ಟಿಪ್ಪು ಮತ್ತು ಜಯಂತಿ ಒಟ್ಟಿಗೆ ಇರೋದು ಸರಿಯಲ್ಲ!
ಉತ್ತರ ಪ್ರದೇಶದಲ್ಲಿ ಆದಿತ್ಯನಾಥರ ಆಡಳಿತದಲ್ಲಿ ಎಲ್ಲವೂ ಬದಲಾಗುತ್ತಿರುವುದು ನೋಡಿ ಕಾಸಿ ರೋಮಾಂಚನಗೊಂಡು ಆ ಕಡೆಗೆ ಧಾವಿಸಿದ. ಆದಿತ್ಯನಾಥರಂತೂ ಅದಾಗಲೇ ಕಾಸಿಯನ್ನು ನೋಡಿ ಖುಷಿಯಾದರು. ‘‘ಆಯಿಯೇ...ಆಪ್‌ಕಾ ನಾಮ್...’’ ಎಂದು ಹೆಸರಿನಿಂದಲೇ ಶುರು ಹಚ್ಚಿದರು.
‘‘ಸಾರ್...ಕಾಸಿ..ಕರ್ನಾಟಕದ ಪತ್ರಕರ್ತ..’’ ಪರಿಚಯಿಸಿದ.
‘‘ಕಾಸಿ....ನಾಮ್ ಅಚ್ಛಾ ನಹೀ ಹೇ....ಯಹ್ ಮುಸಲ್ಮಾನ್ ನಾಮ್ ಹೇ...ಇದು ಮುಸ್ಲಿಮರ ಕಾಸಿಮ್ ಎಂಬ ಹೆಸರನ್ನು ಹೋಲುತ್ತದೆ....’’ ಆದಿತ್ಯ ನಾಥ್ ತಲೆಕೆಡಿಸಿಕೊಂಡರು.
ಕಾಸಿ ಬೆಚ್ಚಿ ಬಿದ್ದ. ‘‘ಸಾರ್...ನನ್ನ ಹೆಸರು ಕಾಸಿಮಾಬಾದ್ ಅಲ್ಲ...ಬರೇ ಕಾಸಿ ಅಷ್ಟೇ...ಕರ್ನಾಟಕದಲ್ಲಿ ಎಂಜಲು ಕಾಸಿ ಎಂದು ಪ್ರಸಿದ್ಧ’’
‘‘ಕಾಸಿ ಎನ್ನುವುದು ಕಾಸಿಂ ಪದದ ಅಪಭ್ರಂಶ. ಇತಿಹಾಸ್ ಬದಲ್ನೇ ಪಡೆೇಗಾ...ಆದುದರಿಂದ ನಿಮ್ಮ ಹೆಸರನ್ನು ನಾನು ಬದಲಿಸುತ್ತೇನೆ....ಕಾಸಿ ಬದಲು ಕೋಸಿ ಎಂದು ಬದಲಿಸಿ...ಕಾಸಿ ಎನ್ನುವ ಪದ ಹುಟ್ಟಿದ್ದು ಕೋಸಿ ನದಿಯ ಹೆಸರಿನಿಂದ. ಮೊಗಲರು ಬಂದು ಅದನ್ನು ಕಾಸಿ ಮಾಡಿದರು....ಆದುದರಿಂದ ನೀವಿನ್ನು ಉತ್ತರ ಪ್ರದೇಶದಲ್ಲಿರುವವರೆಗೆ ಕೋಸಿ ಎಂದೇ ಗುರುತಿಸಲ್ಪಡಬೇಕು....’’ ಆದಿತ್ಯನಾಥ್ ಆದೇಶಿಸಿದರು.
ಕಾಸಿ ತಲೆ ಬಾಗಿದ. ‘‘ಸಾರ್...ಉತ್ತರ ಪ್ರದೇಶದಲ್ಲಿ ಎಲ್ಲವೂ ಬದಲಾಗುತ್ತಿದೆ. ಆದರೆ ಬಡವರ ಸಂಖ್ಯೆ ಜಾಸ್ತಿಯಾಗುತ್ತಿದೆ....’’ ಆದಿತ್ಯನಾಥ್ ಗಂಭೀರವಾಗಿ ಯೋಚಿಸಿ ಉತ್ತರಿಸಿದರು ‘‘ಬಡವರ ಏಳಿಗೆಗಾಗಿ ಈಗಾಗಲೇ ನಾವು ಕಾರ್ಯಕ್ರಮ ಹಾಕಿಕೊಂಡಿದ್ದೇವೆ....ಅಧಿಕಾರಿಗಳ ಸಭೆಯನ್ನು ಕರೆದಿದ್ದೀನೆ...ಶೀಘ್ರದಲ್ಲೇ ಉತ್ತರ ಪ್ರದೇಶದಲ್ಲಿ ಬಡವರೇ ಇಲ್ಲವಾಗುತ್ತಾರೆ...’’
‘‘ಅದು ಹೇಗೆ ಸಾರ್?’’ ಕಾಸಿ ರೋಮಾಂಚನಗೊಂಡು ಕೇಳಿದ.
‘‘ಈಗಾಗಲೇ ರಾಜ್ಯದಲ್ಲಿರುವ ಎಲ್ಲ ಡಿಕ್ಷನರಿಗಳಿಂದ ‘ಬಡವರು’ ಎನ್ನುವ ಪದಗಳನ್ನು ಅಳಿಸಲಿದ್ದೇವೆ. ಯಾವುದೇ ಪತ್ರಿಕೆಗಳು, ಇಲಾಖೆಗಳು ಬಡವರು ಎನ್ನುವ ಪದವನ್ನು ಬಳಸುವ ಹಾಗೆಯೇ ಇಲ್ಲ. ಬಡವರು ಎನ್ನುವ ಪದ ಹುಟ್ಟಿ ಬಂದದ್ದೇ ಮೊಗಲರಿಂದ. ಭಾರತದಲ್ಲಿ ಮೊದಲು ಶ್ರೀಮಂತರಷ್ಟೇ ಇದ್ದರು. ಬಡವ ಎನ್ನುವ ಪದವೇ ಇರಲಿಲ್ಲ. ಇದರಿಂದಾಗಿ ಭಾರತ ಸುಖ ಸಂಪತ್ತಿನಿಂದ ಕಂಗೊಳಿಸುತ್ತಾ ಇದ್ದರು. ಯಾವಾಗ ಮೊಗಲರ ಜೊತೆಗೆ ಬಡವರು ಎನ್ನುವ ಶಬ್ದ ಬಂತೋ ಭಾರತದಲ್ಲೂ ಬಡವರು ಹುಟ್ಟಿದರು. ನನ್ನ ಆಡಳಿತದಲ್ಲಿ ಬಡವರು ಎನ್ನುವ ಶಬ್ದವನ್ನೇ ತೆಗೆದುಹಾಕುವುದರಿಂದ ಮತ್ತು ಅವರನ್ನೆಲ್ಲ ಶ್ರೀಮಂತರು ಎಂದು ಕರೆಯುವುದರಿಂದ ರಾಜ್ಯದಲ್ಲಿ ಬಡವರೇ ಇಲ್ಲವಾಗುತ್ತಾರೆ....’’ ಎನ್ನುತ್ತಾ ತನ್ನ ಬೋಳು ತಲೆಯನ್ನೊಮ್ಮೆ ಸವರಿಕೊಂಡರು. ‘‘ಸಾರ್...ಇನ್ನೇನೇನು ಹೆಸರುಗಳನ್ನು ಬದಲಿಸಲಿದ್ದೀರಿ?’’ ಕಾಸಿ ಅಲ್ಲಲ್ಲ ಕೋಸಿ ಆದಿತ್ಯನಾಥರಲ್ಲಿ ಕೇಳಿದ.
‘‘ಆಹಾರ ತಿಂಡಿಗಳ ಹೆಸರುಗಳನ್ನೂ ಬದಲಾಯಿಸಲಿದ್ದೇವೆ.... ಮೊಗಲರ ಕಾಲದ ಎಲ್ಲ ತಿಂಡಿಗಳ ಹೆಸರುಗಳೂ ಬದಲಾಗಲಿದೆ.....’’ ಆದಿತ್ಯನಾಥರು ಹೇಳಿದರು.
‘‘ಸಾರ್ ಬಿಜೆಪಿಯ ಒಳಗೆ ಕೆಲವು ಮುಸ್ಲಿಮ್ ನಾಯಕರಿದ್ದಾರೆ...ನಖ್ವಿ....ಶಾನವಾಝ್...ಇವರ ಹೆಸರನ್ನು ಏನು ಮಾಡುತ್ತೀರಿ?’’
‘‘ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದು ಕೇಂದ್ರಕ್ಕೆ ಸಂಬಂಧಿಸಿದ್ದು. ರಾಜ್ಯದ ವ್ಯಾಪ್ತಿಯಲ್ಲಿ ತುಸು ಕಷ್ಟ. ಆದರೂ ರಾಜ್ಯದೊಳಗಿರುವ ಬಿಜೆಪಿಯೊಳಗಿನ ಎಲ್ಲ ಮುಸ್ಲಿಮ್ ನಾಯಕರ ಹೆಸರುಗಳನ್ನು ಬದಲಿಸುವ ಯೋಜನೆಯಿದೆ....ಆ ಮೂಲಕ ಮೊಗಲರಿಂದ ಅವರಿಗಾದ ಅನ್ಯಾಯವನ್ನು ಸರಿಪಡಿಸಲಿದ್ದೇವೆ....ಕೇಂದ್ರದಲ್ಲಿ ಶಾನವಾಝ್, ನಖ್ವಿ ಮೊದಲಾದವರಿಗೆ ಯಾವ ಹೆಸರಿಡಬಹುದು ಎನ್ನುವುದರ ಕುರಿತಂತೆ ಮುಂದಿನ ಲೋಕಸಭೆಗೆ ಮೊದಲು ರಾಷ್ಟ್ರ ಕಾರ್ಯಕಾರಿಣಿ ಸಭೆಯಲ್ಲಿ ಒಂದು ಸ್ಪರ್ಧೆ ಏರ್ಪಡಿಸಲಿದ್ದೇವೆ....ಅದರಲ್ಲಿ ಆಯ್ಕೆ ಯಾದ ಹೆಸರನ್ನು ಇಡುತ್ತೇವೆ....’’ ಆದಿತ್ಯನಾಥ್ ಹೇಳಿದರು.
‘‘ಸಾರ್...ಅಮಿತ್ ಶಾ ಅವರ ಹೆಸರಲ್ಲಿ ಶಾ ಎನ್ನುವುದು ಮೊಗಲರ ದಾಳಿಯಂತೆ ಕಾಣುತ್ತದೆ. ಇದನ್ನು ಬದಲಿಸುವ ಯೋಜನೆ ಇದೆಯೆ?’’ ಕಾಸಿ ಕೇಳಿದ.
‘‘ಅಮಿತ್ ಶಾ ಬದಲಿಗೆ ಅಮಿತ್ ಚಾ ಎಂದು ಬದಲಿಸಿದರೆ ಮೋದಿ ಅವರು ಚಾ ಮಾರಾಟ ಮಾಡುತ್ತಿದ್ದಾಗ ಅವರೂ ಜೊತೆಗಿದ್ದದ್ದು ಸಾಬೀತಾಗುತ್ತದೆ. ಆದುದರಿಂದ ಶಾ ವನ್ನು ಚಾ ಎಂದು ಬದಲಿಸಬೇಕು ಎನ್ನುವ ಕುರಿತಂತೆ ನಾನು ಮೋದಿಯವರಿಗೆ ಪತ್ರ ಬರೆಯಲಿದ್ದೇನೆ....’’
‘‘ಸಾರ್...ಈ ಹೆಸರು ಬದಲಿಸುವುದನ್ನು ಹೊರತು ಪಡಿಸಿ ನಿಮ್ಮಲ್ಲಿ ಯೋಜನೆಗಳು ಏನೂ ಇಲ್ಲವೆ?’’ ಕಾಸಿ ಯಾನೆ ತಾತ್ಕಾಲಿಕ ಕೋಸಿ ಕೇಳಿದ.
‘‘ಬಣ್ಣ ಬದಲಿಸುವುದು ಕೂಡ ನಮ್ಮ ಮಹತ್ತರ ಯೋಜನೆಗಳಲ್ಲಿ ಒಂದು. ಈಗಾಗಲೇ ಹಲವು ಪ್ರತಿಮೆಗಳ ಮತ್ತು ಗೋಡೆಗಳ ಬಣ್ಣಗಳನ್ನು ಕೇಸರಿ ಬಣ್ಣಕ್ಕೆ ಬದಲಿಸಲಾಗಿದೆ...ಈ ಬದಲಾವಣೆಗಾಗಿಯೇ ಲಂಡನ್ ಮತ್ತು ಇತರ ದೇಶಗಳಿಂದ ನಾವು ಸಾಲವನ್ನು ಕೇಳುತ್ತಿದ್ದೇವೆ....ಸಾಧಾರಣವಾಗಿ ಪಟೇಲ್ ಪ್ರತಿಮೆಗೆ 3,000 ಕೋಟಿ ರೂಪಾಯಿ ವೆಚ್ಚವಾದರೆ ನಾವು ಈ ಹೆಸರು ಬದಲಾವಣೆ ಮತ್ತು ಬಣ್ಣ ಬದಲಾವಣೆಗಳಿಗಾಗಿ ಅದರ ದುಪ್ಪಟ್ಟು ವೆಚ್ಚ ಮಾಡಬೇಕೆಂದಿದ್ದೇವೆ....ಹಾಗೆಯೇ ಯಾರಾದರೂ ಮೊಗಲರ ಕಾಲದ ಹೆಸರುಗಳನ್ನು ಹೊಂದಿದ್ದರೆ ಅವರುಗಳ ಹೆಸರುಗಳನ್ನು ಬದಲಾಯಿಸಲು ಸರಕಾರ ಧನ ಸಹಾಯ ಮಾಡಲಿದೆ....’’ ಆದಿತ್ಯನಾಥ್ ತಮ್ಮ ಯೋಜನೆಗಳನ್ನು ವಿವರಿಸಿದರು.
‘‘ಸಾರ್...ಉಳಿದಂತೆ....ನಿಮ್ಮ ಆಡಳಿತದಲ್ಲಿ ಬೇರೆ....’’ ಕಾಸಿ ಯಾನೆ ಕೋಸಿ ಮತ್ತೆ ಕೇಳಿದ.
‘‘ಈ ಹೆಸರು ಬದಲಾವಣೆಗಳಿಗಾಗಿಯೇ ಒಂದು ಖಾತೆಯನ್ನು ನಿರ್ಮಾಣ ಮಾಡಲಿದ್ದೇವೆ. ಗಿಡಗಳ ಹೆಸರು, ಹಣ್ಣುಗಳ ಹೆಸರು, ಹೂವುಗಳ ಹೆಸರು, ತಿಂಡಿಗಳ ಹೆಸರು...ದವಸ ಧಾನ್ಯಗಳ ಹೆಸರು ಎಲ್ಲದರಲ್ಲೂ ಬದಲಾವಣೆ ತರಲಿದ್ದೇವೆ....ಅದಕ್ಕಾಗಿ ಭಾರಿ ಹಣವನ್ನು ಹೂಡಲಿದ್ದೇವೆ....ನನ್ನ ಆಡಳಿತದಲ್ಲಿ ಎಲ್ಲವೂ ಬದಲಾವಣೆಯಾಗಬೇಕು ಎನ್ನುವುದು ಆಸೆ...’’ ಆದಿತ್ಯನಾಥ್ ವಿವರಿಸಿದರು.
‘‘ಸಾರ್...ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಆಗ್ತಾ ಇದೆ....’’ ಕಾಸಿ ವಿಷಯಾಂತರ ಮಾಡಲು ಯತ್ನಿಸಿದ.
‘‘ಟಿಪ್ಪು ಮತ್ತು ಜಯಂತಿ ಒಟ್ಟಿಗೆ ಇರುವುದು ಸರಿಯಲ್ಲ. ಜಯಂತಿಗೆ ಮಾಡುವ ಅವಮಾನ...ಇದು ಲವ್ ಜಿಹಾದ್....’’ ಆದಿತ್ಯನಾಥ್ ಸಿಟ್ಟಾದರು.
‘‘ಸಾರ್...ಜಯಂತಿ ಎಂದರೆ ಹುಟ್ಟು ಹಬ್ಬ....’’ ಕಾಸಿ ವಿವರಿಸಲು ಯತ್ನಿಸಿದ.
‘‘ಅದೇನೇ ಇರಲಿ. ಅದು ಹಿಂದೂ ಮಹಿಳೆಯ ಹೆಸರು. ಒಬ್ಬ ಮುಸ್ಲಿಮ್ ಅರಸನ ಜೊತೆಗೆ ಹಿಂದೂ ಮಹಿಳೆಯ ಹೆಸರನ್ನು ಸೇರಿಸುವುದು ಇಡೀ ದೇಶಕ್ಕೆ ಕಳಂಕವಾಗಿದೆ...ಇದನ್ನು ನಾನು ವಿರೋಧಿಸುತ್ತೇನೆ....ಟಿಪ್ಪು ಜೊತೆಗೆ ಜಯಂತಿ ಇರಕೂಡದು...’’ ಆದಿತ್ಯನಾಥ್ ತನ್ನ ಬೋಳು ತಲೆಗೆ ಬಡಿದು ಹೇಳಿದರು.
‘‘ಸಾರ್...ಟಿಪ್ಪು ಜಯಂತಿಯನ್ನು ನೀವು ವಿರೋಧಿಸುತ್ತೀರಿ ಅಂತಾಯಿತು....’’ ಕಾಸಿ ಕೇಳಿದ.
‘‘ಜಯಂತಿಯ ಜೊತೆಗೆ ಟಿಪ್ಪು ಇರಬೇಕಾದರೆ ಆತನ ಹೆಸರನ್ನು ಬದಲಿಸಬೇಕು....ಟಿಪ್ಪುವಿನ ಹೆಸರು ಬದಲಾಯಿಸಿದರೆ ಜಯಂತಿಯೊಂದಿಗೆ ಇರುವುದಕ್ಕೆ ಯಾವ ಅಡ್ಡಿಯೂ ಇಲ್ಲ....’’ ಆದಿತ್ಯನಾಥ್ ಪರಿಹಾರ ತಿಳಿಸಿದರು.
‘‘ಸರಿ ಸಾರ್...ನಾನಿದನ್ನು ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲುಪಿಸುತ್ತೇನೆ...’’ ಎಂದವನೇ ಎಂಜಲು ಕಾಸಿ ಬೆಂಗಳೂರಿಗೆ ಹಾರಿದ. ನೇರ ಕುಮಾರಸ್ವಾಮಿಯವರ ನಿವಾಸಕ್ಕೆ ಹೋದವನೇ ಬಾಗಿಲು ತಟ್ಟಿದಾಗ ಹೊರಗಿನಿಂದ ಕುಮಾರಸ್ವಾಮಿಯ ಧ್ವನಿ ‘‘ನೋಡೀ ಬ್ರದರ್....ದಯವಿಟ್ಟು ಈ ಟಿಪ್ಪು ಜಯಂತಿಗೆ ನಾನು ಬರೋ ಹಾಗಿಲ್ಲ. ಬೇಕಾದರೆ ಮುಂದಿನ ವರ್ಷ ಟಿಪ್ಪು ಮತ್ತು ಮೀರ್ ಸಾದಿಕ್ ಜಯಂತಿ ಎರಡನ್ನು ಒಟ್ಟಿಗೆ ಆಚರಿಸೋಣ. ಆಗ ನಾನು ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಆಚರಿಸಬಹುದು...’’ ಉತ್ತರ ಕೇಳಿದ್ದೇ...ಕಾಸಿ ಪೂರ್ಣಯ್ಯನನ್ನು ಕಂಡವನಂತೆ ಬೆಚ್ಚಿ ಅಲ್ಲಿಂದ ಓಡಿದ.