ಪಟೇಲರ ಪ್ರತಿಮೆ

Update: 2018-10-27 18:43 GMT

562 ಸಂಸ್ಥಾನಗಳನ್ನು ಭಾರತದ ಒಕ್ಕೂಟದೊಳಕ್ಕೆ ತಂದು ‘ಸಮಗ್ರ ಭಾರತದ ಶಿಲ್ಪಿ’ಎಂದು ಖ್ಯಾತರಾದ ಸರ್ದಾರ್ ಪಟೇಲರಿಗೆ ತವರು ರಾಜ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲುತ್ತಿರುವುದು ಸ್ವಾಗತಾರ್ಹವೇ. ಇದೊಂದು ವಿಶಿಷ್ಟ ರೀತಿಯ ಗೌರವ ಮತ್ತು ವಿಶಿಷ್ಟ ರೀತಿಯ ಸ್ಮಾರಕ. ಮಹಾನ್ ದೇಶಭಕ್ತರೂ ಗಾಂಧಿಯವರ ಅಹಿಂಸಾ ಮಾರ್ಗದ ಅನುಯಾಯಿಗಳೂ ಆದ ಈ ಉಕ್ಕಿನ ಮನುಷ್ಯನ ಪ್ರತಿಮೆ ಸುಳ್ಳಿನ ಬುನಾದಿಯ ಮೇಲೆ ಪ್ರತಿಷ್ಠಾಪನೆಯಾಗಬಾರದು. ಸತ್ಯದ ಬುನಾದಿಯ ಮೇಲೆ ಪ್ರತಿಷ್ಠಾಪನೆಯಾಗಬೇಕು.


ಸ್ವಾ ತಂತ್ರ್ಯ ಬಂದ ಕೂಡಲೇ ಭಾರತ ಒಕ್ಕೂಟದಲ್ಲಿ ವಿಲೀನ ಹೊಂದಲು ಸತಾಯಿಸಿದ ಕೆಲವು ಮಹಾರಾಜರು ಮತ್ತು ನಿಜಾಮರನ್ನು ಮಣಿಸಿ ಅವರ ಸಂಸ್ಥಾನಗಳನ್ನು ಒಕ್ಕೂಟದೊಳಕ್ಕೆ ತಂದ ಸಾಧನೆಯಿಂದಾಗಿ ಉಕ್ಕಿನ ಮನುಷ್ಯರೆಂದೇ ಚರಿತ್ರೆಯಲ್ಲಿ ಸ್ಥಾಯಿಯಾಗಿರುವ ಸರ್ದಾರ್ ವಲ್ಲಭಭಾಯಿ ಝಾವೇರಿ ಪಟೇಲರ ಉಕ್ಕಿನ ಪ್ರತಿಮೆ ಪ್ರತಿಷ್ಠಾಪನೆಗೆ ಗುಜರಾತಿನಲ್ಲಿ ರಂಗ ಸಜ್ಜಾಗಿದೆ. ಸರ್ದಾರ್ ಪಟೇಲರ ಜನ್ಮದಿನವಾದ ಈ ತಿಂಗಳ 31ರಂದು, ವಿಶ್ವದಲ್ಲೇ ಅತಿ ಎತ್ತರದ್ದೆನ್ನಲಾದ, 182 ಮೀಟರ್ ಎತ್ತರದ ಈ ಉಕ್ಕಿನ ಪ್ರತಿಮೆ ನರ್ಮದಾ ನದಿಯ ತಟದಲ್ಲಿ ಅನಾವರಣಗೊಳ್ಳಲಿದೆ. 562 ಸಂಸ್ಥಾನಗಳನ್ನು ಭಾರತದ ಒಕ್ಕೂಟದೊಳಕ್ಕೆ ತಂದು ‘ಸಮಗ್ರ ಭಾರತದ ಶಿಲ್ಪಿ’ಎಂದು ಖ್ಯಾತರಾದ ಸರ್ದಾರ್ ಪಟೇಲರಿಗೆ ತವರು ರಾಜ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲುತ್ತಿರುವುದು ಸ್ವಾಗತಾರ್ಹವೇ. ಇದೊಂದು ವಿಶಿಷ್ಟ ರೀತಿಯ ಗೌರವ ಮತ್ತು ವಿಶಿಷ್ಟ ರೀತಿಯ ಸ್ಮಾರಕ. ಮಹಾನ್ ದೇಶಭಕ್ತರೂ ಗಾಂಧಿಯವರ ಅಹಿಂಸಾ ಮಾರ್ಗದ ಅನುಯಾಯಿಗಳೂ ಆಗಿದ್ದ ಈ ಉಕ್ಕಿನ ಮನುಷ್ಯನ ಪ್ರತಿಮೆ ಸುಳ್ಳಿನ ಬುನಾದಿಯ ಮೇಲೆ ಪ್ರತಿಷ್ಠಾಪನೆಯಾಗಬಾರದು. ಸತ್ಯದ ಬುನಾದಿಯ ಮೇಲೆ ಪ್ರತಿಷ್ಠಾಪನೆಯಾಗ ಬೇಕು.

ನಾಲ್ಕು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷದ ಪರಂಪರೆಯ ಬೇರುಗಳು ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲ. ಆದರೆ ಸ್ವಾತಂತ್ರ ಸಂಗ್ರಾಮದ ಪರಂಪರೆಯ ಕೆಲವು ನಾಯಕರನ್ನು ತನ್ನಾದಾಗಿಸಿಕೊಳ್ಳುವ ಪ್ರಯತ್ನವನ್ನು ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ ತರುವಾಯದಲ್ಲೇ ಪ್ರಾರಂಭಿಸಿತು. ಗಾಂಧಿ ಮತ್ತು ಪಟೇಲರ ವಾರಸುದಾರಿಕೆ ಪಡೆಯುವ ಹುನ್ನಾರದೊಂದಿಗೆ ಇಂಥ ಪ್ರಯತ್ನಗಳು ಶುರುವಾದವು. ಕಾಂಗ್ರೆಸ್ ಪಕ್ಷ ಪಟೇಲರಿಗೆ ಸೂಕ್ತವಾದ ಗೌರವ ಸ್ಥಾನಮಾನಗಳನ್ನು ನೀಡಲಿಲ್ಲವೆಂದೂ ನೆಹರೂ ಅವರಿಂದಾಗಿ ಪಟೇಲರು ಪ್ರಧಾನ ಮಂತ್ರಿಯಾಗುವುದು ತಪ್ಪಿತೆಂಬ ಮಾತುಗಳು ಚಲಾವಣೆಗೆ ಬಂದವು.

ಪಟೇಲರನ್ನು ‘ರಾಷ್ಟ್ರದ ಏಕತೆಯ ಶಿಲ್ಪಿ’ ಎಂದು ಬಣ್ಣಿಸಿ, ತನ್ನ ಅಖಂಡ ಭಾರತ ರಾಷ್ಟ್ರೀಯತೆ ಪರಿಕಲ್ಪನೆಯ ಮೂಲಸ್ರೋತ ಪಟೇಲರು ಎನ್ನುವಷ್ಟರ ಮಟ್ಟಿಗೆ ಬಿಜೆಪಿ ಅವರನ್ನು ತನ್ನ ಆದರ್ಶ ಪುರುಷನನ್ನಾಗಿ ಬಿಂಬಿಸಿತು. ಭಾರತ ರತ್ನ ಗೌರವ, ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುವುದು-ಇವುಗಳ ಮೂಲಕ ಪಟೇಲರ ಮೇಲೆ ತನ್ನ ವಾರಸುದಾರಿಕೆಯ ಹಕ್ಕನ್ನು ಬಿಜೆಪಿ ಸ್ಥಾಪಿಸಿತು. ಪಟೇಲರಿಗೆ ಭಾರತ ರತ್ನ ಕೊಟ್ಟದ್ದು ಯೋಗ್ಯವಾದುದೇ. ಅವರ ಜನ್ಮ ದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸುವುದಕ್ಕೆ ಯಾರ ಆಕ್ಷೇಪಣೆಯೂ ಇರಲಾರದು. ಆದರೆ ಇದೆಲ್ಲದರ ಹಿಂದಿನ ರಾಜಕೀಯ ಹುನ್ನಾರಗಳು, ನೆಹರೂ ಕಟುಂಬದ ದೂಷಣೆಗಳು ಸದಭಿರುಚಿಯಿಂದ ಕೂಡಿಲ್ಲವೆಂದೇ ಹೇಳ ಬೇಕು. ಗಾಂಧೀಜಿಯವರನ್ನು ಅಪ್ಪಿಕೊಳ್ಳುವ ಭರದಲ್ಲೂ ಬಿಜೆಪಿಗೆ ನೆನಪಿಗೆ ಬಂದದ್ದು ಅವರ ಅಹಿಂಸಾ ಮಾರ್ಗವಲ್ಲ, ಹಿಂದೂ-ಮುಸ್ಲಿಂ ಐಕಮತ್ಯ ಕುರಿತ ಕಾಳಜಿಯಲ್ಲ ಅಥವಾ ದಲಿತೋದ್ಧಾರವಲ್ಲ, ಅದಕ್ಕೆ ನೆನಪಾದದ್ದು ಸ್ವಚ್ಛತೆ ಕುರಿತ ಗಾಂಧೀಜಿ ಕಾಳಜಿ. ಏಕೆಂದರೆ ಮಾತೃ ಸಂಸ್ಥೆ ಆರೆಸ್ಸೆಸ್‌ಸಹ ಆಕ್ಷೇಪಿಸಲಾರದಷ್ಟು ನಿರಪಾಯಕಾರಿಯಾದುದು ಇದು. ಈಗ ನೇತಾಜಿ ಸುಭಾಸ್ ಚಂದ್ರ ಬೋಸರ ಸರದಿ. ಅ.21ರಂದು ಕೆಂಪು ಕೋಟೆಯ ಮೇಲೆ ಬೋಸರ ‘ಇಂಡಿಯನ್ ನ್ಯಾಶನಲ್ ಆರ್ಮಿ’ ಸ್ಮರಣಾರ್ಥ ಧ್ವಜಾರೋಹಣದ ಮೂಲಕ ಬೋಸರ ಮೇಲಿನ ತನ್ನ ವಾರಸುದಾರಿಕೆಯನ್ನು ಸ್ಥಾಪಿಸ ಹೊರಟಿದೆ ಬಿಜೆಪಿ. ನಿರೀಕ್ಷೆಯಂತೆ ಮೋದಿಯವರು, ಒಂದು ಕುಟುಂಬವನ್ನು ಮುಂದೆ ತರುವ ಸಲುವಾಗಿ ಸರ್ದಾರ್ ಪಟೇಲ್, ಅಂಬೇಡ್ಕರ್ ಮತ್ತು ಬೋಸರ ಕೊಡುಗೆಯನ್ನು ಅಳಿಸಿಹಾಕಲು ಕಾಂಗ್ರೆಸ್ ಪ್ರಯತ್ನಿಸಿತೆಂದು ಆರೋಪಿಸಿದ್ದಾರೆ. ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸುವ ಮೂಲಕ ಒಂದಷ್ಟು ಜನರನ್ನು ದಾರಿ ತಪ್ಪಿಸ ಬಹುದೇ ವಿನಃ ಅದನ್ನು ಬದಲಾಯಿಸಲಾಗದು.

ಅನುಕೂಲಸ್ಥ ಮನೆತನದಲ್ಲಿ ಜನಿಸಿದ(31-10-1875) ವಲ್ಲಭಭಾಯಿ ಝಾವೇರಿ ಭಾಯಿ ಪಟೇಲರು ಗುಜರಾತಿ ಮಾಧ್ಯಮದಲ್ಲಿ ಕಲಿತು 1910ರಲ್ಲಿ ಕಾನೂನು ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. 1913ರಲ್ಲಿ ಲಾ ಪರೀಕ್ಷೆ ಪಾಸುಮಾಡಿ ಸ್ವದೇಶಕ್ಕೆ ಹಿಂದಿರುಗಿ ಗೋಧ್ರಾದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. ಕಂದಾಯ ಇತ್ಯಾದಿ ಬಾಬುಗಳಲ್ಲಿ ರೈತರ ಪರ ವಕಾಲತ್ತು ವಹಿಸುತ್ತಿದ್ದರು. ಹೀಗೆ ವಕೀಲಿ ವೃತ್ತಿಯಿಂದಾಗಿ ರೈತ ಸಮುದಾಯದೊಂದಿಗೆ ಅವರ ಸಂಬಂಧ ನಿಕಟವಾಯಿತು. ಇದೇ ವೇಳೆಗೆ ವಕೀಲರಾಗಿದ್ದ ಅಣ್ಣ ವಿಠಲಭಾಯಿ ಪಟೇಲರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಗುಜರಾತ್ ಸಭಾದ ನೇತಾರರಾಗಿದ್ದ ವಿಠಲಭಾಯಿ ಪಟೇಲರು ಬಾಂಬೆ ಶಾಸನ ಸಭೆಯಲ್ಲಿ ಗುಜರಾತಿನ ಪ್ರತಿನಿಧಿಗಳಾಗಿದ್ದರು. ಗುಜರಾತ್ ಸಭಾದ ಒಂದು ಸಮ್ಮೇಳನದಲ್ಲಿ ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾದ ವಲ್ಲಭಭಾಯಿ ಪಟೇಲರು ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾದರು. ಗುಜರಾತ್ ಸಭಾದ ಕಾಂಗ್ರೆಸ್ ವಿಭಾಗದ ಕಾರ್ಯದರ್ಶಿಯೂ ಆದರು.

1918ನೇ ಇಸವಿಯಲ್ಲಿ ವಲ್ಲಭಭಾಯಿ ಪಟೇಲರ ಕರ್ತೃತ್ವ ಶಕ್ತಿಯನ್ನು ತೋರಿಸುವ ಒಂದು ಪ್ರಸಂಗ ಒದಗಿ ಬಂತು. ಗುಜರಾತಿನ ಕೈರಾದಲ್ಲಿ ಪ್ರವಾಹದಿಂದಾಗಿ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು. ರೈತರು ಕಂಗಾಲಾಗಿದ್ದರು.ಆದರೂ ನಿರ್ದಯಿ ಸರಕಾರ ಭೂಕಂದಾಯ ವಸೂಲಿ ಮನ್ನಾಮಾಡಲಿಲ್ಲ. ರೈತರು ಕಂದಾಯ ಪಾವತಿ ಮಾಡದೆ ಪ್ರತಿಭಟಿಸಿದರು. ಈ ಚಳವಳಿಯ ನಾಯಕತ್ವವನ್ನು ವಲ್ಲಭಭಾಯಿ ಪಟೀಲರು ವಹಿಸಿದ್ದರು. ರೈತರ ಪ್ರತಿಭಟನೆಗೆ ಕೊನೆಗೂ ಸರಕಾರ ಮಣಿಯಿತು.

ಪಟೇಲರ ಸಂಘಟನಾ ಚಾತುರ್ಯ ಮತ್ತು ಸಾಮರ್ಥ್ಯಗಳಿಗೆ ಸವಾಲಾದ ಇನ್ನೊಂದು ಘಟನೆ 1928ರಲ್ಲಿ ಬಾರ್ದೋಲಿಯಲ್ಲಿ ನಡೆಯಿತು. ಸರಕಾರ ಏಕಾಏಕಿ ಭೂಕಂದಾಯವನ್ನು ಶೇ. 22ರಷ್ಟು ಹೆಚ್ಚಿಸಿತು. ಬಾರ್ದೋಲಿ ತಾಲೂಕಿನ ಇಪ್ಪತ್ಮೂರು ಹಳ್ಳಿಗಳ ರೈತರ ಪಾಲಿಗೆ ಇದೊಂದು ದುಪ್ಪಟ್ಟು ಹೊಡೆತವಾಗಿತ್ತು. ಸರಕಾರದ ಈ ಆಜ್ಞೆ ಉಲ್ಲಂಘಿಸಲು ನಿರ್ಧರಿಸಿದ ರೈತರು ಪಟೇಲರ ಮೊರೆ ಹೊಕ್ಕರು. ಕಂದಾಯ ನಿರಾಕರಣೆ ಚಳವಳಿಗೆ ಗಾಂಧಿಯವರು ಹಸಿರು ನಿಶಾನೆ ತೋರಿದ್ದೇ ಪಟೇಲರು ಈ ರೈತ ಸತ್ಯಾಗ್ರಹದ ದಂಡ ನಾಯಕರಾದರು. ರೈತರು ಸರಕಾರಕ್ಕೆ ಕಂದಾಯ ಕಟ್ಟಲಿಲ್ಲ. ಕಂದಾಯ ಕಟ್ಟದ ರೈತರ ಆಸ್ತಿಪಾಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿತು. ರೈತರು ಎದೆಗುಂದಲಿಲ್ಲ. ನಾಲ್ಕು ತಿಂಗಳ ಕಾಲ ನಡೆದ ಈ ಸತ್ಯಾಗ್ರಹಕ್ಕೆ ಕೊನಗೂ ಸರಕಾರ ಮಣಿಯಿತು. 1928ರ ಆಗಸ್ಟ್ಟ್‌ನಲ್ಲಿ ಸರಕಾರ ಅಕ್ಷರಶ: ಕಂದಾಯವನ್ನು ರದ್ದುಪಡಿಸಿತು ಹಾಗೂ ಮುಟ್ಟುಗೋಲು ಹಾಕಿಕೊಂಡಿದ್ದ ಆಸ್ತಿಪಾಸ್ತಿಯನ್ನು ಹಿಂದಿರುಗಿಸಿತು. ಇದು ವಲ್ಲಭಭಾಯಿ ಪಟೇಲರ ಸಮರ್ಥ ನಾಯಕತ್ವದ ರೈತ ಹೋರಾಟಕ್ಕೆ ಸಂದ ವಿಜಯವಾಗಿತ್ತು. ರೈತರು ಪಟೇಲರಿಗೆ ‘ಸರ್ದಾರ್’ ಬಿರುದುಕೊಟ್ಟು ಹೆಗಲಮೇಲೆ ಹೊತ್ತುಕೊಂಡು ಮೆರೆಸಿದರು. ರೈತ ಸಮುದಾಯದಲ್ಲಿ ನೈತಿಕ ಸ್ಥೈರ್ಯ ತುಂಬಿದ ಈ ಸತ್ಯಾಗ್ರಹ ಪಟೇಲರಿಗೆ ರಾಷ್ಟ್ರವ್ಯಾಪಿ ಪ್ರಸಿದ್ಧಿ ತಂದು ಕೊಟ್ಟಿತು. ಗಾಂಧಿ ಪಟೇಲರಲ್ಲಿ ಅಸಹಕಾರ ಚಳವಳಿಯ ಸಮರ್ಥ ನಾಯಕನೊಬ್ಬನನ್ನು ಕಂಡಿದ್ದರು. 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಟೇಲರು ವಹಿಸಿದ ಪಾತ್ರ ಗಾಂಧಿ ಅವರಲ್ಲಿ ಹೊಂದಿದ್ದ ನಂಬಿಕೆ ವಿಶ್ವಾಸಗಳನ್ನು ದೃಢಪಡಿಸಿತು. ವಲ್ಲಭಭಾಯಿ ಪಟೇಲರು ರಾಜಾಜಿ, ನೆಹರೂ ಅವರುಗಳಿದ್ದ ಗಾಂಧೀಜಿಯವರ ಆಪ್ತವಲಯದಲ್ಲಿ ಒಬ್ಬರೆನಿಸಿಕೊಂಡರು. ಇದು ಗಾಂಧಿಯವರ ಮರಣದವರೆಗೆ ಅಬಾಧಿತವಾಗಿ ಮುಂದುವರಿದಿತ್ತು. ಹಾಗೆಯೇ ಭಿನ್ನಾಭಿಪ್ರಾಯಗಳ ಮಧ್ಯೆಯೂ ನೆಹರೂ ಮತ್ತು ಪಟೇಲರ ನಡುವೆಯೂ ಕೊನೆಯವರೆಗೂ ಆಪ್ತವಾದ ಮೈತ್ರಿ ಇತ್ತು.

ವಲ್ಲಭಭಾಯಿ ಪಟೇಲರೇ ಪ್ರಥಮ ಪ್ರಧಾನ ಮಂತ್ರಿ ಆಗಬೇಕಿತ್ತೆಂದೂ ಅದನ್ನು ಅವರಿಗೆ ತಪ್ಪಿಸಲಾಯಿತೆಂದೂ, ನೆಹರೂ ಕುಟುಂಬದ ಹಿಡಿತ ಭದ್ರಪಡಿಸಲು ಪಟೇಲರನ್ನು ಅಲಕ್ಷಿಸಲಾಯಿತೆಂದೂ ಕೆಲವು ವಲಯಗಳಲ್ಲಿ ಅಭಿಪ್ರಾಯವುಂಟು. ಆದರೆ ಇವು ಆಧಾರರಹಿತವಾದುವು. 1942ರಷ್ಟು ಹಿಂದೆಯೇ ಗಾಂಧಿಯವರು ಎ.ಐ.ಸಿ.ಸಿ.ಗೆ ಸ್ಪಷ್ಟವಾಗಿ ತಿಳಿಸಿದ್ದರು:
‘‘ರಾಜಾಜಿ ಅಲ್ಲ, ಸರ್ದಾರ್ ವಲ್ಲಭಬಾಯಿ ಪಟೇಲರೂ ಅಲ್ಲ; ಜವಾಹರಲಾಲ್ ನನ್ನ ಉತ್ತರಾಧಿಕಾರಿ... ಸಂದರ್ಭ ಒದಗಿ ಬಂದಾಗ ಭಾರತ ಅಹಿಂಸೆಯ ಮಾರ್ಗದಲ್ಲೇ ತನ್ನನ್ನು ರಕ್ಷಿಸಿಕೊಳ್ಳಬೇಕೆಂಬುದು ನನ್ನ ಆಲೋಚನೆ. ತನ್ಮೂಲಕ ಪ್ರಪಂಚಕ್ಕೆ ಅದು ಶಾಂತಿ ದೂತನಾಗಬೇಕು.ಜವಾಹರ ಅದಕ್ಕಾಗಿ ಶ್ರಮಿಸುತ್ತಾರೆ, ಯುದ್ಧಕ್ಕಾಗಿ ಅಲ್ಲ.’’
(ಮೋಹನ ದಾಸ್ ಒಂದು ಸತ್ಯ ಕಥೆ ಪು:659 ಲೇ:ರಾಜಮೋಹನ ಗಾಂಧಿ)

ಗಾಂಧಿಯವರು ನೆಹರೂ ಮತ್ತು ಪಟೇಲರಿಬ್ಬರ ಬಗ್ಗೆಯೂ ಸಮಾನವಾದ ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಹೊಂದಿದ್ದರು. ಅವರಿಬ್ಬರ ಸಹಭಾಗಿತ್ವ, ಆ ಜೋಡಿ ಒಡೆಯದಂತೆ ನೋಡಿಕೊಂಡರು. ‘‘ಪಕ್ಷದಲ್ಲಿ ನೆಹರೂ ಅವರ ಹಿರಿತನವನ್ನು ಕಾಪಾಡುವುದರಲ್ಲಿ ಗಾಂಧಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಗಾಂಧಿಯವರು ನೆಹರೂ ಅವರಲ್ಲಿ ಒಬ್ಬ ಜಾತ್ಯತೀತವಾದಿಯನ್ನು ಕಂಡಿದ್ದರು. ಪಟೇಲರಲ್ಲಿ ಕಂಡಿರಲಿಲ್ಲ’’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯ ಪಡುತ್ತಾರೆ.

ಅಂತೆಯೇ ನೆಹರೂ ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿಯಾದರು. ವಲ್ಲಭಭಾಯಿ ಪಟೇಲ್ ಉಪ ಪ್ರಧಾನ ಮಂತ್ರಿಯಾದರು. ‘‘ಸ್ವಾತಂತ್ರ್ಯ ಬಂದಿರುವುದು ಭಾರತಕ್ಕೆ, ಕಾಂಗ್ರೆಸ್‌ಗಲ್ಲ’’ ಎಂದು ನೆನಪಿಸಿದ ಗಾಂಧಿಯವರು, ಅಂಬೇಡ್ಕರ್, ಶ್ಯಾಂಪ್ರಸಾದ್ ಮುಖರ್ಜಿ, ಕೆ.ಆರ್. ಷಣ್ಮುಗಂ ಚೆಟ್ಟಿಯವರಂಥ ಕಾಂಗ್ರೆಸ್ಸೇತರರೂ ಸ್ವತಂತ್ರ ಭಾರತದ ಪ್ರಥಮ ಸರಕಾರದಲ್ಲಿರುವಂತೆ ನೋಡಿಕೋಡರು.

ನೆಹರೂ ಮತ್ತು ಪಟೇಲರದು ಭಿನ್ನವಾದ ವ್ಯಕ್ತಿತ್ವ. ಸ್ವಾತಂತ್ರ್ಯಪ್ರಿಯತೆ ಇಬ್ಬರಲ್ಲೂ ಇದ್ದ ಸಮಾನ ಗುಣ. ಇಬ್ಬರೂ ಅಸೀಮ ದೇಶ ಭಕ್ತರು. ಆದರೆ ಇಬ್ಬರ ಆಲೋಚನೆ, ಚಿಂತನೆಗಳಲ್ಲಿ ಎಂದಿಗೂ ಸಾಮರಸ್ಯವಿರಲಿಲ್ಲ. ‘‘ದೇಶದಲ್ಲಿನ ವಾಮಪಂಥೀಯ ಶಕ್ತಿಗಳ ಬಗ್ಗೆ ಪಟೇಲರಿಗಿದ್ದ ವಿರೋಧ ಭಾರತ ಎದುರಿಸುತ್ತಿದ್ದ ರಾಜಕೀಯ ಹೊಂದಾಣಿಕೆಯ ಪ್ರಮುಖ ಸಮಸ್ಯೆಯಾಗಿತ್ತು. ಪಟೇಲರು ಬಂಡವಾಳಶಾಹಿಗಳಿಗೆ ಸ್ನೇಹಪರರಾಗಿದ್ದರು. ನೆಹರೂ ಸರಕಾರಿ ನಿಯಂತ್ರಿತ ಅರ್ಥವ್ಯವಸ್ಥೆಯ ಪರವಾಗಿದ್ದರು’’ ಎಂದು ರಾಮಚಂದ್ರ ಗುಹಾ ಬರೆಯತ್ತಾರೆ. ಆದರೆ 1949ರ ಕೊನೆಯ ವೇಳೆಗೆ ಭಾರತದ ಪ್ರಥಮ ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ, ಕಾಂಗ್ರೆಸ್‌ನ ನೂತನ ಆಧ್ಯಕ್ಷರ ಆಯ್ಕೆಯಲ್ಲಿ ನೆಹರೂ ಮತ್ತು ಪಟೇಲರ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿತ್ತು. ರಾಷ್ಟ್ರಪತಿ ನೀವೇ ಎಂದು ನೆಹರೂ ರಾಜಾಜಿಗೆ ಆಶ್ವಾಸನೆಯಿತ್ತಿದ್ದರು. ಆದರೆ ಪಟೇಲರು ರಾಜೇಂದ್ರಪ್ರಸಾದರ ಪರ ನಿಂತರು. ಕಾಂಗ್ರೆಸ್ ಅಧ್ಯಕ್ಷತೆಗೂ ಪಟೇಲರು ಪುರುಷೋತ್ತಮದಾಸ್ ಟಂಡನ್ ಅವರ ಹೆಸರು ಸೂಚಿಸಿದರು. ಟಂಡನ್ ನೆಹರೂ ಅವರ ತವರೂರಾದ ಅಲಹಾಬಾದಿನವರು. ಟಂಡನ್ ಮತ್ತು ನೆಹರೂ ಸನ್ಮಿತ್ರರಾಗಿದ್ದರು. ಆದರೆ ಇಬ್ಬರಲ್ಲೂ ಸೈದ್ಧಾಂತಿಕ ಅನುರಾಗವಿರಲಿಲ್ಲ. ಅಲ್ಲದೆ ಟಂಡನ್ ಕಾಂಗ್ರೆಸ್‌ನೊಳಗಿನ ತೀವ್ರ ಕೋಮುವಾದಿ ಬಣವನ್ನು ಪ್ರತಿನಿಧಿಸುವ ಅಭ್ಯರ್ಥಿಯಾಗಿದ್ದರು. ಇವೆರಡು ಆಯ್ಕೆಗಳಲ್ಲಿ ಪಟೇಲರು ತಾಳಿದ ನಿಲುವು ನೆಹರೂ ಅವರಿಗೆ ತುಂಬ ಇರಿಸುಮುರಿಸು ಉಂಟುಮಾಡಿತ್ತು, ಕೋಪ ಉಂಟುಮಾಡಿತ್ತು. ಆದರೆ ಪಟೇಲರು ತಮ್ಮನ್ನು ಭೇಟಿಮಾಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ‘‘ಈ ವಿವಾದಗಳಿಗೆಲ್ಲ ಗಮನಕೊಡಬೇಡಿ, ನೆಹರೂ ಹೇಳಿದಂತೆ ಮಾಡಿ’’ಎಂದು ತಿಳಿಸುತ್ತಿದ್ದರು.

ತಾತ್ವಿಕ ಭಿನ್ನಾಭಿಪ್ರಾಯ, ಕೋಪತಾಪಗಳು ಏನೇ ಇದ್ದರೂ ಅವೆಲ್ಲ ಸ್ನೇಹಸಂಬಂಧಗಳಿಗೆ ಮುಳುವಾಗಬಾರದೆನ್ನುವಷ್ಟು ಪ್ರಬುದ್ಧ ನಾಯಕರಾಗಿದ್ದರು ನೆಹರೂ-ಪಟೇಲರು. ಇಬ್ಬರ ನಡುವಣ ತೀವ್ರ ಭಿನ್ನಾಭಿಪ್ರಾಯದ ಅರಿವಿದ್ದ ಗಾಂಧಿಯವರು ಒಂದು ಹಂತದಲ್ಲಿ, ನೆಹರೂ ಪಟೇಲರು ಇಬ್ಬರಲ್ಲಿ ಒಬ್ಬರು ಸಂಪುಟ ತ್ಯಜಿಸುವುದು ಒಳಿತು ಎಂದು ಆಲೋಚಿಸಿದ್ದೂ ಉಂಟು. ಆದರೆ ಕೊನೆಯ ದಿನಗಳಲ್ಲಿ, ಅಂದಿನ ಕೋಮು ವಿಭಜಿತ ಪರಿಸ್ಥಿತಿಯಲ್ಲಿ ನೆಹರೂ-ಪಟೇಲ್ ಸ್ನೇಹಕ್ಕೆ ಭಂಗವಾದರೆ ಅದು ವಿಪತ್ಕಾರಿಯಾಗುವುದೆನ್ನುವ ನಿರ್ಧಾರಕ್ಕೆ ಬಂದಿದ್ದರು. ಹಂತಕನ ಗುಂಡಿಗೆ ಬಲಿಯಾಗುವುದಕ್ಕೆ ಒಂದೆರಡು ಗಂಟೆಗಳ ಮುಂಚೆ ತಮ್ಮನ್ನು ಭೇಟಿಮಾಡಿದ ಪಟೇಲರಿಗೆ ಈಗ ಅವರಿಬ್ಬರೂ ಸಂಪುಟದಲ್ಲಿರಬೇಕಾದ್ದು ಅನಿವಾರ್ಯ ಎನ್ನುವ ತಮ್ಮ ದೃಢನಿರ್ಧಾರವನ್ನು ತಿಳಿಸಿದ್ದರು. ಕೆಲವೇ ಗಂಟೆಗಳಲ್ಲಿ ಗಾಂಧಿ ಹತ್ಯೆಗೀಡಾದರು. ಗಾಂಧಿಯವರ ಪಾರ್ಥಿವ ಶರೀರವಿರಿಸಿದ್ದ ಬಿರ್ಲಾಭವನಕ್ಕೆ ಧಾವಿಸಿಬಂದ ನೆಹರೂ ತಮಗಿಂತ ಮೊದಲೇ ಬಂದಿದ್ದ ಪಟೇಲರ ತೊಡೆಗಳ ಮೇಲೆ ಮುಖ ಹುದುಗಿಸಿ ಮಗುವಿನಂತೆ ಅತ್ತರು. ಗಾಂಧಿ ಅಂದು ಮಧ್ಯಾಹ್ನ ತಮಗೆ ತಿಳಿಸಿದ್ದನ್ನು ಪಟೇಲರು ನೆಹರೂಗೆ ಅರುಹಿದರು. ಮುಂದೆ ಪಟೇಲರ ನಿಧನದವರೆಗೆ ಪಟೇಲ್-ನೆಹರೂ ಅವರದು ಮುರಿಯದ ಜೋಡಿಯಾಯಿತು.

1950ರ ಡಿಸೆಂಬರ್ 15ರಂದು ವಲ್ಲಭಭಾಯಿ ಪಟೇಲರು ಕಾಲವಶರಾದರು. ನಿಧನಕ್ಕೆ ಎರಡು ತಿಂಗಳು ಮುಂಚೆ ಗಾಂಧಿ ಜಯಂತಿ ಸಭೆಯೊಂದರಲ್ಲಿ ಮಾತನಾಡುತ್ತ ಪಟೇಲರು: ‘‘ಜವಾಹರಲಾಲ್ ನೆಹರೂ ನಮ್ಮ ನಾಯಕರು. ಬಾಪೂ, ನೆಹರೂ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ, ಘೋಷಿಸಿದ್ದಾರೆ. ಅವರ ಉಯಿಲನ್ನು ಅನುಷ್ಠಾನಕ್ಕೆ ತರುವುದು ಬಾಪೂ ಯೋಧರೆಲ್ಲರ ಕರ್ತವ್ಯ. ನಾನು ಅವಿಧೇಯ ಯೋಧನಲ್ಲ...ನಾನು, ಬಾಪೂ ಎಲ್ಲಿಗೆ ನನ್ನನ್ನು ನಿಯಮಿಸಿದರೋ ಅಲ್ಲಿಯೇ ಇದ್ದೇನೆ. ಅದು ನನಗೆ ಚೆನ್ನಾಗಿ ತಿಳಿದಿದೆ. ಅದರಿಂದ ನನಗೆ ತೃಪ್ತಿಯಾಗಿದೆ.’’
(ಮೋಹನದಾಸ್ ಒಂದು ಸತ್ಯ ಕಥೆ-ಪು.944) ಎಂದು ಹೇಳಿದ್ದರು.

ಇಂಥ ಇಬ್ಬರು ಧೀಮಂತ ನಾಯಕರುಗಳ ಬಾಂಧವ್ಯದ ಬಗ್ಗೆ ಈಗ ಅಪಸ್ವರವೆತ್ತುವುದು ಆ ದಿವ್ಯಚೇತನಗಳಿಗೆ ಅಪಚಾರವೆಸಗಿದಂತೆ. ವೈಚಾರಿಕ ಭಿನ್ನತೆ ಇದ್ದಾಗ್ಯೂ ಇಬ್ಬರೂ ರಾಷ್ಟ್ರದ ನಾಯಕತ್ವದ ಹೊಣೆ ಹೊರಲು ಸಮರ್ಥರಾಗಿದ್ದರು. ಆದರೆ ಆ ಕಾಲದ ಬೇಡಿಕೆ ನೆಹರೂ ಆಗಿತ್ತು, ಎಂದೇ ಗಾಂಧಿಯವರು ಯುಕ್ತ ನಿರ್ಧಾರವನ್ನು ಕೈಗೊಂಡರು ಎಂಬ ಸತ್ಯವನ್ನು ಒಪ್ಪಬೇಕು. ಅದು ಬಿಟ್ಟು ಅನ್ಯಥಾ ಮಾತನಾಡುವುದು, ಒಂದು ಕುಟುಂಬ ಬೆಳೆಸುವ ಸಲುವಾಗಿ ಪಟೇಲರನ್ನು ಅಲಕ್ಷಿಸಲಾಯಿತೆನ್ನುವುದು ಇವೆಲ್ಲ ಚರಿತ್ರೆಯನ್ನು ವಿಕೃತಗೊಳಿಸುವ ಕ್ಷುಲ್ಲಕತನವಾಗುತ್ತದೆಯಷ್ಟೇ.

ಸುಳ್ಳುಗಳ, ಅನ್ಯಾಯಗಳ ಬುನಾದಿಯ ಮೇಲೆ ತಮ್ಮ ಪುತ್ಥಳಿಯನ್ನು ನಿರ್ಮಿಸುವುದರಿಂದ ವಲ್ಲಭಭಾಯಿ ಪಟೇಲರ ಆತ್ಮಕ್ಕೆ ತೃಪ್ತಿಯಾದೀತೆ? ಪಟೇಲರ ಪ್ರತಿಮೆ ಪ್ರತಿಷ್ಠಾಪಿಸಲು ಸುತ್ತಲ ಹಳ್ಳಿಗಳ ಎಪ್ಪತ್ತೈದು ಸಾವಿರ ಆದಿವಾಸಿಗಳು ಜಮೀನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. 31ರಂದು ನಿರಾಶ್ರಿತರ ಎಪ್ಪತ್ತೆರಡು ಗ್ರಾಮಗಳಲ್ಲಿ ಅಡುಗೆ ಮಾಡದೆ ಶೋಕ ದಿನ ಆಚರಿಸಲಾಗುವುದೆಂದು ಆದಿವಾಸಿಗಳ ನಾಯಕ ಡಾ.ಪ್ರಫುಲ್ಲ ವಾಸವ ತಿಳಿಸಿದ್ದಾರೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News