ಒಪ್ಪಂದದಿಂದ ಅಮೆರಿಕ ಹಿಂದೆ ಸರಿದರೆ ನಿಷೇಧಿತ ಅಸ್ತ್ರಗಳ ಅಭಿವೃದ್ಧಿ: ರಶ್ಯ ಅಧ್ಯಕ್ಷ ಪುಟಿನ್ ಎಚ್ಚರಿಕೆ

Update: 2018-12-06 18:46 GMT

ಮಾಸ್ಕೊ, ಡಿ. 6: ಅಮೆರಿಕ ಮತ್ತು ರಶ್ಯಗಳ ನಡುವೆ ಏರ್ಪಟ್ಟಿರುವ ‘ಮಧ್ಯಮ ವ್ಯಾಪ್ತಿಯ ಪರಮಾಣು ಅಸ್ತ್ರಗಳ ಒಪ್ಪಂದ’ (ಐಎನ್‌ಎಫ್)ಕ್ಕೆ ಬದ್ಧವಾಗಿ ನಡೆಯಲು ಅಮೆರಿಕ ರಶ್ಯಕ್ಕೆ ಗಡುವು ನೀಡಿದ ಬಳಿಕ, ಈ ಒಪ್ಪಂದದಡಿ ನಿಷೇಧಿಸಲ್ಪಟ್ಟಿರುವ ಪರಮಾಣು ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಬೆದರಿಕೆ ಹಾಕಿದ್ದಾರೆ.

ಒಪ್ಪಂದವನ್ನು ಉಲ್ಲಂಘಿಸಿ ನಿರ್ಮಿಸಲಾದ ಶಸ್ತ್ರಗಳನ್ನು ರಶ್ಯ ಇನ್ನು 60 ದಿನಗಳಲ್ಲಿ ನಾಶಪಡಿಸಬೇಕು, ಇಲ್ಲದಿದ್ದರೆ ಈ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವುದು ಎಂಬುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಘೋಷಿಸಿದ ಬಳಿಕ ಉಭಯ ದೇಶಗಳ ಸಂಬಂಧದಲ್ಲಿ ಹೊಸದಾಗಿ ಉದ್ವಿಗ್ನತೆ ತಲೆದೋರಿರುವುದನ್ನು ಸ್ಮರಿಸಬಹುದಾಗಿದೆ.

ಪಾಂಪಿಯೊ ನೀಡಿರುವ ಹೇಳಿಕೆಯನ್ನು ಒಂದು ನೆವ ಎಂಬುದಾಗಿ ಬಣ್ಣಿಸಿದ ಪುಟಿನ್, ಒಪ್ಪಂದದಿಂದ ಹಿಂದೆ ಬರಲು ಅಮೆರಿಕ ಈಗಾಗಲೇ ನಿರ್ಧರಿಸಿದೆ ಎಂದು ಹೇಳಿದರು.

‘‘ನಾವು ಗಮನಿಸುವುದಿಲ್ಲ ಎಂಬುದಾಗಿ ಅವರು ಭಾವಿಸಿದ್ದಾರೆ’’ ಎಂದು ರಶ್ಯ ಅಧ್ಯಕ್ಷ ಹೇಳಿದರು. ಒಪ್ಪಂದ ನಿಷೇಧಿಸಿರುವ ಕ್ಷಿಪಣಿಗಳ ಅಭಿವೃದ್ಧಿಗಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಈಗಾಗಲೇ ಹಣ ಮೀಸಲಿರಿಸಿದೆ ಎಂದರು.

‘‘ಈ ಒಪ್ಪಂದ ವಿಫಲವಾಗುವುದನ್ನು ನಾವು ಬಯಸುವುದಿಲ್ಲ. ಆದರೆ, ಹಾಗೇನಾದರೂ ಆದರೆ, ನಾವು ಅದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ’’ ಎಂದು ಪುಟಿನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News