ಭವ್ಯ ಭ್ರಾಂತಿಯ ಬಲೆಗೆ ಸಿಲುಕಿ ಕುಸಿಯುತ್ತಿರುವ ಆರ್ಥಿಕತೆ

Update: 2018-11-20 18:49 GMT

ಹಲವಾರು ಪ್ರತಿಗಾಮಿ ಆರ್ಥಿಕ ನೀತಿಗಳ ಒಟ್ಟು ಪರಿಣಾಮವು ಆಂತರಿಕ ಉಳಿತಾಯ ಮತ್ತು ಹೂಡಿಕೆಗಳಲ್ಲಿ ಕುಸಿತ, ವಿತ್ತೀಯ ಒತ್ತಡ, ಚಾಲ್ತಿ ಖಾತೆಯಲ್ಲಿ ಕೊರತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗಗಳ ಸೃಷ್ಟಿಯಲ್ಲಿ ಕುಸಿತದಲ್ಲಿ ಪ್ರತಿಫಲನಗೊಂಡಿದೆ. ಇಂತಹ ಗಂಭೀರ ಬೆಳವಣಿಗೆಯಿಂದಾಗಿ ಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಹಾಲಿ ಕೇಂದ್ರ ಸರಕಾರದ ಆತ್ಮ ವಿಶ್ವಾಸ ಕುಸಿದಿರುವಂತೆ ಕಾಣುತ್ತಿದೆ. ಹೀಗಾಗಿ ತನ್ನ ಈ ಬಿಕ್ಕಟ್ಟಿನಿಂದ ಹೊರಬರಲು ಕೇಂದ್ರ ಸರಕಾರವು ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆಯೇ?


ಭಾರತ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಳ (ಆರ್‌ಬಿಐ) ನಡುವೆ ಇತ್ತೀಚೆಗೆ ತಾರಕಕ್ಕೆ ಮುಟ್ಟಿರುವ ಘರ್ಷಣೆಯು ದೇಶದ ಹಣಕಾಸು ವ್ಯವಸ್ಥೆಯ ನಿರ್ವಹಣೆಗೆ ಸಂಬಂಧಪಟ್ಟಂತೆ ಮಾತ್ರವಲ್ಲದೆ ಇಡೀ ದೇಶದ ಆರ್ಥಿಕತೆಯ ಮೇಲೆಯೇ ದುಷ್ಪರಿಣಾಮ ಬೀರಬಲ್ಲಂಥ ಹಲವಾರು ಪ್ರತಿಗಾಮಿ ನೀತಿಗಳ ಜಾರಿಗೆ ಎಡೆಮಾಡಿಕೊಟ್ಟಿದೆ. ರಿಸರ್ವ್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಆದ ವಿರಲ್ ಆಚಾರ್ಯ ಅವರು ಮಾಡಿದ ಇತ್ತೀಚಿನ ವಿವಾದಾಸ್ಪದ ಭಾಷಣವು ದೇಶದ ಆರ್ಥಿಕತೆಯ ಬಗ್ಗೆ ಆರ್‌ಬಿಐ ಯಾವ ಬಗೆಯ ದೂರಗಾಮಿ ದೃಷ್ಟಿಕೋನವನ್ನು ತಳೆದಿದೆಯೆಂಬುದನ್ನೂ ಮತ್ತು ಸರಕಾರದ ಹಿಡಿತದಿಂದ ದೂರವಿರುವ ಮೂಲಕ ರಿಸರ್ವ್ ಬ್ಯಾಂಕಿಗೆ ಬೇಕಿರುವ ಸ್ವಾಯತ್ತತೆಯ ಬಗ್ಗೆ ಆರ್‌ಬಿಐ ಪಂಡಿತರು ಹೊಂದಿರುವ ಧೋರಣೆಯನ್ನೂ ಸ್ಪಷ್ಟಪಡಿಸುತ್ತದೆ. ಆದರೆ ಅವೆರಡೂ ನಿಲುವುಗಳಿಗೂ ದೃಢವಾದ ಅಡಿಪಾಯವೇನಿಲ್ಲ. ಮೊದಲನೆಯದಾಗಿ ಆರ್‌ಬಿಐ ಪ್ರಧಾನವಾಗಿ ಹಣದುಬ್ಬರದಂಥ ಅಲ್ಪಕಾಲೀನ ಸಮಸ್ಯೆಯ ಬಗ್ಗೆ ಕಾಳಜಿ ತೋರುತ್ತದೆಯೇ ವಿನಃ ದೀರ್ಘಕಾಲೀನ ಅಭಿವೃದ್ಧಿ ಸಂಬಂಧಿ ಸಂಗತಿಗಳ ಬಗ್ಗೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಎರಡನೆಯದಾಗಿ, ರಿಸರ್ವ್ ಬ್ಯಾಂಕ್ ಪದೇಪದೇ ಒತ್ತಿ ಹೇಳುವ ಸ್ವಾತಂತ್ರ್ಯ/ಸ್ವಾಯತ್ತತೆಯ ಕಾಳಜಿಗಳು ಪ್ರಧಾನವಾಗಿ ಸರಕಾರದಿಂದ ಸ್ವಾತಂತ್ರ್ಯವನ್ನು ಆಗ್ರಹಿಸುತ್ತದೆಯೇ ವಿನಃ ಆರ್ಥಿಕ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಲ್ಲಿ ಕೀಲಕ ಪ್ರಭಾವ ಬೀರುವ ಮಾರುಕಟ್ಟೆ ಅಥವಾ ಕಾರ್ಪೊರೇಟ್ ಶಕ್ತಿಗಳಿಂದಲ್ಲ (ಅಥವಾ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಹೇಳುವಂತೆ ಮಾರುಕಟ್ಟೆಯ ಆಕ್ರೋಶದಿಂದಲ್ಲ). ಸಾಮಾಜಿಕ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡಾಗ ಸ್ವಾತಂತ್ರ್ಯವೆಂಬುದು ಯಾವುದೇ ಅಂಕುಶವಿಲ್ಲದ ಸಂಪೂರ್ಣ ಸ್ವಾತಂತ್ರ್ಯವಾಗಲು ಸಾಧ್ಯವಿಲ್ಲ.

 ಆರ್‌ಬಿಐ ಒಳಗಡೆ ಅಧಿಕಾರಶಾಹಿಯ ಹಿಡಿತ ಹೆಚ್ಚಾಗುತ್ತಿದ್ದಂತೆ ಹೆಚ್ಚೆಚ್ಚು ವರ್ಗಗಳನ್ನು ಹಣಕಾಸು ವ್ಯವಸ್ಥೆಯಲ್ಲಿ ಒಳಗೊಳ್ಳುವಲ್ಲಿ ಅದು ನಿರಂತರವಾಗಿ ವಿಫಲವಾಗುತ್ತಿದೆಯೆಂಬ ವಿಷಯದಲ್ಲಿ ಹುರುಳಿಲ್ಲದೇ ಇಲ್ಲ. ಸಮಾಜದ ದುರ್ಬಲ ವರ್ಗಗಳಿಗೆ ಮತ್ತು ಆದ್ಯತಾ ವಲಯಗಳಿಗೆ ಸಾಲ ಸೌಲಭ್ಯವನ್ನು ಒದಗಿಸುವಂಥ ಸಾಮಾಜಿಕ ಫಲಾನುಭವಿ ಬ್ಯಾಂಕಿಂಗ್ ಕಾರ್ಯಕ್ರಮಗಳನ್ನು ಯಾವುದೇ ಬಗೆಯ ಸಾಮಾಜಿಕ ಉತ್ತರದಾಯಿತ್ವವಿಲ್ಲದಂತೆ ಬೇಕಾಬಿಟ್ಟಿಯಾಗಿ ಜಾರಿ ಮಾಡಲಾಗುತ್ತಿದೆ. ವಾಸ್ತವವಾಗಿ 1990ರಿಂದಲೂ ಆರ್‌ಬಿಐ ನವಉದಾರವಾದಿ ಚೌಕಟ್ಟಿಗೆ ಬದ್ಧವಾಗಿ ತನ್ನ ನೀತಿ-ನಿಯಮಗಳನ್ನು ಹೇರುತ್ತಾ ಬಂದಿದೆ. ಇದರಿಂದಾಗಿ ವಿತ್ತೀಯ ಸದೃಢೀಕರಣ ಸಾಧ್ಯವಾಗಿದೆಯಾದರೂ ಅದಕ್ಕೆ ಕಾರಣ ಸಾರ್ವಜನಿಕ ವೆಚ್ಚದಲ್ಲಿ ಹಿಡಿತ ಮತ್ತು ನೇರ ತೆರಿಗೆಯಲ್ಲಿ ಕಡಿತದಂತಹ ಕ್ರಮಗಳು. ಇದರಿಂದಾಗಿ ಸಾಮಾಜಿಕ/ಅಭಿವೃದ್ಧಿ ಸಂಬಂಧಿ ವೆಚ್ಚಗಳು ಕಡಿಮೆಯಾಗಿರುವುದಲ್ಲದೆ ಅದರ ಪರಿಣಾಮವಾಗಿ ಅಸಮಾನತೆಯು, ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ, ಹೆಚ್ಚುತ್ತಾ ಸಾಗಿದೆ. ಸರಕಾರದ ಈ ಬಗೆಯ ಆಕ್ರಮಣಶೀಲ ವಿತ್ತೀಯ ಸದೃಢೀಕರಣದ ನೀತಿಗಳು ಆರ್‌ಬಿಐನ ಸಮ್ಮತಿ ಮತ್ತು ಸಹಕಾರಗಳಿಲ್ಲದೆ ನಡೆಯಲು ಸಾಧ್ಯವಿಲ್ಲ.

2003ರ ವಿತ್ತೀಯ ಸುಧಾರಣೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ ಮತ್ತು ಹಣಕಾಸು ನೀತಿ ಚೌಕಟ್ಟು ಒಪ್ಪಂದಗಳೆರಡರ ಬಗ್ಗೆಯೂ ಭಾರತ ಸರಕಾರ ಮತ್ತು ಆರ್‌ಬಿಐ ನಡುವೆ ಒಡಂಬಡಿಕೆಯಾಗಿರುವುದು ಮಾತ್ರವಲ್ಲದೆ ಆರ್‌ಬಿಐ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅವನ್ನು ಆರ್‌ಬಿಐನ ನೀತಿಯಲ್ಲಿಯೇ ಅಂತರ್ಗತಗೊಳಿಸಲಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಭಾರತವು ಕಡಿಮೆ ತೆರಿಗೆ ಹಾಕುವ ಮತ್ತು ಕಡಿಮೆ ವೆಚ್ಚ ಮಾಡುವ ಹಾಗೂ ಇತರ ದೇಶಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಬ್ಯಾಂಕ್ ಸಾಲ ಹಾಗೂ ಒಟ್ಟಾರೆ ದೇಶಿಯ ಉತ್ಪನ್ನದ ಅನುಪಾತ ಹೊಂದಿರುವ ದೇಶವೆಂಬ ಇಮೇಜನ್ನು ಪಡೆದುಕೊಳ್ಳುವಂತಾಗಿದೆ. ಎನ್.ಕೆ. ಸಿಂಗ್ ಸಮಿತಿಯ ಶಿಫಾರಸಿನನ್ವಯ 2024-25ರ ವೇಳೆಗೆ ಈ ಅನುಪಾತವು ಶೇ.40ಕ್ಕೆ ಇಳಿಯುವುದರಿಂದ ಭಾರತದ ಈ ಇಮೇಜು ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಈ ಬಗೆಯ ಆಕ್ರಮಣಶೀಲ ವಿತ್ತೀಯ ಸದೃಢೀಕರಣವು ಕನಿಷ್ಠ ಸರಕಾರ, ಗರಿಷ್ಠ ಆಡಳಿತವೆಂಬ ಹಾಲಿ ಸರಕಾರದ ಸಿದ್ಧಾಂತಕ್ಕೆ ಪೂರಕವಾಗಿಯೇ ಇದೆ.

ಆದರೆ ಒಂದೆಡೆ ಇಂತಹ ಕಠಿಣ ಆರ್ಥಿಕ ನೀತಿ ನಿಯಮಗಳ ಪರಿಸರವಿರುವ ಸನ್ನಿವೇಶದಲ್ಲಿ ಎನ್‌ಡಿಎ ಸರಕಾರವು ನೋಟು ನಿಷೇಧ ಮತ್ತು ಜಿಎಸ್‌ಟಿ ವ್ಯವಸ್ಥೆಯ ಬಲವಂತದ ಅನುಷ್ಠಾನದಂತಹ ದುಸ್ಸಾಹಸದ ಕ್ರಮಗಳು ದೇಶದಲ್ಲಿ ಉದ್ಯೋಗ ಸೃಷ್ಟಿಯ ಬೆನ್ನುಮೂಳೆಯಂತಿರುವ ಸಣ್ಣ ಹಾಗೂ ಅಸಂಘಟಿತ ಕ್ಷೇತ್ರಗಳಲ್ಲಿ ಅಭದ್ರ ಆರ್ಥಿಕ ಸನ್ನಿವೇಶವನ್ನು ಸೃಷ್ಟಿಸಿತು. ಹಲವಾರು ಪ್ರತಿಗಾಮಿ ಆರ್ಥಿಕ ನೀತಿಗಳ ಒಟ್ಟು ಪರಿಣಾಮವು ಆಂತರಿಕ ಉಳಿತಾಯ ಮತ್ತು ಹೂಡಿಕೆಗಳಲ್ಲಿ ಕುಸಿತ, ವಿತ್ತೀಯ ಒತ್ತಡ, ಚಾಲ್ತಿ ಖಾತೆಯಲ್ಲಿ ಕೊರತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗಗಳ ಸೃಷ್ಟಿಯಲ್ಲಿ ಕುಸಿತದಲ್ಲಿ ಪ್ರತಿಫಲನಗೊಂಡಿದೆ. ಇಂತಹ ಗಂಭೀರ ಬೆಳವಣಿಗೆಯಿಂದಾಗಿ ಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಹಾಲಿ ಕೇಂದ್ರ ಸರಕಾರದ ಆತ್ಮ ವಿಶ್ವಾಸ ಕುಸಿದಿರುವಂತೆ ಕಾಣುತ್ತಿದೆ. ಹೀಗಾಗಿ ತನ್ನ ಈ ಬಿಕ್ಕಟ್ಟಿನಿಂದ ಹೊರಬರಲು ಕೇಂದ್ರ ಸರಕಾರವು ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆಯೇ?

ಹಣಕಾಸು ವ್ಯವಸ್ಥೆಯಲ್ಲಿನ ದುರ್ವ್ಯವಹಾರವನ್ನು ತಡೆಗಟ್ಟಿ ಹಣಕಾಸು ವ್ಯವಸ್ಥೆಯ ಸಾಮರ್ಥ್ಯವನ್ನು ಪುನರ್‌ಸ್ಥಾಪಿಸಲು ಆರ್‌ಬಿಐ ಹಲವಾರು ಕ್ರಮಗಳನ್ನು ಕೈಗೊಂಡಿದೆ. ವಿದ್ಯುತ್ ಕ್ಷೇತ್ರಕ್ಕೆ ಸಾಲವನ್ನು ನೀಡುವಾಗ ವಿಧಿಸುವ ಶರತ್ತುಗಳು, ಬ್ಯಾಂಕಿಂಗ್‌ಯೇತರ ಹಣಕಾಸು ಕಂಪೆನಿಗಳಿಗೆ (ಎನ್‌ಬಿಎಫ್‌ಸಿ) ನಗದು ಪೂರೈಕೆ ಮಾಡಲು ನಿಯಮಬದ್ಧ ಕಾನೂನು, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸಾಲ ನೀಡುವ ನಿಯಮಗಳು ಮತ್ತು ಹೊರಲು ಅಸಾಧ್ಯವಾದಷ್ಟು ಮರುಪಾವತಿ ಮಾಡಲಾಗದ ಸಾಲದ ಹೊರೆಯನ್ನು (ಎನ್‌ಪಿಎ) ಹೊತ್ತಿರುವ ಸಾರ್ವಜನಿಕ ಬ್ಯಾಂಕುಗಳಿಗೆ ಪರಿಣಾಮಕಾರಿ ತಿದ್ದುಪಡಿ ಕ್ರಮಗಳನ್ನು (ಪಿಸಿಎ) ಜಾರಿಗೆ ತರುವುದು ಅವುಗಳಲ್ಲಿ ಕೆಲವು. ಇದರೊಂದಿಗೆ ಬ್ಯಾಂಕಿನ ಬೋರ್ಡುಗಳ ಪಾತ್ರ, ಬ್ಯಾಂಕುಗಳಲ್ಲಿ ಅತಿರಿಕ್ತವಾಗಿ ಶೇಖರಣೆಗೊಂಡಿದೆ ಎಂದು ಭಾವಿಸಲಾಗುವ ಮೀಸಲು ನಿಧಿಯನ್ನು ವಿತ್ತೀಯ ಕೊರತೆಗಳನ್ನು ನೀಗಿಸಿಕೊಳ್ಳಲು ಬಳಸಿಕೊಳ್ಳುವುದು ಮತ್ತು ಬ್ಯಾಂಕುಗಳ ಅಪಾಯಕ್ಕೆ ಸಿಲುಕಿದೆ ಎಂದು ಅಂದಾಜಿಸಲಾಗಿರುವ ಸಾಲಗಳ ಮೊತ್ತದ ಶೇ.9ರಷ್ಟನ್ನು ಅತ್ಯಗತ್ಯ ಬಂಡವಾಳ ಮಿತಿಯನ್ನಾಗಿ ಉಳಿಸಿಕೊಂಡು ಉಳಿದ ನಿಧಿಯನ್ನು ವ್ಯವಹಾರಗಳಿಗೆ ಮುಕ್ತಗೊಳಿಸುವುದು. (ಆದರೆ ಬ್ಯಾಂಕಿಂಗ್ ವ್ಯವಸ್ಥೆಯ ನಿರ್ವಹಣೆಗಾಗಿ ಬೇಸಲ್ ಸಮಿತಿಯು ಈ ಸಂಬಂಧ ಮಾಡಿದ ಶಿಫಾರಸು ಶೇ.8 ಎಂದಾಗಿತ್ತು.)

ಆರ್‌ಬಿಐ ಮತ್ತು ಸರಕಾರದ ನಡುವೆ ನಡೆಯುತ್ತಿರುವ ಹಾಲಿ ಸಂಘರ್ಷದಲ್ಲಿ ಆರ್‌ಬಿಐ ಪ್ರತಿಯೊಂದು ಪ್ರಕರಣದ ತಥ್ಯತೆಗಳನ್ನು ಆಧರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳದೆ ಸಾರಾಸಗಟು ತೀರ್ಮಾನ ತೆಗೆದುಕೊಳ್ಳಬೇಕೆಂದು ಸರಕಾರವು ಆಗ್ರಹಿಸುತ್ತಿದೆ. ಇದು ಸರಕಾರದ ನೀತಿಯ ಪೊಳ್ಳುತನವನ್ನು ಮತ್ತು ಕೇಂದ್ರೀಯ ಬ್ಯಾಂಕಿನ ಸ್ವಾಯತ್ತತೆಯ ಬಗ್ಗೆ ಕಿಂಚಿತ್ತೂ ಗೌರವ ತೋರದ ಸರಕಾರದ ದುರಹಂಕಾರವನ್ನು ಬಯಲುಮಾಡಿದೆ. ಹಾಗೆ ನೋಡಿದರೆ ನಗದಿನ ಚಲಾವಣೆಯ ವಿಸ್ತರಣೆಗೆ ಮತ್ತು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸಾಲಬಂಡವಾಳವನ್ನು ದೊರಕಿಸಲು ಬೇರೆ ಮಾರ್ಗವೇ ಇಲ್ಲವೆಂದೇನಿಲ್ಲ. ಆದರೂ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ 59 ನಿಮಿಷದೊಳಗೆ ಒಂದು ಕೋಟಿ ಸಾಲ ಸೌಲಭ್ಯ ನೀಡುವ ಘೋಷಣೆ ಮಾತ್ರ ಅತ್ಯಂತ ದುರಹಂಕಾರದಿಂದ ಕೂಡಿದ್ದೇ ಆಗಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಈ ಹಿಂದೆ ಸರಕಾರ ಮಾಡಿದ್ದ ಮಧ್ಯಪ್ರವೇಶಗಳು ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದ್ದವು ಎಂಬುದನ್ನು ಮರೆಯಬಾರದು ಮತ್ತು ಮರೆಯಲಾಗದು. ಇನ್ನು ಆರ್‌ಬಿಐನ ನಿರ್ದೇಶಕರ ಬೋರ್ಡಿನ ವಿಷಯಕ್ಕೆ ಬರುವುದಾದರೆ ಅದು ಕೇವಲ ಸಲಹಾ ಸಮಿತಿಯೇ ಹೊರತು ಕಂಪೆನಿ ಕಾಯ್ದೆಯಡಿ ರಚಿತವಾಗಿರುವ ಬೋರ್ಡಿನ ಅಧಿಕಾರವನ್ನೇನೂ ಹೊಂದಿಲ್ಲ.

ಅದು ಹಣಕಾಸು ಮತ್ತು ಬ್ಯಾಂಕಿಂಗ್ ನೀತಿಗಳನ್ನು ನಿರ್ದೇಶನ ಮಾಡಲು ಸಾಧ್ಯವಿಲ್ಲ ಮತ್ತು ತೆಗೆದುಕೊಂಡ ನಿರ್ಧಾರಗಳಲ್ಲಿ ತಾಂತ್ರಿಕ ನೆಲೆಯಲ್ಲೂ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಇನ್ನು ಆರ್‌ಬಿಐ ಉಳಿಸಿಕೊಳ್ಳಬಹುದಾದ ಮೀಸಲು ನಿಧಿಯ ವಿಷಯಕ್ಕೆ ಬರುವುದಾದರೆ ಕನಿಷ್ಠ ಮೂರು ಸಮಿತಿಗಳು ಈ ವಿಷಯವನ್ನು ಕೂಲಂಕಷವಾಗಿ ಪರಾಂಬರಿಸಿ ಹಲವಾರು ಅನಿರೀಕ್ಷಿತ ಬೆಳವಣಿಗೆ ಮತ್ತು ಅಪಾಯಗಳನ್ನು ಎದುರಿಸುವ ಸಲುವಾಗಿ ಆರ್‌ಬಿಐನ ಒಟ್ಟಾರೆ ಆಸ್ತಿಯ ಶೇ.12ರಷ್ಟನ್ನು ಮೀಸಲು ನಿಧಿಯನ್ನಾಗಿ ಉಳಿಸಿಕೊಳ್ಳಬೇಕೆಂಬುದು ಶಿಫಾರಸು ಮಾಡಿವೆ. ಹೀಗಾಗಿ ಈ ಆಪತ್ಕಾಲೀನ ಮೀಸಲು ನಿಧಿಯ ತಥ್ಯತೆಯನ್ನು ಗೌರವಿಸಲೇಬೇಕು. ಆದರೂ, ಅತ್ಯಗತ್ಯ ಬಂಡವಾಳ ಮೀಸಲು ನಿಧಿಯ ವಿಷಯದಲ್ಲಿ ಆರ್‌ಬಿಐ ಸ್ವಲ್ಪಸಡಿಲತೆಯನ್ನು ತೋರಬಹುದಾಗಿದೆ. ವಾಸ್ತವವಾಗಿ, ಸರಕಾರದ ಚಿಂತನೆಯಲ್ಲಿ ಅಡಕವಾಗಿರುವ ಜನರ ಕಲ್ಯಾಣದ ತತ್ವಗಳನ್ನು ರಿಸರ್ವ್ ಬ್ಯಾಂಕ್ ಸಹ ಮೈಗೂಡಿಸಿಕೊಳ್ಳಬೇಕಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News