ಐಟಿ ದಾಳಿ ಚಿತ್ರದ ಒಂದು ವಿಮರ್ಶೆ

Update: 2019-01-05 18:30 GMT

ಈ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾದ ಅದ್ದೂರಿ ಚಿತ್ರವೊಂದರ ವಿಮರ್ಶೆಯನ್ನು ಪತ್ರಕರ್ತ ಎಂಜಲು ಕಾಸಿ ಬರೆದಿದ್ದಾನೆ. ಕಳೆದೆರಡು ದಿನಗಳಲ್ಲಿ ಹೌಸ್‌ಫುಲ್ ಓಡುತ್ತಿರುವುದರಿಂದ ಎಂಜಲು ಕಾಸಿಯಿಂದಲೇ ಈ ಸಿನೆಮಾವನ್ನು ವಿಶೇಷವಾಗಿ ವಿಮರ್ಶೆ ಮಾಡಿಸಲಾಗಿದೆ.
********
ಚಿತ್ರದ ಹೆಸರು: ‘ಐಟಿ ದಾಳಿ’
ನಟ, ನಿರ್ಮಾಪಕ, ನಿರ್ದೇಶಕ: ನರೀಂದ್ರ
ಪ್ರಮುಖ ನಟರು: ಸುದೀಪ್, ಯಶ್, ಪುನೀತ್ ರಾಜ್‌ಕುಮಾರ್, ರಾಕ್‌ಲೈನ್ ವೆಂಕಟೇಶ್, ರಾಧಿಕ್ ಪಂಡಿತ್ ಮತ್ತು ಇತರರು.

 ಈಗಾಗಲೇ ಸರ್ಜಿಕಲ್ ಸ್ಟ್ರೈಕ್ ಎನ್ನುವ ಅಂತರ್‌ರಾಷ್ಟ್ರೀಯ ಮಟ್ಟದ ಸಿನೆಮಾವನ್ನು ನಿರ್ಮಿಸಿ ಯಶಸ್ಸು ಸಾಧಿಸಿರುವ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ನರೀಂದ್ರ ಅವರು ಅದೇ ಕತೆಯನ್ನು ಒಂದಿಷ್ಟು ಬದಲಾಯಿಸಿ ಕನ್ನಡದಲ್ಲಿ ‘ಐಟಿ ದಾಳಿ’ ಎಂಬ ಅದ್ದೂರಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ಅಪ್ಪಟ ರಾಜಕೀಯ ಚಿತ್ರ. ಮುಖ್ಯವಾಗಿ ಇದರಲ್ಲಿ ಹಲವು ಪ್ರಮುಖ ನಟರು ಅಭಿನಯಿಸಿದ್ದರೂ ಮಾಧ್ಯಮಗಳ ಹಿರಿ ತಲೆಗಳ ಅಭಿನಯದ ಮುಂದೆ ಅವರು ಸೋಲುತ್ತಾರೆ. ಇಡೀ ಚಿತ್ರದಲ್ಲಿ ಮಾಧ್ಯಮಗಳೇ ನಾಯಕರಾಗಿ ಬಿಂಬಿತರಾಗುತ್ತಾರೆ. ಬಿಜೆಪಿಯ ಕೆಲವು ನಾಯಕರು ಈ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ.
  ಐಟಿ ದಾಳಿಯಲ್ಲಿ ಎಸ್. ಎಂ. ಕೃಷ್ಣ ಅವರು ಮಹತ್ತರ ಪಾತ್ರ ನಿರ್ವಹಿಸುತ್ತಾರೆ, ಅದಕ್ಕಾಗಿ ನರೀಂದ್ರ ಅವರು ಕೃಷ್ಣ ಅವರಲ್ಲಿ ಮಾತುಕತೆ ನಡೆಸುತ್ತಾರೆ ಎಂಬ ವ್ಯಾಪಕ ವದಂತಿ ಹರಡಿತ್ತು. ಆದರೆ ಕೊನೆಗೂ ಅವರು ‘ಪಕ್ಷಾಂತರ’ ಚಿತ್ರದಲ್ಲಿ ಬಿಸಿಯಾಗುವ ಮೂಲಕ ಐಟಿ ದಾಳಿ ಚಿತ್ರದಿಂದ ತಪ್ಪಿಸಿಕೊಂಡರು. ಇದಾದ ಬಳಿಕ ಡಿಕೆಶಿ ಅವರನ್ನು ವಿಲನ್ ಪಾತ್ರಧಾರಿಯಾಗಿಸಿ ನರೀಂದ್ರ ಅವರು, ಸರ್ಜಿಕಲ್ ಐಟಿ ದಾಳಿ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಹೊರಾಂಗಣ ಚಿತ್ರೀಕರಣ ಕರ್ನಾಟಕದಲ್ಲಿ ನಡೆದಿದ್ದರೆ, ಒಳಾಂಗಣ ಚಿತ್ರೀಕರಣ ಗುಜರಾತ್‌ನಲ್ಲಿ ನಡೆದಿತ್ತು. ಆದರೆ ಈ ಚಿತ್ರ ಸಂಪೂರ್ಣ ವಿಫಲವಾಗಿ ನರೀಂದ್ರ ಅವರು ವ್ಯಾಪಕ ನಷ್ಟ ಅನುಭವಿಸಿದ್ದರು. ಚಿತ್ರ ಸೋಲನ್ನನುಭವಿಸಿದ್ದರೂ ಆ ಚಿತ್ರದಲ್ಲಿ ವಿಲನ್ ಪಾತ್ರ ವಹಿಸಿದ್ದ ಡಿಕೆಶಿಯವರು ವ್ಯಾಪಕ ಮೆಚ್ಚುಗೆ ಗಳಿಸಿದ್ದರು. ಈ ಚಿತ್ರದ ಗೆಲುವಿನಿಂದಲೇ ಅವರು ಸ್ವತಃ ‘ಮೈತ್ರಿ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿ ಯಶಸ್ವಿಯಾದರು. ‘ಮೈತ್ರಿ’ ಚಿತ್ರ ಇನ್ನೂ ಯಶಸ್ವಿಯಾಗಿ ಚಿತ್ರಮಂದಿರದಲ್ಲಿ ಮುಂದುವರಿಯುತ್ತಿರುವುದೇ ಅದಕ್ಕೆ ಸಾಕ್ಷಿ.
 ನರೀಂದ್ರ ಅವರು ಐಟಿ ದಾಳಿ ಚಿತ್ರವನ್ನು ದೂರದೃಷ್ಟಿಯಿಂದ ಮಾಡಿದ್ದಾರೆ ಎನ್ನುವುದು ಗಾಂಧಿನಗರದ ಅಂಬೋಣ. ಕನ್ನಡದಲ್ಲಿ ಇಷ್ಟೊಂದು ಬಂಡವಾಳವನ್ನು ಹೂಡಿ ಇಷ್ಟೊಂದು ನಟರನ್ನು ಬಳಸಿ ಚಿತ್ರ ತೆಗೆಯುವುದು ಸಣ್ಣ ಸಂಗತಿಯೇನೂ ಅಲ್ಲ. ಇದರಿಂದಾಗಿ ಕನ್ನಡ ಚಿತ್ರೋದ್ಯಮದ ಹೆಗ್ಗಳಿಕೆ ದಿಲ್ಲಿಯವರೆಗೂ ವಿಸ್ತರಿಸಿದಂತಾಗಿದೆ. ಆದರೆ ನರೀಂದ್ರ ಅವರು ಹೂಡಿದ ಬಂಡವಾಳ ಅವರ ಕೈಗೆ ಸಿಗುತ್ತದೆಯೋ ಎನ್ನುವುದು ಕುತೂಹಲಕರ ಸಂಗತಿಯಾಗಿದೆ. ಈ ದಾಳಿಯಲ್ಲಿ ಕನ್ನಡ ನಟರನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ, ಅವರಿಗೆ ಅವಮಾನ ಮಾಡಲಾಗಿದೆ ಎಂದೆಲ್ಲ ವದಂತಿಗಳಿರುವುದರಿಂದ ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗುತ್ತದೆ ಎನ್ನುವಂತಿಲ್ಲ.
ಚಿತ್ರದ ಕತೆ ತುಂಬಾ ಸರಳವಾಗಿದೆ. ಚಿತ್ರ ನಾಯಕ ತೆರೆಯ ಮರೆಯಲ್ಲಿರುತ್ತಾನೆ. ಅವನ ಧ್ವನಿ ಮಾತ್ರ ಕೇಳಿಸುತ್ತದೆ. ಕಲಾತ್ಮಕವಾಗಿ ಚಿತ್ರ ಆರಂಭವಾಗುತ್ತದೆ. ಮೊದಲು ಪತ್ರಕರ್ತನೊಬ್ಬ ‘ಚಾಯ್‌ವಾಲಾ’ನ ಕತೆ ಹೇಳುತ್ತಾನೆ. ಸೈನಿಕರಿಗೆ ಚಹಾ ಮಾರುತ್ತಾ ಇದ್ದ ಆತ ಹಿಮಾಲಯಕ್ಕೆ ತೆರಳಿ ನಡೆಸುವ ಸಾಧನೆಗಳನ್ನು ಆರಂಭದಲ್ಲಿ ಪತ್ರಕರ್ತನೊಬ್ಬ ನಿರೂಪಿಸುತ್ತಾ ಹೋಗುತ್ತಾನೆ. ಅದನ್ನು ಮಾಳವಿಕಾ ಬರೆದುಕೊಳ್ಳುತ್ತಾ ಹೋಗುತ್ತಾರೆ. ಹಿಮಾಲಯದಲ್ಲಿ ತಪಸ್ಸು ಗೈದ ಆತನಿಗೆ ದೇವರು ಒಲಿಯುತ್ತಾನೆ. ಒಲಿದ ದೇವರಿಗೆ ಅಲ್ಲೇ ಆತ ಒಂದು ಖಡಕ್ ಚಹಾ ಮಾಡಿಕೊಡುತ್ತಾನೆ. ಇದರಿಂದ ಸಂತೃಪ್ತನಾದ ದೇವರು ‘ನಿಮಗೇನು ವರ ಬೇಕು’ ಎಂದು ಕೇಳುತ್ತಾನೆ. ಆಗ ಆತ ‘‘ನನಗೆ ಇಡೀ ದೇಶಕ್ಕೆ ಖಡಕ್ ಚಹಾ ಮಾಡಿಕೊಡುವ ವರವನ್ನು ಕೊಡು’’ ಎಂದು ನರೀಂದ್ರ ಕೇಳುತ್ತಾನೆ.
 ಆಗ ದೇವರು ‘‘ಅಷ್ಟೇ ಅಲ್ಲ, ಇಡೀ ದೇಶದ ಜನರನ್ನು ಚಹಾ ಮಾರುವ ಸ್ಥಿತಿಗೆ ತರುವ ಶಕ್ತಿಯನ್ನು ನಿನಗೆ ನೀಡುತ್ತೇನೆ’’ ಎಂದು ಮಾಯವಾಗುತ್ತಾನೆ. ಇಲ್ಲಿಂದ ಕತೆ ತಿರುವು ಪಡೆದುಕೊಳ್ಳುತ್ತದೆ. ಅಂದರೆ ಅಧ್ಯಾತ್ಮ ವಲಯದಿಂದ ರಾಜಕೀಯ ವಲಯಕ್ಕೆ ಪಲ್ಲಟಗೊಳ್ಳುತ್ತದೆ. ಆರಂಭದಲ್ಲಿ ತುಂಬಾ ನಿಧಾನಗತಿಯಲ್ಲಿ ಹೋಗುತ್ತದೆಯಾದರೂ, ಕತೆ ಗುಜರಾತ್‌ಗೆ ಮುಟ್ಟುವಾಗ ವೇಗ ಪಡೆಯುತ್ತದೆ. ಕತೆಯ ಮುಖ್ಯ ತಿರುವು, ನಾಯಕನಿಗೆ ಮದುವೆಯಾಗಿರುವುದೇ ಮರೆತು ಹೋಗಿರುತ್ತದೆ. ಆದರೆ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಲು ಹೋದಾಗ, ಆತನ ಕೈಯಲ್ಲಿ ಒಂದು ಉಂಗುರವನ್ನು ನೋಡುತ್ತಾರೆ. ‘‘ಈ ಉಂಗುರ ಯಾರದು?’’ ಎಂದು ಚುನಾವಣಾ ಆಯೋಗದ ಮುಖ್ಯಸ್ಥರನ್ನು ಕೇಳುತಾನೆ. ‘‘ಇದು ಬಿದ್ದು ಸಿಕ್ಕಿದ್ದು’’ ಎಂದು ಅವರು ಉತ್ತರಿಸುತ್ತಾರೆ. ಆಗ ಅವರಿಗೆ ತನ್ನ ಪತ್ನಿಯ ನೆನಪಾಗುತ್ತದೆ. (ಇದು ಕಾಳಿದಾಸದ ಶಕುಂತಳೆಯ ಕತೆಯ ರಿಮೇಕ್ ಎನ್ನುವ ಆರೋಪ ಇದೆ. ಆದರೆ ನರೀಂದ್ರ ಅವರು ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ತನ್ನ ಕತೆಯನ್ನೇ ಕಾಳಿದಾಸ ಕದ್ದಿದ್ದಾನೆ. ಬೇಕಾದರೆ ಪೋಸ್ಟ್‌ಕಾರ್ಡ್ ನೋಡಿ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ) ಪತ್ನಿಯ ನೆನಪಾಗಿ ತೀವ್ರ ಶೋಕತಪ್ತರಾದ ಅವರು ಬಳಿಕ, ನಾಮಪತ್ರದಲ್ಲಿ ಪತ್ನಿಯ ಹೆಸರನ್ನು ದಾಖಲಿಸುತ್ತಾರೆ. ಇದು ಅತ್ಯಂತ ಭಾವನಾತ್ಮಕವಾಗಿ ಮೂಡಿ ಬಂದಿದೆ. ಈ ದೃಶ್ಯದಲ್ಲಿ ನಾಯಕ ಇನ್ನಷ್ಟು ಭಾವುಕರಾಗಿ ನಟಿಸಬೇಕಿತ್ತು, ಮತ್ತು ನಾಯಕಿ-ನಾಯಕ ಒಂದಾಗಬೇಕಿತ್ತು ಎಂಬ ದೂರುಗಳೂ ಇವೆ.
 ಚಿತ್ರದಲ್ಲಿ ಕೆಲವು ಹಿಂಸಾತ್ಮಕ ದೃಶ್ಯಗಳಿಗೆ ಗುಜರಾತ್ ಹೊರಾಂಗಣಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಈ ಹಿಂಸೆಯ ಬರ್ಬರ ದೃಶ್ಯಗಳಿಗೆ ಸೆನ್ಸಾರ್ ಅಲ್ಲಲ್ಲಿ ಕತ್ತರಿ ಹಾಕಿರುವುದರಿಂದ ಅದು ಒಂದಕ್ಕೊಂದು ಪೂರಕವಾಗಿಲ್ಲ. ಸೊಹ್ರಾಬುದ್ದೀನ್ ಎನ್‌ಕೌಂಟರ್ ದೃಶ್ಯವನ್ನು ಸಂಪೂರ್ಣ ಕತ್ತರಿಸಿ ತೆಗೆಯಲಾಗಿದೆ. ಇದು ಪ್ರೇಕ್ಷಕರಿಗೆ ತುಂಬಾ ನಿರಾಶೆಯನ್ನು ತಂದುಕೊಟ್ಟಿದೆ. ಚಿತ್ರದಲ್ಲಿ ನಾಯಕ ಪಾತ್ರಧಾರಿ ಎಲ್ಲವನ್ನೂ ಏಕಾಂಗಿಯಾಗಿ ಧ್ವಂಸ ಮಾಡುತ್ತಾ ಹೋಗುತ್ತಾನೆ. ಸಿಬಿಐ, ಆರ್‌ಬಿಐ, ಅದು ಇದು ಎಲ್ಲವನ್ನು ಪೀಸ್ ಪೀಸ್ ಮಾಡುವ ದೃಶ್ಯಗಳಲ್ಲಿ ಕೆಲವು ರವಿಚಂದ್ರನ್ ಚಿತ್ರಗಳನ್ನು ಹೋಲುತ್ತದೆ ಎನ್ನುವವರಿದ್ದಾರೆ. ಬಹುಶಃ ಕನ್ನಡ ಪ್ರೇಕ್ಷಕರನ್ನು ಖುಷಿ ಪಡಿಸಲು ಅವರು ರವಿಚಂದ್ರನ್‌ನ ಪೀಸ್ ಪೀಸ್ ದೃಶ್ಯಗಳನ್ನು ಅನುಕರಿಸಿರಬಹುದು. ಆದರೂ ಇದರಲ್ಲಿ ನರೀಂದ್ರ ಅವರ ಸ್ವಂತಿಕೆ ಎದ್ದು ಕಾಣುತ್ತದೆ.
ಚಿತ್ರದ ಕೈಮಾಕ್ಸ್‌ನಲ್ಲಿ ಐಟಿ ದಾಳಿ ನಡೆಯುತ್ತದೆ. ನಷ್ಟಕ್ಕೊಳಾಗಾಗಿರುವ ಕೋಲಾರ ಚಿನ್ನದ ಗಣಿಯಿಂದ ಅಗೆದು ತೆಗೆದ ಚಿನ್ನಗಳೆಲ್ಲ ಸಿನೆಮಾ ನಟರ ಮನೆಯಲ್ಲಿರುವುದು ಗೊತ್ತಾಗಿ ಅಲ್ಲಿ ನಾಯಕ ‘ಮಾಯ’ದ ವೇಷದಲ್ಲಿ ಐಟಿ ಅಧಿಕಾರಿಗಳ ಜೊತೆಗೆ ದಾಳಿ ನಡೆಸುತ್ತಾರೆ. ಇಲ್ಲಿ ಐಟಿ ಅಧಿಕಾರಿಗಳಷ್ಟೇ ಪ್ರೇಕ್ಷಕರಿಗೆ ಕಾಣುತ್ತಾರೆ. ಇದು ಕನ್ನಡ ಸಿನೆಮಾದ ಇತಿಹಾಸದಲ್ಲಿ ಹೊಸ ತಂತ್ರ. ವಿವಿಧ ತಂತ್ರಗಳನ್ನು ಬಳಸಿ ಕತೆ ಹೇಳಿ ಖ್ಯಾತರಾಗಿರುವ ಉಪೇಂದ್ರ ಅವರೂ ಈ ತಂತ್ರವನ್ನು ಇಷ್ಟಪಟ್ಟಿದ್ದಾರೆ. ಐಟಿ ಅಧಿಕಾರಿಗಳ ಬೃಹತ್ ದಾಳಿಗಳ ಬಳಿಕ ಒಂದು ಸತ್ತ ಇಲಿ ಮರಿಯನ್ನು ತೋರಿಸಲಾಗುತ್ತದೆ. ಕ್ಯಾಮರಾ ಅದರ ಕಡೆಗೆ ಚಲಿಸುತ್ತದೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ಇಡೀ ಚಿತ್ರದ ಅತಿ ದೊಡ್ಡ ವೈಫಲ್ಯ ಅದರ ಕ್ಲೈಮಾಕ್ಸ್ ಎಂದು ಚಿತ್ರ ಪಂಡಿತರು ಹೇಳುತ್ತಿದ್ದಾರೆ. ಈ ಚಿತ್ರದ ಯಶಸ್ಸು ಅಥವಾ ವೈಫಲ್ಯದ ಆಧಾರದಲ್ಲಿ ಮುಂದಿನ ‘ಲೋಕಸಭಾ ಚುನಾವಣೆ’ ಚಿತ್ರದಲ್ಲಿ ಕನ್ನಡದ ನಟರು ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

 

Writer - *ಚೇಳಯ್ಯ chelayya@gmail.com

contributor

Editor - *ಚೇಳಯ್ಯ chelayya@gmail.com

contributor

Similar News