ಪತ್ರಕರ್ತರ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದ ವಿಶ್ವಸಂಸ್ಥೆ ಮುಖ್ಯಸ್ಥ
ವಿಶ್ವಸಂಸ್ಥೆ, ನ. 2: ತಮ್ಮ ಕೆಲಸ ಮಾಡಿರುವುದಕ್ಕಾಗಿ ಜಗತ್ತಿನಾದ್ಯಂತ ಪತ್ರಕರ್ತರ ಹತ್ಯೆ ನಡೆಯುತ್ತಿರುವುದು ಅಸಹನೀಯವಾಗಿದೆ ಹಾಗೂ ಅದು ‘ಸಾಮಾನ್ಯ’ವಾಗಬಾರದು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಸುದ್ದಿಗಳನ್ನು ವರದಿ ಮಾಡಿರುವುದಕ್ಕಾಗಿ ಒಂದು ದಶಕದ ಅವಧಿಯಲ್ಲಿ ಸುಮಾರು 1,010 ಪತ್ರಕರ್ತರನ್ನು ಕೊಲ್ಲಲಾಗಿದೆ ಹಾಗೂ 10ರಲ್ಲಿ ಒಂದು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ ಎಂದು ಅವರು ಹೇಳಿದರು.
2018ರಲ್ಲಿ ಕನಿಷ್ಠ 88 ಪತ್ರಕರ್ತರು ಹತ್ಯೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.
ಹಲವು ಸಾವಿರ ಪತ್ರಕರ್ತರ ಮೇಲೆ ದಾಳಿ ಮಾಡಲಾಗಿದೆ, ಕಿರುಕುಳ ನೀಡಲಾಗಿದೆ ಹಾಗೂ ಸುಳ್ಳು ಆರೋಪಗಳಲ್ಲಿ ಬಂಧಿಸಿ ನಿಯಮಗಳನ್ನು ಅನುಸರಿಸದೆ ಜೈಲಿಗಟ್ಟಲಾಗಿದೆ ಎಂದು ‘ಪತ್ರಕರ್ತರ ವಿರುದ್ಧ ಅಪರಾಧ ಮಾಡುವ ಅಪರಾಧಿಗಳಿಗೆ ನೀಡುವ ಅಭಯವನ್ನು ಕೊನೆಗೊಳಿಸುವ ಅಂತಾರಾಷ್ಟ್ರೀಯ ದಿನ’ದ ಸಂದರ್ಭದಲ್ಲಿ ವೀಡಿಯೊ ಸಂದೇಶದಲ್ಲಿ ಅವರು ಹೇಳಿದರು.
ಈ ದಿನವನ್ನು ಪ್ರತಿ ವರ್ಷ ನವೆಂಬರ್ 2ರಂದು ಆಚರಿಸಲಾಗುತ್ತಿದೆ.