ಗುರು ನಾನಕ್ ಜನ್ಮ ದಿನಾಚರಣೆ: ಭಾರೀ ಸಂಖ್ಯೆಯಲ್ಲಿ ಪಾಕಿಸ್ತಾನಕ್ಕೆ ಸಿಖ್ ಯಾತ್ರಿಗಳು

Update: 2018-11-26 17:08 GMT

ಇಸ್ಲಾಮಾಬಾದ್, ನ. 26: ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್‌ರ 549ನೇ ಜನ್ಮ ದಿನಾಚರಣೆಯನ್ನು ಆಚರಿಸುವುದಕ್ಕಾಗಿ ಪಾಕಿಸ್ತಾನ ಪಂಜಾಬ್ ರಾಜ್ಯದ ಗುರುದ್ವಾರ ಪೂಂಜಾ ಸಾಹಿಬ್‌ಗೆ ಸೋಮವಾರ ಜಗತ್ತಿನ ಎಲ್ಲೆಡೆಯಿಂದ ಸಿಖ್ ಯಾತ್ರಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ಈ ಗುರುದ್ವಾರವನ್ನು ಸಿಖ್ ಧರ್ಮದ ಮೂರನೇ ಅತ್ಯಂತ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸಲಾಗಿದೆ.

ಭಾರತದಿಂದ 3,800ಕ್ಕೂ ಅಧಿಕ, ಬ್ರಿಟನ್‌ನಿಂದ 148 ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ 7 ಸಿಖ್ ಯಾತ್ರಿಗಳು ಇಲ್ಲಿಗೆ ಆಗಮಿಸಿದ್ದಾರೆ. ಅದೂ ಅಲ್ಲದೆ, ಪಾಕಿಸ್ತಾನದ ವಿವಿಧ ಭಾಗಗಳಿಂದ, ಅದರಲ್ಲೂ ಮುಖ್ಯವಾಗಿ ಕೇಂದ್ರ ಸರಕಾರದ ಆಡಳಿತಕ್ಕೆ ಒಳಪಟ್ಟಿರುವ ಬುಡಕಟ್ಟು ಪ್ರದೇಶಗಳು ಮತ್ತು ಸಿಂಧ್‌ನ ಒಳ ಪ್ರದೇಶಗಳಿಂದ ಸಾವಿರಾರು ಸಿಖ್ ಮತ್ತು ಹಿಂದೂ ಭಕ್ತರು ಗುರುದ್ವಾರ ಪೂಂಜಾ ಸಾಹಿಬ್‌ಗೆ ಬಂದಿದ್ದಾರೆ ಎಂದು ಪಾಕಿಸ್ತಾನ ‘ಡಾನ್ ನ್ಯೂಸ್’ ವರದಿ ಮಾಡಿದೆ.

ಗುರುದ್ವಾರದಲ್ಲಿ ಮತ್ತು ಅದರ ಸುತ್ತಮುತ್ತ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.

ಪಾಕ್ ಸರಕಾರವನ್ನು ಶ್ಲಾಘಿಸಿದ ಭಾರತೀಯ ನಿಯೋಗದ ಮುಖ್ಯಸ್ಥ

ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತೀಯ ಯಾತ್ರಿಕರ ನಿಯೋಗದ ನಾಯಕ ಮರ್ಜೀತ್ ಸಿಂಗ್, ಕರ್ತಾರ್‌ಪುರ ಕಾರಿಡಾರನ್ನು ತೆರೆಯುವಲ್ಲಿ ಪಾಕಿಸ್ತಾನ ಸರಕಾರ ವಹಿಸಿದ ಪಾತ್ರವನ್ನು ಶ್ಲಾಘಿಸಿದರು.

ಈ ಮೂಲಕ ಪಾಕಿಸ್ತಾನ ಸರಕಾರವು ಗಡಿಯ ಇಕ್ಕೆಲಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಸಿಖ್ಖರ ಹೃದಯಗಳನ್ನು ಗೆದ್ದಿದೆ ಎಂದು ಅವರು ಹೇಳಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಯಾತ್ರಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದರು.

ರೈಲ್ವೆ ಇಲಾಖೆಯ ವ್ಯವಸ್ಥೆ ಬಗ್ಗೆ ಮಹಿಳಾ ನಿಯೋಗ ಅತೃಪ್ತಿ

ಆದಾಗ್ಯೂ, ಸಿಖ್ ಯಾತ್ರಿಕರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ರೈಲ್ವೇ ಇಲಾಖೆಯು ವಿಫಲವಾಗಿದೆ ಎಂದು ಭಾರತೀಯ ಮಹಿಳಾ ತಂಡದ ಮುಖ್ಯಸ್ಥೆ ಮನಮೋಹನ್ ಕೌರ್ ಹೇಳಿದ್ದಾರೆ.

ಇದರಿಂದಾಗಿ, 113 ಯಾತ್ರಿಕರು ನಂಕಾನ ಸಾಹಿಬ್‌ನಲ್ಲೇ ಉಳಿಯುವಂತಾಯಿತು ಎಂದು ಅವರು ಆರೋಪಿಸಿದರು. ನಂಕಾನ ಸಾಹಿಬ್ ಕೂಡ ಪಾಕಿಸ್ತಾನದ ಪಂಜಾಬ್‌ನಲ್ಲೇ ಇದೆ.

ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ವಸಿತ ಟ್ರಸ್ಟ್ ಆಸ್ತಿ ಮಂಡಳಿ (ಇಟಿಪಿಬಿ)ಯ ಉಪ ಕಾರ್ಯದರ್ಶಿ ಇಮ್ರಾನ್ ಗೊಂಡಾಲ್, ರೈಲ್ವೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅವ್ಯವಸ್ಥೆ ತಲೆದೋರಿದೆ ಎಂದು ಹೇಳಿದರು.

ಯಾತ್ರಿಕರ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News