ರಾಜಕೀಯವಾಗಿ ತಟಸ್ಥವಾಗಿರುವ ಅಧಿಕಾರಶಾಹಿಯ ಅಗತ್ಯವಿದೆಯೇ?
ಒಬ್ಬ ನಿಸ್ಪೃಹ ಅಧಿಕಾರಿಗೆ ಸಾಂವಿಧಾನಿಕ ತತ್ವಗಳಿಗೆ ಬದ್ಧರಾಗಿರುವುದು ಆಜೀವಪರ್ಯಂತ ಆಚರಿಸಬೇಕಿರುವ ಮೌಲ್ಯವಾಗಿದೆಯೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ ಅದಕ್ಕಿಂತ ಮಹತ್ವದ ಸಂಗತಿಯೆಂದರೆ ಅದನ್ನವರು ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಮಧ್ಯವರ್ತಿತನದ ಅಗತ್ಯವಿಲ್ಲದೆ ಆಚರಿಸಬಹುದು. ಹಾಗಿರುವಾಗ, ಒಂದು ಅಧಿಕಾರಶಾಹಿಯು ಶಾಂತಿ, ಸೌಹಾರ್ದ ಮತ್ತು ನ್ಯಾಯಕ್ಕೆ ಎಷ್ಟು ಬದ್ಧವಾಗಿರುತ್ತದೆಂಬುದರ ಸಾಮರ್ಥ್ಯವನ್ನು ಅದು ಸಂವಿಧಾನಕ್ಕೆ ಎಷ್ಟು ಬದ್ಧವಾಗಿರುತ್ತದೆಂಬ ಅಳತೆಗೋಲಿನ ಮೇಲೆ ನಿರ್ಧರಿಸಬಹುದು.
ಕೃಪೆ: Economic and Political Weekly
ಉತ್ತರಪ್ರದೇಶದ ಮುಖ್ಯಮಂತ್ರಿಗಳನ್ನುದ್ದೇಶಿಸಿ ಎಂಬತ್ತಕ್ಕೂ ಹೆಚ್ಚು ನಿವೃತ್ತ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಬರೆದಿರುವ ಬಹಿರಂಗ ಪತ್ರವು ಹಲವಾರು ಕಾರಣಗಳಿಂದ ಮಹತ್ವದ್ದಾಗಿದೆ. ಮೊದಲನೆಯದಾಗಿ ಆ ಪತ್ರವನ್ನು ಭಾರತದ ಸಂವಿಧಾನದಲ್ಲಿರುವ ಅಂತರ್ಗತ ತತ್ವಗಳನ್ನು ಆಧರಿಸಿ ಬರೆಯಲಾಗಿದೆ. ಆ ಪತ್ರವು ಸಂವಿಧಾನದ ಪ್ರೇರಣೆಯಿಂದ ಬರೆಯಲ್ಪಟ್ಟಿದ್ದು ಅದಕ್ಕೆ ತನ್ನ ಬದ್ಧತೆಯನ್ನು ತೋರುತ್ತದೆ. ಸರಕಾರಿ ಅಧಿಕಾರಿಗಳು ಸಂವಿಧಾನದ ನೈತಿಕ ಅಧಿಕಾರಕ್ಕೆ ಹೊರತುಪಡಿಸಿ ಯಾವುದೇ ರಾಜಕಾರಣಿಗಳ ಅಥವಾ ಇನ್ಯಾವುದೇ ಇತರ ಅಧಿಕಾರ ಕೇಂದ್ರದ ಗುಲಾಮರಲ್ಲವೆಂದು ಆ ಪತ್ರವು ತೋರಿಸುತ್ತದೆ. ಎರಡನೆಯದಾಗಿ, ಅಧಿಕಾರಶಾಹಿಯು ತಟಸ್ಥವಾಗಿರಬೇಕೆಂದರೆ ಆಡಳಿತರೂಢ ಸರಕಾರದ ಪಟ್ಟಭದ್ರ ಹಿತಾಸಕ್ತಿಗಳಿಂದ ಮಾತ್ರವಲ್ಲದೆ ತನಗೆ ಒಗ್ಗದವರನ್ನು ಹೀನಾಯವಾದ ಅಪಮಾನಕ್ಕೆ ಗುರಿಮಾಡುವ ಕೆಲವು ಸಾಮಾಜಿಕ ಗುಂಪುಗಳ ಅಜೆಂಡಾಗಳಿಂದಲೂ ದೂರವಿರುವಷ್ಟು ಸ್ವಾತಂತ್ರವನ್ನು ತೋರಬೇಕಾಗುತ್ತದೆ.
ಒಂದು ಸರಕಾರವು, ಹಾಲಿ ಸಂದರ್ಭದಲ್ಲಿ ಉತ್ತರಪ್ರದೇಶ ಸರಕಾರವು, ತನ್ನ ಕರ್ತವ್ಯವನ್ನು ಪಾಲಿಸದ ಸಂದರ್ಭದಲ್ಲಿ ಸರಕಾರಿ ಅಧಿಕಾರಿಗಳು ಕನಿಷ್ಠ ಪಕ್ಷ ತಮ್ಮ ಕಳವಳವನ್ನಾದರೂ ದಾಖಲಿಸಬೇಕಿರುವುದು ಅಗತ್ಯವೆಂಬುದನ್ನು ಈ ಪತ್ರದ ಆಶಯವು ಸ್ಪಷ್ಟಪಡಿಸುತ್ತದೆ. ಇಂಥಾ ಒಂದು ನಡೆಯು ಅಧಿಕಾರಶಾಹಿಯು ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅತ್ಯಗತ್ಯ. ಮಾತ್ರವಲ್ಲದೆ ಸಾಮಾಜಿಕ ಅನುಕಂಪ ಹೊಂದಿರುವ ಅಧಿಕಾರಿಗಳು ಹಂತಕ ಗುಂಪುಗಳ ದಾಳಿಗೆ ಗುರಿಯಾಗಿಬಿಡುವ ಶಾಶ್ವತ ಭಯದಲ್ಲಿರುವ ಸಾಮಾಜಿಕ ಗುಂಪುಗಳಿಗೆ ಸ್ವಲ್ಪವಾದರೂ ನಿರಾಳತೆ ಉಂಟುಮಾಡುವಂತಹ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸರ್ವಾಧಿಕಾರದ ಆತಂಕವು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂವಿಧಾನಕ್ಕೆ ಬದ್ಧರಾಗಿರುವ ಅಧಿಕಾರಶಾಹಿ ಹಿಂದೆಂದಿಗಿಂತಲೂ ಅಗತ್ಯವಾಗಿದೆ. ಮೂರನೆಯದಾಗಿ, ಸರಕಾರಗಳ ವೈಫಲ್ಯವೇ ಹಲವು ಬಗೆಯ ಹಂತಕ ಗುಂಪು ಮನೋಭಾವಗಳ ಹುಟ್ಟಿಗೂ ಕಾರಣವಾಗುತ್ತಲಿದೆ.
ಹೀಗಾಗಿ ಅಧಿಕಾರಶಾಹಿಯ ಅಗತ್ಯವಿಲ್ಲದೆ ಜನರೇ ಜವಾಬ್ದಾರಿಯುತ ನಾಗರಿಕರಾಗಿ ಸ್ವಯಂ ಸಂಘಟಿತಗೊಳ್ಳುತ್ತಾರೆಂಬ ಅಧಿಕಾರಿಶಾಹಿಯೋತ್ತರ ಸಮಾಜದ ತರ್ಕವು ಅಸಂಬದ್ಧವೆಂಬುದನ್ನೂ ಆ ಪತ್ರವು ತೋರಿಸುತ್ತದೆ. ಭಾರತದಲ್ಲಿ ನಮಗೆ ಸಾಂವಿಧಾನಿಕವಾಗಿ ಬದ್ಧರಾದ ಮತ್ತು ರಾಜಕೀಯವಾಗಿ ಹಾಗೂ ತಾತ್ವಿಕವಾಗಿ ತಟಸ್ಥರಾಗಿರುವ ಅಧಿಕಾರಶಾಹಿಯ ಅಗತ್ಯವಿದೆಯಲ್ಲವೇ? ಅಂತಿಮವಾಗಿ ಮತ್ತು ಅತ್ಯಂತ ಮುಖ್ಯವಾಗಿ ನಿವೃತ್ತರಾದ ನಂತರವೂ ಸರಕಾರಿ ಅಧಿಕಾರಿಗಳು ಸಮಾಜದ ಒಳಿತಿನ ಉದ್ದೇಶವುಳ್ಳ ಉನ್ನತ ಆದರ್ಶಗಳಿಗಾಗಿ ಮಹತ್ವದ ಮಧ್ಯಪ್ರವೇಶವನ್ನು ಮಾಡಬಹುದೆಂದೂ ಅದು ತೋರಿಸುತ್ತದೆ. ಅದಕ್ಕಾಗಿ ಅವರು ಭಯಭೀತಿಯಿಂದ ಮುಕ್ತವಾದ ಸ್ವಾತಂತ್ರ್ಯ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವ ಸಾಂವಿಧಾನಿಕ ತತ್ವಗಳ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ಹೊಂದಿರದ ಯಾವುದೇ ಔಪಚಾರಿಕ ರಾಜಕೀಯದ ಮೊರೆಹೋಗುವ ಅಗತ್ಯವಿಲ್ಲವೆಂಬುದನ್ನೂ ಈ ಪತ್ರವು ತೋರಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಇದುವರೆಗೆ ಪರಮತ ದ್ವೇಷ ಮತ್ತು ತೇಜೋವಧೆಗಳ ವಿರುದ್ಧದ ಧೋರಣೆಯನ್ನು ಆಚರಣೆಯಲ್ಲಿ ಎಂದೂ ದೃಢವಾಗಿ ತೋರದಂಥ ರಾಜಕೀಯ ಪಕ್ಷಗಳನ್ನು ಸೇರಿಕೊಂಡಿರುವ ನಿವೃತ್ತ ಅಧಿಕಾರಿಗಳ ಮುಖಕ್ಕೆ ಈ ಪತ್ರವು ಕನ್ನಡಿ ಹಿಡಿಯುತ್ತದೆ.
ಹೀಗಾಗಿ ಒಬ್ಬ ನಿಸ್ಪೃಹ ಅಧಿಕಾರಿಗೆ ಸಾಂವಿಧಾನಿಕ ತತ್ವಗಳಿಗೆ ಬದ್ಧರಾಗಿರುವುದು ಆಜೀವಪರ್ಯಂತ ಆಚರಿಸಬೇಕಿರುವ ಮೌಲ್ಯವಾಗಿದೆ ಯೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ ಅದಕ್ಕಿಂತ ಮಹತ್ವದ ಸಂಗತಿಯೆಂದರೆ ಅದನ್ನವರು ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಮಧ್ಯವರ್ತಿತನದ ಅಗತ್ಯವಿಲ್ಲದೆ ಆಚರಿಸಬಹುದು. ಹಾಗಿರುವಾಗ, ಒಂದು ಅಧಿಕಾರಶಾಹಿಯು ಶಾಂತಿ, ಸೌಹಾರ್ದ ಮತ್ತು ನ್ಯಾಯಕ್ಕೆ ಎಷ್ಟು ಬದ್ಧವಾಗಿರುತ್ತದೆಂಬುದರ ಸಾಮರ್ಥ್ಯವನ್ನು ಅದು ಸಂವಿಧಾನಕ್ಕೆ ಎಷ್ಟು ಬದ್ಧವಾಗಿರುತ್ತದೆಂಬ ಅಳತೆಗೋಲಿನ ಮೇಲೆ ನಿರ್ಧರಿಸಬಹುದು. ಒಂದು ರಾಜಕೀಯ ಅಥವಾ ಸೈದ್ಧಾಂತಿಕತೆಯ ನೆರವಿಲ್ಲದೆ ಸಾಮಾಜಿಕವಾಗಿ ಪರಿಣಾಮಕಾರಿಯಾದ ಒಂದು ಯಂತ್ರಾಂಗವಾಗಿ ಅಧಿಕಾರಿಶಾಹಿಯು ಸೇವೆ ಸಲ್ಲಿಸಬಹುದು. ಲಿಂಗ ಸಮಾನತೆ ಮತ್ತು ಸಾಮಾಜಿಕ ಬಹುತ್ವದ ಮೌಲ್ಯಗಳಿಗೆ ಹಾನಿ ಮಾಡಿರುವ ಪಕ್ಷಗಳನ್ನು ಸೇರಿರುವ ಅಥವಾ ಸೇರಬಯಸುತ್ತಿರುವ ಅಧಿಕಾರಿಗಳು ತಮ್ಮ ಈ ನಡೆಗಳಿಗೆ ಸಾರ್ವಜನಿಕ ಮನ್ನಣೆಯನ್ನು ಪಡೆದುಕೊಳ್ಳಬೇಕಾದ ಹೊಣೆಗಾರಿಕೆಯನ್ನೂ ಹೊಂದಿದ್ದಾರೆ. ಅಧಿಕಾರದಲ್ಲಿದ್ದಾಗ ತಾವು ಎಷ್ಟರಮಟ್ಟಿಗೆ ಸಾಂವಿಧಾನಿಕ ಆದರ್ಶಗಳಿಗೆ ಬದ್ಧರಾಗಿ ನಡೆದುಕೊಂಡಿದ್ದರೆಂಬುದನ್ನು ಸಹ ಅವರು ಸಾರ್ವಜನಿಕರಿಗೆ ವಿವರಿಸಬೇಕಾಗುತ್ತದೆ.
ಸಾಂವಿಧಾನಿಕ ಮೌಲ್ಯಗಳನ್ನು ಪಾಲಿಸುವಲ್ಲಿ ದೃಢವಾದ ಬದ್ಧತೆಯನ್ನೇನೂ ಹೊಂದದ ರಾಜಕೀಯ ಪಕ್ಷಗಳು ನಿವೃತ್ತ ಸರಕಾರಿ ಅಧಿಕಾರಿಗಳನ್ನು ತಮ್ಮ ಪಕ್ಷಗಳಿಗೆ ಸೇರಿಸಿಕೊಳ್ಳುವಾಗ ಇಂಥಾ ಪ್ರಶ್ನೆಗಳನ್ನೇನು ಕೇಳುವುದಿಲ್ಲವಾದ್ದರಿಂದ ಅಧಿಕಾರಿಗಳ ಈ ಸ್ವವಿವರಣೆ ಒಂದು ನೈತಿಕ ಅಗತ್ಯವೂ ಆಗಿಬಿಡುತ್ತದೆ. ನಮ್ಮ ಕೆಲವು ಸರಕಾರಿ ಅಧಿಕಾರಿಗಳು ಕಚೇರಿಯ ಹೊರಗಡೆ ತಮ್ಮ ಜಾತಿ/ಪುರುಷ ಮೇಲರಿಮೆಗಳನ್ನಾಗಲೀ ಮತ್ತು ಕೆಲವು ಸಮುದಾಯಗಳ ಬಗ್ಗೆ ತಮ್ಮೆಳಗೆ ಆಳವಾಗಿ ಬೇರುಬಿಟ್ಟಿರುವ ದ್ವೇಷಗಳನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಅಂಥವರು ರಾಜಕೀಯ ಪಕ್ಷಗಳನ್ನು ಸೇರುವಾಗ ತಾವು ಅಧಿಕಾರದಲ್ಲಿದ್ದಾಗ ಅನುಸರಿಸಿದ ನಡೆಗಳ ಬಗ್ಗೆ ಜನರಿಗೆ ವಿವರಣೆಯನ್ನು ನೀಡುವ ಅಗತ್ಯವಿದೆ. ಹಾಗೆ ನೋಡಿದರೆ ಭಾರತದಲ್ಲಿನ ಆಧಿಕಾರಿಶಾಹಿಯ ರಚನೆಯು ಒಂದು ಅಧಿಕಾರಶಾಹಿ ಮೇಲರಿಮೆಯ ಧೋರಣೆಯಿಂದಲೇ ರಚಿತವಾಗಿದೆಯೆಂದು ಹೇಳಬಹುದು. ಆಡಳಿತಾತ್ಮಕ ವರ್ಗಾವಣೆಗಳು ನಡೆದಾಗ ವರ್ಗಾವಣೆ ಸಂಬಂಧಿ ಕಾಗದ ಪತ್ರಗಳಿಗಿಂತಲೂ ಆ ವ್ಯಕ್ತಿಯ ಜಾತಿ ಹಿನ್ನೆಲೆಯ ಮಾಹಿತಿಯು ಬೇಗ ತಲುಪಿರುತ್ತದೆ. ಅಧಿಕಾರಶಾಹಿಯೊಳಗೆ ಜಾತಿ, ಲಿಂಗ, ಪ್ರಾದೇಶಿಕ, ಭಾಷಿಕ ಮತ್ತು ಧಾರ್ಮಿಕ ಆಧಾರಿತ ತಾರತಮ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ.
ಸರಕಾರಿ ಅಧಿಕಾರಿಗಳಿಗೆ ಎರಡು ಅಂತರ್‌ಸಂಬಂಧಿ ನೈತಿಕ ಕರ್ತವ್ಯಗಳಿ ರುತ್ತವೆ. ಮೊದಲನೆಯದು, ತಾನೂ ಸಹ ಒಂದು ಭಾಗವೇ ಆಗಿರುವ ಪ್ರಭುತ್ವದ ಮೇಲೆ ದಾಳಿ ಮಾಡುವ ಅಥವಾ ಅದನ್ನು ಅಸ್ಥಿರಗೊಳಿಸುವ ಉದ್ದೇಶಹೊಂದಿರುವ ನಾಗರಿಕ ಸಮಾಜದೊಳಗಿನ ವಿಚ್ಛಿದ್ರಕಾರಿ ಶಕ್ತಿಗಳಿಂದ ಪ್ರಭುತ್ವವನ್ನು ರಕ್ಷಿಸುವುದು. ಜಾತಿವಾದಿ ಮತ್ತು ಪಿತೃಸ್ವಾಮ್ಯ ಧೋರಣೆ ಹೊಂದಿರುವ ಸಮಾಜದ ವಿನಾಶಕಾರಿ ಶಕ್ತಿಗಳನ್ನು ತಡೆಗಟ್ಟುವುದು. ಆ ಸಮಾಜವು ಉಗ್ರ ಸನಾತನವಾದಿತನಕ್ಕೆ ಹೆಚ್ಚೆಚ್ಚು ಶರಣಾಗದಂತಿರಲು ಸಾರ್ವಜನಿಕ ಜೀವನದಲ್ಲಿ ಅಧಿಕಾರಶಾಹಿಯು ಮಧ್ಯಪ್ರವೇಶ ಮಾಡಬೇಕಿರುತ್ತದೆ. ಈ ಅವಳಿ ಕರ್ತವ್ಯಗಳನ್ನು ನಿರ್ವಹಿಸಬೇಕೆಂದರೆ ಆಡಳಿತರೂಢ ಸರಕಾರವು ಸಂವಿಧಾನ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳುಳ್ಳ ನೀತಿಗಳನ್ನು ಜಾರಿಗೆ ತರಬಯಸಿದಾಗ ಅದನ್ನು ವಿರೋಧಿಸಬಲ್ಲ ನೈತಿಕ ಸಾಮರ್ಥ್ಯವನ್ನು ಅಧಿಕಾರಿಗಳು ಪಡೆದಿರಬೇಕು.
ಮತ್ತೊಂದೆಡೆ, ಸಂವಿಧಾನಾತ್ಮಕ ಮೌಲ್ಯಗಳಿಗೆ ವ್ಯತಿರಿಕ್ತವಾಗಿರುವ ಜನರ ಸಮಸ್ಯಾತ್ಮಕ ದೈನಂದಿನ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಂವಿಧಾನಿಕ ತತ್ವಗಳನ್ನು ಅನ್ವಯಿಸುವಂತಾಗಬೇಕು. ಹೀಗೆ ಅಧಿಕಾರಶಾಹಿಯ ಕ್ರಿಯೆಗಳು ಅಂತಿಮವಾಗಿ ಒಂದು ಸಭ್ಯ ಮತ್ತು ಶಾಂತಿಯುತ ಸಮಾಜವನ್ನು ಸ್ಥಾಪಿಸಬೇಕೆಂಬ ವಿಶ್ವಾತ್ಮಕ ಆದರ್ಶಗಳ ಭಾಗವೇ ಆಗಿರುವ ಹಿನ್ನೆಲೆಯಲ್ಲಿ ಈ ಅಧಿಕಾರಿಗಳು ಸಹ ಅಂತಹ ವಿಶ್ವಾತ್ಮಕ ವರ್ಗದ ಭಾಗವೇ ಆಗಿರುತ್ತಾರೆ. ಅಂಥಾ ಒಂದು ವಿಶ್ವಾತ್ಮಕ ವರ್ಗದ ಸದಸ್ಯರಾಗಿರುವ ಅಧಿಕಾರಿಗಳು ತಮ್ಮ ಅಧಿಕಾರವನ್ನು ತಮ್ಮ ಹಿತಾಸಕ್ತಿಗಾಗಿ ಬಳಸದೆ ಸಾಮಾಜಿಕ ಸಂಬಂಧಗಳ ವಿಕೃತ ತಳಹದಿಯನ್ನು ಬದಲಾಯಿಸಿ ಅವನ್ನು ಇನ್ನಷ್ಟು ಸಭ್ಯವಾದ ಮಾದರಿಯಲ್ಲಿ ಮರುಜೋಡಿಸುವಂತಹ ವಿಶಾಲವಾದ ಪಾತ್ರವನ್ನು ವಹಿಸುತ್ತಾರೆ. ಸಾಮಾಜಿಕ ಸಂಬಂಧಗಳಲ್ಲಿರುವ ವೈಷಮ್ಯವನ್ನು ಮನಒಲಿಸುವ ಮೂಲಕ, ಅನುಸಂಧಾನದ ಮೂಲಕ ಮತ್ತು ಮಧ್ಯವರ್ತಿಗಳಾಗುವ ಮೂಲಕ ಕರಗಿಸಬಲ್ಲ ಸಾಮರ್ಥ್ಯ ಅದಕ್ಕಿರುತ್ತದೆ. ಅಂಥ ಒಂದು ವಿಶ್ವಾತ್ಮಕ ಆದರ್ಶಗಳಿಗೆ ತದ್ವಿರುದ್ಧವಾಗಿ ಸಂಕುಚಿತ ಆಸಕ್ತಿಗಳಿರುತ್ತವೆ. ಹೀಗೆ, ಆ ಪತ್ರವನ್ನು ಬರೆದ ಅಧಿಕಾರಿಗಳ ಒಕ್ಕಣೆಯಲ್ಲಿರುವ ತಟಸ್ಥ ತತ್ವಕ್ಕೆ ಸರಕಾರಿ ಅಧಿಕಾರಿಗಳು ಆಡಳಿತರೂಢ ಸರಕಾರದ ಗುಲಾಮರಾಗದಂತೆ ತಡೆಗಟ್ಟುವ ನೈತಿಕ ಕಾರ್ಯಭಾರವೂ ಇದೆ.