ಅಧಿಕಾರದ ಕೋಟೆ ನಮ್ಮ ಅಧೀನದಲ್ಲಿದ್ದಾಗ ಭಯಪಡಬೇಕಾಗಿಲ್ಲ

Update: 2018-12-20 18:31 GMT

ದಿನಾಂಕ 9 ಡಿಸೆಂಬರ್ 1945ರಂದು ಮನಮಾಡದಲ್ಲಿ ಅಸ್ಪಶ್ಯ ವಿದ್ಯಾರ್ಥಿಗಳ ಬೋರ್ಡಿಂಗ್ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ಮುಗಿಸಿದ ಬಳಿಕ ಡಾ. ಅಂಬೇಡ್ಕರರು ಸಾರ್ವಜನಿಕ ಸಭೆಯ ಸ್ಥಳಕ್ಕೆ ಬಂದರು. ಆರೂ ಕಾಲಿಗೆ ಈ ಸಭೆಯ ಆರಂಭಗೊಂಡಿತು. ಮುಂಬೈ ಪ್ರಾಂತೀಯ ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್ನಿನ ಅಧ್ಯಕ್ಷರಾದ ಭಾವುರಾವ್ ಕೃ. ಗಾಯಕವಾಡ ಮತ್ತು ಆಂಧ್ರ ಪ್ರಾಂತೀಯ ಶಾಖೆಯ ಸೆಕ್ರೆಟರಿಯಾದ ಶ್ರೀ ಸೂರ್ಯಪ್ರಕಾಶರಾವ್ ಅವರ ಪ್ರಾಸ್ತಾವಿಕ ಭಾಷಣದ ಬಳಿಕ ಡಾ. ಅಂಬೇಡ್ಕರ್ ಮಾತಾಡಲು ಎದ್ದು ನಿಂತರು. ಅವರು 25,000 ಜನ ಸಮುದಾಯದ ಎದುರಿಗೆ ಒಂದು ಗಂಟೆ ಭಾಷಣ ಮಾಡಿದರು. ಚಪ್ಪಾಳೆಯ ಕರತಾಡನದಲ್ಲಿ ಅವರು ಭಾಷಣ ಆರಂಭಿಸಿ ಹೇಳಿದರು.

ಬಂಧು ಮತ್ತು ಭಗಿನಿಯರೆ,
ಆರೇಳು ವರ್ಷಗಳ ಬಳಿಕ ನಾನಿಲ್ಲಿಗೆ ಬಂದಿದ್ದೇನೆ. ಕಾರಣ ವೇನೆಂದರೆ, ಸಂಪೂರ್ಣ ಹಿಂದೂಸ್ಥಾನದಲ್ಲಿ ಅಸ್ಪಶ್ಯ ಸಮಾಜದ ಕಾರ್ಯದಲ್ಲಿ, ಹೋರಾಟದಲ್ಲಿ ಮಹಾರಾಷ್ಟ್ರ ಒಂದೇ ಹೆಚ್ಚು ಜಾಗೃತವಾದ ಪ್ರದೇಶ. ಹೀಗಾಗಿ ಈ ಪ್ರದೇಶಕ್ಕೆ ಆಗಾಗ ಬರಬೇಕಾದ ಅಗತ್ಯ ಬರಲಿಲ್ಲ. ಆದರೂ ಇಂದಿಲ್ಲಿ ಬರುವುದು ವಿಶೇಷ ಮಹತ್ವದ್ದಾಗಿದ್ದರಿಂದ ಬರಬೇಕಾಯಿತು.
ಇಂದು ಈ ದೇಶದಲ್ಲಿ ಕಾಂಗ್ರೆಸ್, ಮುಸ್ಲಿಂಲೀಗ್, ಹಿಂದೂ ಮಹಾಸಭೆಯಂತಹ ಹಲವು ರಾಜಕೀಯ ಪಕ್ಷಗಳಿವೆ. ಈ ಪ್ರತಿಯೊಂದು ಪಕ್ಷಗಳು ತಮ್ಮ ತಮ್ಮ ರೀತಿಯಲ್ಲಿ ರಾಜಕೀಯ ಹಕ್ಕನ್ನು ಬೇಡುತ್ತಿವೆ. ಕಾಂಗ್ರೆಸ್ ಸ್ವರಾಜ್ಯವನ್ನು ಬೇಡುತ್ತಿದೆ. ನಮಗೂ ಸ್ವರಾಜ್ಯ ಬೇಕಾಗಿದೆ. ಸ್ವರಾಜ್ಯದ ಬಗೆಗೆ ನಮಗಾಗಲಿ ಮತ್ತು ಕಾಂಗ್ರೆಸಿಗಾಗಲಿ ಭಿನ್ನಾಭಿಪ್ರಾಯವಿಲ್ಲ. ಹಿಂದೂಸ್ಥಾನ ತಮ್ಮದೆಂದು ಕಾಂಗ್ರೆಸ್ ಬ್ರಿಟಿಷರಿಗೆ ಹೇಳುತ್ತಿದೆ. ಹಿಂದೂಸ್ಥಾನದ ರಾಜಕಾರಣದ ಕೋಟೆಯನ್ನು ನಮ್ಮ ಕೈಗೆ ಕೊಡಿ ಮತ್ತು ಹಿಂದೂಸ್ಥಾನ ಬಿಟ್ಟು ಹೊರಟು ಹೋಗಿ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸಿಗೆ ನಾನು ಒಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಗಾಂಧಿಯಾಗಲಿ, ಕಾಂಗ್ರೆಸಾಗಲಿ ಅದರ ಉತ್ತರವನ್ನು ನೀಡುತ್ತಿಲ್ಲ.

ಆ ಪ್ರಶ್ನೆ ಯಾವುದೆಂದರೆ, ನೀವು ಬೇಡುವ ಸ್ವರಾಜ್ಯದಲ್ಲಿ ಯಾರು ಯಾರನ್ನು ಆಳುತ್ತಾರೆ? ರಾಜ್ಯ ನಡೆಸುವವರು ಯಾರು? ಅದು ಯಾರ ಮೇಲೆ? ಹಿಂದೂಗಳು ಅಸ್ಪಶ್ಯರನ್ನು ಆಳಬೇಕೆಂದೇನಾದರೂ ಇದೆಯೇ? ಈಗ ಸಿಗಲಿರುವ ಸ್ವರಾಜ್ಯ ಯಾರದ್ದು? ಪ್ರಾಯಃ ನಿಮಗೆ ನಿಮ್ಮ ಸ್ವರಾಜ್ಯವೆಂದರೆ ನಮ್ಮ ಗುಲಾಮಗಿರಿಯೇ ಅಲ್ಲವೇ? ಈ ಪ್ರಶ್ನೆಯನ್ನು ನಾನು ಗಾಂಧಿ ಮತ್ತು ಕಾಂಗ್ರೆಸಿನವರಿಗೆ ಇಪ್ಪತ್ತು ವರ್ಷಗಳಿಂದ ಕೇಳುತ್ತಿದ್ದೇನೆ. ಈ ಪ್ರಶ್ನೆಗೆ ಅವರು ಉತ್ತರವನ್ನು ಕೊಡುತ್ತಿಲ್ಲ. ಅವರು ಉತ್ತರ ನಿಡುವುದಿಲ್ಲ ಎಂದರೆ, ಅವರ ಮನದೊಳಗೇನೋ ಕೆಡುಕಿನ ವಿಚಾರ ಇದೆಯೆಂದೇ ಅರ್ಥ.

ಸಿಗಲಿರುವ ಈ ಸ್ವರಾಜ್ಯದಿಂದ ನಮಗೇನು ಸಿಗಲಿದೆ ಎಂಬ ಬಗೆಗೆ ನೀವು ಯೋಚಿಸಿ. ಇಂದು ನಮ್ಮ ಮೇಲೆ ಯಾವ ಕೆಲಸವನ್ನು ಹೊರಿಸಲಾಗಿದೆ? ಕಸ ಹೊಡೆಯುವುದು ಗಟಾರನ್ನು ಬಳಿದು ಸ್ವಚ್ಛ ಮಾಡುವುದು - ಇತ್ಯಾದಿ. ಕಾಂಗ್ರೆಸ್‌ನ ಕೈಗೆ ರಾಜಕಾರಣದ ಕೀಲಿಸಿಕ್ಕರೆ ನಮ್ಮ ಮೇಲೆ ಮೊದಲಿನಿಂದಲೂ ನಡೆಯುತ್ತ ಬಂದಿರುವ ಗುಲಾಮಗಿರಿಗೆ ಮುದ್ರೆ ಬೀಳಲಿದೆ. ಕಸ ಹೊಡೆಯುವ, ಗಟಾರು ಬಳಿಯುವ ಇದೇ ಕೆಲಸ ನಮ್ಮ ಮೇಲೆ ಹೊರಿಸಿದರೆ, ನಮ್ಮ ದುರ್ದೆಸೆ ಯಾವ ಹೀನಾಯ ಮಟ್ಟಕ್ಕಿಳಿಯಬಹುದೆಂದು ಹೇಳುವಂತಿಲ್ಲ.

ನಾನು ಶತಪ್ರಯತ್ನ ಮಾಡಿ ಪ್ರತಿವರ್ಷ ನಮ್ಮ ಮಕ್ಕಳು ವಿದೇಶಗಳಿಗೆ ಹೋಗಿ ಉಚ್ಚ ಶಿಕ್ಷಣ ಪಡೆಯಲು ಸರಕಾರ ಮೂರು ಲಕ್ಷ ರೂಪಾಯಿ ಖರ್ಚು ಮಾಡುವ ವ್ಯವಸ್ಥೇಯನ್ನು ಮಾಡಿದ್ದೇನೆ. ಮೂರು ಲಕ್ಷವನ್ನು ಐದು ಲಕ್ಷಕ್ಕೆ ಏರಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಹಾಗೆಯೇ ಸರಕಾರಿ ನೌಕರಿಯಲ್ಲಿ ಶೇ. 8 ಜಾಗ ನಮ್ಮ ಅಭ್ಯರ್ಥಿಗಳಿಗೆ ಸಿಗುವ ವ್ಯವಸ್ಥೆ ಮಾಡಿದ್ದೇನೆ. ನಮ್ಮ ಪ್ರಗತಿಗಾಗಿ ಈವರೆಗೆ ಇದಾಗಲಿ, ಉಳಿದ ಯಾವುದೇ ಸವಲತ್ತಾಗಲಿ ಮತ್ತು ಸರಕಾರದಿಂದ ಸಿಕ್ಕ ಸಹಾಯ, ಸಿಗಲಿರುವ ಸಹಾಯವನ್ನೆಲ್ಲ ಕಾಂಗ್ರೆಸ್ ಜನರ ಕೈಗೆ ರಾಜಕಾರಣದ ಕೀಲಿಕೈಗೆ ಹೋದ ಕೂಡಲೇ ಕಳೆದು ಕೊಳ್ಳಲಿದ್ದೇವೆ.
ಈ ಎಲ್ಲ ಶತಪ್ರಯತ್ನವನ್ನು ನಾನೇಕೆ ಮಾಡುತ್ತಲಿದ್ದೇನೆ? ನಮಗೆ ಹಲ್ಲೆಯ ಜಾಗ, ಅಧಿಕಾರದ ಜಾಗವನ್ನು ಹಸ್ತಗತ ಮಾಡಿಕೊಳ್ಳಬೇಕಾಗಿದೆ. ಕೋಟೆಯನ್ನು ಗೆಲ್ಲಬೇಕಾಗಿದೆ ಎಂದು. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ. ಕೋಟೆಯ ಮೇಲಿಂದಲೇ ವೈರಿಸೈನ್ಯದ ನಿರೀಕ್ಷಣೆ ಮಾಡಬಹುದ್ದಾಗಿದ್ದು, ಶತ್ರುಗಳ ಮೇಲೆ ಭೀಕರವಾಗಿ ಹಲ್ಲೆ ಮಾಡಬಹುದಾಗಿದೆ. ವೈರಿಗಳು ಎಲ್ಲ ಪ್ರದೇಶಗಳನ್ನು ಆವರಿಸಿಕೊಂಡಿದ್ದರೂ, ಎಲ್ಲಿಯವರೆಗೆ ಕೋಟೆ ನಮ್ಮ ಅಧೀನದಲ್ಲಿದೆಯೋ ಅಲ್ಲಿಯವರೆಗೆ ಯಾವುದರ ಬಗೆಗೂ ಭಯ ಪಡಬೇಕಾಗಿಲ್ಲ.

ಪೇಶ್ವೆಕಾಲದಲ್ಲಿ ಬ್ರಿಟಿಷರ ರಾಜ್ಯವಾಗಲಿ, ಮುಸಲ್ಮಾನರ ರಾಜ್ಯವಾಗಲಿ ಇರಲಿಲ್ಲ. ಆಗ ಸಂಪೂರ್ಣ ಸ್ವರಾಜ್ಯವಿತ್ತು. ಆ ಸ್ವರಾಜ್ಯದಲ್ಲಿ ನಮ್ಮಗತಿ ಏನಾಯಿತು? ಎಂಥ ಪರಿಸ್ಥಿತಿಯಲ್ಲಿತ್ತು?
ಅಸ್ಪಶ್ಯ ಜಾತಿಯ ಜನರು ರಸ್ತೆಯ ಮೇಲೆ ಉಗುಳಬಾರದು ಎಂದು ಕೊರಳಿಗೆ ಮಡಕೆಯನ್ನು ಕಟ್ಟಲಾಯಿತು. ಹಾಗೆಯೇ ರಸ್ತೆಯಲ್ಲಿ ನಡೆದು ಹೊರಟಾಗ ಹೆಜ್ಜೆಗುರುತು ಮೂಡಬಾರದು ಎಂದು ಹಿಂಬದಿಗೆ ಕಸಬರಿಗೆಯನ್ನು ಕಟ್ಟಲಾಯಿತು. ಪೇಶ್ವೆಯವರ ಸ್ವರಾಜ್ಯದಲ್ಲಿ ಅಸ್ಪಶ್ಯರ ಸ್ಥಿತಿ ಎಷ್ಟು ಹೀನಾಯವಾಗಿತ್ತೋ, ಅದೇ ದುರ್ದೆಶೆಯು ಹಿಂದೂಗಳ ಕೈಗೆ ಸ್ವರಾಜ್ಯ ಸಿಕ್ಕರೆ, ಅಸ್ಪಶ್ಯರಿಗೆ ಬಂದೊದಗಲಿದೆ ಎನ್ನುವುದನ್ನು ಮರೆಯಬಾರದು.
ಇಂದಿಗೂ ಭಿಕ್ಷಾಪಾತ್ರೆಯನ್ನು ಅವಲಂಬಿಸಿರುವ ಬ್ರಾಹ್ಮಣರು ಅಧಿಕಾರದ ಹುದ್ದೆಯಿಂದ ಗುಮಾಸ್ತ ಹುದ್ದೆಯವರೆಗೆ ವ್ಯಾಪಿಸಿ ತಮ್ಮ ಸ್ಥಾನವನ್ನು ಶಾಶ್ವತ ಉಳಿಸಿಕೊಂಡಿದ್ದಾರೆ.

ಆಂಗ್ಲರ ಆಡಳಿತದಲ್ಲಿ ಸ್ವರಾಜ್ಯವನ್ನು ಬೇಡುವ ಈ ಸ್ಪಶ್ಯ ಹಿಂದೂಗಳ ಕೈಗೆ ಸ್ವರಾಜ್ಯ ಸಿಕ್ಕರೆ ನಮ್ಮ ಗತಿ ಏನಾಗಬಹುದೆಂದು ಸ್ವಲ್ಪ ಯೋಚಿಸಿ.
ಹಿಂದೂಸ್ಥಾನದಲ್ಲಿ ಯುರೋಪಿಯನ್, ಮುಸಲ್ಮಾನ, ಸಿಖ್, ಅಂಗ್ಲೋ-ಇಂಡಿಯನ್, ಪಾರಶಿ, ಕ್ರಿಶ್ಚಿಯನ್ ಮುಂತಾದ ಅಲ್ಪಸಂಖ್ಯಾತ ಜಾತಿಯವರು ವಾಸಿಸುತ್ತಾರೆ. ಈ ಎಲ್ಲ ಜಾತಿಗಳಲ್ಲಿ ರಾಜಕೀಯ ಸಂರಕ್ಷಣೆಯ ನಿಜವಾದ ಅಗತ್ಯ ಯಾರಿಗಾದರೂ ಇದ್ದಲ್ಲಿ ಅದು ಅಸ್ಪಶ್ಯ ಸಮಾಜಕ್ಕೆ ಎಂದು ಅಲ್ಪಸ್ವಲ್ಪ ರಾಜಕಾರಣ ಗೊತ್ತಿದ್ದ ಯಾರಾದರೂ ಆಗಲಿ ಸಹಜವಾಗಿ ಹೇಳಬಹುದು. ಹೀಗಿರುವಾಗ ಇಲ್ಲಿಯವರೆಗೆ ಕಾಂಗ್ರೆಸ್‌ನ ಜನರು ಮಾಡಿದ್ದೇನು? 1930-32ರಲ್ಲಿ ವಿದೇಶದಲ್ಲಿ ಏರ್ಪಡಿಸಿದ ದುಂಡು ಮೇಜಿನ ಪರಿಷತ್ತಿಗೆ ಅಸ್ಪಶ್ಯ ಸಮಾಜದ ಪರವಾಗಿ ನಾನು ಹೋಗುವ ಪ್ರಸಂಗ ಬಂತು. ಅಸ್ಪಶ್ಯ ಸಮಾಜಕ್ಕಾಗಿ ಆಮರಣ ಉಪವಾಸ ಮಾಡುವ ಗಾಂಧಿ ಆಗ ಮಾಡಿದ್ದೇನು?

ಕ್ರಿಶ್ಚಿಯನ್, ಯುರೋಪಿಯನ್, ಪಾರಸಿ, ಸಿಖ್, ಮುಸಲ್ಮಾನರಂತಹ ಅಲ್ಪಸಂಖ್ಯಾತರು ರಾಜಕೀಯ ಸಂರಕ್ಷಣೆಗಾಗಿ ಗಾಂಧಿಗೆ ಪತ್ರ ಕಳಿಸಿದರು. ಮುಸಲ್ಮಾನರ ಹೊರತು ಉಳಿದವರೆಲ್ಲರ ಬೇಡಿಕೆಗೆ ಒಪ್ಪಿಗೆ ಸಿಕ್ಕಿತು. ನಾನೂ ಅರ್ಜಿ ಕಳಿಸಿದ್ದೆ. ಈ ಪ್ರಸಂಗದಿಂದ ಈ ಜನರೆಲ್ಲ ಒಂದಾಗುತ್ತಾರೆಂಬ ಭೀತಿಯು ಗಾಂಧಿಯನ್ನು ಕಾಡಿತು. ಹೀಗಾದರೆ ಕಾಂಗ್ರೆಸ್‌ಗೆ ಸಿಡಿಮದ್ದು ಇಟ್ಟಂತಾಗುತ್ತದೆ. ಈ ಜನ ತನ್ನ ಅಪಹಾಸ್ಯ ಮಾಡಬಹುದು ಎಂದುಕೊಂಡು ಗಾಂಧಿಯು ಮುಸಲ್ಮಾನರೊಂದಿಗೆ ಗುಪ್ತ ಕರಾರನ್ನು ಮಾಡಿಕೊಂಡರು. ನಿಮ್ಮ ಹದಿನಾಲ್ಕೂ ಬೇಡಿಕೆಗಳಿಗೆ ನನ್ನ ಒಪ್ಪಿಗೆಯಿದೆ, ಆದರೆ ಅಸ್ಪಶ್ಯರ ಜನ ಸಂಖ್ಯೆಯು ಸುಮಾರು ಒಂದೇ ರೀತಿಯಲ್ಲಿದ್ದು, ರಾಜಕೀಯ ಸಂರಕ್ಷಣೆಯ ಅಗತ್ಯ ಮುಸಲ್ಮಾನರಿಗಿಂತ ಅಸ್ಪಶ್ಯರಿಗೇ ಹೆಚ್ಚಿದೆ. ಈ ರೀತಿ ಗಾಂಧಿಯವರು ಉಳಿದೆಲ್ಲ ಪಕ್ಷದವರ ಅರ್ಜಿಗೆ ಮಂಜೂರು ನೀಡಿ, ಮುಸಲ್ಮಾನರೊಂದಿಗೆ ಗುಪ್ತ ಕರಾರು ಮಾಡಿಕೊಂಡು, ನನ್ನ ಅರ್ಜಿಯನ್ನು ತಳ್ಳಿಹಾಕಿದರು.
ಗಾಂಧಿಯ ಕಪಟನೀತಿ ಈ ಬಗೆಯಲ್ಲಿದೆ. ಕೆಲವು ದಿನಗಳ ಹಿಂದೆ ಜರುಗಿದ ಸಿಮ್ಲಾ ಪರಿಷತ್ತಿನಲ್ಲಾದರೂ ಗಾಂಧಿ ಮಾಡಿದ್ದೇನು?

ಪರಿಷತ್ತಿಗೆ ಸಂಬಂಧಿಸಿದ ಸರಕಾರದ ಧೋರಣೆಯನ್ನು ಹೇಳುವ ಪರಿಪತ್ರವನ್ನು ವೈಸರಾಯ ಸಾಹೇಬರು ಹೊರಡಿಸಿದ್ದರು. ಅದರಲ್ಲಿ ಅವರು ರಾಜಕೀಯ ದೃಷ್ಟಿಯಿಂದ ‘ಅಸ್ಪಶ್ಯ ಮತ್ತು ಅಸ್ಪಶ್ಯೇತರ ಹಿಂದೂ’ ಎಂದೂ ಹಿಂದೂ ಸಮಾಜದ ಎರಡು ಭಾಗ ಮಾಡುವ ಪದ ಪ್ರಯೋಗ ಮಡಿದ್ದರು. ಧಾರ್ಮಿಕವಾಗಿ ಅಸ್ಪಶ್ಯರು ಸ್ಪಶ್ಯ ಹಿಂದೂಗಳಿಗಿಂತ ಬೇರೆ, ಭಿನ್ನವಾಗಿದ್ದಾರೆಂದು ಒಪ್ಪಿಕೊಳ್ಳಲಾಗಿತ್ತು. ಆದರೆ ಎಲ್ಲ ರಾಜಕೀಯ ಆಂದೋಲನದಿಂದಾಗಿ ಮತ್ತು ವೈಸರಾಯರ ಪ್ರಕಟನೆಯಿಂದಾಗಿ ಗಾಂಧಿಯ ‘ಒಳದನಿ’ ಜಾಗೃತಗೊಂಡಿತು ಮತ್ತು ಒಳದನಿಗೆ ತಕ್ಕಂತೆ ಗಾಂಧಿಯವರು ಪ್ರಕಟನೆಯನ್ನು ಹೊರಡಿಸಿ ಹೇಳಿದ್ದೇನೆಂದರೆ, ‘ಅಸ್ಪಶ್ಯ ಮತ್ತು ಅಸ್ಪಶ್ಯೇತರ ಹಿಂದೂ ಅಥವಾ ಸವರ್ಣ ಹಿಂದೂ’ ಎನ್ನುವುದು ರಾಜಕೀಯ ದೃಷ್ಟಿಯಿಂದ ಹಿಂದೂ ಸಮಾಜವನ್ನು ಇಬ್ಭಾಗ ಮಾಡುವ ಈ ಪದಪ್ರಯೋಗ ತಪ್ಪಾಗಿದೆ. ಅದರ ಮೂಲದಲ್ಲಿ ಏನಿದೆ? ನಿಮಗೆ ಕೌರವ -ಪಾಂಡವರ ಯುದ್ಧದ ಬಗೆಗೆ ಸ್ವಲ್ಪ ಗೊತ್ತಿರಬಹುದು. ಕೌರವರು ನೂರು ಮತ್ತು ಪಾಂಡವರು ಐವರು. ಕೌರವರು ಎಲ್ಲ ರಾಜ್ಯವನ್ನು ಕಸಿದುಕೊಂಡರು. ಈ ರಾಜ್ಯದ ಕೆಲಭಾಗ ಪಾಂಡವರಿಗೆ ಸಿಗಬೇಕೆಂದು ಮತ್ತು ಯುದ್ಧತಪ್ಪಿಸಬೇಕೆಂದು ಶ್ರೀಕೃಷ್ಣನು ಸಂಧಾನ ಮಾಡಲೆಂದು ಕೌರವರ ನಾಯಕನಾದ ದುರ್ಯೋಧನನ ಬಳಿಗೆ ಬಂದು ಹೇಳಿದ, ಅರ್ಧ ನಿಮಗೆ ಇರಲಿ, ಅರ್ಧರಾಜ್ಯ ಪಾಂಡವರಿಗೆ ನೀಡಿ. ಆದರೆ ದುರ್ಯೋಧನ ಅದನ್ನು ಒಪ್ಪಲಿಲ್ಲ. ಕೊನೆಗೆ ಕೃಷ್ಣನು ಈ ರಾಜ್ಯದ ದಂಡಕಾರಣ್ಯವನ್ನಾದರೂ ಅವರಿಗೆ ಕೊಡಿ ಎಂದ. ಆಗ ದುರ್ಯೋಧನ ನೀಡಿದ ಉತ್ತರವೇನೆಂದರೆ, ದಂಡಕಾರಣ್ಯ ಹೋಗಲಿ, ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡಲಾರೆ. ಅಸ್ಪಶ್ಯರ ಬಗೆಗೂ ಗಾಂಧಿ ಮತ್ತು ಕಾಂಗ್ರೆಸಿಗರು ಇದೇ ಭಾವನೆಯನ್ನು ಹೊಂದಿದ್ದಾರೆ. ಕಾರಣವೇನಿರಬಹುದು?

ರಾಜಕೀಯವಾಗಿ ಹಿಂದೂಸಮಾಜವನ್ನು ಇಬ್ಭಾಗ ಮಾಡಿದರೆ ಮುಸಲ್ಮಾನರಂತೆ ಅಸ್ಪಶ್ಯರಿಗೂ ರಾಜಕಾರಣದಲ್ಲಿ ಸ್ವತಂತ್ರ ಅಧಿಕಾರ ಪ್ರಾಪ್ತವಾಗುತ್ತದೆ ಎನ್ನುವುದು ಗಾಂಧಿ ಮತ್ತು ಅವರ ಹಸ್ತಕರಿಗೆ ಗೊತ್ತಿತ್ತು.
ನಡುಗಾಲ ಅಸೆಂಬ್ಲಿಯ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದು ಬಹಳ ದಿನಗಳೇನೂ ಆಗಲಿಲ್ಲ. ಈ ಚುನಾವಣೆಯಲ್ಲಿ ಮುಸಲ್ಮಾನರ ಸ್ವತಂತ್ರ ಮತಕ್ಷೇತ್ರವಿರುವುದರಿಂದ ಮುಸಲ್ಮಾನರು ಮುಸ್ಲಿಂಲೀಗ್ ಪರವಾಗಿ ಪ್ರಚಂಡ ಬಹುಮತದಿಂದ ಗೆದ್ದರು. ಮುಸ್ಲಿಂಲೀಗ್‌ನೊಂದಿಗೆ ಕಾಂಗ್ರೆಸ್‌ಗೆ ಹೋರಾಡುವ ಶಕ್ತಿಯುಳಿದಿಲ್ಲ.
ಆದರೆ ಹೊಸದಾಗಿ ಉದಯಕ್ಕೆ ಬಂದ ಮತ್ತು ಉಳಿದ ಕೆಲ ಪಕ್ಷದವರು, ಜಸ್ಟಿಸ್ ಪಾರ್ಟಿ, ಹಿಂದೂಮಹಾ ಸಭೆ ಮುಂತಾದ ಪಕ್ಷದವರು ಧೂಳೀಪಟವಾದರು.

ಜಯಾಪಜಯವು ಸಂಪೂರ್ಣವಾಗಿ ಕೈಯಲ್ಲಿರದಿದ್ದರೂ ಒಂದು ಸಂಗತಿ ಮಾತ್ರ ನಿರ್ವಿವಾದ. ಹೋರಾಡುವಾಗ ಅಪಯಶ ಬಂದರೆ ನಿರುತ್ಸಾಹಗೊಳ್ಳಬೇಕಿಲ್ಲ. ಆದರೆ ಕೆಲ ಪಕ್ಷದವರು ತಮ್ಮ ಕಾರ್ಯಕಲಾಪವನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ಮುಂಬರುವ ಚುನಾವಣೆಯಲ್ಲಿ ಎರಡೇ ಪಕ್ಷಗಳ ನಡುವೆ ಹೋರಾಟ ನಡೆಯಲಿದೆ. ಒಂದು ಶೆಡೂಲ್ಡ್‌ಕಾಸ್ಟ್ಸ್ ಫೆಡರೇಶನ್ ಮತ್ತು ಎರಡನೆಯದು ಕಾಂಗ್ರೆಸ್ ಪಕ್ಷ. ಅದಕ್ಕಾಗಿ ನೀವು ಮಾಡ ಬೇಕಾದುದು ಏನು? ನಾವು ತುಂಬ ಬಲಾಢ್ಯ ವೈರಿಯ ಜೊತೆಗೆ ಹೋರಾಡಲಿದ್ದೇವೆ ಎಂಬ ಮನೋಧೈರ್ಯ ನಿಮ್ಮಲ್ಲಿರಲಿ. ಈ ಹೊಣೆ ನಿಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಉಳಿದೆಲ್ಲ ಪಕ್ಷದವರನ್ನು ನಾಶ ಮಾಡುವ ತಂತ್ರ ರಚಿಸಿದೆ. ಎಲ್ಲ ಪಕ್ಷದವರನ್ನು ಹತ್ತಿಕ್ಕಲಿದೆ. ಇದು ಪಾಯಸ ತಿನ್ನುವ ಸಮಯವಲ್ಲ. ನಾಲ್ಕಾರು ರೂಪಾಯಿಯಿಂದ ಕಿಸೆ ತುಂಬುವುದೂ ಅಲ್ಲ.

ನಾವು ಹೋರಾಡಬೇಕಿದೆ. ಅದಕ್ಕೆ ನೀವು ಸಿದ್ಧರಾಗಿ ದೃಢ ನಿರ್ಧಾರ ಮಾಡಬೇಕಿದೆ. ಈ ದೃಢ ನಿರ್ಧಾರದಿಂದಲೇ ನಾವು ಯಶಸ್ವಿಯಾಗಿ ಯುದ್ಧಗೆಲ್ಲಬಹುದು. ಚುನಾವಣೆಯ ದಿನ ಪ್ರತಿಯೊಬ್ಬರು ಬೆಳಗ್ಗೆ ಎದ್ದು ನೇಮಿಸಿದ ಮತದಾನದ ಸ್ಥಳದಲ್ಲಿ ಸ್ವತಃ ಹಾಜರಾಗಬೇಕು.

ನಮ್ಮ ಹತ್ತಿರ ವಾಹನವಾಗಲಿ, ಹಣವಾಗಲಿ ಇಲ್ಲ. ಆದರೆ ಖಚಿತ ನಿರ್ಧಾರವಿದೆ. ಎಲ್ಲೆಲ್ಲಿ ಅಂಥ ವ್ಯವಸ್ಥೆಯಿಲ್ಲವೋ ಅಲ್ಲಿಗೆ ನೀವು ಸ್ವತಃ ನಡೆದು ಹೋಗಿ ಫೆಡರೇಶನ್ನಿನ ಅಭ್ಯರ್ಥಿಗೇ ಮತಹಾಕಬೇಕು. ಬೇರೆ ಬೇರೆ ಪಕ್ಷದ ಪರವಾಗಿ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ನಡುಗಾಲ ಅಸೆಂಬ್ಲಿಗೆ ಕಾಂಗ್ರೆಸ್ ಟಿಕೆಟ್ ಮೇಲೆ ಗಾಡ್ಗೀಳರು ಚುನಾಯಿತರಾಗಿ ಬಂದಿದ್ದಾರೆ. ಅದೇ ರೀತಿ ಮರಾಠಾ ಲೀಗ್ ರಾಜಕೀಯ ಕ್ಷೇತ್ರದಲ್ಲಿ ತಾಳಿ ಉಳಿಯಲಾರದೆಂದು ಅರಿತುಕೊಂಡು ಇದೇ ಪ್ರಕಾರ ಕಾಂಗ್ರೆಸ್ ಟಿಕೆಟ್ ಮೇಲೆ ಹೀರೇ ಚುನಾಯಿತರಾಗಿದ್ದಾರೆ. ಈ ಟಿಕೆಟ್ ಎನ್ನು ತ್ತಾರಲ್ಲ, ಇದರ ಅರ್ಥವಾದರೂ ಏನು? ಗಾಡ್ಗೀಳರ ಜೊತೆಗೆ ಮತ್ತೊಂದು ಗಳಗಂಡ ಹೆಚ್ಚಿಗೆ ಬಂತು ಎಂದೇ ಅದರ ಅರ್ಥ.

ಅಮೃತರಾವ್ ರಣಖಾಂಬೆಯವರಿಗೆ ಕಾಂಗ್ರೆಸ್‌ನ ಟಿಕೆಟ್ ಸಿಕ್ಕಿದೆ ಎಂದು ನನಗೆ ಯಾರೋ ಹೇಳಿದರು. ಈ ಕಾಂಗ್ರೆಸ್ ಟಿಕೆಟ್ ಎನುವುದಾದರೂ ಏನು?
ನಾಯಿಯ ಕೊರಳಿಗೆ ಹಾಕಲು ನಗರಸಭೆಯ ವರು ಒಂದು ಬಿಲ್ಲೆಯನ್ನು ನೀಡ್ತುತಾರೆ. ಏಕೆಂದರೆ ಅದರಿಂದ ನಾಯಿಯ ಮಾಲಕ ಯಾರು ಎನ್ನುವುದು ಗೊತ್ತಾಗುತ್ತದೆ, ಈ ಬಿಲ್ಲೆಯಂತೆಯೇ ಕಾಂಗ್ರೆಸ್ ಟಿಕೆಟ್‌ನ ಕಥೆ.

ಮುಂಬರುವ ಚುನಾವಣೆಗಾಗಿ ಯಾವ ಅಭ್ಯರ್ಥಿಗಳ ಹೆಸರು ‘ಜನತಾ’ದಲ್ಲಿ ಪ್ರಕಟಿಸಲಾ ಗಿದೆಯೋ, ಅವರ ಬಗೆಗೆ ಹಲವರ ಮನದಲ್ಲಿ ಏನೇನೋ ತರ್ಕನಡೆದಿದೆ. ಈ ಅಭ್ಯರ್ಥಿಗೆ ಏಕೆ ಕೊಟ್ಟರು. ಮತ್ತೊಬ್ಬರಿಗೆ ಏಕೆ ನೀಡಲಿಲ್ಲ. ಇದನ್ನು ನೋಡುವುದು ನಿಮ್ಮ ಕೆಲಸವಲ್ಲ. ನೀವು ನಿಮ್ಮ ಜವಬ್ದಾರಿಯನ್ನು, ಕರ್ತವ್ಯವನ್ನು ತಿಳಿದುಕೊಳ್ಳಬೇಕು.

ಯಾವ ಪಕ್ಷದ ಪರವಾಗಿ ಈ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಲಾಗಿದೆಯೋ ಆ ಶೆಡೂಲ್ಡ್ಡ್ ಕಾಸ್ಟ್ಸ್‌ಫೆಡರೇಶನ್ ಪಕ್ಷದ ನಿಲುವು ಏನು? ಅದರ ದಿಶೆ ಯಾವುದು? ಮಾರ್ಗ ಯಾವುದು? ಧ್ಯೇಯವೇನು? ಇದನ್ನು ಅರಿಯುವುದು ನಿಮ್ಮ ಕರ್ತವ್ಯ. ಮುಂಬೈ ಪ್ರಾಂತದಲ್ಲಿಯ ಬಹುತೇಕ ಎಲ್ಲ ಜಿಲ್ಲೆಯಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನೇ ಈ ಬಾರಿಯೂ ಏಕೆ ಸ್ಪರ್ಧೆಗೆ ಆಯ್ಕೆ ಮಾಡಿದಿರಿ ಎಂದು ಯಾರಾದರೂ ಕೇಳಬಹುದೇ?.

ನಿಮಗೆಲ್ಲ ತಿಳಿದಿರುವಂತೆ ನಾವು ಕಾಂಗ್ರೆಸ್‌ನೊಂದಿಗೆ ಹೋರಾಡಬೇಕಿದೆ. ಕಾಂಗ್ರೆಸ್‌ನ ಬಳಿ ಸಾಕಷ್ಟು ಹಣವಿದೆ. ಮೂರ್ನಾಲ್ಕು ಸಾವಿರ ರೂ.ಸುರಿದು ಅವರು ಯಾವುದೇ ಅಭ್ಯರ್ಥಿಯ ಮನಸ್ಸನ್ನು ಹೊರಳಿಸಬಹುದು. ಉಕ್ಕಿನ ಕಂಬ ವನ್ನು ನೆಲದಲ್ಲಿ ಹೂತ ಬಳಿಕ ಬಿಸಿಲು, ಗಾಳಿ, ಮಳೆಯಿಂದ ಅದಕ್ಕೆ ಯಾವುದೇ ಬಾಧೆಯಾಗು ವುದಿಲ್ಲ. ಅದು ಬಾಗುವುದೂ ಇಲ್ಲ. ಮುರಿಯು ವುದೂ ಇಲ್ಲವೆಂಬ ಭರವಸೆ ನನಗಿದೆ.

ಈ ಸಲ ನೀವೆಲ್ಲ ಒಂದು ಮಾತು ನೆನಪಿನಲ್ಲಿಡಿ. ಅದೇನೆಂದರೆ, ಹೊಣೆಗಾರಿಕೆಯು ಒಬ್ಬಿಬ್ಬರದ್ದಲ್ಲ. ಈ ಜವಾಬ್ದಾರಿ ನಿಮ್ಮದೆಲ್ಲರದ್ದು. ನನ್ನ ಸೋದರನಿಗೆ ಟಿಕೆಟ್ ಕೊಡಲಿಲ್ಲವೆಂದು ಒಬ್ಬ ಸಿಟ್ಟಿಗೆದ್ದರೆ, ನನ್ನ ಅಪ್ಪನಿಗೋ, ಚಿಕ್ಕಪ್ಪನಿಗೋ ಕೊಡಲಿಲ್ಲವೆಂದು ಮತ್ತೊಬ್ಬ ಅಸಮಾಧಾನಗೊಳ್ಳುತ್ತಾನೆ.
ನಮಗೆ ಇಬ್ಬರು ಮಕ್ಕಳಿದ್ದಾರೆ. ಅವರೂ ಸಮಾಜಕಾರ್ಯ ಮಾಡುತ್ತಿದ್ದಾರೆಂದು ಹಲವು ಜನರು ನನಗೆ ಹೇಳುತ್ತಲಿದ್ದಾರೆ. ಅವರಲ್ಲಿಯ ಒಬ್ಬನಿಗಾಗಿಯಾದರೂ ಅಭ್ಯರ್ಥಿ ಎಂದು ಟಿಕೆಟ್ ಕೊಡಿ ಎಂದೂ ಅನ್ನುತ್ತಿದ್ದಾರೆ. ಆದರೆ ಅಧಿಕಾರದ ಬಲದಿಂದ ನಾನು ನನ್ನ ಮಕ್ಕಳಿಗೆ ಉನ್ನತ ಸ್ಥಾನ ನೀಡಿದೆ ಎಂದು ಆರೋಪ ಹೊರಿಸಲು ಯಾರಿಗೂ ಅವಕಾಶವಿರಬಾರದು ಎನ್ನುವುದೇ ನನ್ನ ಸಂಕಲ್ಪವಾಗಿದೆ.

ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಅಭ್ಯರ್ಥಿಗಳಲ್ಲಿ ಏನಾದರೂ ಕೊರತೆಯಿದ್ದರೆ, ಅದನ್ನು ತುಂಬಿಕೊಡುವ ಸಾಮರ್ಥ್ಯ ನನ್ನಲ್ಲಿದೆ. ಯಾವ ದಿನ ನೌಕೆಯನ್ನು ಆಚೆಯ ದಡಕ್ಕೆ ತಲುಪಿಸುವ ಸಾಮರ್ಥ್ಯ ನನ್ನಲ್ಲಿಲ್ಲ ಎಂದೆನಿಸುವುದೋ ಅಂದೇ ನಾನು ರಾಜಕಾರಣವನ್ನು ತೊರೆಯುತ್ತೇನೆ.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75