ನಾಗರಿಕ ಜಗತ್ತಿನ ನವಿರಾದ ಲಿಂಗ ತಾರತಮ್ಯ
ನಂಬಿಕೆಯ ಆಧಾರದಲ್ಲಿ ಅನುಷ್ಠಾನಗೊಳಿಸುವ ಲಿಂಗ ತಾರತಮ್ಯ, ಅಸಮಾನತೆ ಮತ್ತು ಮಾನವೀಯತೆಯ ನೆಲೆಯಲ್ಲಿ ಎತ್ತಿಹಿಡಿಯಬೇಕಾದ ಸಮಾನತೆಯ ಪ್ರಶ್ನೆಬಂದಾಗ ಸುಪ್ರೀಂ ಕೋರ್ಟ್ ಸಮಾನತೆಯ ತತ್ವವನ್ನು ಎತ್ತಿಹಿಡಿದು ಎಲ್ಲ ವಯೋಮಾನದ ಮಹಿಳೆಯರಿಗೆ ದೇವಾಲಯ ಪ್ರವೇಶದ ಹಕ್ಕು ಇದೆ ಎಂದಿರುವುದು ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ನಂಬಿಕೆಯ ನೆಲೆಯಲ್ಲಿ ಸತಿಸಹಗಮನವನ್ನು ಒಂದು ಧಾರ್ಮಿಕ ಆಚರಣೆಯಾಗಿ ಸಾವಿರಾರು ಮಹಿಳೆಯರನ್ನು ಜೀವಂತ ಸುಟ್ಟ ಒಂದು ದೇಶದಲ್ಲಿ ದೇವಾಲಯ ಪ್ರವೇಶಕ್ಕೂ ಮಹಿಳೆಯರು ಕಾನೂನಿನ, ನ್ಯಾಯಾಲಯದ ಮೊರೆಹೋಗಬೇಕಾಗಿ ಬಂದದ್ದರಲ್ಲಿ ಆಶ್ಚರ್ಯವಿಲ್ಲ.
ಪರಂಪರೆ ಮತ್ತು ಆಧುನಿಕತೆಯ ನಡುವಣ ಸಂಘರ್ಷ ಇಂದು ನಿನ್ನೆಯದಲ್ಲ. ಪರಂಪರೆಯ, ಆಚರಣೆಗಳ ಹಾಗೂ ನಂಬಿಕೆಯ ಹೆಸರಿನಲ್ಲಿ ಸಮಾಜದ ಒಂದು ಬಲಾಢ್ಯ ವರ್ಗ ಎಲ್ಲ ರೀತಿಯ ದುರ್ಬಲರನ್ನು ಶತಮಾನಗಳಿಂದ ದಮನಿಸುತ್ತಾ, ಶೋಷಿಸುತ್ತಾ ಬಂದಿದೆ. ಜಾತಿ, ಧರ್ಮ, ಲಿಂಗ ಆಧಾರಿತ ತಾರಾತಮ್ಯ, ಅಸ್ಪಶ್ಯತೆ, ಪತಿ ಮೃತ ಪಟ್ಟಕೂಡಲೇ ಪತ್ನಿಯ ತಲೆ ಕೂದಲು ಕತ್ತರಿಸಿ ಅವಳನ್ನು ಕೇಶಮುಂಡನವೆಂಬ ಆಚರಣೆಗೆ ತಳ್ಳಿ ಅವಳನ್ನು ವಿರೂಪಗೊಳಿಸುವ ಕ್ರಮ, ಪತಿಯ ಮರಣಾನಂತರ ಅವಳನ್ನು ಬರ್ಬರವಾಗಿ, ಅವಮಾನವೀಯವಾಗಿ ಪತಿಯ ಚಿತೆಗೆ ತಳ್ಳುವ 'ಸತಿ ಸಹಗಮನ'ವೆಂಬ ಅನಾಗರಿಕ ಪದ್ಧತಿ-ಎಲ್ಲವೂ ಈ ದೇಶದಲ್ಲಿ ಪರಂಪರೆಯ, ನಂಬಿಕೆಯ ಹಣೆಪಟ್ಟಿ ಅಂಟಿಸಿಕೊಂಡೇ ನಡೆದುಬಂದವು. 'ಸತಿ' ವಿರುದ್ಧ ಕಾನೂನಿನ ಬಲವಿಲ್ಲದೆ ಇರುತ್ತಿದ್ದಲ್ಲಿ, ಶಿಕ್ಷೆಯ ಭಯವಿಲ್ಲದೆ ಇರುತ್ತಿದ್ದಲ್ಲಿ ಸತಿ ಸಹಗಮನವನ್ನು ನಮ್ಮ ಜನ ಇನ್ನೂ ಮುಂದುವರಿಸುತ್ತಿರಲಿಲ್ಲವೇ? ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧವನ್ನು ಶತಮಾನಗಳ ಕಾಲ ಮುಂದುವರಿಸಿದ ಹಾಗೆ, ನಂಬಿಕೆಯ ಹೆಸರಿನಲ್ಲಿ ಸಾವಿರಾರು ವಿಧವೆಯರನ್ನು ಚಿತೆಯ ಮೇಲಿಟ್ಟು ಜೀವಂತ ಸುಟ್ಟ ದೇಶದಲ್ಲಿ ನಂಬಿಕೆಯನ್ನು ಮುಂದುಮಾಡಿ ತಮ್ಮ ಅಹಂಕಾರ ಹಾಗೂ ಅಧಿಕಾರವನ್ನು ಮೆರೆಯುವ, ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಶಕ್ತಿಗಳನ್ನು ಸದೆಬಡಿಯುವುದು ಸುಲಭದ ಕೆಲಸವಲ್ಲ. ಸತಿಸಹಗಮನ ಪದ್ಧತಿಯ ಹಿಂದು ಮುಂದನ್ನು ತಿಳಿದರೆ ಇದು ಸ್ಪಷ್ಟವಾಗುತ್ತದೆ.
ಭಾರತದಲ್ಲಿ ಕ್ರಿ.ಶ. 5ನೇ ಶತಮಾನದಿಂದ ಆರಂಭಗೊಂಡದ್ದೆನ್ನಲಾದ ಸತಿ ಪದ್ಧತಿ ಕೂಡ ನಮ್ಮ ಪರಂಪರೆಯ ನಂಬಿಕೆಯ ಧಾರ್ಮಿಕ ಆಚರಣೆಯ ಪ್ರಶ್ನೆ ಎಂದು ಅಂದಿನ ಹಿಂದೂ ಗಂಡು ಸಮುದಾಯ, ಪಿತೃ ಪ್ರಧಾನ ವ್ಯವಸ್ಥೆಯ ಕ್ರೂರ ಸಮಾಜ ವಾದಿಸಿತ್ತು. ಯಾಕೆಂದರೆ 5ರಿಂದ 9ನೇ ಶತಮಾನಗಳ ನಡುವೆ ವಿಧವೆಯರನ್ನು ತಮ್ಮ ಗಂಡನ ಚಿತೆಯ ಮೇಲೆ ಇರಿಸಿ ಜೀವಂತ ಸುಟ್ಟ ದಾಖಲೆಗಳು ಇವೆ. ಮೊದಲು ಶ್ರೀಮಂತ ಕ್ಷತ್ರಿಯರ, ರಾಜಮಹಾರಾಜರ ಕುಟುಂಬಗಳಿಗೆ ಮಾತ್ರ, ಒಂದು ಪ್ರತಿಷ್ಠೆಯ ವಿಷಯವಾಗಿ ಸೀಮಿತವಾಗಿದ್ದ ವಿಧವಾ ದಹನ, ಕ್ರಮೇಣ 12ರಿಂದ 18ನೇ ಶತಮಾನದ ಅವಧಿಯಲ್ಲಿ ಇತರ ಸಮುದಾಯಗಳಿಗೂ ಹರಡಿ, ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತಕ್ಕೆ ಆಗಮಿಸುವ ವೇಳೆಗೆ ಒಂದು ವ್ಯಾಪಕವಾದ ಸಾಮಾಜಿಕ ಪಿಡುಗು ಆಗಿ ಬೆಳೆದಿತ್ತು ಎಷ್ಟರ ಮಟ್ಟಿಗೆ ಎಂದರೆ, ಕೋಲ್ಕತಾ ನಗರದೊಳಗೆ ಸತಿಯ ಮೇಲೆ ನಿಷೇಧ ಹೇರಲಾಗಿದ್ದರೂ, ನಗರದ 48 ಕಿ.ಮೀ. ವ್ಯಾಸದೊಳಗೆ 1803ರಲ್ಲಿ 438 ಸತಿಸಹಗಮನಗಳು ನಡೆದಿದ್ದವೆಂದು 1799ರಲ್ಲಿ ನಡೆದ ಒಂದು ವಿಧವಾ ದಹನದ ಪ್ರತ್ಯಕ್ಷದರ್ಶಿ ಕ್ರಿಶ್ಚಿಯನ್ ಮಿಶನರಿ ವಿಲಿಯಂ ಕ್ಯಾರಿ ದಾಖಲಿಸಿದ್ದಾನೆ. 1815ರಿಂದ 1818ರ ನಡುವಣ ಮೂರೇ ವರ್ಷಗಳಲ್ಲಿ ಬಂಗಾಲ ಪ್ರಾಂತದಲ್ಲಿ ಸತಿ ಪ್ರಕರಣಗಳು, 378ರಿಂದ 839ಕ್ಕೆ ಏರಿ, ದ್ವಿಗುಣಗೊಂಡವು. ವಿಲಿಯಂ ಕ್ಯಾರಿಯಂತಹ ಮಿಶನರಿಗಳು ಮತ್ತು ಸ್ವತಃ ತನ್ನ ಅತ್ತಿಗೆಯ ಸಹಗಮನದ ಭೀಕರತೆಯನ್ನು ಕಣ್ಣಾರೆ ಕಂಡಿದ್ದ ಸಮಾಜ ಸುಧಾರಕ ರಾಜಾ ರಾಮ ಮೋಹನ ರಾಯ್ ಸತಿ ಪದ್ಧತಿಯ ವಿರುದ್ಧ ಸತತವಾಗಿ ನಡೆಸಿದ ಅಭಿಯಾನವಲ್ಲದೇ ಇರುತ್ತಿದ್ದಲ್ಲಿ, 1829ರಲ್ಲಿ ವಿಲಿಯಂ ಬೆಂಟಿಂಕ್‌ನ ಆಜ್ಞೆಯ ಪ್ರಕಾರ ಸತಿ ರದ್ದಾಗುತ್ತಿರಲಿಲ್ಲ. ನಂಬಿಕೆಯ ಹೆಸರಿನಲ್ಲಿ ಪಿತೃ ಪ್ರಧಾನ ಭಾರತೀಯ ಸಮಾಜ ಇಂದಿಗೂ ಅದನ್ನು ಆಚರಿಸುತ್ತಿತ್ತೋ ಏನೋ. ಯಾಕೆಂದರೆ ಹೆಣ್ಣೊಬ್ಬಳ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಕ್ರೂರವಾಗಿ ಕೊಡಲಿ ಏಟು ಹಾಕುವ ಕೇಶಮುಂಡನ ಇಂದಿಗೂ ಭಾರತೀಯ ಸಮಾಜದ ಕೆಲವೆಡೆ ಮುಂದುವರಿದಿದೆ.
ಎರಡು ವರ್ಷಗಳ ಹಿಂದೆ ಕಾಶಿಗೆ ಹೋಗಿದ್ದ ನನ್ನ ಪರಿಚಿತರೊಬ್ಬರು ಗಂಗಾನದಿಯ ದಡದಲ್ಲಿ ಬಲಾತ್ಕಾರ ಪೂರ್ವಕವಾಗಿ ಎಳೆಯ ಹರೆಯದ, ತುಂಬ ಸುಂದರಿಯಾಗಿದ್ದ ಒಬ್ಬಳು ವಿಧವೆಯ ತಲೆಬೋಳಿಸುತ್ತಿರುವುದನ್ನು, ಅವಳ ಆಕ್ರಂದನ ನಡುವೆಯೂ ಆಕೆಯ ಸಂಬಂಧಿಕರು ಆ ಭಯಾನಕ ಆಚರಣೆಗೆ ಸಹಕರಿಸುವುದನ್ನು ಕಂಡು ಆಘಾತಕ್ಕೊಳಗಾಗಿದ್ದನ್ನು ವರ್ಣಿಸುವಾಗ ನನಗೆ ಅದನ್ನು ನಂಬುವುದೇ ಕಷ್ಟವಾಯಿತು. ಲಭ್ಯ ದಾಖಲೆಗಳ ಪ್ರಕಾರ, ವಿಲಿಯಂ ಬೆಂಟಿಂಕ್ ಸತಿಪದ್ಧತಿಯನ್ನು ನಿಷೇಧಿಸುವ ಆಜ್ಞೆ ಹೊರಡಿಸಿ, ಸುಮಾರು 115 ವರ್ಷಗಳ ನಂತರ, 1943-1987ರ ನಡುವಣ 44 ವರ್ಷಗಳ ಅವಧಿಯಲ್ಲಿ, ಭಾರತದಲ್ಲಿ 28 ಸತಿಸಹಗಮನ ಪ್ರಕರಣಗಳು ನಡೆದಿವೆ. 1987ರಲ್ಲಿ ರಾಜಸ್ಥಾನದಲ್ಲಿ ರೂಪಾ ಕನ್ವರ್ ಎಂಬ ತರುಣಿ ವಿಧವೆ ಸತಿಹೋದ, ಜಗತ್ತನ್ನೆ ದಿಗ್ಭ್ರಮೆಗೊಳಿಸಿದ ಘಟನೆ ನಡೆದಿದೆ. ಅಂದಮೇಲೆ ಈ ದೇಶದಲ್ಲಿ ಮಹಿಳೆಯರ ಸಮಾನತೆ, ಸಬಲೀಕರಣ ಇತ್ಯಾದಿ ಘೋಷಣೆಗಳು ಸದಾ ಹೇಗೆ ಕತ್ತಿಮಸೆಯುತ್ತಿವೆ ಎಂಬುದನ್ನು ಊಹಿಸಿಕೊಳ್ಳಬಹುದು.
ಈ ಕತ್ತಿಮಸೆಯುವಿಕೆಯಲ್ಲಿ ಲಾಭಮಾಡಿಕೊಳ್ಳ್ಳಲು ಹವಣಿಸುವ ರಾಜಕೀಯ ಪಕ್ಷಗಳ ಎಡಬಿಡಂಗಿತನ ಈಗ ಸ್ಪಷ್ಟವಾಗಿ ಕಾಣಿಸುತ್ತಿದೆ. ಮಹಾರಾಷ್ಟ್ರದಲ್ಲಿ ದಲಿತರ ದೇವಾಲಯ ಪ್ರವೇಶಕ್ಕೆ ಪರವಾಗಿ ಇದ್ದ ರಾಜಕೀಯ ಪಕ್ಷ ಕೇರಳದಲ್ಲಿ ಆದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ತ್ರಿವಳಿ ತಲಾಖ್ ನಿಷೇಧಿಸುವ ಸರಕಾರ, ಮಹಿಳೆಯರ ಸಮಾನತೆಗೆ ತಾನು ಆದ್ಯತೆ ನೀಡುತ್ತೇನೆ ಎನ್ನುವ ಪ್ರಭುತ್ವ ಮಹಿಳೆಯರ ದೇವಾಲಯ ಪ್ರವೇಶದ ಪ್ರಶ್ನೆ ಬಂದಾಗ ಸಮಾನತೆಯ ತತ್ವವನ್ನು, ಸಮಾನ ಹಕ್ಕನ್ನು ಕಡೆಗಣಿಸಿಬಿಡುತ್ತಿದೆ. ಮುಸ್ಲಿಂ ಮಹಿಳೆಯರಿಗೆ ಸಿಗುವ ಸಮಾನತೆ ಹಿಂದೂ ಮಹಿಳೆಯರಿಗೂ ಸಿಗಬೇಡವೇ? ಎಂಬ ಪ್ರಶ್ನೆಗೆ ಪ್ರಭುತ್ವದ ಬಳಿ ಉತ್ತರವಿಲ್ಲ.
ನಂಬಿಕೆಯ ಆಧಾರದಲ್ಲಿ ಅನಿಷ್ಠಾನಗೊಳಿಸುವ ಲಿಂಗ ತಾರತಮ್ಯ, ಅಸಮಾನತೆ ಮತ್ತು ಮಾನವೀಯತೆಯ ನೆಲೆಯಲ್ಲಿ ಎತ್ತಿಹಿಡಿಯಬೇಕಾದ ಸಮಾನತೆಯ ಪ್ರಶ್ನೆಬಂದಾಗ ಸುಪ್ರೀಂ ಕೋರ್ಟ್ ಸಮಾನತೆಯ ತತ್ವವನ್ನು ಎತ್ತಿಹಿಡಿದು ಎಲ್ಲ ವಯೋಮಾನದ ಮಹಿಳೆಯರಿಗೆ ದೇವಾಲಯ ಪ್ರವೇಶದ ಹಕ್ಕು ಇದೆ ಎಂದಿರುವುದು ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ನಂಬಿಕೆಯ ನೆಲೆಯಲ್ಲಿ ಸತಿಸಹಗಮನವನ್ನು ಒಂದು ಧಾರ್ಮಿಕ ಆಚರಣೆಯಾಗಿ ಸಾವಿರಾರು ಮಹಿಳೆಯರನ್ನು ಜೀವಂತ ಸುಟ್ಟ ಒಂದು ದೇಶದಲ್ಲಿ ದೇವಾಲಯ ಪ್ರವೇಶಕ್ಕೂ ಮಹಿಳೆಯರು ಕಾನೂನಿನ, ನ್ಯಾಯಾಲಯದ ಮೊರೆಹೋಗಬೇಕಾಗಿ ಬಂದದ್ದರಲ್ಲಿ ಆಶ್ಚರ್ಯವಿಲ್ಲ.
ಕಾನೂನು ಕೂಡಲೇ ಬದಲಾವಣೆಗಳನ್ನು ತರುವುದಿಲ್ಲ; ಸಮಾಜ ಮತ್ತು ಸಮುದಾಯಗಳು ಬದಲಾವಣೆಗೆ ಸಿದ್ಧವಾಗದಿದ್ದಲ್ಲಿ ಕಾನೂನು ಏನು ಮಾಡಲು ಸಾಧ್ಯ? ಎಂದು ವಾದಿಸುವವರಿದ್ದಾರೆ.
ಆದರೆ ಅನಾಗರಿಕವಾದ ಸತಿಸಹಗಮನವನ್ನು 19ನೇ ಶತಮಾನದ ಆದಿಯಲ್ಲಿ ತಡೆದ ಕಾನೂನು ಮತ್ತು ಆ ಕಾನೂನು ನೀಡುವ ಶಿಕ್ಷೆಯ ಭಯ, 20ನೇ ಶತಮಾನದ ಮಧ್ಯಭಾಗದಲ್ಲಿ 1950ರ ದಶಕದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯವನ್ನು, ಅಸ್ಪಶ್ಯತೆಯನ್ನು ಬಹುಪಾಲು ನಿರ್ಮೂಲನ ಮಾಡಿತೆಂಬುದನ್ನು ನಾವು ಮರೆಯಬಾರದು. ಯಾಕೆಂದರೆ ಸತಿ, ಇಂತಹ ತಾರತಮ್ಯ ಮತ್ತು ಅಸ್ಪಶ್ಯತೆ ಕೂಡ ಹಲವರ ಧರ್ಮಗಳ ನಂಬಿಕೆಗೆ ವಿರುದ್ಧವಾಗಿತ್ತು. ಆಧುನಿಕ ರಾಷ್ಟ್ರಗಳಲ್ಲಿ ಸಮಾಜಿಕ ಸುಧಾರಣೆ ಕಾನೂನುಗಳ ಮೂಲಕವೇ ಆಗಿದೆ. ಉದಾಹರಣೆಗೆ, ದಕ್ಷಿಣ ಆಫ್ರಿಕಾದಲ್ಲಿ ವರ್ಣದ್ವೇಷ ನೀತಿ ಕೊನೆಗೊಂಡದ್ದು, ಅಮೆರಿಕದಲ್ಲಿ ಗುಲಾಮಗಿರಿ ಅಂತ್ಯಗೊಂಡದ್ದು ಕಾನೂನಿನ, ಸಂವಿಧಾನದ ಮೂಲಕವೇ.
ನಾಗರಿಕ ಜಗತ್ತು ತುಂಬ ನವಿರಾದ ರೀತಿಗಳಲ್ಲಿ ಲಿಂಗ ಸಮಾನತೆಯನ್ನು ನಿರಾಕರಿಸುತ್ತದೆ. ಜಗತ್ತಿಗೆ ಸಮಾನತೆಯ ಭ್ರಾತೃತ್ವದ ಮಾನವ ಹಕ್ಕುಗಳ ಪಾಠ ಹೇಳುವ ಅಮೆರಿಕ ತನ್ನ ದೇಶದ ಅತ್ಯಂತ ಬಲಶಾಲಿಯಾದ ಗಂಡಸೊಬ್ಬ ತನ್ನ ಕಚೇರಿಯ ಉದ್ಯೋಗಿಯೊಬ್ಬಳ ಜೊತೆ ಪೇಮ ವ್ಯವಹಾರ ನಡೆಸಿದಾಗ ಜಗತ್ತು ಆ ಮಹಿಳೆಗೆ ಏನು ಮಾಡಿತು? ಆಕೆಯನ್ನು ಹೇಗೆ ನಡೆಸಿಕೊಂಡಿತು? ಆಕೆಯನ್ನು ಹೇಗೆ 'ವಿಚ್‌ಹಂಟ್' ಮಾಡಿತು ಎಂಬುದಕ್ಕೆ ಸಾಕ್ಷಿಯಾಗಿ ಕ್ಲಿಂಟನ್-ಲೆವಿನ್‌ಸ್ಕಿ ಲೈಂಗಿಕ ಹಗರಣ ಇದೆ. 1995ರ ನವೆಂಬರ್ ಮತ್ತು 1997ರ ಮಾರ್ಚ್ ನಡುವಣ ಅವಧಿಯಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್‌ರ ಜತೆ ಒಂಬತ್ತು 'ಲೈಂಗಿಕ ಮುಖಾಮುಖಿ' ನಡೆಸಿದ್ದ ಪ್ರಕರಣ 1998ರಲ್ಲಿ ಬಹಿರಂಗಗೊಂಡ ಬಳಿಕ ಅಮೆರಿಕದ ಮಾಧ್ಯಮಗಳು ಅಕ್ಷರಶಃ ಮೋನಿಕಾಳ ತೇಜೋವಧೆಯಲ್ಲಿ ತೊಡಗಿದ್ದವು.
2015ರ ಜೂನ್‌ನಲ್ಲಿ ಫ್ರಾನ್ಸ್‌ನ ಕ್ಯಾನೆಯಲ್ಲಿ ಕ್ಯಾನೆ ಲಯನ್ಸ್ ಅಧಿವೇಶನವನ್ನು ಉದ್ದೇಶಿಸಿ ಮೋನಿಕಾ ಮಾಡಿದ ವಿಶ್ವಪ್ರಸಿದ್ಧ 'ಆ್ಯಂಟಿ ಶೇಮಿಂಗ್' ಭಾಷಣದಲ್ಲಿ ಆಕೆ, ಇಡೀ ಹಗರಣದಲ್ಲಿ ಮಾಧ್ಯಮಗಳು ತನ್ನನ್ನು ಹೇಗೆ ಅಪಹಾಸ್ಯ ಹಾಗೂ ತಿರಸ್ಕಾರಕ್ಕೆ ತಳ್ಳಿದವು ಎಂದು ವಿವರಿಸಿದ್ದಾರೆ. ಅಮೆರಿಕದ ಅಧ್ಯಕ್ಷರ ಜತೆಗಿನ ತನ್ನ ಪ್ರಣಯ ಸಂಬಂಧ ನಂತರದ ವರ್ಷಗಳಲ್ಲಿ ತನ್ನನ್ನು ಒಂದು ದುಃಸ್ವಪ್ನವಾಗಿ ಕಾಡಿತು. ಸುಮಾರು ಎರಡು ವರ್ಷಗಳ ಕಾಲ ತಾನು ಸಾರ್ವಜನಿಕ ಬದುಕಿನಿಂದಲೇ ಮರೆಯಾಗಬೇಕಾಯಿತು; ಒಂದು ದಶಕದ ಕಾಲ ತಾನು ವೌನವಾಗಿರಬೇಕಾಯಿತು ಎಂದಿದ್ದಾರೆ. ತನ್ನ ಜತೆ ಪ್ರಣಯ ಪ್ರಕರಣದಲ್ಲಿ ತೊಡಗಿದ್ದ ವ್ಯಕ್ತಿ ಓರ್ವ ಅತ್ಯಂತ ಪ್ರಭಾವಿ ಪುರುಷನಾಗಿದ್ದರಿಂದ ವಿಶ್ವದಾದ್ಯಂತ ತಾನು ಅವಮಾನಕ್ಕೊಳಗಾಗುವಂತೆ ಮಾಡಲಾಯಿತು. ಮಾಧ್ಯಮಗಳು ತನ್ನನ್ನು ಟಾರ್ಟ್, ಸ್ಲಟ್, ಹೋರ್, ಬಿಂಬೋ, ಫ್ಲೂಝಿ ಇತ್ಯಾದಿ ಅತ್ಯಂತ ಅವಮಾನಕಾರಿಯಾದ ಪದಗಳಲ್ಲಿ ತಾನೊಬ್ಬಳು ವೇಶ್ಯೆ ಎನ್ನುವ ರೀತಿಯಲ್ಲಿ ತನ್ನನ್ನು ಬಿಂಬಿಸಿದವು. ಇದು ಎಷ್ಟರ ಮಟ್ಟಿಗೆ ನಡೆಯಿತೆಂದರೆ ''1998ರಲ್ಲಿ ನಾನು ಬಹುಪಾಲು ನನ್ನ ಬದುಕನ್ನೇ ಕಳೆದುಕೊಂಡೆ'' (i almost lost my life) ಎಂದಿದ್ದಾರೆ ಲೆವೆನ್‌ಸ್ಕಿ.
ಅಮೆರಿಕದಂತಹ ತಥಾಕಥಿತ ಭಾರೀ ಮುಂದುವರಿದ ದೇಶದಲ್ಲೇ ಪುರುಷ ಪ್ರಧಾನ ಸಮಾಜ ಹೆಣ್ಣೊಬ್ಬಳನ್ನು ಈ ರೀತಿಯಲ್ಲಿ ನಡೆಸಿಕೊಳ್ಳುತ್ತಾ ಮಹಿಳಾ ವಿಮೋಚನೆಯ ಪರಿಕಲ್ಪನೆಯನ್ನೇ ಅಪಹಾಸ್ಯಕ್ಕೀಡು ಮಾಡುವುದನ್ನು ಜಗತ್ತು ಬಾಯಿ ಚಪ್ಪರಿಸುತ್ತ ಸವಿಯುವಾಗ ಇನ್ನೂ ಮಧ್ಯಯುಗ ಮತ್ತು ಅತೀ ಆಧುನಿಕ ಯುಗದಲ್ಲಿ ಏಕಕಾಲದಲ್ಲೇ ಬದುಕುವ ಭಾರತದಲ್ಲಿ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಪ್ರಶ್ನೆ ಸ್ವಹಿತಾಸಕ್ತ ಗಂಡು ಗುಂಪುಗಳಿಗೆ, ಮತ ಬೇಟೆಯಲ್ಲಿ ಮುಳುವಾಗಿರುವ ರಾಜಕೀಯ ಪಕ್ಷಗಳಿಗೆ ಜೀವನ್ಮರಣದ ಪ್ರಶ್ನೆಯಾದರೆ ಆಶ್ಚರ್ಯವಿದೆಯೇ?
(bhaskarrao599@gmail.com)