಗಳ ಮುಂದೆ ‘ಹೌದು ಅಥವಾ ಇಲ್ಲ’ ಎಂಬುದನ್ನು ನಮೂದಿಸುವ ಹಕ್ಕು ಮಾತ್ರ ಮತದಾರರಿಗೆ ಇತ್ತು. ಅವರು ಪ್ರಕಟವಾಗಿ ಆ ಹಕ್ಕನ್ನು ಚಲಾಯಿಸಬೇಕಿತ್ತು. ಅಂದರೆ ಮತದಾನ ಗುಟ್ಟಾಗಿರಲಿಲ್ಲ. ಅಲ್ಲದೆ ಮತದಾನ ತಮ್ಮ ಬದಿಗೆ ಆಗಲೆಂದು, ಬೆದರಿಕೆ ಒಡ್ಡಲು ಹಾಗೂ ಗೂಂಡಾಗಿರಿಯನ್ನು ನಡೆಸಲು ಫ್ಯಾಶಿಸ್ಟ್ ಗೂಂಡಾಗಳ ತಂಡಗಳು ಅಲ್ಲಿ ಇದ್ದೇ ಇದ್ದವು.

ಮುಸಲೋನಿಯು ಪ್ರಜಾಪ್ರಭುತ್ವದ ರಾಜ್ಯಾಡಳಿತ ಹಾಗೂ ಹಕ್ಕುಗಳನ್ನು ನಂಬುತ್ತಿರಲಿಲ್ಲ. ಪ್ರಜಾಪ್ರಭುತ್ವದಿಂದ ದೇಶದಲ್ಲಿ ಹಲವು ಪಕ್ಷಗಳು ಹಾಗೂ ಪಂಥಗಳು ಹುಟ್ಟಿಬರುತ್ತವೆ. ಅದರಿಂದಾಗಿ ದೇಶ ಸಡಿಲಾಗುತ್ತದೆ; ಹೀಗಾಗಿ ಅದು ಯಾವುದೇ ಖಚಿತವಾದ ಧೋರಣೆಯನ್ನು ಅವಲಂಬಿಸಲಾರದು ಎಂಬುದು ಅವನ ಅಭಿಪ್ರಾಯವಾಗಿತ್ತು. ಪ್ರಜಾಪ್ರಭುತ್ವದ ಸ್ವಾತಂತ್ರದಿಂದಲೂ ಹೀಗೆಯೇ ಆಗುತ್ತದೆ ಎಂದು ಅವನಿಗೆ ಅನ್ನಿಸುತ್ತಿತ್ತು. ಹೀಗಾಗಿ ದೇಶದ ಆಡಳಿತವು ಸರಗವಾಗಿ ಸಾಗಬೇಕಿದ್ದರೆ, ದೇಶದ ಪ್ರಗತಿಯಾಗಬೇಕಿದ್ದರೆ, ದೇಶಕ್ಕೆ ಒಬ್ಬನೇ ನಾಯಕನು ಇರತಕ್ಕದ್ದು, ದೇಶದ ಆಡಳಿತೆಯೆಲ್ಲ ಅವನೊಬ್ಬನ ಮನದಂತೆ ನಡೆಯತಕ್ಕದ್ದೆಂಬುದು ಅವನ ಆಗ್ರಹವಾಗಿತ್ತು. ಆದುದರಿಂದ ಒಂಟಿಯಾಗಿ ರಾಜ್ಯಾಡಳಿತವನ್ನು ನಡೆಸಲು ಶುರು ಮಾಡಿ, ಯಾರಿಂದಲೂ ಅದಕ್ಕೆ ವಿರೋಧ ವ್ಯಕ್ತವಾಗಬಾರದೆಂದು ಅವನು ರಾಜ್ಯದ ಸರ್ವಾಧಿಕಾರಿಯೂ ಪಕ್ಷದ ಏಕಮೇವ ನಾಯಕನೂ ಆದನು. ಅವನು ಫ್ಯಾಶಿಸ್ಟ್ ಪಕ್ಷವನ್ನುಳಿದು ಇತರ ಪಕ್ಷಗಳನ್ನು ಕಾನೂನು ಬಾಹಿರ ಎಂದು ಘೋಷಿಸಿದನು. ದೇಶದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನೆಲ್ಲ ತನ್ನ ಪಕ್ಷದ ಅಧಿಕಾರದಡಿಗೆ ತಂದುಕೊಂಡನು. ಇಟಲಿಯ ಸರ್ವಸಾಧಾರಣ ಜನತೆಯಿಂದ ಫ್ಯಾಶಿಸಂ, ಫ್ಯಾಶಿಸ್ಟ್ ಪಕ್ಷ ಹಾಗೂ ಮುಸಲೋನಿಗೆ ಬೆಂಬಲ ದೊರೆಯಿತು. ಇದರ ಮುಖ್ಯ ಕಾರಣವೆಂದರೆ ಜನರು ಆ ಕಾಲದ ದುರವಸ್ಥೆ, ಶಾಸನದ ದೌರ್ಬಲ್ಯ ಹಾಗೂ ಸಮಾಜದಲ್ಲಿರುವ ಗೊಂದಲಗಳಿಗೆ ಬೇಸತ್ತಿದ್ದರು. ಅವರಿಗೆ ಸ್ಥಿರ ಹಾಗೂ ಸಮರ್ಥವಾದ ಸರಕಾರ ಬೇಕಿತ್ತು. ಇಂಥ ಸರಕಾರವೇ ಆರ್ಥಿಕ ಅರಿಷ್ಟದಿಂದ ಹೊರಬರುವ ದಾರಿಯನ್ನು ಕಂಡುಕೊಂಡು ಕೈಗಾರಿಕೆಗಳನ್ನು ಬೆಳೆಸಬಹುದು, ನಿರುದ್ಯೋಗವನ್ನು ತೊಲಗಿಸಬಹುದು ಹಾಗೂ ರಾಷ್ಟ್ರದ ಹೆಸರನ್ನು ಉಜ್ವಲಗೊಳಿಸಬಹುದೆಂದು ಅವರಿಗೆ ಅನ್ನಿಸುತ್ತಿತ್ತು. ಗೆದ್ದ ರಾಷ್ಟ್ರಗಳ ಬದಿಯಿಂದ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿಯೂ ಬೇಕಿದ್ದಷ್ಟು ಪ್ರದೇಶ ತನಗೆ ದಕ್ಕಲಿಲ್ಲವೆಂಬ ಕಾರಣದಿಂದ ಇಟಲಿಯು ತುಂಬ ಮುಖಭಂಗಕ್ಕೆ ಈಡಾಗಿತ್ತು. ಮುಸಲೋನಿ ಹಾಗೂ ಫ್ಯಾಶಿಸ್ಟ್ ಪಕ್ಷ ಇವೆಲ್ಲವನ್ನು ಕುರಿತು ತುಂಬ ಆಕರ್ಷಕವಾದ ಭರವಸೆಗಳನ್ನಿತ್ತರು. ಜನ ಅವುಗಳಿಗೆ ಮರುಳಾದರು. ಅವರು ಫ್ಯಾಶಿಸಂಗೆ ಬೆಂಬಲ ನೀಡಿದರು. ಮುಂದೆ ಈ ಭರವಸೆಗಳು ಮೋಸದವೆನ್ನಿಸಿದವು ಎನ್ನುವುದು ಬೇರೆ ಸಂಗತಿ.

ಅಲ್ಲದೆ ದೇಶದಲ್ಲಿ ಪ್ರಜಾಪ್ರಭುತ್ವದ ಪರಂಪರೆ ಇರಲಿಲ್ಲ. ಜನರ ಮನದ ಮೇಲೆ ರಾಜ, ಮಾಂಡಲಿಕ, ಇಗರ್ಜಿ ಹಾಗೂ ಮೇಲ್ವರ್ಗಗಳವರ ತುಂಬ ಒತ್ತಡವಿತ್ತು. ಅವರು ಆಳಬೇಕು, ತಾವು ಸಂಪ್ರದಾಯದಿಂದ ಬಂದ ಕೃಷಿಯನ್ನು ಮಾಡಬೇಕು, ಕಾರ್ಖಾನೆ ಅಥವಾ ಚಿಕ್ಕಪುಟ್ಟ ಉದ್ಯೋಗಗಳಲ್ಲಿ ಕೆಲಸವನ್ನು ಮಾಡಬೇಕೆಂಬ ಭಾವನೆ ಜನರಲ್ಲಿತ್ತು. ಈ ಪ್ರತಿಯೊಂದು ಬಾಬತ್ತಿಗಾಗಿ ಅವರಿಗೆ ಒಬ್ಬ ನಾಯಕ ಬೇಕಿದ್ದನು. ತಾವು ಅವನ ಹೇಳಿಕೆಯಂತೆ ನಡೆದುಕೊಳ್ಳಬೇಕೆಂದು ಅವರು ಬಯಸುತ್ತಿದ್ದರು. ಅವರಿಗೆ ಸ್ವಸ್ಥತೆ ಹಾಗೂ ಸುರಕ್ಷೆಗಳು ಬೇಕಿದ್ದವು. ಅವರು ಸ್ವಾತಂತ್ರಕ್ಕಾಗಿ ಅಷ್ಟಾಗಿ ಒತ್ತಾಯಿಸಿದವರಲ್ಲ. ಮುಸಲೋನಿಯು ಜನರ ಈ ಮನೋಧರ್ಮವನ್ನು ಚೆನ್ನಾಗಿ ಬಳಸಿಕೊಂಡನು. ಅವರನ್ನು ಫ್ಯಾಶಿಸಂನ ಕೊಟ್ಟಿಗೆಯಲ್ಲಿ ಕೂಡಿಹಾಕಿದನು.

ಈ ಮನೋಧರ್ಮವು ಆಧುನಿಕ ಪ್ರಪಂಚದ ಹಲವು ಸಮುದಾಯ ಗಳಲ್ಲಿ ಕಂಡುಬರುತ್ತದೆ. ಉತ್ಪಾದನೆಯ ಯಂತ್ರವು ಬೃಹತ್ತಾಗಿ ಬೆಳೆದಿದೆ. ರಾಜ್ಯಸತ್ತೆಯು ತುಂಬ ಪ್ರಬಲವಾಗಿದೆ. ಸಮಾಜವು ತುಂಬ ಶಿಥಿಲವಾಗಿದೆ. ಹೀಗಾಗಿ ವ್ಯಕ್ತಿಯು ದುರ್ಬಲತೆಯನ್ನು ಅನುಭವಿಸುತ್ತಾನೆ. ಅವನಿಗೆ ಒಂಟಿತನ ಹಾಗೂ ಸ್ವಾತಂತ್ರದ ಬಗ್ಗೆ ಭಯ ಎನ್ನಿಸತೊಡಗುತ್ತಾ ಅವನು ಆಧಾರಕ್ಕಾಗಿ ತಡಕಾಡತೊಡಗುತ್ತಾನೆ. ಬಹಳಷ್ಟು ಸಲ ಆ ಆಧಾರ ಪ್ರಬಲನಾದ ಮುಂದಾಳು ಹಾಗೂ ಅವನ ನಾಯಕತ್ವದಡಿಯ ಏಕತಂತ್ರದ ರಾಜ್ಯಾಡಳಿತೆಯಲ್ಲಿ ಅವನಿಗೆ ಕಂಡುಬರುತ್ತದೆ. ಇತ್ತೀಚಿನ ಸಮುದಾಯದ ಈ ಸಮಸ್ಯೆಯನ್ನು ಎರಿಕ್ ಫ್ರಾಮ್ ಎಂಬ ಸಾಮಾಜಿಕ ತತ್ತ್ವಜ್ಞನು ತನ್ನ ‘ಫೀಯರ್ ಆಫ್ ಫ್ರೀಡಮ್’ ಅಥವಾ ‘ಎಸ್ಕೇಪ್ ಫ್ರಂ ಫ್ರೀಡಮ್’ ಎಂಬ ಗ್ರಂಥದಲ್ಲಿ ತುಂಬ ಅಂದವಾಗಿ ವಿವೇಚಿಸಿರುವನು. ಫ್ಯಾಶಿಸಂ ಇಟಲಿಗೆ ಸೀಮಿತವಾಗಿ ಉಳಿಯಲಿಲ್ಲ. ಇಟಲಿಯಲ್ಲಿ ಕಾಲೂರಿದ ತರುವಾಯ ಅದು ಜರ್ಮನಿ, ಜಪಾನ್, ಸ್ಪೇನ್, ಪೋರ್ಚುಗಲ್, ಅರ್ಜೆಂಟಿನಾ ಮೊದಲಾದ ದೇಶಗಳಲ್ಲಿ ಹಬ್ಬಿತು. ಅದು ಜರ್ಮನಿಯಲ್ಲಿ ಹಿಟ್ಲರನ ನಾಯಕತ್ವದಲ್ಲಿ ನಾಝಿ ಪಕ್ಷದ ರೂಪದಲ್ಲಿ ಅದು ತುಂಬ ವಿಕೃತವೂ ಭೀಷಣವೂ ಆದ ಸ್ವರೂಪವನ್ನು ತಳೆಯಿತು. ಪ್ರತಿಯೊಂದು ದೇಶದ ಫ್ಯಾಶಿಸಂನ ಸ್ವರೂಪವು ಆಯಾ ದೇಶದ ಪರಿಸ್ಥಿತಿಗೆ ತಕ್ಕಂತೆ ಬೇರೆ ಬೇರೆಯಾಗಿತ್ತು. ಏಕೆಂದರೆ ಸುಸ್ಪಷ್ಟವೂ ಸುಸಂಗತವೂ ಆದ ತತ್ತ್ವಜ್ಞಾನವೇ ಅದಕ್ಕಿರಲಿಲ್ಲ. ಉದಾ: ಜರ್ಮನಿಯಲ್ಲಿ ವಂಶದ ತತ್ತ್ವಕ್ಕೆ ಒತ್ತು ನೀಡಲಾಗುತ್ತಿತ್ತು. ಹಿಟ್ಲರನ ರಾಜಕೀಯ ತತ್ತ್ವಜ್ಞಾನದಂತೆ ಮಾನವ ವಂಶಗಳಲ್ಲೆಲ್ಲ ಆರ್ಯವಂಶವೇ ಹುಟ್ಟಿನಿಂದ ಶ್ರೇಷ್ಠವಿದ್ದು, ಅದೇ ಮಾನವ ಜಾತಿಯ ಮೇಲೆ ರಾಜ್ಯವಾಳಲು ಸಮರ್ಥವಾಗಿದೆಯೆಂಬ ಮೂಲಭೂತ ಸಿದ್ಧಾಂತವನ್ನು ನಂಬಲಾಗಿದೆ. ಫ್ಯಾಶಿಸಂ ಮಾತ್ರ ಅಂಥ ಸಿದ್ಧಾಂತವನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಅದು ಪ್ರಾಚೀನ ರೋಮನ್ ಸಾಮ್ರಾಜ್ಯದ ಮಾದರಿಯ ಇಟಲಿಯ ಸಾಮ್ರಾಜ್ಯವನ್ನು ಕಟ್ಟುವ ಕನಸನ್ನು ಕಾಣುತ್ತಿತ್ತು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75