ಖಂಡನೀಯ ದಮನ ಪ್ರವೃತ್ತಿ

Update: 2018-12-22 18:35 GMT

ಮಾನವ ಒಬ್ಬ ವ್ಯಕ್ತಿ. ಅವನ ಬದುಕು ಸ್ವತಂತ್ರವಾದುದು. ಅವನು ಸಮಾಜದ ಅಭಿವೃದ್ಧಿಗಾಗಿಯೇ ಹುಟ್ಟಿಲ್ಲ. ಸ್ವಯಂ ಆಭಿವೃದ್ಧಿಗಾಗಿ ಅವನ ಜನನವಾಗಿದೆ ಎನ್ನುವ ತರ್ಕವೂ ಇದೆ. ಅಂದರೆ ಉದಾತ್ತವಾದ ಸಮಾಜವು ಸರ್ವತಂತ್ರ ಸ್ವತಂತ್ರರಾದ ವ್ಯಕ್ತಿಗಳ ಸಮುದಾಯ ಎಂಬುದು ಇದರ ತಾತ್ಪರ್ಯ. ಹೀಗಾಗಿ ವ್ಯಕ್ತಿ ಮತ್ತು ಸರಕಾರದ ನಡುವೆ ಸಂಘರ್ಷವಿದ್ದೇ ಇರುತ್ತದೆ. ಪ್ರಜಾಸತ್ತಾತ್ಮಕ ರಾಷ್ಟ್ರದ ಕರ್ತವ್ಯ ಶಾಸನಮಾಡುವವರನ್ನು ಆಯ್ಕೆ ಮಾಡುವುದಕ್ಕಷ್ಟೇ ಸೀಮಿತಗೊಳ್ಳುವುದಿಲ್ಲ. ಅದು ಟೀಕೆ ಮಾಡುವ ಸ್ವಾತಂತ್ರ್ಯ ಇರುವ, ಮಾನವರ ಘನತೆ ಮತ್ತು ಒಳಿತುಗಳನ್ನು ಉಲ್ಲಂಘಿಸುವ ಶಾಸನಗಳ ವಿರುದ್ಧ ಪ್ರತಿಭಟಿಸುವ ವ್ಯವಸ್ಥೆಯೂ ಆಗಿರುತ್ತದೆ.


ವರ್ಷ ಮುಗಿಯುತ್ತ ಬಂದಿದೆ. ವಾರ ಕಳೆದರೆ 2018 ಇತಿಹಾಸದ ಪುಟಗಳನ್ನು ಸೇರಿ ಹೊಸ ವರ್ಷದ ಉದಯವಾಗಲಿದೆ. 2018ರ ಕೊನೆಯ ಪಾದದಲ್ಲಿ ನಿಂತು ಕಳೆದ ದಿನಗಳತ್ತ ಒಂದು ಹಿನ್ನೋಟ ಹರಿಸಿದಾಗ ಕಾಣುವ ಚಿತ್ರ ಉತ್ಸಾಹದಾಯಕವಾದುದೇನಲ್ಲ. ವಿಶೇಷವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ತೀವ್ರವಾಗಿ ಹಲ್ಲೆಗೊಳಗಾದ ವರ್ಷವಿದು. ಇದು ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಅನ್ವಯಿಸುವ ವಿಷಾದಕರ ಮಾತು. 2018, ಸಾಹಿತಿಗಳು, ಕಲಾವಿದರು ಮತ್ತು ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ತೀವ್ರವಾಗಿ ಘಾಸಿಗೊಂಡ ವರ್ಷ.

2018 ಪ್ರಪಂಚದ ವಿವಿಧೆಡೆಗಳಲ್ಲಿ ಕಾರ್ಯನಿರತ ಪತ್ರಕರ್ತರು ಹಿಂದೆಂದೂ ಕಾಣದಂಥ ಹಿಂಸಾಚಾರವನ್ನು ಎದುರಿಸಿದ ವರ್ಷವೆಂದು ಮಾಧ್ಯಮದ ಕಾವಲು ಸಂಸ್ಥೆಯಾದ ‘ಸೀಮಾತೀತ ವರದಿಗಾರರು’(ರಿಪೋರ್ಟ್‌ರ್ಸ್‌ ವಿತೌಟ್ ಬಾರ್ಡರ್ಸ್‌-ಆರ್.ಎಸ್.ಎಫ್.) ವರದಿ ಮಾಡಿದೆ. ಪತ್ರಕರ್ತರ ಮೇಲೆ ನಡೆದಿರುವ ಹಲ್ಲೆ-ಹಿಂಸಾಚಾರಗಳು ನೀತಿಗೆಟ್ಟ ರಾಜಕಾರಣಿಗಳಿಂದ ಪ್ರೇರಿತವಾದುದು, ಪ್ರಚೋದಿತವಾದುದು ಎನ್ನುವ ಮಾತಂತೂ ತುಂಬ ಕಳವಳಕಾರಿಯಾದುದು. ‘ಸೀಮಾತೀತ ವರದಿಗಾರರು’(ಆರ್.ಎಸ್.ಎಫ್.)ವರದಿ ಪ್ರಕಾರ 2018ರಲ್ಲಿ ವಿಶ್ವದಾದ್ಯಂತ ಎಂಬತ್ತು ಪತ್ರಕರ್ತರ ಹತ್ಯೆಯಾಗಿದೆ, 348 ಮಂದಿ ಪತ್ರಕರ್ತರನ್ನು ಜೈಲಿಗೆ ನೂಕಲಾಗಿದೆ ಹಾಗೂ 60 ಮಂದಿ ಪತ್ರಕರ್ತರನ್ನು ಗೃಹಬಂಧನದಲ್ಲಿಡಲಾಗಿದೆ. ಇದರಲ್ಲಿ ಅತ್ಯಂತ ದಾರುಣವಾದುದು ಸೌದಿ ಅರೇಬಿಯಾದ ಅಂಕಣಕಾರ ಜಮಾಲ್ ಖಶೋಗಿ ಅವರ ಹತ್ಯೆ. 2018ರಲ್ಲಿ ಪತ್ರಕರ್ತರ ಮೇಲೆ ಹಲ್ಲೆ-ಹಿಂಸಾಚಾರಗಳು ಹಿಂದೆಂದೂ ಕಾಣದಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆಯೆನ್ನುತ್ತಾರೆ ಆರ್.ಎಸ್.ಎಫ್.ಮುಖ್ಯಸ್ಥ ಕ್ರಿಸ್ಟೊಫೆ ಡೆಲೋರಿ. ‘‘ಕೆಲವೊಮ್ಮೆ ನೀತಿಗೆಟ್ಟ ರಾಜಕಾರಣಿಗಳು, ಧಾರ್ಮಿಕ ನಾಯಕರು ಮತ್ತು ವಾಣಿಜ್ಯೋದ್ಯಮಿಗಳು ಬಹಿರಂಗವಾಗಿ ಪತ್ರಕರ್ತರ ಮೇಲೆ ದ್ವೇಷ ಕಾರಿರುವುದುಂಟು/ಸಾರಿರುವುದುಂಟು ಎಂದು ವರದಿ ಬೊಟ್ಟುಮಾಡಿ ಹೇಳಿರುವುದಂತೂ ದಿಗಿಲುಹುಟ್ಟಿಸುತ್ತದೆ.

ಆರ್.ಎಸ್.ಎಫ್. ವರದಿಯು, ಪತ್ರಕರ್ತರನ್ನು ಸದಾ ನಿಂದಿಸುವ, ಕೆಲವು ಪತ್ರಕರ್ತರನ್ನು ಜನತೆಯ ಶತ್ರುಗಳು ಎಂದು ದೂಷಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರತ್ತ ನೇರವಾಗಿ ಬೆರಳುಮಾಡುವುದಿಲ್ಲವಾದರೂ, ದ್ವೇಷದ ನುಡಿಗಳು ಹಿಂಸಾಚಾರವನ್ನು ಸಕ್ರಮಗೊಳಿಸುತ್ತವೆ, ತನ್ಮೂಲಕ ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುತ್ತವೆ ಎನ್ನುವುದು ಕ್ರಿಸ್ಟೊಫೆ ಡೆಲೋರಿಯವರ ಅಭಿಮತ. ಕಳೆದ ಜೂನ್ ತಿಂಗಳಲ್ಲಿ ಮೇರಿಲ್ಯಾಂಡಿನಲ್ಲಿ ‘ಕ್ಯಾಪಿಟಲ್ ಗೆಜಿಟ್’ನ ಐವರು ಪತ್ರಕರ್ತರ ಹತ್ಯೆಯ ನಂತರ ಅಮೆರಿಕ ಪತ್ರಕರ್ತರಿಗೆ ಅತಿಮಾರಕಪ್ರಾಯವಾಗಿರುವ ಐದನೆಯ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಯಿತು. 2018ರಲ್ಲಿ ಹದಿನೈದು ಮಂದಿ ಪತ್ರಕರ್ತರ ಕಗ್ಗೊಲೆಯನ್ನು ಕಂಡ ಅಫ್ಘಾನಿಸ್ತಾನ, ಹನ್ನೊಂದು ಮಂದಿ ಪತ್ರಕರ್ತರು ಕೊಲೆಯಾದ ಸಿರಿಯಾ ಹಾಗೂ ಒಂಬತ್ತು ಮಂದಿ ಪತ್ರಕರ್ತರು ಹತ್ಯೆಯಾದ ಮೆಕ್ಸಿಕೊ ಮಾಧ್ಯಮದವರಿಗೆ ಮರಣಕಂಟಕ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಇತರ ರಾಷ್ಟ್ರಗಳು. ಪತ್ರಕರ್ತರ ವಿರುದ್ಧ ಹರಿಸಲಾಗಿರುವ ದ್ವೇಷ ಭಾವನೆಯನ್ನು ಸಾಮಾಜಿಕ ಜಾಲಗಳು ಉಲ್ಬಣಗೊಳಿಸುತ್ತಿವೆ ಎನ್ನುತ್ತದೆ ವರದಿ. ಇದು ಅತ್ಯಂತ ಖೇದಕರವಾದುದು.

ಪತ್ರಕರ್ತರ ಕೊಲೆ, ಬಂಧನ, ಜೈಲು ಶಿಕ್ಷೆ, ಅಪಹರಣ ಮತ್ತು ಬಲಾತ್ಕಾರದ ಕಣ್ಮರೆ ಇವೆಲ್ಲ 2018ರಲ್ಲಿ ವಿಪರೀತವಾಗಿದೆಯೆಂದೂ, ಕಾರ್ಯನಿರತ ಪತ್ರಕರ್ತರ ಹತ್ಯೆ ಪ್ರಮಾಣ ಶೇ.15ರಷ್ಟು ಹೆಚ್ಚಿದೆ ಯೆಂದೂ ವರದಿಯಲ್ಲಿ ಹೇಳಲಾಗಿದೆ. ಆರ್.ಎಸ್.ಎಫ್. ವರದಿ ಭಾರತದ ಬಗ್ಗೆ ಏನೂ ಹೇಳಿಲ್ಲವಾದರೂ ನಾವು ನಿಶ್ಚಿಂತೆಯಿಂದ ಇರುವಂತಿಲ್ಲ. ನಮ್ಮ ದೇಶದಲ್ಲೂ ಪತ್ರಕರ್ತರು ಸುರಕ್ಷಿತವಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಗೌರಿ ಲಂಕೇಶ್ ಹತ್ಯೆಯಂಥ ಪ್ರಕರಣಗಳು ಕಣ್ಣ ಮುಂದೆ ಇವೆ. ಮೊನ್ನೆಮೊನ್ನೆಯಷ್ಟೆ ಮಣಿಪುರದಿಂದ ವರದಿಯಾಗಿರುವ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್‌ಖೆಮ್ ಬಂಧನ ಇತ್ತೀಚಿನದು. ಈ ಪತ್ರಕರ್ತನ ಬಂಧನ ಮತ್ತು ಸ್ಥಾನಬದ್ಧತೆ ದೇಶದಲ್ಲಿ ರಾಷ್ಟ್ರೀಯ ಭದ್ರತಾ ಶಾಸನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಹಾಗೂ ಪ್ರಜೆಗಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದಕ್ಕೆ ಒಂದು ಜ್ವಲಂತ ನಿದರ್ಶನ.

ಕಿಶೋರ್‌ಚಂದ್ರ ವಾಂಗ್‌ಖೆಮ್ ಇಂಫಾಲ್‌ನ ಖಾಸಗಿ ದೂರದರ್ಶನ ಸುದ್ದಿ ವಾಹಿನಿಯೊಂದರಲ್ಲಿ ಸುದ್ದಿಮೇಜಿನ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತ. ನವೆಂಬರ್ 21ರಂದು ಈ ಪತ್ರಕರ್ತನನ್ನು ರಾಷ್ಟ್ರದ್ರೋಹದ ಆಪಾದನೆ ಮೇಲೆ ಬಂಧಿಸಲಾಯಿತು. ಕಿಶೋರ್‌ಚಂದ್ರ ಮಾಡಿರಬಹುದಾದ ದೇಶದ್ರೋಹದ ಕೃತ್ಯವಾದರೂ ಏನು? ಫೇಸ್ಬುಕ್‌ನಲ್ಲಿ ಮಣಿಪುರದ ಮುುಖ್ಯ ಮಂತ್ರಿ ಎನ್. ಬೀರೇನ್ ಸಿಂಗ್ ಅವರನ್ನು ‘ಹಿಂದುತ್ವದ ಕೈಗೊಂಬೆ’ ಎಂದು ಲೇವಡಿಮಾಡಿರುವುದು. ಝಾನ್ಸಿ ರಾಣಿ ಲಕ್ಷ್ಮ್ಮೀ ಬಾಯಿಯ ಜನ್ಮದಿನೋತ್ಸವವನ್ನು ಆಚರಿಸಿದ್ದಕ್ಕೆ ಇದು ಪತ್ರಕರ್ತನ ಟೀಕೆ. ನ.26ರಂದು ಕಿಶೋರ್‌ಚಂದ್ರರನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಎರಡೇ ದಿನಗಳಲ್ಲಿ ಕಿಶೋರ್‌ಚಂದ್ರರನ್ನು ರಾಷ್ಟ್ರೀಯ ಭದ್ರತಾ ಶಾಸನದನ್ವಯ ಬಂಧಿಸಲಾಯಿತು. ಕಿಶೋರ್‌ಚಂದ್ರರನ್ನು ರಾಷ್ಟ್ರೀಯ ಭದ್ರತಾ ಶಾಸನದ 13ನೇ ವಿಧಿಯನ್ವಯ ಒಂದು ವರ್ಷ ಕಾಲ ಸ್ಥಾನಬದ್ಧತೆಯಲ್ಲಿಡುವಂತೆ ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಅವರ ಆಜ್ಞೆಯಂತೆ ಬಂಧಿಸಲಾಯಿತು. ಮಣಿಪುರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರಾದೇಶಿಕ ಸಂಸ್ಕೃತಿಯನ್ನು ಬದಿಗೆ ತಳ್ಳಿ ಹಿಂದುತ್ವ ಸಿದ್ಧಾಂತವನ್ನು ಹೇರಲಾಗುತ್ತಿದೆ ಎನ್ನುವುದು ಅಲ್ಲಿನ ಇತ್ತೀಚಿನ ಜನಾಭಿಪ್ರಾಯ.

ಟಿಪ್ಪು ಜಯಂತಿ ಆಚರಣೆ ಅನಗತ್ಯ ಎನ್ನುವ ಅಭಿಪ್ರಾಯ ಹಲವರಲ್ಲಿರುವಂತೆ, ಪತ್ರಕರ್ತ ಕಿಶೋರ್‌ಚಂದ್ರ ಝಾನ್ಸಿ ರಾಣಿಯ ಜನ್ಮದಿನೋತ್ಸವ ಬೇಡವಾಗಿತ್ತು ಎಂದಿರುವುದೂ ಒಂದು ಅಭಿಪ್ರಾಯವಷ್ಟೇ. ಇಂಥದೊಂದು ಅಭಿಪ್ರಾಯ ವ್ಯಕ್ತಪಡಿಸುವ ಅವರ ಸಂವಿಧಾನದತ್ತ ಹಕ್ಕನ್ನು ಯಾರೂ ಪ್ರಶ್ನಿಸಲಾಗದು. ಅವರಿಗೆ ಜಾಮೀನು ನೀಡಿರುವ ನ್ಯಾಯಾಧೀಶರು ಹೇಳಿರುವಂತೆ, ಅದೊಂದು ಸಾರ್ವಜನಿಕ ಜೀವನದ ಆಚರಣೆಗೆ ಸಂಬಂಧಿಸಿದಂತೆ ಬೀದಿಯಲ್ಲಿ ಯಾರೂ ಆಡಿಕೊಳ್ಳಬಹುದಾದಂಥ ಮಾತಷ್ಟೆ. ಅದನ್ನು ‘ರಾಷ್ಟ್ರದ್ರೋಹ’ ಎನ್ನುವಷ್ಟು ಗಂಭೀರವಾಗಿ ಪರಿಗಣಿಸಬೇಕಾಗಿರಲಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ಸಹಿಷ್ಣುತೆ ಎಂಬುದು ಮಾಯವಾಗಿದ್ದು, ಅಧಿಕಾರದಲ್ಲಿರುವವರು ಕಾಯ್ದೆ ಸುವ್ಯವಸ್ಥೆ ಪಾಲನೆ ಮತ್ತು ಭದ್ರತೆಗೆ ಸಂಬಂಧಿಸಿದ ಕಾನೂನುಗಳನ್ನು ಸೇಡಿನ ಕ್ರಮವಾಗಿ ತಮ್ಮ ವಿರೋಧಿಗಳ ಮೇಲೆ ಬಳಸುವ ಅಪಾಯಕಾರಿ ಪ್ರವೃತ್ತಿ ಕಂಡುಬರುತ್ತಿದೆ. ನ್ಯಾಯಾಧೀಶರು ಕಿಶೋರ್ ಚಂದ್ರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ನಂತರವೂ ಮುಖ್ಯ ಮಂತ್ರಿ ಬೀರೇನ್ ಸಿಂಗರು ಒಂದೆರಡು ದಿನಗಳಲ್ಲೇ ರಾಷ್ಟ್ರೀಯ ಭದ್ರತಾ ಕಾನೂನಿನ್ವಯ ಪತ್ರಕರ್ತ ಕಿಶೋರ್‌ಚಂದ್ರರ ಬಂಧನಕ್ಕೆ ಕ್ರಮಕೈಗೊಂಡಿರುವುದು ಇಂಥದ್ದೇ ಕ್ರಮವಾಗಿದೆ. ರಾಷ್ಟ್ರದ ಭದ್ರತೆಗೆ ಬೆದರಿಕೆಯೊಡ್ಡಬಹುದಾದಂತಹ ಸಶಸ್ತ್ರ ದಂಗೆ ಅಥವಾ ಹಿಂಸಾತ್ಮಕ ವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡವವರನ್ನು ಈ ಶಾಸನದನ್ವಯ ಒಂದು ವರ್ಷಕಾಲ ಸ್ಥಾನಬದ್ಧತೆಯಲ್ಲಿಡಬಹುದಾಗಿದೆ. ಇವರನ್ನು ಜಾಮೀನಿನ ಮೇಲೂ ಬಿಡುಗಡೆ ಮಾಡುವಂತಿಲ್ಲ. ಆದರೆ ಕಿಶೋರ್‌ಚಂದ್ರರು ಝಾನ್ಸಿರಾಣಿ ಜನ್ಮದಿನ ಆಚರಣೆ ಸಂಬಂಧವಾಗಿ ವ್ಯಕ್ತಪಡಿಸಿರುವ ಅಭಿಪ್ರಾಯದಲ್ಲಿ ಇಂಥ ಸಂಚುಗಳೇನೂ ಕಂಡು ಬರುವುದಿಲ್ಲ.

ರಾಷ್ಟ್ರೀಯ ಭದ್ರತಾ ಶಾಸನದನ್ವಯ ಆರೋಪಿಯನ್ನು ಒಮ್ಮೆಗೇ ಒಂದು ವರ್ಷಕಾಲ ಸ್ಥಾನಬದ್ಧತೆಯಲ್ಲಿಡುವಂತಿಲ್ಲ. ಒಂದಾವರ್ತಿ ಮೂರು ತಿಂಗಳವರೆಗೆ ಸ್ಥಾನಬದ್ಧತೆಯಲ್ಲಿಡಲು ಅವಕಾಶವಿದೆ. ಇದನ್ನು ಮತ್ತೆ ಮೂರುತಿಂಗಳಿಗೆ ವಿಸ್ತರಿಸಲು ಅವಕಾಶವಿದೆ. ಅದರಂತೆ ಒಂದು ವರ್ಷಕ್ಕಿಂತ ಹೆಚ್ಚುಕಾಲ ಯಾರನ್ನೂ ಸ್ಥಾನ ಬದ್ದತೆಯಲ್ಲಿಡುವಂತಿಲ್ಲ. ರಾಷ್ಟ್ರೀಯ ಭದ್ರತಾ ಶಾಸನದ ಬಳಕೆಗೆ ಸಂಬಂಧಿಸಿದಂತೆ ಶಾಸನಬದ್ಧ ಸಲಹಾ ಮಂಡಲಿಯೊಂದಿರುತ್ತದೆ. ಇದರಲ್ಲಿ ಮೂವರು ಸದಸ್ಯರಿರುತ್ತಾರೆ. ಸರಕಾರ ಯಾರನ್ನಾದರೂ ಸ್ಥಾನಬದ್ಧತೆ ಬಂಧನಕ್ಕೊಳಪಡಿಸುವ ಮುನ್ನ ಈ ಮಂಡಲಿಯ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ಮಂಡಲಿಯೂ ಯಾಂತ್ರಿಕವಾಗಿ ಸರಕಾರದ ಈ ಬಗೆಯ ನಿರ್ಧಾರಗಳಿಗೆ ಒಪ್ಪಿಗೆ ನೀಡುವಂತಿಲ್ಲ. ದೇಶದ್ರೋಹದ ಆರೋಪಕ್ಕೆ ಸಂಬಂಧಿಸಿದಂತೆ ಭಾರತದ ದಂಡ ಸಂಹಿತೆಯ 124ಎ ವಿಧಿಯನ್ವಯ ವಿಚಾರಣೆಗೆ ಗುರಿಪಡಿಸಿ ಶಿಕ್ಷಿಸಬಹುದಾಗಿದೆ. ಭಾರತೀಯ ದಂಡ ಸಂಹಿತೆ ಈ ವಿಧಿಯನ್ನು ಕಾನೂನು ಆಯೋಗ ಈಗ ಮತ್ತೆ ಪರಾಮರ್ಶಿಸುತ್ತಿದೆ. ಈ ವಿಧಿಯನ್ನು ರದ್ದುಗೊಳಿಸಬೇಕೆಂಬ ಸಾರ್ವಜನಿಕ ಆಗ್ರಹವೂ ಇದೆ. ಹೀಗಿರುವಾಗ ರಾಜ್ಯ ಸರಕಾರಗಳು ಈ ಕಾನೂನನ್ನು ಮನಸೋಇಚ್ಛೆ ಬಳಸುತ್ತಿರುವುದು ಖಂಡನೀಯ. ಜಾಮೀನಿನ ಮೇಲೆ ಇದರಿಂದ ಬಿಡುಗಡೆಹೊಂದಿದ ವ್ಯಕ್ತಿಯನ್ನು ರಾಷ್ಟ್ರೀಯ ಭದ್ರತಾ ಶಾಸನದನ್ವಯ ಮತ್ತು ಸ್ಥಾನಬದ್ಧತೆಯಲ್ಲಿಡುವುದು ಸೇಡಿನ ಕ್ರಮವಲ್ಲದೆ ಬೇರೇನೂ ಅಲ್ಲ. ಇದು ಮತ್ತಷ್ಟು ಖಂಡನೀಯವಾದುದು.

ವ್ಯಕ್ತಿ ಮತ್ತು ವ್ಯವಸ್ಥೆ (ಸರಕಾರ)ನಡುವಣ ಈ ಬಗೆಯ ಸಂಘರ್ಷ ರಾಜಶಾಹಿಯಲ್ಲೂ ಇತ್ತು. ಈಗಲೂ ಇದೆ. ಹೀಗೇಕೆ? ಆಧುನಿಕ ಕಾಲದಲ್ಲಿ ವ್ಯಕ್ತಿಯ ನಿಷ್ಠೆಯಲ್ಲಿ ಪಲ್ಲಟವಾಗುವುದನ್ನು ನಾವು ಕಾಣುತ್ತಿದ್ದೇವೆ. ಧರ್ಮದಿಂದ ರಾಷ್ಟ್ರದತ್ತ ನಿಷ್ಠೆ ಪಲ್ಲಟವಾದಂತೆ ರಾಷ್ಟ್ರ ದೇವರ ಸ್ಥಾನದಲ್ಲಿ ಬಂದು ಕೂರುತ್ತದೆ. ಸರಕಾರವು ರಾಷ್ಟ್ರದ ಪರಿಕಲ್ಪನೆಯ ಏಕಮಾತ್ರ ಹೊಣೆಗಾರನಾಗುತ್ತದೆ. ಹಾಗೂ ವಿಧ್ವಂಸಕರಿಂದ ರಾಷ್ಟ್ರವನ್ನು ರಕ್ಷಿಸುವ ಹೊಣೆಯೂ ಸರಕಾರದ್ದಾಗುತ್ತದೆ. ಹೀಗಾಗಿ ಸರಕಾರವನ್ನು ಟೀಕಿಸುವುದು ಪಾಷಂಡೀ ಕೃತ್ಯವಾಗುತ್ತದೆ. ಸರಕಾರವೂ ಒಂದು ಜೀವಂತ ವ್ಯಕ್ತಿಯಂತೆ ತನ್ನನ್ನು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಆದರೆ ಮಹಾತ್ಮಾ ಗಾಂಧಿಯವರು ಹೇಳುವಂತೆ ಸರಕಾರವು ವ್ಯಕ್ತಿಗಿಂತ ದೊಡ್ಡದಲ್ಲ, ಉತ್ಕೃಷ್ಟವಾದುದಲ್ಲ. ಏಕೆಂದರೆ ಸರಕಾರವು ಅನಾತ್ಮ, ಆದರೆ ವ್ಯಕ್ತಿ ಆತ್ಮ. ಬಿ.ಆರ್.ಅಂಬೇಡ್ಕರ್ ಅವರೂ ವ್ಯಕ್ತಿಯು ಸರಕಾರವಷ್ಟೇ ಅಲ್ಲ ಸಮಾಜಕ್ಕಿಂತ ದೊಡ್ಡವನು ಎಂದು ಅಭಿಪ್ರಾಯ ಪಡುತ್ತಾರೆ. ಸಮಾಜದ ಗುರಿ ಮತ್ತು ಉದ್ದೇಶಗಳು ವ್ಯಕ್ತಿಯ ವಿಕಾಸ ಮತ್ತು ಅವನ ವ್ಯಕ್ತಿತ್ವದ ಬೆಳವಣಿಗೆಯೇ ಆಗಿರುತ್ತದೆ.

ಸಮಾಜವು ವ್ಯಕ್ತಿಗಿಂತ ಮೇಲಿನದ್ದಲ್ಲ. ಮಾನವ ಒಬ್ಬ ವ್ಯಕ್ತಿ. ಅವನ ಬದುಕು ಸ್ವತಂತ್ರವಾದುದು. ಅವನು ಸಮಾಜದ ಅಭಿವೃದ್ಧಿಗಾಗಿಯೇ ಹುಟ್ಟಿಲ್ಲ. ಸ್ವಯಂ ಆಭಿವೃದ್ಧಿಗಾಗಿ ಅವನ ಜನನವಾಗಿದೆ ಎನ್ನುವ ತರ್ಕವೂ ಇದೆ. ಅಂದರೆ ಉದಾತ್ತವಾದ ಸಮಾಜವು ಸರ್ವತಂತ್ರ ಸ್ವತಂತ್ರರಾದ ವ್ಯಕ್ತಿಗಳ ಸಮುದಾಯ ಎಂಬುದು ಇದರ ತಾತ್ಪರ್ಯ. ಹೀಗಾಗಿ ವ್ಯಕ್ತಿ ಮತ್ತು ಸರಕಾರದ ನಡುವೆ ಸಂಘರ್ಷವಿದ್ದೇ ಇರುತ್ತದೆ. ಪ್ರಜಾಸತ್ತಾತ್ಮಕ ರಾಷ್ಟ್ರದ ಕರ್ತವ್ಯ ಶಾಸನಮಾಡುವವರನ್ನು ಆಯ್ಕೆ ಮಾಡುವುದಕ್ಕಷ್ಟೇ ಸೀಮಿತಗೊಳ್ಳುವುದಿಲ್ಲ. ಅದು ಟೀಕೆ ಮಾಡುವ ಸ್ವಾತಂತ್ರ್ಯ ಇರುವ, ಮಾನವರ ಘನತೆ ಮತ್ತು ಒಳಿತುಗಳನ್ನು ಉಲ್ಲಂಘಿಸುವ ಶಾಸನಗಳ ವಿರುದ್ಧ ಪ್ರತಿಭಟಿಸುವ ವ್ಯವಸ್ಥೆಯೂ ಆಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಈ ಹಕ್ಕನ್ನು ಮಾನ್ಯಮಾಡುವುದರ ಮುಖೇನ ವ್ಯಕ್ತಿತ್ವವೊಂದು ರೂಪುಗೊಳ್ಳುತ್ತದೆ. ಹೀಗೆ ರೂಪುಗೊಂಡ ಸ್ವತಂತ್ರ ವ್ಯಕ್ತಿತ್ವವನ್ನು ಸರಕಾರ ನಿರ್ಬಂಧಿಸಲೆತ್ನಿಸಿದಾಗ ಪ್ರತಿಭಟಿಸುವುದು ವ್ಯಕ್ತಿಯ ಕರ್ತವ್ಯವಾಗುತ್ತದೆ. ಪ್ರತಿಭಟನೆಯ ಮೂಲಕವೇ ಸ್ವತಂತ್ರ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ.

Writer - ಬಿ.ಎನ್.ರಂಗನಾಥ ರಾವ್

contributor

Editor - ಬಿ.ಎನ್.ರಂಗನಾಥ ರಾವ್

contributor

Similar News