ನಾನು ಪಾಷಾಣದಂತೆ ಗಟ್ಟಿಯಾಗಿದ್ದೇನೆ, ಆದರೆ ನಿಮ್ಮ ಸ್ಥಿತಿ ಬೇರೆ

Update: 2018-12-27 18:45 GMT

1948ರ ಎಪ್ರಿಲ್ 24 ಹಾಗೂ 25ರಂದು ಸಂಯುಕ್ತ ಪ್ರಾಂತ ಶೆಡ್ಯೂಲ್ ಕ್ಯಾಸ್ಟ್ಸ್ ಫೆಡರೇಶನ್‌ನ 5ನೇ ಅಧಿವೇಶನವನ್ನು ಲಕ್ನೋದಲ್ಲಿ ಏರ್ಪಡಿಸ ಲಾಗಿತ್ತು.
ಈ ಅಧಿವೇಶನ ವೈಶಿಷ್ಟಪೂರ್ಣವಾಗಿತ್ತು ಎನ್ನಲು ಎರಡು ಕಾರಣಗಳಿವೆ. ಮೊದಲನೆಯದು ಈ ಅಧಿವೇಶನ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ (ಆಡಳಿತದಲ್ಲಿ) ಇನ್ನೂ ಅಸ್ಪಶ್ಯರ ಶೋಷಣೆ ನಿಂತಿಲ್ಲ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿತು. ಎರಡನೆಯದು ದೇಶವನ್ನು ಪ್ರಗತಿಯ ಪಥದಲ್ಲಿ ತೆಗೆದುಕೊಂಡು ಹೋಗುವುದರ ಜೊತೆಗೆ ಅತ್ಯಂತ ಹೀನಾವಸ್ಥೆಯಲ್ಲಿದ್ದ ಅಸ್ಪಶ್ಯ ಸಮಾಜದ ಉನ್ನತಿಗಾಗಿ ಮಾಡಬೇಕಾದ ಕೆಲಸಗಳನ್ನು ಮಾಡಲು ದಲಿತ ಫೆಡರೇಶನ್ ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ಸಿದ್ಧವಾಯಿತು.

ಈ ಅಧಿವೇಶನದಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರರು ರವಿವಾರ ದಿನಾಂಕ 25ರಂದು ಜನರನ್ನು ಉದ್ದೇಶಿಸಿ ಮಾತನಾಡಿದರು ಅವರು ತಮ್ಮ ಭಾಷಣದಲ್ಲಿ, ‘‘ಸಹೋದರ ಸಹೋದರಿಯರೇ...........
ಕಾಂಗ್ರೆಸ್‌ನಲ್ಲಿ ಸೇರಿಕೊಂಡಿದ್ದರಿಂದ ನಮಗೇನೂ ಪ್ರಯೋಜನವಾಗುತ್ತದೆ ಎಂದು ನನಗನಿಸುವುದಿಲ್ಲ. ಕಾಂಗ್ರೆಸ್ ಪಕ್ಷ ದಿನದಿನಕ್ಕೆ ದುರ್ಬಲವಾಗುತ್ತಿದ್ದು, ಸಮಾಜವಾದಿಗಳೆಲ್ಲ ಪಕ್ಷದಿಂದ ಹೊರಬಿದ್ದಮೇಲೆ ಇನ್ನೂ ಬಲಹೀನವಾಗಿದೆ. ಇಂತಹ ಸಮಯದಲ್ಲಿ ಈ ಎರಡೂ ಪಕ್ಷಗಳ ನಡುವಿದ್ದ ಸ್ಪರ್ಧೆಯ ಲಾಭ ಪಡೆದು ಯಾವ ಪಕ್ಷ ನಮ್ಮ ಬೇಡಿಕೆ ಷರತ್ತುಗಳನ್ನು ಒಪ್ಪಿಕೊಳ್ಳುವವರೊಂದಿಗೆ ನಮ್ಮ ಸ್ವತಂತ್ರ ಅಸ್ತಿತ್ವಕ್ಕೆ ಬೆಲೆ ಕೊಟ್ಟು ಅಧಿಕಾರಕ್ಕೆ ಸಹಕಾರ ತೋರಿಸಬಹುದು. ಅಧಿಕಾರ ಸಾಮಾಜಿಕ ಪ್ರಗತಿಗೆ ಒಂದು ಬೀಗದ ಕೈ. ಕಾಂಗ್ರೆಸ್‌ನಲ್ಲಿ ಸೇರಿಕೊಂಡರೆ ಹಿಂದುಳಿದ ಸಮಾಜಕ್ಕೆ ಅಧಿಕಾರ ದೊರೆಯುವುದು ಅಸಾಧ್ಯವಾದ ಸಂಗತಿ. ಅದು ಒಂದು ದೊಡ್ಡ ಸಂಸ್ಥೆ. ನಾವು ಅದರಲ್ಲಿ ಪ್ರವೇಶ ಮಾಡುವುದೆಂದರೆ ಸಮುದ್ರದಲ್ಲಿ ಒಂದು ಹನಿ ನೀರನ್ನು ಸೇರಿಸಿದಂತೆ. ಆ ಸಂಸ್ಥೆಯಲ್ಲಿ ಸೇರುವುದರಿಂದ ನಮ್ಮ ಉನ್ನತಿಯಾಗುವುದಿಲ್ಲ. ಆದರೆ ನಮ್ಮ ವಿರೋಧಿಗಳ ಸಾಮರ್ಥ್ಯ ಮಾತ್ರ ಹೆಚ್ಚುತ್ತದೆ. ಕಾಂಗ್ರೆಸ್ ಬೇರೆ ಬೇರೆ ಘಟಕಗಳಲ್ಲಿ ವಿಭಜಿಸಿದರೆ ಮಾತ್ರ ನಮಗೆ ನಮ್ಮ ಉದ್ಧಾರ ಮಾಡಿಕೊಳ್ಳಲು ಸಾಧ್ಯ. ಕಾಂಗ್ರೆಸ್‌ನ ಸ್ಥಿತಿ ಇಂದು ಬೆಂಕಿ ಬಿದ್ದ ಮನೆಯಂತಿದೆ. ಅದರಲ್ಲಿ ಪ್ರವೇಶ ಮಾಡಿದರೆ ನಾವೇ ಸುಟ್ಟು ಭಸ್ಮವಾಗುತ್ತೇವೆ. ಬರಲಿರುವ ಎರಡು ವರ್ಷಗಳಲ್ಲಿ ಕಾಂಗ್ರೆಸ್ ನಾಶ ಹೊಂದಿದರೆ ನನಗೇನೂ ಆಶ್ಚರ್ಯವೆನಿಸದು.

ಇಂದು ಸಮಾಜವಾದಿಗಳು ಕಾಂಗ್ರೆಸ್‌ನಿಂದ ಹೊರಗೆ ಬರುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನ ಬಲ ನಿಶ್ಚಿತವಾಗಿ ಕಡಿಮೆಯಾಗುತ್ತದೆ. ಇಂತಹ ಸಮಯದಲ್ಲಿ ನಾವು ಮೂರನೆಯ ಪಕ್ಷವೆಂದು ನಮ್ಮದೇ ಸ್ವತಂತ್ರ ಸಂಘಟನೆಯನ್ನು ಮಾಡಿಕೊಳ್ಳಬೇಕು. ಒಂದು ವೇಳೆ ಕಾಂಗ್ರೆಸ್ ಅಥವಾ ಸಮಾಜವಾದಿಗಳಿಗೆ ಅವಶ್ಯಕವಾದ ಬಹುಮತ ದೊರೆಯದೇ ಹೋದರೆ ಅವರು ನಮ್ಮ ಬೆಂಬಲವನ್ನು ಕೋರುತ್ತಾರೆ. (ನಮ್ಮ ಬೆಂಬಲಕ್ಕಾಗಿ ಭಿಕ್ಷೆ ಬೇಡುತ್ತಾರೆ) ಇಂತಹ ಸಮಯದಲ್ಲಿ ನಮ್ಮ ಬೆಂಬಲವನ್ನು ಕೊಡುವುದಕ್ಕಾಗಿ ನಾವು ನಮ್ಮ ಷರತ್ತುಗಳನ್ನು ಮುಂದೆ ಮಾಡಿ ಆಡಳಿತ ಅಧಿಕಾರಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಸುಮಾರು 12 ವರ್ಷಗಳ ಹಿಂದೆ ಲೊಥಿಯನ್ ಸಮಿತಿಯ ಸದಸ್ಯನಾಗಿ ನಾನು ಒಬ್ಬನೇ ಬಂದಿದ್ದೆ. ಇಂದು ಅಸ್ಪಶ್ಯರಲ್ಲಿ ರಾಜಕೀಯ ಜಾಗೃತಿಯಾಗಿದ್ದು ಕಂಡುಬರುತ್ತಿದೆ. ನನಗೆ ಬಹಳ ಆನಂದವಾಗಿದೆ. ಕಳೆದ ವರ್ಷ ಸಂಯುಕ್ತ ಪ್ರಾಂತದಲ್ಲಿ ಅಸ್ಪಶ್ಯರು ಮಾಡಿದ ಸತ್ಯಾಗ್ರಹ ಚಳವಳಿಯ ಉಲ್ಲೇಖವನ್ನು ನಾನು ಅಭಿಮಾನದಿಂದ ಮಾಡುತ್ತೇನೆ. ಈ ಚಳವಳಿಯಲ್ಲಿ ಭಾಗವಹಿಸಿ ಕಷ್ಟ ದುಃಖಗಳನ್ನು ಅನುಭವಿಸಿದವರನ್ನು ನಾನು ಅಭಿನಂದಿಸುತ್ತೇನೆ. ಒಂದು ಸಲ ಒಂದು ಸಂಗತಿಯನ್ನು ಮಾಡಿ ತೋರಿಸುವ ಹಟ ತೊಟ್ಟು ನಿಶ್ಚಯ ಮಾಡಿ ಆ ದೃಷ್ಟಿಯಿಂದ ಪ್ರಯತ್ನ ಮಾಡಿದಾಗ ಮಾರ್ಗದಲ್ಲಿ ಎಂತಹ ಅಡೆತಡೆಗಳು ಬಂದರೂ ಹಿಡಿದ ಗುರಿಯನ್ನು ತಲುಪಿಯೇ ತಲುಪುತ್ತೇವೆ ಎನ್ನುವುದು ಈಗ ತಮಗೆಲ್ಲ ಮನವರಿಕೆಯಾಗಿರಬೇಕು.

ನಾನು ಕಾಂಗ್ರೆಸ್ ಸರಕಾರದಲ್ಲಿ ಸೇರಿಕೊಂಡಿದ್ದರಿಂದ ನನ್ನ ಅನೇಕ ಅನುಯಾಯಿಗಳು ಗೊಂದಲಕ್ಕೀಡಾಗಿದ್ದಾರೆ. ಅವರ ಮನಸ್ಸಿನಲ್ಲಿನ ಸಂಶಯವನ್ನು ದೂರ ಮಾಡುವ ಪ್ರಯತ್ನ ಮಾಡುತ್ತೇನೆ. ಬ್ರಿಟಿಷರು ತಾವು ಘೋಷಣೆ ಮಾಡಿದಂತೆ ಆಡಳಿತ ಅಧಿಕಾರವನ್ನು ಹಿಂದೂ, ಮುಸ್ಲಿಂ, ಸಿಖ್ ಅಸ್ಪಶ್ಯ ಮುಂತಾದವರಿಗೆ ಹಸ್ತಾಂತರ (ದಾನ) ಮಾಡಿ ಹೊರಟುಹೋದರು. ಸಿಮ್ಲಾ ಪರಿಷತ್ತಿನಲ್ಲಿ ಕೂಡ ವೈಸರಾಯರು ಅಧಿಕಾರವನ್ನು ಕೇವಲ ಕಾಂಗ್ರೆಸ್‌ನ ಕೈಗೆ ಕೊಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು. 1916ರಲ್ಲಿ ಶೆಡ್ಯೂಲ್ ಕ್ಯಾಸ್ಟ್ಸ್ ಫೆಡರೇಶನ್ ಪ್ರಾಥಮಿಕ ಚುನಾವಣೆಯನ್ನು ಗೆದ್ದಿತ್ತು. ವಿರೋಧಿಗಳನ್ನು ನೆಲಸಮ ಮಾಡಿದ್ದರಿಂದ ಫೆಡರೇಶನ್‌ನ ಪ್ರಾತಿನಿಧಿಕ ಸ್ವರೂಪ ಸ್ಥಾಪಿತವಾಗಿದೆ. ಆದರೆ ನಂತರ ಇಂಗ್ಲಿಷರು ಕೊಟ್ಟ ಮಾತನ್ನು ಪಾಲಿಸದೆ, ಹಿಂದೂ ಮುಸಲ್ಮಾನ್ ಹಾಗೂ ಸಿಖ್ಖರಿಗೆ ಮಾತ್ರ ಅಧಿಕಾರವನ್ನು ಹಸ್ತಾಂತರಿಸಿದರು. ನಮ್ಮ ರಾಜಕೀಯ ಹೋರಾಟದಲ್ಲಿ ಅದೊಂದು ಚಮತ್ಕಾರಿಕ ಸಮಯ ವಾಗಿತ್ತು. ಎಲ್ಲೆಡೆ ಕತ್ತಲು ಕವಿದಿತ್ತು. ನಮಗೆಲ್ಲೂ ಆಸೆಯ ಒಂದು ಕಿರಣ ಕೂಡ ಕಾಣಿಸುತ್ತಿರಲಿಲ್ಲ. ನಮ್ಮ ಸಮಾಜದ ಬಹು ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಇಂತಹ ಸಮಯದಲ್ಲಿ ನನಗೆ ಏನೂ ತಿಳಿಯುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನನ್ನ ಸಮಾಜದವರನ್ನು ಯಾವುದೇ ಮಾರ್ಗದಲ್ಲಿ ಒಯ್ಯಲು ಸಿದ್ಧನಿರಲಿಲ್ಲ. ಪರಿಸ್ಥಿತಿಯನ್ನು ಚೆನ್ನಾಗಿ ಅಭ್ಯಾಸ ಮಾಡಿ ದಾರಿಕಾಯುವುದಕ್ಕೆ ನಾನು ನಿರ್ಧರಿಸಿದ್ದೆ.

25 ವರ್ಷಗಳ ವರೆಗೆ ಕಾಂಗ್ರೆಸ್‌ನ ವಿರುದ್ಧ ಹೋರಾಟ ಮಾಡಿದಿರಿ, ಈಗಿನ ಈ ತುರ್ತುಪರಿಸ್ಥಿತಿಯಲ್ಲಿ ವೌನವಾಗಿರುವುದೇಕೆ ಎಂದು ಅನೇಕರು ನನ್ನನ್ನು ಪ್ರಶ್ನಿಸುತ್ತಾರೆ. ಆದರೆ ಪ್ರತಿಯೊಂದು ಸಲ ಹೋರಾಟದ ತಂತ್ರ ಪ್ರಯೋಜನಕ್ಕೆ ಬರುವುದಿಲ್ಲ. ಅನೇಕ ಬಾರಿ ಬೇರೆ ಮಾರ್ಗಗಳನ್ನೂ ಅವಲಂಬಿಸಬೇಕಾಗುತ್ತದೆ. ಇಂಗ್ಲಿಷರು ನಮಗೆ ಮೋಸ ಮಾಡಿದರು. ನಮ್ಮಲ್ಲಿಯೂ ಕೆಲವರು ಫಿತೂರಿ ನಡೆಸಿದರು. ಇಂತಹ ದೊಡ್ಡ ಸಂಸ್ಥೆಯ ವಿರುದ್ಧ ಹೋರಾಟ ನಡೆಸುವುದು ಆಗ ಯೋಗ್ಯವಾಗಿರಲಿಲ್ಲ. ಹಾಗಾದರೆ ಈಗ ಹೊಂದಾಣಿಕೆಯ ಮಾರ್ಗವೊಂದೇ ಉಳಿಯುತ್ತದೆ. ಆ ದೃಷ್ಟಿಯಿಂದ ನಮಗೆ ಸಾಕಷ್ಟು ಹಕ್ಕುಗಳು ದೊರೆತಿವೆ. ನಮಗೆ ಬೇಕಿದ್ದಷ್ಟು ಸಿಕ್ಕಿಲ್ಲವಾದರೂ ಈಗ ನಾವು ಅನೇಕ ಸಂಗತಿಗಳನ್ನು ನಮಗನುಕೂಲವಾಗುವಂತೆ ಮಾಡಿಕೊಳ್ಳಬಹುದು.
ನಮಗೆ ವಿಧಿಮಂಡಳದಲ್ಲಿ ಹಾಗೂ ನೌಕರಿಗಳಲ್ಲಿ ಕೆಲವು ಸ್ಥಾನಗಳು ದೊರೆತಿವೆ ಹಾಗೂ ನಮ್ಮ ಎಲ್ಲ ಬೇಡಿಕೆಗಳನ್ನೂ ಒಪ್ಪಿಕೊಂಡಿದ್ದಾರೆ. ಸ್ವತಂತ್ರ ಮತದಾರ ಸಂಘದ ಬೇಡಿಕೆಯನ್ನು ಮಂಜೂರು ಮಾಡಲಿಲ್ಲ. ಇತರ ಅಲ್ಪಸಂಖ್ಯಾತರಿಗೂ ಆ ಸೌಲಭ್ಯವನ್ನು ಕೊಟ್ಟಿಲ್ಲವಾದ್ದರಿಂದ ನಾವು ಆ ವಿಷಯ ಕುರಿತು ನಾಚಿಕೆಪಟ್ಟುಕೊಳ್ಳುವ ಕಾರಣವಿಲ್ಲ. ಕಾಂಗ್ರೆಸ್‌ನೊಂದಿಗೆ ಯುದ್ಧ ಘೋಷಿಸಲು ಇದು ಸರಿಯಾದ ಸಮಯವಲ್ಲ. ಸಹಕಾರ್ಯ ಹಾಗೂ ಹೊಂದಾಣಿಕೆಯ ಮಾರ್ಗದಿಂದಲೇ ನಮಗೆ ದೊರೆಯುವುದನ್ನು ಪಡೆದುಕೊಳ್ಳಬೇಕು.

ನಾನು ಮಧ್ಯವರ್ತಿ ಸರಕಾರದಲ್ಲಿ ಸಹಭಾಗಿಯಾಗಿದ್ದರೂ ಕಾಂಗ್ರೆಸ್‌ನ ಸದಸ್ಯನಾಗಿಲ್ಲ, ಸದಸ್ಯನಾಗಲು ಬಯಸುವುದೂ ಇಲ್ಲ. ಮಧ್ಯವರ್ತಿ ಸರಕಾರ ಸೇರಿಕೊಳ್ಳುವಂತೆ ಕಾಂಗ್ರೆಸ್‌ನಿಂದ ಆಮಂತ್ರಣ ಬಂದಾಗ ನಾನು ಯಾವುದೇ ಷರತ್ತು ವಿಧಿಸದೇ ಸರಕಾರದಲ್ಲಿ ಪಾಲುಗೊಂಡೆ. ನಾನು ಕಲ್ಲಿನಂತೆ (ಬಂಡೆಯಂತೆ) ಗಟ್ಟಿಯಾಗಿದ್ದರಿಂದ ನೀರಿನಲ್ಲಿ ಕರಗಿಹೋಗುವ ಭಯವಿಲ್ಲ. ಆದ್ದರಿಂದ ನಾನು ಕಾಂಗ್ರೆಸ್‌ನಲ್ಲಿ ಸೇರಿಕೊಂಡಿದ್ದರೂ ನನ್ನ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಆದರೆ ನಿಮ್ಮ ಸ್ಥಿತಿ ಬೇರೆಯದಾಗಿದೆ. ನೀರಿನಲ್ಲಿ ಬಿದ್ದ ಮಣ್ಣಿನ ಹೆಂಟೆಯಂತೆ ಕರಗಿ ಹೋಗುತ್ತೀರಿ. ಅಲ್ಲಿ ಇರುವುದು ನಿರುಪಯೋಗಿ ಎಂದೆನಿಸಿದ ಕ್ಷಣವೇ ನಾನು ಅಲ್ಲಿಂದ ಹೊರಬೀಳುತ್ತೇನೆ. ರಾಜಕಾರ್ಯ ಆಡಳಿತದಲ್ಲಿ ನಮ್ಮ ಜನರು ಇರುವುದು ಅವಶ್ಯವಾದಂತಹ ಪರಿಸ್ಥಿತಿ ಬಂದಿದೆ. ಒಳ್ಳೆಯ ಉತ್ತಮ ಕಾಯ್ದೆಗಳನ್ನು ಜಾರಿಗೆ ತರುವಾಗ ವ್ಯತ್ಯಾಸ ಉಂಟಾಗುವ ಸಂಭವವಿದೆ. ಅಂತಹ ಸಮಯದಲ್ಲಿ ಅಸ್ಪಶ್ಯರ ವಿರುದ್ಧ ನಿಲ್ಲುವ ಕೆಲಸ ಮಾಡುವ ಪರಂಪರೆಯ ಜನರು ಅಧಿಕಾರಕ್ಕೆ ಬಂದರೆ, ನಿಮ್ಮ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ಒತ್ತಾಯದ ಶ್ರಮಕ್ಕೆ ಕಾಯ್ದೆಯ ಅನುಷ್ಠಾನವಿಲ್ಲ. ಆದರೆ ಜಮೀನುದಾರರು ಆ ಪದ್ಧತಿಯನ್ನು ರೂಢಿಯಲ್ಲಿ ತರುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಇಂತಹ ಅತ್ಯಾಚಾರಿ ಜನರು ಬಂಧು ಬಳಗದವರು ಅಧಿಕಾರಕ್ಕೆ ಬಂದಿರುವುದರಿಂದ ಅಸ್ಪಶ್ಯರು ಅವರ ವಿರುದ್ಧ ಮಾಡಿದ ತಕರಾರು ಕೂಡ ಅಧಿಕಾರಿಗಳ ಕಡೆಯಿಂದ ಕಡೆಗಣಿಸಲ್ಪಡುತ್ತದೆ. ಆ ಸ್ಥಾನದಲ್ಲಿ ಅಸ್ಪಶ್ಯ ಅಧಿಕಾರಿಗಳಿದ್ದರೆ ಖಚಿತವಾಗಿ ಅವರು ತಮ್ಮ ಬಾಂಧವರ ರಕ್ಷಣೆ ಮಾಡುತ್ತಿದ್ದರು.

ನಾನು ಕಾಂಗ್ರೆಸನ್ನು ಸೇರುವ ನಿರ್ಣಯವನ್ನು ತೆಗೆದುಕೊಂಡರೆ ಬಹಿರಂಗವಾಗಿ ಘೋಷಣೆ ಮಾಡುತ್ತೇನೆ. ಆ ಸಂಗತಿ ಅಸ್ಪಶ್ಯರ ಹಿತರಕ್ಷಣೆ ಯದ್ದಾಗಿದ್ದರೆ ನಿಮಗೂ ಅದೇ ರೀತಿ ಮಾಡಲು ಹೇಳುತ್ತೇನೆ. ಆದರೆ ಎಲ್ಲಿಯವರೆಗೆ ಕಾಂಗ್ರೆಸ್‌ನಿಂದ ಪ್ರಕಟವಾಗಿ ಆಮಂತ್ರಣ ದೊರೆಯದ ಹೊರತು ಕಾಂಗ್ರೆಸನ್ನು ಸೇರಬೇಡಿ.’’ ಹೀಗೆ ಉಪದೇಶ ಮಾಡಿ ಡಾಕ್ಟರ್ ಸಾಹೇಬರು ತಮ್ಮ ಭಾಷಣ ಮುಗಿಸಿದರು.

ವಿರೋಧಕ್ಕಾಗಿ ವಿರೋಧ ಮಾಡುವುದು ನನಗೆ ಒಪ್ಪಿಗೆ ಇಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರರ ಈ ಭಾಷಣದ ವಿಷರ್ಯಾಸ ಮಾಡುವ ಸುದ್ದಿ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಯಿತು. ಅದಕ್ಕೆ ಡಾ. ಬಾಬಾಸಾಹೇಬರು ಉತ್ತರವನ್ನು ಬರೆದರು. ಅದು ‘ಜನತಾ’ದ ಮೇ 8ರ ಪತ್ರಿಕೆಗಳಲ್ಲಿ ಪ್ರಕಟವಾಯಿತು. ‘‘ನನ್ನ ಭಾಷಣಕ್ಕೆ ಬೇರೆ ಅರ್ಥ ಹಚ್ಚಿ ಬರೆದ ಸುದ್ದಿಯನ್ನು ಓದಿದೆ. ಮಂತ್ರಿಮಂಡಳದ ನನ್ನ ಸಹಕಾರಗಳ ವಿಷಯವಾಗಿ ನಾನು ಕೆಲ ಅನುಚಿತ ಮಾತುಗಳನ್ನು ಆಡಿದ್ದೇನೆ ಎಂದು ಬರೆದುದನ್ನು ಓದಿ ಖೇದವಾಯಿತು. 25 ಎಪ್ರಿಲ್‌ನಂದು ಮಾಡಿದ ನನ್ನ ಭಾಷಣ ಉತ್ಕರ್ತವಾಗಿತ್ತು. ಸಿದ್ದ ಭಾಷಣವಾಗಿರಲಿಲ್ಲ. ನನ್ನ ಭಾಷಣದಲ್ಲಿನ ಕೆಲ ಮುಖ್ಯಾಂಶಗಳನ್ನು ಇಲ್ಲಿ ನಮೂದಿಸುತ್ತೇನೆ. ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿ ನನ್ನ ಅನುಯಾಯಿಗಳು ನನ್ನ ಮೇಲೆ ಮಾಡಿದ ಟೀಕೆಗಳಿಗೆ ನಾನು ಉತ್ತರಿಸುತ್ತೇನೆ. ಮೊದಲನೇ ವಿಷಯ: ತ್ರಿಮಂತ್ರಿ ಶಿಷ್ಟಮಂಡಳದ ವಿಷಯದಲ್ಲಿ ನಾನು ಮುಗ್ಧನಾಗಿ ಸುಮ್ಮನಿದ್ದದ್ದೇಕೆ? ಎರಡನೆಯ ಪ್ರಶ್ನೆ: ನಾನು ಕಾಂಗ್ರೆಸ್ ಸರಕಾರದಲ್ಲಿ ಶಾಮೀಲಾದದ್ದೇಕೆ? ಮೂರನೆಯ ಪ್ರಶ್ನೆ: ಮುಂದೆ ಭವಿಷ್ಯದಲ್ಲಿ ನಾನು ಏನು ಮಾಡಬೇಕೆಂದು ನಿರ್ಧರಿಸಿದ್ದೇನೆ? ಮೊದಲನೇ ಪ್ರಶ್ನೆಗೆ ಉತ್ತರ: ತ್ರಿಮಂತ್ರಿಗಳ ಕಡೆಗೆ ಶೆಡ್ಯೂಲ್ ಕ್ಯಾಸ್ಟ್ಸ್ ಫೆಡರೇಶನ್ ಸ್ವತಂತ್ರ ಮತದಾರ ಸಂಘದ ಬೇಡಿಕೆಯನ್ನು ಇಟ್ಟಿತ್ತು. ನಮ್ಮ ಈ ಬೇಡಿಕೆಯನ್ನು ನಿರಾಕರಿಸಲಾಯಿತು. ಅದಕ್ಕೆ ಎರಡು ಕಾರಣಗಳಿದ್ದವು

1) ಮುಸ್ಲಿಂ ಮತ್ತು ಸಿಖ್ಖರಿಗೆ ಹೋಲಿಸಿದರೆ ನಮ್ಮ ಪಕ್ಷ ಬಲಹೀನವಾಗಿದೆ
2)ನಮ್ಮ ನಮ್ಮಲ್ಲಿಯೇ ಭೇದಗಳಿದ್ದವು. ಅಮಾತ್ಯ ಮಂಡಳದ ನಿರ್ಣಯ ದಿಂದ ದಲಿತ ವರ್ಗಕ್ಕೆ ಬೇರೆ ರಾಜಕೀಯ ಅಸ್ತಿತ್ವವೇ ಇಲ್ಲ ಎಂದಾಗುತ್ತದೆ.
ಸರಿ ರಾಜಕೀಯ ಸಂರಕ್ಷಣೆ ಇಲ್ಲವೆಂದರೆ ಶೆಡ್ಯೂಲ್ ಕ್ಯಾಸ್ಟ್ಸ್ ಫೆಡರೇಶನ್ ನಾಶವಾಗುತ್ತದೆ ಎಂದೂ ಅನ್ನಿಸಿ ನನ್ನ ಮುಂದೆ ಕಗ್ಗತ್ತಲು ಕವಿಯಿತು. ನಾನು ಆಗಿನಿಂದ ಯಾವುದೇ ವಿನಂತಿಯನ್ನೂ ಮುಂದಿಟ್ಟಿಲ್ಲ ಸುಮ್ಮನಿರುವುದೇ ವಾಸಿ ಎನಿಸಿತು

 ಎರಡನೇ ಪ್ರಶ್ನೆಗೆ ಉತ್ತರ: ನಾನು ಕಾಂಗ್ರೆಸ್‌ನ ವಿರೋಧಿ ಮತ್ತು ಟೀಕಾಕಾರನಾಗಿದ್ದೆ ನಿಜ, ಆದರೆ ಅವರೊಂದಿಗೆ ಕೇವಲ ವಿರೋಧಕ್ಕಾಗಿ ವಿರೋಧ ಈ ಭೂಮಿಕೆ ಎಂದಿಗೂ ಒಪ್ಪಿಗೆಯಾಗಿರಲಿಲ್ಲ. ಸಹಕಾರ್ಯದಿಂದ ನಮಗೆ ಪ್ರಯೋಜನವಾಗುತ್ತಿದ್ದರೆ ಸಹಕಾರ್ಯ ಭಾವನೆಯಿಂದಲೇ ನಡೆದುಕೊಳ್ಳಬೇಕು. ಆದ್ದರಿಂದ ನಾನು ಕಾಂಗ್ರೆಸ್‌ಗೆ ಸಹಕಾರ ಕೊಟ್ಟೆ. ಸಂವಿಧಾನದಲ್ಲಿ ನಮಗೆ ದೊರೆತ ಸಂರಕ್ಷಣೆ (ಆರಕ್ಷಣೆ)ಈ ರೀತಿಯ ಸಹಕಾರವಿಲ್ಲದಿದ್ದರೆ ದೊರೆಯುತ್ತಿರಲಿಲ್ಲ. ನನ್ನ ಈ ವಿಧಾನಕ್ಕೆ ಪುಷ್ಟಿ ನೀಡುವ ಕೆಲ ಉದಾಹರಣೆಗಳನ್ನೂ ಕೊಡುತ್ತೇನೆ. ನಾನು ಮಂತ್ರಿಮಂಡಳದಲ್ಲಿ ಸೇರಿಕೊಂಡಿದ್ದೇಕೆ ಎನ್ನುವುದಕ್ಕೆ ಎರಡು ಕಾರಣಗಳನ್ನು ಕೊಡುತ್ತಿದ್ದೇನೆ. ಒಂದು ಮಂತ್ರಿ ಮಂಡಳ ಸೇರಿಕೊಳ್ಳುವುದಕ್ಕಾಗಿ ನನಗೆ ಕೊಟ್ಟ ಆಮಂತ್ರಣದಲ್ಲಿ ಯಾವುದೇ ಷರತ್ತುಗಳನ್ನು ವಿಧಿಸಿರಲಿಲ್ಲ, ಎರಡನೆಯದಾಗಿ ಹೊರಗಿದ್ದು ಹೋರಾಟ ಮಾಡುವುದಕ್ಕಿಂತ ಸರಕಾರದಲ್ಲಿದ್ದುಕೊಂಡು ಅಸ್ಪಶ್ಯರ ಹಿತವನ್ನು ರಕ್ಷಿಸುವುದು ಹೆಚ್ಚು ಸುಲಭವಾಗಿತ್ತು.

 ಪೂರ್ವಗ್ರಹದೂಷಿತವಾಗಿರುವ ಕೆಲ ಕೆಟ್ಟ ಕಾಯ್ದೆಗಳು ನಮ್ಮ ವಿರುದ್ಧ ಜಾರಿಗೆ ಬರುವ ಸಾಧ್ಯತೆಗಳಿವೆ ಎಂದು ನಾನು ಭಾಷಣದಲ್ಲಿ ಹೇಳಿದ್ದೆ. ದಲಿತ ವರ್ಗ ಆ ಭಯವನ್ನೇ ಇಟ್ಟುಕೊಳ್ಳಬಾರದು. ಈ ಆಡಳಿತದಲ್ಲಿ ದಲಿತ ವರ್ಗದ ಪ್ರತಿನಿಧಿ ಇಲ್ಲದಿದ್ದರಿಂದಲೇ ಅದು ದೂಷಿತವಾಗುತ್ತದೆ. ಆಡಳಿತ ವರ್ಗದಲ್ಲಿ ಸವರ್ಣೀಯರ ಸಂಖ್ಯೆ ಹೆಚ್ಚಾಗಿರುವುದರಿಂದ ಸರಕಾರಕ್ಕೆ ದಲಿತ ವರ್ಗದ ಬಗೆಗೆ ಸಹಾನುಭೂತಿ ಇಲ್ಲ. ಈ ಎಲ್ಲ ವಿಚಾರಗಳನ್ನೂ ಗಮನಿಸಿಯೇ ನಾನು ಸರಕಾರದಲ್ಲಿ ಸೇರಿಕೊಂಡೆ.

ಈಗ ಮೂರನೆಯ ಪ್ರಶ್ನೆ ಕಾಂಗ್ರೆಸ್‌ನಲ್ಲಿ ವಿಲೀನಗೊಳ್ಳುವು ದರಿಂದ ಅಥವಾ ಆ ಪಕ್ಷದಲ್ಲಿ ಸೇರುವುದರಿಂದ ಏನೂ ಪ್ರಯೋಜನವಿಲ್ಲ ಎಂದು ನಾನು ಹೇಳಿದ್ದೆ. ಹೌದು ಮೂರನೆಯ ಪಕ್ಷವಿರುವುದೇ ಹೆಚ್ಚು ಅನುಕೂಲ, ಸುರಕ್ಷಿತ ಸರಕಾರ ಸಾರ್ವಭೌಮತ್ವ ಮರೆಯುವ ಭಯ ಇರುತ್ತದೆ.

ಇತ್ತೀಚೆಗೆ ಸಮಾಜವಾದಿ ಪಕ್ಷ ಕಾಂಗ್ರೆಸ್‌ನಿಂದ ಹೊರಗೆ ಬಿದ್ದುದರಿಂದ ಎರಡು ಪಕ್ಷಗಳು ಆಗಿವೆ. ಈಗ ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕು ಎನ್ನುವ ಪ್ರಶ್ನೆ ಇಲ್ಲವೇ ಇಲ್ಲ. ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕೊ ಸಮಾಜವಾದಿ ಪಕ್ಷಕ್ಕೆ ಸೇರಬೇಕೋ ಎನ್ನುವುದು ನಿಜವಾದ ಪ್ರಶ್ನೆ. ಸಮಾಜವಾದಿ ಪಕ್ಷ ಪ್ರಬಲವಾಗುವ ಸಾಧ್ಯತೆಗಳಿವೆ. ಆದ್ದರಿಂದ ಪಕ್ಷಗಳ ಸಮತೋಲನ ಸಾಧಿಸಿ ಆ ದೃಷ್ಟಿಯಿಂದ ಅವರಿಂದ ಪ್ರಯೋಜನ ಪಡೆದು ಅಧಿಕಾರಕ್ಕೆಂದು ನಮ್ಮ ಮೂರನೆಯ ಪಕ್ಷವನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದೆ. ಕೇವಲ ಅನುಯಾಯಿಗಳ ಸ್ವರೂಪದಲ್ಲಿ ಒಂದು ರಾಜಕೀಯ ಪಕ್ಷಕ್ಕೆ ಹೋಗಿ ಸೇರುವುದರಲ್ಲಿ ಏನೂ ಅರ್ಥವಿಲ್ಲ. ಈ ಮಾರ್ಗದಿಂದ ಹೆಚ್ಚೆಂದರೆ ಒಂದಿಬ್ಬರಿಗೆ ಅಧಿಕಾರ ದೊರೆಯಬಹುದು, ಆದರೆ ಆಡಳಿತದ ಚುಕ್ಕಾಣಿ ದೊರೆತೇ ದೊರೆಯುತ್ತದೆ ಎಂದಿಲ್ಲ.

ಈ ಕುರಿತು ಮಾತನಾಡುವಾಗ ನಾನು ಜನಸಂಖ್ಯೆಯ ಪ್ರಮಾಣವನ್ನು ನೋಡುತ್ತಿದ್ದರೆ ಸಂಯುಕ್ತ ಪ್ರಾಂತದಲ್ಲಿ ದಲಿತರಿಗೆ 22 ಪ್ರತಿಶತ ನೌಕರಿಗಳು ದೊರೆಯಬೇಕಾಗಿತ್ತು. ಕೇವಲ 10 ಪ್ರತಿಶತ ಕೊಟ್ಟು ಕಳುಹಿಸಿದರು. ಆಗ ನೀವು ಒಂದು ಠರಾವು ಪಾಸ್‌ಮಾಡಿ ಪಂತರ ಮಂತ್ರಿ ಮಂಡಳಕ್ಕೆ ನಿಷೇಧ ವ್ಯಕ್ತಪಡಿಸಿದಿರಿ. ನಿಮಗೆ ದೊರೆಯಲೇಬೇಕಾದ ಸ್ಥಾನಗಳನ್ನು ಪಂತರು ನಿಮಗೆ ಏಕೆ ಕೊಡುತ್ತಿಲ್ಲವೆಂದು ಕೇಳಿದೆ. ನಾನೇ ಉತ್ತರಿಸುತ್ತ, ಏಕೆಂದರೆ ಸಂಯುಕ್ತ ಪ್ರಾಂತಿಕ ವಿಧಿ ಮಂಡಳದಲ್ಲಿ ಅವರಿಗೆ ಆವಶ್ಯಕವಾಗಿರುವ ಬಹುಮತಕ್ಕಾಗಿ ಪಂತರು ನಿಮ್ಮ ಮೇಲೆ ಅವಲಂಬಿಸಿಲ್ಲ. ಆದ್ದರಿಂದ ಚರ್ಚೆಮಾಡುವ ಸಮಯದಲ್ಲಿ ಬೇರೆ ಆದರೆ ಬಲಶಾಲಿಯಾದ ಸಂಘಟನೆಯನ್ನು ಸ್ಥಾಪಿಸಿದ ನಂತರವೇ ಆ 22 ಪ್ರತಿಶತಕ್ಕಾಗಿ ಪಂತರ ಬಳಿ ಬೇಡಿಕೆಯನ್ನು ಮುಂದಿಡಿ. ತಮಗೆ ಇವರನ್ನು ಅವಲಂಬಿಸಿರಬೇಕಾಗುತ್ತದೆ ಎನ್ನುವ ಸತ್ಯ ಪಂತರಿಗೆ ತಿಳಿದು ಅವರು ನಿಮ್ಮ ಬೇಡಿಕೆ ಒಪ್ಪಿಕೊಳ್ಳುತ್ತಾರೆ.

ನಂತರ ನಾನು ಹಿಂದುಳಿದ ಸಮಾಜ ಹಾಗೂ ದಲಿತ ವರ್ಗ ಇವರ ಏಕತೆಯ ಕುರಿತು ಮಾತನಾಡಿದೆ. ಇವರಿಬ್ಬರೂ ಸೇರಿದರೆ ದೇಶದ ಬಹುಸಂಖ್ಯಾತರಾಗುತ್ತಾರೆ. ಅವರು ಈ ದೇಶವನ್ನು ಆಳಲಾರರೆ? ರಾಜಕೀಯ ಅಧಿಕಾರವನ್ನು ಕರವಶ ಮಾಡಿಕೊಳ್ಳುವುದಕ್ಕಾಗಿ ಅವರು ಸಂಘಟಿತರಾದರೆ ಸಾಕು. ಈಗಂತೂ ಪ್ರಥಮ ಮತದಾನದಿಂದ ಚುನಾವಣೆಗಳು ನಡೆಯುವುದರಿಂದ ಅದೂ ಕಠಿಣವಿಲ್ಲ. ಕಾಂಗ್ರೆಸ್ ಸರಕಾರ ಖಾಯಂ ಆಗಿ ಉಳಿಯುತ್ತದೆ ಎಂಬ ಭಾವನೆಯಿಂದ ಜನತೆ ನಿಷ್ಕಾಳಜಿಯಿಂದ ಇರಲು ಸಾಧ್ಯವಿಲ್ಲ ಎಂದು ಕಾಣಿಸುತ್ತದೆ ಎಂಬ ಭಾವನೆ ತಪ್ಪು. ಜನಪ್ರತಿನಿಧಿಯ ಪ್ರಜಾತಂತ್ರದಲ್ಲಿ ಎಲ್ಲಿಯೂ ಎಂದೂ ಯಾವುದೇ ಸರಕಾರ ಖಾಯಂ ಇರುವುದು ಸಾಧ್ಯವಿಲ್ಲ. ಪಂ.ನೆಹರೂ ಹಾಗೂ ಸರ್ದಾರ್ ಪಟೇಲರಂತಹ ಮೇಧಾವಿ ಹಾಗೂ ಶ್ರೇಷ್ಠ ನಾಯಕರು ಸ್ಥಾಪಿಸಿದ ಸರಕಾರ ಕೂಡ ಖಾಯಂ ಉಳಿಯು ವುದಿಲ್ಲ. ಇದನ್ನು ನೆನಪಿನಲ್ಲಿಡಿ. ನಾನು ಕಾಂಗ್ರೆಸ್ ಹಾಗೂ ಮಂತ್ರಿ ಮಂಡಳದ ನನ್ನ ಸಹಕಾರಿಗಳ ಮೇಲೆ ಟೀಕೆ ಮಾಡಿದ್ದೇನೆ ಎನ್ನುವ ಮಾತು ಸತ್ಯಕ್ಕೆ ವಿರುದ್ಧವಾದುದು ಎನ್ನುವುದು ನನ್ನ ಮೇಲಿನ ಮಾತು ನಿವೇದನೆಯಿಂದ ವಾಚಕರಿಗೆ ಗೊತ್ತಾಗಿರಬಹುದು.’’


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75