2020ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿರುವ ಅಮೆರಿಕನ್ ಕಾಂಗ್ರೆಸ್ ನ ಪ್ರಥಮ ಹಿಂದೂ ಸದಸ್ಯೆ ತುಳಸಿ ಗಬ್ಬರ್ಡ್
ವಾಷಿಂಗ್ಟನ್, ಜ.12: ಅಮೆರಿಕದ ಕಾಂಗ್ರೆಸ್ ಗೆ ಆಯ್ಕೆಯಾದ ಪ್ರಪ್ರಥಮ ಹಿಂದೂ ಮಹಿಳೆ ತುಳಸಿ ಗಬ್ಬರ್ಡ್ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಮುಂದಿನ ವಾರದೊಳಗೆ ಮಾಡಲಿದ್ದಾರೆ.
ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಪ್ರಥಮ ಹಿಂದೂ ಆಗಲಿದ್ದಾರಲ್ಲದೆ, ಚುನಾವಣೆ ಸ್ಪರ್ಧಿಸಲಿದ್ದಾರೆಂದು ಹೇಳಲಾದ ಇನ್ನೊಬ್ಬರಾದ ಕಮಲಾ ಹ್ಯಾರಿಸ್ ಅವರಿಗೆ ಎದುರಾಳಿಯಾಗಲಿದ್ದಾರೆ.
ಹ್ಯಾರಿಸ್ ಅವರ ತಾಯಿ ಭಾರತೀಯ-ಅಮೆರಿಕನ್ ಹಾಗೂ ತಂದೆ ಆಫ್ರಿಕನ್ ಅಮೆರಿಕನ್ ಆಗಿದ್ದರೂ ಆಕೆ ತಾನೊಬ್ಬ ಆಫ್ರಿಕನ್ ಅಮೆರಿಕನ್ ಎಂದು ಬಿಂಬಿಸಲು ಯತ್ನಿಸುತ್ತಿರುವುದರಿಂದ ಅಲ್ಲಿನ ಭಾರತೀಯ ಸಮುದಾಯಕ್ಕೆ ಆಕೆಯ ಬಗ್ಗೆ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ತುಳಸಿ ಅವರು ಸ್ಪರ್ಧಿಸಿದ್ದೇ ಆದಲ್ಲಿ ಅಮೆರಿಕದ ಭಾರತೀಯ ಸಮುದಾಯದ ವ್ಯಾಪಕ ಬೆಂಬಲ ಆಕೆಗೆ ದೊರೆಯಬಹುದೆಂದು ನಂಬಲಾಗಿದೆ.
ಈ ಹಿಂದೆ ಸೇನೆಯಲ್ಲಿದ್ದ 37 ವರ್ಷದ ತುಳಸಿ, ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಹವಾಯಿ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದವರು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ತವರು ಕ್ಷೇತ್ರ ಇದಾಗಿದ್ದರೂ ಡೆಮಾಕ್ರಟಿಕ್ ಪಕ್ಷದವರಾಗಿರುವ ಅವರು ಇಲ್ಲಿಯ ತನಕ ತುಳಸಿ, ಕಮಲಾ ಅಥವಾ ಅಧ್ಯಕ್ಷೀಯ ಚುನಾವಣೆಗೆ ನಿಲ್ಲುವ ಸಾಧ್ಯತೆಯಿರುವ 15ಕ್ಕೂ ಅಧಿಕ ಡೆಮಾಕ್ರೆಟ್ ಮಂದಿಯನ್ನು ಬೆಂಬಲಿಸಿಲ್ಲ.
ತುಳಸಿ ಅವರು ಭಾರತೀಯ ಅಮೆರಿಕನ್ ಅಲ್ಲದೇ ಇದ್ದರೂ ಅವರು ಹಿಂದೂ ಆಗಿರುವುದರಿಂದ ಭಾರತೀಯ ಅಮೆರಿಕನ್ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.