ಗಾಝಾ ಕದನ ವಿರಾಮ ಮಾತುಕತೆಗೆ ಗುಪ್ತಚರ ಮುಖ್ಯಸ್ಥರನ್ನು ಕಳುಹಿಸಿದ ಇಸ್ರೇಲ್
Update: 2025-01-12 17:16 GMT
ಜೆರುಸಲೇಂ: ಗಾಝಾದಲ್ಲಿ ಕದನ ವಿರಾಮ ಒಪ್ಪಂದ ಅಂತಿಮಗೊಳಿಸುವ ಬಗ್ಗೆ ಖತರ್ ನಲ್ಲಿ ನಡೆಯುವ ಮಾತುಕತೆಗೆ ಇಸ್ರೇಲ್ ಪ್ರತಿನಿಧಿಯಾಗಿ ಮೊಸಾದ್ ವಿದೇಶಿ ಗುಪ್ತಚರ ಸಂಸ್ಥೆಯ ನಿರ್ದೇಶಕರನ್ನು ಕಳುಹಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಮೋದಿಸಿರುವುದಾಗಿ ವರದಿಯಾಗಿದೆ.
ಖತರ್ ರಾಜಧಾನಿ ದೋಹಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುವ ಪರೋಕ್ಷ ಮಾತುಕತೆಯಲ್ಲಿ ಮೊಸಾದ್ ಮುಖ್ಯಸ್ಥ ಡೇವಿಡ್ ಬರ್ನಿಯಾ ಅವರ ನೇತೃತ್ವದ ಇಸ್ರೇಲ್‍ನ ಉನ್ನತ ಮಟ್ಟದ ನಿಯೋಗ ಪಾಲ್ಗೊಳ್ಳುವುದು ಖಚಿತವಾಗಿದೆ.
ಆಂತರಿಕ ಭದ್ರತಾ ಏಜೆನ್ಸಿ `ಶಿನ್ ಬೆಟ್'ನ ಮುಖ್ಯಸ್ಥ, ಮಿಲಿಟರಿ ಮತ್ತು ರಾಜಕೀಯ ಸಲಹೆಗಾರರು ನಿಯೋಗದಲ್ಲಿ ಇರುತ್ತಾರೆ ಎಂದು ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ.
2023ರ ಅಕ್ಟೋಬರ್ 7ರಿಂದ ಗಾಝಾದಲ್ಲಿ ಹಮಾಸ್-ಇಸ್ರೇಲ್ ನಡುವೆ ಮುಂದುವರಿದಿರುವ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಒಪ್ಪಂದಕ್ಕಾಗಿ ಅಮೆರಿಕ, ಖತರ್ ಮತ್ತು ಈಜಿಪ್ಟ್ ಪ್ರಯತ್ನ ನಡೆಸುತ್ತಿವೆ.