ಭಾರತದಲ್ಲಿ ಬೌದ್ಧ ಧರ್ಮ ಕ್ಷೀಣವಾದದ್ದು ಹೇಗೆ?
ವೈ.ಎಂ.ಬಿ.ಎ. ಕೊಲಂಬೋದವರು ಏರ್ಪಡಿಸಿದ ವಿಶ್ವಬೌದ್ಧ ಭ್ರಾತೃತ್ವ ಸಮ್ಮೇಳನದಲ್ಲಿ ಡಾ.ಅಂಬೇಡ್ಕರರು 6 ಜೂನ್ 1950ರಂದು ಭಾಷಣ ಮಾಡಿದರು. ಅವರ ಭಾಷಣ ಹೀಗಿದೆ:
ಬಂಧುಗಳೆ ಮತ್ತು ಭಗಿನಿಯರೆ,
ಯಾವುದೇ ವಿಷಯದ ಪರಂಪರೆಯ ಯೋಗ್ಯಜ್ಞಾನ ಲಭಿಸಿದ ಬಳಿಕವೇ ಅದರ ಬಗೆಗಿನ ಜ್ಞಾನ ಪ್ರಾಪ್ತಿಯಾಗುತ್ತದೆ. ಯಾವ ಪರಿಸ್ಥಿತಿಯಲ್ಲಿ ಬೌದ್ಧ ಧರ್ಮವು ಹುಟ್ಟಿತು ಎಂಬುದನ್ನು ಅರಿತುಕೊಂಡಾಗಲೇ ಬೌದ್ಧ ಧರ್ಮದ ವಾಸ್ತವಿಕ ಮಹತ್ವ ತಿಳಿಯುತ್ತದೆ. ಭಾರತದ ಧರ್ಮ ಮೊದಲಿನಿಂದಲೂ ಹಿಂದೂ ಧರ್ಮವೇ ಆಗಿತ್ತು ಎನ್ನುವ ಮಾತು ನಾನು ಒಪ್ಪುವುದಿಲ್ಲ. ಹಿಂದೂ ಧರ್ಮವಂತೂ ಕಟ್ಟಕಡೆಗೆ ವಿಚಾರಕ್ರಾಂತಿಯಾಗುತ್ತಿರುವಾಗ ಉದಯಕ್ಕೆ ಬಂತು. ವೈದಿಕ ಧರ್ಮವು ಬ್ರಾಹ್ಮಣ ಧರ್ಮದಲ್ಲಿ ರೂಪಾಂತರಗೊಂಡಿತು. ಬ್ರಾಹ್ಮಣ ಧರ್ಮವು ಹಿಂದೂ ಧರ್ಮದಲ್ಲಿ ರೂಪಾಂತರಗೊಂಡಿತು. ಸಮಾಜವನ್ನು ವಿವಿಧ ವರ್ಣಗಳಲ್ಲಿ ವಿಂಗಡಿಸುವವರ ಬಗೆಗೆ ಬೌದ್ಧಧರ್ಮ ವಿರೋಧಿಸಿತ್ತು ಈ ಚಾತುರ್ವರ್ಣ್ಯವನ್ನು ಬ್ರಾಹ್ಮಣಧರ್ಮ ಆರಂಭಿಸಿತು. ಫ್ರಾನ್ಸ್ ರಾಜ್ಯಕ್ರಾಂತಿಯು ಫ್ರಾನ್ಸ್‌ಗೆ ಎಷ್ಟು ಮಹತ್ವದ್ದೋ ಮಾನವ ಜಾತಿಗಾಗಿ ಬೌದ್ಧಧರ್ಮದ ಉದಯವೂ ಅಷ್ಟೇ ಮಹತ್ವದ್ದು.
ವೈದಿಕ ಬೋಧನೆಯಂತೆ ಆಚರಣೆ ಮಾಡುವುದು ತುಂಬ ಸುಲಭ. ವೈದಿಕರು ಮುಖ್ಯವಾಗಿ ಯಜ್ಞಪೂಜಕರಾಗಿದ್ದರು. ವೈದಿಕ ಆರ್ಯರಲ್ಲಿ 33 ಕೋಟಿ ಆರಾಧ್ಯದೈವ ಇದ್ದರೆೆಂದು ಹೇಳಲಾಗಿದೆ. ಅವರು ತಮ್ಮ ಈ ದೇವತೆಗಳನ್ನು ತೃಪ್ತಿಪಡಿಸಲು ಯಜ್ಞ ಮಾಡುತ್ತಿದ್ದರು. ಈ ದೇವತೆಯ ಪೂಜೆಗಾಗಿ ಸಂಗ್ರಹಿಸುವ ಸಾಮಗ್ರಿಗಳು ಅತ್ಯಂತ ಶ್ರೇಷ್ಠ ದರ್ಜೆಯದ್ದಾಗಿರಬೇಕಾಗಿತ್ತು. ಕೃಷಿಯಿಂದ ಆ ಆಯುವಿಕೆ. ಗೋ ಸಂಪತ್ತು ಸರ್ವ ಶ್ರೇಷ್ಠವೆನಿಸುತ್ತಿತ್ತು. ಹೀಗಾಗಿ ಅವರು ತಮ್ಮ ದೇವತೆಗಳ ಪೂಜೆಯನ್ನು ಯಜ್ಞದಲ್ಲಿ ಗೋವು ಬಲಿ ನೀಡಿಯೇ ಮಾಡುತ್ತಿದ್ದರು. ಇದರಿಂದಾಗಿ ವೈದಿಕ ಧರ್ಮವೂ ಹಿಂಸೆಯನ್ನು ಬೆಂಬಲಿಸಿತು. ಯಜ್ಞದಲ್ಲಿ ಅಸಂಖ್ಯ ಪ್ರಾಣಿಯನ್ನು ಬಲಿಯನ್ನಾಗಿ ನೀಡಲಾಗುತ್ತಿತ್ತು. ಮಾಡುವ ಯಜ್ಞದಲ್ಲಿ ಪ್ರಾಣಿಬಲಿ ಯಾರು ನೀಡುತ್ತಾರೋ ಅವರಿಗೆ ಸ್ವರ್ಗಪ್ರಾಪ್ತಿಯಾಗುತ್ತದೆಂಬ ಶ್ರದ್ಧೆಯು ಯಾಜಕರಲ್ಲಿತ್ತು ‘ವೈದಿಕ ಹಿಂಸಾ ಹಿಂಸಾನ ಭವತಿ’ ವೈದಿಕಯಜ್ಞದಲ್ಲಿ ನಡೆದ ಹಿಂಸೆಯೂ ಹಿಂಸೆಯೆ ಇಲ್ಲ. ಯಜ್ಞಕ್ಕಾಗಿ ಪ್ರಾಣಿಬಲಿಯ ಪ್ರಚಾರ ನಡೆಯುತ್ತಿರುವುದರಿಂದಲೇ ಯಾವ ಪ್ರಾಣಿಗಳ ಮಾಂಸವು ತಿನ್ನಲು ಯೋಗ್ಯವೋ ಅಂಥ ಕುರಿ ಆಕಳಿನಂತಹ ಪ್ರಾಣಿಗಳನ್ನೇ ಹೆಚ್ಚಾಗಿ ಬಲಿ ನೀಡಲಾಗುತ್ತಿತ್ತು.
ಯಜ್ಞದ ಪ್ರಚಾರ ಹೆಚ್ಚಾಗಿದ್ದರಿಂದ ಪುರೋಹಿತರ ಮಹತ್ವವೂ ಬೆಳೆಯಿತು. ಬ್ರಾಹ್ಮಣವಾದ ಉದಯವಾಯಿತು. ಈ ಬ್ರಾಹ್ಮಣವಾದದಿಂದಾಗಿ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ವರ್ಣಗಳಲ್ಲಿ ವಿಂಗಡಣೆ ಮಾಡಲಾಯಿತು. ನಾಲ್ಕು ವರ್ಣಗಳನ್ನು ಸ್ಥಾಪಿಸಿ ಸಮಾಜದಲ್ಲಿ ವಿಷಮತೆಯನ್ನು ನಿರ್ಮಾಣ ಮಾಡುವುದು ಬ್ರಾಹ್ಮಣವಾದದ ಮುಖ್ಯ ಉದ್ದೇಶವಾಗಿತ್ತು. ಏಕೆಂದರೆ ಅದರ ಹೊರತು ಬ್ರಾಹ್ಮಣರ ಪ್ರಭುತ್ವವನ್ನು ಸ್ಥಾಪಿಸುವುದು ಸಾಧ್ಯವಿರಲಿಲ್ಲ. ತಮ್ಮ ಶ್ರೇಷ್ಠತ್ವವನ್ನು ಪ್ರಸ್ಥಾಪಿಸಲು ಬ್ರಾಹ್ಮಣರು ಕೆಲವು ಮಂತ್ರಗಳನ್ನು ರಚಿಸಿದರು. ಆ ಮಂತ್ರಗಳ ಮೂಲಕ ಬ್ರಾಹ್ಮಣರು ಬ್ರಾಹ್ಮಣ ಬಾಯಿಂದ, ಕ್ಷತ್ರಿಯರು ಬಾಹುವಿನಿಂದ, ವೈಶ್ಯರು ತೊಡೆಯಿಂದ ಮತ್ತು ಶೂದ್ರರು ಪಾದದಿಂದ ಜನಿಸಿದರು ಎಂದು ಪ್ರಚಾರ ಮಾಡಲಾರಂಭಿಸಿದರು. ಆ ಮೂಲಕ ಬ್ರಾಹ್ಮಣರು ಎಲ್ಲ ವರ್ಣಗಳ ಗುರು ಮತ್ತು ಸರ್ವ ಶ್ರೇಷ್ಠರು ಎಂದವರು ಹೇಳಲಾರಂಭಿಸಿದರು. ಆದರೆ ಬುದ್ಧನು ಅದನ್ನು ಖಂಡಿಸಿದನು. ಉಳಿದವರು ಹುಟ್ಟಿದಂತೆ ಬ್ರಾಹ್ಮಣರೂ ಹುಟ್ಟಿದರು ಎಂದು ಬುದ್ಧ ಹೇಳಿದ.
ಬ್ರಾಹ್ಮಣರ ಮಹಿಳೆಯರು ಋತುಮತಿಯಾಗುತ್ತಾರೆ, ಗರ್ಭವತಿಯಾಗುತ್ತಾರೆ. ಒಂಬತ್ತು ತಿಂಗಳವರೆಗೆ ಗರ್ಭದ ಪೋಷಣೆ ಮಾಡುತ್ತಾರೆ. ಹೆರಿಗೆಯಾಗುತ್ತದೆ ಮಗುವಿಗೆ ಸ್ತನಪಾನ ಮಾಡಿಸುತ್ತಾರೆ. ಎಲ್ಲೆಡೆ ಇದೇ ಕಂಡುಬರುತ್ತದೆ. ಇಂಥ ಸ್ಥಿತಿಯಲ್ಲಿ ಬ್ರಾಹ್ಮಣರು ತಾವು ಬಾಯಿಂದ ಶೂದ್ರರು ಪಾದದಿಂದ ಜನಿಸಿದರು ಎಂದು ಹೇಗೆ ಹೇಳುವುದು ಸಾಧ್ಯ? ಹುಟ್ಟಿನಿಂದ ಯಾರೂ ಶೂದ್ರರಾಗಲಿ ಬ್ರಾಹ್ಮಣರಾಗಲಿ ಆಗಿರುವುದಿಲ್ಲ. ಮನುಷ್ಯ ಕೆಲಸದಿಂದ ಬ್ರಾಹ್ಮಣ ಅಥವಾ ಶೂದ್ರನಾಗುತ್ತಾನೆ. ಆನಂತರ ಬುದ್ಧ ಹೀಗೆ ಹೇಳಿದ: ಜಟೆ, ಗಡ್ಡ, ಗೋತ್ರ ಅಥವಾ ಜನ್ಮದಿಂದ ಯಾರೂ ಬ್ರಾಹ್ಮಣರಾಗುವುದಿಲ್ಲ, ಯಾರು ಸತ್ಯ ಮತ್ತು ಧರ್ಮದಂತೆ ಆಚರಣೆ ಮಾಡುತ್ತಾನೋ, ಯಾರು ಕಾಯಾ-ವಾಚಾ-ಮನಸಾ ಯಾವ ಪಾಪವನ್ನೂ ಮಾಡುವುದಿಲ್ಲವೋ, ಯಾರು ಕಾಮಕ್ರೋಧ ರಹಿತನಾಗಿದ್ದಾನೋ, ಯಾರು ಶೀಲವಂತನೂ ಮತ್ತು ಜಿತೇಂದ್ರಿಯನಾಗಿದ್ದಾನೋ, ಯಾರು ಶೋಕರಹಿತನೋ ನಿರ್ಮಲ ಶುದ್ಧನೋ, ಯಾರು ಭವಚಕ್ರದೊಳಗೆ ನೂಕಲು ಕಾರಣವಾದ ಮೋಹದ ತ್ಯಾಗ ಮಾಡಿದ್ದನೋ, ಯಾರು ಅರತಿಯನ್ನೇ ತ್ಯಾಗ ಮಾಡಿ ಶಾಂತಚಿತ್ತನಾಗಿದ್ದನೋ, ಯಾರು ಗಂಭೀರ ಪ್ರಜ್ಞಾವಂತ ಮೇಧಾವಿ ಮಾರ್ಗ ಅಮಾರ್ಗದ ಜ್ಞಾತನೋ ಮತ್ತು ಯಾರು ಸರ್ವೋತ್ತಮವಾದ ನಿರ್ವಾಣದ ಅಧಿಕಾರಿಯೋ ಅವನನ್ನೇ ನಾನು ಬ್ರಾಹ್ಮಣನೆಂದು ಕರೆಯುತ್ತೇನೆ.
ನೀವೂ ಯೋಚಿಸಿ, ಯಾವ ಧರ್ಮ ಮಾನವ ಜಾತಿಯ ಕಲ್ಯಾಣಕ್ಕಾಗಿ ಸಹಾಯಕವಾಗುತ್ತದೋ ಯಾವುದರಲ್ಲಿ ಮಾನವ ಮುಕ್ತಿಯ ದ್ವಾರ ತೆರೆದಿದೆಯೋ ಯಾವುದರಲ್ಲಿ ಮನುಷ್ಯರಲ್ಲಿ ಭೇದಭಾವ ಮಾಡದೇ ಸಮತೆಯಿದೆಯೋ ಆ ಧರ್ಮವೇ ಧರ್ಮವೆಂಬ ಸಂಜ್ಞೆಗೆ ಪಾತ್ರವಾಗುತ್ತದೆ. ಯಾವ ಧರ್ಮದಲ್ಲಿ ಮಾನವ ಮೂಲ ತತ್ವವು ಮಾನವರ ನಡುವೆ ಭೇದ ಭಾವ ನಿರ್ಮಾಣ ಮಾಡುವಂತಹದ್ದಾಗಿದೆಯೋ ಆ ಧರ್ಮವು ‘ಸದ್ಧರ್ಮ’ವೆನಿಸಿಕೊಳ್ಳುವ ಅರ್ಹತೆಯದಾಗಿರುವುದಿಲ್ಲ. ಬ್ರಾಹ್ಮಣಧರ್ಮವು ಮಾನವ ಸಮಾಜದಲ್ಲಿ ಭೇದದ ಕಂದಕ ನಿರ್ಮಾಣ ಮಾಡಿತು. ಅದು ಮಹಿಳೆಯರ ಮತ್ತು ಶೂದ್ರರ ಬಗೆಗೆ ಅತ್ಯಂತ ಕೀಳುವ್ಯವಹಾರ ಮಾಡುವ ಬೋಧನೆಯನ್ನು ನೀಡಿತು. ಭಗವಾನ್ ಬುದ್ಧನ ಧರ್ಮದ ಮುಖ್ಯ ಉದ್ದೇಶ ಮಾನವ ಸಮತೆ ಎನ್ನುವುದು. ತಮ್ಮ ಬುದ್ಧಿಯ ಒರೆಗಲ್ಲಿಗೆ ಹಚ್ಚಿ ಪ್ರತಿಯೊಂದು ವಿಷಯದ ಕುರಿತು ಯೋಚಿಸಿ ಸ್ವೀಕರಿಸುವ ನಿರಾಕರಿಸುವ ಸ್ವಾತಂತ್ರ ಈ ಧರ್ಮದಲ್ಲಿದೆ. ಹಿಂಸೆಯ ಉಚ್ಚಾಟನೆ ಮತ್ತು ಅಹಿಂಸೆಯ ಪ್ರತಿಷ್ಠಾಪನೆಯು ಅದರ ಒಂದು ಪ್ರಮುಖ ಅಂಗ. ದೇವರ ಹೆಸರಿನಲ್ಲಿ ಹಿಂಸೆ ಮಾಡುವುದು, ಅದರ ಬಲಿ ನೀಡುವುದು ಮತ್ತು ನಿರ್ಲಜ್ಜತನದಿಂದ ಅದನ್ನು ಪ್ರತಿಪಾದಿಸು ವುದರಿಂದ ‘ಅವರಿಗೆ ಸ್ವರ್ಗ ಲಭಿಸೀತು’. ಬೌದ್ಧಧರ್ಮ ಇದನ್ನೆಲ್ಲ ಹೇಳಲಿಲ್ಲ.
ಭಾರತದಲ್ಲಿಯ ಬೌದ್ಧಧರ್ಮದ ಪ್ರಸಾರ ಮತ್ತು ಫ್ರಾನ್ಸ್ ರಾಜ್ಯಕ್ರಾಂತಿ ಇವೆರಡೂ ಯುಗಾಂತಕಾರಿ ಮಹತ್ವದ ಘಟನೆಗಳಾಗಿವೆ ಎಂದೇ ನನ್ನ ಪ್ರತಿಪಾದನೆ. ಬೌದ್ಧಧರ್ಮದ ಉದಯಕ್ಕಿಂತ ಹಿಂದೆ ಶೂದ್ರರಾಜನಾಗುವ ಕಲ್ಪನೆಯನ್ನು ಮಾಡುವಂತಿರಲಿಲ್ಲ. ಬೌದ್ಧಧರ್ಮದ ಬೆಳೆವಣಿಗೆಯ ನಂತರ ಸಿಂಹಾಸನದ ಮೇಲೆ ಶೂದ್ರನೂ ಕೂತುಕೊಳ್ಳುವ ಅವಕಾಶ ಪ್ರಾಪ್ತವಾಯಿತು. ದೇಶದಲ್ಲಿ ಸಾಮಾಜಿಕ ಸಮತೆಯ ಸ್ಥಿತಿಯೂ ನಿರ್ಮಾಣವಾಯಿತು ಎನ್ನುವುದು ಭಾರತದ ಚರಿತ್ರೆಕಾರರಿಗೂ ಗೊತ್ತಿದೆ. ಗಣತಂತ್ರದ ರಾಜ್ಯಪದ್ಧತಿಯೂ ಬೌದ್ಧಕಾಲದ್ದೇ ಕೊಡುಗೆಯಾಗಿದೆ. ಭಗವಾನ್ ಬುದ್ಧನ ಪರಿನಿರ್ವಾಣದ ಬಳಿಕ ಕ್ರಿ.ಪೂ. 274ರವರೆಗೆ ಬೌದ್ಧಧರ್ಮದ ಸ್ಥಿತಿ ಹೇಗಿತ್ತು ಎನ್ನುವುದನ್ನು ತಿಳಿಯಲು ಯಾವ ಮಾಹಿತಿಯೂ ಉಪಲಬ್ಧವಿಲ್ಲ. ಆದರೂ ಅಶೋಕನ ಕಾಲದಲ್ಲಿ ಬೌದ್ಧಧರ್ಮದ ಪ್ರಸಾರವೂ ಶರವೇಗದಿಂದ ನಡೆಯಿತು. ಅಶೋಕ ಮತ್ತು ಚಂದ್ರಗುಪ್ತನಂಥ ಬೌದ್ಧರಾಜರು ಬೌದ್ಧಕಾಲದಲ್ಲೇ ಬಾಳಿಹೋದರು. ಅವರೇ ಭಾರತದ ಹೊರಗಿನ ರಾಜರುಗಳೊಂದಿಗೆ ಮೈತ್ರಿಯ ಸಂಬಂಧವನ್ನು ಸ್ಥಾಪಿಸಿದರು. ಬೌದ್ಧಕಾಲದಲ್ಲಿ ಭಾರತದಲ್ಲಿ ಚಿತ್ರಕಲೆ, ಶಿಲ್ಪಕಲೆ ಮುಂತಾದ ಕಲೆಗಳ ವಿಕಾಸವಾಯಿತು. ಬೌದ್ಧಕಾಲದಲ್ಲಿ ಸಾಹಿತ್ಯ ಮತ್ತು ತತ್ವಜ್ಞಾನವು ಅದೆಷ್ಟು ವೃದ್ಧಿಗೊಂಡಿತು ಎಂದರೆ ಹಲವು ದೇಶಗಳ ವಿದ್ಯಾರ್ಥಿಗಳು ನಲಂದಾ, ತಕ್ಷಶಿಲೆಯಂತಹ ವಿಶ್ವವಿದ್ಯಾನಿಲಯಕ್ಕೆ ಶಿಕ್ಷಣ ಪಡೆಯಲು ಬಂದರು. ಈ ಹಿಂದೆ ಇಂಥ ಗೌರವ ಭಾರತಕ್ಕೆ ಸಿಕ್ಕಿರಲಿಲ್ಲ.
ಯಾವ ಧರ್ಮ ಇಷ್ಟ್ಟೆಲ್ಲ ಶ್ರೇಷ್ಠವಾಗಿತ್ತೊ, ಇಷ್ಟೆಲ್ಲ ಪ್ರಸಾರಗೊಂಡಿತ್ತೋ ಅದು ಭಾರತದಿಂದ ಲುಪ್ತಗೊಂಡಿದ್ದು ಹೇಗೆ ಎನ್ನುವುದೇ ಪ್ರಶ್ನೆ, ಈ ಪ್ರಶ್ನೆಗೆ ಹಲವು ಉತ್ತರಗಳಿದ್ದರೂ ನಾನು ಸಾಮ್ರಾಟ ಅಶೋಕನನ್ನೇ ಹೊಣೆಗಾರನನ್ನಾಗಿ ಮಾಡುತ್ತೇನೆ. ಅಶೋಕನು ಮಿತಿಮೀರಿ ಸಹನಶೀಲನಾಗಿದ್ದ. ಆದ್ದರಿಂದಲೇ ನಾನವನ ಮೇಲೆ ದೋಷ ಹೊರಿಸುತ್ತೇನೆ. ಸಾಮ್ರಾಟ ಅಶೋಕನು ತನ್ನ ಕಾಲದಲ್ಲಿ ಬೌದ್ಧಧರ್ಮದ ಹೊರತು ಉಳಿದ ಹಲವು ಧರ್ಮಗಳಿಗೆ ಪ್ರಸಾರದ ಅವಕಾಶ ನೀಡಿದ್ದ. ಅವರೆಲ್ಲ ಬೌದ್ಧಧರ್ಮದ ವೈರಿಗಳಾಗಿದ್ದರು. ಅದರಿಂದಾಗಿ ಬೌದ್ಧಧರ್ಮದ ವಿರುದ್ಧವಿರುವ ಆ ಧರ್ಮಕ್ಕೆ ತನ್ನ ಶಕ್ತಿ ಬೆಳೆಸಲು ಅವಕಾಶ ಸಿಕ್ಕಂತಾಯಿತು. ಇದೇ ಬೌದ್ಧಧರ್ಮದ ಮೇಲೆ ಎರಗಲಾದ ಮೊದಲನೇ ಅಘಾತ ಎಂದು ನನಗನಿಸುತ್ತದೆ.
ಬೌದ್ಧಧರ್ಮ ಗ್ರಂಥಗಳಿಂದ ತಿಳಿದುಬರುವುದೇನೆಂದರೆ ಭಗವಾನ್ ಬುದ್ಧನ ಶ್ರಮಣಶಿಷ್ಯರಲ್ಲಿ ಸುಮಾರು 60ರಷ್ಟು ಜನರು ಬ್ರಾಹ್ಮಣರಾಗಿ ದ್ದರು. ಬ್ರಾಹ್ಮಣರು ವಾದವಿವಾದ ಮಾಡಲು ಬುದ್ಧನ ಬಳಿಗೆ ಬರುತ್ತಿದ್ದರು. ನಿರುತ್ತರಗೊಂಡ ಬಳಿಕ ಪ್ರಭಾವಿತರಾಗಿ ಸಂತೋಷದಿಂದ ಅವನ ಧರ್ಮದ ದೀಕ್ಷೆಯನ್ನು ಪಡೆದು ಭಗವಾನ್ ಬುದ್ಧನ ಬಗೆಗೆ ಶ್ರದ್ಧೆಯನ್ನು ತಾಳುತ್ತಿದ್ದರು. ಈ ಶ್ರಮಣ ಶಿಷ್ಯರಿಂದಾಗಿ ಭಗವಾನ್ ಬುದ್ಧನ ಮತ್ತು ಅವನ ಧರ್ಮದ ಪ್ರಭಾವ ದಿನೇದಿನೇ ಬೆಳೆಯುತ್ತಿತ್ತು. ಅವರೆ ಬೌದ್ಧಧರ್ಮದಲ್ಲಿ ಜಾತಿಭೇದವಿರದ್ದರಿಂದ ಕ್ರಮೇಣ ಕೆಳ ಜಾತಿಯವರೂ ಬುದ್ಧನಿಗೆ ಶರಣಾಗತರಾಗಿ ಸಿದ್ಧ ಭಿಕ್ಷುಗಳಾದ ನಂತರ ಮತ್ತು ಧೂತರ ಮೂಲಕ ರಾಜರ ಮೂಲಕ ಅವರ ಪೂಜೆ ಮತ್ತು ಸನ್ಮಾನವಾಗಲಾರಂಭಿಸಿದ್ದರಿಂದ ಇದು ಬ್ರಾಹ್ಮಣರಿಗೆ ಸಹಿಸುವುದಾಗಲಿಲ್ಲ. ಅವರು ಬೌದ್ಧಧರ್ಮವನ್ನು ಹೊಸಕಿಹಾಕುವ ಪ್ರಯತ್ನದಲ್ಲಿ ತೊಡಗಿದರು.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗ್ರಾಮದೇವತೆ, ಪ್ರದೇಶ ದೇವತೆ, ಕಾಡುದೇವತೆ, ನದಿದೇವತೆಗಳಿದ್ದವು. ಅವುಗಳ ಪೂಜೆಯೂ ನಡೆಯುತ್ತಿತ್ತು. ಅದರಂತೆ ಕುಲದೇವತೆಯೂ ಇತ್ತು. ರಾಜರ ಮತ್ತು ಧನಿಕರ ಕುಲದೇವತೆಗಳ ಪೂಜೆಯು ಬ್ರಾಹ್ಮಣರಿಂದ ನೆರವೇರುತ್ತಿತ್ತು. ಹೀಗಾಗಿ ಕುಲದೇವತೆಯ ಪೂಜೆಗಳಿಗೆ ಅರಮನೆಗೆ ಹೋಗುವ ಬ್ರಾಹ್ಮಣರು ರಾಣಿಯರ ಮಧ್ಯಸ್ಥಿಕೆಯಿಂದ ರಾಜ್ಯಾಡಳಿತದ ಮೇಲೆ ತಮ್ಮ ಪ್ರಭಾವ ಬೀರುತ್ತಿದ್ದರು. ಈ ಪ್ರಭಾವವನ್ನು ಬಳಸಿಕೊಂಡು ನಿರಂತರ ವರ್ಚಸ್ಸಿಗೆ ಅಡೆತಡೆಯಾಗುವ ಬೌದ್ಧಧರ್ಮದ ಬೇರುಗಳನ್ನು ಕಡಿದುಹಾಕುವ ಪ್ರಯತ್ನವನ್ನೂ ಮಾಡುತ್ತಿದ್ದರು. ಸಾಮ್ರಾಟ ಅಶೋಕನ ಕಾಲದಲ್ಲಿ ಕುಲದೇವತೆಗಳ ಪೂಜೆಯನ್ನು ನಿಂದಿಸಲಾಯಿತು. ‘ನಾನು ಬೌದ್ಧ ಧರ್ಮದ ಮಾರ್ಗವನ್ನು ಅನುಸರಿಸುವುದರಿಂದ ಬೇರೆ ಯಾವುದೇ ದೇವ ದೇವತೆಗಳ ಪೂಜೆ ಮಾಡುವ ಅಗತ್ಯ ನನಗಿಲ್ಲ’ ಎಂದು ಅಶೋಕ ಹೇಳುತ್ತಾನೆ. ಅವನು ತನ್ನ ಅಧಿಕಾರಿಗಳಿಗೆ ಆದೇಶ ನೀಡಿ ಕುಲದೇವತೆಗಳ ಮೂರ್ತಿಯನ್ನು ಕಿತ್ತೊಗೆದನು. ಇದು ಬ್ರಾಹ್ಮಣರ ಮೇಲಾದ ಅತೀ ದೊಡ್ಡ ಪ್ರಹಾರವಾಗಿತ್ತು. ಅದರಿಂದಾಗಿ ಅವರ ಉಪಜೀವನಕ್ಕೆ ಮತ್ತು ಧೂರ್ತ ಪ್ರಸಾರಕ್ಕೆ ದೊಡ್ಡ ಆಘಾತವಾಯಿತು. ಅವರು ಅವನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದರು. ರಾಜರೆಲ್ಲ ಸತ್ತಬಳಿಕ ನರಕಕ್ಕೆ ಹೋಗುತ್ತಾರೆ ಎಂಬ ಭಾವನೆ ಬ್ರಾಹ್ಮಣರದ್ದಾಗಿತ್ತು. ಏಕೆಂದರೆ ರಾಜ್ಯಾಡಳಿತ ಮಾಡುವಾಗ ಅವರು ಹಲವು ಪಾಪಕೃತ್ಯಗಳನ್ನು ಮಾಡಬೇಕಾಗುತ್ತಿತ್ತು. ಹೀಗಾಗಿ ಅಂತಹ ಪ್ರಸಂಗ ಬಂದರೂ ಬ್ರಾಹ್ಮಣರು ರಾಜ್ಯಭಾರವನ್ನೇ ತಮ್ಮ ತಲೆಯ ಮೇಲೆ ಹೊತ್ತುಕೊಳ್ಳಲಿಲ್ಲ. ಅವರು ರಾಜಸಿಂಹಾಸನದ ಮೇಲೆ ಕೂತುಕೊಳ್ಳದಿದ್ದರೂ ಮಂತ್ರಿ ಅಥವಾ ಪುರೋಹಿತರಾಗಿ ರಾಜನಿಗೆ ಸಲಹೆ ನೀಡುವ ಕಾರ್ಯ ಮಾಡುತ್ತಿದ್ದರು. ಅದೇ ರೀತಿ ಕಾಯ್ದೆ ಕಾನೂನುಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ ಕುಲದೇವತೆಯ ಪೂಜೆ ನಿಂತುಹೋಗಿದ್ದರಿಂದ ತುಂಬ ಹಾನಿಗೊಳಗಾಗಿ ರಾಜರಾಗ ಬಾರದೆಂಬ ತಮ್ಮ ಸಿದ್ಧಾಂತವನ್ನು ತ್ಯಾಗ ಮಾಡಿ ಅವರು ಸಿಂಹಾಸನವನ್ನು ಏರುವ ಪ್ರಯತ್ನದಲ್ಲಿ ತೊಡಗಿದ್ದರು. ಇಂಥ ಹಲವು ಘಟನೆಗಳು ಭಾರತೀಯ ಚರಿತ್ರೆಯಲ್ಲಿ ಲಭಿಸುತ್ತವೆ. ಮತ್ತೆ ಕೆಲವು ಕಡೆಗಳಲ್ಲಿ ಸ್ವಂತ ಬಲದಿಂದ ರಾಜ್ಯಭಾರ ಮಾಡುವುದು ಅಸಾಧ್ಯವಾದಾಗಲೆಲ್ಲ ಕ್ಷತ್ರಿಯರನ್ನೇ ಮುಂದೆ ಮಾಡಿ ತಮ್ಮ ಕೈಗೊಂಬೆಯನ್ನಾಗಿ ಮಾಡಿ ರಾಜ್ಯ ಕಾರಭಾರ ಮಾಡುವುದು ಕಂಡುಬರುತ್ತದೆ. ಈ ಬಗೆಯಲ್ಲಿ ಮತ್ತೆ ಬ್ರಾಹ್ಮಣವಾದಕ್ಕೆ ಬಲ ಬಂದು ಬೌದ್ಧಧರ್ಮ ಆಘಾತಕ್ಕೊಳಗಾಯಿತು. ಅದು ಭಾರತದಿಂದ ಲುಪ್ತವಾಗಲು ಕಾರಣವಾಯಿತು.
ಬ್ರಾಹ್ಮಣ ಆಡಳಿತಾಧಿಕಾರದ ಅತೀ ದೊಡ್ಡ ಘಟನೆಯು ವೌರ್ಯ ಸಾಮ್ರಾಜ್ಯದ ಪರಿವರ್ತನೆಗೆ ಕಾರಣವಾಗಿರುವುದು ಕಂಡುಬರುತ್ತದೆ. ಭಾರತೀಯ ಚರಿತ್ರೆಕಾರರು ಇದಕ್ಕೆ ಹೆಚ್ಚು ಮಹತ್ವ ನೀಡದೆ ಇರುವುದು ದುಃಖದ ಸಂಗತಿ. ವಾಸ್ತವವಾಗಿ ಭಾರತೀಯ ಚರಿತ್ರೆಯಲ್ಲೇ ಇದು ಅತೀ ದೊಡ್ಡ ಸಂಗತಿ. ಕೊನೆಯ ವೌರ್ಯರಾಜನಾದ ಬೃಹದ್ರಥನ ಬಳಿ ದುಷ್ಟಮಿತ್ರನೆಂಬ ಸೇನಾಪತಿಯಿದ್ದ. ಅವನ ಗುರು ಪತಂಜಲಿ - ಪತಂಜಲಿಯೂ ಯೋಗ ವಿದ್ಯೆಯನ್ನು ಬೌದ್ಧರಿಂದ ಪಡೆದುಕೊಂಡಿದ್ದ. ಆದರೆ ಬಳಿಕ ಅವನು ಬೌದ್ಧರ ವೈರಿಯಾದ. ಅವನ ಸಲಹೆಯಂತೆ ಸೇನಾಪತಿ ಶೃಂಗವಂಶದ ಪುಷ್ಯಮಿತ್ರನು ಬೃಹದ್ರಥನನ್ನು ಕೊಂದನು. ವೌರ್ಯವಂಶದ ಬದಲಿಗೆ ತನ್ನ ಶೃಂಗವಂಶದ ಹೆಸರಿನಲ್ಲಿ ಬ್ರಾಹ್ಮಣ ರಾಜ್ಯವನ್ನು ನಡೆಸಿದನು. ಈ ಬ್ರಾಹ್ಮಣ ರಾಜ್ಯವು ಬೌದ್ಧಧರ್ಮಕ್ಕೆ ಅಪರಿಮಿತವಾದ ಹಾನಿಯನ್ನುಂಟುಮಾಡಿತು. ಬ್ರಾಹ್ಮಣ ಧರ್ಮದ ಪುನರ್ ಸ್ಥಾಪನೆಗಾಗಿ ಮಾಡಲಾದ ಕೃತಿಗಳಲ್ಲಿ ಇದು ಎಲ್ಲಕ್ಕಿಂತ ದಾರುಣ ಕೃತಿಯಾಗಿದ್ದು ಭಾರತದಿಂದ ಬೌದ್ಧಧರ್ಮವನ್ನು ಲುಪ್ತಗೊಳಿಸಲು ಕಾರಣವಾದ ಅತೀ ದೊಡ್ಡ ಚಾರಿತ್ರಿಕ ಘಟನೆಯಾಗಿದೆ.
ಬೌದ್ಧಧರ್ಮವು ಭಾರತದಿಂದ ಲುಪ್ತಗೊಳ್ಳಲು ವಿದೇಶಿ ಆಕ್ರಮಣವೂ ಕಾರಣವಾಯಿತು ಎಂದೂ ಭಾವಿಸಲಾಗುತ್ತದೆ. ಯಾವುದೇ ಧರ್ಮ ಜೀವಂತವಾಗುಳಿಯಬೇಕಾದರೆ ಅಲ್ಲಿಯ ಧರ್ಮಗುರು ಮತ್ತು ಪುರೋಹಿತರು ಶಾಶ್ವತವಾಗುಳಿಯಬೇಕಾಗು ತ್ತದೆ. ಬೌದ್ಧಧರ್ಮ ಲುಪ್ತಗೊಳ್ಳುವ ವಿಶೇಷ ಕಾರಣವೇನೆಂದರೆ ಬೌದ್ಧ ಭಿಕ್ಷುಗಳ ಅಭಾವ. ಬೌದ್ಧ ಭಿಕ್ಷುಗಳಿಗೆ ಯಾವ ಜಾತಿಯೂ ಇರಲಿಲ್ಲ. ಯಾವುದೇ ವ್ಯಕ್ತಿಯೂ ಬೌದ್ಧ ಧರ್ಮಕ್ಕೆ ಶರಣು ಹೋಗಿ ಉಪಾಸಕ, ಶ್ರಮಣಿಕ, ಭಿಕ್ಷು ಅಥವಾ ಸ್ಥಾವಿಕ, ಮಹಾಸ್ಥಾವಿಕರಾಗಿಬಹುದಾಗಿತ್ತು. ಭಿಕ್ಷುಗಳು ಸಮಾಜದಿಂದ ದೂರ ವಿಹಾರದಲ್ಲಿ ವಾಸವಾಗಿರುತ್ತಿದ್ದರು. ಬ್ರಾಹ್ಮಣವಾದದಲ್ಲಿ ಈ ಸಂಗತಿಯಿರಲಿಲ್ಲ. ಕೇವಲ ಬ್ರಾಹ್ಮಣರ ಮನೆಯಲ್ಲಿ ಜನಿಸಿದ ಮಾತ್ರಕ್ಕೆ ಹೊಸ ಬ್ರಾಹ್ಮಣ ಸೃಷ್ಟಿಯಾಗುತ್ತಿದ್ದ. ಇದರಿಂದಾಗಿ ಹಿಂದೂಗಳಿಗೆ ವಿಶೇಷ ಹಾನಿಯಾಗಲಿಲ್ಲ. ಆನಂತರದ ಕಾಲದಲ್ಲಿ ಹಿಂದುಳಿದ ವರ್ಗದವರನ್ನು ಭಿಕ್ಷುಗಳನ್ನಾಗಿ ಮಾಡಿ ಬೌದ್ಧಿಕ ಪರಂಪರೆಯನ್ನೇ ಶಾಶ್ವತವಾಗುಳಿಸುವ ಪ್ರಯತ್ನ ಮೊದಲಾಯಿತು.
ಆದರೆ ಅವರು ಉತ್ತಮವಾದ ಶಿಕ್ಷಣ ಪಡೆಯದೇ ಇರುವುದರಿಂದ ಈ ಭಿಕ್ಷುಗಳು ಬ್ರಾಹ್ಮಣರ ಯುಕ್ತಿವಾದಗಳಿಗೆ ಉತ್ತರಿಸದೇ ಹೋಗಿ ಸೋಲು ಅನುಭವಿಸಬೇಕಾಯಿತು. ಈ ನಡುವೆ ಶೈವ ಯೋಗಿಗಳು ಶೈವ ಧರ್ಮದ ಮತ್ತು ಬ್ರಾಹ್ಮಣರು ವೈಷ್ಣವ ಧರ್ಮದ ಪ್ರಚಾರ ಕೈಗೊಂಡರು. ಶೈವ ವೈಷ್ಣವರಲ್ಲಿ ಬಿರುಸಾದ ಸಂಘಟನೆ ನಡೆಯಿತು. ಕೊನೆಗೆ ಬ್ರಾಹ್ಮಣರು ಶೈವರನ್ನು ಶೂದ್ರರನ್ನಾಗಿ ಪರಿವರ್ತಿಸಿ ತಮ್ಮಾಳಗೆ ಸೇರಿಸಿಕೊಂಡರು. ಶೈವ ವೈಷ್ಣವರಲ್ಲಿ ಐಕ್ಯವಾಯಿತು. ಸದ್ಯದ ಕಾಲದಲ್ಲಿ ಹಿಂದೂ ಧರ್ಮದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಬೌದ್ಧಧರ್ಮದಲ್ಲಿಯ ಹಲವು ತತ್ವಗಳನ್ನು ಹಿಂದೂಧರ್ಮ ಆತ್ಮಗತ ಮಾಡಿಕೊಂಡಿದೆ. ಪ್ರತಿಮಾ, ಚೈತ್ರ, ವಿಹಾರ ಬಿಕ್ಕು ಮುಂತಾದವುಗಳ ದೃಷ್ಟಿಯಿಂದ ಇಂದು ಬೌದ್ಧಧರ್ಮವು ಭಾರತದಲ್ಲಿ ಇಲ್ಲವಾದರೂ ತಾತ್ವಿಕ ರೂಪದಲ್ಲಿ ಇಂದಿಗೂ ಅದು ಭಾರತದ ತುಂಬ ಪಸರಿಸಿದೆ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)