ಬಿಡಿ, ದೇವರು ಸತ್ತಿಲ್ಲ...
ಧರ್ಮ, ಸಂಪ್ರದಾಯ, ಆಚರಣೆಗಳಲ್ಲಿ ನ್ಯಾಯಾಂಗ ತಲೆಹಾಕುವಂತಿಲ್ಲ. ಇಲ್ಲಿ ಸಂಪ್ರದಾಯ ಮತ್ತು ಆಚರಣೆಗಳು ಮುಖ್ಯವೇ ಹೊರತು ಸಂವಿಧಾನವಲ್ಲ ಎಂಬುದು ಒಂದು ತರ್ಕ. ಆಧುನಿಕ ಕಾಲದ ಸಮಾನತೆಯ ಹಕ್ಕುಗಳಿಗೆ ಇಲ್ಲಿ ಅವಕಾಶವಿಲ್ಲ ಎನ್ನುವುದು ತರ್ಕದ ಇನ್ನೊಂದು ತುದಿ. ಧರ್ಮ, ಸಂಪ್ರದಾಯ, ಆಚರಣೆಗಳ ವಿಷಯಗಳಲ್ಲಿ ನ್ಯಾಯಾಂಗ ತಲೆಹಾಕಬಾರದು ಎಂದಾದಲ್ಲಿ ಈ ಸಂಬಂಧಿತ ವಿವಾದಗಳ ಇತ್ಯರ್ಥಕ್ಕೆ ನಾವು ಓಬಿರಾಯನ ಕಾಲದ ಅರಳೀಕಟ್ಟೆ ಪಂಚಾಯಿತಿಗಳಿಗೇ ಹೋಗಬೇಕಾಗುತ್ತದೆ. ‘ವಿಶ್ವಕ್ಕೇ ಗುರು’ ಆಗಲು ಬಯಸಿರುವ ಆಧುನಿಕ ಭಾರತ ಹಿಮ್ಮುಖವಾಗಿ ಚಲಿಸಬೇಕೇ?
‘ದೇವರು ಸತ್ತ’(ಗಾಡ್ ಇಸ್ ಡೆಡ್) ಎಂದ ಜರ್ಮನಿಯ ತತ್ವಶಾಸ್ತ್ರಜ್ಞ ಫ್ರೆಡ್ರಿಕ್ ನೀಶೆ(1844-1900)ತನ್ನ ಬರಹದಲ್ಲಿ ಇಂಥದೊಂದು ಘೋಷಣೆ ಮಾಡಿ ಎರಡು ಶತಮಾನಗಳೇ ಕಳೆದಿದ್ದರೂ, ಅವನ ‘ಗಾಡ್ ಇಸ್ ಡೆಡ್’ ನುಡಿಗಟ್ಟು ಆಸ್ತಿಕರು ನಾಸ್ತಿಕರಾದಿಯಾಗಿ (ನಿರೀಶ್ವರವಾದಿಗಳು) ಎಲ್ಲರ ನಾಲಗೆಯ ಮೇಲೂ ಸಂದರ್ಭೋಚಿತವಾಗಿ ಇಂದಿಗೂ ನಲಿಯುತ್ತಿರುತ್ತದೆ. ಸಾಂಪ್ರದಾಯಿಕ ಮೌಲ್ಯಗಳ ಕಡು ವಿರೋಧಿಯಾಗಿದ್ದ ನೀಶೆ, ಆ ನುಡಿಗಟ್ಟನ್ನು ಒಂದು ರೂಪಕಾರ್ಥದಲ್ಲಿ ಬಳಸಿದ್ದ. ಆಧುನಿಕ ಬುದ್ಧಿಮತ್ತೆ ಮತ್ತು ಪ್ರಜ್ಞೆ ದೇವರು ಇರುವ ಸಾಧ್ಯತೆಯನ್ನು ಕುರಿತ ನಂಬಿಕೆಯನ್ನು ಕೊಂದುಹಾಕಿದೆಯೆಂಬುದು ಅವನ ಇಂಗಿತವಾಗಿತ್ತು. ಆದರೆ ಜನ ಅದನ್ನು ವಾಚ್ಯಾರ್ಥದಲ್ಲೇ ಸ್ವೀಕರಿಸಿದ್ದರಿಂದ ‘ದೇವರು ಸತ್ತ’ ಎಂಬುದು ಪ್ರಪಂಚದಾದ್ಯಂತ ಚಲಾವಣೆ ಪಡೆಯಿತು. ಈ ನುಡಿಗಟ್ಟಿನಿಂದ ದೇವರಿಗೂ ಮುಜುಗರವಾಗಿರ ಬೇಕು. ಎಂದೇ ಆಗಾಗ, ತಾನು ಜೀವಂತ ಇದ್ದೇನೆ ಎಂಬುದನ್ನು ಎಲ್ಲ ಧರ್ಮಗಳ ಮುಖೇನವೂ ಸುದ್ದಿಮಾಡುತ್ತ ಸಂಭ್ರಮಿಸುತ್ತಿರುತ್ತಾನೆ. ಹಾಲಿ ನಮ್ಮ ದೇಶದಲ್ಲಿ ಸುದ್ದಿ ಕೇಂದ್ರದಲ್ಲಿ ವಿಜೃಂಭಿಸುತ್ತಿರುವ ದೇವರು ಶಬರಿಮಲೆಯ ಅಯ್ಯಪ್ಪಸ್ವಾಮಿ.
‘ದೇವರು ಸತ್ತ’ ಎಂಬುದನ್ನು ಬಾಯಿಚಪ್ಪರಿಸಿಕೊಂಡು ಸವಿಯುವ ಕಮ್ಯುನಿಸ್ಟರ ಸರಕಾರವಿರುವ ಕೇರಳದ ಶಬರಿಮಲೆಯಲ್ಲಿ ಆಸ್ತಿಕರ ಆರಾಧ್ಯ ದೈವವಾಗಿ ನೆಲೆಸಿರುವ ಸ್ವಾಮಿ ಅಯ್ಯಪ್ಪನ್ ನೈಷ್ಠಿಕ ಬ್ರಹ್ಮಚಾರಿ ದೇವರು. ಫಲವಂತಿ ವಯೋಮಾನದ ಸ್ತ್ರೀಯರನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಈ ಅಯ್ಯಪ್ಪ ಸ್ವಾಮಿ. ರಜಸ್ವಲೆ ವಯಸ್ಸಿನ ಸ್ತ್ರೀಯರ ನೆರಳೂ ತಮ್ಮ ದೇವರಿಗೆ ತಾಕಬಾರದೆಂದು ಭಕ್ತರು ನಂಬುತ್ತಾರೆ. ಎಂದೇ ಹತ್ತರಿಂದ ಐವತ್ತರ ವಯೋಮಾನದವರೆಗಿನ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದೇವಸ್ಥಾನದೊಳಕ್ಕೆ ಪ್ರವೇಷ ನಿಷಿದ್ಧ. ಇದು ಕಾಲಾನುಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂಬುದು ದೇವಸ್ಥಾನದ ಆಡಳಿತ ಮಂಡಳಿಯ ನಿಲುವು. ಹಾಗೆ ನೋಡಿದರೆ ನಮ್ಮ ಶ್ರೀರಾಮ ಬಂಟ ಹನುಮಂತನೂ ನೈಷ್ಠಿಕ ಬ್ರಹ್ಮಚಾರಿಯೇ. ಆದರೆ ಅವನು ದರ್ಶನಕೊಡದಷ್ಟು ಕಟ್ಟುನಿಟ್ಟಿನವನಲ್ಲ. ಅವನಿಗೆ ಎಲ್ಲ ಸ್ತ್ರೀಯರೂ ಸೀತಾಮಾತೆಯರೇ. ಇನ್ನು ನಮ್ಮ ಕೃಷ್ಣ ಪರಮಾತ್ಮ, ನರಕಾಸುರನ ಸೆರೆಯಿಂದ ಮುಕ್ತಗೊಳಿಸಿದ ಹದಿನಾರು ಸಾವಿರ ಲಲನೆಯರ ರಮಾರಮಣ, ಕುಟುಂಬ ವತ್ಸಲ. ಪ್ರಾಚೀನ ಅರ್ವಾಚೀನ ಹೆಣ್ಣುಮಕ್ಕಳೆಲ್ಲರನ್ನೂ ವಯೋಮಾನಭೇದ ಮಾಡದೆ ಸಮಾನವಾಗಿ ಕಾಣುವ ರಸಿಕ ದೇವರು. ನಮ್ಮ ಆಧುನಿಕ ನಾರಿಯರಿಗೆ ಅಯ್ಯಪ್ಪಸ್ವಾಮಿಯ ಅನುಗ್ರಹ ಪಡೆವ ಹಠವೇಕೆ? ಲೀಲಾವಿನೋದಿ ಕೃಷ್ಣ ಪರಮಾತ್ಮನ ಕೃಪೆ ಸಾಲದೆ ಎನ್ನುವುದು ಚಾಷ್ಟಿ ಮಾತಾದೀತು.
ಅಗದಿ ಆಧುನಿಕ ನಾರಿಯರಿಗೆ ತಮ್ಮೆಲ್ಲ ಪ್ರಾಯದಲ್ಲೂ ಶಬರಿಮಲೆಯ ಸ್ವಾಮಿಯ ದರ್ಶನ ಪಡೆವ ಹಟ. ಇದು ತಮ್ಮ ಸಂವಿಧಾನದತ್ತ ಹಕ್ಕು ಎನ್ನುತ್ತಾರೆ ಅವರು. ಹಕ್ಕೊತ್ತಾಯ ಶುರುಮಾಡಿದರು. ಕರ್ನಾಟಕದ ಈಗಿನ ಕನ್ನಡ ಮತ್ತು ಸಂಸ್ಕೃತಿ ಶಾಖೆ ಸಚಿವೆ, ತಾರೆ ಜಯಮಾಲಾ ಈ ಹಕ್ಕೊತ್ತಾಯದ ಮೂಲಪುರುಷಿ. ಕೆಲವು ವರ್ಷಗಳ ಹಿಂದೆ ಅವರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಸಂಪ್ರದಾಯವಾದಿಗಳ ಕೈಗೆ ಸಿಕ್ಕಿಬಿದ್ದು ಸುದ್ದಿಮಾಡಿದ್ದರು. ಈ ನಿಷೇಧದ ವಿರುದ್ಧ ಅವರೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗೆ ಗರಿಗಟ್ಟಿಕೊಂಡಿತು ಅಯ್ಯಪ್ಪಸ್ವಾಮಿಯ ದರ್ಶನಾಕಾಂಕ್ಷಿ ಫಲವಂತಿ ಪ್ರಾಯೆಯರ ಹಕ್ಕೊತ್ತಾಯ. ಮಹಾರಾಷ್ಟದಲ್ಲೂ ಶಿಂಗ್ರಿ ಶನಿ ದೇವರು ಹೆಂಗಸರನ್ನು ತನ್ನ ಆಲಯದೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಇದರ ವಿರುದ್ಧ ಅಲ್ಲಿನ ಸ್ತ್ರೀ ವಿಮೋಚನಾವಾದಿಗಳು ಕೋರ್ಟಿನ ಕಟ್ಟ್ಟೆ ಏರಿ ‘ಶನಿ’ ದರ್ಶನಭಾಗ್ಯದ ಅವಕಾಶ ಪಡೆದುಕೊಂಡರು. ಈ ವಿಜಯ ಅಯ್ಯಪ್ಪಸ್ವಾಮಿಯ ಮತ್ತಷ್ಟು ಭಕ್ತೆಯರನ್ನು ನ್ಯಾಯಾಲಯದ ಮೆಟ್ಟಿಲೇರಲು ಪ್ರೇರೇಪಿಸಿರಬೇಕು. ಪರಮಾತ್ಮನ ನೈಷ್ಠಿಕ ಬ್ರಹ್ಮಚರ್ಯೆ ಮುಖ್ಯವಾದ ಕಟ್ಟಳೆಯೊಂದನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗತ್ತಿಕೊಳ್ಳಲೇ ಬೇಕಾಯಿತು.
ಸರ್ವರಿಗೂ ಸಮಾನತೆ ಎನ್ನುತ್ತದೆ ನಮ್ಮ ಸಂವಿಧಾನ. ಅದರಂತೆ ಎಲ್ಲ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪಸ್ವಾಮಿಯ ದೇವಾಲಯವನ್ನು ಪ್ರವೇಶಿಸುವ ಹಕ್ಕು ಇದೆ. ಇದನ್ನು ನಿರಾಕರಿಸಲಾಗದು. ನಿರಾಕರಿಸಿದಲ್ಲಿ ಅದು ಸಂವಿಧಾನದ ಉಲ್ಲಂಘನೆಯಾಗುತ್ತದೆ. ಎಲ್ಲ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪಸ್ವಾಮಿಯ ದೇವಸ್ಥಾನದೊಳಗೆ ಪ್ರವೇಶ ನೀಡತಕ್ಕದ್ದು, ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸತಕ್ಕದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಈಗ ವಿವಾದಾಸ್ಪದವಾಗಿದೆ. ಧರ್ಮ, ಸಂಪ್ರದಾಯ, ಆಚರಣೆಗಳಲ್ಲಿ ನ್ಯಾಯಾಂಗ ತಲೆಹಾಕುವಂತಿಲ್ಲ. ಇಲ್ಲಿ ಸಂಪ್ರದಾಯ ಮತ್ತು ಆಚರಣೆಗಳು ಮುಖ್ಯವೇ ಹೊರತು ಸಂವಿಧಾನವಲ್ಲ ಎಂಬುದು ಒಂದು ತರ್ಕ. ಆಧುನಿಕ ಕಾಲದ ಸಮಾನತೆಯ ಹಕ್ಕುಗಳಿಗೆ ಇಲ್ಲಿ ಅವಕಾಶವಿಲ್ಲ ಎನ್ನುವುದು ತರ್ಕದ ಇನ್ನೊಂದು ತುದಿ. ಧರ್ಮ, ಸಂಪ್ರದಾಯ, ಆಚರಣೆಗಳ ವಿಷಯಗಳಲ್ಲಿ ನ್ಯಾಯಾಂಗ ತಲೆಹಾಕಬಾರದು ಎಂದಾದಲ್ಲಿ ಈ ಸಂಬಂಧಿತ ವಿವಾದಗಳ ಇತ್ಯರ್ಥಕ್ಕೆ ನಾವು ಓಬಿರಾಯನ ಕಾಲದ ಅರಳೀಕಟ್ಟೆ ಪಂಚಾಯಿತಿಗಳಿಗೇ ಹೋಗಬೇಕಾಗುತ್ತದೆ.
‘ವಿಶ್ವಕ್ಕೇ ಗುರು’ ಆಗಲು ಬಯಸಿರುವ ಆಧುನಿಕ ಭಾರತ ಹಿಮ್ಮುಖವಾಗಿ ಚಲಿಸಬೇಕೇ? ನಮ್ಮ ವಿಮೋಚನಾಪರ ಆಧುನಿಕ ನಾರಿಯರಾದರೂ ಏಕೆ ಈ ಒಲ್ಲದ ದೇವರ ಅನುಗ್ರಹಕ್ಕೆ ಹಂಬಲಿಸಬೇಕು? ಬೇಡವಾದೆಡೆಗೆ ನಾವು ಬರುವುದಿಲ್ಲ ಎಂದೂ ಅವರು ಹಕ್ಕೊತ್ತಾಯ ಬಿಟ್ಟು ಬಹಿಷ್ಕಾರದ ಮಾರ್ಗ ಏಕೆ ಹಿಡಿಯಬಾರದು? ಆಧುನಿಕ ನಾರಿಯರು ಶಬರಿಮಲೆಯ ದೇಗುಲ ಪ್ರವೇಶದ ಕನಸು ತೊರೆದು ನಮ್ಮ ಪ್ರಜಾಪ್ರಭುತ್ವದ ಆಧಾರವಾದ ಸಂಸದ್ ದೇಗುಲ ಪ್ರವೇಶಕ್ಕೆ ಏಕೆ ಹೋರಾಟಮಾಡಬಾರದು? ಎಲ್ಲ ರಾಜಕೀಯ ಪಕ್ಷಗಳೂ ಮಾತಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತನಿಧ್ಯದ ಕನಸನ್ನು ಹಂಚುತ್ತಾ, ವಾಸ್ತವವಾಗಿ ಸಂಸದೀಯ ಪ್ರಜಾಸತ್ತೆಯಲ್ಲಿ ಪುರುಷಪ್ರಧಾನ್ಯತೆ ಉಳಿಸಿಕೊಳ್ಳುವ ಕರಾಮತ್ತು ನಡೆಸಿರುವುದರ ವಿರುದ್ಧ ಸಿಡಿದು ನಿಂತು ರಾಷ್ಟ್ರದ ಆಡಳಿತದಲ್ಲಿ ಹೆಚ್ಚಿನ ಪಾಲು ಪಡೆಯುವುದು ಸೂಕ್ತವೂ ಅರ್ಥಪೂರ್ಣವೂ ಆದ ಕ್ರಮವಾದೀತು ಅಲ್ಲವೇ ಎನ್ನುತ್ತಾರೆ ವಿಚಾರವಾದಿಗಳು. ಆಗ ‘ಆಧುನಿಕ ಅಯ್ಯಪ್ಪ’ ಸ್ವಾಮಿಗಳೇ ದರ್ಶನಾಕಾಂಕ್ಷಿಗಳಾಗಿ ಅವರ ಬಾಗಿಲು ಬಡಿಯಬಹುದು ಎಂಬ ತರ್ಕವೂ ಇದೆ.
ವಾದ-ಚರ್ಚೆ-ಅಭಿಪ್ರಾಯಗಳು ಏನೇ ಇರಲಿ, ದೇವದಾನವರ ಪೂಜಾಕೈಂಕರ್ಯವೂ ಸೇರಿದಂತೆ ಎಲ್ಲದರಲ್ಲೂ ಸಮಾನತೆಗೆ ಒತ್ತಾಯಪಡಿಸುವ ಸೋದರಿಯರ ಹಕ್ಕೊತ್ತಾಯದ ಹಕ್ಕಿನ ಬಗ್ಗೆ ಎರಡು ಮಾತಿರಲಾರದು. ಸುಪ್ರೀಂ ಕೋರ್ಟ್ ಸಹ ಇದನ್ನು ಮನಗಂಡು, ಸಂವಿಧಾನ ನೀಡಿರುವ ಸಮಾನತೆಯನ್ನು ಜಾರಿಗೊಳಿಸಿ ಮಹಿಳೆಯರಿಗೆ ಅಯ್ಯಪ್ಪಸ್ವಾಮಿಯ ದೇಗುಲದ ಬಾಗಿಲು ತೆರೆಯುವಂತೆ ಆದೇಶ ನೀಡಿದೆ. ಸನಾತನಿ ಸಂಪ್ರದಾಯವಾದಿ ಭಕ್ತರು ಸಹಜವಾಗಿಯೇ ಇದಕ್ಕೆ ಉಗ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತೀರ್ಪು ಮತ್ತು ವಿರೋಧದ ಮಧ್ಯೆ ರಾಜಕೀಯ ಪ್ರವೇಶಿಸಿದೆ. ‘ಬೆಂದ ಮನೆಯ ಗಳ ಹಿರಿದರು’ ಎಂಬ ಗಾದೆಯಂತೆ, ಕೇರಳದಲ್ಲಿ ಒಂದು ಸ್ಥಾನ ಗೆದ್ದು ಒಂಟಿ ಹೆಜ್ಜೆಯ ಸರ್ಕಸ್ ಮಾಡುತ್ತಿರುವ ಬಿಜೆಪಿ ಈ ಸ್ಥಿತಿಯ ರಾಜಕೀಯ ಲಾಭ ಪಡೆದುಕೊಳ್ಳಲು ಧಾವಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಸುಪ್ರೀಂ ಕೋರ್ಟಿನ ತೀರ್ಪನ್ನು ವಿರೋಧಿಸಿ ಇತ್ತೀಚೆಗೆ(ಅ.28) ಕೇರಳದಲ್ಲಿ ಬಿಜೆಪಿ ಪ್ರಾರಂಭಿಸಿದ ಚಳವಳಿಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತಾನಾಡುತ್ತ ಆ ಪಕ್ಷದ ಅಧ್ಯಕ್ಷ ಅಮಿತ್ ಶಾ, ಕಾನೂನು ಆಡಳಿತ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬಹಿರಂಗ ಸವಾಲನ್ನೊಡ್ಡುವ ರೀತಿಯ ಮಾತುಗಳನ್ನಾಡಿದ್ದಾರೆ.
ಅಯ್ಯಪ್ಪಸ್ವಾಮಿ ಭಕ್ತರನ್ನು ನಿಗ್ರಹಿಸುವ ಕ್ರಮಗಳನ್ನು ಕೇರಳ ಸರಕಾರ ನಿಲ್ಲಿಸದಿದ್ದಲ್ಲಿ, ಮುಂಬರುವ ದಿನಗಳಲ್ಲಿ ಚಳವಳಿಯನ್ನು ತೀವ್ರಗೊಳಿಸುವುದಾಗಿಯೂ ಎಲ್‌ಡಿಎಫ್‌ಸರಕಾರವನ್ನು ಪದಚ್ಯತಿಗೊಳಿಸಲಾಗುವುದೆಂದೂ ಶಾ ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪನ್ನು ಖಂಡಿಸಿರುವ ಅವರು, ನ್ಯಾಯಾಲಯಗಳು ಅನುಷ್ಠಾನಗೊಳಿಸಲಾಗದಂಥ ತೀರ್ಪುಗಳನ್ನು ನೀಡಬಾರದೆಂದು ನ್ಯಾಯಾಂಗಕ್ಕೆ ಬುದ್ಧಿಮಾತನ್ನೂ ಹೇಳಿದ್ದಾರೆ. ನೂರ ನಲವತ್ತು ಮಂದಿ ಸದಸ್ಯಬಲ ಹೊಂದಿರುವ ಕೇರಳ ವಿಧಾನ ಸಭೆಯಲ್ಲಿ ಕೇವಲ ಒಂದು ಸ್ಥಾನ ಹೊಂದಿರುವ ಬಿಜೆಪಿ ಎಲ್‌ಡಿಎಫ್ ಸರಕಾರವನ್ನು ಪ್ರಜಾಸತ್ತಾತ್ಮಕವಾಗಿ ಪದಚ್ಯತಿಗೊಳಿಸುವುದು ಹಗಲುಗನಸೇ ಸರಿ. ಪಿಣರಾಯಿ ವಿಜಯನ್ ಅವರ ನಾಯಕತ್ವದ ಎಲ್‌ಡಿಎಫ್‌ಸರಕಾರಕ್ಕೆ ಇನ್ನೂ ಎರಡು ವರ್ಷಗಳ ಆಯಸ್ಸು ಇದೆ. ಹೀಗಿರುವಾಗ ಸರಕಾರವನ್ನು ಪದಚ್ಯತಿಗೊಳಿಸಲು ಹೇಗೆ ಸಾಧ್ಯವಾದೀತು? ಚಳವಳಿಗಳ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರ ಸಂವಿಧಾನದ 356 ವಿಧಿಯನ್ವಯ ಸರಕಾರವನ್ನು ವಜಾ ಗೊಳಿಸಬಹುದೇ ವಿನಃ ಕೇವಲ ಚಳವಳಿಗಳಿಂದಲೇ ಚುನಾಯಿತ ಸರಕಾರವನ್ನು ಉರುಳಿಸಲಾಗದು.
ಶಾ ಅವರ ಎಚ್ಚರಿಕೆಯಲ್ಲಿ, 356ನೇ ವಿಧಿಯನ್ನು ಬಳಸಿ ಸರಕಾರವನ್ನು ಕಿತ್ತುಹಾಕುವ ಬೆದರಿಕೆಯ ದನಿಯನ್ನು ಗುರುತಿಸಬಹುದಾಗಿದೆ. ಚಳವಳಿಯನ್ನು ತೀವ್ರಗೊಳಿಸಿ, ಕಾಯ್ದೆ ಸುವ್ಯವಸ್ಥೆ ಪಾಲನೆ ಕುಸಿದು ಬಿದ್ದಿದೆ ಎಂಬ ನೆಪದಲ್ಲಿ ಮೋದಿಯವರ ಸರಕಾರ ಕೇರಳದ ಎಲ್‌ಡಿಎಫ್, ಸರಕಾರವನ್ನು ಕಿತ್ತುಹಾಕುವ ಸಾಹಸಮಾಡಬಹುದೆಂಬ ಭೀತಿ ರಾಜಕೀಯ ವಲಯದಲ್ಲಿ ಮೂಡಿದೆ. ಹಾಗೆ ಮಾಡಿದಲ್ಲಿ ಅದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ದ್ರೋಹ ಬಗೆಯುವ ಕೃತ್ಯವಾಗುತ್ತದೆ.ಎಸ್.ಆರ್.ಬೊಮ್ಮಾಯಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ 356ನೇ ವಿಧಿಯನ್ನು ಬೇಕಾಬಿಟ್ಟಿ ಬಳಸುವಂತಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಎನ್‌ಡಿಎ ಸರಕಾರ ಈ ಹಿಂದೆ ಅಕ್ರಮವಾಗಿ ರಾಜ್ಯ ಸರಕಾರಗಳನ್ನು ವಜಾಮಾಡಿರುವ ಪ್ರಸಂಗಗಳು ಇವೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರಕ್ಕೊದಗಿರುವ ಬೆದರಿಕೆಯನ್ನು ತಳ್ಳಿಹಾಕಲಾಗದು. ಅನುಷ್ಠಾನಕ್ಕೆ ತರಲಾಗದಂಥ ತೀರ್ಪುಗಳನ್ನು ನೀಡಬಾರದೆನ್ನುವ ಶಾ ಅವರ ಮಾತುಗಳಲ್ಲಿ ನ್ಯಾಯಾಂಗದ ಅಧಿಕಾರ ಮತ್ತು ವಿವೇಕ-ವಿವೇಚನೆಗಳನ್ನು ಪ್ರಶ್ನಿಸುವ ಧಾರ್ಷ್ಟ್ಯವಿದೆ. ನ್ಯಾಯಾಗ ನಿಂದನೆಯ ವ್ಯಾಪ್ತಿಯೊಳಗೂ ಬರಬಹುದಾದ ಈ ಮಾತುಗಳಲ್ಲಿ ಶಾ ಅವರು ನ್ಯಾಯಾಂಗಕ್ಕೆ ಎಚ್ಚರಿಕೆ ನೀಡಿರುವುದರ ಜೊತೆಗೆ ಕಾನೂನಿನ ಆಡಳಿತವನ್ನೇ ಪ್ರಶ್ನಿಸುತ್ತಿರುವಂತಿದೆ. ಶಾ ಅವರ ಈ ಮಾತುಗಳು ಅವರ ಹಾಗೂ ಮೋದಿ ಸರಕಾರದ ಸರ್ವಾಧಿಕಾರ ಮನೋವೃತ್ತಿಗೆ ಅನುಗುಣವಾಗಿಯೇ ಇದೆ.
ಹಿಂದೆಯೂ ನ್ಯಾಯಾಲಯಗಳು ಅನುಷ್ಠಾನಗೊಳಿಸಲು ಅಸಾಧ್ಯವಾದ ತೀರ್ಪುಗಳನ್ನಿತ್ತಿವೆ ಎಂದಿರುವ ಶಾ ಅವರು, ತಮಿಳುನಾಡಿನ ಹಿಂಸಾಕ್ರೀಡೆ ಜಲ್ಲಿಕಟ್ಟು ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದ ಪ್ರಕರಣಗಳ ತೀರ್ಪುಗಳ ನಿದರ್ಶನ ನೀಡಿದ್ದಾರೆ. ಇದು ನಿಜವಿದ್ದೀತು. ಆದರೆ, ಯಾವುದಾದರೂ ತೀರ್ಪನ್ನು ಜಾರಿಗೊಳಿಸದಿದ್ದ ಪ್ರಕರಣಗಳಿದ್ದಲ್ಲಿ ಜವಾಬ್ದಾರಿಯುತ ನಾಯಕರು ಅದರ ಜಾರಿಗೆ ಆಗ್ರಹಿಸಬೇಕೇ ವಿನಃಅದನ್ನು ಮತ್ತೊಂದು ಲೋಪಕ್ಕೆ ಪೂರ್ವನಿದರ್ಶನವಾಗಿ ಬಳಸಬಾರದು.ರಾಜಕೀಯ ಉದ್ದೇಶಗಳಿಂದ ಶಾ ಅವರ ಪ್ರಚೋದನಕಾರಿ ಹೇಳಿಕೆಯನ್ನು ಸುಪ್ರೀಂ ಕೊರ್ಟ್ ನಿರ್ಲಕ್ಷಿಸಲಾಗದು.
ಧರ್ಮ ಹಾಗೂ ಸಂಪ್ರದಾಯಗಳನ್ನು ಪರಿವರ್ತನೆ ಮಾಡುವ ಅಧಿಕಾರ ಸುಪ್ರೀಂ ಕೋರ್ಟಿಗೆ ಇಲ್ಲ. ಧರ್ಮದ ನಿರ್ಣಯವನ್ನು ಸಂತರು ಹಾಗೂ ಭಕ್ತರು ಮಾತ್ರ ತೆಗೆದುಕೊಳ್ಳಬೇಕು ಎಂಬುದು ಪೇಜಾವರ ಮಠದ ವಿಶ್ವೇಶತೀರ್ಥರ ಇತ್ತೀಚಿನ ಹೇಳಿಕೆ. ಧರ್ಮದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರಕಾರ ಹಾಗೂ ನ್ಯಾಯಾಲಯಗಳಿಗೆ ಇಲ್ಲ ಎಂಬುದೂ ವಿಶ್ವೇಶತೀರ್ಥರ ಅಂಬೋಣವೇ. ಹಾಗಿದ್ದಲ್ಲಿ ಧರ್ಮ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದ ತಕರಾರುಗಳನ್ನು ಯಾರು ಬಗೆಹರಿಸಬೇಕು? ಇದೊಂದು ಸೂಕ್ಷ್ಮ ವಿಚಾರ. ಮೊದಲನೆಯದಾಗಿ ಧರ್ಮದ ಕರಾರುವಾಕ್ಕಾದ ಅರ್ಥವನ್ನು ನಮ್ಮ ಶಾಸ್ತ್ರ ಗ್ರಂಥಗಳು ಇದಮಿತ್ಥಂ ಎಂದು ಒಂದು ನುಡಿಗಟ್ಟಿನಲ್ಲಿ ಅಥವಾ ವಾಕ್ಯದಲ್ಲಿ ಹೇಳುವುದಿಲ್ಲ. ನ್ಯಾಯಾಂಗ ಬೇಡ ಎನ್ನುವುದಾದಲ್ಲಿ, ಯಾವುದು ಧರ್ಮ, ಯಾವುದು ಸಂಪ್ರದಾಯ; ಯಾವುದು ಧರ್ಮವಲ್ಲ-ಸಂಪ್ರದಾಯವಲ್ಲ ಎಂದು ನಿರ್ಣಯಿಸುವವರು ಯಾರು? ಸಾವಿರಾರು ಜಾತಿಗಳಿರುವ, ಜಾತಿಬಣಗಳಿರುವ ಭಾರತೀಯ ಸಮಾಜದಲ್ಲಿ ಅಷ್ಟೇ ಬಗೆಯ ಅಭಿಪ್ರಾಯಗಳು, ಸಂಪ್ರದಾಯಗಳು, ಆಚರಣೆಗಳು ಇವೆ. ಒಂದಕ್ಕೆ ಸಂಪ್ರದಾಯವೆನ್ನುವುದು ಇನ್ನೊಂದಕ್ಕೆ ಅಸಂಪ್ರದಾಯ. ಒಂದರ ಆಚರಣೆ ಇನ್ನೊಂದಕ್ಕೆ ಬೂಟಾಟಿಕೆ.ಇಂಥ ಬಹುತ್ವ, ಭಿನ್ನಾಭಿಪ್ರಾಯಗಳು ಮತ್ತು ವಿರೋಧಾಭಾಸಗಳಿಂದ ನಮ್ಮ ಸಮಾಜ ವಿಧೋವಿಧವಾಗಿದೆ. ಇನ್ನು ಈಗಿನ ಸ್ವರೂಪದಲ್ಲೇ ಧರ್ಮ, ಧರ್ಮವಾಗಿ ಉಳಿದಿಲ್ಲ. ಅದರಲ್ಲಿ ರಾಜಕಾರಣ ಮತ್ತು ಧನಬಲ ಬೆರಕೆಯಾಗಿ ಧರ್ಮವೆನ್ನುವುದೂ ಈಗ ಅನುಕೂಲಸಿಂಧುವಾಗಿದೆ.
ಇಂಥ ಸ್ಥಿತಿಯಲ್ಲಿ ಧರ್ಮ ಸಂಪ್ರದಾಯಗಳನ್ನು ಸಂತರು ಮತ್ತು ಭಕ್ತರ ನಿರ್ಣಯಕ್ಕೆ ಬಿಟ್ಟಲ್ಲಿ ಅದು ಹಳೆಯಕಾಲದ ಪಂಚಾಯಿತಿ ನ್ಯಾಯವಾಗಿ ಧನಬಲ ಮತ್ತು ತೋಳ್ಬಲಗಳೇ ಮೇಲುಗೈ ಪಡೆಯಬಹುದು. ಸಂತರು ಮತ್ತು ಭಕ್ತರು ಪೂರ್ವಾಗ್ರಹಪೀಡಿತರಲ್ಲ ಎಂದು ಹೇಳುವುದಾದರೂ ಹೇಗೆ? ಮಿಗಿಲಾಗಿ ಪೇಜಾವರ ಶ್ರೀಗಳು ಸಲಹೆಮಾಡಿರುವಂಥ ಸಂತರು ಮತ್ತು ಭಕ್ತರ ನ್ಯಾಯಪಂಚಾಯಿತಿಯಲ್ಲಿ ಸ್ತ್ರೀಯರ ಪಾಲಿಗಂತೂ ಮನುಸ್ಮತಿಯೇ ಪರಮ ನಿರ್ಣಯವಾಗಬಹುದು. ನ್ಯಾಯಾಂಗದ ಹಸ್ತಕ್ಷೇಪ ಬೇಡ, ಸಂತರು ಮತ್ತು ಭಕ್ತರೇ ನಿರ್ಣಯಿಸುವರು ಎಂದಾದಲ್ಲಿ ಅವರ ತೀರ್ಪೀನ ವಿರುದ್ಧ ಮೇಲ್ಮನವಿಗೆ ಅವಕಾಶವೇ ಇರುವುದಿಲ್ಲ. ಇಂಥ ವ್ಯವಸ್ಥೆಯಲ್ಲಿ ಈವರೆಗಿನ ಸಾಮಾಜಿಕ ಸುಧಾರಣೆಗಳೂ ತಿರುಗುಮುರುಗಾಗಬಹುದು. ಈಗಲೂ ‘ಸತಿ’ಯನ್ನು ಬೆಂಬಲಿಸುವ ತಿರೋಗಾಮಿಗಳು ನಮ್ಮಲ್ಲಿಲ್ಲವೇ? ಈಗಾಗಲೇ ದೇಶದಲ್ಲಿ ಕೆಲವೆಡೆ ಇಂಥ ನ್ಯಾಯಪಂಚಾಯಿತಿಗಳು ಕೆಲಸಮಾಡುತ್ತಿದ್ದು, ಮರ್ಯಾದಾ ಹತ್ಯೆ, ಗುಂಪು ಹತ್ಯೆ ಇವೆಲ್ಲ ಅಪರಾಧಗಳಲ್ಲ ಎನ್ನುವಂಥ ತೀರ್ಪುಗಳನ್ನು ನಾವು ಕಾಣುತ್ತಿದ್ದೇವೆ. ಇಷ್ಟಕ್ಕೂ ಮಿಗಿಲಾಗಿ ಧರ್ಮ, ಸಂಪ್ರದಾಯ, ನಂಬಿಕೆ ಇವೆಲ್ಲ ವ್ಯಕ್ತಿಗತ ಸಂಗತಿಗಳು, ವೈಯಕ್ತಿಕವಾದುವು. ಮಠಗಳು, ಧರ್ಮ ಸಂಸತ್ತುಗಳ ನಿರ್ಣಯಗಳು ಏನೇ ಇರಬಹುದು. ವೈಯಕ್ತಿಕ ನಂಬಿಕೆಗಳನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ. ಹಾಗಿದ್ದಲ್ಲಿ ನಮ್ಮಲ್ಲಿ ಚಾರ್ವಾಕ ಸಂಸ್ಕೃತಿ ಇರುತ್ತಲೇ ಇರಲಿಲ್ಲ. ಅಯ್ಯಪ್ಪಸ್ವಾಮಿಯ ಮೇಲಿನ ಭಕ್ತಿಯೂ ವೈಯಕ್ತಿಕವಾದದ್ದು. ನಮ್ಮಲ್ಲಿ ‘ಮುಟ್ಟು ಮಲಿನ’ ಎಂಬ ಮನೋಭಾವಹೋಗಿ ಮೂರುದಿನಗಳ ಅಸ್ಪಶ್ಯತಾ ಶಿಕ್ಷೆ ಈಗ ಬಹುಮಟ್ಟಿಗೆ ಹೋಗಿದೆಯಾದರೂ ಶೇ. ತೊಂಬತ್ತರಷ್ಟು ಮಹಿಳೆಯರು ‘ಆ ದಿವಸಗಳಲ್ಲಿ’ ಮನೆಯಲ್ಲಿ ದೇವರ ಮನೆಯತ್ತ ತಲೆಹಾಕುವುದಿಲ್ಲ.ಇನ್ನು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುವರೆ? ಶೇ.ಹತ್ತು ಮಂದಿ ಹೋದರೂ ನಮ್ಮ ಅಯ್ಯಪ್ಪಸ್ವಾಮಿಯ ನೈಷ್ಠಿಕ ಬ್ರಹ್ಮಚರ್ಯೆಗೆ ಏನೇನೂ ಧಕ್ಕೆ ಬರದು ಎಂದು ಸಿನಿಕರು ಹೇಳಬಹುದು. ಇಂಥ ಪರಿಸ್ಥಿತಿಯಲ್ಲಿ ಸಮೂಹಸನ್ನಿ ಎಬ್ಬಿಸಿ ಲಾಭ ಪಡೆದುಕೊಳ್ಳುವ ರಾಜಕೀಯ ಹುನ್ನಾರವೂ ತಿಳಿಯದ್ದೇನಲ್ಲ