ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವು ಅತ್ಯಂತ ಅವಶ್ಯ
‘‘ತಾ. 25ನೇ ನವೆಂಬರ್ 1951ರ ರವಿವಾರದಂದು ಸಂಜೆ ನಾಲ್ಕು ಗಂಟೆ ಸಮಯಕ್ಕೆ ಶಿವಾಜಿ ಪಾರ್ಕ್ ಮುಂಬೈ ಇಲ್ಲಿ ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಷನ್ ಮತ್ತು ಸಮಾಜವಾದಿ ಪಕ್ಷದ ವತಿಯಿಂದ ಚುನಾವಣಾ ಪ್ರಚಾರದ ಜಂಟಿ ಸಭೆ ನಡೆಯಲಿದೆ. ಸಭೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅಶೋಕ ಮೆಹ್ತಾ ಅವರ ಭಾಷಣಗಳಿವೆ. ಅದಕ್ಕೆ ಮೊದಲು ಭಾಯಖಳಾ ದಿಂದ ಪ್ರಚಂಡ ಮೆರವಣಿಗೆಯು ಹೊರಡುತ್ತದೆ. ಅದರಲ್ಲಿ ಎಲ್ಲರೂ ಬಂದು ಶಾಮೀಲಾಗಬೇಕು’’ ಎಂಬುದಾಗಿ ಪ್ರಚಾರಕರಾದ ಜ. ಗ. ಬಾತನಕರ, ಜನರಲ್ ಸೆಕ್ರೆಟರಿ, ಮುಂಬೈ ದಲಿತ ಫೆಡರೇಶನ್ ಶಾಖಾ ಇವರ ಹೆಸರಲ್ಲಿ ನವೆಂಬರ್ 24ರಂದು ಜನತಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಸಭೆಯಲ್ಲಿ ಸುಮಾರು ಎರಡು ಲಕ್ಷದಷ್ಟು ಜನಸಮುದಾಯವೂ ಹಾಜರಿರಬಹುದು.
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಹೇಳಿದ ವಿಚಾರಗಳಿವು:
ಮೊನ್ನೆಯ ಭಾಷಣದಲ್ಲಿ ಪಂಡಿತ್ ನೆಹರೂ ಅವರು ನನ್ನ ಟೀಕೆಗಳಿಗೆ ಉತ್ತರ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಹಾಗಾಗಿ ನಾನು ಈಗ ಆ ಸಂಬಂಧವಾಗಿ ಮಾತನಾಡಿದರೆ ಅಪ್ರಸ್ತುತವಾಗಲಾರದು. ನಾನು ಕಾಂಗ್ರೆಸಿನ ಬಗ್ಗೆ ಯಾವ ರೀತಿಯಲ್ಲಿ ಟೀಕೆ ಮಾಡುತ್ತೇನೋ ಅದೇ ಟೀಕೆಗಳನ್ನು ನಾನು ರಾಜೀನಾಮೆ ಪತ್ರದಲ್ಲೂ ಬರೆದಿದ್ದೆ. ನೆಹರೂ ಅವರು ಕಳೆದ ಅನೇಕ ದಿನಗಳಿಂದ ನನ್ನ ಟೀಕೆಗಳಿಗೆ ಉತ್ತರ ಕೊಡುವುದಕ್ಕೆ ಪ್ರಯತ್ನವನ್ನೇ ಮಾಡಿರಲಿಲ್ಲ. ಲೋಕಸಭೆಯಲ್ಲಿಯೂ ಕೂಡ ನಾನು ಹೊರಟು ಹೋದ ಮೇಲೆ ಸಾಯಂಕಾಲ ಆರು ಗಂಟೆಯ ಸುಮಾರಿಗೆ ಅವರು ತನ್ನ ಮತ್ತು ನನ್ನ ಪತ್ರ ವ್ಯವಹಾರವನ್ನು ಮಾತ್ರವೇ ಓದಿ ತೋರಿಸಿದ್ದರು. ಆದರೆ ನನ್ನ ಆರೋಪಗಳನ್ನು ನಿರಾಕರಿಸಲಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿಯೂ ಕೂಡ ಅವರು ಆ ಸಂಬಂಧವಾಗಿ ಇದನ್ನು ಮುಕ್ತವಾಗಿ ಹೇಳಲಿಲ್ಲ. ಸರಿ ಮೊನ್ನೆಯ ಭಾಷಣದಲ್ಲಿ ಅವರು ಹೇಳಿರುವುದು ಆದರೂ ಏನನ್ನು ?
ಕಾಂಗ್ರೆಸಿನ ಬಗ್ಗೆ ಮುಖ್ಯವಾಗಿ ನನ್ನ ಎರಡು ಆರೋಪಗಳಿವೆ.ಒಂದು ಹರಿಜನರ ಉನ್ನತಿಗಾಗಿ ಕಾಂಗ್ರೆಸ್ ಸರಕಾರವು ಯಾವುದೇ ಕಾರ್ಯಕ್ರಮವನ್ನು ಕೈಗೊಂಡಿಲ್ಲ. ಪಂಡಿತ್ ನೆಹರೂ ಅವರು ಹೇಳಿದ ಹಾಗೆ, ನನ್ನ ಈ ಅಭಿಪ್ರಾಯವು ಸುಳ್ಳು. ಆದರೆ ಇದು ಅಭಿಪ್ರಾಯಗಳ ಪ್ರಶ್ನೆಯಲ್ಲ. ವಾಸ್ತವಿಕ ಸಂಗತಿಯೇ ಆಗಿದೆ. ಪಂಡಿತ್ ನೆಹರೂ ಅವರು ಮಾತ್ರವೇ ಸತ್ಯದ ವಕ್ತಾರರಾಗಿದ್ದಾರೆ ಮತ್ತು ಉಳಿದವರಲ್ಲ ಎಂದು ಜಗತ್ತೇನು ಒಪ್ಪಿಕೊಂಡಿಲ್ಲ. ಇನ್ನು ನಾನಾದರೂ ಕೂಡ ಹಾಗೇ ಮಾನ್ಯ ಮಾಡಿರುವುದಿಲ್ಲ. ನನ್ನ ಅಭಿಪ್ರಾಯವೆಂದರೆ, ನೆಹರೂ ಅವರು ಕೇವಲ ಒಂದೇ ರೀತಿಯಲ್ಲಿ ಹೇಳುತ್ತಿರುವ ವಿಚಾರಗಳೆಂದರೆ ತಮ್ಮ ಸರಕಾರವು ಹರಿಜನರಿಗಾಗಿ ಏನೇನೆಲ್ಲ ಮಾಡಿದೆ ಎಂಬುದರ ಸಮಗ್ರ ವಸ್ತುಸ್ಥಿತಿಯನ್ನು ನಿದರ್ಶನಗಳ ಮೂಲಕ ಮಾಹಿತಿಯನ್ನು ಕೊಡುವಂತಹ ಒಬ್ಬ ವಕ್ತಾರನನ್ನು ನೇಮಿಸಿ ಕೊಳ್ಳಬೇಕಾಗಿತ್ತು. ಅಲ್ಲದೆ ಅವರ ಸರಕಾರಿ ದಫ್ತರಿನಲ್ಲಿಯಾದರೂ ಈ ಮಾಹಿತಿಯು ಇದೆಯೋ ಇಲ್ಲವೋ? ಮುಂಬೈಗೆ ಬರುವುದಕ್ಕೆ ಮೊದಲು ಜಾಹೀರುಗೊಂಡಿದ್ದ ಸಭೆಯಲ್ಲಿ ನನ್ನ ಆರೋಪಗಳಿಗೆ ಉತ್ತರ ಕೊಡುವ ಮುನ್ನ ತಮ್ಮ ಖಾತೆಯ ಮೂಲಕ ಈ ಮಾಹಿತಿಗಳನ್ನು ಏತಕ್ಕೆ ತಂದಿರಲಿಲ್ಲ.? ನನ್ನ ಆರೋಪಗಳು ಮತ್ತು ಕಾಲಕಾಲಕ್ಕೆ ಕಳುಹಿಸಿದ ಪತ್ರಗಳು ಪಂಡಿತ್ ನೆಹರೂ ಅವರ ಹತ್ತಿರ ಇದ್ದಿರಲೇಬೇಕು. ಅಲ್ಲದೆ ನನ್ನ ಹತ್ತಿರ ಅವುಗಳ ಪ್ರತಿಗಳು ಇವೆ. ಹಾಗಾಗಿ ಅವುಗಳ ಆರೋಪಗಳಿಗೆಲ್ಲ ವಿಷಯಾನುಸಾರ ಉತ್ತರ ಕೊಡಬೇಕು ಎಂಬುದು ನೆಹರೂರಿಗೆ ನಾನು ಹೇಳುತ್ತಿರುವ ಸಂಗತಿಗಳು.
ಅವರ ವಿದೇಶಿ ಧೋರಣೆಗಳ ಬಗ್ಗೆ ನನ್ನ ಮತ್ತೊಂದು ಆರೋಪವಿದೆ. ಮಂತ್ರಿಮಂಡಲದಲ್ಲಿ ಇರುವಾಗ ನಾನು ಆ ಸಂಬಂಧವಾಗಿ ಏನನ್ನೂ ಮಾತನಾಡಿರಲಿಲ್ಲ ಎಂಬುದು ನೆಹರೂ ಅವರು ಅಭಿಪ್ರಾಯವಾಗಿದೆ.ಅದಕ್ಕೆ ಕಾರಣವಾದ ಮೊದಲನೆಯ ವಿಚಾರವು ಹೀಗಿದೆ. ಆಗಸ್ಟ್ 15, 1947ರಿಂದ ಜನವರಿ 26, 1950ರವರೆಗೂ ನಾನು ಸಂವಿಧಾನ ರಚನೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದೆ. ಆಗ ವಿದೇಶಿ ರಾಷ್ಟ್ರಗಳ ಧೋರಣೆಗಳ ಬಗೆಗೆ ನೆಹರೂ ಅವರೊಂದಿಗೆ ಮಾತಾಡುವುದಕ್ಕೆ ಸಮಯವೇ ಆಗಿರಲಿಲ್ಲ. ಎರಡನೆಯದೆಂದರೆ ನಾನು ಆ ಹೊತ್ತಿಗೆ ನೆಹರೂ ಅವರೊಂದಿಗೆ ಮಾತನಾಡಲಿಲ್ಲ ಎಂಬುದು ಹೇಗೆ ತಪ್ಪಾಗುತ್ತದೆ? ಎಂಬ ಬಗೆಗೆ ನೀವೇ ತಿಳಿದುಕೊಳ್ಳಿರಿ. ಆ ಹೊತ್ತಿಗೆ ನಾನು ನನ್ನ ಅಭಿಪ್ರಾಯವನ್ನು ಹೇಳಿಲ್ಲ ಎಂಬುದು ನನ್ನ ವ್ಯಕ್ತಿಗತ ತಪ್ಪು. ಆದರೆ ಅದನ್ನೇ ಮುಂದು ಮಾಡಿಕೊಂಡು ನನ್ನ ವಿಚಾರಗಳನ್ನೆಲ್ಲಾ ಬಗಲಿಗೆ ಹೇಗೆ ಹಾಕಿಕೊಳ್ಳುತ್ತೀರಿ? ಆ ಸಮಯದಲ್ಲಿಯೇ ನಾನು ಏಕೆ ಮಾತನಾಡಲಿಲ್ಲ ಅಂದರೆ ರಾಜೀನಾಮೆಯನ್ನು ನೀಡಿ ಏಕೆ ಹೋಗಿರಲಿಲ್ಲ ಎಂಬುದಾಗಿ ನೆಹರೂ ಅವರು ನನಗೆ ಸೂಚಿಸುತ್ತಿದ್ದರೆ, ನಾನು ಅವರಿಗೆ ಹೇಳುವುದಿಷ್ಟೇ. ಮಂತ್ರಿಗಳು ಹೀಗೆ ದೊಡ್ಡ ದೊಡ್ಡ ನಿರ್ಣಯಗಳನ್ನು ತಾರತಮ್ಯದಿಂದ ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ವಿಷಯದ ಮೇಲೆಯೂ ಹೀಗೆ ಅಭಿಪ್ರಾಯ ಭೇದ ಉಂಟಾದ ಮೇಲೆ ರಾಜೀನಾಮೆ ಕೊಡುವ ಅನಿವಾರ್ಯ ಪ್ರಸಂಗವು ಸೃಷ್ಟಿಯಾದರೆ ಬೃಹತ್ತಾದ ಬಿಕ್ಕಟ್ಟು ಅದರಿಂದ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ.
ಮತಭೇದಗಳು ಇದ್ದಾಗಲೂ ನಾನು ಮಂತ್ರಿ ಮಂಡಲದಲ್ಲಿಯೇ ಇದ್ದೆ. ಅದಕ್ಕೆ ಮುಖ್ಯ ಕಾರಣ ರಾಷ್ಟ್ರದ ಸಂವಿಧಾನವನ್ನು ಸಿದ್ಧಪಡಿಸುವ ಮಹತ್ವದ ಕಾರ್ಯವು ನನ್ನ ತಲೆಯ ಮೇಲಿತ್ತು. ನಾನು ಅದನ್ನು ಎಲ್ಲಕ್ಕಿಂತಲೂ ಮಹತ್ವವಾದ ಕಾರ್ಯವೆಂದೇ ಭಾವಿಸಿದ್ದೇನೆ. ಅದನ್ನು ಪೂರ್ಣಗೊಳಿಸುವುದು ನನ್ನ ಬುದ್ಧಿಯ ಭಾಗವಾಗಿತ್ತು. ಅಂತಹ ಕಾರ್ಯವನ್ನು ಒದ್ದು ಹೊರಗಡೆ ಹೋಗುವಂತಹ ಮನುಷ್ಯನನ್ನು ಹುಚ್ಚರ ಜೊತೆಯಲ್ಲಿಯೇ ಪರಿಗಣಿಸಬೇಕಾಗುತ್ತದೆ.
ಆ ಕಾರಣದಿಂದಲೇ ನಾನು ಹೇಳುವುದೇನೆಂದರೆ, ಈ ಬಗೆಯ ಹಾಸ್ಯಾಸ್ಪದ ವಿಧಾನಗಳನ್ನು ಮಾಡದೆ ಕಾಶ್ಮೀರದ ಪ್ರಶ್ನೆಯನ್ನಾಗಲೀ ಅಥವಾ ಭಾರತದ ವಿದೇಶಿ ಧೋರಣೆಗಳ ಬಗೆಗಿನ ನನ್ನ ವಿಚಾರಗಳನ್ನಾಗಲೀ ಒರೆಗೆ ಹಚ್ಚಿ ನೋಡಿರಿ. ಆನಂತರ ಅವುಗಳಿಗೆ ಉತ್ತರ ಕೊಡುವುದಕ್ಕೆ ಪ್ರಯತ್ನಿಸಿರಿ.
ನೆಹರೂ ಎಂದರೆ ಕಾಂಗ್ರೆಸ್ ಎಂಬ ಭ್ರಮೆಯೂ ಇದೆ. ನೆಹರೂ ಸಪ್ನಾಳುವೂ ಮುಗ್ಧರೂ ಆಗಿದ್ದಾರೆ. ಕಾಂಗ್ರೆಸಿಗರು ನೆಹರೂ ಅವರ ಬೆನ್ನಿಗೆ ನಿಂತಿಲ್ಲ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನೀಡಬಹುದಾಗಿದೆ. ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಗಾಗಿ ಟಂಡನ್ ವಿರುದ್ಧ ಕೃಪಲಾನಿ ಅವರು ಸ್ಪರ್ಧಿಸಿದ್ದರು. ಆದರೆ ನಿಜವಾಗಿಯೂ ನಡೆದದ್ದು ಪಟೇಲ್ ಅವರ ವಿರುದ್ಧ ನೆಹರೂ ಅವರದ್ದಾಗಿತ್ತು. ಮೊದಲಿಗೆ ನೆಹರೂ ಶಂಕರ ರಾವ್ ಎಂಬವರಿಗೆ ಅರಿಶಿನ ಹಚ್ಚಿ ಬಾಸಿಂಗವನ್ನು ಕಟ್ಟಿ ತಯಾರು ಮಾಡಿದರು. ಆದರೆ ಈ ಮದುಮಗನಿಗೆ ಯಾವ ಮದುಮಗಳೂ ಸಿಗುವುದಿಲ್ಲ ಎಂಬುದನ್ನು ನೋಡಿದ ಮೇಲೆ ಕೃಪಲಾನಿ ಅವರು ನಿಲ್ಲಿಸಿದರು. ಕೊನೆಗೆ ಕೃಪಲಾನಿ ಅವರು ಬಿದ್ದರು. ಪರ್ಯಾಯವಾಗಿ ಇದು ನೆಹರೂ ಅವರದ್ದೇ ಪರಾಭವವಾಗಿತ್ತು. ಪಟೇಲರ ಮರಣಾನಂತರ ನೆಹರೂ ಅವರು ಇದೇ ಕಾಂಗ್ರೆಸ್‌ನ ಏಕಮೇವ ನೇತಾರರಾಗಿ ಉಳಿದುಕೊಂಡರು.
ಆದರೂ ಕೂಡ ನೆಹರೂ ಅವರ ಹಿಂದೆ ಕಾಂಗ್ರೆಸ್ ಬರಲಿಲ್ಲ. ಬೆಂಗಳೂರು ಕಾಂಗ್ರೆಸಿನ ಎಲ್ಲಾ ಸೂತ್ರಗಳನ್ನು ನೆಹರೂ ಅವರ ಕೈಗೆ ಒಪ್ಪಿಸುವಂತಹ ಸೂಚನೆಯೊಂದನ್ನು ಅವರ ಒಬ್ಬ ಮಿತ್ರ ತಂದಿದ್ದರು. ಆದರೆ ಅದನ್ನು ಪಡೆದುಕೊಳ್ಳುವುದಕ್ಕೆ ಯಾರೂ ಸಿಗಲೇ ಇಲ್ಲ. ನೆಹರೂ ಅವರು ರಾಜೀನಾಮೆಯ ಬೆದರಿಕೆಯನ್ನು ಹಾಕಿದಾಗ, ಟಂಡನ್‌ಜೀ ಅವರು ರಾಜೀನಾಮೆ ನೀಡುವುದಕ್ಕೆ ಯಾವುದೇ ಕಾರಣಗಳಿಲ್ಲ ಎಂಬುದಾಗಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಇದರ ಅರ್ಥವೇನೆಂದರೆ ನೆಹರೂ ಅವರು ಕಾಂಗ್ರೆಸ್‌ನಿಂದ ಹೊರಗೆ ಹೋದರೂ ಪರವಾಗಿಲ್ಲ ಎಂಬ ಮಟ್ಟಿಗೆ ಕಾಂಗ್ರೆಸಿಗರಲ್ಲಿ ಸಿದ್ಧತೆ ಆಗಿತ್ತು. ಆದರೆ ಚುನಾವಣೆಯ ಸೂಚನೆಗಳು ಕಾಣಿಸಲು ಆರಂಭಿಸಿದೊಡನೆ ಇಡೀ ಚಿತ್ರಣವೇ ಬದಲಾಗಿ ಹೋಯಿತು. ಒಬ್ಬ ಪ್ರಖ್ಯಾತ ಚಲನಚಿತ್ರ ನಟಿಯ ಭೂಮಿಕೆಯಿಂದಾಗಿ ಇಡೀ ಚಿತ್ರಕ್ಕೆ ಒಂದು ವಿಶಿಷ್ಟವಾದ ಭಾವವು ರೂಪುಗೊಳ್ಳುತ್ತದೆ. ಅದರಲ್ಲಿ ಮತ್ತೇನೂ ಇಲ್ಲದೇ ಇದ್ದರೂ ನಡೆಯುತ್ತದೆ. ಕಾಂಗ್ರೆಸಿಗರಿಗೆ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಟಂಡನ್‌ಜೀ ಅವರು ಅಂಥ ಯೋಗ್ಯ ನಟಿ ಎಂದು ಅನ್ನಿಸಲಿಲ್ಲ. ಈ ವಿಷಯವಾಗಿ ನೆಹರೂ ಅವರಲ್ಲಿ ನನ್ನ ಸವಾಲು ಏನೆಂದರೆ, ಕಾಂಗ್ರೆಸಿಗರು ಇಂದು ನಿಮ್ಮ ಬೆನ್ನಿಗೆ ನಿಂತಿರುವುದು ನಿಮ್ಮ ಮೇಲಿನ ಪ್ರೇಮದಿಂದಲೋ ಅಥವಾ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ನಿಮ್ಮನ್ನು ಉಪಯೋಗಿಸಿಕೊಳ್ಳಬಹುದು ಎಂಬ ಕಾರಣದಿಂದಲೋ? ನಾನೇನಾದರೂ ನೆಹರೂ ಅವರ ಜಾಗದಲ್ಲಿ ಇದ್ದಿದ್ದರೆ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು. ನಾನು ಕಳೆದ ನಾಲ್ಕು ವರ್ಷಗಳಿಂದಲೂ ಕಾಂಗ್ರೆಸಿಗರ ಸನ್ನಿಧಾನದಲ್ಲಿ ಇದ್ದೆ. ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ, ಯಾರು ಯಾರೆಲ್ಲ ನೆಹರೂ ಅವರ ವಿಷಯವಾಗಿ ಏನೇನೆಲ್ಲ ಮಾತನಾಡುತ್ತಾರೆ ಎಂಬುದನ್ನು ನಾನು ನೆಹರೂ ಅವರಿ ಗಿಂತಲೂ ಹೆಚ್ಚಾಗಿ ತಿಳಿದುಕೊಂಡಿದ್ದೇನೆ.
ಕಾಂಗ್ರೆಸ್ ಈ ದೇಶದಲ್ಲಿನ ಏಕಮೇವ ಸಂಘಟಿತ ಪಕ್ಷವಾಗಿದೆ. ಅದನ್ನು ಬಿಟ್ಟು ಮತ್ಯಾವ ಪಕ್ಷವೂ ಸ್ಥಿರ ಸರಕಾರವನ್ನು ಸ್ಥಾಪಿಸುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಹೇಳುವವರಿಗೆ ನನ್ನ ಪ್ರಶ್ನೆ ಇದೆ. ಕಾಂಗ್ರೆಸ್ ನಲ್ಲಿ ಯಾವ ಜವಾಬ್ದಾರಿಯನ್ನು ನಿವಾರಿಸಲಾಗಿದೆ ಅದನ್ನು ಬಿಟ್ಟು ಕಾಂಗ್ರೆಸ್ ವರಿಷ್ಠರಲ್ಲಿ ಒಂದೇ ಅಭಿಪ್ರಾಯವಿದೆಯೇ? ನನಗೆ ಅನ್ನಿಸುವಂತೆ, ಚುನಾವಣೆ ಮುಗಿದ ಮೇಲಾದರೂ ಸರಿ ಈ ವಿವಾದವು ಮುಖ್ಯವಾಗಿ ಮೇಲೆದ್ದು ಬರುತ್ತದೆ. ಖುದ್ದು ರಾಜೇಂದ್ರ ಪ್ರಸಾದ್ ಮತ್ತು ಪಂಡಿತ್ ನೆಹರೂ ಅವರಲ್ಲಿಯೇ ಇಂತಹ ಗುಸುಗುಸು ಆರಂಭವಾಗಿರಬೇಕು ಎಂಬುದು ತರ್ಕವಾಗಿದೆ. ಅವರ ಪರಸ್ಪರ ಆಲಿಂಗನದ ಫೋಟೋ ನಗರ ಸಂಸ್ಕೃತಿಯಲ್ಲಿನ ಖೊಟ್ಟಿ ಔಪಚಾರಿಕತೆಯೇ ಆಗಿದೆ. ಹಿಂದೂ ಕೋಡ್ ಬಿಲ್‌ನ ಪ್ರಶ್ನೆಯ ಮೇಲೆ ಅವರ ಮತ ಭೇದಗಳೆಲ್ಲವೂ ಕಂಡು ಬಂದಿದೆ. ಈ ಹಿಂದೆಯೇ ರಾಷ್ಟ್ರಾಧ್ಯಕ್ಷರು ಯಾರಾಗಬೇಕು ಎಂಬುದನ್ನು ನಿರ್ಣಯಿಸುವ ಹೊತ್ತಿನಲ್ಲಿ ನೆಹರೂ ಅವರು ರಾಜಾಜಿ ಅವರಿಗೆ ಮತ್ತು ಪಟೇಲರು ರಾಜೇಂದ್ರ ಪ್ರಸಾದರಿಗೆ ಬೆಂಬಲವಾಗಿ ನಿಂತಿದ್ದರು ಎಂಬುದು ಕೂಡ ಎಲ್ಲರಿಗೂ ತಿಳಿದಿರುವಂತಹ ಸಂಗತಿ. ಚುನಾವಣೆ ನಂತರದಲ್ಲಿ ಮತ್ತೆ ಇವುಗಳ ಮೇಲೆ ಸಂಘರ್ಷ ಆಗಿಯೇ ಆಗುವುದು.
ಪಕ್ಷದಲ್ಲಿ ಎಷ್ಟೊಂದು ಹೊಲಸು ತುಂಬಿಕೊಂಡಿದೆ ಎಂಬುದರ ಬಗ್ಗೆ ದೊಡ್ಡ ದೊಡ್ಡ ಕಾಂಗ್ರೆಸ್ ನೇತಾರರೇ ಏನು ಹೇಳುತ್ತಾರೆ ಎಂಬ ಹಿನ್ನೆಲೆಯಲ್ಲಿ ನೋಡಬಹುದು. ಖುದ್ದು ಟಂಡನ್‌ಜೀ ಅವರೇ ಕಾಂಗ್ರೆಸ್‌ನ ಟಿಕೆಟ್‌ಪಡೆಯಲು ಖಡಾಖಂಡಿತವಾಗಿ ನಿರಾಕರಿಸಿದ್ದರು. ಬಾಬು ಸಂಪೂರ್ಣಾನಂದ ಅವರು ಸಹ ಅದನ್ನೇ ಮಾಡಿದ್ದು. ಈ ಕುರಿತು ಸಂಪೂರ್ಣಾನಂದರು ಹೇಳಿದ್ದೇನೆಂದರೆ ಅದರ ರಾಜಕಾರಣವು ಇಂದು ಚರಂಡಿಯ ರಾಜಕಾರಣವಾಗಿದೆ.
ಪಂಡಿತ್ ನೆಹರೂ ಅವರ ಅಪಾಯದ ಬಗೆಗೆ ನನಗೆ ಒಂದು ಅಂದಾಜು ಸಾಧ್ಯವಾಗುತ್ತಿಲ್ಲ. ಅಂದರೆ ಅವರಿಗೆ ಕಮ್ಯುನಿಸ್ಟ್, ಸೋಷಿಯಲಿಸ್ಟ್, ಬಂಡವಾಳಶಾಹಿ ಇವುಗಳ ಪೈಕಿ ಯಾವುದು ಮೆಚ್ಚಿನದು? ಈ ಪ್ರಶ್ನೆಗಳಿಗೆಲ್ಲ ನಿಶ್ಚಿತವಾದ ಉತ್ತರವನ್ನು ನಾನು ಕೊಡಲಾಗುತ್ತಿಲ್ಲ ಆದರೆ ಅವರು ಸರ್ವ ಸಾಮಾನ್ಯರಂತೆ ಪ್ರಗತಿವಾದಿಗಳು ಎಂಬುದಾಗಿ ನಾನು ಒಪ್ಪುತ್ತೇನೆ. ಹಾಗಾಗಿ ಅವರ ಸಹಕಾರಿ ಕಿದ್ವಾಯಿಯವರು ಯಾವಾಗ ಬೇಕಾದರೂ ಕಾಂಗ್ರೆಸಿನಿಂದ ಹೊರಗೆ ಬರಬಹುದು ಮತ್ತು ಸೋಷಿಯಲಿಷ್ಟರಂತೆ ಪ್ರಗತಿಶೀಲ ಪಕ್ಷಗಳಿಗೆ ಸಹಕಾರ ನೀಡುವುದಾದರೆ ನಾನು ಕೂಡ ಬಂದು ನಿಮಗೆ ಸಿಗುತ್ತೇನೆ. ಆದರೆ ಅವರು ಕೆಸರಿನಲ್ಲಿ ಸಿಕ್ಕಿಕೊಂಡು ಮೋಸಹೋಗುತ್ತಿದ್ದಾರೆ. ಅದಕ್ಕೆ ಯಾರು ಏನು ಮಾಡಲಾಗುವುದು?
ಕಿದ್ವಾಯಿ ಅವರಲ್ಲಿ ಸ್ವಲ್ಪಕೂಡ ರಾಜನೀತಿಯ ಅಂಶ ಕಾಣಿಸುತ್ತಿಲ್ಲ ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದ ಕೈಯಲ್ಲಿ ಅನಿಯಂತ್ರಿತ ಅಧಿಕಾರವೂ ಇರಬಾರದು. ಅದಕ್ಕಾಗಿ ವಿರೋಧ ಪಕ್ಷಗಳ ಆವಶ್ಯಕತೆಯೂ ಬಹಳವಾಗಿದೆ. ಇಂಗ್ಲೆಂಡ್, ಅಮೆರಿಕ ಅಥವಾ ಫ್ರಾನ್ಸ್‌ಗಳಲ್ಲಿ ಹೀಗೆ ಎರಡು ಅಥವಾ ಮೂರು ಪಕ್ಷಗಳು ಇರುವ ಕಾರಣ ಪ್ರಜಾಪ್ರಭುತ್ವವು ಯಶಸ್ವಿಯಾಗಿದೆ. ಅದಕ್ಕಾಗಿಯೇ ನಾವು ಸೋಷಲಿಸ್ಟ್ ಮತ್ತು ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಷನ್ ಸೇರಿಕೊಂಡಂತೆ ಒಂದು ಬಲಿಷ್ಠವಾದ ಪಕ್ಷವನ್ನು ಕಟ್ಟಬೇಕೆಂದು ನಿರ್ಧರಿಸಿದ್ದೇವೆ. ನಮ್ಮಲ್ಲಿ ಕೆಲವಾರು ಮತಭೇದದ ವಿಷಯಗಳು ಇದ್ದಾಗ್ಯೂ ಅದಕ್ಕಿಂತಲೂ ಸಾಮ್ಯತೆ ಬಲವಾಗಿರುವುದು. ವಿಶೇಷವೆಂದರೆ ನಮಗೆ ಈ ರೀತಿಯಿಂದ ದೇಶದ ಹಿತವನ್ನು ಸಾಧಿಸುವ ಧ್ಯೇಯವಿದೆ. ದೇಶದಲ್ಲಿ ನಮ್ಮ ಸರಕಾರವನ್ನು ನಾವು ಸ್ಥಾಪಿಸಲಾಗದೆ ಹೋಗಬಹುದು. ಆದರೆ ಅಧಿಕಾರಾರೂಢ ಪಕ್ಷಕ್ಕೆ ಲಗಾಮು ಹಾಕುವಂತಹ ಪ್ರಬಲ ವಿರೋಧ ಪಕ್ಷವನ್ನಾದರೂ ಕಟ್ಟಬಲ್ಲೆವು.
ಭಾಷಾವಾರು ಪ್ರಾಂತಗಳ ರಚನೆಯ ವಿಷಯವಾಗಿಯೂ ನಾವು ಹೋರಾಟ ಮಾಡಬೇಕಾಗುತ್ತದೆ. ಕಾರಣ ಮುಂಬೈ ನಗರವನ್ನು ಮಹಾರಾಷ್ಟ್ರದಿಂದ ಬೇರೆ ಮಾಡುವಂತಹ ಕುಟಿಲ ಹುನ್ನಾರಗಳು ನಡೆಯುತ್ತಿವೆ. ನೆಹರೂ ಅವರ ಅಭಿಪ್ರಾಯವೂ ಈ ವಿಷಯದಲ್ಲಿ ಮಹಾರಾಷ್ಟ್ರಕ್ಕೆ ಪ್ರತಿಕೂಲವಾಗಿಯೇ ಇದೆ. ಹೈದರಾಬಾದಿನ ವಿಲೀನೀಕರಣ ಮಾಡುವಲ್ಲಿಯೂ ನೆಹರೂ ಅವರ ವಿರೋಧವಿತ್ತು. ಇನ್ನು ಈ ವಿಷಯವೂ ಒಂದು ದೊಡ್ಡ ಬಿಕ್ಕಟ್ಟನ್ನೇ ತರುವಂತಹದ್ದಾಗಿದೆ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)