ಹನುಮಂತನ ಬಾಲ ನಮ್ಮ ಹಕ್ಕು, ನಮ್ಮ ಹೆಮ್ಮೆ....!
ಹನುಮಂತ ದಲಿತ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದೇ....ಹನುಮಂತನ ದೇವಾಲಯದಲ್ಲಿ ಅರ್ಚನೆ ಮಾಡುತ್ತಿರುವ ಅರ್ಚಕರೆಲ್ಲ ಕಂಗಾಲಾದರು. ಹಾಗಾದರೆ ಹನುಮಂತನ ಮೈಮೇಲೆ ಜನಿವಾರ ಹಾಕಿದವರು ಯಾರು? ಒಂದು ವೇಳೆ ಈ ಹೇಳಿಕೆಯನ್ನು ಮೈಸೂರಿನ ಭಗವಾನ್ ಹೇಳಿದ್ದರೆ, ಸನಾತನ ಸಂಸ್ಥೆಗೆ ಸುಪಾರಿಯನ್ನಾದರೂ ಕೊಡಬಹುದಿತ್ತು. ಯೋಗಿ ಆದಿತ್ಯನಾಥರು ಹೇಳಿದ್ದನ್ನು ಯಾವ ಬಾಯಿಯಿಂದ ಪ್ರತಿಭಟಿಸುವುದು ಎಂದು ಆಂಜನೇಯನ ದೇವಾಲಯದ ಬಾಗಿಲಲ್ಲೇ ನಿಂತು ಯೋಚಿಸತೊಡಗಿದರು.
ಯೋಗಿ ಆದಿತ್ಯನಾಥರು ಹೇಳಿದ್ದು ಎಂದ ಮೇಲೆ ಹನುಮಂತ ದಲಿತನೇ ಆಗಿರಬೇಕು ಎಂದು ಎಸ್. ಎಲ್. ಬೈಯ್ಯಿರಪ್ಪ, ಚೀಮೂ ಮೊದಲಾದವರೆಲ್ಲ ಹನುಮಂತನ ಕುರಿತಂತೆ ಸಂಶೋಧನೆಗೆ ತೊಡಗಿ, ಹನುಮಂತ ದಲಿತನೇ ಆಗಿದ್ದ, ಆದುದರಿಂದ, ರಾಮನ ಪಕ್ಷಕ್ಕೆ ಓಟು ಹಾಕುವುದು ದಲಿತರ ಕರ್ತವ್ಯ ಎಂದು ವಾದಿಸತೊಡಗಿದರು. ವಿವಿಧ ವಿದ್ವಾಂಸರು ಹನುಮಂತನ ಕುರಿತಂತೆ ಮಂಡಿಸಿದ ಸಂಶೋಧನೆ ಕೆಳಗಿನಂತಿದೆ.
ಎಸ್. ಎಲ್. ಬೈಯ್ಯಿರಪ್ಪ ಸಂ-ಶೋಧನೆ: ಹನುಮಂತ ದಲಿತ ಎನ್ನುವುದನ್ನು ನಿರೂಪಿಸಲು ರಾಮಾಯಣದಲ್ಲೇ ಉದಾಹರಣೆ ಬರುತ್ತದೆ. ಹನುಮಂತ ಲಂಕೆ ದಾಟಿ ಸೀತೆಯನ್ನು ಹುಡುಕುತ್ತಾ ಅಶೋಕವನಕ್ಕೆ ಹೋದ. ಅಲ್ಲಿ ಸೀತೆಯನ್ನು ನೋಡಿದವನೇ ‘‘ಅಮ್ಮಾ ಸೀತೆ, ರಾಮ ನಿಮಗಾಗಿ ಕಾಯುತ್ತಿದ್ದಾರೆ. ಬನ್ನಿ ನನ್ನ ಹೆಗಲ ಮೇಲೆ ಕುಳಿತುಕೊಳ್ಳಿ. ಹೋಗೋಣ....’’ ಎಂದ. ಆಗ ಸೀತೆ ‘‘ಹನುಮಂತ ನಾನು ನಿನ್ನ ಹೆಗಲ ಮೇಲೆ ಕುಳಿತುಕೊಳ್ಳುತ್ತಿದ್ದೆ. ಆದರೆ ನೀನು ದಲಿತ. ನಾನು ಮೇಲ್ ಜಾತಿ. ನಿನ್ನನ್ನು ಮುಟ್ಟುವಂತಿಲ್ಲ. ಆದುದರಿಂದ ರಾಮನೇ ಬರಬೇಕಾಗುತ್ತದೆ....’’ ಎಂದರು. ಇಲ್ಲವಾದರೆ ಸೀತೆ ಹನುಮಂತನ ಹೆಗಲ ಮೇಲೆ ಕುಳಿತು ಸುಲಭವಾಗಿ ರಾಮನ ಬಳಿಗೆ ಹೋಗುತ್ತಿದ್ದಳು. ಈ ಘಟನೆಯೇ ಹನುಮಂತ ದಲಿತ ಎನ್ನುವುದನ್ನು ತಿಳಿಸುತ್ತದೆ.
ಚೀಮೂ : ಆದಿತ್ಯನಾಥರು ಹೇಳಿದುದರಲ್ಲಿ ಸತ್ಯಾಂಶ ಇದೆ. ಅಯೋಧ್ಯೆಯಲ್ಲಿ ಅಲೆದಾಡುತ್ತಿದ್ದಾಗ ನಾನು ಒಂದು ಶಾಸನವನ್ನು ಓದಿದ ನೆನಪು. ಅದರಲ್ಲಿ ಆಂಜನೇಯನ ಜಾತಿ ಉಲ್ಲೇಖವಾಗಿದೆ. ಹನುಮಂತ ದಲಿತನಾಗಿದ್ದುದರಿಂದಲೇ ಅವನ ಜಾತಿಯವರು ನಗರ ಪ್ರದೇಶಗಳಲ್ಲಿ ಅಥವಾ ಊರಲ್ಲಿ ಇಲ್ಲದೇ ಕಾಡಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇಂದು ಕಾಡಿನಲ್ಲಿರುವ ಎಲ್ಲ ವಾನರರನ್ನು ದಲಿತರನ್ನಾಗಿ ಘೋಷಿಸಿ, ಪ್ರಾಣಿಗಳಲ್ಲಿ ಅವುಗಳಿಗೆ ಮೀಸಲಾತಿಯನ್ನು ನೀಡಬೇಕು. ಆದಿತ್ಯನಾಥರು ಈ ನಿಟ್ಟಿನಲ್ಲಿ ಹೆಜ್ಜೆಯನ್ನು ಇಡಬೇಕು.
ಸಿದ್ದಲಿಂಗಯ್ಯ: ಹನುಮಂತ ದಲಿತ ಎಂದುದರಿಂದ ದೇಶದಲ್ಲಿ ದಲಿತರ ಸ್ಥಾನಮಾನ ಹೆಚ್ಚಿದಂತಾಗಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ದಲಿತರ ಏಳಿಗೆಗಾಗಿ ಎಲ್ಲ ವಾನರರಿಗೆ ಉಚಿತ ಬಾಳೆಹಣ್ಣುಗಳನ್ನು ಒದಗಿಸುವ ಮೂಲಕ ಸರಕಾರ ಕೆಲಸ ಮಾಡಬೇಕು. ಹನುಮಂತನ ಹೆಸರಲ್ಲಿ ಪ್ರಾಧಿಕಾರವೊಂದನ್ನು ಮಾಡಿದರೆ ಅದರ ಅಧ್ಯಕ್ಷ ಸ್ಥಾನವನ್ನು ವಹಿಸಲು ನಾನು ಸಿದ್ಧ. ಹನುಮಾನ್ ಚಾಲೀಸ್ ದಲಿತರ ಹೋರಾಟ ಗೀತೆಯಾಗಬೇಕು. ಅದನ್ನು ಕನ್ನಡದಲ್ಲಿ ಅನುವಾದ ಮಾಡಿ ಸಕಲ ದಲಿತರಿಗೆ ತಲುಪಿಸಲಿದ್ದೇನೆ. ಹಾಗೆಯೇ ದಲಿತರಿಂದ ಕಿತ್ತುಕೊಂಡ ಅವರ ಬಾಲಗಳನ್ನು ಸರಕಾರ ವಾಪಸ್ ಮಾಡಬೇಕು. ನಮ್ಮ ಬಾಲ, ನಮ್ಮ ಹೆಮ್ಮೆ. ನಾವು ಕಳೆದುಕೊಂಡ ಬಾಲಕ್ಕಾಗಿ ಅಮಿತ್ ಶಾ ಅವರಿಗೆ ಮನವಿ ಮಾಡಲಿದ್ದೇನೆ.
ಪೇಜಾವರಶ್ರೀಗಳು : ಹನುಮಂತ ದಲಿತ ಎನ್ನುವುದರ ಬಗ್ಗೆ ನನ್ನ ಆಕ್ಷೇಪವಿದೆ. ಒಂದು ವೇಳೆ ದಲಿತ ಎನ್ನುವುದು ನಿಜವೇ ಆಗಿದ್ದರೆ ನಾವು ಹನುಮಂತನಿಗೆ ನ್ಯಾಯ ಕೊಡಬೇಕಾಗುತ್ತದೆ. ಮುಖ್ಯವಾಗಿ ಹನುಮಂತನನ್ನು ದೇವಸ್ಥಾನದಿಂದ ಹೊರಗಿಟ್ಟು ಅವರಿಗೆ ತಕ್ಕ ಗೌರವವನ್ನು ಕೊಡಬೇಕು. ಈ ನಿಟ್ಟಿನಲ್ಲಿ ನಾವು ಆಲೋಚಿಸಬೇಕಾಗುತ್ತದೆ. ಹಾಗೆಂದು ಹನುಮಂತನ ದೇವಸ್ಥಾನವನ್ನು ನಮಗೆ ಕೊಡಿ ಎಂದು ದಲಿತರು ಕೇಳುವುದು ಸರಿಯಲ್ಲ. ಅದು ಪಾಪ. ಮುಖ್ಯವಾಗಿ ದಲಿತರು ರಾಮನ ಪಕ್ಷಕ್ಕೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟು, ಅವರ ಓಟುಗಳನ್ನು ರಾಮನ ಪಕ್ಷಕ್ಕೆ ನೀಡಿದರೆ ಅದು ದಲಿತರು ಹನುಮಂತನಿಗೆ ನೀಡಿದ ಗೌರವವಾಗುತ್ತದೆ. ಒಂದು ವೇಳೆ ಹನುಮಂತ ದಲಿತನೇ ಆಗಿದ್ದರೆ ಬ್ರಾಹ್ಮಣರಾಗಿರುವ ನಮ್ಮ ಹೊಣೆಗಾರಿಕೆಗಳೇನು? ಅವನಿಗೆ ಪೂಜೆ ಮಾಡಿದ ಬಳಿಕ ನಾವು ಶುದ್ಧೀಕರಣಗೊಳ್ಳುವ ಅಗತ್ಯವಿದೆಯೇ? ಎನ್ನುವುದನ್ನು ಮುಂದಿನ ಧರ್ಮ ಸಂಸತ್ ಸಭೆಯಲ್ಲಿ ಚರ್ಚಿಸಲಾಗುವುದು. ಆದಿತ್ಯನಾಥರ ಮಾತುಗಳನ್ನು ಸಂಕೇತಾರ್ಥವಾಗಿ ತೆಗೆದುಕೊಳ್ಳಬೇಕು. ರಾಮನಿಗಾಗಿ ಹನುಮಂತ ಕಡಲು ಹಾರಿದ. ಹಾಗೆಯೇ ದಲಿತರು ರಾಮನ ಪಕ್ಷಕ್ಕಾಗಿ ಅರಬೀ ಸಮುದ್ರಕ್ಕೆ ಹಾರಬೇಕು ಎನ್ನುವುದು ಅವರ ಉದ್ದೇಶವಾಗಿರಬಹುದು. ಹಾಗೆಯೇ ಬ್ರಾಹ್ಮಣರು ಕಡಲು ದಾಟುವ ಸಂಪ್ರದಾಯ ಇಲ್ಲ. ಹನುಮಂತ ಕಡಲು ದಾಟಿದ್ದಾನೆ. ಆದುದರಿಂದ ಆದಿತ್ಯನಾಥರು ಹನುಮಂತನನ್ನು ದಲಿತ ಎಂದಿರಬಹುದು.
ಆರೆಸ್ಸೆಸ್ ಮುಖಂಡ ಭಾಗವತ್: ದಲಿತನಾಗಿ ಹನುಮಂತ ಎಷ್ಟು ಎತ್ತರ ಏರಿದ್ದ. ಆಗ ಮೀಸಲಾತಿ ಇರಲಿಲ್ಲ. ಇದರಿಂದ ದಲಿತರಿಗೆ ನೀಡುವ ಸಂದೇಶವೇನೆಂದರೆ ನೀವೆಲ್ಲರೂ ಹನುಮಂತನಂತೆ ಮೀಸಲಾತಿಯನ್ನು ನಿರಾಕರಿಸಿ ಅವನ ಹಾಗೆ ಎತ್ತರಕ್ಕೆ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ಆದಿತ್ಯನಾಥರು ಹೇಳಿದ್ದರು. ದಲಿತ ವಿರೋಧಿ ಮೀಸಲಾತಿಯನ್ನು ನಿರಾಕರಿಸುವುದರಿಂದ ಹನುಮಂತನಿಗೆ ಗೌರವ ಸಲ್ಲಿಸಬೇಕು.
****
ಆದಿತ್ಯನಾಥರು ಹನುಮಂತನನ್ನು ದಲಿತ ಎಂದು ಘೋಷಿಸಿದ್ದೇ ತಡ, ಸರಕಾರ ಮೀಸಲಾತಿಯಡಿಯಲ್ಲಿ ಹನುಮಂತನ ದೇವಸ್ಥಾನಗಳನ್ನು ಹೆಚ್ಚಿಸಬೇಕು ಎಂದು ಬ್ರಾಹ್ಮಣ ಸಂಘ ಒತ್ತಾಯಿಸತೊಡಗಿತು. ಹಾಗೆಯೇ ಹನುಮಂತನ ದೇವಸ್ಥಾನಗಳಲ್ಲಿ ಅರ್ಚನೆ ಮಾಡುವ ಅರ್ಚಕರನ್ನೂ ಮೀಸಲಾತಿಯಡಿ ಸೇರ್ಪಡೆಗೊಳಿಸಬೇಕು ಎನ್ನುವ ಹೋರಾಟ ತೀವ್ರವಾಯಿತು. ಇದೇ ಸಂದರ್ಭದಲ್ಲಿ ವಿವಿಧ ಜಾತಿಗಳು ಹನುಮಂತನಿಗಾಗಿ ಬಡಿದಾಡತೊಡಗಿದರು. ರಾಮನನ್ನು ಮುಂದಿಟ್ಟು ಚುನಾವಣೆಗೆ ಹೊರಡಬೇಕಾದ ಸಮಯದಲ್ಲಿ ಹನುಮಂತನನ್ನು ಬೀದಿಗೆ ಬಿಟ್ಟರಲ್ಲ ಎಂದು ಆರೆಸ್ಸೆಸ್ ಆದಿತ್ಯನಾಥರನ್ನು ಆಸ್ಥಾನಕ್ಕೆ ಕರೆಸಿ ಛೀಮಾರಿ ಹಾಕಿತು.
ಮರುದಿನವೇ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿತು ‘‘ಇದೀಗ ನಡೆಸಿದ ಉತ್ಖನನದಲ್ಲಿ ಹನುಮಂತನ ಜನಿವಾರವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ಜಾತಿಯನ್ನು ಬದಲಿಸಲಾಗಿದೆ. ಆದುದರಿಂದ ಜಾತಿ ಗಣತಿಯಲ್ಲಿ ಹನುಮಂತನ ಜಾತಿಯನ್ನು ಪರಿಷ್ಕರಿಸಲಾಗಿದೆ. ಹನುಮಂತನ ಜನಿವಾರವನ್ನು ಆತನಿಗೆ ತೊಡಿಸುವ ನಿಟ್ಟಿನಲ್ಲಿ ಜಗತ್ತಿನಲ್ಲೇ ಅತಿ ಎತ್ತರದ ಹನುಮಂತನ ವಿಗ್ರಹ ಒಂದನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ’’ ಎನ್ನುವುದರೊಂದಿಗೆ ಹನುಮಂತನನ್ನು ಸಮಾಧಾನಿಸಲಾಯಿತು. ಪತ್ರಕರ್ತ ಎಂಜಲುಕಾಸಿಗೂ ಸಮಾಧಾನವಾಯಿತು.