ಇಬ್ಬರು ಮಹಿಳೆಯರಿಂದ ಶಬರಿಮಲೆ ಅಯ್ಯಪ್ಪ ದರ್ಶನ: ಇತಿಹಾಸ ನಿರ್ಮಾಣ

Update: 2019-01-02 16:20 GMT

ತಿರುವನಂತಪುರ, ಜ.2: 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧವಾಗಿದ್ದ ಕೇರಳದ ಶಬರಿಮಲೆ ದೇಗುಲಕ್ಕೆ ಬುಧವಾರ ಇಬ್ಬರು ಭಕ್ತೆಯರು ಪ್ರವೇಶಿಸಿ, ಪ್ರಾರ್ಥನೆ ಸಲ್ಲಿಸಿದರು. ನೂರಾರು ವರ್ಷಗಳ ಸಂಪ್ರದಾಯವನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ. ಅಯ್ಯಪ್ಪ ದರ್ಶನಕ್ಕೆ ಸುಪ್ರೀಂಕೋರ್ಟ್ ಸೆ.28 ರಂದು ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತಗೊಳಿಸಿದ ಬಳಿಕ ಇದೇ ಮೊದಲ ಬಾರಿ ಮಹಿಳೆಯರಿಬ್ಬರು ಅಯ್ಯಪ್ಪ ದರ್ಶನ ಪಡೆದಿದ್ದಾರೆ.

ಕೇರಳ ನಿವಾಸಿಗಳಾದ ಸಿಂಧು ಹಾಗೂ ಕನಕದುರ್ಗಾ ಎಂಬ ಹೆಸರಿನ ಇಬ್ಬರು ಭಕ್ತೆಯರು ಕಳೆದ ವಾರ ಅಯ್ಯಪ್ಪ ದರ್ಶನಕ್ಕೆ ಯತ್ನಿಸಿದ್ದರು. ಇಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ ದೇಗುಲ ಪ್ರವೇಶಿಸಿ ಅಯ್ಯಪ್ಪ ದರ್ಶನ ಪಡೆದಿದ್ದೇವೆ ಎಂದು ಈ ಇಬ್ಬರು ಮಹಿಳೆಯರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ಬೆಂಗಾವಲಾಗಿ ನಿಂತಿದ್ದರು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಪ್ಪು ಬಟ್ಟೆ ಧರಿಸಿದ್ದ ಮಹಿಳೆಯರಿಬ್ಬರು ಪೊಲೀಸರ ಭದ್ರತೆಯಲ್ಲಿ ದೇಗುಲ ಪ್ರವೇಶಿಸುತ್ತಿದ್ದ ವಿಡಿಯೋ ಸ್ಥಳೀಯ ನ್ಯೂಸ್ 24 ಚಾನಲ್‌ನಲ್ಲಿ ಮೊದಲ ಬಾರಿ ಪ್ರಸಾರವಾಗಿದೆ.

ಮಂಡಳಂ ಋತುವಿನಲ್ಲಿ 10ಕ್ಕೂ ಅಧಿಕ ಮಹಿಳೆಯರು ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯಲು ವಿಫಲ ಯತ್ನ ನಡೆಸಿದ್ದರು.

ಬಿಂದು, ಕನಕದುರ್ಗ ಯಾರು ?

ಬಿಂದು ಕಣ್ಣೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಲೀಗಲ್ ಸ್ಟಡಿಯ ಉಪನ್ಯಾಸಕಿ. ಕನಕ ದುರ್ಗ ಮಲಪ್ಪುರಂ ಅಂಗಾಡಿಪುರಂನ ನಾಗರಿಕ ಸೇವಾ ಇಲಾಖೆಯ ತಾತ್ಕಾಲಿಕ ಉದ್ಯೋಗಿ.

ಸಿಪಿಎಂ ಸಂಚು

ಕನಕ ದುರ್ಗ ಅವರ ನಡೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಸಿಪಿಎಂ ಹಾಗೂ ಕೊಟ್ಟಾಯಂ ಪೊಲೀಸ್ ಅಧೀಕ್ಷಕ ಹರಿಶಂಕರ್ ಅವರ ಪಿತೂರಿ ಇದೆ ಎಂದು ಕನಕ ದುರ್ಗ ಅವರ ಸಹೋದರ ಭಾರತ್‌ಭೂಷಣ್ ಆರೋಪಿಸಿದ್ದಾರೆ.

ರಾಜಕೀಯ ನಾಟಕದ ಕ್ಲೈಮ್ಯಾಕ್ಸ್

ಇದು ನವೋತ್ಥಾನ ಗೋಡೆಯ ಹೆಸರಿನಲ್ಲಿ ನಡೆದ ರಾಜಕೀಯ ನಾಟಕದ ಕ್ಲೈಮಾಕ್ಸ್ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ. ಈ ಯೋಜನೆ ಹಾಗೂ ಕಾರ್ಯಾಚರಣೆಯ ನೇತೃತ್ವವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಹಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News