ಎಚ್-1ಬಿ ವೀಸಾ ತಡೆ ಪ್ರಮಾಣದಲ್ಲಿ ಏರಿಕೆ: ತಂತ್ರಜ್ಞಾನ ಕಂಪೆನಿಗಳ ಆರೋಪ
Update: 2018-11-09 15:56 GMT
ವಾಶಿಂಗ್ಟನ್, ನ. 9: ತಡೆಹಿಡಿಯಲಾಗುವ ಎಚ್-1ಬಿ ವೀಸಾಗಳ ಸಂಖ್ಯೆಯಲ್ಲಿ ‘ನಾಟಕೀಯ ಏರಿಕೆ’ ಕಂಡುಬಂದಿದೆ ಎಂದು ಗೂಗಲ್, ಫೇಸ್‌ಬುಕ್ ಮತ್ತು ಮೈಕ್ರೋಸಾಫ್ಟ್ ಮುಂತಾದ ಉನ್ನತ ಮಾಹಿತಿ ತಂತ್ರಜ್ಞಾನ ಕಂಪೆನಿಗಳನ್ನು ಪ್ರತಿನಿಧಿಸುವ ಅಮೆರಿಕನ್ ಉದ್ಯೋಗದಾತರ ಒಕ್ಕೂಟವೊಂದು ಹೇಳಿದೆ.
ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್) ಇಲಾಖೆಯು ತನ್ನದೇ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಅದು ಆರೋಪಿಸಿದೆ.
ಎಚ್-1ಬಿ ವೀಸಾದಡಿಯಲ್ಲಿ ವಿದೇಶಿ ಪರಿಣತರನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪೆನಿಗಳಿಗೆ ಅವಕಾಶವಿದೆ.
ಈ ವೀಸಾಗಳ ಆಧಾರದಲ್ಲಿ ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಈ ಉದ್ಯೋಗಿಗಳ ಪೈಕಿ ಹೆಚ್ಚಿನವರು ಭಾರತೀಯರು ಮತ್ತು ಚೀನಿಯರು.